ಅಥವಾ

ಒಟ್ಟು 4 ಕಡೆಗಳಲ್ಲಿ , 1 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಅಖಂಡಪರಿಪೂರ್ಣ ಅಪ್ರಮಾಣ ಅಗೋಚರ ಅಪ್ರಮೇಯ ಅವ್ಯಕ್ತ ಅನಂತತೇಜ ಅನಂತಪ್ರಚಯ ಅನಂತಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹ ಮಹಾಘನಲಿಂಗದಲ್ಲಿ ವಿಶ್ವತೋ ಮುಖ, ವಿಶ್ವತೋ ಚಕ್ಷು, ವಿಶ್ವತೋ ಹಸ್ತ, ವಿಶ್ವತೋ ಪಾದ, ವಿಶ್ವತೋ ಬಾಹುವನುಳ್ಳ ಅನಾದಿ ಸದಾಶಿವತತ್ವ ಉತ್ಪತ್ಯವಾಯಿತ್ತು. ಆ ಸದಾಶಿವನ ಈಶಾನಮುಖದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಅನಾದಿ ಶಿವತತ್ವದಿಂದ ಅನೇಕ ಮುಖ, ಅನೇಕ ಚಕ್ಷು, ಅನೇಕ ಬಾಹು, ಅನೇಕ ಪಾದವನುಳ್ಳ ಅನಾದಿ ಈಶ್ವರತತ್ವ ಉತ್ಪತ್ಯವಾಯಿತ್ತು. ಆ ಅನಾದಿ ಈಶ್ವರತತ್ವದಲ್ಲಿ ಸಹಸ್ರ ಶಿರ, ಸಹಸ್ರ ಅಕ್ಷ, ಸಹಸ್ರ ಬಾಹು, ಸಹಸ್ರ ಪಾದವನುಳ್ಳ ಅನಾದಿ ಮಹೇಶ್ವರತತ್ವ ಉತ್ಪತ್ಯವಾಯಿತ್ತು. ಆ ಅನಾದಿ ಮಹೇಶ್ವರತತ್ವದಲ್ಲಿ ತ್ರಿಪಂಚಮುಖ, ತ್ರಿದಶಭುಜ, ತ್ರಿದಶಪಾದವನುಳ್ಳ ಆದಿ ಸದಾಶಿವ ಉತ್ಪತ್ಯವಾಯಿತ್ತು. ಆ ಆದಿ ಸದಾಶಿವತತ್ವದಲ್ಲಿ ಷಷ್ಠ ವಕ್ತ್ರ, ದ್ವಾದಶಭುಜ, ತ್ರಿಪಾದವನುಳ್ಳ ಆದಿ ಈಶ್ವರತತ್ವ ಉತ್ಪತ್ಯವಾಯಿತ್ತು. ಆ ಆದಿ ಈಶ್ವರತತ್ವದಲ್ಲಿ ಪಂಚವಿಂಶತಿ ಮುಖ, ಪಂಚದಶಭುಜವನುಳ್ಳ ಸದಾಶಿವತತ್ವ ಉತ್ಪತ್ಯವಾಯಿತ್ತು. ಇದಕ್ಕೆ ಅತಿ ಮಹಾಗಮೇ : ``ಅಖಂಡಲಿಂಗ ಸಂಭೂತಾ ಅನಾದಿ ಸಾದಾಖ್ಯಸ್ತಥಾ | ಅನಾದಿ ವಿಶ್ವತೋಮುಖತತ್ವೇ ಚ ಅನಾದಿ ಈಶ್ವರೋದ್ಭವಃ || ಅನಾದಿ ಈಶ್ವರತತ್ವೇ ಚ ಅನಾದಿ ಮಾಹೇಶ್ವರೋ ಭವೇತ್ | ಅನಾದಿ ಮಾಹೇಶ್ವರ ಶಂಭುತೊ ಆದಿ ಸದಾಖ್ಯ ಸ್ತಥಾ || ಆದಿ ಸಾದಾಖ್ಯತತ್ವೇ ಚ ಆದಿ ಈಶ್ವರೋದ್ಭವಂ | ಆದಿ ಈಶ್ವರತತ್ವೇ ಚ ಆದಿ ಮಾಹೇಶ್ವರೋ ಭವೇತ್ || ಆದಿ ಮಾಹೇಶ್ವರ ಶಂಭುತೊ ಶಿವಸದಾಶಿವಾಯುವೋ | ಇತಿ ತತ್ವೋದ್ಭವಜ್ಞಾನಂ ದುರ್ಲಭಂ ಕಮಲಾನನೇ|| '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಮಹಾಸದಾಶಿವತತ್ವದಲ್ಲಿ ಸದಾಶಿವನುತ್ಪತ್ಯವಾಗಿ ಆಕಾಶಕ್ಕೆ ಅದ್ಥಿದೇವತೆಯಾಗಿಹನು. ಆಕಾಶತತ್ವದಲ್ಲಿ ಏಕಶಿರ ದ್ವಿಭುಜ ತ್ರಿನೇತ್ರವನುಳ್ಳ ಈಶ್ವರತತ್ವ ಉತ್ಪತ್ಯವಾಗಿ ವಾಯುವಿಂಗೆ ಅದ್ಥಿದೇವತೆಯಾಗಿಹನು. ಆ ಈಶ್ವರತತ್ವದಲ್ಲಿ ಪಂಚಮುಖರುದ್ರನುತ್ಪತ್ಯವಾಗಿ ಅಗ್ನಿಗೆ ಅದ್ಥಿದೇವತೆಯಾಗಿಹನು. ಆ ಪಂಚಮುಖರುದ್ರನಲ್ಲಿ ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ಸಹಸ್ರಪಾದವನುಳ್ಳ ವಿರಾಟ್‍ಪುರುಷನುತ್ಪತ್ಯವಾದನು. ಆ ವಿರಾಟ್ಪುರುಷನಲ್ಲಿ ಏಕಶಿರ ದ್ವಿಭುಜವನುಳ್ಳ ವಿಷ್ಣು ಉತ್ಪತ್ಯವಾಗಿ ಅಪ್ಪುವಿಗೆ ಅದ್ಥಿದೇವತೆಯಾಗಿಹನು. ಆ ವಿಷ್ಣುವಿನಲ್ಲಿ ಚತುರ್ಮುಖಬ್ರಹ್ಮ ಉತ್ಪತ್ಯವಾಗಿ ಪೃಥ್ವಿಗೆ ಅದ್ಥಿದೇವತೆಯಾಗಿಹನು. ಆ ಬ್ರಹ್ಮನಲ್ಲಿ ಸರ್ವಜೀವಂಗಳುತ್ಪತ್ಯ ನೋಡಾ. ಇದಕ್ಕೆ ಕಾಲಾಗ್ನಿರುದ್ರಸಂಹಿತಾಯಾಂ : ಶ್ರೀ ಮಹಾದೇವ ಉವಾಚ- ``ಪಂಚವಕ್ತ್ರಸದಾಖ್ಯಾನಾಂ ಈಶ್ವರಶ್ಚ ಸಜಾಯತೇ | ತಥಾ ಈಶ್ವರತತ್ವೇ ಚ ಕಾಲರುದ್ರ ಸಮುದ್ಭವಃ | ಪಂಚವಕ್ತ್ರಃ ಮಹಾರುದ್ರ ವಿರಾಟ್ಪುರುಷ ಜಾಯತೇ | ವಿರಾಟ್ಪುರುಷ ಮಹಾತತ್ವೇ ಆದಿ ವಿಷ್ಣುಸಮುದ್ಭವಃ | ವಿಷ್ಣುತತ್ವಾತ್‍ಮಹಾದೇವಿ ವಿರಿಂಚಿತತ್ವಃ ಜಾಯತೇ | ಚತುರ್ಮುಖಬ್ರಹ್ಮತತ್ವೇ ಸರ್ವಜೀವಸ್ತವೋಸ್ತಥಾ | ಇತಿ ತತ್ವೋದ್ಭವಂ ಜ್ಞಾನಂ ದುರ್ಲಭಂ ಚ ವರಾನನೇ ||'' ಇಂತೆಂದುದಾಗಿ, ಇದಕ್ಕೆ ಆನಂದಭೈರವಿ : ``ಪೃಥ್ವೀ ಬ್ರಹ್ಮಾ ಜಲಂ ವಿಷ್ಣು ಸ್ತಥಾ ರುದ್ರೋ ಹುತಾಶನಃ | ಈಶ್ವರೋ ಪವನೋ ದೇವಾಃ ಆಕಾಶಶ್ಚ ಸದಾಶಿವಃ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ | ಭೂಮ್ಯಾದಿ ದೈವಮಿತ್ಯುಕ್ತಂ ಇತಿ ಭೇದಂ ವರಾನನೇ ||'' ಇತೆಂದುದಾಗಿ, ಅಪ್ರಮಾಣ ಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸಕಲಾಗಮ ಶಿಖಾಮಣಿಯನು, ಅಪ್ರಮಾಣ ಕೂಡಲಸಂಗಯ್ಯನ ನಿರೂಪದಿಂದ ಪರ ಮೊದಲಾಗಿ ಬ್ರಹ್ಮ ಕಡೆಯಾಗಿ ಸೃಷ್ಟಿ ಮಾರ್ಗವ ನಿರೂಪಿಸಿಹೆನು, ಚಿತ್ತೈಸುವದು ಶರಣಜನಂಗಳು. ಪರಾಪರವಾಗಿಹ ಪರಬ್ರಹ್ಮ ಲೋಕಾದಿ ಲೋಕಗಳ ಸೃಜಿಸಬೇಕೆಂದು ನೆನಹುಮಾತ್ರದಲ್ಲಿಯೇ ಆ ಪರಾಪರವಾಗಿಹ ಪರಬ್ರಹ್ಮದಲ್ಲಿ ಪರ ಉತ್ಪತ್ಯವಾಯಿತ್ತು, ಆ ಪರದಲ್ಲಿ ಶಿವನುತ್ಪತ್ಯವಾದನು, ಆ ಶಿವನಲ್ಲಿ ಶಕ್ತಿ ಉತ್ಪತ್ಯವಾದಳು, ಆ ಶಕ್ತಿಯಲ್ಲಿ ಬಿಂದು ಉತ್ಪತ್ಯವಾಯಿತ್ತು. ಆ ಬಿಂದುವಿನಲ್ಲಿ ನಾದ ಉತ್ಪತ್ಯವಾಯಿತ್ತು. ಆ ನಾದದಲ್ಲಿ ಸದಾಶಿವನುತ್ಪತ್ಯವಾದನು. ಆ ಸದಾಶಿವನ ಗೌಪ್ಯವಕ್ತ್ರದಲ್ಲಿ ಆತ್ಮನುತ್ಪತ್ಯವಾದನು. ಆ ಸದಾಶಿವನ ಈಶಾನವಕ್ತ್ರದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಸದಾಶಿವನ ತತ್ಪುರುಷವಕ್ತ್ರದಲ್ಲಿ ವಾಯು ಉತ್ಪತ್ಯವಾಯಿತ್ತು. ಆ ಸದಾಶಿವನ ಅಘೋರಮುಖದಲ್ಲಿ ಅಗ್ನಿ ಉತ್ಪತ್ಯವಾಯಿತ್ತು. ಆ ಸದಾಶಿವನ ವಾಮದೇವವಕ್ತ್ರದಲ್ಲಿ ಅಪ್ಪು ಉತ್ಪತ್ಯವಾಯಿತ್ತು. ಆ ಸದಾಶಿವನ ಸದ್ಯೋಜಾತವಕ್ತ್ರದಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು. ಆ ಸದಾಶಿವನ ಹೃದಯದಲ್ಲಿ ಚಂದ್ರನುತ್ಪತ್ತಿಯಾದನು. ಆ ಸದಾಶಿವನ ಚಕ್ಷುವಿನಲ್ಲಿ ಸೂರ್ಯನುತ್ಪತ್ತಿಯಾದನು. ಆ ಸದಾಶಿವನು ಆಕಾಶಕ್ಕೆ ಅಧಿದೇವತೆಯಾಗಿಹನು. ಆ ಸದಾಶಿವನಲ್ಲಿ ಈಶ್ವರತತ್ವ ಉತ್ಪತ್ಯವಾಗಿ ವಾಯುವಿಗಧಿದೇವತೆಯಾಗಿಹನು. ಆ ಈಶ್ವರತತ್ವದಲ್ಲಿ ರುದ್ರನುತ್ಪತ್ತಿಯಾಗಿ ಅಗ್ನಿಗಧಿದೇವತೆಯಾಗಿಹನು. ಆ ರುದ್ರನಲ್ಲಿ ವಿಷ್ಣು ಉತ್ಪತ್ತಿಯಾಗಿ ಅಪ್ಪುವಿಗಧಿದೇವತೆಯಾಗಿಹನು. ಆ ವಿಷ್ಣುವಿನಲ್ಲಿ ಬ್ರಹ್ಮನುತ್ಪತ್ತಿಯಾಗಿ ಪೃಥ್ವಿಗಧಿದೇವತೆಯಾಗಿಹನು. ಆ ಬ್ರಹ್ಮನಲ್ಲಿ ಸರ್ವಜಗಂಗಳು ಉತ್ಪತ್ಯವಾಯಿತ್ತು ನೋಡಾ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->