ಅಥವಾ

ಒಟ್ಟು 8 ಕಡೆಗಳಲ್ಲಿ , 4 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗದೊಡನೆ ಸಹಭೋಜನವ ಮಾಡುವ ಅದ್ವೈತಿಗಳ ಮಾತುಕೇಳಿ, ಸಂಸಾರದೊಳಗಿರ್ದ ಭಕ್ತನು, ಆ ಲಿಂಗದೊಡನೆ ಸಹಭೋಜನವ ಮಾಡಿದಡೆ ಅಘೋರನರಕ ತಪ್ಪದು. ಅದೆಂತೆಂದಡೆ: ``ರಾಗದ್ವೇಷಮದೋನ್ಮತ್ತಸ್ತತ್ತ್ವಜ್ಞಾನಪರಾಙ್ಮುಖಃ ಸಂಸಾರಸ್ಯ ಮಹಾಪಂಕೇ ಜೀರ್ಣಾಂಗೋ ಹಿ ನಿಮಜ್ಜತಿ '' ಇದನರಿದು ಲಿಂಗದೊಡನೆ ಸಹಭೋಜನವ ಮಾಡಲಾಗದು. ಮಾಡುವ ಅಜ್ಞಾನಿಗಳು ನೀವು ಕೇಳಿರೊ: ಗುರುಲಿಂಗಜಂಗಮತ್ರಿವಿಧವನು ಏಕಾರ್ಥವ ಮಾಡದನ್ನಕ್ಕರ ಸಹಭೋಜನವುಂಟೆ ಹೇಳಿರಣ್ಣಾ ! ಇಲ್ಲವಾಗಿ. ಅದೆಂತೆಂದಡೆ: ``ಗುರುರೇಕೋ ಲಿಂಗಮೇಕಂ ಏಕಾರ್ಥೋ ಜಂಗಮಸ್ತಥಾ ತ್ರಿವಿಧೇ ಭಿನ್ನಭಾವೇನ ಶ್ವಾನಯೋನಿಷು ಜಾಯತೇ ''_ ಇಂತೆಂಬ ಶಿವನವಾಕ್ಯವನರಿಯದೆ, ನೀವೇ ಲಿಂಗವೆಂಬಿರಿ ಲಿಂಗವೆ ನೀವೆಂಬಿರಿ ಜನನ_ಮರಣ, ತಾಗು_ನಿರೋಧ ಉಳ್ಳನ್ನಕ್ಕರ ನೀವೆಂತು ಲಿಂಗವಪ್ಪಿರಿ ಹೇಳಿರಣ್ಣಾ ? ಆ ಶಿವಜ್ಞಾನದ ಮಹಾವರ್ಮವನರಿಯದೆ ಲಿಂಗದೊಡನೆ ಸಹಭೋಜನವ ಮಾಡಿದೊಡೆ ಅಘೋರನರಕದಲ್ಲಿಕ್ಕದೆ ಬಿಡುವನೆ ನಮ್ಮ ಕೂಡಲಚೆನ್ನಸಂಗಮದೇವನು ?
--------------
ಚನ್ನಬಸವಣ್ಣ
ಆದಿಯಲ್ಲಿ ಪಿಂಡ ಅನಾದಿಯಲ್ಲಿ ಪ್ರಾಣ ಎರಡನು ಸದ್ಗುರುಸ್ವಾಮಿ ಏಕಾರ್ಥವ ಮಾಡಿದಲ್ಲಿ ಪಿಂಡದಲ್ಲಿ ಲಿಂಗಸಾಹಿತ್ಯ ಪ್ರಾಣದಲ್ಲಿ ಜಂಗಮಸಾಹಿತ್ಯ ಈ ಎರಡರ ಏಕಾರ್ಥದ ಕೊನೆಯ ಮೊನೆಯ ಮೇಲೆ ಪ್ರಸಾದಸಾಹಿತ್ಯ ಪ್ರಾಣಲಿಂಗಪ್ರಸಾದವಿರಹಿತನಾಗಿ ಓಗರ ಪ್ರಸಾದವೆಂದು ಕೊಂಡರೆ ಕಿಲ್ಬಿಷ ಕೂಡಲಚೆನ್ನಸಂಗಮದೇವ ಹುಳುಗೊಂಡದಲ್ಲಿಕ್ಕುವ.
--------------
ಚನ್ನಬಸವಣ್ಣ
ಅಯ್ಯಾ, ನೀನು ಅನಾಹತ ಲೋಕದಲ್ಲಿ ಪ್ರವೇಶಿಸುವಾಗ ಅಕ್ಷರವೆರಡರ ತದ್ರೂಪವಾಗಿರ್ದೆಯಯ್ಯಾ. ನೀನಾ ಬ್ರಹ್ಮಾಂಡವನರಿವಾಗ ಶಕ್ತಿತ್ರಯದ ಶಾಖೆಯಾಗಿರ್ದೆಯಯ್ಯಾ. ನೀನು ಸಕಲದಲ್ಲಿ ನಿಃಕಲದ್ಲ ಸ್ವಾನುಭಾವಸಂಬಂಧದಲ್ಲಿ ಅಕ್ಷರವೆರಡರಲ್ಲಿ ಆಂದೋಳನವಾಗಿ ಪ್ರವೇಶಿಸುವಾಗ ಶುದ್ಧ ನೀನಾಗಿ, ಸಿದ್ಧ ನೀನಾಗಿ, ಪ್ರಸಿದ್ಧ ನೀನಾಗಿ ಪಂಚ ಮಹಾವಾಕ್ಯಂಗಳೆ ನಿನ್ನ ಮನೆಯಾಗಿ ಓಂ ಎಂಬುದೆ ನಿನ್ನ ತನುವಾಗಿ, ಆನಂದವೆಂಬುದೆ ನಿನ್ನ ಮೂರ್ತಿಯಾಗಿ ಪರಾಪರ ರೂಪೆ ನಿನ್ನವಯವವಾಗಿ ನೀನಿಪ್ಪೆಯಯ್ಯಾ ನಿತ್ಯಮಂಗಳರೂಪನಾಗಿ, ಸ್ವತಂತ್ರವಾಗಿ ಪರಮಸೀಮೆಯ ಮೀರಿಪ್ಪ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಏಕಾರ್ಥವ ಮಾಡಿದ ಬಸವಣ್ಣ ಗುರುವೇ, ಶರಣು
--------------
ಸಿದ್ಧರಾಮೇಶ್ವರ
ಎನ್ನ ದ್ವಿವಿಧಾಕ್ಷರದಲ್ಲಿ ಲಿಂಗ ಸ್ವರೂಪಾಗಿ ಬಂದು ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ತ್ರಿವಿಧಾಕ್ಷರದಲ್ಲಿ ಜಂಗಮಲಿಂಗ ಸ್ವರೂಪಾಗಿ ಬಂದು ಮೂರ್ತಿಗೊಂಡನಯ್ಯ ಬಸವಣ್ಣ. ಇಂತೀ ದ್ವಿವಿಧಾಕ್ಷರ ತ್ರಿವಿಧಾಕ್ಷರವೇ ಅಂಗ ಪ್ರಾಣ. ಆ ಅಂಗ ಪ್ರಾಣವೇ ಉಭಯಸ್ಥಲ. ಆ ಉಭಯಸ್ಥಲದ ಭೇದವನು ದ್ವೆ ೈತಾದ್ವೆ ೈತಿಗಳೆತ್ತ ಬಲ್ಲರಯ್ಯ? ಇದನರಿದು ಸಿದ್ಧೇಶ್ವರನು ಅಂಗ ಪ್ರಾಣದಲ್ಲಿ ಲಿಂಗ ಜಂಗಮವ ಏಕಾರ್ಥವ ಮಾಡಿ ತೋರಿಸಿಕೊಟ್ಟ ಕಾರಣ, ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಅರ್ಕನ ಪ್ರಭೆಯೊಳಕೊಂಡ ಅರಿಸಿನದಂತಾದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಗುದ ಲಿಂಗ ನಾಭಿಮಂಡಲದಿಂದ ಮೇಲೆ ಷಡಂಗುಲವ ಹತ್ತಿ, ಅಧೋಮುಖಕಮಲವನು ಊಧ್ರ್ವಮುಖಕ್ಕೆ ತಂದು, `ನಾಭ್ಯಾ ಆಸೀದಂತರಿಕ್ಷಂ ಎಂಬ ಅಂತರಿಕ್ಷದೊಳಗಿಪ್ಪ ಚಿದಾತ್ಮನಪ್ಪಂತಹ ಆದಿತ್ಯನ ಕಿರಣಂಗು ಹೋಗಿ ತಾಗಲ್ಕೆ, ಆ ಪದ್ಮ ವಿಕಸಿತವಾಗಿ, ಅನೇಕ ರತ್ನಸಂಕೀರ್ಣವಪ್ಪಂತಹ ಹೃದಯದೀಪ್ತಿಯ ಪ್ರಕಾಶವ ಕಂಡು ಶಿವಜ್ಞಾನದೊಳಿಡಿದು, ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಎಂಬೀ ಅಷ್ಟಾಂಗಯೋಗದೊಳ್ವಿಡಿದು ನಿಟಿಲತಟ ಭ್ರೂಮಧ್ಯದ ಮೇಲಣ ಉಭಯದಳಕಮಲದ ಮೇಲೆ ಇಪ್ಪ ಜೀವ ಪರಮನ ಭೇದವೆಂತಿರ್ದುದೆಂದಡೆ; ಜೀವಾತ್ಮಪರಮಾತ್ಮೇತಿ ಭೇದಂ ತ್ಯಕ್ತ್ವಾ ಪರಾಂ ಗತಿಂ ಅಭ್ಯೇತಿ ಪುರುಷಃ ಸಾಕ್ಷೀ ಕ್ಷೇತ್ರಜ್ಞೋ[s]ಕ್ಷಯಮಶ್ನುತೇ ಎಂದುದಾಗಿ ಜೀವಪರಮರಿಬ್ಬರನು ಏಕಾರ್ಥವ ಮಾಡಲ್ಕೆ, ದ್ವಾಸುಪರ್ಣಾ ಸಯುಜಾ ಸಾಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇ ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತಿ ಅನಶ್ನನ್ನನ್ಯೋ[s]ಭಿಚಾಕಶೀತಿ ಎಂದುದಾಗಿ ಬ್ರಹ್ಮನಾ?ದ ಮೇಲೆ ಪ್ರಯೋಗಿಸಿ ಕವಾಟದ್ವಾರವ ತೆಗೆದು ತೆರಹಿಲ್ಲದ ಬಯಲು-ಕೂಡಲಚೆನ್ನಸಂಗಾ ನಿಮ್ಮ ಶರಣ
--------------
ಚನ್ನಬಸವಣ್ಣ
ಆತ್ಮಸ್ಥಿತಿ ಶಿವಯೋಗ ಸಂಬಂಧವ ಅರಿದೆನೆಂದಡೆ ಹೇಳಿರಣ್ಣ ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವದ ವಿವರಮಂ ಪೇಳ್ವೆ; ಅಸ್ಥಿ ಮಾಂಸ ಚರ್ಮ ರುಧಿರ ಶುಕ್ಲ ಮೇಧಸ್ಸು ಮಜ್ಜೆ ಎಂಬ ಸಪ್ತಧಾತುವಿನ ಇಹವು, ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಎಂಬ ಪಂಚಜ್ಞಾನೇಂದ್ರಿಯಂಗಳಿಂದ ಶರೀರವೆನಿಸಿಕೊಂಬುದು. ಶಬ್ದ ಸ್ಪರ್ಶ ರೂಪು ರಸ ಗಂಧವೆಂಬಿವು ಪಂಚೇಂದ್ರಿಯಗಳು, ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬ ಪಂಚಕರ್ಮೇಂದ್ರಿಯಂಗಳಿವರು ಪರಿಚಾರಕರು, ಇಡಾ ಪಿಂಗಲಾ ಸುಷುಮ್ನಾ ಗಾಂಧಾರಿ ಹಸ್ತಿಜಿಹ್ವಾ ಪೂಷಾ ಅಲಂಬು ಲಕುಹಾ ಪಯಸ್ವಿನಿ ಶಂಖಿನಿಯೆಂಬ ದಶನಾಡಿಗಳಂ ಭೇದಿಸುತ್ತಂ. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುವಿನ ಸ್ಥಾನಂಗಳನರಿದು, ಆಧ್ಯಾತ್ಮಿಕ ಆಧಿದೈವಿಕ ಆದಿ¨sõ್ಞತಿಕವೆಂಬ ತಾಪತ್ರಯಂಗಳನರಿದು, ರಾಜಸ ತಾಮಸ ಸಾತ್ವಿಕವೆಂಬ ಗುಣತ್ರಯಂಗಳನಳಿದು, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಂಗಳು ತಿಳಿದು, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಂಗಳ ಗೆಲಿದು, ಜಾಯತೆ ಅಸ್ತಿತೆ ವರ್ಧತೆ ಪರಿಣಮತೆ ಅಪಕ್ಷೀಯತೆ ವಿನಶ್ಯತೆ ಎಂಬ ಷಡ್ಬಾವ ವಿಕಾರಂಗಳಂ ಬಿಟ್ಟು, ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣವೆಂಬ ಷಡೂರ್ಮಿಗಳ ವರ್ಮವ ತಿಳಿದು, ಜಾತಿ ವರ್ಣ ಆಶ್ರಮ ಕುಲ ಗೋತ್ರ ನಾಮವೆಂಬ ಷಡ್‍ಭ್ರಮೆಗಳಂ ತಟ್ಟಲೀಯದೆ. ಅನ್ನಮಯ ಪ್ರಾಣಮಯ ಮನೋಮಯ ಆನಂದಮಯವೆಂಬ ಪಂಚಕೋಶಂಗಳ ಸಂಬಂಧವನರಿದು, ಕುಲ ಛಲ ದಾನ ಯೌವನ ರೂಪು ರಾಜ್ಯ ವಿದ್ಯೆ ತಪವೆಂಬ ಅಷ್ಟಮದಂಗಳಂ ಕೆಡಿಸಿ, ಧರ್ಮ ಅರ್ಥ ಕಾಮ ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಂಗಳಂ ಕೆಡಿಸಿ, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧ ಮುಕ್ತಿಯ ಬಯಸದೆ, ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರರೆಂಬ ನಾಲ್ಕು ಜಾತಿಯಲ್ಲಿ ಭೇದವೆಂತೆಂದರಿದು ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ ಎಂಬ ಷಡುಚಕ್ರಂಗಳಂ ಭೇದಿಸಿ, ಕೃತಯುಗ ದ್ವಾಪರಯುಗ ಕಲಿಯುಗಂಗ?ಡಗಿ, ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮವೆಂಬ ಅಷ್ಟತನು ಮದಂಗಳ ಭೇದಾಭೇದಂಗಳ ಭೇದಿಸಿ, ಸ್ಥೂಲತನು ಸೂಕ್ಷ್ಮತನು ಕಾರಣತನು ಚಿದ್ರೂಪತನು ಚಿನ್ಮಯತನು ಆನಂದತನು ಅದ್ಭುತತನು ಶುದ್ಧತನುವೆಂಬ ಅಷ್ಟತನುವ ಏಕಾರ್ಥವಂ ಮಾಡಿ, ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ ಪೀತವರ್ಣ ಕಪ್ಪುವರ್ಣ ಗೌರವರ್ಣ ಶ್ವೇತವರ್ಣವೆಂಬ ಸಪ್ತಧಾತುಗಳ ಸ್ವಸ್ಥಾನವಂ ಮಾಡಿ, ಜಾಗ್ರ ಸ್ವಪ್ನ ಸುಷುಪ್ತಿ ಎಂಬ ಅವಸ್ಥಾತ್ರಯಂಗಳಂ ಮೀರಿ, ಜೀವಾತ್ಮ ಅಂತರಾತ್ಮ ಪರಮಾತ್ಮನೆಂಬೀ ಆತ್ಮತ್ರಯಂಗಳನೊಂದು ಮಾಡಿ, ಅಣಿಮಾ ಮಹಿಮಾ ಗರಿಮಾ ಲಘಿಮಾ ಪ್ರಾಪ್ತಿ ಪ್ರಾಕಾಮ್ಯ ವಶಿತ್ವ ಈಶತ್ವವೆಂಬ ಅಷ್ಟಸಿದ್ಧಿಗಳಂ ಬಿಟ್ಟು, ಅಂಜನಸಿದ್ಧಿ ಘುಟಿಕಾಸಿದ್ಧಿ ರಸಸಿದ್ಧಿ ತ್ರಿಕಾಲಜ್ಞಾನಸಿದ್ಧಿ ಎಂಬ ಅಷ್ಟಮಹಾಸಿದ್ಧಿಗಳಂ ತೃಣೀಕೃತಮಂ ಮಾಡಿಕೊಂಬುದು. ತನುವ್ಯಸನ ಮನವ್ಯಸನ ಧನವ್ಯಸನ ರಾಜ್ಯವ್ಯಸನ ವಿಶ್ವವ್ಯಸನ ಉತ್ಸಾಹವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನಂಗಳಂ ಬಿಟ್ಟು, ವಡಬಾಗ್ನಿ ಮಂದಾಗ್ನಿ ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ ಪಂಚಾಗ್ನಿಯಂ ಕಳೆದು, ಶರೀರಾರ್ಥ ಪರಹಿತಾರ್ಥ ಯೋಗಾರ್ಥ ಪರಮಾರ್ಥ ತತ್ವಾರ್ಥಂಗಳಲ್ಲಿ ಅವಧಾನಿಯಾಗಿ, ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬ ಷಡುಸ್ಥಲಂಗ?ಂ ಭೇದಿಸಿ, ದಾಸ ವೀರದಾಸ ಭೃತ್ಯ ವೀರಭೃತ್ಯ ಸಜ್ಜನಸಮಯಾಚಾರ ಸಕಲಾವಸ್ತೀಯರ್ಚನೆಯೆಂಬ ಷಡ್ವಿಧ ದಾಸೋಹದಿಂದ ನಿರಂತರ ತದ್ಗತವಾಗಿ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಯೋಗ ಸಮಾಧಿ ಎಂಬ ಅಷ್ಟಾಂಗ ಯೋಗದಲ್ಲಿ ಮುಕ್ತವಾಗಿ, ಬಾಲ ಬೋಳ ಪಿಶಾಚ ರೂಪಿಗೆ ಬಾರದ ದೇಹಂಗಳನರಿದು ಅನಿತ್ಯವಂ ಬಿಡುವುದು. ಲಯಯೋಗವನರಿದು ಹಮ್ಮ ಬಿಡುವುದು. ಮಂತ್ರಯೋಗವನರಿದು ಆಸೆಯಂ ಬಿಡುವುದು. ಮರೀಚಿಕಾಜಲದಂತೆ ಬೆಳಗುವ ಶರಣ ಆತ ರಾಜಯೋಗಿ, ಆತಂಗೆ ನಮೋ ನಮೋ ಎಂಬೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸದ್ಗುರುಸ್ವಾಮಿ ಕೃಪೆ ಮಾಡಿ ಕೊಟ್ಟ ಪಂಚಾಕ್ಷರ ಷಡಾಕ್ಷರ ಏಕಾಕ್ಷರವೆ ಎನಗೆ ಇಷ್ಟ ಪ್ರಾಣ ಭಾವ. ಇಷ್ಟವೆ ಬಸವಣ್ಣ. ಪ್ರಾಣವೆ ಚೆನ್ನಬಸವಣ್ಣ. ಭಾವವೆ ಪ್ರಭುದೇವರು. ಅದು ಹೇಗೆಂದಡೆ: ಸಾಕಾರ ಮೂರು ಮೂವತ್ತೊಂದು ಪ್ರಕಾರವನೊಳಕೊಂಡು ಎನ್ನ ಕಾಯದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ನಿರಾಕಾರ ಮೂರು ಹದಿಮೂರು ಪ್ರಕಾರವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ನಿಃಕಲ ನಿರವಯ ಚಿದದ್ವಯ ಜಂಗಮವೆ ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಅದು ಹೇಗೆಂದಡೆ: ಅಂಗ ಪ್ರಾಣ ಇಂದ್ರಿಯಂಗಳೆ ಗುರು ಲಿಂಗ ಜಂಗಮ. ಆ ಗುರು ಲಿಂಗ ಜಂಗಮವೆ ಗೋಳಕ ಗೋಮುಖ ವೃತ್ತಾಕಾರ. ಅದು ಹೇಗೆಂದಡೆ: ಗುರುಲಿಂಗ ತ್ರಿವಿಧವನೊಳಕೊಂಡು ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ ಶಿವಲಿಂಗ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಜಂಗಮಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಆಗಮಲಿಂಗ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಕಾಯಲಿಂಗ ತ್ರಿವಿಧವನೊಳಕೊಂಡು ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ. ಆಚಾರಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಅನುಗ್ರಹಲಿಂಗ ತ್ರಿವಿಧವನೊಳಕೊಂಡು ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ. ಅರ್ಪಿತಲಿಂಗ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ತನುಗುಣಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಒಲವುಲಿಂಗ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ನಿರೂಪುಲಿಂಗ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಪ್ರಸಾದಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಪಾದೋದಕಲಿಂಗ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ನಿಃಪತಿಲಿಂಗ ತ್ರಿವಿಧವನೊಳಕೊಂಡು ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ. ಆಕಾಶಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಪ್ರಕಾಶಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಕೊಂಡುದು ಪ್ರಸಾದ, ನಿಂದುದೋಗರ, ಚರಾಚರ ನಾಸ್ತಿ ಎಂಬ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಭಾಂಡ ಭಾಜನ ಅಂಗಲೇಪನವೆಂಬ ತ್ರಿವಿಧವನೊಳಕೊಂಡು ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ. ಈ ಗುರು ಲಿಂಗ ಜಂಗಮದೇಕಾರ್ಥ ಸಚ್ಚಿದಾನಂದ ಬ್ರಹ್ಮವು ಆ ಸಚ್ಚಿದಾನಂದ ಪಿಂಡ ಬ್ರಹ್ಮಾಂಡದೊಳಹೊರಗೆ ಪರಿಪೂರ್ಣವಾಗಿ ತೋರುವ ಭೇದವನು ಬೋಳಬಸವೇಶ್ವರನು ಎನ್ನ ಅಂತರಂಗ ಬಹಿರಂಗ ಎಡಬಲ ಹಿಂದು ಮುಂದು ಅಡಿ ಆಕಾಶ ತತ್ಪರಿಪೂರ್ಣ ಸಮರಸೈಕ್ಯ ಏಕಾರ್ಥವ ಮಾಡಿಕೊಟ್ಟ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ವಾಯುವನಪ್ಪಿದ ಪರಿಮಳದಂತೆ ಅಂಬುಧಿಯೊಳಗೆ ಬಿದ್ದ ವಾರಿಕಲ್ಲಿನಂತೆ ಉರಿಯುಂಡ ಕರ್ಪೂರದಂತಾದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ನಾವು ಮೀರಿದ ಸ್ಥಲದ ವಿರಕ್ತರೆಂದು ಹೇಳುವ ಅಣ್ಣಗಳಿರಾ ನೀವು ಮೀರಿದ ಸ್ಥಲದ ವಿರಕ್ತರಾದ ಬಗೆಯ ಹೇಳಿರಣ್ಣ. ಅರಿಯದಿರ್ದಡೆ ಹೇಳಿಹೆ ಕೇಳಿರಣ್ಣ, ಮೀರಿನಿಂದ ವಿರಕ್ತನ ವಿಚಾರದ ಭೇದವ. ಅನಾದಿ ಚಿದ್ಬಿಂದುವ ಅಧೋದ್ವಾರದಲ್ಲಿ ಬೀಳಗೊಡದೆ, ಸದ್ಗುರು ಕರುಣಕಟಾಕ್ಷೆಯಿಂದ ಮಹಾಮಂತ್ರವ ಪಡೆದು, ಆ ಚಿನ್ಮಂತ್ರ ಬಲದಿಂದ ಊಧ್ರ್ವಕ್ಕೆ ಮುಖವ ಮಾಡಿ, ಮೇಲುಗಿರಿ ಸಿಂಹಾಸನದಲ್ಲಿ ಮೂರ್ತಗೊಂಡಿರುವ ಪರಶಿವಲಿಂಗದ ಮಹಾಬೆಳಗಿನೊಳಗೆ ಏಕಾರ್ಥವ ಮಾಡಬೇಕು. ಜಿಹ್ವೆಯ ತುದಿಯ ಅಜ್ಞಾನದ ಹುಸಿ ಕುಶಬ್ದ ಕುರುಚಿಯ ನೀಗಬೇಕು. ಸದ್ಗುರುಮುಖದಿಂದ ನಿಜನುಡಿ, ಘನಪಾದೋದಕ, ಪ್ರಸಾದಮಂತ್ರವ ಪಡೆದು, ಸದ್ಭರ್ಮರೂಪದಿಂದಿರಬೇಕು. ಸರ್ವಾಚಾರಸಂಯುಕ್ತವಾದ ಭಕ್ತನೆ ನಿಜಮುಕ್ತಿಮಂದಿರವೆಂದು, ಭಾವ ಮನ ಕಾಯ ತುಂಬಿ, ಪರಿಪೂರ್ಣ ತೃಪ್ತನಾದಾತನೆ ಮೀರಿದ ಸ್ಥಲದ ವಿರಕ್ತ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
-->