ಅಥವಾ

ಒಟ್ಟು 666 ಕಡೆಗಳಲ್ಲಿ , 6 ವಚನಕಾರರು , 665 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು. ಮಾಡಿದಡೆ ಮಾಡಲಿ, ಮಾಡಿದಡೆ ತಪ್ಪೇನು ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡುಕಿದಡೆ ಅದು ಪ್ರಸಾದವಲ್ಲ, ಕಿಲ್ಬಿಷ. ಆ ಸಮಯೋಚಿತದಲ್ಲಿ ಬಂದ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದೆಗೆದಡೆ, ಅದು ಲಿಂಗಕ್ಕೆ ಬೋನ. ಇದು ಕಾರಣ, ಕೂಡಲಸಂಗಮದೇವಾ, ಇಂತಪ್ಪ ಸದಾಚಾರಿಗಳನೆನಗೆ ತೋರಾ 400
--------------
ಬಸವಣ್ಣ
ತೆರಹಿಲ್ಲದ ನಡೆ, ತೆರಹಿಲ್ಲದ ನುಡಿ ತೆರಹಿಲ್ಲದ ಸಂಭಾಷಣೆ ಸುಖವು. ತೆರಹಿಲ್ಲದೆ ನಂಬಿದೆ, ಸ್ವಾನುಭಾವ ಸುಖವು, ತೆರಹಿಲ್ಲದ ಮಹಿಮೆ, ತೆರಹಿಲ್ಲದ ವಿಚಾರ ಕೂಡಲಸಂಗಮದೇವಾ, ನಿಮ್ಮ ಶರಣಂಗೆ !
--------------
ಬಸವಣ್ಣ
ಆಶೆ ಇಚ್ಛೆಗೆನ್ನ ಗಾಸಿ ಮಾಡದಿರಯ್ಯಾ, ದಾಸೋಹಿಯಾಗಿರ್ಪ ದಾಸನಾಗಿರಿಸೆನ್ನ ಕೂಡಲಸಂಗಮದೇವಾ, ನಿಮ್ಮ ಧರ್ಮ.
--------------
ಬಸವಣ್ಣ
ಅಭ್ಯಾಸವೆನ್ನ ವರ್ತಿಸಿತ್ತಯ್ಯಾ, ಭಕ್ತಿ ಸಾಧ್ಯವಾಗದು, ನಾನೇವೆನಯ್ಯಾ ಅನು ನಿಮ್ಮ ಮನಂಬೊಗುವನ್ನಕ್ಕ ನೀವೆನ್ನ ಮನಂಬೊಗುವನ್ನಕ್ಕ ಕಾಯಗುಣಂಗಳ ಕಳೆದವರಿಗೆ ಶರಣೆಂಬೆ ಕೂಡಲಸಂಗಮದೇವಾ. 511
--------------
ಬಸವಣ್ಣ
ಮಜ್ಜನಕ್ಕೆರೆವೆನಲ್ಲದಾನು, ಸಜ್ಜನವೆನ್ನಲ್ಲಿಲ್ಲಯ್ಯಾ ! ಎನ್ನಲ್ಲೇನನರಸುವೆ ನಂಬಿಯೂ ನಂಬದ ಡಂಬಕ ನಾನಯ್ಯಾ, ಹಾವ ತೋರಿ ಹವಿಯ ಬೇಡುವಂತೆ- ಕೂಡಲಸಂಗಮದೇವಾ. 283
--------------
ಬಸವಣ್ಣ
ನೋಡುವರುಳ್ಳಡೆ ಮಾಡುವೆ ದೇಹಾರವ. ಎನಗೊಂದು ನಿಜವಿಲ್ಲ, ಎನಗೊಂದು ನಿಷ್ಪತ್ತಿುಲ್ಲ. ಲಿಂಗವ ತೋರಿ ಉದರವ ಹೊರೆವ ಭಂಗಗಾರ ನಾನು, ಕೂಡಲಸಂಗಮದೇವಾ. 307
--------------
ಬಸವಣ್ಣ
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ. ಪಶುವೇನ ಬಲ್ಲುದು ಹಸುರೆಂದೆಠಸುವುದು. ವಿಷಯರಹಿತನ ಮಾಡಿ, ಭಕ್ತಿರಸವ ದಣಿಯೆ ಮೇಯಿಸಿ, ಸುಬುದ್ಧಿಯೆಂಬ ಉದಕವನೆರೆದು, ನೋಡಿ ಸಲಹಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು, ನಿಂದಲ್ಲಿ ನಿಲಲೀಯದೆನ್ನ ಮನವು, ಹೊಂದಿದಲ್ಲಿ ಹೊಂದಲೀಯದೆನ್ನ ಮನವು ಕೂಡಲಸಂಗಮದೇವಾ ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು, ನಿಮ್ಮ ಧರ್ಮ. 32
--------------
ಬಸವಣ್ಣ
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ, ಇದಾವಾವ ಪರಿಯಲ್ಲಿ ಕಾಡಿಹಿತು ಮಾಯೆ. ಈ ಮಾಯೆಯ ಕಳೆವಡೆ ಎನ್ನಳವಲ್ಲ, ನೀವೆ ಬಲ್ಲಿರಿ ಕೂಡಲಸಂಗಮದೇವಾ ! 15
--------------
ಬಸವಣ್ಣ
ನಿನ್ನಾಳಿ ಕುಂಬಾರನ ಕೆಲಸದೋಪಾದಿ; ಉದಕದ ಶೈತ್ಯವನೆ ಕೊಟ್ಟು, ನೂಲೆಳೆಯಲ್ಲಿ ಗೋಣ ಕೊಯ್ದು, ವಾಯುವಿನ ಶೈತ್ಯದಲ್ಲಿ ಆರಿಸಿ, ಅಗ್ನಿಮುಖದಲ್ಲಿ ಬೇರೆ ಭಾಂಡವೆಂದೆನಿಸಿದಂತೆ ಕೂಡಲಸಂಗಮದೇವಾ.
--------------
ಬಸವಣ್ಣ
ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ, ಬಂಧುಗಳು ಬಂದಾಗಳಿಲ್ಲೆನ್ನ. ಲಿಂಗಕ್ಕೆ ಇಲ್ಲೆಂಬ, ಜಂಗಮಕ್ಕೆ ಇಲ್ಲೆಂಬ, ಬಂದ ಪುರಾತರಿಗೆ ಇಲ್ಲೆಂಬ, ಸಾವಾಗ ದೇಹವ ದೇಗುಲಕ್ಕೆ ಒಯ್ಯೆಂಬ, ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ ಕೂಡಲಸಂಗಮದೇವಾ 222
--------------
ಬಸವಣ್ಣ
ಭವಭವದಲ್ಲಿ ಎನ್ನ ಮನವು ಸಿಲುಕದೆ ಭವಭವದಲ್ಲಿ ಎನ್ನ ಮನವು ಕಟ್ಟದೆ ಭವಸಾಗರದಲ್ಲಿ ಮುಳುಗದೆ ಭವರಾಟಳದೊಳು ತುಂಬದೆ ಕೆಡಹದೆ ಭವವಿರಹಿತ ನೀನು, ಅವಧಾರು ಕರುಣಿಸು ಕೂಡಲಸಂಗಮದೇವಾ. 68
--------------
ಬಸವಣ್ಣ
ಮಾಡುವಲ್ಲಿ ಎನ್ನ ನಾನರಿದು ಮಾಡಿದೆನಾದಡೆ, ನೀಡುವಲ್ಲಿ ಎನ್ನ ನಾನರಿದು ನೀಡಿದೆನಾದಡೆ, ನೀಡುವಲ್ಲಿ ರುಚಿಗೆ ಮನವೆಳೆಸಿ ಹಾರೈಸಿದೆನಾದಡೆ, ನಿಮಗಂದೆ ದ್ರೋಹವಯ್ಯಾ. ಮಾಡುವಲ್ಲಿ ನೀಡುವಲ್ಲಿ ಕೂಡೆ ಶುದ್ಧನಲ್ಲದಿರ್ದಡೆ, ನೀನಂದೆ ಮೂಗ ಕೊಯಿ ಕೂಡಲಸಂಗಮದೇವಾ.
--------------
ಬಸವಣ್ಣ
ಸಿರಿಯಾಳನ ಮಗನ ಬಾಣಸವ ಮಾಡಿಸಿ ಉಣಲೊಲ್ಲದೆ, ಕಾಡಿದೆ. ಚೋಳನ ಮನೆಯಲು ಉಣಲೊಲ್ಲದೆ, ಚೆನ್ನನ ಮನೆಯಲುಂಡೆ. ಒಬ್ಬರಿಗೊಂದು ಪರಿಯ ಮಾಡಿದೆ, ಕೂಡಲಸಂಗಮದೇವಾ.
--------------
ಬಸವಣ್ಣ
ಕಾಣದಠಾವಿನಲಿ ಜರೆದರೆಂದಡೆ ಕೇಳಿ ಪರಿಣಾಮಿಸಬೇಕು. ಅದೇನು ಕಾರಣ ಕೊಳ್ಳದೆ ಕೊಡದೆ ಅವರಿಗೆ ಸಂತೋಷವಹುದಾಗಿ ! ಎನ್ನ ಮನದ ತದ್‍ದ್ವೇಷವಳಿದು ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವಾ. 250
--------------
ಬಸವಣ್ಣ
ಇನ್ನಷ್ಟು ... -->