ಅಥವಾ

ಒಟ್ಟು 12 ಕಡೆಗಳಲ್ಲಿ , 4 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪ್ಪಿನಲಾದ ಘಟವು ಅರ್ಪಿ[ತದ]ಲೆ ಲೀಯ, ಇಪ್ಪತ್ತೈದೆಂದು ಕುರುಹಿಡುವೆ ಏಕೆಲೆ ಮನುಜಾ. ತಾ ಹುಟ್ಟಿ ತಮ್ಮವ್ವೆ ಬಂಜೆಯೆಂಬ ನ್ಯಾಯದಲ್ಲಿ ಬೇರೆ ವಿವರಿಸಿ ತೋರಬಲ್ಲಡದು ಯೋಗ. ಅಭ್ಯಾಸಸಮಾದ್ಥಿಯಿಂ ಅನುಭವಿಗಳೆಲ್ಲರಿಗೆ ಬಯಲ ಸಮಾದ್ಥಿಯಾಗದಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಆದಿಯಲ್ಲಿ ಬಯಲು, ಅಂತ್ಯದಲ್ಲಿ ಬಯಲು, ಮಧ್ಯದಲ್ಲಿ ತೋರಿ ಕೆಡುವುದದು ನೋಡಾ, ಈ ಘಟವು. ತೋರಿ ತೋರಿ ಕೆಡುವುದಕ್ಕೆ, ಈ ಜಗದ್ಲ ಇದೆ ದೃಷ್ಟ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕಾಲಚಕ್ರವ ಗುರುವಿಂಗಿತ್ತು, ಕರ್ಮಚಕ್ರವ ಲಿಂಗಕ್ಕಿತ್ತು, ನಾದಚಕ್ರವ ಜಂಗಮಕ್ಕಿತ್ತು, ಬಿಂದುಚಕ್ರವ ಪ್ರಸಾದಕ್ಕಿತ್ತು, ಇಂತೀ ನಾಲ್ಕಕ್ಕೆ ನಾಲ್ಕನು ಕೊಟ್ಟು ಕೊಟ್ಟೆನೆಂಬುದಿಲ್ಲ, ಕೊಂಡೆನೆಂಬುದಿಲ್ಲ. ಬಯಲಲೊದಗಿದ ಘಟವು, ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಅಂಗಲಿಂಗಸಂಬಂಧವೆಲ್ಲಿಯದಯ್ಯಾ ? ಪ್ರಾಣ ಮುಟ್ಟದನ್ನಕ್ಕರ ಲಿಂಗಾರ್ಚನೆ ಯಾಕೆ ? ಪ್ರಾಣ ಮುಟ್ಟಿ ಮಾಡಿತ್ತೆ ಲಿಂಗಾರ್ಚನೆ. ಪ್ರಾಣ ಒಂದಾಗಿ ಕೊಂಬುದೆ ಪ್ರಸಾದ. ಅಳಿವ ಘಟಕ್ಕೆ ಇದೆತ್ತಣ ಲಿಂಗಸಂಬಂಧವೋ ? ಇದ ಮಾಡಿದವರಾರು ? ಇದು ಕುಟಿಲ. ಪ್ರಾಣಲಿಂಗವೆ ಗುರುಸಂಬಂಧ. ಪ್ರಾಣಪ್ರಸಾದವೆ ಗುರುಮಹತ್ವ. ತನುಮನಧನವನು ಪ್ರಾಣ ಮುಂತಾಗಿ ನಿವೇದಿಸಬಲ್ಲಡೆ ಆತನ ಘಟವು, [ಅ]ಕಾಯವು. ಪ್ರಾಣ ಮುಟ್ಟಿತ್ತೆ ಲಿಂಗಾರ್ಚನೆ. ಪ್ರಾಣ ಮುಟ್ಟದ ಭಕ್ತಿ ಸಲ್ಲದು, ಸಲ್ಲದು. ಇಂತೀ ಪ್ರಾಣ ತದ್ಗತವಾದಾತನೆ ನಿಃಸಂಸಾರಿ ಕಾಣಾ ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಪೃಥ್ವಿಯಲೊದಗಿದ ಘಟವು ಪೃಥ್ವಿಯಲಡಗಿದಡೆ ಆ ಪೃಥ್ವಿಯ ಚರಿತ್ರವೆ ಚರಿತ್ರ ನೋಡಾ ! ಅಪ್ಪುವಿನಲೊದಗಿದ ಘಟವು ಅಪ್ಪುವಿನಲಡಗಿದಡೆ ಆ ಅಪ್ಪುವಿನ ಚರಿತ್ರವೆ ಚರಿತ್ರ ನೋಡಾ ! ತೇಜದಲೊದಗಿದ ಘಟವು ತೇಜದಲಡಗಿದಡೆ ಆ ತೇಜದ ಚರಿತ್ರವೆ ಚರಿತ್ರ ನೋಡಾ ! ವಾಯುವಿನಲೊದಗಿದ ಘಟವು ವಾಯುವಿನಲಡಗಿದಡೆ ಆ ವಾಯುವಿನ ಚರಿತ್ರವೆ ಚರಿತ್ರ ನೋಡಾ ! ಆಕಾಶದಲೊದಗಿದ ಘಟವು ಆಕಾಶದಲಡಗಿದಡೆ ಆ ಆಕಾಶದ ಚರಿತ್ರವೆ ಚರಿತ್ರ ನೋಡಾ ! ಗುಹೇಶ್ವರನೆಂಬ ಲಿಂಗದಲೊದಗಿದ ಘಟವು ಲಿಂಗದಲಡಗಿದಡೆ, ಆ ಲಿಂಗದ ಚರಿತ್ರವೆ ಚರಿತ್ರ ನೋಡಾ.
--------------
ಅಲ್ಲಮಪ್ರಭುದೇವರು
ಮಾಯಾಂಗನೆಯ ಸೋಂಕಳಿದಲ್ಲದೆ ಅಂಗಸೋಂಕಲ್ಲ, ಘಟವು ಸಯವಾದಲ್ಲದೆ ಕಕ್ಷೆಯಲ್ಲ, ಅನ್ಯದೈವಕ್ಕೆ ತಲೆವಾಗೂದುತ್ತಮಾಂಗವಲ್ಲ, ಷಡುರುಚಿಯ ಬೇಡೂದಮಳೋಕ್ಯವಲ್ಲ, ನಿಂದೆ ಸ್ತುತಿಯ ನುಡಿವುದು [ಕಂಠ]ವಲ್ಲ, ಅನ್ಯರಿಗೆ ಕೈಯಾನೂದು ಕರಸ್ಥಳವಲ್ಲ. ಇಂತೀ ಆರರ ಕುಳವನರಿಯದಿದ್ದಡೆ ಮುಂದಣ ನರಕ ಇಂದೇ ಬಂದಿತ್ತು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸ್ಥಾವರ ಜಂಗಮ ಒಂದೆಂಬರು ನೀವು ಕೇಳಿರೆ : ಸ್ಥಾವರವೆ ಲಿಂಗ, ಜಂಗಮವೆ ಭಕ್ತ. ಪೂಜಿಸುವುದು ಲಿಂಗ, ಪೂಜೆಗೊಂ[ಬುದು] ಜಂಗಮ. ಸ್ಥಾವರ-ಜಂಗಮ ಒಂದಾದ ಕಾರಣ ಜಂಗಮವೆನಿಸಿತ್ತು. ದೇವ-ಭಕ್ತನೊಂದಾದ ಕಾರಣ ಸ್ಥಾವರವೆನಿಸಿತ್ತು. ಸ್ಥಾವರವೇ ಘಟವು, ಜಂಗಮವೆ ಪ್ರಾಣವು. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣ ಸ್ವತಂತ್ರ.
--------------
ಚನ್ನಬಸವಣ್ಣ
-->