ಅಥವಾ

ಒಟ್ಟು 10 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮನ ಘನವೆಂತೆಂಬಿರಯ್ಯ, ಬ್ರಹ್ಮನು ಘನವಲ್ಲ, ಬ್ರಹ್ಮನು ಕಮಲದಲ್ಲಿ ಹುಟ್ಟಿದ. ಆ ಕಮಲವು ಘನವೆಂತೆಂಬಿರಯ್ಯ, ಕಮಲವು ಘನವಲ್ಲ, ಕಮಲ ಕೆಸರಿನಲ್ಲಿ ಹುಟ್ಟಿತು. ಕೆಸರು ಘನವೆಂತೆಂಬಿರಯ್ಯಾ, ಕೆಸರು ಘನವಲ್ಲ, ಕೆಸರು ನೀರಿನಲ್ಲಿ ಹುಟ್ಟಿತು. ನೀರು ಘನವೆಂತೆಂಬಿರಯ್ಯ, ನೀರು ಘನವಲ್ಲ, ನೀರು ಸಮುದ್ರದಲ್ಲಿ ಹುಟ್ಟಿತು. ಸಮುದ್ರವು ಘನವೆಂತೆಂಬಿರಯ್ಯ, ಸಮುದ್ರವು ಘನವಲ್ಲ, ಸಮುದ್ರವು ಅಗಸ್ತ್ಯಮುನಿಯ ಕುಡಿತೆಗೆ ಸಾಲದಾಗಿ ಹೋಯಿತ್ತು. ಅಗಸ್ತ್ಯನು ಘನವೆಂತೆಂಬಿರಯ್ಯ, ಅಗಸ್ತ್ಯನು ಘನವಲ್ಲ, ಅಗಸ್ತ್ಯನು ಕು-ಂಭದಲ್ಲಿ ಹುಟ್ಟಿದ. ಕುಂಭವು ಘನವೆಂತೆಂಬಿರಯ್ಯ, ಕುಂಭವು ಘನವಲ್ಲ, ಕುಂಭವು ಭೂಮಿಯಲ್ಲಿ ಹುಟ್ಟಿತು. ಭೂಮಿಯು ಘನವೆಂತೆಂಬಿರಯ್ಯ, ಭೂಮಿಯು ಘನವಲ್ಲ, ಭೂಮಿಯು ಆದಿಶೇಷನ ತಲೆಗೆ ಸಾಲದಾಗಿ ಹೋಯಿತ್ತು. ಆದಿಶೇಷನು ಘನವೆಂತೆಂಬಿರಯ್ಯ, ಆದಿಶೇಷ ಘನವಲ್ಲ, ಆದಿಶೇಷನು ಪಾರ್ವತಿದೇವಿಯ ಕಿರುಬೆರಳಿನುಂಗುರಕೆ ಸಾಲದಾಗಿ ಹೋಗಿದ್ದ. ಪಾರ್ವತಿದೇವಿಯು ಘನವೆಂತೆಂಬಿರಯ್ಯ, ಪಾರ್ವತಿದೇವಿ ಘನವಲ್ಲ, ಪಾರ್ವತಿದೇವಿಯು ಪರಮೇಶ್ವರನ ಎಡಗಡೆಯ ತೊಡೆಯ ಬಿಟ್ಟು ಬಲಗಡೆಯ ತೊಡೆಯನರಿಯಳು, ಪರಮೇಶ್ವರನು ಘನವೆಂತೆಂಬಿರಯ್ಯ, ಪರಮೇಶ್ವರನು ಘನವಲ್ಲ, ನಮ್ಮ ಪರಮೇಶ್ವರನು ಭಕ್ತನಾದ ಬಸವಣ್ಣನ ಎದೆಯೊಳಗೆ ಅಡಗಿರ್ದನೆಂದು ವೇದಗಳು ಸಾರುವವು ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->