ಅಥವಾ

ಒಟ್ಟು 100 ಕಡೆಗಳಲ್ಲಿ , 3 ವಚನಕಾರರು , 100 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲದಗಂಡ, ಕರ್ಮದಗಂಡ, ವಿದ್ಥಿಯಗಂಡ, ವಿಶಸನದಗಂಡ, ಇಹದಗಂಡ, ಪರದಗಂಡ, ಅಂಗದ ಮೇಲೆ ಲಿಂಗವ ಧರಿಸಿ ಸಾವಿಗಂಜುವರೆ ? ಸಂದೇಹಿಯಗಂಡ, ಸಂದೇಹ ನಿರ್ಲೇಪಕ್ಕೆ ಶರಣೈಕ್ಯ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಶಂಕರದಾಸಿಮಯ್ಯಗೆ ಸುಂಕದಬಂಕಯ್ಯಗೆ ಶಿವಲೆಂಕಮಂಚಣ್ಣಗೆ ಶಿವರಾತ್ರಿಯಯ್ಯಗಳಿಗೆ ಸಿದ್ಧರಾಮಯ್ಯಗಳಿಗೆ ಚಿಮ್ಮುಲಿಗೆಯ ಚಂದಯ್ಯ ಚಿಕ್ಕಯ್ಯ ಡೋಹರ ಕಕ್ಕಯ್ಯ ಒಕ್ಕುಮಿಕ್ಕ ಪ್ರಸಾದವಯಿಕ್ಕೆಯ್ಯಲ್ಲಿ ಕೊಂಬ ಅಕ್ಕನಾಗಾಯಿಗೆ ಹರಳಯ್ಯ ಮಧುವಯ್ಯ ಬಳ್ಳೇಶ್ವರಯ್ಯಗಳಿಗೆ ಹಾವಿನಾಳ ಕಲ್ಲಯ್ಯಗಳಿಗೆ ಸರವೂರ ಬಂಕಯ್ಯಗೆ ಸುರಗಿಯ ಚೌಡಯ್ಯಗೆ ಪರಿಪರಿಯ ಶರಣರಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಒತ್ತೆಯ ಸೂಳೆ[ಗೆ] ಒತ್ತೆಯ ತೋರುವಂತೆ, ಹೆತ್ತ ತಾಯಿಗೆ ಮಲತಾಯ ತೋರುವಂತೆ, ಸತ್ಯಕ್ಕೆ ಅಸತ್ಯವ ತೋರುವ ಭಕ್ತಿಹೀನ ತೊತ್ತುಗುಲವರಿದು ಸತ್ತಹಾಗೆ ಸುಮ್ಮನಿರಿರೆ. ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಧರೆಯನಾಳುವ ಪರವಾದಿ ಬಿಜ್ಜಳನು ಮಡಿವಾಳಯ್ಯಗಳು ಕರೆಯಕಳುಹಿದರೆ ಬಾರದಿರಲು ಪಟ್ಟದಾನೆಯ ಮೇಲೆ ಪರಿಪರಿಬಣ್ಣ ಸಣ್ಣವಸ್ತ್ರವ ಹೇರಿಸಿ ಶರದ್ಥಿಯ ಮುಂದೆ ನೀ ನೂಕಿ ಬಾಯೆಂದು ಕಳುಹಲು, ಬರುವ ಪಟ್ಟದಾನೆಯ ಕಂಡು ಕಂಗೆಡದೆ ಕಡೆಗೋಡದೆ ತಟ್ಟನೆ ಸೀಳಿ ನಿಟ್ಟೆಲುವ ಮುರಿದು ಹೊದಕೆಯ ಮುರಿಗಿ ಮಾಡಿ ತಲೆಯ ಹರಿಯಲಿಟ್ಟು ದುಕೂಲವ ಸುಟ್ಟು ಪರಿಚಾರರ ನೆರೆಯಟ್ಟಿ ತಲೆಗಳ ಕುಟ್ಟುವದ ಕೇಳಿ ಕಂಗೆಟ್ಟು ಕಾಲಿಗೆರಗಲು ಕರುಣವ ಪಡೆದ ನಿಷ್ಠೆಯ ವೀರಮಡಿವಾಳಯ್ಯಗಳಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕಾಲನ ಸುಟ್ಟ ಭಸಿತವಲ್ಲ. ಕ್ರಮದಿಂದ ಕಾವನ ಸುಟ್ಟ ಭಸಿತವಲ್ಲ. ತ್ರಿಶೂಲಧರ ತ್ರಿಪುರವ ಸುಟ್ಟ ಭಸಿತವಲ್ಲ. ತ್ರಿಜಗವ ನಿರ್ಮಿಸಿದ ಭಸಿತವ ತಿಳಿದು ಲಲಾಟಕ್ಕೆ ಧರಿಸಲು ತ್ರಿಯಂಬಕ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಮಿಂಡಂಗಯಿದರೆಡೆಯ ತೋರುವಳಲ್ಲದೆ ಸೂಳೆ, ಗಂಡಂಗಯಿದರೆಡೆಯ ತೋರುವಳೆ ಹೆಂಡತಿ ? ಆ ಕಳ್ಮಂಡ ಷಂಡ ಸವುಂಡ ಅಂಡರಂತೆ ಕಂಡಕಂಡುದ ಪೂಜಿಸುವ ಭಂಡ ಮುಂಡೆ ಮೂಕೊರೆಯನ ಮುಖವ ನೋಡಲಾಗದು, ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುರುಹಿರಿಯರ ಪಾದಸೇವೆಯ ನೆರೆ ಮಾಡುವ ಪರಿಯ ಕೇಳಿರೊ ಭಕ್ತರು. ಮಾಡಿ ನೀಡುವಲ್ಲಿ ಸೊರಗಿ ಸೊಕ್ಕಿ ಕೆಕ್ಕಸಗೆಲವುತ್ತ ಮಾಡಲಾಗದು. ಸಲೆ ಪಂಕ್ತಿಯಲ್ಲಿ ಸಂಚು ವಂಚನೆ ಸನ್ನೆ ಸಟೆ ಮೈಸಂಜ್ಞೆಯಲುಂಬುದ ಬಿಟ್ಟು ಪನ್ನಗಧರನ ಶರಣರಿಗೆ ಬಿನ್ನಹವಮಾಡಿ ಬಿಜಯಂಗೆಯಿಸಿ ತಂದು ಪರಮಾನ್ನ ಪರಿಮಳದಗ್ಘಣಿಯ ನೀಡುವ ಭಕ್ತರಿಗೆ ಮುಕ್ತಿ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಪಾದೋದಕ ಪ್ರಸಾದವ ಕೊಂಡು ಪ್ರಪಂಚವ ಮಾಡುವ ಪರಸತಿಯರ ಸಂಗವ ಮಾಡುವ ಪಂಚಮಹಾಪಾತಕರು ನೀವು ಕೇಳಿರೊ. ಪಂಚಮಹಾಪಾತಕವ ಬಿಟ್ಟದ್ದೇ ಪಾದೋದಕ. ಅಲ್ಲದಿದ್ದಡೆ ಮುಂದೆ ನಿಮ್ಮ ಬಾದ್ಥಿಸುವದಕ್ಕೆ ಕಾದಸೀಸ. ಪ್ರಸಾದವೆ ಮುಂದೆ ನಿಮ್ಮ ಪೊರೆವುದಕ್ಕೆ ಪರುಷ. ಪ್ರಪಂಚ ಮುಂದೆ ನಿಮ್ಮ ಪಾಕುಳಕ್ಕೆ ಹಾಕುವುದು. ಪರಸ್ತ್ರೀಯರ ಸಂಗವೆ ಮುಂದೆ ನಿಮಗೆ ಉರಿಗಿಚ್ಚು, ಇರಿವ ಸುರಗಿ. ಇಂತಿವ ಬಿಟ್ಟು ಭಕ್ತ ವಿರಕ್ತನಾಗಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ನಂಬಿದರೆ ಪರಶಿವ ನಮಗೊಲಿವ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಒಬ್ಬರುತ್ತಮರೆಂಬರು. ಒಬ್ಬರು ಕನಿಷ್ಠರೆಂಬರು. ಒಬ್ಬರು ಅಧಮರೆಂಬರು. ಒಬ್ಬರು ಕಷ್ಟನಿಷ್ಠೂರಿಯೆಂಬರು. ಅಂದರದಕೇನು ಯೋಗ್ಯ? ವಿನಯಕಂಪಿತ ಪರಮಾರ್ಥಕ್ಕೂ ಲೌಕಿಕಕ್ಕೂ ವಿರುದ್ಭ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಭವಾರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ, ಬೆಂದಜ್ಞಾನದಿಂದ ಸುತ್ತುತ್ತ ಹಿಂದು ಮುಂದು ಎಡ ಬಲ ಆದಿ ಆಕಾಶ ನಡುಮಧ್ಯ ಆವುದೆಂದರಿಯದವಂಗೆ, ಇರುವುದಕ್ಕೆ ಇಂಬುಗಾಣದವಂಗೆ, ಶಿವತತ್ವವೆ ಆಶ್ರಯ ಇದೆಯೆಂದು ತೋರಿದ ಸದ್ಗುರುದೇವಂಗೆ ನಮೋ ನಮೋ ಎಂಬೆನಯ್ಯ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಗುರುವೆ ಪರಮೇಶ್ವರನೆಂದು ಭಾವಿಸಬೇಕು ನೋಡಾ. ಎರಡೆಂದು ಪ್ರಕೃತಿಯ ತೋರಿದರೆ ಅದು ಅಜ್ಞಾನ ನೋಡಾ. ಇದು ಕಾರಣ, ಆವನಾನೋರ್ವನು ಎರಡೆಂದು ಭಾವಿಸಿದಡೆ ಅವನಿಗೆ ಅನೇಕಕಾಲ ನರಕದ ಕುಳಿಯೊಳಗೆಯಿಪ್ಪುದು ತಪ್ಪದು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಉಳ್ಳಿ ಇಂಗು ಬೆಲ್ಲ ಮೆಣಸು ಇವ ಕೊಳ್ಳಬಾರದುಯೆಂಬ ಒಳ್ಳೆ ವ್ರತಿಗಳು ನೀವು ಕೇಳಿರೊ. ಸುಳ್ಳು ಸಟೆಯ ಬಿಟ್ಟು ತಳ್ಳಿಬಳ್ಳಿಯ ಬಿಟ್ಟು ಒಳ್ಳಿತಾಗಿ ನಡೆಯಬಲ್ಲಡೆ ಬಳ್ಳೇಶ್ವರನ ಭಕ್ತರೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಜೆಟ್ಟಿಗ ಬೀರ ಮೈಲಾರನೂ ರೊಟ್ಟಿಯ ಹಬ್ಬ ನಾಗರಪಂಚಮಿಯ ಮಾಡುವ ಹೊಲತಿ ಹೊಲೆಯನ ಮನೆಯ ಅನ್ನ ಕೆರನಟ್ಟೆಗೆ ಸರಿಯೆಂದು ಮುಟ್ಟರು ನಿಷ್ಠೆ ನಿರ್ವಾಣದ ಬಸವಭಕ್ತರು ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ನಾಟ್ಯಸಾಲೆಯೊಳು ನಾಟ್ಯವನಾಡುವ ಹೆಣ್ಣು ಝಣಝಣ ಕಿಣಿಕಿಣಿಯೆಂದರೆ ಮುಸುರೆಯ ಮಡಕೆಯನು ತೊಳವುತ್ತ ಮೂಕೊರೆಯ ತೊತ್ತು ಗುಣುಗುಣುಯೆಂಬಂತೆ, ನವಿಲಾಡಿತೆಂದು ನಾಯಿ ಬಾಲವ ಬಡಕೊಂಬಂತೆ, ಕೋಗಿಲೆ ಕೂಗಿತ್ತೆಂದು ಕುಕ್ಕುಟ ಪುಚ್ಚವ ತರಕೊಂಡಂತೆ, ನಿಶ್ಚಯವಿಲ್ಲದವನ ಭಕ್ತಿ ಬಚ್ಚಲಬಾಲ್ವುಳುವಿನಂತೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಕಿರುಕುಳ ದೈವದ ಹರಕೆ ಹಲ್ಲಣೆಯ ಮಾಡುವ ಕಿವಿಹರಕುಮುರಿಕೆಯ ಮನೆಯ ಅನ್ನ ನರಕದಾಯೆಡೆಗೆಂದು ಅರಿತು ಭುಂಜಿಸದೆ ನಿರುತ ವೀರಶೈವ ಭಕ್ತರನು ಬೆರೆತು ಬೆರೆತು ಬಾಳುವರು ದೇವರ್ಕಚಂದ್ರನುಳ್ಳನಕ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಇನ್ನಷ್ಟು ... -->