ಅಥವಾ

ಒಟ್ಟು 53 ಕಡೆಗಳಲ್ಲಿ , 1 ವಚನಕಾರರು , 52 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಲದ ಮರೆಯ ನಿಧಾನದಂತೆ ಫಲದ ಮರೆಯ ರುಚಿಯಂತೆ ಶಿಲೆಯ ಮರೆಯ ಹೇಮದಂತೆ ತಿಲದ ಮರೆಯ ತೈಲದಂತೆ ಮರದ ಮರೆಯ ತೇಜದಂತೆ ಭಾವದ ಮರೆಯ ಬ್ರಹ್ಮವಾಗಿಪ್ಪ ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು.
--------------
ಅಕ್ಕಮಹಾದೇವಿ
ತಲೆಯಲ್ಲಿ ನಿರಿ, ಟೊಂಕದಲ್ಲಿ ಮುಡಿ, ಮೊಳಕಾಲಲ್ಲಿ ಕಿವಿಯೋಲೆಯ ಕಂಡೆ. ಹರವಸದ ಉಡಿಗೆ ! ಕಾಂತದಲ್ಲಿ ಮುಖವ ಕಂಡು ಕಾಣದೆ ಚೆನ್ನಮಲ್ಲಿಕಾರ್ಜುನನ ನೆರೆವ ಪರಿಕರ ಹೊಸತು.
--------------
ಅಕ್ಕಮಹಾದೇವಿ
ಭಾವಿಸಿ ನೋಡಿದಡೆ ಅಂಗವಾಯಿತ್ತು, ಅಂಗಸಂಗವಾಗಿ ಸಂಯೋಗವ ಮರೆದು, ಲಿಂಗಸೈವೆರಗಾದೆ. ಲಿಂಗೈಕ್ಯ, ನಿಮ್ಮನಗಲದೆ ಅಂಗರುಚಿಗಳ ಮರೆದು, ಲಿಂಗರುಚಿಗಳಲ್ಲಿ ಸೈವೆರಗಾದೆ. ಲಿಂಗ ಸೈವೆರಗಾದ ಬಳಿಕ ಚೆನ್ನಮಲ್ಲಿಕಾರ್ಜುನನ ಕೊಂದು ಸಾವ ಭಾಷೆ.
--------------
ಅಕ್ಕಮಹಾದೇವಿ
ಅಂಗಸಂಗದಲ್ಲಿ ಲಿಂಗಸಂಗಿಯಾದೆನು. ಲಿಂಗಸಂಗದಲ್ಲಿ ಅಂಗಸಂಗಿಯಾದೆನು. ಉಭಯಸಂಗವನೂ ಅರಿಯದೆ ಪರಿಣಾಮಿಯಾದೆನು. ನುಡಿಯ ಗಡಣವ ಮರೆದು ತೆರಹಿಲ್ಲದಿದ್ದೆನು. ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಬೆರಸಿದ ಬಳಿಕ ಎನ್ನ ನಾನು ಏನೆಂದೂ ಅರಿಯೆನಯ್ಯಾ.
--------------
ಅಕ್ಕಮಹಾದೇವಿ
ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ. ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು ಬಂದೆನ್ನ ನೆರೆದ ನೋಡವ್ವಾ. ಆತನನಪ್ಪಿಕೊಂಡು ತಳವೆಳಗಾದೆನು. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ಣಮುಚ್ಚಿ ತೆರೆದು ತಳವೆಳಗಾದೆನು.
--------------
ಅಕ್ಕಮಹಾದೇವಿ
ಪರರೊಡತಣ ಮಾತು ನಮಗೇತರದಯ್ಯ ? ಪರರೊಡತಣ ಗೊಟ್ಟಿ ನಮಗೇಕಯ್ಯ ? ಲೋಕದ ಮಾನವರೊಡನೆ ನಮಗೇತರ ವಿಚಾರವಯ್ಯ ? ಚೆನ್ನಮಲ್ಲಿಕಾರ್ಜುನನ ಒಲವಿಲ್ಲದವರೊಡನೆ ನಮಗೇತರ ವಿಚಾರವಯ್ಯಾ ?
--------------
ಅಕ್ಕಮಹಾದೇವಿ
ಎಲೆ ಕಾಲಂಗೆ ಸೂರೆಯಾದ ಕರ್ಮಿ, ಎಲೆ ಕಾಮಂಗೆ ಗುರಿಯಾದ ಮರುಳೆ, ಬಿಡು ಬಿಡು ಕೈಯ ನರಕವೆಂದರಿಯದೆ ತಡೆವರೆ ಮನುಜಾ ? ಚೆನ್ನಮಲ್ಲಿಕಾರ್ಜುನನ ಪೂಜೆಯ ವೇಳೆ ತಪ್ಪಿದರೆ ನಾಯಕ ನರಕ ಕಾಣಾ ನಿನಗೆ.
--------------
ಅಕ್ಕಮಹಾದೇವಿ
ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕಡೆಂತಹುದಯ್ಯಾ ? ಬೆಟ್ಟದ ತುದಿಯ ಮೆಟ್ಟಲೆಂದು ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಹುದಯ್ಯಾ ? ನೀನಿಕ್ಕಿದ ಸಯದಾನವನೊಲ್ಲದೆ ಬೇರೆ ಬಯಸಿದೊಡೆಂತಹುದಯ್ಯಾ ? ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು ಕಿರುಕುಳಕ್ಕೆ ಸಂದಡೆಂತಹುದಯ್ಯಾ ? ಕತ್ತಲೆಯ ಹೊಕ್ಕಡೆಂತಹುದಯ್ಯಾ ?
--------------
ಅಕ್ಕಮಹಾದೇವಿ
ಶರಣರ ಮನ ನೋಯ ನುಡಿದೆನಾಗಿ, ಹರಜನ್ಮವಳಿದು ನರಜನ್ಮಕ್ಕೆ ಬಂದೆನು. ಹರನಟ್ಟಿದ ಬೆಸನ ಶಿರದೊಳಗಾಂತೊಡೆ, ಗಿರಿಗಳ ಭಾರವೆನಗಾದುದಯ್ಯ. ಚೆನ್ನಮಲ್ಲಿಕಾರ್ಜುನನ ಧರ್ಮದಿಂದ ಸಂಸಾರ ಕರ್ಮದ ಹೊರೆಯನಿಳುಹಿ, ನಡುದೊರೆಯ ಹಾಯಿದು ಹೋದೆನು.
--------------
ಅಕ್ಕಮಹಾದೇವಿ
ಹಿಡಿವೆನೆಂದಡೆ ಹಿಡಿಗೆ ಬಾರನವ್ವಾ. ತಡೆವೆನೆಂದಡೆ ಮೀರಿ ಹೋಹನವ್ವಾ. ಒಪ್ಪಚ್ಚಿ ಅಗಲಿದಡೆ ಕಳವಳಗೊಂಡೆ. ಚೆನ್ನಮಲ್ಲಿಕಾರ್ಜುನನ ಕಾಣದೆ ಆನಾರೆಂದರಿಯೆ ಕೇಳಾ, ತಾಯೆ.
--------------
ಅಕ್ಕಮಹಾದೇವಿ
ಹೊಳೆವ ಕೆಂಜೆಡೆಗಳ, ಮಣಿಮಕುಟದ, ಒಪ್ಪುವ ಸುಲಿಪಲ್ಗಳ, ನಗೆಮೊಗದ, ಕಂಗಳ ಕಾಂತಿಯ, ಈರೇಳುಭುವನವ ಬೆಳಗುವ ದಿವ್ಯಸ್ವರೂಪನ ಕಂಡೆ ನಾನು. ಕಂಡೆನ್ನ ಕಂಗಳ ಬರ ಹಿಂಗಿತ್ತೆನಗೆ. ಗಂಡಗಂಡರೆಲ್ಲರ ಹೆಂಡಿರಾಗಿ ಆಳುವ ಗರುವನ ಕಂಡೆ ನಾನು. ಜಗದಾದಿ ಶಕ್ತಿಯೊಳು ಬೆರಸಿ ಮಾತನಾಡುವ ಪರಮಗುರು ಚೆನ್ನಮಲ್ಲಿಕಾರ್ಜುನನ ನಿಲವ ಕಂಡು ಬದುಕಿದೆನು
--------------
ಅಕ್ಕಮಹಾದೇವಿ
ಪೃಧ್ವಿಯಗೆಲಿದ ಏಲೇಶ್ವರನ ಕಂಡೆ. ಭಾವಭ್ರಮೆಯ ಗೆಲಿದ ಬ್ರಹ್ಮೇಶ್ವರನ ಕಂಡೆ. ಸತ್ವ ರಜ ತಮ ತ್ರಿವಿಧವ ಗೆಲಿದ ತ್ರಿಪುರಾಂತಕನ ಕಂಡೆ. ಅಂತರಂಗದ ಆತ್ಮಜ್ಞಾನದಿಂದ ಜ್ಯೋತಿಸಿದ್ಧಯ್ಯನ ಕಂಡೆ. ಇವರೆಲ್ಲರ ಮಧ್ಯಮಸ್ಥಾನ ಪ್ರಾಣಲಿಂಗ ಜಂಗಮವೆಂದು ಸುಜ್ಞಾನದಲ್ಲಿ ತೋರಿದ ಬಸವಣ್ಣ ; ಆ ಬಸವಣ್ಣನ ಪ್ರಸಾದದಿಂದ ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯಾ
--------------
ಅಕ್ಕಮಹಾದೇವಿ
ಅನಿಮಿಷನಲ್ಲಮಯ್ಯ, ಮರುಳಶಂಕರಯ್ಯ, ಕೋಲಶಾಂತಯ್ಯ, ಮಾದಾರ ಧೂಳಯ್ಯ, ಮಿಂಡಮಲ್ಲಿನಾಥ, ಚೆನ್ನಬಸವಣ್ಣ, ಚೇರಮರಾಯ, ತೆಲುಗ ಜೊಮ್ಮಣ್ಣ, ಕಿನ್ನರಯ್ಯ, ಹಲಾಯುಧ, ದಾಸಿಮಯ್ಯ, ಭಂಡಾರಿ, ಬಸವರಾಜ ಮುಖ್ಯವಾದ ಚೆನ್ನಮಲ್ಲಿಕಾರ್ಜುನನ ಶರಣರಿಗೆ ನಮೋ ನಮೋ ಎಂಬೆನು.
--------------
ಅಕ್ಕಮಹಾದೇವಿ
ಸಂಸಾರಸಂಗದಲ್ಲಿರ್ದೆ ನೋಡಾ ನಾನು. ಸಂಸಾರ ನಿಸ್ಸಾರವೆಂದು ತೋರಿದನೆನಗೆ ಶ್ರೀಗುರು. ಅಂಗವಿಕಾರದ ಸಂಗವ ನಿಲಿಸಿ, ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರು, ಹಿಂದಣ ಜನ್ಮವ ತೊಡೆದು, ಮುಂದಣ ಪಥವ ತೋರಿದನೆನ್ನ ತಂದೆ. ಚೆನ್ನಮಲ್ಲಿಕಾರ್ಜುನನ ನಿಜವ ತೋರಿದನೆನ್ನ ಗುರು.
--------------
ಅಕ್ಕಮಹಾದೇವಿ
ಶಿವಂಗೆ ತಪ್ಪಿದ ಕಾಲ ಭಸ್ಮವಾದುದನರಿಯಾ ? ಶಿವಂಗೆ ತಪ್ಪಿದ ಕಾಮನುರಿದುದನರಿಯಾ ? ಶಿವಂಗೆ ತಪ್ಪಿದ ಬ್ರಹ್ಮನ ಶಿರ ಹೋದುದನರಿಯಾ ? ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ತಪ್ಪಿದಡೆ, ಭವಘೋರನರಕವೆಂದರಿಯಾ, ಮರುಳೆ ?
--------------
ಅಕ್ಕಮಹಾದೇವಿ
ಇನ್ನಷ್ಟು ... -->