ಅಥವಾ

ಒಟ್ಟು 8 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ ಆಚಾರವುಳ್ಳಕಾಂಚೀಪಟ್ಟಣದಲ್ಲಿ ಒಂದು ಗಂಡುಕತ್ತೆಯು ಸತ್ತುಬಿದ್ದಿರಲು, ಕತ್ತೆಯಂ ಕೈಲಾಸದ ಪಾಲುಮಾಡಬೇಕೆಂದಿದ್ದರಯ್ಯಾ, ಯಾರ್ಯಾರು ಎಂದರೆ: ಶೆಟ್ಟಿಗಾದರಿ, ಪೃಥ್ವಿಶೆಟ್ಟಿ, ಕೋರಿಶೆಟ್ಟಿ, ಬಳೇಶೆಟ್ಟಿ, ನಾಡನಾಲಗೆ, [ಮಿಂಡ]ಗುದ್ದಲಿ, ಬಡವ, ಬೋವಿಯಂತಪ್ಪ ಎಂಟು ಕಟ್ಟೆಯವರು ಕೂಡಿಕೊಂಡು ಆ ಕತ್ತೆಯಂ ಮಂಚದ ಮೇಲೆ ಇಟ್ಟುಕೊಂಡು ಕಮ್ಮೆಣ್ಣೆ, ಕಸ್ತೂರಿ, ಗಂಧ, ಪುನುಗು, ಜವ್ವಾಜಿ, ಬುಕ್ಕಹಿಟ್ಟು, ಊದಿನಕಡ್ಡಿ - ಇಂತಪ್ಪ ಅಷ್ಟಗಂಧದಿಂದ ಮೇಳ ಭಜಂತ್ರಿಯಿಂದ ಒಯ್ದು, ನರಿ ಪಾಲು ಮಾಡಿ ಬಂದರಯ್ಯಾ. ಛೇ, ಛೇ ಎಂದು ಕಣ್ಣಯ್ಯಗಳ ಎಡದ ಪಾದರಕ್ಷೆಯಂ ತೆಗೆದುಕೊಂಡು ಅವರ ಮುದ್ದುಮುಖದ ಮೇಲೆ ಕುಟ್ಟಿದಾತನೆ ನಮ್ಮ ಅಂಬಿಗರ ಚೌಡಯ್ಯನೆಂಬೊ ಶಿವಶರಣನು.
--------------
ಅಂಬಿಗರ ಚೌಡಯ್ಯ
ಕೇಳಿರಯ್ಯಾ ಮಾನವರೆ, ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ. ಗಂಡ ಹೆಂಡಿರ ಮನಸ್ಸು ಬೇರಾದರೆ ಗಂಜಳದೊಳಗೆ ಹಂದಿ ಹೊರಳಾಡಿ ಒಂದರ ಮೇಲೆ ಒಂದು ಬಂದು ಮೂಸಿದ ಹಾಗೆ. ಛೇ, ಛೇ, ಇದು ಭಕ್ತಿಯಲ್ಲಣ್ಣ. ಅದೇನು ಕಾರಣವೆಂದೊಡೆ, ಕಾಶಿಗೆ ಹೋದೆನೆಂಬವರು ಹೇಸಿ ತೊತ್ತಿನ ಮಕ್ಕಳಯ್ಯ. ಮೈಲಾರಕ್ಕೆ ಹೋದೆನೆಂಬವರು ಮಾದಗಿತ್ತಿಯ ಮಕ್ಕಳಯ್ಯ. ಪರ್ವತಕ್ಕೆ ಹೋದೆನೆಂಬವರು ಹಾದರಗಿತ್ತಿಯ ಮಕ್ಕಳಯ್ಯ. ರಾಚೋಟಿಗೆ ಹೋದೆನೆಂಬವರು ಲಜ್ಜೆಮಾರಿ ತೊತ್ತಿನ ಮಕ್ಕಳಯ್ಯ. ಛೇ, ಛೇ, ಇದು ಭಕ್ತಿಯಲ್ಲವಯ್ಯ. ಅದೆಂತೆಂದೊಡೆ; ಪರಬ್ರಹ್ಮ ಮೂರುತಿಯಾದ ಪರಶಿವನೆ ಗುರುನಾಮದಿಂ ಬಂದು ಇಷ್ಟಲಿಂಗವ ಧರಿಸಿ, ಪಂಚಾಕ್ಷರಿಯ ಬೋದ್ಥಿಸಿದ ಮೇಲೆ ಆ ಭಕ್ತನ ಕಾಯವೇ ಕೈಲಾಸ. ಅವನ ಒಡಲೆ ಸೇತುಬಂಧ ರಾಮೇಶ್ವರ. ಅವನ ಶಿರವೆ ಶ್ರೀಶೈಲ. ಆತ ಮಾಡುವ ಆಚಾರವೆ ಪಂಚಪರುಷ. ಇದು ತಿಳಿಯದೆ ಶಾಸ್ತ್ರದಿಂದ ಕೇಳಿ, ಅರಿಯದೆ ಮಂದಬುದ್ಧಿಯಿಂದ ಪರ್ವತಕ್ಕೆ ಹೋಗಿ ಪಾತಾಳಗಂಗೆಯಲ್ಲಿ ಮುಳುಮುಳುಗೆದ್ದರೆ, ಛೇ, ಛೇ, ನಿನ್ನ ದೇಹದ ಮೇಲಣ ಮಣ್ಣು ಹೋಯಿತಲ್ಲದೆ, ನಿನ್ನ ಪಾಪವು ಹೋಗಲಿಲ್ಲವು. ಅಲ್ಲಿಂದ ಕಡೆಗೆ ಬಂದು, ಕೆಟ್ಟ ಕತ್ತಿಯ ಕೊಂಡು ಕೆರವಿನಟ್ಟೆಯ ಮೇಲೆ ಮಸೆದು ಮಸ್ತಕವ ತೋಯಿಸಿ ತಲೆಯ ಬೋಳಿಸಿಕೊಂಡರೆ, ನಿನ್ನ ತಲೆಯ ತಿಂಡಿ ಹೋಯಿತಲ್ಲದೆ ನಿನ್ನ ಪಾಪವು ಬಿಡಲಿಲ್ಲವಯ್ಯ ! ಅಲ್ಲಿಂದ ಕೋಲು ಬುಟ್ಟಿಯ ತೆಗೆದುಕೊಂಡು ಬರುವಂತಹ ದಿಂಡೆತೊತ್ತಿನ ಮಕ್ಕಳ ಕಣ್ಣಲಿ ಕಂಡು, ಪಡಿಹಾರಿ ಉತ್ತಣ್ಣನ ಎಡದ ಪಾದ ಎಕ್ಕಡದಿಂದೆ ಪಟಪಟನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
-->