ಅಯ್ಯ ! ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ,
ಕ್ಷುತ್ತು, ಪಿಪಾಸೆ, ಶೋಕ, ಮೋಹ, ಜನನ ಮರಣಂಗಳ, ಅಡಿಮೆಟ್ಟಿ ನಿಂದು,
ಅಷ್ಟವಿಧಾರ್ಚನೆ_ಷೋಡಶೋಪಚಾರಂಗಳ ಮಾಡಿ ಶಿವನನಂತ ಲೀಲೆಗಳನರ್ಚಿಸಿ
ಫಲ_ಪದ_ಮೋಕ್ಷಂಗಳ ಪಡೆಯಬೇಕೆಂಬ ಬಯಕೆಯನುಳಿದು,
ಅಂತರಂಗದ ಜ್ಞಾನ, ಬಹಿರಂಗದ ಸತ್ಕ್ರಿಯಾಚಾರಂಗಳಲ್ಲಿ
ದೃಢ ಚಿತ್ತದಿಂದ ನಿಂದು, ಹಿಂದೆ ಹೇಳಿದ
ಸದ್ಭಕ್ತ_ಮಹೇಶ್ವರ_ಪ್ರಸಾದಿ_ಪ್ರಾಣಲಿಂಗಿ_ಶರಣಸ್ಥಲಂಗಳನೊಳಗು
ಮಾಡಿಕೊಂಡು,
ಪರಾತ್ಪರ ನಿತ್ಯತೃಪ್ತಾನಂದ ಮೂರ್ತಿಯಾಗಿ,
ಝಗಝಗಿಸುವ ನಿಜೈಕ್ಯನಂತರಂಗದಲ್ಲಿ ಚಿದ್ರೂಪಲೀಲೆಯಿಂ
ಸಾಕಾರ_ನಿರಾಕಾರ; ಸಕಲ_ನಿಃಕಲತತ್ತ್ವಂಗಳನೊಳಕೊಂಡು,
ಹದಿಮೂರು ಸ್ಥಲಂಗಳ ಗರ್ಭೀಕರಿಸಿಕೊಂಡು,
ಎಂಟುನೂರ ಆರುವತ್ತನಾಲ್ಕು ಮಂತ್ರಮಾಲಿಕೆಗಳ ಪಿಡಿದುಕೊಂಡು,
ಇಪ್ಪತ್ತುನಾಲ್ಕು ಸಕೀಲಗರ್ಭದಿಂ
ಜ್ಯೋತಿ ಜ್ಯೋತಿ ಕೂಡಿ ಭಿನ್ನ ದೋರದ ಹಾಂಗೆ ಏಕಸ್ವರೂಪಿನಿಂದ
ವೇದಸ್ವರೂಪ ಮಹಾಲಿಂಗವಾಗಿ ನೆಲಸಿರ್ಪುದು ನೋಡ !
ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು
ಚೆನ್ನಬಸವಣ್ಣ.