ಅಥವಾ

ಒಟ್ಟು 104 ಕಡೆಗಳಲ್ಲಿ , 27 ವಚನಕಾರರು , 98 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿಂಬೆಗೆ ರಂಭೆತನವುಂಟೆ ? ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ ? ಡಿಂಗರಿಗಂಗೆ ಸಮವೆಂಬ ಸಂಭ್ರಮವುಂಟೆ ? ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ, ನೀ ಬಂದೆಯಲ್ಲಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ, ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ಪ್ರಭುದೇವರ ಕಾರುಣ್ಯದಿಂದ ಬದುಕಿದೆ.
--------------
ಮರುಳಶಂಕರದೇವ
ಸತ್ವಹೀನವಾದ ಮತ್ತೆ ಕಾಲೆರಡು ಕೋಲೊಂದಾಯಿತ್ತು. ಕೃತ್ಯದ ಹೊತ್ತು ಹೋದ ಮತ್ತೆ ವ್ಯಾಕುಲದ ಚಿತ್ತವದ ಲಕ್ಷರ, ಬಹುವ್ಯಾಪಾರ ಮೊತ್ತದ ಘಟ, ಪ್ರಕೃತಿ ಆಶ್ರಯಕ್ಕೆ ಬಂಧನ ಪ್ರಾಪ್ತಿ, ಅಡಗುವ ಕರಂಡ. ಇದರಂದವ ತಿಳಿದು, ಹಿಂಜಾವಕೆ ಮುನ್ನವೆ ಶಿವಲಿಂಗದರ್ಶನವಾಗಿ ಶುದ್ಧಸಿದ್ಧಪ್ರಸಿದ್ಧ ಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲದೆ
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ಆಯತದಲ್ಲಿ ಅಂಗಭೋಗಿಯಾಗಿರಬೇಕು. ಸ್ವಾಯತದಲ್ಲಿ ಸನ್ನಹಿತನಾಗಿರಬೇಕು. ಸನ್ನಹಿತದಲ್ಲಿ ಸದಾಚಾರಿಯಾಗಿರಬೇಕು. ಇಂತೀ ತ್ರಿವಿಧದಲ್ಲಿ ಏಕವಾಗಿರಬಲ್ಲಡೆ, ಅದು ವರ್ಮ, ಅದು ಸಂಬಂಧ, ಅದು ನಿಯತಾಚಾರವೆಂದೆಂಬೆನು. ಅದಲ್ಲದೆ ಲಿಂಗವ ಮರೆದು, ಅಂಗ[ವ]ಭೋಗಿಸಿ, ಅಂಗಸಂಗದಲ್ಲಿರ್ದು, ಅಂಗವೆ ಪ್ರಾಣವಾಗಿಹರಿಗೆಲ್ಲರಿಗೆಯೂ ಲಿಂಗದ ಶುದ್ಧಿ ನಿಮಗೇಕೆ ಕೇಳಿರಣ್ಣಾ. ಲಿಂಗವಂತನು ಅಂಗಸೂತಕಿಯಲ್ಲ. ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನದ ಮೇಲೆ ಲಿಂಗದ ಪ್ರಾಣವ ತನ್ನಲ್ಲಿ ಕೂಡಿಕೊಂಡು, ತನ್ನ ಪ್ರಾಣವ ಲಿಂಗದಲ್ಲಿ ಕೂಡಿಕೊಂಡು, ಏಕಪ್ರಾಣವ ಮಾಡಿಕೊಂಡಿಪ್ಪ ಶರಣನ ಜ್ಯೋತಿರ್ಮಯನೆಂಬೆನು, ಜಗದ ಕರ್ತನೆಂಬೆನು, ಜಗದಾರಾಧ್ಯನೆಂದೆಂಬೆನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ನಿಮ್ಮ ಸಂಗಿಯ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಭಕ್ತಿಯ ಕುಳವನು ಬಸವಣ್ಣನೇ ಬಲ್ಲನು. ಪ್ರಸಾದದ ನೆಲೆಯನು ಬಸವಣ್ಣನೇ ಬಲ್ಲನು. ಬಸವಣ್ಣ ನಡೆದುದೇ ಮಾರ್ಗ, ಅಖಿಳಗಣಂಗಳಿಗೆ, ಬಸವಣ್ಣ ನುಡಿದುದೇ ವೇದ, ಮಹಾಪುರುಷರಿಗೆ, ಬಸವಣ್ಣನನಾದಿ, ಲಿಂಗವಾದಿ ಎಂದರಿದೆನಾಗಿ, ಬಸವಣ್ಣನ ನೆನೆವುತಿರ್ದೆನಯ್ಯಾ. ಬಸವಣ್ಣನ ಪಾದವಿಡಿದೆನಾಗಿ, ಲಿಂಗವೇದಿಯಾದೆನು. ಬಸವಣ್ಣನ ಬಾಗಿಲ ಕಾಯ್ದೆನಾಗಿ, ಪ್ರಸಾದ ಸಾಧ್ಯವಾಯಿತ್ತು. ಬಸವಣ್ಣನ ಕರುಣದಿಂದ ಪ್ರಭುದೇವರ ನಿಲವ ಕಂಡೆನು. ಬಸವಣ್ಣನ ಬೋಧೆಯಿಂದ ಜಂಗಮವೇ ಲಿಂಗವೆಂದರಿದೆನು. ಆ ಜಂಗಮ ಮುಖದಿಂದಲ್ಲದೆ ಲಿಂಗತೃಪ್ತಿಯಾಗದು. ಪ್ರಸಾದಸಿದ್ಧಿಯಾದಲ್ಲದೆ ಭವಂ ನಾಸ್ತಿಯಾಗದು. ಇದು ಕಾರಣ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣ ಬಸವಣ್ಣನ ನಂಬಿ, ನಾನು ಕೆಟ್ಟು, ಬಟ್ಟಬಯಲಾಗಿ ಹೋದೆನೆಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಅಂಗಭಾವದಿಂದ ಲಿಂಗಮುಖವನು ಅಂಗಮುಖವನು ಅರಿದು ಜಂಗಮ ಮುಖವನು ಅರಿದಡೆ ಸಂಸಾರವೆಂಬ ಬಂಧನವಿಲ್ಲವಯ್ಯ. ಜಂಗಮವೆಂದರೆ ಸಾಕ್ಷಾತ್ ಪರವಸ್ತು ತಾನೆ ನೋಡಾ. ಅದೇನು ಕಾರಣವೆಂದಡೆ: ಅಂಗವಾರಕ್ಕೆ ಲಿಂಗವಾರಕ್ಕೆ ಮೇಲಾಗಿ ಆ ಅಂಗವನು ಲಿಂಗವನು ತನ್ನಲ್ಲಿ ಏಕೀಕರಿಸಿಕೊಂಡು ತಾನು ಪರಮ ಚೈತನ್ಯನಾದ ಕಾರಣ. ಆ ಪರವಸ್ತುವಿನ ಪ್ರಸನ್ನ ಪ್ರಸಾದಮುಖವನರಿದು ಇಹ ಪರವ ನಿಶ್ಚೆ ೈಸೂದಿಲ್ಲ ನೋಡಾ. ಅದೇನು ಕಾರಣವೆಂದಡೆ: ಇಹ ಪರಕ್ಕೆ ಹೊರಗಾಗಿ ಪರಮ ಪದದಲ್ಲಿ ಪರಿಣಾಮಿಯಾದನಾಗಿ ಈ ತ್ರಿವಿಧವು ಒಂದೆಯೆಂದರಿದಾತನೆ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೆ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕ್ಲುಪ್ತವ ಮಾಡಿ ತನಗೆ ಬೇಕೆನ್ನ ಪ್ರಸಾದಿ ಬಸವಣ್ಣ. ಬಂದುದನತಿಗಳೆದು `ಅಲ್ಲ ಒಲ್ಲೆ' ಎನ್ನ ಪ್ರಸಾದಿ ಬಸವಣ್ಣ. ತಾನೆಂಬ ರೂಪ ಅಯ್ಯನೆಂಬ ರೂಪಿನಲ್ಲಿ ಲೋಪಮಾಡಿದ ಪ್ರಸನ್ನ ಪ್ರಸಾದಿ ಕಾಣಾ, ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಕರವೆ ಭಾಂಡವಾಗಿ ಜಿಹ್ವೆಯೆ ಕರವಾಗಿ, ಇಂದ್ರಿಯಂಗಳೈ ಮುಖವಾಗಿಪ್ಪ ಪ್ರಸಾದಿಯ ಪರಿಯಿನ್ನೆಂತೋ? ಆನಂದದಲ್ಲಿ ಸಾನಂದವನರ್ಪಿಸಿ ಸಾನಂದದಲ್ಲಿ ನಯವಾಗಿಪ್ಪ ಪ್ರಸಾದಿಯ ಪರಿಯಿನ್ನೆಂತೊ? ತನುತ್ರಯಂಗಳ ಮೀರಿ ಮನತ್ರಯಂಗಳ ದಾಂಟಿಪ್ಪ ಪ್ರಸಾದಿಗೆ ಆವುದ ಸರಿಯೆಂಬೆ? ಬಂದುದನತಿಗಳೆಯೆ, ಬಾರದುದ ಬಯಸೆ. ತನುಮುಖವೆಲ್ಲ ಲಿಂಗಮುಖ, ಸ್ವಾದಿಸುವವೆಲ್ಲ ಲಿಂಗಾರ್ಪಿತ; ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಲಿಂಗಾರ್ಪಿತವಲ್ಲದೆ ಅನರ್ಪಿತವ ನೋಡ; ತಟ್ಟುವ ಮುಟ್ಟುವ ಭೇದಂಗಳೆಲ್ಲವು ಸರ್ವಾರ್ಪಿತ. ಆತನುರುತರ ಸಮ್ಯಕ್‍ಜ್ಞಾನಿಯಾದ ಕಾರಣ ಪ್ರಸನ್ನತೆಯಾಯಿತ್ತು. ಪ್ರಸನ್ನ ಪ್ರಸಾದತೆಯಲ್ಲಿ ನಿತ್ಯನಪ್ಪಾತ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಉರುತರ ಮಹಾಜ್ಯೋತಿರ್ಮಯನು.
--------------
ಸಿದ್ಧರಾಮೇಶ್ವರ
ಎಡದೆರಹಿಲ್ಲದ ಪ್ರತಿರೂಪ ಕಂಡೆ. ಎಡದೆರಹಿಲ್ಲದ ಪ್ರತಿರೂಪನೆ ಅರಿದು, ಪ್ರಸನ್ನ ಪ್ರಸನ್ನ ಪ್ರಸಾದವ ಕಂಡು ಪ್ರಸಾದಿಯಾನಾದೆನಯ್ಯ. ಪ್ರಸಾದ ಸಂಬಂಧದಲ್ಲಿ ಪ್ರಸಾದಮೂರ್ತಿಯಾನಾದೆನಯ್ಯ ಸಂಗಯ್ಯ.
--------------
ನೀಲಮ್ಮ
ಲಿಂಗವಂತ ಲಿಂಗಭಕ್ತ ಲಿಂಗಾಚಾರಿಯೆನಿಸಿಕೊಂಡ ಬಳಿಕ, ಲಿಂಗದ ನಚ್ಚು, ಲಿಂಗದ ಮಚ್ಚು, ಲಿಂಗವೇ ಪ್ರಾಣವಾಗಿರಬೇಕಲ್ಲದೆ, ಮತ್ತೆ ತಪ್ಪಿ ನಡೆದು, ತಪ್ಪಿ ನುಡಿದು, ಪರಧನ ಪರಸ್ತ್ರೀಯರ ಸಂಗವ ಮಾಡಿ, ದುರ್ಗುಣ ದುರಾಚಾರದಲ್ಲಿ ನಡೆದು, ಮತ್ತೆ ತಾವು ಲಿಂಗವಂತರೆನಿಸಿಕೊಂಬ ಪರಿಯ ನೋಡಾ. ಇದು ಲಿಂಗದ ನಡೆಯಲ್ಲ, ಲಿಂಗದ ನುಡಿಯಲ್ಲ. ಇದ ನಮ್ಮ ಶಿವಶರಣರು ಮೆಚ್ಚರು. ಲಿಂಗವಂತನ ಪರಿ ಬೇರೆ ಕಾಣಿರೆ. ಲಿಂಗಕ್ಕೆ ಲಿಂಗವೆ ಪ್ರಾಣವಾಗಿರಲು ಬಲ್ಲ. ಲಿಂಗಕ್ಕೆ ಲಿಂಗವೆ ಭೋಗವಾಗಿರಲು ಬಲ್ಲ. ಲಿಂಗಕ್ಕೆ ಲಿಂಗವೆ ಸಂಗವಾಗಿ[ರಲು]ಬಲ್ಲ, ಇಂತಪ್ಪ ಲಿಂಗವಂತನ ಸದಾಚಾರಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಾಂಗಲಿಂಗಿಯೆಂಬೆನು. ಇಂತಪ್ಪ ಲಿಂಗವಂತನ ಸರ್ವಕರಣ ನಿರ್ಮುಕ್ತನ ಸರ್ವನಿರ್ವಾಣಿಕಾಯೆಂಬೆನು. ಇಂತಪ್ಪ ಮಹಾಮಹಿಮನ ನಿಲವು ಎಲಗಳೆದ ವೃಕ್ಷದಂತೆ, ಉಲುಹಡಗಿಪ್ಪ ಶರಣನ ಪರಿಯ ನೀವೇ ಬಲ್ಲಿರಲ್ಲದೆ, ಮತ್ತೆ ಉಳಿದಾದ ಅಜ್ಞಾನ ಸಂದೇಹಿಮಾನವರೆತ್ತ ಬಲ್ಲರಯ್ಯಾ. ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ ನಿಮ್ಮ ಲಿಂಗಾವಧಾನಿಯ ಪರಿಯ ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ ಅಣ್ಣಗಳು ನೀವು ಕೇಳಿರೆ. ಈ ಬಣ್ಣದ ಪರಿಯಾಯಕ್ಕೆ ಕಣ್ಣುಗೆಟ್ಟು ಬಿದ್ದಿರಲ್ಲಾ. ಈ ಹೆಣ್ಣಿನ ಸಂಗ ನಿಮಗೇತಕಣ್ಣಾ. ತನ್ನಲ್ಲಿ ಹೆಣ್ಣುಂಟು, ತನ್ನಲ್ಲಿ ಹೊನ್ನುಂಟು, ತನ್ನಲ್ಲಿ ಮಣ್ಣುಂಟು. ಇಂತಿವ ನಿಮ್ಮಲ್ಲಿ ನೀವು ತಿಳಿದು ನೋಡಲಿಕ್ಕೆ, ತನ್ನಲ್ಲಿ ತಾನೆ ಕಾಣಬಹುದು. ತನ್ನ ತಾನರಿಲ್ಲದೆ ಇದಿರನರಿಯಬಾರದು. ಇದಿರನರಿದಲ್ಲದೆ ಪರವನರಿಯಬಾರದು. ಪರವನರಿದಲ್ಲದೆ ಸ್ವಯವನರಿಯಬಾರದು. ಸ್ವಯವನರಿದಲ್ಲದೆ ಅರಿವು ತಲೆದೋರದು ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಮಾಯ ಹಿಂಗಿದಲ್ಲದೆ ಮದವಳಿಯದು. ಮದವಳಿದಲ್ಲದೆ ಮತ್ಸರ ಹೆರೆಸಾರದು. ಮತ್ಸರ ಹೆರೆಸಾರಿದಲ್ಲದೆ ಮಹಾಘನವಳವಡದು. ಮಹಾಘನವಳವಟ್ಟಲ್ಲದೆ ಮಹಾಲಿಂಗವ ಕಾಣಬಾರದು. ಮಹಾಲಿಂಗವ ಕಂಡಲ್ಲದೆ ಮಹಾಪ್ರಕಾಶವ ಕಾಣಬಾರದು. ಮಹಾಪ್ರಕಾಶವ ಕಂಡಲ್ಲದೆ ನಿತ್ಯವ ಕಾಣಬಾರದು. ನಿತ್ಯವ ಕಂಡಲ್ಲದೆ ನಿಜವ ಕಾಣಬಾರದು. ನಿಜವ ಕಂಡಲ್ಲದೆ ನಿರ್ಣಯವನರಿಯಬಾರದು. ನಿರ್ಣಯವನರಿದಲ್ಲದೆ ಗುರುಲಿಂಗಜಂಗಮವನರಿಯಬಾರದು. ಗುರುಲಿಂಗಜಂಗಮವನರಿದಲ್ಲದೆ ಪಾದತೀರ್ಥಪ್ರಸಾದವನರಿಯಬಾರದು. ಪಾದತೀರ್ಥಪ್ರಸಾದವನರಿದಲ್ಲದೆ ಸಹಜ ಶರಣರ ಸಂಗವನರಿಯಬಾರದು. ಇಂತಪ್ಪ ಶರಣರ ಸಂಗವನರಿದಲ್ಲದೆ ಸರ್ವನಿರ್ಣಯವನರಿಯಬಾರದು. ಸರ್ವನಿರ್ಣಯವನರಿದಲ್ಲದೆ ಸಹಜಸದ್ಭಕ್ತರು ಮೆಚ್ಚರು. ಸಹಜಸದ್ಭಕ್ತರು ಕೂಡಿ ನಡೆಯಬಲ್ಲಡೆ ಇದೇ ಸುಖವು. ಸಂಗದೊಳಗೆ ಶರಣರ ಸಂಗವೆ ಸಂಗವು ಕೇಳಿರಯ್ಯಾ. ಇಂತು ಸಾಯದೆ ನೋಯದೆ ಸ್ವಯವನರಿದು, ಸದ್ಭಕ್ತರ ಸಂಗವ ಮಾಡಬಲ್ಲಾತನೆ ಲಿಂಗೈಕ್ಯನು. ಅವ ತಾನೆ ಘನಲಿಂಗವು. ಹೀಂಗಲ್ಲದೆ ಹಿಂದೆ ಮೆಟ್ಟಿಹೋಹ ಸಂದೇಹಿ ಮಾನವರೆಲ್ಲರೂ ಜಗದ ಜಂಗುಳಿಗಳ ದಂದುಗದೊಳಗಾಗಿಪ್ಪರು. ಆ ಗುಣವ ಬಿಟ್ಟು, ಶರಣರ ಸಂಗ ಸಹಜವೆಂದರಿದು, ನಿಜವಾಗಿ ಬಂದಬಳಿಕ ಪೂರ್ವಭಾಗೆಗೆ ಬಾರೆನೆಂಬ ನಿಶ್ಚಯದಿಂ ಪರಮ ಪ್ರಸಾದವನರಿದು, ಜಗದ ಹಂಗ ಹರಿದ ಶರಣನು ಎನ್ನ ತಂದೆಯಾಗಿಪ್ಪನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ಈ ಬಂದ ಪರಿಯಾಯವರಿದು, ತಾಮಸವ ಹಿಂಗಿ, ಸಹಜ ನಿಜನಿತ್ಯವನರಿದು ಹೋದ ಶರಣರ ನಿಲವಿನ ಪರಿಯ, ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ
--------------
ಮರುಳಶಂಕರದೇವ
ಅನಾದಿ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಮೂರ್ತಿಗೆ ಪ್ರಸಾದವೆ ಗತಿ. ಮನಹಿತ ಲಿಂಗಹಿತ ತನುತ್ರಯ ಗುರುಹಿತ ಘನತರ ಘತಘತಯೆ ಗೋತ್ರ ಅಜಾತಜಂಗಮಹಿತ ಅನಾದಿ ಗೊಹೇಶ್ವರಲಿಂಗಕ್ಕೆ ಆಗಮವಿಲ್ಲ ನಿಗಮವಿಲ್ಲ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಬಸವಣ್ಣ ಚನಬಸವಣ್ಮ ಪ್ರಭುದೇವ ಮಡಿವಾಳ ಮಾಚಯ್ಯಾ ಸಿದ್ಧರಾಮಯ್ಯ ಸೊಡ್ಡಳ ಬಾಚರಸರು ಹಡಪದಪ್ಪಣ್ಣ ಪಡಿಹಾರಿ ಉತ್ತಣ್ಣ ಅವ್ವೆ ನಾಗಾಯಿ ಕೋಲಶಾಂತಯ್ಯ ಡೋಹರ ಕಕ್ಕಯ್ಯ ಮೊಗವಾಡದ ಕೇಶಿರಾಜದೇವರು ಖಂಡೆಯ ಬೊಮ್ಮಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ನೀರುಂಡ ಸಾರ ನಿಸ್ಸಾರವಾಯಿತ್ತಯ್ಯ. ನಿರಾಳದಪದ ನಿಃಪ್ರಪಂಚಿನಲ್ಲಿ ಅಡಗಿತ್ತಯ್ಯ. ಅಂಗದ ಸಂಗವ ಹರಿದು ನಿರಂಗಿಯಾದೆ ನಾನು. ಉಲುಹಡಗಿದೆ ನಾನು ಸಂಗಯ್ಯನಲ್ಲಿ ಪ್ರಸನ್ನ ಮೂರುತಿಯುಳ್ಳವಳಾದೆನಯ್ಯ.
--------------
ನೀಲಮ್ಮ
ಸಿಂಬಿಗೆ ರಂಭೆತನವುಂಟೆ? ಸಂಭ್ರಮವಳಿದುದಕ್ಕೆ ನವರಸದಂಗದ ಕಳೆಯುಂಟೆ? ಡಿಂಗರಿಗಂಗೆ ಸಮವೆಂಬ ಸಂಭ್ರಮವುಂಟೆ? ಪರುಷದ ದೆಸೆಯಿಂದ ಪಾಷಾಣದ ಕುಲ ಹರಿವಂತೆ ನೀ ಬಂದೆಯಲ್ಲಾ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕಪಿಲಸಿದ್ಧಮಲ್ಲಿಕಾರ್ಜುನಂಗದಲ್ಲಿ ಪ್ರಭುದೇವರ ಕಾರುಣ್ಯದಿಂದ ಬದುಕಿದೆ.
--------------
ಸಿದ್ಧರಾಮೇಶ್ವರ
ಮಹಾಶ್ರೀಗುರುವೆ ತಂದೆ, ಮಹಾಜಂಗಮವೆ ತಾಯಿ. ಇವರಿಬ್ಬರ ಸಂಗಸಂಯೋಗದಿಂದ ನಾನು ಹುಟ್ಟಿದೆ ನೋಡಿರಯ್ಯಾ. ಸರ್ವಾಂಗಸಾಹಿತ್ಯ ನಾನು ಹುಟ್ಟಿದ ಬಳಿಕ. ತಂದೆ ತಾಯಿಗಳಿಬ್ಬರು ಲಿಂಗವೆಂಬ ಹೆಣ್ಣ ತಂದು, ಎನ್ನ ಕೊರಳಲ್ಲಿ ಕಟ್ಟಿ ಮದುವೆಯ ಮಾಡಿದರಯ್ಯಾ. ಆ ಹೆಣ್ಣಿನ ಕೈಹಿಡಿದು ನಾನು ಬದುಕಿದೆನು. ಆ ಹೆಣ್ಣಿನ ಸಂಯೋಗದಿಂದ ಮಗನೆಂಬ ಮಹಾಲಿಂಗ ಹುಟ್ಟಿದನಯ್ಯಾ. ಆ ಮಗ ಹುಟ್ಟಿದ ಮುನ್ನವೆ ಎನಗೆ ಮರಣವಾಯಿತ್ತು. ಲಿಂಗವೆಂಬ ಹೆಂಡತಿ ಮುಂಡೆಯಾದಳು. ತಂದೆ ತಾಯಿಗಳಿವರಿಬ್ಬರೂ ನನ್ನ ಒಂದಾಗಿ ಅಡಗಿ ಹೋದರು. ಇನ್ನು ಮುನ್ನಿನ ಪರಿ ಎಂತುಟಲ್ಲವಾಗಿ ನಾನು ಬದುಕಿದೆ ಕಾಣಾ, ಶುದ್ಭ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚನ್ನ ಮಲ್ಲಿಕಾರ್ಜುನದೇವಯ್ಯಾ. ನಿಮ್ಮ ಶರಣರ ಕರುಣದಿಂದ ಎನ್ನ ಕರ್ಮ ನಿರ್ಮಳವಾಯಿತ್ತಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಇನ್ನಷ್ಟು ... -->