ಅಥವಾ

ಒಟ್ಟು 29 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಪೃಥ್ವಿ ಅಪ್ಪು ತೇಜ ವಾಯುವಾಕಾಶವೆಂಬ ಪಂಚಭೂತ ಬ್ರಹ್ಮಾಂಡಕಪಾಲದೊಳು ಚತುರ್ದಶಭುವನಂಗಳು, ಸಪ್ತಸಮುದ್ರಂಗಳು, ಸಪ್ತದ್ವೀಪಂಗಳು, ಸಪ್ತಕುಲಪರ್ವತಂಗಳು, ಸಮಸ್ತ ಗ್ರಹರಾಶಿ ತಾರಾಪಥಂಗಳಿಹ ಕ್ರಮವೆಂತೆಂದಡೆ : ಆ ಭೂತಬ್ರಹ್ಮಾಂಡಕಪಾಲದಲ್ಲಿ ಅತಳಲೋಕವಿಹುದು. ಆ ಅತಳಲೋಕದಿಂದ ಮೇಲೆ ವಿತಳಲೋಕವಿಹುದು. ಆ ವಿತಳಲೋಕದಿಂದ ಮೇಲೆ ಸುತಳಲೋಕವಿಹುದು. ಆ ಸುತಳಲೋಕದಿಂದ ಮೇಲೆ ತಳಾತಳಲೋಕವಿಹುದು. ಆ ತಳಾತಳಲೋಕದಿಂದ ಮೇಲೆ ರಸಾತಳಲೋಕವಿಹುದು. ಆ ರಸಾತಳಲೋಕದಿಂದ ಮೇಲೆ ಮಹಾತಳಲೋಕವಿಹುದು. ಆ ಮಹಾತಳಲೋಕದಿಂದ ಮೇಲೆ ಪಾತಾಳಲೋಕವಿಹುದು. ಆ ಪಾತಾಳಲೋಕದಿಂದ ಮೇಲೆ ಜಲಪ್ರಳಯವಿಹುದು. ಆ ಜಲಪ್ರಳಯದ ಮೇಲೆ ಮಹಾಕಮಠನಿಹುದು. ಆ ಮಹಾಕಮಠನ ಮೇಲೆ ಮಹಾವಾಸುಗಿ ಇಹುದು. ಆ ಮಹಾವಾಸುಗಿಯ ಸುತ್ತುವಳಯಾಕೃತವಾಗಿ ಅಷ್ಟದಿಕ್‍ಮಹಾಗಜಂಗಳಿಹವು. ಆ ಅಷ್ಟದಿಕ್‍ಮಹಾಗಜಂಗಳ ಮೇಲೆ ಭೂಲೋಕವಿಹುದು. ಆ ಭೂಲೋಕದಲ್ಲಿ ಸಪ್ತಸಮುದ್ರಂಗಳು, ಸಪ್ತದ್ವೀಪಂಗಳು, ಸಪ್ತಕುಲಪರ್ವತಂಗಳಿಹವು. ಆ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಸಪ್ತಕುಲಪರ್ವತಂಗಳ ಸುತ್ತುವಳಯಾಕೃತವಾಗಿ ಸಮಸ್ತ ಲೋಕಾಲೋಕ ಪರ್ವತವಿಹುದು. ಆ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಸಪ್ತಕುಲಪರ್ವತಂಗಳ ವಿಸ್ತೀರ್ಣವೆಂತೆಂದಡೆ : ಪಂಚಾಶತಕೋಟಿ ವಿಸ್ತೀರ್ಣದ ಮಧ್ಯಭೂಮಿ. ಆ ಮಧ್ಯಭೂಮಿ ಮಂಡಲವಳಯದಲ್ಲಿ ಮಹಾಮೇರುಪರ್ವತದ ವಿಸ್ತೀರ್ಣವೆಂತೆಂದಡೆ : ಒಂದುಕೋಟಿಯು ಇಪ್ಪತ್ತಾರುಲಕ್ಷದ ಮೇಲೆ ಎಂಬತ್ತೈದುಸಾವಿರ ಯೋಜನಪ್ರಮಾಣು. ಆ ಮೇರುಮಂದಿರದ ಶಿರದ ಮೇಲೆ ಮೂವತ್ತುಮೂರುಕೋಟಿ ದೇವರ್ಕಳು, ನಾಲ್ವತ್ತೆಂಟುಸಾವಿರ ಮುನಿಗಳು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ನಂದಿವಾಹ ಗಣಂಗಳು, ದ್ವಾದಶಾದಿತ್ಯರು, ನಾರದಮುನಿ ಯೋಗೀಶ್ವರರು, ಅಷ್ಟದಿಕ್ಪಾಲರು, ಏಕಾದಶರುದ್ರರು ಮುಖ್ಯವಾದ ಅಸಂಖ್ಯಾತ ಮಹಾಗಣಂಗಳು ಶಿವಸುಖ ಸಂಗೀತ ವಿನೋದದಿಂದ ರಾಜ್ಯಂಗೆಯ್ಯುತ್ತಿರಲು, ಆ ಮೇರುಮಂದಿರದ ಶಿಖರದ ಕೆಳಗೆ ಜಂಬೂದ್ವೀಪವಿಹುದು. ಆ ಜಂಬೂದ್ವೀಪವು ಒಂದು ಲಕ್ಷದ ಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು. ಒಂದುಲಕ್ಷದ ಮೇಲೆ ಇಪ್ಪತ್ತೈದುಸಾವಿರ ಯೋಜನದಗಲವಾಗಿ ಲವಣಸಮುದ್ರವು ಆ ಜಂಬೂದ್ವೀಪಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಎರಡು ಲಕ್ಷದ ಮೇಲೆ ಐವತ್ತುಸಾವಿರ ಯೋಜನ ಪ್ರಮಾಣದಲ್ಲಿ ಇಕ್ಷುಸಮುದ್ರವು ಆ ಪ್ಲಕ್ಷದ್ವೀಪಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಮೂರುಲಕ್ಷದ ಮೇಲೆ ಎಪ್ಪತ್ತುಸಾವಿರದಯಿನೂರು ಯೋಜನಪ್ರಮಾಣದಗಲವಾಗಿ ಕುಶದ್ವೀಪವಂ ಆ ಇಕ್ಷುಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ನಾಲ್ಕುಲಕ್ಷದ ಮೇಲೆ ಮೂರುಸಾವಿರ ಯೋಜನಪ್ರಮಾಣದಗಲವಾಗಿ ಸುರೆಯ ಸಮುದ್ರವು ಆ ಕುಶದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಐದುಲಕ್ಷ ಯೋಜನಪ್ರಮಾಣದಗಲವಾಗಿ ಶಾಕದ್ವೀಪವು ಆ ಸುರೆಯ ಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಹದಿನಾಲ್ಕುಲಕ್ಷ ಯೋಜನಪ್ರಮಾಣದಗಲವಾಗಿ ಘೃತಸಮುದ್ರವು ಆ ಶಾಕದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಇಪ್ಪತ್ತುಲಕ್ಷ ಯೋಜನಪ್ರಮಾಣದಗಲವಾಗಿ ಶಾಲ್ಮಲೀದ್ವೀಪ ಆ ಘೃತಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಇಪ್ಪತ್ತು ಲಕ್ಷ ಯೋಜನಪ್ರಮಾಣದಗಲವಾಗಿ ದಧಿಸಮುದ್ರವು ಆ ಶಾಲ್ಮಲೀದ್ವೀಪವಂ ವಳಯಾಕೃತವಾದಿ ಸುತ್ತಿಕೊಂಡಿಹುದು. ನಾಲ್ವತ್ತುಲಕ್ಷ ಯೋಜನಪ್ರಮಾಣದಗಲವಾಗಿ ಪುಷ್ಕರದ್ವೀಪ ಆ ದಧಿಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ನಾಲ್ವತ್ತುಲಕ್ಷ ಯೋಜನಪ್ರಮಾಣದಗಲವಾಗಿ ಕ್ಷೀರಸಮುದ್ರವು ಆ ಪುಷ್ಕರದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಎಂಬತ್ತುಲಕ್ಷ ಯೋಜನಪ್ರಮಾಣದಗಲವಾಗಿ ಕ್ರೌಂಚದ್ವೀಪವು ಆ ಕ್ಷೀರಸಮುದ್ರಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಎಂಬತ್ತುಲಕ್ಷ ಯೋಜನಪ್ರಮಾಣದಗಲವಾಗಿ ಸ್ವಾದೋದಕಸಮುದ್ರವು ಆ ಕ್ರೌಂಚದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು. ಸಪ್ತದ್ವೀಪಂಗಳ ಸುತ್ತುವಳಯಾಕೃತವಾಗಿ ಲೋಕಾಲೋಕ ಪರ್ವಂತಗಳಿಹವು. ಆ ಲೋಕಾಲೋಕ ಪರ್ವತಂಗಳ ಸುತ್ತುವಳಯಾಕೃತವಾಗಿ ಚಕ್ರವಾಳಗಿರಿ ಇಹುದು. ಆ ಚಕ್ರವಾಳಗಿರಿಗತ್ತತ್ತ ಭೂಮಿ ಪರ್ವತಾಕಾರವಾಗಿಹುದು. ಆ ಭೂಮಿಯಿಂದಂ ಮೇಲೆ ಮೇಘಮಂಡಲಂಗಳಿಹವು. ಆ ಮೇಘಮಂಡಲಂಗಳ ಮೇಲೆ ಭುವರ್ಲೋಕವಿಹುದು. ಆ ಭುವರ್ಲೋಕದಿಂದ ಮೇಲೆ ಸ್ವರ್ಗಲೋಕವಿಹುದು. ಆ ಸ್ವರ್ಗಲೋಕದಿಂದ ಮೇಲೆ ನಕ್ಷತ್ರಾದಿಮಂಡಲವಿಹುದು. ಆ ನಕ್ಷತ್ರಾದಿ ಮಂಡಲಂಗಳಿಂದತ್ತ ಮೇಲೆ ಮಹರ್ಲೋಕವಿಹುದು. ಆ ಮಹರ್ಲೋಕದಿಂದತ್ತ ಮೇಲೆ ಜನರ್ಲೋಕವಿಹುದು. ಆ ಜನರ್ಲೋಕದಿಂದತ್ತ ಮೇಲೆ ತಪರ್ಲೋಕವಿಹುದು. ಆ ತಪರ್ಲೋಕದಿಂದತ್ತ ಮೇಲೆ ಸತ್ಯರ್ಲೋಕವಿಹುದು. ಆ ಸತ್ಯರ್ಲೋಕದಿಂದತ್ತ ಮೇಲೆ ತ್ರಿಲಕ್ಷಕೋಟಿಯೋಜನ ಪರಿಪ್ರಮಾಣದುದ್ದದಲ್ಲಿ ಮಹಾಪ್ರಳಯಜಲವಿಹುದು. ಆ ಮಹಾಪ್ರಳಯಜಲದಿಂದತ್ತ ಮೇಲೆ ಶಿವಾಂಡ ಚಿದ್ಬ್ರಹ್ಮಾಂಡವಿಹುದು. ಇಂಥ ಅನಂತಕೋಟಿ ಚಿದ್ಬ್ರಹ್ಮಾಂಡಗಳು, ಅನಂತಕೋಟಿ ಲೋಕಾಲೋಕಂಗಳೆಲ್ಲ ಒಂದರಲ್ಲೊಂದಡಗಿ ಅಪ್ರಮಾಣ ಕೂಡಲಸಂಗಯ್ಯನು ತನ್ನ ಲೀಲಾವಿನೋದದಿಂದ ನಿಂದರಾಗಿ ನಿಲುವುದು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಬ್ರಹ್ಮಾಂಡಕಪಾಲದೊಳಗಣ ಸೃಷ್ಟಿಯ ವಿಸ್ತೀರ್ಣವದೆಂತೆಂದಡೆ : ಆ ಭುವನಂಗಳು ಇಹ ಕ್ರಮವೆಂತೆಂದಡೆ : ಬ್ರಹ್ಮಾಂಡಕಪಾಲ ಸಹಸ್ರಕೋಟಿ ಯೋಜನ ಪ್ರಮಾಣು. ಅದರೊಳಗಾಗಿ ಅತಳಲೋಕ ಇಪ್ಪತ್ತೊಂದುಕೋಟಿ ಯೋಜನದಲ್ಲಿ ಶಿವನ ಆಜ್ಞಾಶಕ್ತಿಯಿಂದ ಆಧಾರಶಕ್ತಿ ಇಹಳು. ಆ ಆಧಾರಶಕ್ತಿಯ ಉದ್ದ ಗಾತ್ರದೊಳಗಾಗಿ ಐದು ಸಾವಿರಕೋಟಿ ಯೋಜನದಲ್ಲಿ ವಿತಳಲೋಕವಿಹುದು. ಆ ವಿತಳಲೋಕ ಆರುಸಾವಿರಕೋಟಿ ಯೋಜನಪ್ರಮಾಣು. ಆ ವಿತಳಲೋಕದ ಮೇಲೆ ಐದುಸಾವಿರಕೋಟಿ ಯೋಜನದಲ್ಲಿ ಸುತಳಲೋಕವಿಹುದು. ಆ ಸುತಳಲೋಕ ಅಗ್ನಿ ಜ್ವಾಲೆಯಾಗಿಹುದು. ಆ ಸುತಳಲೋಕದೊಳು ಕಾಲಾಗ್ನಿ ರುದ್ರರಿಹರು. ಆ ಸುತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ ರಸಾತಳಲೋಕವಿಹುದು. ಆ ರಸಾತಳಲೋಕ ಬಯಲಾಗಿಹುದು. ಆ ರಸಾತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ ತಳಾತಳಲೋಕವಿಹುದು. ಆ ತಳಾತಳಲೋಕ ಮಹಾಗ್ನಿ ಜ್ವಾಲೆಯಾಗಿಹುದು. ಆ ತಳಾತಳಲೋಕದ ಮೇಲೆ ಮಹಾತಳಲೋಕವಿಹುದು. ಆ ಮಹಾತಳಲೋಕದ ಮೇಲೆ ಪಾತಾಳಲೋಕವಿಹುದು. ಆ ಪಾತಾಳಲೋಕ ಎಂಬತ್ತು ಸಾವಿರ ಕೋಟಿ ಯೋಜನ ಭೂಮಿಯಮೇಲೆ ಜಲಮಯವಾಗಿಹುದು. ಆ ಜಲಮಯವಾಗಿಹ ಪಾತಾಳಲೋಕವು ಆಧಾರಶಕ್ತಿಯ ಆಜ್ಞೆಯಿಂದ ಹದಿನಾರು ದಿಕ್ಕುಗಳಲ್ಲಿಯೂ ಹದಿನಾರುಮಹಾಭೂತಂಗಳು ಸುತ್ತಿಹವು. ಹದಿನಾರುಭೂತಗಣಂಗಳ ನಡುವೆ ಕೂರ್ಮಾಂಡನೆಂಬ ಮಹಾಕೂರ್ಮನ ಅಗಲವದೆಂತೆಂದಡೆ : ಐದುಸಾವಿರಕೋಟಿ ವಿಸ್ತೀರ್ಣದಗಲ ನೋಡಾ. ಆ ಕೂರ್ಮಾಂಡನೆಂಬ ಮಹಾಕೂರ್ಮನ ಉದ್ದ ಹದಿನೆಂಟುಸಾವಿರಕೋಟಿಯೋಜನ ಪರಿಪ್ರಮಾಣುದ್ದದ ಬೆನ್ನ ಮೇಲೆ ಶತಕೋಟಿಯೋಜನ ಪರಿಪ್ರಮಾಣುದ್ದದ ಭೂಮಿಯ ಮೇಲೆ ಐನೂರು ಶಿರಸ್ಸನುಳ್ಳ ಶೇಷನು, ನಾಲ್ವತ್ತುಸಾವಿರ ಶೇಷನು ವಳಯಾಕೃತವಾಗಿ ಸುತ್ತಿರಲು, ಆ ನಾಲ್ವತ್ತುಸಾವಿರ ಶೇಷನ ಒಳಯಾಕೃತದಲ್ಲಿ, ಮಧ್ಯದಲ್ಲಿ ಶೇಷಾಹಿಯೆಂಬ ಮಹಾನಾಗ ಇಪ್ಪುದು. ಆ ಶೇಷಾಹಿಯೆಂಬ ಮಹಾನಾಗವು ಎಂಟುಸಾವಿರಕೋಟಿ ಯೋಜನಪ್ರಮಾಣು ನೀಳವು. ಹತ್ತುಸಾವಿರಕೋಟಿ ಸುತ್ತು ವಿಸ್ತೀರ್ಣವು. ಐದುಸಾವಿರ ಕೋಟಿ ಅಗಲದ ಹೆಡೆಯು. ಸ್ವರ್ಗ ಜ್ಯೋತಿಪ್ರಕಾಶದ ದೇಹವನುಳ್ಳುದಾಗಿ, ಸಹಸ್ರ ಶಿರ, ದ್ವಿಸಹಸ್ರಾಕ್ಷವು. ಆ ಸಹಸ್ರ ಶಿರದಲ್ಲಿ ಮಾಣಿಕ್ಯದ ಬಟ್ಟುಗಳ ಧರಿಸಿಕೊಂಡು ಮಹಾಗ್ನಿಜ್ವಾಲೆಯನುಳ್ಳ ಮಹಾಶೇಷನಿಹನು. ಐನೂರು ಶಿರಸ್ಸನುಳ್ಳ ಶೇಷ ನೂರುನಾಲ್ವತ್ತುಸಾವಿರ ಶೇಷನ ಸುತ್ತುವಳಯಾಕೃತವಾಗಿ ಅಷ್ಟದಿಗ್ಗಜಂಗಳಿಹವು. ಆ ಅಷ್ಟದಿಗ್ಗಜಂಗಳ ಮೇಲೆ ವಿಸ್ತೀರ್ಣ ಒಂದೊಂದು ಗಜಂಗಳು ನವಕೋಟಿಯೋಜನಪ್ರಮಾಣದುದ್ದವು, ಸಾವಿರಕೋಟಿಯೋಜನಪ್ರಮಾಣದಗಲವು, ಶತಕೋಟಿಸಾವಿರಯೋಜನಪ್ರಮಾಣದ ನೀಳವನುಳ್ಳುದಾಗಿ ಅಷ್ಟದಿಕ್‍ಮಹಾಗಜಂಗಳಿಹವು. ಆ ಅಷ್ಟದಿಕ್‍ಮಹಾಗಜಂಗಳು ಆಧಾರವಾಗಿ ಭೂಲೋಕವಿಹುದು. ಆ ಭೂಲೋಕ ಮೊದಲಾಗಿ ಕೆಳಗಿನಂಡಬ್ರಹ್ಮಾಂಡಕಪಾಲ ಕಡೆಯಾಗಿ ಅರುವತ್ತುಸಾವಿರಕೋಟಿಯೋಜನ ಪರಿಪ್ರಮಾಣು. ಆ ಭುವರ್ಲೋಕವು ಸಾವಿರಕೋಟಿಯೋಜನಪರಿಪ್ರಮಾಣು ಉದ್ದ ಕಬ್ಬುಣವಾಗಿಹುದು. ಸಾವಿರಕೋಟಿಯೋಜನಪರಿಪ್ರಮಾಣು ಉದ್ದ ಮಣ್ಣಾಗಿಹುದು. ಇದು ಮಧ್ಯಭೂಮಿ. ಈ ಮಧ್ಯಭೂಮಿ ಅಜಲಮಯವಾಗಿ ಉತ್ತರ-ದಕ್ಷಿಣ ಶತಸಹಸ್ರಕೋಟಿಯೋಜನಪರಿಪ್ರಮಾಣು. ಸುತ್ತ ಅಗಲ ಮುನ್ನೂರರುವತ್ತುಕೋಟಿಯೋಜನಪರಿಪ್ರಮಾಣು. ದಕ್ಷಿಣ-ಉತ್ತರ ಸಮುದ್ರ ತೊಡಗಿ ಉತ್ತರ ಹಿಮವತ್ಪರ್ವತ. ಇದಕ್ಕೆ ಹೆಸರು ಭರತವರುಷ. ಈ ಹಿಮವತ್ಪರ್ವತವು ಉತ್ತರ ದಕ್ಷಿಣ ಇಪ್ಪತ್ತುಸಾವಿರ ಯೋಜನಪ್ರಮಾಣು. ಕೆಳಗೆ ಮೇಲೆ ಇಪ್ಪತ್ತುಸಾವಿರಯೋಜನಪ್ರಮಾಣು. ಮೇಲುದ್ದವು ಎಂಬತ್ತೈದುಸಾವಿರಯೋಜನಪ್ರಮಾಣು. ಉತ್ತರ ಸಮುದ್ರಕ್ಕೆ ದಕ್ಷಿಣ ಉತ್ತರ ಸಾವಿರಕೋಟಿ ಯೋಜನದಲ್ಲಿ ವಿಂಧ್ಯಪರ್ವತವಿಹುದು. ಆ ವಿಂಧ್ಯಪರ್ವತದ ಮೇಲುದ್ದವು ತೊಂಬತ್ಮೂರುಸಾವಿರ, ದಕ್ಷಿಣ ಉತ್ತರ ಮೂವತ್ತುಸಾವಿರಯೋಜನಪ್ರಮಾಣು. ಕೆಳಗು ಮೇಲು ಮೂವತ್ತುಸಾವಿರಯೋಜನಪ್ರಮಾಣು. ಆ ವಿಂಧ್ಯಪರ್ವತದ ಮೇಲುದ್ದವು ತೊಂಬತ್ತುನೂರುಸಾವಿರಯೋಜನ ಪ್ರಮಾಣು. ಪಶ್ಚಿಮದೆಸೆಯ ಸಮುದ್ರದಲ್ಲಿಹ ಅಸ್ತಮಾನಪರ್ವತ. ಆ ಪರ್ವತ ದಕ್ಷಿಣ-ಉತ್ತರ ಮೂವತ್ತೈದುಸಾವಿರ ಯೋಜನಪ್ರಮಾಣು. ಆ ಪರ್ವತದ ಕೆಳಗು ಮೇಲು ಮೂವತ್ತೈದುಸಾವಿರ ಯೋಜನಪ್ರಮಾಣು. ಆ ಪರ್ವತದ ಮೇಲುದ್ದವು ತೊಂಬತ್ತುಸಾವಿರ ಯೋಜನಪ್ರಮಾಣು ಭೂಮಿಗೆ ನಡುವಾಗಿ ಮಹಾಮೇರುಪರ್ವತವಿಹುದು. ಆ ಮೇರುಪರ್ವತದ ಉತ್ತರ ದಕ್ಷಿಣ ಹದಿನಾರುಸಾವಿರ ಯೋಜನಪ್ರಮಾಣು. ಆ ಮೇರುಪರ್ವತದ ಮೇಲುದ್ದವು ಸಾವಿರಕೋಟಿಯ ಮೇಲೆ ನೂರುಸಾವಿರದ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು. ಭೂಮಿಯಲ್ಲಿ ಹೂಳಿಹುದು ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು. ಆ ಮಹಾಮೇರುವಿನ ಪೂರ್ವದಿಕ್ಕಿನಲ್ಲಿ ಮಂದರಪರ್ವತವಿಹುದು. ಅಲ್ಲಿಹ ವೃಕ್ಷ ಕದಂಬವೃಕ್ಷ. ಆ ಮಹಾಮೇರುವಿನ ದಕ್ಷಿಣದಿಕ್ಕಿನಲ್ಲಿ ಗಂಧಮಾದನಪರ್ವತವಿಹುದು. ಅಲ್ಲಿಹ ವೃಕ್ಷ ಜಂಬೂವೃಕ್ಷ. ಆ ಮಹಾಮೇರುವಿನ ನೈಋತ್ಯದಿಕ್ಕಿನಲ್ಲಿ ನೀಲಗಿರಿಪರ್ವತವಿಹುದು. ಅಲ್ಲಿಹ ವೃಕ್ಷ ಭೂದಳವೃಕ್ಷ. ಆ ಮಹಾಮೇರುವಿನ ಪಶ್ಚಿಮದಿಕ್ಕಿನಲ್ಲಿ ಕಾಶೀಪರ್ವತವಿಹುದು. ಅಲ್ಲಿಹ ವೃಕ್ಷ ಬಿಲ್ವದ ವೃಕ್ಷ. ಆ ಮಹಾಮೇರುವಿನ ವಾಯುವ್ಯದಿಕ್ಕಿನಲ್ಲಿ ನೀಲಪರ್ವತವಿಹುದು. ಅಲ್ಲಿಹ ವೃಕ್ಷ ಬ್ರಹ್ಮವೃಕ್ಷ. ಆ ಮಹಾಮೇರುವಿನ ಉತ್ತರದಿಕ್ಕಿನಲ್ಲಿ ಮಧುರಾದ್ರಿಪರ್ವತವಿಹುದು. ಅಲ್ಲಿಹ ವೃಕ್ಷ ವಟವೃಕ್ಷ. ಆ ಮಹಾಮೇರುವಿನ ಈಶಾನ್ಯದಿಕ್ಕಿನಲ್ಲಿ ಕಪಿಲ ಮಹಾಪರ್ವತವಿಹುದು. ಅಲ್ಲಿಹ ವೃಕ್ಷ ಶಾಕಾಫಲವೃಕ್ಷ. ಸಪ್ತಕುಲಪರ್ವತಂಗಳು ಒಂದೊಂದು ಬಗೆ ಹತ್ತುಸಾವಿರ ಯೋಜನಪ್ರಮಾಣು. ಆ ಸಪ್ತಕುಲಪರ್ವತಂಗಳೊಂದೊಂದಿಗೆ ಐದುಸಾವಿರ ಯೋಜನಪ್ರಮಾಣು. ಈ ಸಪ್ತಕುಲಪರ್ವತಂಗಳ ನಡುವೆ ಮಹಾಮೇರುಪರ್ವತವಿಹುದು. ಆ ಮೇರುಪರ್ವತದ ತುದಿಯಲ್ಲಿ ಪಂಚಸಹಸ್ರಯೋಜನದಗಲ ಚುತುಃಚಕ್ರಾಕಾರವಾಗಿ ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ ನವರತ್ನಖಚಿತವಾಗಿ ಪ್ರಮಥಗಣಂಗಳು ನಂದಿ, ಮಹಾನಂದಿಕೇಶ್ವರಗಣಂಗಳು, ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದರಿಂ ಸುಖಂಗಳಲಿಪ್ಪಂತಾಗಿ ಶಿವಪುರವಿಹುದು. ಆ ಶಿವಪುರದೊಳು ಸಿಂಹಾಸನಾರೂಢನಾಗಿ ಮಹಾರುದ್ರಮೂರ್ತಿ ಇಹನು. ಆ ಮಹಾರುದ್ರಮೂರ್ತಿಯ ಚಂದ್ರಾದಿತ್ಯರು, ನಕ್ಷತ್ರ ನವಗ್ರಹಂಗಳು ಮೊದಲಾಗಿ ಎಲ್ಲಾ ದೇವರ್ಕಳು ಪ್ರದಕ್ಷಣಬಹರು. ಯಕ್ಷ ಕಿನ್ನರ ಗಂಧರ್ವ ಸಿದ್ಧ ವಿದ್ಯಾಧರ ಬ್ರಹ್ಮ ವಿಷ್ಣು ಇಂದ್ರಾದಿ ದೇವರ್ಕಳೆಲ್ಲರು ಒಡ್ಡೋಲಗಂಗೊಟ್ಟಿರಲು ಎಲ್ಲ ಲೋಕಕ್ಕೂ ಸಾಕ್ಷೀಭೂತನಾಗಿ ಆ ಮಹಾರುದ್ರಮೂರ್ತಿ ಇಹನು. ಆ ಮಹಾಮೇರುವಿನ ದಕ್ಷಿಣದ ಕೆಳಗಣ ಪಾಶ್ರ್ವದಲ್ಲಿ ಚಿಕ್ಕದೊಂದು ಕೋಡು. ಆ ಕೋಡಿನಲ್ಲಿ ಕಲ್ಪವೃಕ್ಷವಿಹುದು. ಆ ದಕ್ಷಿಣ ಕೋಡಿನಲ್ಲಿ ಜಂಬೂವೃಕ್ಷದ ಹಣ್ಣಿನ ರಸ ಸೋರಿ ಜಾಂಬೋಧಿಯೆಂಬ ಮಹಾನದಿ ಹರಿಯುತ್ತಿಹುದು. ಆ ನೀರ ಸೇವಿಸಿದವರು ಸ್ವರ್ಣವರ್ಣವಹರು. ಆ ನೀರು ಹರಿದ ಠಾವೆಲ್ಲ ಸ್ವರ್ಣಬೆಳೆಭೂಮಿ. ಆ ಭೂಮಿಗೆ ಉತ್ತರ ಪೂರ್ವವಾಗಿ ಶ್ರೀ ಕೈಲಾಸಪರ್ವತವಿಹುದು. ಆ ಕೈಲಾಸಪರ್ವತ ಏಳು ನೆಲೆಯಾಗಿ ರತ್ನಮಯವಾಗಿ ಅನಂತ ಕೋಡುಗಳುಂಟಾಗಿಹುದು. ಆ ಕೈಲಾಸಪರ್ವತವು ಉತ್ತರ ದಕ್ಷಿಣ ಹದಿನಾರುಸಾವಿರಕೋಟಿಯೋಜನ ಪರಿಪ್ರಮಾಣು. ಆ ಕೈಲಾಸಪರ್ವತದ ಮೇಲುದ್ದವು ಸಾವಿರಕೋಟಿ ನೂರುಸಾವಿರದ ಮೇಲೆ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು. ಭೂಮಿಯಲ್ಲಿ ಹೂಳಿಹುದು ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು. ಆ ಕೈಲಾಸಪರ್ವತದ ತುದಿಯಲ್ಲಿ ಶಿವಪುರದ ವಿಸ್ತೀರ್ಣ ಪಂಚಸಹಸ್ರ ಯೋಜನದಗಲ. ಚತುಷ್ಟಾಕಾರವಾಗಿ ನವರತ್ನಖಚಿತವಾಗಿ ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ ಪ್ರಮಥಗಣಂಗಳು, ನಂದಿ ಮಹಾನಂದಿಕೇಶ್ವರಗಣಂಗಳು, ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖಂಗಳಲ್ಲಿಪ್ಪಂತಾಗಿ ಮಹಾಶಿವಪುರವಿಹುದು. ಆ ಶಿವಪುರದೊಳು ಶ್ರೀಕಂಠನೆಂಬ ಸದಾಶಿವಮೂರ್ತಿ ಇಹನು. ಆ ಶಿವಪುರದ ಬಾಗಿಲ ಕಾವಲಾಗಿ ನಂದಿ-ಮಹಾಕಾಳರೆಂಬ ಮಹಾಗಣಂಗಳಿಹರು. ನಂದಿ-ಮಹಾನಂದಿ-ಅತಿಮಹಾನಂದಿಕೇಶ್ವರರು ವಿಘ್ನೇಶ್ವರ ಕುಮಾರಸ್ವಾಮಿ ಮಹಾಭೈರವೇಶ್ವರ ಮಹಾಕಾಳಿ ಮೊದಲಾದ ಅಸಂಖ್ಯಾತ ಮಹಾಗಣಂಗಳು ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ಅಷ್ಟವಶುಗಳು, ನವಗ್ರಹಂಗಳು, ಬ್ರಹ್ಮ , ವಿಷ್ಣು , ರುದ್ರಗಣಂಗಳು, ಮೂವತ್ಮೂರುಕೋಟಿ ದೇವರ್ಕಳು, ನಾಲ್ವತ್ತೆಂಟುಸಾವಿರ ಮುನಿಗಳು, ಅಷ್ಟದಶ ಗಣಂಗಳು, ಯೋಗೀಶ್ವರರು, ಯಕ್ಷ ಕಿನ್ನರ ಗರುಡ ಗಂಧರ್ವ ಸಿದ್ಧ ವಿದ್ಯಾಧರರು, ರಾಕ್ಷಸಗಣ ನಾಗಗಣ ಭೂತಗಣಂಗಳು ಮೊದಲಾದ ಎಲ್ಲಾ ಗಣಂಗಳ ಸನ್ನಿಧಿಯಲ್ಲಿ ಒಡ್ಡೋಲಗಂಗೊಟ್ಟಿರಲು, ಚತುರ್ವೇದಂಗಳು ಮೊದಲಾಗಿ ಎಲ್ಲಾ ವೇದಂಗಳು `ವಿಶ್ವಾಧಿಕೋ ರುದ್ರೋ ಮಹಾಋಷಿ' ಎನಲು 'ಋತಂ ಸತ್ಯಂ ಪರಬ್ರಹ್ಮ ' ಎನಲು `ಅತ್ಯತಿಷ್ಟರ್ದಶಾಂಗುಲಂ' ಎನಲು `ತತ್ಪರ ಬ್ರಹ್ಮ ವಿಜಾತಿ', ಎನಲು `ಓಮಿತೈಕಾಕ್ಷರ ಬ್ರಹ್ಮ' ಎಂದು ಬೊಬ್ಬಿಟ್ಟು ಸಾರುತ್ತಿರಲು ತುಂಬುರ ನಾರದರು ಗೀತಮಂ ಪಾಡುತಿರಲು ನಂದಿ ಮದ್ದಳೆವಾದ್ಯಮಂ ಬಾರಿಸುತ್ತಿರಲು, ವಿಷ್ಣು ಆವುಜವ ನುಡಿಸಲು, ಬ್ರಹ್ಮ ತಾಳವನೊತ್ತಲು, ಪಂಚಮಹಾವಾದ್ಯಂಗಳು ಮೊಳಗುತ್ತಿರಲು ಭೃಂಗೀಶ್ವರ ಮಹಾನಾಟ್ಯವನಾಡಲು ಉಮಾಮಹೇಶ್ವರಿಯೊಡನೆ ಪರಮೇಶ್ವರನು ಸಿಂಹಾಸನಾರೂಢನಾಗಿ ಕುಳ್ಳಿರ್ದು ಭೃಂಗೀಶ್ವರನ ಮಹಾನಾಟ್ಯವ ತಮ್ಮ ಲೀಲಾವಿನೋದದಲ್ಲಿ ನೋಡುತ್ತ ಶ್ರೀ ಕೈಲಾಸಪರ್ವತದಲ್ಲಿ ಇರುತ್ತಿರ್ದನು. ಈ ಭೂಮಿಗೆ ದಕ್ಷಿಣ ಪೂರ್ವದಲ್ಲಿ ಆದಿಯ ಮಹಾದ್ರಿಪರ್ವತವಿಹುದು. ಆ ಆದಿಯ ಮಹಾದ್ರಿಪರ್ವತದಲ್ಲಿ ಅಗಸ್ತ್ಯಮಹಾಮುನಿ ಇಹನು. ಈ ಭೂಮಿ ಒಂಬತ್ತು ತುಂಡಾಗಿಹುದು. ಒಂಬತ್ತು ತುಂಡಾದ ಅಂತರಾಳವೆಲ್ಲವು ಜಲಮಯವಾಗಿ ಹೊರಗೆ ಬಿರಿದುದ್ದವಾಗಿ ಬೆಳೆಯಲು ನವಖಂಡಪೃಥ್ವಿಯೆಂದು ಹೆಸರಾಯಿತ್ತು. ಈ ಭೂಮಿ ಜಂಬೂದ್ವೀಪ. ಈ ಭೂಮಿಗೆ ಜನನ ಲವಣಸಮುದ್ರ. ಆ ಜಂಬೂದ್ವೀಪ ಲವಣಸಮುದ್ರದ ವಿಸ್ತೀರ್ಣ: ಆ ಜಂಬೂದ್ವೀಪದ ಅಗಲ ಶತಕೋಟಿಯೋಜನಪ್ರಮಾಣು. ಆ ಜಂಬೂದ್ವೀಪ ವಳಯಾಕೃತವಾಗಿ ಸುತ್ತಿಕೊಂಡು ಶತಕೋಟಿಯೋಜನಪರಿಪ್ರಮಾಣದಗಲವಾಗಿ ಲವಣಸಮುದ್ರವಿಹುದು. ಅದರಿಂದಾಚೆ ಪ್ಲಕ್ಷದ್ವೀಪ. ಅದರಗಲ ಇನ್ನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಇಕ್ಷುಸಮುದ್ರ. ಅದರಗಲ ಇನ್ನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಕುಶದ್ವೀಪ. ಅದರಗಲ ನಾನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಸುರೆಯ ಸಮುದ್ರ. ಅದರಗಲ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಶಾಕದ್ವೀಪ. ಅದರಗಲ ಎಂಟುನೂರುಕೋಟಿ ಯೋಜನ ಪರಿಪ್ರಮಾಣು. ಅದರಿಂದಾಚೆ ಘೃತಸಮುದ್ರ, ಅದರಗಲ ಎಂಟುನೂರುಕೋಟಿ ಯೋಜನ ಪರಿಪ್ರಮಾಣು. ಅದರಿಂದಾಚೆ ಸಾಲ್ಮಲೀದ್ವೀಪ. ಅದರಗಲ ಸಾವಿರದಾರು ನೂರು ಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಕ್ಷೀರಸಮುದ್ರ. ಅದರಗಲ ಸಾವಿರದಾರುನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಪುಸ್ಕರದ್ವೀಪ. ಅದರಗಲ ಮೂರುಸಾವಿರಕೋಟಿ ಯೋಜನ ಪ್ರಮಾಣು. ಅದರಿಂದಾಚೆ ದಧಿಸಮುದ್ರ. ಅದರಗಲ ಮೂರುಸಾವಿರದಿನ್ನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಕ್ರೌಂಚದ್ವೀಪ. ಅದರಗಲ ಆರುಸಾವಿರದ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಸ್ವಾದೋದಕಸಮುದ್ರ. ಅದರಗಲ ಆರುಸಾವಿರದ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಸ್ವರ್ಣಬೆಳೆಯಭೂಮಿ. ಅದರಗಲ ಹನ್ನೆರಡುಸಾವಿರಕೋಟಿಯೋಜನ ಪ್ರಮಾಣು. ಅದರಿಂದಾಚೆಯಲಿ ಚಕ್ರವಾಳಗಿರಿ. ಅದರಗಲ ಇಪ್ಪತ್ತೈದುಸಾವಿರಕೋಟಿ ಯೋಜನ ಪ್ರಮಾಣು. ಈ ಸಪ್ತಸಮುದ್ರಂಗಳು ಸಪ್ತದ್ವೀಪಂಗಳು ಹೊರಗೆ ಬಿರಿದು ಬೆಳೆಯಲು ಸಪ್ತಸಮುದ್ರಂಗಳು, ದೆಸೆಗಳು ಕೂಡಿ ಮೇಳೈಸಲು ನಾಲ್ವತ್ರೊಂಬತ್ತುಸಾವಿರಕೋಟಿ ಯೋಜನ ಪ್ರಮಾಣಿನ ಮೇಲೆ ತೊಂಬತ್ತು ಸಾವಿರದೈವತ್ತುಕೋಟಿಯ ಮಧ್ಯಭೂಮಿ ಯೋಜನ ಪ್ರಮಾಣುಮಂ ಕೂಡಿ ನೂರುಸಾವಿರಕೋಟಿ ಯೋಜನ ಪ್ರಮಾಣು. ಈ ಭೂಮಿಗೂ ಚಕ್ರವಾಳಗಿರಿಗೂ ಹೊರಗೆ ಕಾವಲಾಗಿ ಅಷ್ಟದಿಕ್ಪಾಲರಿಹರು. ಮೇರು ಮಂದರ ಕೈಲಾಸ ಗಂಧಮಾದನ ವಿಂಧ್ಯ ಹಿಮಾಲಯ ನಿಷಧ ಚಿತ್ರಕೂಟವೆಂಬ ಅಷ್ಟಕುಲಪರ್ವತಂಗಳ ತಪ್ಪಲಲ್ಲಿ ಅನಂತವಾಸುಗಿ ಕಶ್ಚ ಕರ್ಕಾಟಕ ಪರ ಮಹಾಪರ ಶಂಕವಾಲಿ ಕುಳಿಕನೆಂಬ ಅಷ್ಟಮಹಾಗಣಂಗಳಿಹವು. ಈಶಾನಮುಖದಲ್ಲಿ ವಡಬಮುಖಾಗ್ನಿ ಇಹುದು. ಉತ್ತರದೆಸೆಯಲ್ಲಿ ಕ್ಷೀರಸಮುದ್ರದೊಳು ವಿಷ್ಣು ಅನಂತಶಯನದಲ್ಲಿ ತಮೋಗುಣಯುಕ್ತನಾಗಿ ನಿದ್ರಾಲಂಬಿಯಾಗಿಹನು. ಈ ಭೂಮಿಗೆ ದಕ್ಷಿಣದೆಸೆಯಾಗಿ ಉತ್ತರ ಪರಿಯಂತರ ಬ್ರಹ್ಮ ಮಹೇಶ್ವರಿ ಕೌಮಾರಿ ವೈಷ್ಣವಿ ವರಾಹಿ ಮಾಹೇಂದ್ರಿ ಚಾಮುಂಡಿಯೆಂಬ ಸಪ್ತಮಾತೃಕೆಯರು ಇಹರು. ಮೇಲುಗಡೆಯಲ್ಲಿ ವಿನಾಯಕ, ಕೆಳಗಡೆಯಲ್ಲಿ ಭೈರವನಿಹನು. ಈ ಭೂಮಿಗೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮದಲ್ಲಿ ಭೈರವ ಮಹಾಭೈರವ ಕಾಲಭೈರವ ದುರ್ಗಿ ಮಹಾದುರ್ಗಿ ಮೊದಲಾದ ಅನಂತ ಭೂತಗಣಂಗಳು ಕಾವಲಾಗಿಹರು. ಈ ಭೂಮಿಯಿಂದ ಮೇಲೆ ಯೋಜನ ಪ್ರಮಾಣದಲ್ಲಿ ಸಪ್ತಮೇಘಂಗಳು, ವಾಯುವಿನ ದೆಸೆಯಿಂದ ಚಲಿಸುತ್ತಿಹುದು. ಅವಾವೆಂದಡೆ : ನೆಲವೃಷ್ಟಿ ನೀರವೃಷ್ಟಿ ಸ್ವರ್ಣವೃಷ್ಟಿ ಪುಷ್ಪವೃಷ್ಟಿ ಕಲ್ಪವೃಷ್ಟಿ ಮಣ್ಣವೃಷ್ಟಿ ಮೌಕ್ತಿಕವೃಷ್ಟಿ- ಎಂಬ ಸಪ್ತವೃಷ್ಟಿಗಳು ವೃಷ್ಟಿಸುತ್ತಿರಲು ಆ ಸಪ್ತಮೇಘಮಂಡಲಂಗಳ ಮೇಲೆ ಶತಕೋಟಿಯೋಜನದಲ್ಲಿ ಭುವರ್ಲೋಕವಿಹುದು. ಆ ಭುವರ್ಲೋಕದಲ್ಲಿ ಆದಿತ್ಯ ಚರಿಸುತ್ತಿಹನು. ಆ ಆದಿತ್ಯನ ರಥದ ಪ್ರಮಾಣು ತೊಂಬತ್ತುಸಾವಿರಯೋಜನಪ್ರಮಾಣದುದ್ದವು, ನಾಲ್ವತ್ತೈದುಸಾವಿರ ಯೋಜನದಗಲವು. ಆ ರಥಕ್ಕೆ ಒಂದೇ ಗಾಲಿ, ಒಂದೆ ನೊಗದಲ್ಲಿ ಕಟ್ಟುವ ಪಚ್ಚವರ್ಣದ ವಾಜಿಗಳೇಳು. ಉರದ್ವಯವಿಲ್ಲದ ಅರುಣ ರಥದ ಸಾರಥಿ. ಆ ಅರುಣನ ಕಂಡುದೆ ಉದಯ, ಕಾಣದುದೇ ಅಸ್ತಮಯ. ಆದಿತ್ಯಪಥಕ್ಕೆ ಶತಕೋಟಿ ಯೋಜನದಲ್ಲಿ ಚಂದ್ರಮನ ಪಥವು ಆ ಚಂದ್ರಮನ ಪಥಕ್ಕೆ ಶತಕೋಟಿ ಯೋಜನದಲ್ಲಿ ಅಂಗಾರಕನ ಪಥವು. ಅಂಗಾರಕನ ಪಥಕ್ಕೆ ಶತಕೋಟಿಯೋಜನದಲ್ಲಿ ಬುಧನ ಪಥವು. ಆ ಬುಧನ ಪಥಕ್ಕೆ ಶತಕೋಟಿಯೋಜನದಲ್ಲಿ ಬೃಹಸ್ಪತಿಯ ಪಥವು. ಆ ಬೃಹಸ್ಪತಿಯ ಪಥಕ್ಕೆ ಶತಕೋಟಿಯೋಜನದಲ್ಲಿ ಶುಕ್ರನ ಪಥವು. ಆ ಶುಕ್ರನ ಪಥಕ್ಕೆ ಶತಕೋಟಿ ಯೋಜನದಲ್ಲಿ ಶನೀಶ್ವರನ ಪಥವು. ಆ ಶನೀಶ್ವರನ ಪಥಕ್ಕೆ ಶತಕೋಟಿ ಯೋಜನದಲ್ಲಿ ರಾಹುಕೇತುಗಳ ಪಥವು. ಆ ರಾಹುಕೇತುಗಳ ಪಥಕ್ಕೆ ಶತಕೋಟಿಯೋಜನದಲ್ಲಿ ನಕ್ಷತ್ರಾದಿಗಳ ಪಥವು. ಆ ನಕ್ಷತ್ರಾದಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಸಪ್ತಮಹಾಋಷಿಗಳ ಪಥವು. ಆ ಸಪ್ತಮಹಾಋಷಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಅಶ್ವಿನೀದೇವತೆಗಳ ಪಥವು. ಆ ಅಶ್ವಿನೀದೇವತೆಗಳ ಪಥಕ್ಕೆ ಶತಕೋಟಿಯೋಜನದಲ್ಲಿ ವಿಶ್ವದೇವತೆಗಳ ಪಥವು. ಆ ವಿಶ್ವದೇವತೆಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಬಾಲಸೂರ್ಯರ ಪಥವು. ಆ ಬಾಲಸೂರ್ಯರ ಪಥಕ್ಕೆ ಶತಕೋಟಿಯೋಜನದಲ್ಲಿ ಸೇನ ಮಹಾಸೇನ ಋಷಿಗಳ ಪಥವು. ಆ ಸೇನ ಮಹಾಸೇನ ಋಷಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಕ್ರುಕರನೆಂಬ ಋಷಿಗಳ ಪಥವು. ಆ ಕ್ರುಕರನೆಂಬ ಮುನಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಸ್ವರ್ಣಪ್ರಭವಾಗಿ ಸ್ವರ್ಗಲೋಕವಿಹುದು. ಆ ಸ್ವರ್ಗಲೋಕದಲ್ಲಿ ಕಲ್ಪವೃಕ್ಷವಿಹುದು. ಆ ಕಲ್ಪವೃಕ್ಷದ ನೆಳಲಲ್ಲಿ ಅಮರಾವತಿಪುರ. ಆ ಪುರದೊಳು ದೇವೇಂದ್ರನಿಹನು. ಆ ದೇವೇಂದ್ರನ ಓಲಗದೊಳಗೆ ಸಪ್ತಮಹಾಋಷಿಗಳು, ಮೂವತ್ಮೂರು ಕೋಟಿ ದೇವರ್ಕಳಿಹರು. ಆ ಸ್ವರ್ಗಲೋಕಕ್ಕೆ ಶತಕೋಟಿ ಯೋಜನದಲ್ಲಿ ಮಹರ್ಲೋಕವಿಹುದು; ಅದು ಬ್ರಹ್ಮ ಪಥವು. ಆ ಮಹರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಜನರ್ಲೋಕವಿಹುದು; ಅದು ವಿಷ್ಣುವಿನ ಪಥವು. ಆ ಜನರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ತಪರ್ಲೋಕವಿಹುದು ; ಅದು ರುದ್ರಪಥವು. ಆ ತಪರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಸತ್ಯರ್ಲೋಕವಿಹುದು ; ಅದು ಈಶ್ವರಪಥವು. ಆ ಸತ್ಯರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಸದಾಶಿವಲೋಕವಿಹುದು. ಆ ಸದಾಶಿವಲೋಕಕ್ಕೆ ತ್ರಿಶತ ಸಹಸ್ರಕೋಟಿ ಯೋಜನದಲ್ಲಿ ಶಿವಾಂಡವಿಹುದು. ಆ ಶಿವಾಂಡವು ಪಂಚಶತಸಹಸ್ರಕೋಟಿ ಲಕ್ಷವು ತ್ರಿಶತ ಸಹಸ್ರಕೋಟಿ ಲಕ್ಷದ ಮೇಲೆ ಶತಕೋಟಿ ಸಾವಿರ ಲಕ್ಷ ಯೋಜನ ಪ್ರಮಾಣದಗಲವನುಳ್ಳ ಶಿವಾಂಡವು, ಮಹಾಸಮುದ್ರಂಗಳನು, ಅಣುವಾಂಡಗಳನು, ಬ್ರಹ್ಮಾಂಡಂಗಳನು, ಅನಂತಕೋಟಿ ಲೋಕಾದಿಲೋಕಂಗಳನೊಳಕೊಂಡು ಮಹಾಪ್ರಳಯಜಲದೊಳಗಿಹುದು. ಆ ಶಿವಾಂಡಕ್ಕೆ ಹೊರಗಾಗಿ ಅಖಂಡ ಚಿದ್ಬ ್ರಹ್ಮಾಂಡವಿಹುದು. ಅಖಂಡ ಚಿದ್ಬ್ರಹ್ಮಾಂಡವು ಅನಂತಕೋಟಿ ಬ್ರಹ್ಮಾಂಡವನೊಳಕೊಂಡು ಆದಿ ಮಧ್ಯಾವಸಾನಂಗಳಿಲ್ಲದೆ ಅಖಂಡಿತ ಅಪ್ರಮೇಯ ಅವ್ಯಕ್ತ ಅಚಲಿತ ಅಪ್ರಮಾಣ ಅಗೋಚರ ಅಖಂಡಪರಿಪೂರ್ಣವಾಗಿಹುದು ನೋಡಾ ಚಿದ್ಬ್ರಹ್ಮಾಂಡವು ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪೃಥ್ವಿಯಿಂದ ಈಶ್ವರ ಪರಿಯಂತ ಪಂಚವಿಶಂತಿ ತತ್ವಂಗಳುತ್ಪತ್ಯ, ಈಶ್ವರಾದಿ ಪರಶಿವ ಪರಿಯಂತ ಶಿವತತ್ವದುತ್ಪತ್ಯ. ದೇವತಾದಿಗೆ ಜಗದಾದಿಗೆ ಪೃಥ್ವಿಯಾದಿಗೆ ಪಂಚವಿಂಶತಿತತ್ವಂಗಳುತ್ಪತ್ಯಮಂ ಪೇಳ್ವೆ: ಪಂಚಶತಕೋಟಿ (ವಿಸ್ತೀರ್ಣ) ಭೂಮಂಡಲವಳಯದಲ್ಲಿ ಮೇರುಮಂದಿರದ ವಿಸ್ತೀರ್ಣ ಒಂದುಕೋಟಿ ಇಪ್ಪತ್ತಾರುಲಕ್ಷದ ಮೇಲೆ ಎಂಬತ್ತೈದುಸಾವಿರ ಯೋಜನ ಪ್ರಮಾಣು. ಆ ಮೇರುಮಂದಿರದ ಮೇಲೆ ಬ್ರಹ್ಮ ವಿಷ್ಣು ರುದ್ರ ಸದಾಶಿವ ನಂದಿ ಮಹಾಕಾಳ ವೀರಭದ್ರ ಅಷ್ಟಾಶೀತಿಸಹಸ್ರ ಋಷಿಯರು, ಅಸಂಖ್ಯಾತ ಮಹಾಗಣಂಗಳು, ದ್ವಾದಶಾದಿತ್ಯರು, ನಾರದಯೋಗೀಶ್ವರರು, ಅಷ್ಟದಿಕ್ಪಾಲಕರು ಏಕಾದಶ ರುದ್ರರು ಮುಖ್ಯವಾಗಿ ಶಿವಸುಖಸಂತೋಷದಿಂ ರಾಜ್ಯಂಗೆಯ್ವರು. ಆ ಮೇರುಮಂದಿರದ ಕೆಳಗಣ ಜಂಬೂದ್ವೀಪದ ವಿಸ್ತೀರ್ಣ ಲಕ್ಷದಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು. (ಅಲ್ಲಿಂದ ಮುಂದೆ) ಲವಣಸಮುದ್ರ ಲಕ್ಷದಮೇಲೆ ಇಪ್ಪತ್ತೈದುಸಾವಿರ ಯೋಜನಪ್ರಮಾಣು. ಆ ಲವಣಸಮುದ್ರದಿಂದಾಚೆಯಲ್ಲಿ ಭೂಮಿ ಎರಡುಲಕ್ಷದ ಮೇಲೆ ಐವತ್ತುಸಾವಿರ ಯೋಜನಪ್ರಮಾಣು. (ಆ ದ್ವೀಪದ ಹೆಸರು ಪ್ಲಕ್ಷದ್ವೀಪ) ಪ್ಲಕ್ಷದ್ವೀಪಕ್ಕೆ ಇಕ್ಷುರಸಮುದ್ರ ಎರಡುಲಕ್ಷ ಐವತ್ತುಸಾವಿರ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ ಐದುಲಕ್ಷ ಯೋಜನಪ್ರಮಾಣು. (ಆ ದ್ವೀಪದ ಹೆಸರು ಶಾಲ್ಮಲಿದ್ವೀಪ) ಶಾಲ್ಮಲಿದ್ವೀಪಕ್ಕೆ ಮಧುಸಮುದ್ರ, ಐದುಲಕ್ಷ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ, ಹತ್ತುಲಕ್ಷ ಯೋಜನಪ್ರಮಾಣು. (ಆ ದ್ವೀಪಕ್ಕೆ ಹೆಸರು ಕುಶದ್ವೀಪ) ಕುಶದ್ವೀಪಕ್ಕೆ ಘೃತಸಮುದ್ರ ಹತ್ತುಲಕ್ಷ ಯೋಜನಪ್ರಮಾಣು. ಅಲ್ಲಿಂದತ್ತ ಭೂಮಿ, ಇಪ್ಪತ್ತೈದು ಲಕ್ಷ ಯೋಜನಪ್ರಮಾಣು. (ಆ ದ್ವೀಪದ ಹೆಸರು ಶಾಕದ್ವೀಪ) ಶಾಕದ್ವೀಪಕ್ಕೆ ದಧಿಸಮುದ್ರ, ನಾಲ್ವತ್ತುಲಕ್ಷ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ ನಾಲ್ವತ್ತುಲಕ್ಷ ಯೋಜನಪ್ರಮಾಣು. (ಆ ದ್ವೀಪದ ಹೆಸರು Põ್ಞ್ರಂಚದ್ವೀಪ) Põ್ಞ್ರಂಚದ್ವೀಪಕ್ಕೆ ಕ್ಷೀರಸಮುದ್ರ, ನಾಲ್ವತ್ತುಲಕ್ಷ ಯೋಜನಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ, ಎಂಬತ್ತುಲಕ್ಷ ಯೋಜನಪ್ರಮಾಣು. (ಆ ದ್ವೀಪದ ಹೆಸರು ಪುಷ್ಕರದ್ವೀಪ) ಪುಷ್ಕರದ್ವೀಪಕ್ಕೆ ಸ್ವಾದೋದಕಸಮುದ್ರ ಎಂಬತ್ತುಲಕ್ಷ ಯೋಜನಪ್ರಮಾಣು, ಅಲ್ಲಿಂದತ್ತತ್ತ ಲೋಕಾಲೋಕ ಪರ್ವತಾಕಾರವಾಗಿಪ್ಪುದು. ಇಂತೀ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಪ್ರಮಾಣವೊಂದಾಗಿ ಮೇಳೈಸಿದಡೆ ಮೂರುಕೋಟಿಯುಂ ಹದಿನೇಳುಲಕ್ಷದೈವತ್ತುಸಹಸ್ರ ಯೋಜನ ಪರಿಮಾಣಿನ ಕಟ್ಟಳೆಯಾಯಿತ್ತು. ಮತ್ತಲ್ಲಿಂದ ಭೂಮಂಡಲ ಉಂಟೆರಿ ಎಂದೊಡೆ, ಉಂಟು: ನಾನೂರುಕೋಟಿಯೋಜನ ಹೇಮೋರ್ವಿ. ಅಲ್ಲಿಂದತ್ತ ಭೂಮಂಡಲ ಉಂಟೆರಿ ಎಂದೊಡೆ ಉಂಟು: ಹತ್ತುಕೋಟಿ ಇಪ್ಪತ್ತುಲಕ್ಷ ಯೋಜನಪ್ರಮಾಣು, ಹೇಮದ ಬೆಟ್ಟ. ಮತ್ತಲ್ಲಿಂದತ್ತಲೂ ಭೂಮಂಡಲ ಉಂಟೆರಿ ಎಂದಡೆ, ಉಂಟು: ಎಂಬತ್ತೈದುಕೋಟಿ ಮೂವತ್ತೈದುಲಕ್ಷದ ಅರುವತ್ತೈದುಸಾವಿರ ಯೋಜನ ಪರಿಮಾಣ ವಳಯದಲ್ಲಿಅಂಧಕಾರವಾಗಿ, ಸೂರ್ಯಚಂದ್ರರ ಬೆಳಗಿಲ್ಲ. ಇಂತಿವನೆಲ್ಲವನೊಂದಾಗಿ ಮೇಳೈಸಿದಡೆ ಐನೂರುಕೋಟಿ ಯೋಜನ ಪರಿಪ್ರಮಾಣು ಕಟ್ಟಳೆಯಾಗಿತ್ತು. ಆ ಮೇರುವಿನ ಒಂದು ದಿಕ್ಕಿನ ಪ್ರಮಾಣು:ಆ ಮೇರುವಿನ ಪ್ರದಕ್ಷಿಣವಾಗಿ ಎಂಟು ದಳದಲ್ಲಿಎಂಟು ಪಂಚಶತಕೋಟಿ [ಯೋಜನ] ವಿಸ್ತೀರ್ಣವಾಯಿತ್ತು. ಇದನು ದಿವಸದೊಳಗೆ ಸೂರ್ಯ ತಿರುಗುವನು, ರಾತ್ರಿಯೊಳಗೆ ಚಂದ್ರ ತಿರುಗುವನು, ಇಪ್ಪತ್ತೇಳು ನಕ್ಷತ್ರ, ಧ್ರುವಮಂಡಲ, ಸಪ್ತಋಷಿಯರು, ರಾಹುಕೇತು, ನವಗ್ರಹ- ಇಂತಿವರೆಲ್ಲರು ಆ ಮೇರುಮಂದಿರದ ಹೊಸಪ್ರದಕ್ಷಿಣವಂ ದಿವಾರಾತ್ರಿಯಲ್ಲಿ ತಿರುಗಿ ಬಹರು. ಇವರೆಲ್ಲರ ಪ್ರಮಾಣವನು ಮಹಕ್ಕೆ ಮಹವಾಗಿಪ್ಪ ಶರಣಸ್ಥಲದವರು ಬಲ್ಲರು. ಪ್ರಭುದೇವರು ಸಿದ್ಧರಾದೇವರು ಸಾಮವೇದಿಗಳು, ಆದಿಲಿಂಗ ಅನಾದಿಶರಣ ಪೂರ್ವಾಚಾರಿ ಸಂಗನಬಸವಣ್ಣನು ಕಟ್ಟಿದ ಕಟ್ಟಳೆಯೊಳಗೆ ಜ್ಯೋತಿಜ್ರ್ಞಾನದವರು. (ಇಂತೀ) ಕಾಲ ಜ್ಯೋತಿಷ ಗ್ರಹಣ ಸಂಕ್ರಮಣ ತಿಥಿ ವಾರ ನಕ್ಷತ್ರ ಯೋಗ ಕರಣ ಸಂವತ್ಸರ ಇವೆಲ್ಲವು ಕೂಡಲಚೆನ್ನಸಂಗನಲ್ಲಿ ಬಸವಣ್ಣ ಕಟ್ಟಿದ ಕಟ್ಟಳೆ.
--------------
ಚನ್ನಬಸವಣ್ಣ
ಚಂದ್ರ ತಾರಾ ಮಂಡಲಕ್ಕೆ ಒಂದೆರಡು ಯೋಜನಪ್ರಮಾಣು ಹರಿವ ಕಂಗಳು, ಒಂದು ಸಾಸಿವೆರಜ ತನ್ನ ತಾಗದು. ಛಂದಸ್ಸು ನಿಘಂಟು ವ್ಯಾಕರಣ ಅದ್ವೈತ ವೇದ ಶಾಸ್ತ್ರ ಪುರಾಣವನೋದಿಕೊಂಡು ಮುಂದಣವರಿಗೆ ಹೇಳುವರಲ್ಲದೆ, ತನ್ನೊಳಗಣ ಶುದ್ಧಿಯ ತಾನರಿಯದೆ ಅನ್ಯರಿಗೆ ಉಪದೇಶವ ಹೇಳುವ ಬಿನುಗುಜಾತಿಗಳ ನುಡಿಯ, ಕೇಳಲಾಗದೆಂದ, ಕಲಿದೇವರದೇವಯ್ಯ
--------------
ಮಡಿವಾಳ ಮಾಚಿದೇವ
-->