ಅಥವಾ

ಒಟ್ಟು 88 ಕಡೆಗಳಲ್ಲಿ , 1 ವಚನಕಾರರು , 88 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆಂಬ ವಿಧಾಂತನು ಕಾಯವೆಂಬ ಕಣೆಯ ನೆಟ್ಟು, ನಾನಾ ಬಹುವಿಷಯಂಗಳೆಂಬ ಸುತ್ತ ನೇಣ ಕಟ್ಟಿ, ನೋಡುವ ಕರಣಂಗಳು ಮೆಚ್ಚುವಂತೆ ಕಾಮದ ಕತ್ತಿಯ ತಪ್ಪಿ, ಕ್ರೋಧದ ಇಟ್ಟಿಯ ತಪ್ಪಿ, ಮೋಹದ ಕಠಾರಿಯ ತಪ್ಪಿ, ಮೆಟ್ಟಿದ ಮಿಳಿಗೆ ತಪ್ಪದೆ ಲೆಂಗಿಸಿ, ಸುತ್ತಣ ಕೈದ ತಪ್ಪಿಸಿ, ಚಿತ್ತ ಅವಧಾನವೆಂದು ಹಾಯ್ದುಳಿದು, ಮನವೆಂಬ ವಿಧಾಂತನಾಡಿ, ಗೆದ್ದ ಜಗಲೋಲ ಡೊಂಬರ. ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದ ಬಹುವಿಷಯ ಹಿಂಗಿದ ಕೂಟ.
--------------
ಸಗರದ ಬೊಮ್ಮಣ್ಣ
ಹೊಯಿದಡೆ ಅಂಗದ ಮೇಲಣ ನೋವ, ಮನವರಿವಂತೆ, ಬಾಹ್ಯ ಉಪಚರಣೆಯ ಪೂಜೆ, ನಿನಗೆ ಹೊರಗಾದುದುಂಟೆ ? ಆ ತೆರನನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಒಳಗೂ ತಾನೆ, ಹೊರಗೂ ತಾನೆ.
--------------
ಸಗರದ ಬೊಮ್ಮಣ್ಣ
ರೂಪಿನ ದರ್ಪಣವ ಹಿಡಿದು, ತನ್ನಯ ರೂಪ ನೋಡಿದಲ್ಲಿ, ನಿಹಿತದ ಇರವಾಯಿತ್ತು. ಆ ರೂಪ ಕಂಡ ನಿರೂಪಿನ ದೃಷ್ಟಿ, ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ. ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ. ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ. ಪಡಿಬ್ಥಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ ಉಭಯ ಅಂಗವು ನೀನೆ, ಸಗರದ ಬೊಮ್ಮನೊಡೆಯ ತನುಮನ [ಸಂಗ]ಮೇಶ್ವರಲಿಂಗದಲ್ಲಿ ಲೇಪವಾದ ಶರಣಂಗೆ.
--------------
ಸಗರದ ಬೊಮ್ಮಣ್ಣ
ಆಗರದಲ್ಲಿ ಅಡಕೆ ಸಣ್ಣಾದಾಗ ತೋಟದ ಎಲೆ ಉದುರಿತ್ತು. ಉದುರುವುದಕ್ಕೆ ಮೊದಲೆ ಸುಣ್ಣವ ಸುಡುವವ ಸತ್ತ. ಇವರ ಮೂವರ ಹಂಗಿಗತನ ಬಿಟ್ಟಿತ್ತು, ಬಾಯ ಹಂಬಲಿಲ್ಲದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಮೂರರ ಹಂಗ ಬಿಟ್ಟ ಕಾರಣ.
--------------
ಸಗರದ ಬೊಮ್ಮಣ್ಣ
ಕಾಯದ ಕಾನನದಲ್ಲಿ ಭಾವದ ನವಿಲು ನಲಿದಾಡುತ್ತಿರೆ, ಒಂದು ಹಾವಿನ ಮರಿ ಬಂದು ಹಾಯಿತ್ತು. ನವಿಲಂಜಿ ಹೋಗುತ್ತಿರಲಾಗಿ, ಹಾವಿನ ಮರಿಯ ನವಿಲಗರಿ ನುಂಗಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಚೋದ್ಯವಾದ ಕಾರಣ.
--------------
ಸಗರದ ಬೊಮ್ಮಣ್ಣ
ಮಾಡುವ ಮಾಟದವರೆಲ್ಲರೂ ಆರೈಕೆಗೊಂಬವರಿಲ್ಲದಿರೆ, ಕೋಡಗ ಸತ್ತ ಜೋಗಿಯಂತಾದರು. ಆಗಮ ಹೇಳುವ ಅಣ್ಣಗಳೆಲ್ಲರೂ ಕೊಡುವರಿಲ್ಲದಿರೆ, ಹಾವ ಹಿಡಿದ ಕೋಡಗದಂತಾದರು. ನಾನಿನ್ನಾರ ಕೇಳುವೆ, ಇನ್ನಾರಿಗೆ ಹೇಳುವೆ. ನಾನಂಜುವೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ವಿಷ ಕೊಲುವಲ್ಲಿ, ಹಾವೇನ ಮಾಡುವುದು ? ಉಂಬ ಅಶನ ನಂಜಾಗಿಹಲ್ಲಿ, ಇಕ್ಕಿದವಳಿಗೆ ಅಂಜಿಕೆಯುಂಟೆ ? ತನ್ನ ಇಂದ್ರಿಯ ತನ್ನ ತಿಂಬಲ್ಲಿ, ವಸ್ತುವಿನ ಮೇಲೆ ಹಂಗ ಹಾಕುವ ಭಂಡರಿಗೆ ಇಲ್ಲಾಯೆಂದೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು.
--------------
ಸಗರದ ಬೊಮ್ಮಣ್ಣ
ಧ್ಯಾನ ಧಾರಣ ಸಮಾದ್ಥಿಯೆಂಬೀ ಮೂರು, ಕರ್ಮಕಾಂಡ. ಚಿಚ್ಛಕ್ತಿ ಚಿದ್ಘನ ಸುಶಕ್ತಿ ಚಿದಾದಿತ್ಯಸಂಪದ ತ್ರಿವಿಧಭೇದ, ಜ್ಞಾನಕಾಂಡ. ಇಂತೀ ಭಾವ, ನಿಜವ ನೆಮ್ಮಿ ಕುರುಹುದೋರದೆ, ಭಾವ ನಿರ್ಭಾವವಾಗಿ ನಿಂದುದು ಪ್ರಾಣಲಿಂಗಸಂಬಂಧ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ತನು ನಷ್ಟವಾದಲ್ಲಿ, ಉಸುರಿಗೆ ಒಡಲಿಲ್ಲ. ಮನ ನಷ್ಟವಾದಲ್ಲಿ, ಅರಿವಿಂಗೆ ತೆರಪಿಲ್ಲ. ಅರಿವು ನಷ್ಟವಾದಲ್ಲಿ, ಉಭಯವ ಭೇದಿಸುವದಕ್ಕೆ ಅಪ್ರಮಾಣು. ರೂಪು ರುಚಿ ದೃಷ್ಟವಾಗಬೇಕು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ಬಚ್ಚಣೆಯ ಬೊಂಬೆ ನೀರಾಗಲಾಗಿ, ನಿಶ್ಚಯಿಸಿಕೊಳ್ಳಬಲ್ಲದೆ ? ಉಚ್ಚೆಯ ಬಚ್ಚಲ, ಕೊಚ್ಚೆಯ ಠಾವು, ಪೂಜಿಸುವ ನಿಶ್ಚಯರಿಗೆ, ಮರೆಮಾಡುವ ಮೆಚ್ಚುನುಂಗಿಗೇಕೆ ನಿಶ್ಚಯದ ಅರಿವು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ಗುರಿ ಒಂದಕ್ಕೆ ಧನು ಮೂರು, ಸರ ಹದಿನಾರು. ಒಂದೆ ಬಿಡುಮುಡಿಯಲ್ಲಿ ಎಸಲಿಕ್ಕೆ, ಗುರಿತಪ್ಪಿ ಎಚ್ಚವನಂಗ ಬಟ್ಟಬಯಲಾಯಿತ್ತು, ಅದು ತಪ್ಪಿಹೋದ ಕಾರಣ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವೆ ಗುರಿ, ಅರಿವ ಮನ ಸರವಾದ ಕಾರಣ.
--------------
ಸಗರದ ಬೊಮ್ಮಣ್ಣ
ಕಾಲಾಂಧರ ಸಂಹಾರಕ್ಕೆ ಮೊದಲೇ ಲೀಲೆ. ಉಮಾಪತಿಗೆ ಮೊದಲೆ ನಾ ನೀನೆಂಬುದಕ್ಕೆ ನೀ ಕುರುಹಾಗಿ. ನಾನರಿವುದಕ್ಕೆ ಮೊದಲೆ ನಿನ್ನಿರವಾವುದು ಹೇಳು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ಹಾರುವ ಹಕ್ಕಿಯ ತಲೆಯ, ಕುಳಿತಿದ ಗೂಗೆ ನುಂಗಿತ್ತು, ಕುಳಿತಿದ ಗೂಗೆಯ ಕಣ್ಣ, ಕಾಗೆಯ ಮರಿ ಕುಡುಕಿತ್ತು. ಕಾಗೆಯ ಮರಿಯ, ಕೋಗಿಲ ಕಂಡು, ಅದ ಬೇಡಾ ಎಂದಡೆ, ಗಿಳಿ ಹಾಗಹುದೆಂದು ಹಾರಿ ಹೋಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನು ಘಟಪಂಜರವನೊಲ್ಲದೆ.
--------------
ಸಗರದ ಬೊಮ್ಮಣ್ಣ
ಪಾರದ್ವಾರವ ಮಾಡಬಂದವ ಅಬೆಯ ಗಂಡಗೆ ಕೂಪನೆ ? ಅವಳು ತನ್ನ ಪತಿಗೆ ಓಪಳೆ ? ಈ ಉಭಯದ ಮಾರ್ಗ ಅರಿವ ಅರಿವಿಂಗೆ, ಹೇಸಿ ತಿಂಬ ಕರಣಕ್ಕೆ ಒಡಗೂಡಿದ ಸ್ನೇಹವುಂಟೆ ? ಇದನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವನರಿವುದಕ್ಕೆ.
--------------
ಸಗರದ ಬೊಮ್ಮಣ್ಣ
ಸ್ಥಿತಿ ಹರಿಯದಾದಡೆ, ಹರಹರಿಸುವಲ್ಲಿ ಪರಿಹರಿಸಿಕೊಂಡುದಿಲ್ಲ. ಲಯಕ್ಕೆ ರುದ್ರನಾದಡೆ, ತನ್ನೊಲುಮೆಯ ಸತಿಯ, ಲಯವ ಮಾಡಿದುದಿಲ್ಲ. ಇದನಿನ್ನಾರಿಗೆ ಹೇಳುವೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?
--------------
ಸಗರದ ಬೊಮ್ಮಣ್ಣ
ಇನ್ನಷ್ಟು ... -->