ಅಥವಾ

ಒಟ್ಟು 54 ಕಡೆಗಳಲ್ಲಿ , ವಚನಕಾರ ಚನ್ನಬಸವಣ್ಣ , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ: ಜಾತಿ ಘನವೊ ಗುರುದೀಕ್ಷೆ ಘನವೊ ? ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ ಗುರುದೀಕ್ಷೆ ಪಡೆದು, ಗುರುಕರಜಾತರಾಗಿ ಜಾತಕವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ ? ಜಾತಿವಿಡಿದು ಕಳೆಯಿತ್ತೆ ಜಾತಿತಮವು ? ಅಜಾತಂಗೆ ಆವುದು ಕುಲಳ ಆವ ಕುಲವಾದಡೇನು ದೇವನೊಲಿದಾತನೆ ಕುಲಜ. ಅದೆಂತೆಂದಡೆ; ದೀಯತೇ ಜಾÕನಸಂಬಂಧಃ ಕ್ಷೀಯತೇ ಚ ಮಲತ್ರಯಂ ದೀಯತೇ ಕ್ಷೀಯತೇ ಯೇನ ಸಾ ದೀಕ್ಷೇತಿ ನಿಗದ್ಯತೇ ಎಂಬುದನರಿದು, ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು ಅವನೊಡಗೂಡಿಕೊಂಡು ನಡೆದು ಜಾತಿ ಎಂಜಲುಗಳ್ಳರಾಗಿ ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ ಹಂದಿ-ನಾಯಂತೆ ಒಡಲ ಹೊರೆವ ದರುಶನಜಂಗುಳಿಗಳು ಜಂಗಮಪಥಕ್ಕೆ ಸಲ್ಲರಾಗಿ. ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ, ಜಂಗಮವಿಲ್ಲ ಜಂಗಮಪ್ರಸಾದವಿಲ್ಲ. ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗ? ಸ್ವಯ-ಚರ-ಪರವೆಂದಾರಾಧಿಸಿ ಪ್ರಸಾದವ ಕೊಳಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಗುರುವಿನಲ್ಲಿ ಗುಣವನರಸುವರೆ ? ಲಿಂಗದಲ್ಲಿ ಲಕ್ಷಣವನರಸುವರೆ ? ಜಂಗಮದಲ್ಲಿ ಜಾತಿಯನರಸುವರೆ ? ಅರಸಿದರೆ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಸಾಧಕದೆಸೆಯಲ್ಲಿ ಕುಲವನರಸಬಹುದಲ್ಲದೆ, ಸಿದ್ಧದೆಸೆಯಲ್ಲಿ ಅರಸಲಹುದೆ ? ಹಲವು ಜಾತಿಯ ಕಟ್ಟಿಗೆಯ ಸುಟ್ಟಲ್ಲಿ ಅಗ್ನಿಯೊಂದಲ್ಲದೆ ಅಲ್ಲಿ ಕಟ್ಟಿಗೆಗಳ ಕುರುಹು ಕಾಂಬುದೆ ? `ಶಿವಭಕ್ತಸಮಾವೇಶೇ ನ ಜಾತಿಪರಿಕಲ್ಪನಾ ಇಂಧನೇಷ್ವಗ್ನಿದಗ್ಧೇಷು ಕೋ ವಾ ಭೇದಃ ಪ್ರಕೀತ್ರ್ಯತೇ ' ಎಂದುದಾಗಿ, ಶಿವಜ್ಞಾನಸಿದ್ಧರಾದ ಶಿವಭಕ್ತರಲ್ಲಿ ಪೂರ್ವಜಾತಿಯನರಸುವ ಅರೆಮರುಳರನೇನೆಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಬ್ರಾಹ್ಮಣ ಭಕ್ತನಾದರೇನಯ್ಯಾ ? ಸೂತಕಪಾತಕಂಗಳ ಬಿಡ. ಕ್ಷತ್ರಿಯ ಭಕ್ತನಾದರೇನಯ್ಯಾ ? ಕ್ರೋಧವ ಬಿಡ. ವೈಶ್ಯ ಭಕ್ತನಾದರೇನಯ್ಯಾ ? ಕಪಟವ ಬಿಡ. ಶೂದ್ರ ಭಕ್ತನಾದರೇನಯ್ಯಾ ? ಸ್ವಜಾತಿಯೆಂಬುದ ಬಿಡ. ಇಂತೀ ಜಾತಿಡಂಭಕರ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ಕೃತಯುಗದೊಳು ಸುವರ್ಣದ ಲಿಂಗವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಂದೆ ತಾಯಿ ಯಾರು ? ದ್ವಾಪರದೊಳು ತಾಮ್ರದ ಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಲಿ ಕಿಲುಬುಹೊಯಿತ್ತು. ಕಲಿಯುಗದೊಳು ಕಲ್ಲ ಲಿಂಗವಾದಡೆ ಇಕ್ಕಿದ ಓಗರವನುಣ್ಣದೇಕೋ ? ಹಿಂದೊಮ್ಮೆ ನಾಲ್ಕು ಯುಗದೊಳು ಅಳಿದುಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರೆವುತ್ತಿಹೆ ? ಸಾಕ್ಷಿ : ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಇದು ಕಾರಣ ಕೂಡಲಚೆನ್ನಸಂಗಯ್ಯ ತಪ್ಪದೆ ಸ್ಥಾವರ ದೇವರೆ ಜಂಗಮ ದೇವರ ಪ್ರಸಾದಕ್ಕೆ ಯೋಗ್ಯವಾಯಿತ್ತು. ಅನಂತ ಯುಗಂಗಳೊಳಗೆ ಜಂಗಮ ದೇವರೆ ಪ್ರಾಣವಾದರಾಗಿ
--------------
ಚನ್ನಬಸವಣ್ಣ
ಶ್ರೀಗುರುಕರುಣಕಟಾಕ್ಷದಲ್ಲಿ ಉತ್ಪತ್ಯವಾದ ಅಜಾತಂಗೆ ಜಾತಿಸೂತಕ, ಜನನಸೂತಕ, ಪ್ರೇತಸೂತಕ, ರಜಸ್ಸೂತಕವುಂಟೆಂಬವಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲವಯ್ಯಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಎಂಟುಲಕ್ಷದ ಮೇಲೆ ಐನೂರು ದೇವರಿಗೆ ಮಾಡಿದ ಬೋನವ ಒಬ್ಬ ಜಂಗಮನಾರೋಗಣೆಯ ಮಾಡುವನಲ್ಲದೆ, ಹದಿನಾರು ಲಕ್ಷದ ಮೇಲೆ ಐನೂರು ದೇವರು ಕೂಡಿಕೊಂಡು ಒಬ್ಬ ಜಂಗಮಕ್ಕೆ ಮಾಡಿದ ಬೋನವನಾರೋಗಿಸಲರಿಯವು. ಅಂತಪ್ಪ ದೇವರಿಗಿಂತಲೂ ಜಂಗಮವೆ ಘನ. ಕೃತಯುಗದಲ್ಲಿ ಸುವರ್ಣದ ಲಿಂಗಾವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಾಯಿ-ತಂದೆ ಯಾರು ? ದ್ವಾಪರದಲ್ಲಿ ತಾಮ್ರದಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಯ ಕಿಲುಬು ಹೋಯಿತ್ತು. ಕಲಿಯುಗದಲ್ಲಿ ಕಲ್ಲ ದೇವರಾದರೆ ಇಕ್ಕಿದೋಗರವನುಣ್ಣದೇಕೊ ? ಹಿಂದೊಮ್ಮೆ ನಾಲ್ಕುಯುಗದಲ್ಲಿ ಅಳಿದು ಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರತಹೆ ? ``ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ _ಇದು ಕಾರಣ ಕೂಡಲಚೆನ್ನಸಂಗಯ್ಯಾ, ತಪ್ಪದೆ ನಾಲ್ಕುಯುಗದಲ್ಲಿ ಜಂಗಮವೆ ಪ್ರಾಣಲಿಂಗವಾದ ಕಾರಣ ಸ್ಥಾವರವೆ ಜಂಗಮಪ್ರಸಾದಕ್ಕೆ ಯೋಗ್ಯವಾಯಿತ್ತು.
--------------
ಚನ್ನಬಸವಣ್ಣ
ಬಸವೇಶ್ವರದೇವರು ತೃಣಪುರುಷನ ಮಾಡಿ `ಮೀಮಾಂಸಕಂಗೆ ಉತ್ತರವ ಕೊಡು ಹೋಗು' ಎನಲು ಆ ತೃಣಪುರುಷನು ಮಹಾಪ್ರಸಾದವೆಂದು ಕೈಕೊಂಡು, ಮೀಮಾಂಸಕಂಗೆ ಉತ್ತರವ ಕೊಟ್ಟು ಶಿವವಿರಹಿತವಾದ ಕಾಳ್ಪುರಾಣವೆಲ್ಲವ ಬಯಲು ಮಾಡಿ ನುಡಿಯಲು ಆತಂಗೆ ಶಿವಜ್ಞಾನ ತಲೆದೋರಿ, ಆ ಬಸವೇಶಂಗೆ ವಂದನಂಗೈದು ಉಪದೇಶವ ಮಾಡಬೇಕೆನಲು, ಆತಂಗೆ ವೀರಶೈವದೀಕ್ಷೆಯ ಮಾಡಿ ಷಟ್‍ಸ್ಥಲಮಾರ್ಗ ಕ್ರೀಯ ನಿರೂಪಿಸಿ ತಿಳುಹಲು `ಎಲೆ ಬಸವೇಶ್ವರಾ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟುಕೊಳಬಹುದೆರಿಱ ಎಂದು ಕೇಳಲು, ಕೇಳೈ ಮೀಮಾಂಸಕಾ, ಪೂರ್ವದಲ್ಲಿ ಪರಮೇಶ್ವರನು ಸಮಸ್ತ ದೇವತೆಗಳು ಒಡ್ಡೋಲಗದಲ್ಲಿರಲು ಸೂತ್ರಿಕನೆಂಬ ಶೈವಾಚಾರ್ಯನು `` ಎಲೆ ಪರಮೇಶ್ವರಾ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಡಬಹುದೆರಿ' ಎನಲು `ಎಲೆ ಸೂತ್ರಿಕನೆ ಕೇಳು ನಾನೆಂದಡೆಯೂ ಜಂಗಮವೆಂದಡೆಯೂ ಬೇರಿಲ್ಲ ಅದು ಕಾರಣ ಜಂಗಮವೆ ಅಧಿಕ. ನೀನಾ ಜಂಗಮಲಿಂಗದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಡಬಾರದೆಂದು ನಿಂದಿಸಿ ನುಡಿದ ವಾಗ್ದೋಷಕ್ಕೆ ಮತ್ರ್ಯಕ್ಕೆ ಹೋಗಿ ಹೊಲೆಯನ ಮನೆಯ ಸೂಕರನ ಬಸುರಲ್ಲಿ ಹುಟ್ಟಿ ಹದಿನೆಂಟು ಜಾತಿಯ ಅಶುದ್ಧವನು ನಾಲಗೆಯಲಿ ಭುಂಜಿಸಿ ನರಕಜೀವಿಯಾಗಿರುಱಱ ಎಂದುದೆ ಸಾಕ್ಷಿ. ಇದನರಿದು ಮತ್ತೆ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಲಾಗದೆಂಬ ಪಂಚಮಹಾಪಾತಕರ ಮಾತ ಕೇಳಲಾಗದು. ಅದೆಂತೆಂದಡೆ:ವೀರಾಗಮದಲ್ಲಿ, ಜಂಗಮಾನಾಮಹಂ ಪ್ರಾಣೋ ಮಮ ಪ್ರಾಣೋ ಹಿ ಜಂಗಮಃ ಜಂಗಮೇನ ತ್ವಹಂ ಪೂಜ್ಯೋ ಮಯಾ ಪೂಜ್ಯೋ ಹಿ ಜಂಗಮಃ ಪರಸ್ಪರಮಭೇದತ್ವಾಜ್ಜಂಗಮಸ್ಯ ಮಮಾಪಿ ಚ ಪಾದೋದಕಪ್ರಸಾದಾಭ್ಯಾಂ ವಿನಾ ತೃಪ್ತಿರ್ನ ಜಾಯತೇ ಇಂತೆಂಬ ಶಿವನ ವಾಕ್ಯವನರಿದು, ಜಂಗಮದ ಪಾದತೀರ್ಥವ ಲಿಂಗಕ್ಕೆ ಮಜ್ಜನಕ್ಕೆರೆದು ಪ್ರಸಾದವ ಲಿಂಗಕ್ಕೆ ನೈವೇದ್ಯವ ಸಮರ್ಪಿಸಿ ಭೋಗಿಸುವಾತನೆ ಸದ್ಭಕ್ತ, ಆತನೆ ಮಾಹೇಶ್ವರ, ಆತನೆ ಪ್ರಸಾದಿ, ಆತನೆ ಪ್ರಾಣಲಿಂಗಿ, ಆತನೆ ಶರಣ, ಆತನೆ ಐಕ್ಯನು. ಇಂತಪ್ಪ ಷಟ್‍ಸ್ಥಲಬ್ರಹ್ಮಿಗೆ ನಮೋ ನಮೋ ಎಂಬೆ. ಇಂತಲ್ಲದೆ ಜಂಗಮದ ಪಾದತೀರ್ಥಪ್ರಸಾದರಹಿತನಾಗಿ ಆವನಾನೊಬ್ಬನು ತನ್ನ ಇಷ್ಟಲಿಂಗಕ್ಕೆ ಅರ್ಷವಿಧಾರ್ಚನೆ ಷೋಡಶೋಪಚಾರಕ್ರೀಯಿಂದ ಪೂಜೆಯ ಮಾಡುವಲ್ಲಿ ಅವನು ಶುದ್ಧಶೈವನು, ಅವನಿಗೆ ಮುಕ್ತಿಯಿಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ: ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ. ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ. ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ. ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ. ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ_ ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಶಿಲೆಯೆಂಬ ಪೂರ್ವಾಶ್ರಯವ ಕಳೆದು ಲಿಂಗವೆಂದ, ನರನೆಂಬ ಪೂರ್ವಾಶ್ರಯವ ಕಳೆದು ಗುರುವೆಂದ, ಜಾತಿಸೂತಕದ ಪೂರ್ವಾಶ್ರಯವ ಕಳೆದು ಜಂಗಮವೆಂದ, ಎಂಜಲೆಂಬ ಪೂರ್ವಾಶ್ರಯವ ಕಳೆದು ಪ್ರಸಾದವೆಂದ. ಇಂತೀ ಚತುರ್ವಿಧ ಪೂರ್ವಾಶ್ರಯವ ಕಳೆಯಬಲ್ಲನಾಗಿ ಕೂಡಲಚೆನ್ನಸಂಗಯ್ಯನಲ್ಲಿ ಶರಣ ಸ್ವತಂತ್ರ,
--------------
ಚನ್ನಬಸವಣ್ಣ
ಹಲವು ದೈವಂಗಳ ಪೂಜೆಯ ಮಾಡುವ ಗೊರವನ ಗುರುದೇವನೆಂದು ನುಡಿದು ಕರೆವ ವಿವೇಕವಿಹೀನ ದುರಾಚಾರಿಯ ಮುಖವ ನೋಡಲಾಗದು. ಸರ್ವದೇವರಿಗೆ ಒಡೆಯನಾದಂತಹ ಸದಾಶಿವನೆ ಗುರುದೇವನು. ಶಿವಲಿಂಗಕ್ಕೆ ತಮ್ಮ ಪಾದತೀರ್ಥ ಪ್ರಸಾದವನೀವ ವೀರಮಾಹೇಶ್ವರ ಜಂಗಮದೇವರು, ತನಗೆ ಗುರುದೇವ ಮಹಾದೇವನು. ಅದೆಂತೆಂದಡೆ: ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೈವಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂತೆಂದುದಾಗಿ, ಗುರುದೇವನೆಂಬ ಶಬ್ದವು ಉಳಿದವರಿಗೆ ಸಲ್ಲದು. ``ಏಕೋ ದೇವೋ ನ ದ್ವಿತೀಯಃ'' ಎಂದು ಶುದ್ಧಶೈವನಿಷ್ಠಾಪರನಾಗಿ ಶಿವಮಹೇಶ್ವರನ ಎರಡನೆಯ ಶಿವನೆಂದು ಭಾವಿಸಿ ಅವನೊಕ್ಕು ಮಿಕ್ಕುದ ಶೇಷಪ್ರಸಾದವೆಂದುಕೊಂಡು ಅನ್ಯಾಯವನರಿಯದ ಶುದ್ಧಪತಿವ್ರತೆಯಂತೆ, ಶಿವಲಿಂಗೈಕ್ಯಭಾವದಿ ಅರಿವಾಗಿ ನಚ್ಚಿ ಮಚ್ಚಿ ಮನವು ಲಿಂಗದಲ್ಲಿ ನೆಲೆಗೊಂಡು ನಿಂದ ಸುಜ್ಞಾನಭರಿತನ ಅಯ್ಯನೆಂಬುದು. ಮಿಕ್ಕಿನ ಶೈವನೆಂಬುದು, ಮಿಕ್ಕಿನ ಕೀಳುದೈವದ ಪೂಜೆಯ ಮಾಡುವ[ನ] ಗೊರವನೆಂಬುದು. ಅದೆಂತೆಂದಡೆ: ತೊತ್ತು ತೊಂಡರ ಕಾಲ ತೊಳೆದು ಸೇವೆಯ ಮಾಡಿ ಬದುಕುವನ, ಪಡಿದೊತ್ತಿನ ಮಕ್ಕಳೆಂದು ಎಂಬರಲ್ಲದೆ, ರಾಜಕುಮಾರನೆಂದೆನ್ನರು. ಆ ಪ್ರಕಾರದಲ್ಲಿ ವಿಪ್ರ, ಭ್ರಷ್ಟ, ನಂಟ, ಶ್ವಪಚ ಮಾನವರ ವೇಷ ತಾಳಿ ಹಲಬರ ಹೊಗಳಿ ಕೀಳು ದೈವದ ಕಾಲು ತೊಳೆದು ಎಂಜಲ ತಿಂಬ ಭ್ರಷ್ಟಜಾತಿಯ ಗುರುದೇವನೆಂದು ಹೇಸಿಕೆಯಿಲ್ಲದೆ ನುಡಿದು ಕರೆವ ದುರಾಚಾರಿಗಳಿಗೆ ಶಿವಭಕ್ತಿ ಸಲ್ಲದು, ನರಕ ತಪ್ಪದು, ಅಂಜದೆ ಕರೆಸಿಕೊಂಬ ಅಜ್ಞಾನಿ ಗೊರವಂಗೆ ಮೊದಲೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಉದಯ ಮಧ್ಯಾಹ್ನ ಅಸ್ತಮಾನವೆಂಬ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬರು. ಉದಯವಾವುದು ? ಮಧ್ಯಾಹ್ನವಾವುದು ? ಅಸ್ತಮಾನವಾವುದು ? ಬಲ್ಲವರು ನೀವು ಹೇಳಿರೆ. ಕಾಯದ ಉದಯವೊ ? ಕಾಯದ ಮಧ್ಯಾಹ್ನವೊ ? ಕಾಯದ ಅಸ್ತಮಾನವೊ ? ಕಾಯದ ಉದಯ ಬಲ್ಲಾತ ಕರ್ಮಿ, ಕಾಯದ ಮಧ್ಯಾಹ್ನವ ಬಲ್ಲತ ಪ್ರಪಂಚಿ, ಕಾಯದ ಅಸ್ತಮಾನವ ಬಲ್ಲಾತ ವಿರಕ್ತ. ಜೀವದ ಉದಯವೊ ? ಜೀವದ ಮಧ್ಯಾಹ್ನವೊ ? ಜೀವದ ಅಸ್ತಮಾನವೊ ? ಜೀವದ ಉದಯವ ಬಲ್ಲಾತ ಜ್ಞಾನಿ, ಜೀವದ ಮಧ್ಯಾಹ್ನವ ಬಲ್ಲಾತ ಜಾತಿಸ್ಮರ, ಜೀವದ ಅಸ್ತಮಾನ ಬಲ್ಲಾತ ಜೀವನ್ಮುಕ್ತ ಲಿಂಗದ ಉದಯ, ಲಿಂಗದ ಮಧ್ಯಾಹ್ನ, ಲಿಂಗದ ಅಸ್ತಮಾನ- ಇಂತೀ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬಲ್ಲಡೆ ಕೂಡಲಚೆನ್ನಸಂಗಮದೇವರಲ್ಲಿ ಆತನು ಅನವರತ ಲಿಂಗಾರ್ಚನಾಪರನು.
--------------
ಚನ್ನಬಸವಣ್ಣ
ಊಧ್ರ್ವಬಿಂದು ನಾದ ಮುಟ್ಟಲಿಕೆ ಜಂಗಮ, ಮಧ್ಯಬಿಂದು ಊಧ್ರ್ವ ಮುಟ್ಟಲಿಕೆ ಸ್ಥಾವರ, ಸ್ಥಾವರಬಿಂದು ಸ್ಥಾವರವಾದ ಊಧ್ರ್ವ ಮುಟ್ಟಲಿಕೆ ಭಕ್ತ, (ಭಕ್ತಿ?) ಬಿಂದು ನಾದ ಮುಟ್ಟಲಿಕೆ ಭವಿ. ಇಂತು ಜಾತಿಸೂತಕ ಪ್ರೇತಸೂತಕವನಳಿದಾತಂಗೆ, ಕಾಲವಿಲ್ಲ ಕರ್ಮವಿಲ್ಲ, ಭವಿಗೆ ಕೊಡಲಿಲ್ಲ ಭಕ್ತಂಗೆ ಕೊಡಲಿಲ್ಲ. ಇದು ಕಾರಣ, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣಂಗಲ್ಲದೆ ಉಳಿದವರಿಗಪೂರ್ವ.
--------------
ಚನ್ನಬಸವಣ್ಣ
ಹಸಿವು ತೃಷೆ ವಿಷಯವೆಂಬ ಮರಂಗಳನೆ ಕಂಡು, ಪರಿಣಾಮವೆಂಬ ಕೊಡಲಿಯಲ್ಲಿ ತತ್ತರಿದರಿದು, ಕಾಮ ಕ್ರೋಧ ಲೋಭ ಮೋಹ ಮದಮತ್ಸರಂಗಳ ತರಿದೊಟ್ಟಿದನೊಂದೆಡೆಯಲ್ಲಿ. ಪಂಚೇಂದ್ರಿಯ, ಷಡುವರ್ಗ, ಸಪ್ತಧಾತು, ಅಷ್ಟಮದವೆಂಬ ಬಳ್ಳಿಯ ಸೀಳಿ, ಏಳು ಕಟ್ಟಿನ ಮೋಳಿಗೆಯನೆ ಹೊತ್ತು ನಡೆದನಯ್ಯಾ. ಆಶೆ ಆಮಿಷ ತಾಮಸವೆಂಬ ತುರಗವನೇರಿ ಆತುರದ ತುರವನೆ ಕಳೆದನಯ್ಯಾ_ಈ ಮಹಾಮಹಿಮಂಗೆ, ಜಗದ ಜತ್ತಿಗೆಯ, ಹಾದರಗಿತ್ತಿಯ, ಹದಿನೆಂಟು ಜಾತಿಯ ಮನೆಯಲ್ಲಿ ತೊತ್ತಾಗಿಹ ಶಿವದ್ರೋಹಿಯ ಲಿಂಗವಂತರ ಮನೆಯಲ್ಲಿ ಹೊಗಿಸುವರೆ ? ಎಲೆ ಲಿಂಗತಂದೆ, ಜಡವಿಡಿದು ಕೆಟ್ಟೆನಯ್ಯಾ, ಭಕ್ತಿಯ ಕುಲವನರಿಯದೆ. ಎಲೆ ಲಿಂಗದಾಜ್ಞಾಧಾರಕಾ, ಎಲೆ ಲಿಂಗಸನುಮತಾ, ಎಲೆ ಲಿಂಗೈಕಪ್ರತಿಗ್ರಾಹಕಾ. ಕೂಡಲಚೆನ್ನಸಂಗಯ್ಯನಲ್ಲಿ, ಮೋಳಿಗೆಯ ಮಾರಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಜಯಜಯತು.
--------------
ಚನ್ನಬಸವಣ್ಣ
ತನ್ನ ತಾನರಿದ ಶಿವಯೋಗಿಯ ಪರಿಯೆಂತೆಂದಡೆ: ದೇಹಿ ತಾನಲ್ಲ, ಜಾತಿಜಾತಕಂಗಳು ತಾನಲ್ಲ, ಪ್ರಾಣ ತಾನಲ್ಲ, ದಶವಾಯುಗಳು ತಾನಲ್ಲ, ಇಂದ್ರಿಯಂಗಳು ತಾನಲ್ಲ, ಗುಣತ್ರಯಂಗಳು ತಾನಲ್ಲ ಅಂತಃಕರಣ ಚತುಷ್ಟಯಂಗಳು ತಾನಲ್ಲವೆಂದರಿದು ವಿವರಿಸಿ ಕಳೆದು, ತನ್ನ ನಿಜಸ್ವರೂಪ ತಾನೇ ನೋಡಿ ಕಂಡು; ಜೀವಾತ್ಮ ಅಂತರಾತ್ಮ ಪರಮಾತ್ಮ ಮತ್ತಂ ಭೂತಾತ್ಮ ಶುದ್ಧಾತ್ಮ ನಿರ್ಮಲಾತ್ಮ ಸತ್ಯಾತ್ಮ ಮಹಾತ್ಮವೆಂಬ ಅಷ್ಟ ಆತ್ಮೇಶ್ವರರು ಏಕಾರ್ಥವೆಂದರಿದು, ಅಲ್ಲಿಯೆ ತಲ್ಲೀಯವಾಗಿಹುದೀಗ ಯೋಗ ಕಾಣಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಇನ್ನಷ್ಟು ... -->