ಅಥವಾ
(0) (1) (0) (0) (0) (0) (0) (0) (3) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದು ಮುಟ್ಟಿ ಪಾವನವ ಮಾಡಿ ಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ! ಆ ಲಿಂಗ ಬಂದು ಸೋಂಕಲೊಡನೆ ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ! ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ, ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ, ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ! ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿ ಚತುರ್ವಿಧಸಾರಾಯಸ್ಥಲವ ಸಂಬಂಧವ ಮಾಡಿದ ಸಂಗನ ಬಸವಣ್ಣನ ಕರುಣದಿಂದ ಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ! ಅಭಿನವ ಮಲ್ಲಿಕಾರ್ಜುನಾ.
--------------
ಡೋಹರ ಕಕ್ಕಯ್ಯ
ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು. ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು. ಎನಗೆ ಜಂಗಮಸ್ಥಲವ ತೋರಿದಾತ ಸಿದ್ಧರಾಮಯ್ಯನು. ಎನಗೆ ಪ್ರಸಾದಿಸ್ಥಲವ ತೋರಿದಾತ ಬಿಬ್ಬಬಾಚಯ್ಯನು. ಎನಗೆ ಪ್ರಾಣಲಿಂಗಿಸ್ಥಲವ ತೋರಿದಾತ ಚಂದಯ್ಯನು. ಎನಗೆ ಶರಣಸ್ಥಲವ ತೋರಿದಾತ ಸೊಡ್ಡಳ ಬಾಚರಸನು. ಎನಗೆ ಐಕ್ಯಸ್ಥಲವ ತೋರಿದಾತ ಅಜಗಣ್ಣನು. ಎನಗೆ ನಿಜಸ್ಥಲವ ತೋರಿದಾತ ಪ್ರಭುದೇವರು. ಇಂತೀ ಸ್ಥಲಗಳ ಕಂಡು ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ! ಅಭಿನವ ಮಲ್ಲಿಕಾರ್ಜುನಾ.
--------------
ಡೋಹರ ಕಕ್ಕಯ್ಯ
ಎನ್ನ ಕಷ್ಟಕುಲದ ಸೂತಕ ನಿಮ್ಮ ಹಸ್ತ ಮುಟ್ಟಿದಲ್ಲಿ ಹೋಯಿತ್ತು! ಶುಕ್ಲಶೋಣಿತದಿಂದಲಾದ ಸೂತಕ ನಿಮ್ಮ ಮುಟ್ಟಲೊಡನೆ ಬಯಲಾಯಿತ್ತು! ತಟ್ಟಿದ ಮುಟ್ಟಿದ ಸುಖಂಗಳನೆಲ್ಲವ ಲಿಂಗಮುಖಕ್ಕೆ ಅರ್ಪಿಸಿದೆನಾಗಿ ಎನ್ನ ಪಂಚೇಂದ್ರಿಯಂಗಳು ಬಯಲಾದುವು! ಎನ್ನ ಅಂತರಂಗದಲ್ಲಿ ಜ್ಞಾನಜ್ಯೋತಿಯೆಡೆಗೊಂಡುದಾಗಿ ಒಳಗೂ ಬಯಲಾಯಿತ್ತು! ಸಂಸಾರ ಸಂಗದ ಅವಸ್ಥೆಯ ಮೀರಿದ ಕ್ರೀಯಲ್ಲಿ ತರಹರವಾಯಿತ್ತಾಗಿ ಬಹಿರಂಗ ಬಯಲಾಯಿತ್ತು! ಅಭಿನವ ಮಲ್ಲಿಕಾರ್ಜುನಾ, ನಿಮ್ಮ ಮುಟ್ಟಿದ ಕಾರಣ ನಾನೂ ಬಯಲಾದೆ!
--------------
ಡೋಹರ ಕಕ್ಕಯ್ಯ