ಅಥವಾ
(0) (0) (0) (0) (0) (0) (0) (0) (1) (0) (0) (0) (0) (0) ಅಂ (0) ಅಃ (0) (2) (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (1) (1) (0) (0) (0) (0) (0) (0) (0) (0) (1) (2) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿವಯೋಗಿ ಶಿವಯೋಗಿ ಎಂದ್ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ನಿಮ್ಮ ಅಂಗಕುಳ ಒಳಗೊಂಡು ಕಾಮಿನಿಯರ ಬೆಳೆದ ಹೊಲನ ಹೊಕ್ಕು ಕೂಡಿಸಿ ತಿಂಬುವ ಪಶುವಿನ ನಾಲ್ಕು ಕಾಲನು ಮುರಿದು, ಘಟ್ಟವೆಂಬ ಗವಿಯೊಳಗೆ ಮನದ ದಿಟ್ಟವೆಂಬ ಗೂಟಕ್ಕೆ ಕಟ್ಟಿ, ತನುವೆಂಬ ಗಿರಿಗಹ್ವರದೊಳಗೆ ಬೆಳೆದಿದ್ದ ನಾನಾ ಪರಿಪರಿಯ ಗಿಡ, ಕಸಾದಿಗಳೆಲ್ಲವ ಭಾನುವೊಲು ಮಂತ್ರದಿಂದ್ಹಲ್ಲ ಕಿತ್ತು ಸುಟ್ಟು ಬೂದಿಯನು ಮಾಡಿ ಸರ್ವಕ್ಕೆಲ್ಲ ಪಣಮಾಡಿಕೊಂಡು ಇರಬಲ್ಲರೆ, ಹಲವು ಕಡೆಗೆ ಹರಿದಾಡುವಂತೆ ಮನವನೆಲ್ಲ ನೆಲೆಗೊಳಿಸಿ ನಿಲಿಸಿದಂತಾ ಮಹಿಮನ ಶಿವಯೋಗೀಶ್ವರನೆಂದೆನ್ನಬಹುದು ಕಾಣಿರೊ ! ನಿಮ್ಮ ಅಂಗ ಗುರುಕೊಟ್ಟ ಅರಿವಿನ ಅರಿವೆಯನು ಬಿಟ್ಟು, ಮರವಿನ ಮನೆಯೊಳಗೆ ಮೂರ್ಛೆಗೈದರೆ, ನಿಮ್ಮನ್ನು ಹರಕೊಂಡು ತಿಂದೆನೆಂದು ಬರುವ ಕಾಳೋರಗನೆಂಬ ಸರ್ಪನ ಉತ್ತರದ ಬಾಯ ಮುಚ್ಚಿ ನವದ್ವಾರಂಗಳನ್ನೆಲ್ಲ ಹೊಲಿದು, ಒಂಬತ್ತು ಬಾಗಿಲಿಗೆ ಬೀಗಮುದ್ರೆಯ ಮಾಡಿ, ತುಂಬಿದಾ ಕುಂಭದೊಳಗಿನ ಉದಕದಂತೆ ಇರಬಲ್ಲರೆ ಅಂತಹವನಿಗಾ ಕಾಲನ ಬಾಧೆಯ ಗೆಲಿದಂಥ ಮಹಿಮನೆಂದೆನ್ನಬಹುದು ಕಾಣಿರೊ! ನಿಮ್ಮಂಗ ಆಧಾರವೆಂಬ ಗದ್ದಿಗೆಯ ಮೇಲೆ ಪದ್ಮಾಸನವೆಂಬ ಪವನಗ್ರಂಥಿಯ ಹೊಲಿದು, ನಿರ್ಮಳ ಸುಚಿತ್ತದಲ್ಲಿ ಮೂರ್ತವನು ಮಾಡಿಕೊಂಡು, ಪೂರ್ವದಿಕ್ಕಿನಲ್ಲಿ ಮುಖವನಿಕ್ಕಿ ಪಂಚಮಕ್ಕೆ ದೃಷ್ಟಿಯನ್ನಿಟ್ಟು ನೋಡಲಾಗಿ, ಅಡರೇರಿ ಬರುವ ಸಿಡಿಲು ಮಿಂಚಿನ ಅವಸ್ಥೆ ಶೌರ್ಯವನು ಕಂಡು, ಪಶ್ಚಿಮಕ್ಕೆ ಮುಖವ ತಿರುವಿ ಪೂರ್ವಕ್ಕೆ ದೃಷ್ಟಿಯನ್ನಿಟ್ಟು ನೋಡಲಾಗಿ ಭಾನುವಿನ ಸಮೀಪದಲ್ಲಿ ಇದ್ದ ಬಯಲಿಗೆ ಬಯಲು ಆಕಾರಗೆಟ್ಟ ಪುರುಷನ ನಿಲವು ನಿಧಾನವ ನೋಡಿಕೊಂಡು ಸರ್ವಮುನಿಜನಂಗಳಿಗೆಲ್ಲ ಅರ್ತಿಯನು ಮಾಡಿ ಹೇಳಿ ನಿರ್ಮಾಯವಾಗಿ ಹೋಗಬಲ್ಲರೆ ಆತನಿಗಾ ಮರಣಕ್ಕೆ ವಿಧಿಹಿತನಾದಂಥ ಮಹಾಮಹೇಶ್ವರನೆಂದೆನ್ನಬಹುದು ಕಾಣಿರೊ ! ಇಂತು ಇದನರಿಯದೆ ಯೋಗಿ ಶ್ರವಣ ಸನ್ಯಾಸಿ ಕಾಳಾಮುಖಿ ಪಾಶುಪತಿಗಳೆಂಬ ಹೆಸರಿಟ್ಟುಕೊಂಡು ದೇಶವ ತಿರುಗುವ ಶಿವಯೋಗಿಗಳೆಂಬುವ ಮೋಸ ಡಂಬಕರ ಕುಟಿಲಗಳ ಕಂಡು ನಗುತ್ತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಶಿವಯೋಗಿ ಶಿವಯೋಗಿಯೆಂದ್ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ನಿಮ್ಮ ಧ್ಯಾನಮೂಲವೆಂಬ ಮನೆಯ ಪೂರ್ವಸ್ಥಾನ ಬಾಗಿಲೊಳಗೆ ಬರುವ ಭಾನುವಿನ ಬಟ್ಟೆಯ ಬೆಳಕಿನಲ್ಲಿ ನಿಂದು, ಶ್ರೀರಾಮ ರಾಮನೆಂಬುವ ಸ್ಮರಣೆಯನು ಮಾಡಬಲ್ಲರೆ ಆತನಿಗೆ ತನ್ನ ಕಾಯಪುರವೆಂಬ ಪಟ್ಟಣದೊಳಗೆ ಮೇಲುದುರ್ಗದೊಳಗಿರ್ದು ಅರಸಿನ ದಾಳಿಯನು ಮಾಡಿ ಕೊಳುಕೊಂಡು ಹೋದನೆಂದು ಬರುವ ಕಾಲನ ಪರಿವಾರವ ಕಂಡು, ಮೇಲುದುರ್ಗದೊಳಗಿರ್ದ ಅರಸಿನ ವಲಯಂ ಬಿಟ್ಟು, ಪಟ್ಟಣವ ಹಾಳಕೆಡವಿ ಗೋಳಿಟ್ಟ ಅರಸನಂತೆ, ಬಯಲಿಗೆ ಬಯಲು ಆಕಾರದಲ್ಲಿ ನಿಂದು, ಬರುತ್ತಲಾ ಪರಿವಾರವನ್ನು ಕಂಡು, ಕಾದಿ ಜಗಳವನು ಕೊಟ್ಟು ಹಿಂದಕ್ಕೆ ನೂಕಿ, ಪರಾಲಯದೊಳಗಿರ್ದ ಅರಸನನ್ನು ಮೇಲುದುರ್ಗಕ್ಕೆ ತಂದು ಇಂಬಿಟ್ಟು ಹಾಳ ಪಟ್ಟಣವನ್ನು ತುಂಬಿಸಿ ಮೇಳೈಸಿ ಮನೆಯ ಬಂಧು ದಾಯಾದರೆಲ್ಲರು ಆತಂಗೆ ಕಾಲವಂಚನೆಗೆ ಗೆಲಿದಂಥ ಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ಇಂತು ಕಾಯದ ಕೀಲನೆ ಅರಿಯದೆ, ಕಾಲವಂಚನೆಗೆ ಒಳಗಾಗಿ, ನಾನು ಶಿವಯೋಗಿ ಶಿವಯೋಗಿಯೆಂದು ಹೆಸರಿಟ್ಟುಕೊಂಡು ಒಬ್ಬರಿಗೊಬ್ಬರು ಗುರೂಪದೇಶವ ಕೊಟ್ಟು, ಉರಿಯ ಸೋಂಕಿದ ಕರ್ಪುರದ ಧೂಪದಂತೆ ಇರಬೇಕೆಂದು, ಹೆಂಡಿರ ಬಿಟ್ಟು ಮಕ್ಕಳ ಬಿಟ್ಟು ಮಂಡೆಯನು ಬೋಳಿಸಿಕೊಂಡು ಮನದ ನಿಲುಗಡೆಯನರಿಯದ ಗೂಬೆಗಳು ಕಾವಿಯ ಅರಿವೆಯನು ಹೊದ್ದುಕೊಂಡು, ದೇವರೊಳಗೆ ದೇವರೆಂದು ಪೂಜೆಗೊಂಡು, ಮಠ ಮನೆಯಲ್ಲಿ ಬಸಲ ಪರ್ಯಾದಿಯಲ್ಲಿ ನಿಂದು, ಬೋನದಾಸೆಗೆ ಜ್ಞಾನಬೋಧೆಯನು ಹೇಳುವ ಗುರುವಿನ ಬ್ರಹ್ಮಕಲ್ಪನೆಯ ಮನ ತುಂಬಿ ಬಿರಿಕಿಕ್ಕಿ ಹೋಗುವಾಗ, ಕಾಲನವರು ತಮ್ಮ ಪತ್ರವನು ನೋಡಿಕೊಂಡು ಬಂದು ಹೋಗಲಿತ್ತ ಕಲಿತ ವಿದ್ಯೆ ಕೈಕಾಲನು ಹಿಡಿದು ಎಳಕೊಂಡು ಹೋಗುವಾಗ ಗಟ್ಟಿನೆಲಕ್ಕೆ ಬಿದ್ದು ಕೆಟ್ಟೆ ಕೆಟ್ಟೆ ಸತ್ತೆ ಸತ್ತೆ ಎಂದು ಹಲ್ಲು ಗಂಟಲ್ಹರಕೊಂಡು ಹೋಗುವಂಥ ಶಿವಯೋಗಿಗಳೆಂಬ ಕುಟಿಲರ ಕಂಡು ನಗುತ್ತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ