ಅಥವಾ
(22) (10) (4) (0) (10) (2) (0) (0) (5) (1) (1) (6) (1) (0) ಅಂ (7) ಅಃ (7) (38) (0) (21) (0) (0) (3) (0) (5) (0) (0) (0) (0) (0) (0) (0) (13) (0) (6) (2) (9) (13) (0) (17) (12) (29) (5) (3) (0) (4) (23) (13) (0) (15) (15) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬಯ್ಚಿಟ್ಟ ಬಯ್ಕೆಯ ಒಡೆಯ ಕೊಂಡುಹೋದಲ್ಲಿ ನೆಲ ಉಮ್ಮಳಿಸಿದರುಂಟೆ ಅಯ್ಯಾ? ತನ್ನ ವಿಶ್ವಾಸಕ್ಕೆ ಗುರುವೆಂದು ಕಂಡಡೆ, ನಿನ್ನಯ ಗುರುತನದ ಹರವರಿಯೆಂತಯ್ಯಾ? ಅಮೃತವ ಹೊಯಿದಿದ್ದ ಕುಡಿಕೆಯಂತಾಗಬೇಡ ಗುರುತನವಳಿದು ಸ್ವಯಗುರುವಾಗು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಬ್ರಹ್ಮ ಸೋರೆಯಾಗಿ, ವಿಷ್ಣು ದಂಡವಾಗಿ, ಸಕಲದೇವತಾಕುಲ ದಾರವಾಗಿ, ಶ್ರುತಿನಾದ ವಸ್ತುವಾಗಿ ತೋರುತ್ತಿರೆ, ತನ್ನ ಲೀಲೆಯಿಂದ, ಜಗಕ್ರೀಡಾಭಾವದಿಂದ ಒಂದಕ್ಕೊಂದು ಸೇರಿಸಿ, ಉತ್ತಮ ಕನಿಷ್ಠ ಮಧ್ಯಮವೆಂಬ ತ್ರಿವಿಧಮೂರ್ತಿಯಾಗಿ, ಕಲ್ಪಿಸಿದ ಜಗ ಹಾಹೆಯಿಂದ ಎಂಬುದನರಿಯದೆ, ಮಲಕ್ಕೂ ನಿರ್ಮಲಕ್ಕೂ ಸರಿಯೆನಬಹುದೆ? ವಾದಕ್ಕೆ ಈ ತೆರ ಅರಿದಡೆ ಆ ತೆರ. ಸದಾಶಿವಮೂರ್ತಿಲಿಂಗವು ಅತ್ಯತಿಷ್ಠದ್ದಶಾಂಗುಲವು.
--------------
ಅರಿವಿನ ಮಾರಿತಂದೆ
ಬ್ರಹ್ಮಂಗೆ ಸರಸ್ವತಿಯಾಗಿ ಕಾಡಿತ್ತು ಮಾಯೆ. ವಿಷ್ಣುವಿಂಗೆ ಲಕ್ಷ್ಮಿಯಾಗಿ ಕಾಡಿತ್ತು ಮಾಯೆ. ರುದ್ರಂಗೆ ಉಮಾದೇವಿಯಾಗಿ ಕಾಡಿತ್ತು ಮಾಯೆ. ಎನಗೆ ನಿಮ್ಮನರಿವ ಬಯಕೆ ಭವಮಾಯೆಯಾಗಿ ಕಾಡುತ್ತದೆ. ನೀನಾನುಳ್ಳನ್ನಕ್ಕ ಉಭಯವು ಮಾಯೆಯಾಗಿದೆ, ಸದಾಶಿವಮೂರ್ತಿಲಿಂಗವು ನಾ ನೀನೆಂಬುದೆ ಮಾಯೆ.
--------------
ಅರಿವಿನ ಮಾರಿತಂದೆ
ಬಂಟ ಒಡೆಯನೊಡನೆ ಉಂಡಲ್ಲಿ ದಾಸತನವಳಿಯಿತ್ತು. ನೀ ಮರೆದು ಮಲಗಿದ್ದಲ್ಲಿ, ಸ್ವಪ್ನವ ಕಾಬಲ್ಲಿ, ಲಿಂಗದ ಕೂಟವೆಲ್ಲಿದ್ದಿತ್ತು? ನೀ ಸ್ತ್ರೀಸಂಭೋಗವ ಮಾಡುವಲ್ಲಿ ಲಿಂಗ ನಿನ್ನಲ್ಲಿ ಸಹಕೂಟದಿ ಇದ್ದಠಾವಾವುದು? ಸಾಕು, ಅರ್ತಿಕಾರರ ಹೊತ್ತುಹೋಕನ ಅರ್ಪಿತ! ಲಿಂಗ ಅಂಗದಿಂದ ಹಿಂಗಿದಾಗವೆ ಸ್ವಪ್ನದ ಮರವೆ, ಮುಟ್ಟದ ಅರ್ಪಿತ. ಇದು ನಿಶ್ಚಯವಲ್ಲ, ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಬೀಜ ಹುಟ್ಟುವ ತಿರುಳು ಒಳಗಿದ್ದಲ್ಲಿ, ಮೇರಳ ಸಿಪ್ಪೆ ಮುಚ್ಚಿಯಲ್ಲದೆ ಅಂಕುರದ ತಿರುಳಿಗೆ ಆದಿಯಿಲ್ಲ. ತಿರುಳು ಅಂಕುರ ನಾಸ್ತಿಯಾದಲ್ಲಿ ಸಿಪ್ಪೆ ಹುಟ್ಟುವುದಕ್ಕೆ ಉಭಯದ ತತ್ತಿಲ್ಲದಾಗದು. ಅಲ್ಲಾ ಎಂದಡೆ ಕ್ರೀವಂತರೊಪ್ಪರು, ಅಹುದೆಂದಡೆ ಅಮಲಿನ ಮಲಿನವಾಗದು. ದಗ್ಧವಾದ ಪಟ ಸಾಭ್ರಕ್ಕೊದಗದು. ಒಂದೆಂದು ಎರಡ ಕೂಡಿ ಸಂದನಳಿದಲ್ಲಿ ಲೆಕ್ಕ ನಿಂದಿತ್ತು. ಸದಾಶಿವಮೂರ್ತಿಲಿಂಗವೆಂದಲ್ಲಿ ಉಭಯನಾಮ ಲೀಯವಾಯಿತ್ತು.
--------------
ಅರಿವಿನ ಮಾರಿತಂದೆ
ಬಯ್ಚಿಟ್ಟ ಬಯ್ಕೆಯ ಒಡೆಯ ಬೇಡಿದಡೆ ಕೊಡದಿರ್ದಡೆ ಸ್ವಾಮಿದ್ರೋಹಿಕೆಯಲ್ಲವೆ? ಅಟ್ಟ ಅಡಿಗೆಯ ಪತಿಗಿಕ್ಕದ ಸತಿ ಉಂಡಡೆ ನೆಟ್ಟನೆ ಕಳ್ಳೆಯಲ್ಲವೆ? ಕೊಟ್ಟಾತ ಒಡವೆಯ ಬೇಡಿದಡೆ ಕಟ್ಟಿ ಹೋರುವ ಕಷ್ಟಜೀವಿಗೇಕೆ ತ್ರಿವಿಧಭಕ್ತಿ, ಸಜ್ಜನಯುಕ್ತಿ? ಇಂತೀ ಸಜ್ಜನಗಳ್ಳರ ಬಲ್ಲನಾಗಿ ಸದಾಶಿವಮೂರ್ತಿಲಿಂಗವು ಒಲ್ಲನು.
--------------
ಅರಿವಿನ ಮಾರಿತಂದೆ
ಬಾರದಿರು ಬ್ರಹ್ಮನ ಅಂಡದಲ್ಲಿ, ಬೆಳೆಯದಿರು ವಿಷ್ಣುವಿನ ಕುಕ್ಷಿಯಲ್ಲಿ, ಸಾಯದಿರು ರುದ್ರನ ಹೊಡೆಗಿಚ್ಚಿನಲ್ಲಿ. ಹುಟ್ಟಿದ ಅಂಡವನೊಡೆ, ಬೆಳೆದ ಕುಕ್ಷಿಯ ಕುಕ್ಕು, ಹೊಯ್ವ ಹೊಡೆಗಿಚ್ಚ ಕೆಡಿಸು. ಮೂರುಬಟ್ಟೆಯ ಮುದಿಡು, ಒಂದರಲ್ಲಿ ನಿಂದು ನೋಡು. ಆ ಒಂದರಲ್ಲಿ ಸಂದಿಲ್ಲದ ಅಂಗವೇ ನೀನಾಗು ಸದಾಶಿವಮೂರ್ತಿಲಿಂಗಕ್ಕೆ.
--------------
ಅರಿವಿನ ಮಾರಿತಂದೆ
ಬಿಟ್ಟು ಕಟ್ಟಿ ಅರ್ಪಿಸಲಾರದೆ ಗುಪ್ಪೆಯಾಗಿ ಸುರಿಯಿಕೊಂಡು, ಲಿಂಗದಿಚ್ಚೆಯನರಿಯದೆ ತನ್ನಂಗದ ಆರಜಕ್ಕಾಗಿ ಗಂಗಳ ತುಂಬಿ ಸುರಿಸಿಕೊಂಬ ಲೆಂಗಿಗಳನೊಲ್ಲ ಸದಾಶಿವಮೂರ್ತಿಲಿಂಗ.
--------------
ಅರಿವಿನ ಮಾರಿತಂದೆ
ಬೇರಿಗೆ ನೀರನೆರೆದಲ್ಲಿ ಆ ಗಿಡುವಿಗೆ ಕಡೆ ನಡು ಮೊದಲೆನ್ನದೆ ಸರ್ವಾಂಗವ ವೇಧಿಸಿ ಸಂಪನ್ನಿಕೆಯ ದೃಕ್ಕಿಂಗೆ ತೋರುವಂತೆ ಚಿತ್ತುವಿನ ಎರಕ ನಿಜತತ್ವದ ಕುರುಹಿನಲ್ಲಿ ಪರಿಪೂರ್ಣವಾಗಿ ಸಂಪದ ತೋರುತ್ತದೆ. ಕುರಿತ ಕುರುಹಿನ ಮರೆಯಲ್ಲಿ ಅರಿವು ನಿಂದು ಕುರುಹು ನಿಷ್ಪತ್ತಿಯಾಗುತ್ತದೆ ಎಂಬ ಸಂದೇಹ ನಿಂದಿತ್ತು. ಎಂಬುದನರಿತಾಗ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಬ್ರಹ್ಮಾಂಡದ ಧರೆಯ ಮೇಲೆ ಅರಿಬಿರಿದಿನ ಮಂತಣದ ಗಿರಿ ಹುಟ್ಟಿತ್ತು. ಆ ದುರ್ಗಕ್ಕೆ ಮೂವರು ದೊರೆಗಳು ಹುಟ್ಟಿದರು. ಒಬ್ಬ ನರಪತಿ, ಒಬ್ಬ ಸುರಪತಿ, ಒಬ್ಬ ಸಿರಿವುರಿಗೊಡೆಯ, ಮೂವರ ದುರ್ಗವೊಂದೆಯಾಗಿ ಸಂದೇಹಕ್ಕೆ ಈಡಾಗುತ್ತದೆ. ಸದಾಶಿವಮೂರ್ತಿಲಿಂಗ ಸಂಗವಾಗಿಯಲ್ಲದೆ ಆಗದು.
--------------
ಅರಿವಿನ ಮಾರಿತಂದೆ
ಬೀಜದ ನೆಲೆಯಲ್ಲಿ ಹಲವು ತೋರುವವೊಲು, ಮೂಡಿ ಮೊಳೆತಲ್ಲಿ ಉಲುಹಿಗೆ ಅಲರಾಯಿತ್ತು. ನಾನೆಂಬಲ್ಲಿ ನೀನಾದೆ, ನೀನಾನೆಂಬಲ್ಲಿ ಉಲುಹಾದೆಯಲ್ಲಾ! ಉಲುಹಿನ ನೆಲೆಯ ಕಡಿದು, ಗಲಭೆಯ ಗ್ರಾಮವ ಬಿಟ್ಟು, ನೆಲೆಯಾಗು ಮನದ ಕೊನೆಯಲ್ಲಿ. ಒಲವರ ಬೇಡ, ಸದಾಶಿವಮೂರ್ತಿಲಿಂಗವೆ.
--------------
ಅರಿವಿನ ಮಾರಿತಂದೆ
ಬಾಗಿಲಲ್ಲಿ ತಡೆವಾತನ ಮನೆಯ ಬಾಗಿಲ ಹೊಕ್ಕು ಉಂಡ ಜಂಗಮದ ಪಾದೋದಕ ಪ್ರಸಾದವೆಂದು ಕೊಂಡಾತಂಗೆ ಅಘೋರ ಪಾತಕವೆಂದೆ. ಅದೆಂತೆಂದಡೆ: ತಾ ಸರ್ವಸಂಗವನರಿತು ಭಕ್ತಿವಿರಕ್ತಿಯ ಕಂಡು ಇಂತೀ ಗುಣಂಗಳಲ್ಲಿ ಸನ್ನದ್ಧನಾಗಿ ಅರಿತು ಮತ್ತೆ ಉದರದ ಕಕ್ಕುಲಿತೆಗೆ ಸದನದ ಹೊಗಬಾರದು ಇಂತೀ ವಿವರ, ದರ್ಶನದ ಮರೆಯಲ್ಲಿ ಆಡುವ ಪರಮವಿರಕ್ತನ ಸ್ಥಲ. ಸದಾಶಿವಮೂರ್ತಿಲಿಂಗದಲ್ಲಿ ಆಗುಚೇಗೆಯನರಿಯಬೇಕು.
--------------
ಅರಿವಿನ ಮಾರಿತಂದೆ
ಬಯಲು ಬಯಲ ನೋಡಿ ಕಾಬುದಿನ್ನೇನು? ರೂಪ ರೂಪ ನೋಡಿ ಕಾಬುದಿನ್ನೇನು? ರೂಪ ಹಿಡಿಯಬಾರದು, ಬಯಲನರಿಯಬಾರದು. ಬಯಲು ರೂಪಿಂಗೆ ಹೊರಗು, ರೂಪು ಬಯಲಿಂಗೆ ಹೊರಗು. ಉಭಯವನರಿತಲ್ಲಿ ಸದಾಶಿವಮೂರ್ತಿಲಿಂಗಕ್ಕೆ ಒಳಗು.
--------------
ಅರಿವಿನ ಮಾರಿತಂದೆ
ಬಂದಿತ್ತು ಬಾರದೆಂಬ ಸಂದೇಹವನಳಿದು ನಿಂದುದು, ಲಿಂಗಕ್ಕೆ ಭರಿತಾರ್ಪಣ. ಶರಣರ ಮುಖದಿಂದ ಸಂದುದು, ಲಿಂಗಕ್ಕೆ ಭರಿತಾರ್ಪಣ. ತನ್ನಂಗಕ್ಕೆ ಕೊರತೆಯಾಗಿ ಶರಣರ ಪಂತಿಯಲ್ಲಿ ಸಮಗ್ರವಾಗಿ ಸಂದುದು, ಲಿಂಗಕ್ಕೆ ಭರಿತಾರ್ಪಣ, ಜಗಭರಿತನ ತೃಪ್ತಿ ಇಹಪರದ ಮುಕ್ತಿ, ಸದಾಶಿವಮೂರ್ತಿಲಿಂಗದ ಅರ್ಪಿತದ ಗೊತ್ತು.
--------------
ಅರಿವಿನ ಮಾರಿತಂದೆ
ಬ್ರಹ್ಮವನರಿತ ಮತ್ತೆ ಸುಮ್ಮನೆ ಇರಬೇಕು. ಬ್ರಹ್ಮಪ್ರಸಂಗವ ಮಾಡುವಲ್ಲಿ ಪರಬ್ರಹ್ಮಿಗಳಲ್ಲಿ ಪ್ರಸಂಗವ ಮಾಡಬೇಕು. ತನ್ನ ಅಗಮ್ಯವ [ಮೆ]ರೆಯಬೇಕೆಂದು ಬೀದಿಯ ಪಸರದಂತೆ, ಲಾಗನಾಡುವ ವಿಧಾತನಂತೆ ಆಗಬೇಡ. ಕಳ್ಳನ ಚೇಳೂರಿದಂತಿರು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಬೀಜವಿಲ್ಲದೆ ಬೆಳೆವುಂಟೆ, ಅಯ್ಯಾ ? ನಾದವಿಲ್ಲದೆ ಶಬ್ದವುಂಟೆ, ಅಯ್ಯಾ? ದೃಷ್ಟಿಯಿಲ್ಲ[ದೆ] ಕಳೆ ಉಂಟೆ, ಅಯ್ಯಾ ? ಅಂಗಸಹಿತವಾಗಿ ಸರ್ವಸಂಗವನರಿಯಬೇಕಲ್ಲದೆ, ನಿರಂಗ ಅಂಗದಲ್ಲಿ ಹೊಕ್ಕು ಸರ್ವಭೋಗಂಗಳ ಕಾಬುದಕ್ಕೆ ಇದೇ ದೃಷ್ಟ. ಬಂಗಾರದ ಒಡಲಿನಲ್ಲಿ ಬಣ್ಣ ನಿಂದು ಲೆಕ್ಕವಟ್ಟಂತೆ ಬಾಹಂತೆ, ಆತ್ಮನ ದೃಷ್ಟನ ಕಂಡು ಮತ್ತೆ ಆಧ್ಯಾತ್ಮವೆನಲೇಕೆ ? ಘಟದ ಮಧ್ಯದಲ್ಲಿ ನಿಂದು ನುಡಿವುದೆ ಕ್ರೀಯೆಂದೆ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಬೇರಿನ ಬಣ್ಣ ಇಂದುವಿನ ಕಳೆಕೊಂಡಂತಿರಬೇಕು. ಶುಭ್ರದ ಪಟ ಷಡುವರ್ಣಕ್ಕೆ ಬಂದಂತೆ, ಘಟದ ಸಂಗದಿಂದ ಸುವಸ್ತು ಇಂದ್ರಿಯಂಗಳಿಗೆ ಮುಖವಾಗಿ, ಅರ್ಪಿಸಿಕೊಂಬವ ನೀನಾದೆಯಲ್ಲಾ ಸದಾಶಿವಮೂರ್ತಿಲಿಂಗವೆ.
--------------
ಅರಿವಿನ ಮಾರಿತಂದೆ