ಅಥವಾ
(46) (22) (24) (4) (3) (0) (0) (0) (54) (2) (0) (10) (1) (0) ಅಂ (15) ಅಃ (15) (42) (1) (33) (7) (0) (8) (1) (17) (0) (0) (0) (0) (0) (0) (0) (33) (0) (7) (2) (46) (34) (1) (25) (14) (29) (1) (3) (0) (13) (13) (41) (1) (55) (26) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅನಂತಸಾಧಕಂಗಳ ಕಲಿತ ಆಯಗಾರನು, ಅಭ್ಯಾಸಿಗಳಿಗೆ ಸಾಧಕವ ಕಲಿಸುವನಲ್ಲದೆ ತಾ ಮರಳಿ ಅಭ್ಯಾಸವ ಮಾಡುವನೆ ಅಯ್ಯಾ ? ಅಖಂಡಪರಿಪೂರ್ಣಬ್ರಹ್ಮವನೊಡಗೂಡಿದ ಮಹಾಘನ ಪರಮ ಶಿವಶರಣನು, ಸತ್‍ಕ್ರಿಯವನಾಚರಿಸಿದಡೂ ಲೋಕೋಪಕಾರವಾಗಿ ಆಚರಿಸುವನಲ್ಲದೆ ಮರಳಿ ತಾನು ಫಲಪದದ ಮುಕ್ತಿಯ ಪಡೆವೆನೆಂದು ಆಚರಿಸುವನೆ ಅಯ್ಯಾ ? ಇದು ಕಾರಣ, ನಿಮ್ಮ ಶರಣನು ಎಷ್ಟು ಸತ್ಕ್ರಿಯವನಾಚರಿಸಿದಡು ಘೃತಸೋಂಕಿದ ರಸನೆಯಂತೆ, ಕಾಡಿಗೆ ಹತ್ತಿದ ಆಲಿಯಂತೆ, ಹುಡಿ ಹತ್ತದ ಗಾಳಿಯಂತೆ ನಿರ್ಲೆಪನಾಗಿರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಗ್ನಿಯ ಸಂಗದಿಂದೆ ಕಾನನ ಕೆಟ್ಟಂತೆ, ಜ್ಯೋತಿಯ ಸಂಗದಿಂದ ಕತ್ತಲೆ ಕೆಟ್ಟಂತೆ, ಪರುಷದ ಸಂಗದಿಂದ ಕಬ್ಬಿಣ ಕೆಟ್ಟಂತೆ, ಲಿಂಗಾನುಭಾವಿಗಳ ಸಂಗದಿಂದೆ ಎನ್ನ ಹುಟ್ಟು ಹೊಂದುಗಳು ನಷ್ಟವಾಗಿ ಕೆಟ್ಟುಹೋದುವು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಗದ ಗುಣವಳಿಯದೆ, ಪ್ರಾಣದ ಪ್ರಪಂಚು ಹಿಂಗದೆ, ಭಾವದ ಭ್ರಮೆಯುಡುಗದೆ, ಮನದ ಮಾಯವಡಗದೆ, ಆತ್ಮನ ಅಹಂಮಮತೆ ಕೆಡದೆ, ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ ಕಾಕುಮಾನವರನೇನೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಡಜ ಇಪ್ಪತ್ತೊಂದು ಲಕ್ಷ, ಪಿಂಡಜ ಇಪ್ಪತ್ತೊಂದು ಲಕ್ಷ, ಉದ್ಬಿಜ ಇಪ್ಪತ್ತೊಂದು ಲಕ್ಷ, ಜರಾಯುಜ ಇಪ್ಪತ್ತೊಂದು ಲಕ್ಷ, ಇಂತು ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೊಳಗೆ ಒಂದೊಂದು ಜನ್ಮದೊಳಗೆ ಸಹಸ್ರ ಸಹಸ್ರವೇಳೆ ಹುಟ್ಟಿಬಂದ ಅನೇಕ ದುಃಖವಂತಿರಲಿ. ಮುಂದೆ ಮನುಷ್ಯದೇಹವಿಡಿದು ಬಂದ ದುಃಖಮಂ ಪೇಳ್ವೆನದೆಂತೆನೆ : ತಂದೆಯ ವಿಕಾರದದೆಸೆಯಿಂದೆ ಬಂದು ಬಿಂದುರೂಪಾಗಿ, ತಾಯಿಯ ಬಸುರಲ್ಲಿ ನಿಂದು ಒಂಬತ್ತುತಿಂಗಳ ಪರಿಯಂತರ ಅವಯವಂಗಳು ಬಲಿದು ಪಿಂಡವರ್ಧನವಾಗಿ, ಕದ್ದ ಕಳ್ಳನ ಹೆಡಗೈಯಕಟ್ಟಿ ಸೆರೆಮನೆಯಲ್ಲಿ ಕುಳ್ಳಿರಿಸುವಂತೆ, ಗರ್ಭವೆಂಬ ಸೆರೆಮನೆಯಲ್ಲಿ ಶಿಶುವು ಮುಚ್ಚಿದ ಕಣ್ಣು, ಮುಗಿದ ಬಾಯಾಗಿ, ಕುಕ್ಕುಟಾಸನದಲ್ಲಿ ಕುಳ್ಳಿರ್ದು, ಕಡಿವ ಜಂತುಜಂಗುಳಿಯ ಬಾಧೆ, ಸುಡುವ ಜಠರಾಗ್ನಿಯ ಬಾಧೆ, ಎಡದಲ್ಲಿ ಮೂತ್ರದ ತಡಿಕೆಯ ಬಾಧೆ, ಬಲದಲ್ಲಿ ಅಮೇಧ್ಯದ ಹಡಿಕೆಯ ಬಾಧೆ, ಇಂತಿವು ಮೊದಲಾದನಂತಕೋಟಿ ಬಾಧೆಗಳಿಂದೆ ದಿನದಿನಕ್ಕೆ ದುಃಖಮಂಬಡುತಿರ್ದು, ಆ ಮೇಲೆ ಜಾತಿಸ್ಮರತ್ವ ಉದಯವಾಗಿ, ತನ್ನ ಹಿಂದಣ ಧರ್ಮಕರ್ಮಂಗಳ ಪುಣ್ಯಪಾಪಂಗಳ ಅರಹು ಮರಹುಗಳನಾರೈದು ನೋಡಿ, ಹಿಂದರಿಯದ ಪಾಪದ ದೆಸೆಯಿಂದೆ ಈ ಗರ್ಭನರಕಕ್ಕೆ ಬಂದೆ, ಇನ್ನು ಮುಂದೆ ತೆರನೇನೆಂದು ತನ್ನೊಳಗೆ ತಾನೆ ಚಿಂತಿಸಿ ಸರ್ವರಿಗೆ ಪರಮೇಶ್ವರನೇ ಕರ್ತನು, ಸರ್ವರ ಭವಪಾಶಂಗಳ ಛೇದಿಸುವಾತನು ಪರಮೇಶ್ವರನೆಂದರಿದು, ಮನದಲ್ಲಿ ನಿಶ್ಚೈಸಿಕೊಂಡು ಆ ಪರಮೇಶ್ವರಂಗೆ ಶಿವಧೋ ಶಿವಧೋ ಎಂದು ಮೊರೆಯಿಡುತ್ತ ಶಿವಧ್ಯಾನಮಂ ಮಾಳ್ಪ ಸಮಯದಲ್ಲಿ ಕೋಟಿಸಿಡಿಲು ಹೊಯ್ದಂತೆ ವಿಷ್ಣುಪ್ರಸೂತಿಯೆಂಬ ಗಾಳಿ ಬೀಸಲು, ಅದಕಂಡು ಥರಥರನೆ ನಡುಗಿ ಧ್ಯಾನಪಲ್ಲಟವಾಗಿ ದಿಗ್‍ಭ್ರಮಣೆಗೊಂಡು ಊಧ್ರ್ವಮುಖವಾಗಿ ಕುಳಿತಿರ್ದ ಶಿಶುವು ಗಿರ್ರನೆ ತಿರುಗಿ ತಲೆಕೆಳಗಾಗಿ ಕರ್ತಾರನ ಕಂಬೆಚ್ಚಿನಲ್ಲಿ ಚಿನ್ನದ ಸಲಾಕೆ ತೆಗವಂತೆ, ಬಚ್ಚಲಹುಳುವಿನಂದದಿ ಯೋನಿಯೆಂಬ ಸೂಕ್ಷ್ಮದ್ವಾರದಿಂದೆ ಪೊರಮಟ್ಟು ಹುಟ್ಟಿದಲ್ಲಿ ಕೋಟಿಬಾಧೆಗಳಿಂದ ನೊಂದು ಹವ್ವನೆ ಹಾರಿ ಕಡುದುಃಖಮಂಬಟ್ಟು ಪಿಂದಣ ಜಾತಿಸ್ಮರತ್ವ ಕೆಟ್ಟು, ಮತಿ ಮಸುಳಿಸಿ, ತನ್ನ ಮಲಮೂತ್ರಂಗಳಲ್ಲಿ ತಾ ಹೊರಳಾಡಿ ಬಾಲಲೀಲೆಯ ಸುಖದುಃಖಂಗಳನನುಭವಿಸಿ, ಆ ಬಾಲಲೀಲೆಯು ಹಿಂದುಳಿದ ಮೇಲೆ ಯೌವನದ ವಯಸ್ಸೊದಗಿದಲ್ಲಿ, ಕಾಮದಲ್ಲಿ ಕರಗಿ ಕ್ರೋಧದಲ್ಲಿ ಕೊರಗಿ ಮದಮತ್ಸರಂಗಳಲ್ಲಿ ಮುಂದುಗೆಟ್ಟು ನಾನಾ ವ್ಯಾಪಾರವನಂಗೀಕರಿಸಿ ಬಂದ ಯೋನಿಯೆಂದರಿಯದೆ, ಉಂಡ ಮೊಲೆಯೆಂದರಿಯದೆ, ಕಾಮವಿಕಾರ ತಲೆಗೇರಿ ವಿಷಯಾತುರನಾಗಿ, ಈಳಿಗಾರನ ದೆಸೆಯಿಂದ ಈಚಲಮರ ನಿಸ್ಸಾರವಾದಂತೆ, ಸ್ತ್ರೀಯರ ಸಂಗದಿಂದೆ ದೇಹದೊಳಗಣ ಊರ್ಧ್ವಬಿಂದು ಜಾರಿ ಜಾರಿ ಇಳಿದು ಸೋರಿ ಸೋರಿ ಹೋಗಿ ದೇಹವು ನಿಸ್ಸಾರವಾಗಿ, ಯೌವನದ ಬಲಗೆಟ್ಟು ಮುಪ್ಪಾವರಿಸಿ ಅಚೇತನಗೊಂಡು ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾತನಾಗಿ, ಆದ್ಥಿ ವ್ಯಾದ್ಥಿ ವಿಪತ್ತು ರೋಗ ರುಜೆಗಳಿಂದೆ ಬಹು ದುಃಖಬಟ್ಟು, ಎದೆ ಗೂಡುಗಟ್ಟಿ, ಬೆನ್ನು ಬಾಗಿ, ಕಣ್ಣು ಒಳನಟ್ಟು, ಶರೀರ ಎಳತಾಟಗೊಂಡು, ಕಾಲಮೇಲೆ ಕೈಯನೂರಿ ಕೋಲವಿಡಿದು ಏಳುತ್ತ, ನಾನಾ ತೆರದ ದುಃಖಧಾವತಿಯಿಂದೆ ಆತ್ಮ ಕೆಟ್ಟು ನಷ್ಟವಾಗಿ ಹೋಯಿತ್ತು ನೋಡಾ. ಇದ ಕಂಡು ನಾನಂಜಿ ಮರಳಿ ಜನ್ಮಕ್ಕೆ ಬರಲಾರದೆ ನಿಮ್ಮ ಮೊರೆಹೊಕ್ಕೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಡಾಭರಣರು ಘನವೆಂಬೆನೆ ? ಅಂಡಾಭರಣರು ಘನವಲ್ಲ. ರುಂಡಾಭರಣರು ಘನವೆಂಬೆನೆ ? ರುಂಡಾಭರಣರು ಘನವಲ್ಲ. ಗಂಗಾಧರರು ಘನವೆಂಬೆನೆ ? ಗಂಗಾಧರರು ಘನವಲ್ಲ. ಗೌರೀವಲ್ಲಭರು ಘನವೆಂಬೆನೆ ? ಗೌರೀವಲ್ಲಭರು ಘನವಲ್ಲ. ಚಂದ್ರಶೇಖರರು ಘನವೆಂಬೆನೆ ? ಚಂದ್ರಶೇಖರರು ಘನವಲ್ಲ. ನಂದಿವಾಹನರು ಘನವೆಂಬೆನೆ ? ನಂದಿವಾಹನರು ಘನವಲ್ಲ. ತ್ರಿಯಂಬಕರು ಘನವೆಂಬೆನೆ ? ತ್ರಿಯಂಬಕರು ಘನವಲ್ಲ. ತ್ರಿಪುರವೈರಿ ಘನವೆಂಬೆನೆ ? ತ್ರಿಪುರವೈರಿ ಘನವಲ್ಲ. ಪಂಚಮುಖರು ಘನವೆಂಬೆನೆ ? ಪಂಚಮುಖರು ಘನವಲ್ಲ. ಫಣಿಕುಂಡಲರು ಘನವೆಂಬೆನೆ ? ಫಣಿಕುಂಡಲರು ಘನವಲ್ಲ. ಶೂಲಪಾಣಿಗಳು ಘನವೆಂಬೆನೆ ? ಶೂಲಪಾಣಿಗಳು ಘನವಲ್ಲ. ನೀಲಲೋಹಿತರು ಘನವೆಂಬೆನೆ ? ನೀಲಲೋಹಿತರು ಘನವಲ್ಲ. ಅದೇನು ಕಾರಣವೆಂದೊಡೆ, ಇಂತಿವರಾದಿಯಾಗಿ ಅನಂತಕೋಟಿ ರುದ್ರಗಣಂಗಳು ಶರಣನ ಸರ್ವಾಂಗದಲ್ಲಿ ಅಡಗಿಹರಾಗಿ ಅಖಂಡೇಶ್ವರಾ, ನಿಮ್ಮ ಶರಣ ಘನಕ್ಕೆ ಘನವೆಂಬೆನಯ್ಯಾ.
--------------
ಷಣ್ಮುಖಸ್ವಾಮಿ
ಅಯ್ಯಾ ಎನಗೆ ರುದ್ರಾಕ್ಷಿಯೇ ಪುಣ್ಯದ ಪುಂಜ ನೋಡಾ. ಅಯ್ಯಾ ಎನಗೆ ರುದ್ರಾಕ್ಷಿಯೇ ಭಾಗ್ಯದ ನಿದ್ಥಿಯು ನೋಡಾ. ಅಯ್ಯಾ ಎನಗೆ ರುದ್ರಾಕ್ಷಿಯೇ ಸತ್ಯದ ಸದನ ನೋಡಾ. ಏಕಭಾಜನಸ್ಥಲ, ಸಹಜಭೋಜನಸ್ಥಲಯೆಂಬ ಎಂಟು ಸ್ಥಲಂಗಳನ್ನು ಶೇಷಾಂಗಸ್ವರೂಪವಾದ ಶರಣ ಮಹದಂಗಸ್ವರೂಪವಾದೈಕ್ಯ ಯೋಗಾಂಗಸ್ಥಲವನೊಳಕೊಂಡು, ಜಂಗಮದಲ್ಲಿ ತಿಳಿದು, ಆ ಜಂಗಮವ ಪರಿಪೂರ್ಣಜ್ಞಾನಾನುಭಾವದಲ್ಲಿ ಕಂಡು, ಆ ಪರಿಪೂರ್ಣಜ್ಞಾನಾನುಭಾವವನೆ ಮಹಾಜ್ಞಾನಮಂಡಲಂಗಳಲ್ಲಿ ತರಹರವಾಗಿ, ಅಲ್ಲಿಂದ ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ, ಜ್ಞಾನಪಾದೋದಕಸ್ಥಲ, ಕ್ರಿಯಾನಿಷ್ಪತ್ತಿಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ, ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ, ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ, ಕೊಂಡುದು ಪ್ರಸಾದಿಸ್ಥಲ, ನಿಂದುದು ಓಗರಸ್ಥಲ, ಚರಾಚರನಾಸ್ತಿಸ್ಥಲ, ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲವೆಂಬ ಹದಿನೆಂಟುಸ್ಥಲಂಗಳನ್ನು ಮೂವತ್ತಾರು ಸಕೀಲಂಗಳನೊಳಕೊಂಡು ಪರಿಶೋಬ್ಥಿಸುವಂಥ ಮಹಾಲಿಂಗ. ಜ್ಞಾನಶೂನ್ಯಸ್ಥಲವನೊಳಕೊಂಡು, ನಿರಂಜನಲಿಂಗದಲ್ಲಿ ತಿಳಿದು, ಆ ನಿರಂಜನಬ್ರಹ್ಮವೇ ತಾನೇ ತಾನಾಗಿ, ಮೂವತ್ತಾರು ಚಿತ್ಪಾದೋದಕಪ್ರಸಾದಪ್ರಣಮಂಗಳೆಂಬ ಮೂಲಮಂತ್ರಸ್ವರೂಪನಾಗಿ ವಿರಾಜಿಸುವಾತನೆ ಪರಿಪೂರ್ಣಾನುಭಾವಜಂಗಮಭಕ್ತನಾದ ನಿರವಯಮೂರ್ತಿಯಿರವು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಷಣ್ಮುಖಸ್ವಾಮಿ
ಅಂಜನಗಿರಿಯಲ್ಲಿ ಅರ್ಕನ ಉದಯವ ಕಂಡೆ. ಸಂಜೆಯ ಮಬ್ಬು ಅಂಜಿ ಓಡಿದುದ ಕಂಡೆ. ಕುಂಜರನ ಮರಿಗಳ ಕೋಳಿ ನುಂಗಿದುದ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಅಂದಿನ ಶರಣರಿಗೆ ಇಂದಿನವರು ಸರಿಯಲ್ಲವೆಂದು ನುಡಿವ ಸಂದೇಹ ಸೂತಕ ಹೊಲೆಯರ ಮಾತ ಕೇಳಲಾಗದು. ಆ ಪಂಚಮಹಾಪಾತಕರ ಮುಖವ ನೋಡಲಾಗದು. ಅದೆಂತೆಂದೊಡೆ : ತಾ ಮೂಕೊರೆಯನೆಂದರಿಯದೆ ಕನ್ನಡಿಗೆ ಮೂಗಿಲ್ಲೆಂಬಂತೆ. ತಾ ಕುಣಿಯಲಾರದೆ ಅಂಗಳ ಡೊಂಕೆಂಬಂತೆ, ತನ್ನಲ್ಲಿ ನಡೆನುಡಿ ಸಿದ್ಧಾಂತವಿಲ್ಲದೆ ಇತರವ ಹಳಿವ ಅಧಮ ಮಾದಿಗರನೇನೆಂಬೆನಯ್ಯಾ ! ಅಷ್ಟಾವರಣ ಪಂಚಾಚಾರವು ಅಂದೊಂದು ಪರಿ ಇಂದೊಂದು ಪರಿಯೇ ? ಷಟ್‍ಸ್ಥಲ ಸ್ವಾನುಭಾವವು ಅಂದೊಂದು ಪರಿ ಇಂದೊಂದು ಪರಿಯೇ ? ಭಕ್ತಿ ವಿರಕ್ತಿ ಉಪರತಿ ಜ್ಞಾನ ವೈರಾಗ್ಯ ಅಂದೊಂದು ಪರಿ ಇಂದೊಂದು ಪರಿಯೇ ? ನಡೆನುಡಿ ಸಿದ್ಧಾಂತವಾದ ಶರಣರ ಘನವು ಅಂದೊಂದು ಪರಿ ಇಂದೊಂದು ಪರಿಯೇ ? ಇಂತೀ ವಿಚಾರವನರಿಯದೆ ಪರಸಮಯವನಾದಡೂ ಆಗಲಿ, ಶಿವಸಮಯವನಾದಡೂ ಆಗಲಿ, ವರ್ಮಗೆಟ್ಟು ನುಡಿವ ಕರ್ಮಜೀವಿಗಳ ಬಾಯಲ್ಲಿ ಬಾಲ್ವುಳ ಸುರಿಯದೆ ಮಾಣ್ಬುವೆ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಅಖಂಡಜ್ಞಾನಭರಿತ ಶರಣಂಗೆ ಪೃಥ್ವಿಯೆ ಖಟ್ವಾಂಗ, ಆಕಾಶವೇ ಕಿರೀಟ, ಮೇಘಾದಿಗಳೆ ಮಜ್ಜನ, ನಕ್ಷತ್ರಂಗಳೆ ಪುಷ್ಪಮಾಲೆಗಳು, ವೇದಂಗಳೆ ಮುಖಂಗಳು, ಶಾಸ್ತ್ರಂಗಳೆ ಅವಯವಂಗಳು, ಸೋಮಸೂರ್ಯಾಗ್ನಿಗಳೆ ನಯನಂಗಳು, ದಶದಿಕ್ಕುಗಳೆ ಹೊದಿಕೆಗಳು, ಬ್ರಹ್ಮಾಂಡವೆ ಒಡಲಾದ ಮಹಾಮಹಿಮನ ಏನೆಂದು ಉಪಮಿಸಬಹುದಯ್ಯಾ ಅಖಂಡೇಶ್ವರಾ. ?
--------------
ಷಣ್ಮುಖಸ್ವಾಮಿ
ಅಂಬರದೇಶದ ಕುಂಭ ಕೋಣೆಯೊಳಗೆ ಜಂಬುಲಿಂಗಪೂಜೆಯ ಸಂಭ್ರಮವ ನೋಡಾ ! ಅಂಬುಜಮುಖಿಯರು ಆರತಿಯನೆತ್ತಿ ಶಂಭು ಶಿವಶಿವ ಹರಹರ ಎನುತಿರ್ಪರು ನೋಡಾ ! ತುಂಬಿದ ಹುಣ್ಣಿಮೆಯ ಬೆಳದಿಂಗಳು ಒಂಬತ್ತು ಬಾಗಿಲಲ್ಲಿ ತುಂಬಿ ಹೊರಸೂಸುತಿರ್ಪುದು ನೋಡಾ ! ಈ ಸಂಭ್ರಮವನೇನ ಹೇಳುವೆನಯ್ಯಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಅನುಭಾವಿಗಳ ಸಂಗ ಕೀಟಕ ಭ್ರಮರವಾದಂತೆ ಕಾಣಿರೊ. ಅನುಭಾವಿಗಳ ಸಂಗ ಲೋಹ ಪರುಷವಾದಂತೆ ಕಾಣಿರೊ. ನಮ್ಮ ಅಖಂಡೇಶ್ವರಲಿಂಗದೊಡನೆ ನೆರೆದ ಅನುಭಾವಿಗಳ ಸಂಗ ಕರ್ಪೂರದಜ್ಯೋತಿಯಂತೆ ಕಾಣಿರೊ.
--------------
ಷಣ್ಮುಖಸ್ವಾಮಿ
ಅಂಗಕ್ಕೆ ಇಷ್ಟಲಿಂಗದ ಸತ್ಕ್ರಿಯವನಳವಡಿಸಿಕೊಂಡು ಪ್ರಾಣಕ್ಕೆ ಪ್ರಾಣಲಿಂಗದ ಸಮ್ಯಕ್‍ಜ್ಞಾನಾಚಾರವ ಸಂಬಂದ್ಥಿಸಿ, ಅಂಗಲಿಂಗವೆಂಬ ಬ್ಥಿನ್ನಭಾವವಳಿದು ಒಳಹೊರಗೆಲ್ಲ ಅಖಂಡಜ್ಞಾನ ಸತ್‍ಕ್ರಿಯಾಚಾರಮಯವಾದ ಶರಣಂಗೆ ವಾರ ತಿಥಿ ಲಗ್ನ ವಿಘ್ನಂಗಳಿಲ್ಲ, ಶುಭಾಶುಭಂಗಳಿಲ್ಲ, ಸ್ತುತಿನಿಂದೆಗಳಿಲ್ಲ, ಪೂಜ್ಯಾಪೂಜ್ಯಂಗಳಿಲ್ಲವಾಗಿ, ಅಖಂಡೇಶ್ವರಾ, ನಿಮ್ಮ ಶರಣ ಎಂತಿರ್ದಂತೆ ಸಹಜಬ್ರಹ್ಮವೆ ಆಗಿರ್ಪನು.
--------------
ಷಣ್ಮುಖಸ್ವಾಮಿ
ಅನಾದಿ ಶಿವಾಂಶಿಕರಾದ ಶಿವಶರಣರಿಗಲ್ಲದೆ ವೇದ್ಯವಾಗದು ನೋಡಾ ಭಕ್ತಿ ಜ್ಞಾನ ವೈರಾಗ್ಯವು. ಅನಾದಿ ಶಿವಾಂಶಿಕರಾದ ಶಿವಶರಣರಿಗಲ್ಲದೆ ವೇದ್ಯವಾಗದು ನೋಡಾ ಶಿವಾಚಾರ ಸತ್‍ಪಥವು. ಅನಾದಿ ಶಿವಾಂಶಿಕರಾದ ಶಿವಶರಣರಿಗಲ್ಲದೆ ವೇದ್ಯವಾಗದು ನೋಡಾ ಶಿವಾನುಭಾವವು. ಅನಾದಿ ಶಿವಾಂಶಿಕರಾದ ಶಿವಶರಣರಿಗಲ್ಲದೆ ವೇದ್ಯವಾಗದು ನೋಡಾ ನಿರ್ಧರ ನಿಷ್ಪತ್ತಿಯು. ಅನಾದಿ ಶಿವಾಂಶಿಕರಾದ ಶಿವಶರಣರಿಗಲ್ಲದೆ ವೇದ್ಯವಾಗದು ಅಖಂಡೇಶ್ವರಾ, ನಿಮ್ಮ ನಿಜೈಕ್ಯಪದವು.
--------------
ಷಣ್ಮುಖಸ್ವಾಮಿ
ಅಣುವಿಂಗೆ ಅಣು ಮಹತ್ತಿಂಗೆ ಮಹತ್ತಾದ ಮಹಾಲಿಂಗದೊಳಗೆ ಶರಣನಿರ್ಪನು. ಆ ಶರಣನೊಳಹೊರಗೆಲ್ಲ ಮಹಾಲಿಂಗವೆ ಭರಿತವಾಗಿರ್ಪುದಾಗಿ, ನಮ್ಮ ಅಖಂಡೇಶ್ವರನ ಶರಣನ ಮೂರ್ತಿ ಸಣ್ಣದಾದಡು ಕೀರ್ತಿ ಜಗದಗಲಿರ್ಪುದು ನೋಡಾ.
--------------
ಷಣ್ಮುಖಸ್ವಾಮಿ
ಅಪ್ಪುವೆ ಅಂಗವಾದ ಮಹೇಶ್ವರಂಗೆ ಬುದ್ಧಿಯೆ ಹಸ್ತ. ಆ ಹಸ್ತಕ್ಕೆ ಜ್ಞಾನಶಕ್ತಿ , ಆ ಶಕ್ತಿಗೆ ಗುರುಲಿಂಗ, ಆ ಗುರುಲಿಂಗಕ್ಕೆ ಜಿಹ್ವೇಂದ್ರಿಯವೆಂಬ ಮುಖ, ಆ ಮುಖಕ್ಕೆ ಸುರಸವೆ ಪದಾರ್ಥ ; ಆ ಪದಾರ್ಥವನು ಜಿಹ್ವೆಯಲ್ಲಿಹ ಗುರುಲಿಂಗಕ್ಕೆ ನೈಷಿ*ಕಭಕ್ತಿಯಿಂದರ್ಪಿಸಿ, ಆ ಸುರಸ ಪ್ರಸಾದವನು ಪಡೆದು ಸುಖಿಸುವಾತನೇ ಮಹೇಶ್ವರನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅನುಭಾವಿಯಾದಡೆ ತಿರುಳುಕರಗಿದ ಹುರಿದ ಬೀಜದಂತಿರಬೇಕು. ಅನುಭಾವಿಯಾದಡೆ ಸುಟ್ಟ ಸರವೆಯಂತಿರಬೇಕು. ಅನುಭಾವಿಯಾದಡೆ ದಗ್ಧಪಟದಂತಿರಬೇಕು. ಅನುಭಾವಿಯಾದಡೆ ದರ್ಪಣದೊಳಗಣ ಪ್ರತಿಬಿಂಬದಂತಿರಬೇಕು. ಅನುಭಾವಿಯಾದಡೆ ಕಡೆದಿಳುಹಿದ ಕಪ್ಪುರದ ಪುತ್ಥಳಿಯಂತಿರಬೇಕು. ಇಂತಪ್ಪ ಮಹಾನುಭಾವಿಗಳು ಆವ ಲೋಕದೊಳಗೂ ಅಪೂರ್ವವಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅನಂತಕೋಟಿ ಯಜ್ಞಂಗಳ ಮಾಡಿ ತೊಳಲಿ ಬಳಲಲದೇಕೊ ? ಆ ಯಜ್ಞಂಗಳ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ ! ಅನಂತಕಾಲ ತಪವಮಾಡಿ ತೊಳಲಿ ಬಳಲಲದೇಕೊ ? ಆ ತಪಸ್ಸಿನ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ ! ಅನಂತಕಾಲ ದಾನವಮಾಡಿ ತೊಳಲಿ ಬಳಲಲದೇಕೊ ? ಆ ದಾನದ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ ! ಅನಂತಕಾಲ ವೇದಾಭ್ಯಾಸವಮಾಡಿ ತೊಳಲಿ ಬಳಲಲದೇಕೊ ? ಆ ವೇದಾಭ್ಯಾಸದ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ ದೊರೆಕೊಂಬುದು ನೋಡಾ ! ಅದೆಂತೆಂದೊಡೆ :ಪದ್ಮಪುರಾಣದಲ್ಲಿ- ``ಸರ್ವಯಜ್ಞತಪೋದಾನವೇದಾಭ್ಯಾಸೈಶ್ಚ ಯತ್ಫಲಮ್ | ತತ್ಫಲಂ ಲಭತೇ ಸದ್ಯೋ ರುದ್ರಾಕ್ಷಸ್ಯ ತು ಧಾರಣಾತ್ ||'' ಎಂದುದಾಗಿ, ಇಂತಪ್ಪ ರುದ್ರಾಕ್ಷಿಯ ಧರಿಸಿದ ಮಹಾತ್ಮನು ವಿಶ್ವಾಧಿಕನು ವಿಶ್ವಾತೀತನು ತಾನೇ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅರಳಿಯ ಮರದೊಳಗಿರುವ ಅರಗಿಳಿಗಳಿರಾ, ನಮ್ಮ ಅಖಂಡೇಶ್ವರನ ಕಂಡರೆ ಹೇಳಿರೆ ! ಮಾವಿನ ಮರದೊಳಗೆ ಕೂಗುವ ಕೋಗಿಲೆ ಹಿಂಡುಗಳಿರಾ, ನಮ್ಮ ನಾಗಭೂಷಣನ ಕಂಡಡೆ ಹೇಳಿರೆ! ಕೊಳನ ತೀರದಲಾಡುವ ಕಳಹಂಸಗಳಿರಾ, ನಮ್ಮ ಎಳೆಯಚಂದ್ರಧರನ ಕಂಡಡೆ ಹೇಳಿರೆ! ಮೇಘಧ್ವನಿಗೆ ಕುಣಿವ ನವಿಲುಗಳಿರಾ, ನಮ್ಮ ಅಖಂಡೇಶ್ವರನೆಂಬ ಅವಿರಳಪರಶಿವನ ಕಂಡಡೆ ಹೇಳಿರೆ!
--------------
ಷಣ್ಮುಖಸ್ವಾಮಿ
ಅಕುಲಜ ಅಧಮ ಮೂರ್ಖನಾದಡಾಗಲಿ ಮುಕ್ಕಣ್ಣ ಹರನ ಭಕ್ತಿಯ ಹಿಡಿದಾತನು ಸಿಕ್ಕಬಲ್ಲನೇ ಯಮನಬಾಧೆಗೆ ? ಆತನು ದೇವ ದಾನವ ಮಾನವರೊಳಗೆ ಪೂಜ್ಯನು ನೋಡಾ ! ಅದೆಂತೆಂದೊಡೆ :ಶಿವಧರ್ಮೇ- ``ಅಂತ್ಯಜೋ ವಾಧಮೋ ವಾಪಿ ಮೂರ್ಖೋ ವಾ ಪಂಡಿತೋಪಿ ವಾ | ಶಿವಭಾವಂ ಪ್ರಪನ್ನಶ್ಚೇತ್ ಪೂಜ್ಯಸ್ಸರ್ವೈ ಸ್ಸುರಾಸುರೈಃ ||'' ಎಂದುದಾಗಿ, ಶಿವಭಕ್ತನೇ ಶ್ರೇಷ*ನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಡಿಮುಡಿಯಿಲ್ಲದ ಪ್ರಸಾದ, ನಡುಕಡೆಯಿಲ್ಲದ ಪ್ರಸಾದ, ಎಡೆಬಿಡುವಿಲ್ಲದ ಪ್ರಸಾದ, ಅಖಂಡೇಶ್ವರನೆಂಬ ಮಹಾಘನ ಪರಾತ್ಪರ ಪರಿಪೂರ್ಣಪ್ರಸಾದದೊಳಗೆ ಮನವಡಗಿ ನೆನಹುನಿಷ್ಪತ್ತಿಯಾಗಿ ಏನೆಂದರಿಯದಿರ್ದೆನಯ್ಯಾ.
--------------
ಷಣ್ಮುಖಸ್ವಾಮಿ
ಅರಿದಲ್ಲಿ ಶರಣ ಮರೆದಲ್ಲಿ ಮಾನವನೆಂದು ನುಡಿವ ಅಜ್ಞಾನಿಗಳ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ : ಜಗದಗಲದ ಗುರಿಯ ಹೂಡಿ ಮುಗಿಲಗಲದ ಬಾಣವನೆಸೆದಡೆ ತಪ್ಪಿ ಕಡೆಗೆ ಬೀಳುವ ಸ್ಥಾನವುಂಟೆ ? ಒಳಹೊರಗೆ ಸರ್ವಾಂಗಲಿಂಗವಾದ ಶರಣನಲ್ಲಿ ಅರುಹುಮರಹುಗಳು ತೋರಲೆಡೆಯುಂಟೆ ? ಇದು ಕಾರಣ, ನಮ್ಮ ಅಖಂಡೇಶ್ವರನ ಶರಣನಲ್ಲಿ ತೋರುವ ತೋರಿಕೆಯೆಲ್ಲ ಲಿಂಗವು ತಾನೆ ಕಾಣಿರೊ.
--------------
ಷಣ್ಮುಖಸ್ವಾಮಿ
ಅಣುವಿಂಗೆ ಅಣು ಮಹತ್ತಿಂಗೆ ಮಹತ್ತೆಂದೆನಿಸುವ ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಉಪಮಾತೀತ ವಾಙ್ಮನಕ್ಕಗೋಚರನೆಂದೆನಿಸುವ ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಶ್ರುತಿತತಿಯ ಶಿರದ ಮೇಲೆ ಅತ್ಯತಿಷ*ದ್ದಶಾಂಗುಲನೆಂದೆನಿಸುವ ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಭಾವಭರಿತ ಜ್ಞಾನಗಮ್ಯನೆಂದೆನಿಸುವ ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ. ಅಖಂಡೇಶ್ವರನೆಂಬ ಅನಾದಿಪರಶಿವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
--------------
ಷಣ್ಮುಖಸ್ವಾಮಿ
ಅನಾದಿ ಪರವಸ್ತುವು ತನ್ನ ಸ್ವಲೀಲಾಸ್ವಭಾವದಿಂದೆ ತಾನೇ ಅಂಗವಾದುದು. ತಾನೇ ಲಿಂಗವಾದುದು. ತಾನೇ ಸಂಗವಾದುದು. ತಾನೇ ಸಮರಸವಾದುದು. ಎಂಬ ಭೇದವ ನಿಮ್ಮ ಶರಣ ಬಲ್ಲನಲ್ಲದೆ ಉಳಿದ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಅನುಪಮ ಶರಣನ ನೆನಹಿನ ಕೊನೆಯಲ್ಲಿ ಘನಲಿಂಗವು. ಆ ಘನಲಿಂಗದ ನೆನಹಿನ ಕೊನೆಯಲ್ಲಿ ನಿರವಯವು. ಆ ನಿರವಯದ ನೆನಹಿನ ಕೊನೆಯಲ್ಲಿ ನಿರಾಲಂಬವು. ಆ ನಿರಾಲಂಬದ ನೆನಹಿನ ಕೊನೆಯಲ್ಲಿ ನಿರಾಳವು. ಆ ನಿರಾಳದ ನೆನಹಿನ ಕೊನೆಯಲ್ಲಿ ಆದಿಮಹಾಲಿಂಗವು. ಆ ಆದಿ ಮಹಾಲಿಂಗದ ನೆನಹಿನ ಕೊನೆಯಲ್ಲಿ ಚಿತ್‍ಶಕ್ತಿ. ಆ ಚಿತ್‍ಶಕ್ತಿಯ ನೆನಹಿನ ಕೊನೆಯಲ್ಲಿ ಪರಮೇಶ್ವರನು. ಆ ಪರಮೇಶ್ವರನ ನೆನಹಿನ ಕೊನೆಯಲ್ಲಿ ಪರಾಶಕ್ತಿ. ಆ ಪರಾಶಕ್ತಿಯ ನೆನಹಿನ ಕೊನೆಯಲ್ಲಿ ಸದಾಶಿವನು. ಆ ಸದಾಶಿವನ ನೆನಹಿನ ಕೊನೆಯಲ್ಲಿ ಆದಿಶಕ್ತಿ. ಆ ಆದಿಶಕ್ತಿಯ ನೆನಹಿನ ಕೊನೆಯಲ್ಲಿ ಈಶ್ವರನು. ಆ ಈಶ್ವರನ ನೆನಹಿನ ಕೊನೆಯಲ್ಲಿ ಇಚ್ಛಾಶಕ್ತಿ. ಆ ಇಚ್ಛಾಶಕ್ತಿಯ ನೆನಹಿನ ಕೊನೆಯಲ್ಲಿ ಮಹೇಶ್ವರನು. ಆ ಮಹೇಶ್ವರನ ನೆನಹಿನ ಕೊನೆಯಲ್ಲಿ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ನೆನಹಿನ ಕೊನೆಯಲ್ಲಿ ಶ್ರೀರುದ್ರಮೂರ್ತಿ. ಆ ಶ್ರೀರುದ್ರಮೂರ್ತಿಯ ನೆನಹಿನ ಕೊನೆಯಲ್ಲಿ ವಿಷ್ಣುವು. ಆ ವಿಷ್ಣುವಿನ ನೆನಹಿನ ಕೊನೆಯಲ್ಲಿ ಮಹಾಲಕ್ಷ್ಮಿ. ಆ ಮಹಾಲಕ್ಷ್ಮಿಯ ನೆನಹಿನ ಕೊನೆಯಲ್ಲಿ ಬ್ರಹ್ಮನು. ಆ ಬ್ರಹ್ಮನ ನೆನಹಿನ ಕೊನೆಯಲ್ಲಿ ಸರಸ್ವತಿ. ಆ ಸರಸ್ವತಿಯ ನೆನಹಿನ ಕೊನೆಯಲ್ಲಿ ಸಕಲ ಚರಾಚರಂಗಳು. ಇಂತಿವೆಲ್ಲವು ಶರಣನ ನೆನಹುದೋರಿದಲ್ಲಿಯೇ ತೋರುತಿರ್ಪವು, ಆ ಶರಣನ ನೆನಹು ನಿಂದಲ್ಲಿಯೇ ಅಡುಗುತಿರ್ಪುವಾಗಿ, ಅಖಂಡೇಶ್ವರಾ, ನಿಮ್ಮ ಶರಣನು ಘನಕ್ಕೆ ಘನಮಹಿಮ, ವಾಙ್ಮನಕ್ಕಗೋಚರನು, ಉಪಮೆಗೆ ಉಪಮಾತೀತನು ನೋಡಾ.
--------------
ಷಣ್ಮುಖಸ್ವಾಮಿ
ಅಂಗವಿಕಾರಿಗೇಕೊ ಲಿಂಗದೊಡನೆ ಏಕಭಾಜನ ? ಆತ್ಮಸುಖಿಗೇಕೊ ಲಿಂಗದೊಡನೆ ಏಕಭಾಜನ ? ಹುಸಿ ಡಂಭಕಗೇಕೊ ಲಿಂಗದೊಡನೆ ಏಕಭಾಜನ ? ಜಾರಚೋರಂಗೇಕೊ ಲಿಂಗದೊಡನೆ ಏಕಭಾಜನ ? ನಮ್ಮ ಅಖಂಡೇಶ್ವರನ ನಿಜವನರಿಯದವರಿಗೇಕೊ ಪರಮ ಶಿವಲಿಂಗದೊಡನೆ ಏಕಭಾಜನ ?
--------------
ಷಣ್ಮುಖಸ್ವಾಮಿ

ಇನ್ನಷ್ಟು ...