ಅಥವಾ
(54) (20) (4) (1) (1) (1) (0) (0) (7) (4) (0) (3) (0) (0) ಅಂ (19) ಅಃ (19) (41) (2) (16) (7) (0) (8) (0) (9) (0) (0) (2) (0) (0) (0) (0) (33) (0) (9) (2) (18) (28) (0) (16) (10) (18) (1) (4) (0) (6) (10) (24) (1) (21) (21) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗವು ಲಿಂಗವೇಧೆಯಾದ ಬಳಿಕ ಅಂಗವೆಲ್ಲವೂ ನಷ್ಟವಾಗಿ ಲಿಂಗತನ್ಮಯವಾಗಿಪ್ಪುದಾಗಿ ದಿಟದಿಂದಿಪ್ಪ ಸಜ್ಜನಕ್ಕೆ ಬೇರೆ ಅಂಗವುಂಟೆ ಲಿಂಗವಲ್ಲದೆ? ಇದು ಕಾರಣ ಸೌರಾಷ್ಟ್ರ ಸೋಮೇಶ್ವರನ ಶರಣರು ನಿರ್ದೇಹಿಗಳು.
--------------
ಆದಯ್ಯ
ಅಯ್ಯಾ, ತನುವಿದ್ದಂತೆ ಮರಣ ಶೋಕ ಭಯಂಗಳೆಂತುತ್ತಾರವಹವೆಂದರಿಯೆನಯ್ಯಾ. ಅಯ್ಯಾ, ಮನವಿದ್ದಂತೆ ಮಲ, ಮದ, ಮಾಯೆ, ಕರ್ಮಂಗಳೆಂತು ಹರಿವವೆಂದರಿಯೆನಯ್ಯಾ. ಅಯ್ಯಾ, ನಿಮ್ಮ ನೋಡುವ ಜ್ಞಾನಕಂಗಳಿಗೆ ವಿವೇಕಾಂಜನಸಿದ್ಧಿ ಎಂತಹುದೆಂದರಿಯೆನಯ್ಯಾ. ಅಯ್ಯಾ, ನಿಮ್ಮನರುಹಿ ಎನ್ನ ಮರಹಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅನುಭಾವ ಸಾಹಿತ್ಯವಾದ ಬಳಿಕ ಅನುಭವಿಸಲೆಲ್ಲಿಯದೊ? ಸಂಚಿತ ಪ್ರಾರಬ್ಧ ಆಗಾಮಿಯ ಅದ್ವೈತ ಸಾಹಿತ್ಯವಾದ ಬಳಿಕ ಸಂದೇಹ ಭ್ರಾಂತಿಯೆಲ್ಲಿಯದೊ? ಉಂಟು ಇಲ್ಲವೆಂಬ ಪ್ರಸಾದ ಸಾಹಿತ್ಯವಾದ ಬಳಿಕ ಭೋಗ ಉಪಭೋಗಂಗಳೆಲ್ಲಿಯವೋ? ಅಷ್ಟಭೋಗಂಗಳು ಸೌರಾಷ್ಟ್ರ ಸೋಮೇಶ್ವರ ಸಾಹಿತ್ಯವಾದ ಬಳಿಕ ಮಲ-ಮಾಯಾ-ಕರ್ಮ-ತಿರೋಧಾನವೆಂಬ ಚತುರ್ವಿಧಪಾಶಂಗಳೆಲ್ಲಿಯವೊ?
--------------
ಆದಯ್ಯ
ಅಷ್ಟಭೋಗಂಗಳ ಕಾಮಿಸಿ, ತನಗೆಂಬ ಜ್ಞಾನೇಂದ್ರಿಯ ಅಂತಃಕರಣಗಳ ಮುಸುಡುಗುತ್ತಲೀಯದೆ ಸ್ವಾನುಭಾವರ ಸುಖದೊಳಗಿರಬಲ್ಲಡೆ ಕಕ್ಷಸ್ಥಲದಲ್ಲಿ ಧರಿಸುವುದಯ್ಯಾ. ಇಂದ್ರಿಯ ನಿರೂಡ್ಥೀಯ ವಿಕಳದ ಅಪೇಕ್ಷೆಯಿಂ ಕಾಂಚಾಣಕ್ಕೆ ಕೈಯಾನದೆ ನಿಚ್ಚಯ ದೃಡಚಿತ್ತದೊಳಿರಬಲ್ಲಡೆ ಕರಸ್ಥಲದಲ್ಲಿ ಧರಿಸುವುದಯ್ಯಾ. ಅಂಗನೆಯರ ಅಂಗಸುಖದ ವಿರಹಕ್ಕೆ ತನುವನೊಪ್ಪಿಸದೆ ಲಿಂಗವನಪ್ಪಿ ಪರಮಸುಖದ ಸುಗ್ಗಿಯೊಳಿರಬಲ್ಲಡೆ ಉರಸ್ಥಲದಲ್ಲಿ ಧರಿಸುವುದಯ್ಯಾ. ನಿಂದೆ ನಿಷ್ಠುರ ಅನೃತ ಅಸಹ್ಯ ಕುತರ್ಕ ಕುಶಬ್ದವಳಿದು ಶಿವಾನುಭಾವದ ಸುಖದೊಳಿರಬಲ್ಲಡೆ ಕಂಠಸ್ಥಲದಲ್ಲಿ ಧರಿಸುವುದಯ್ಯಾ. ಲಿಂಗವಿಹೀನರಾದ ಲೋಕದ ಜಡಮಾನವರಿಗೆ ತಲೆವಾಗದೆ ಶಿವಲಿಂಗಕ್ಕೆರಗಿರಬಲ್ಲಡೆ ಶಿರದಲ್ಲಿ ಧರಿಸುವುದಯ್ಯಾ. ಅಂತರ್ಮುಖವಾಗಿ ಶಿವಜ್ಞಾನದಿಂ ಪ್ರಾಣಗುಣವಳಿದು ಸದಾ ಸನ್ನಿಹಿತದಿಂದೆರಡರಿಯದಿರಬಲ್ಲಡೆ ಅಮಳೋಕ್ಯದಲ್ಲಿ ಧರಿಸುವುದಯ್ಯಾ. ಶಿವತತ್ವದ ಮೂಲಜ್ಞಾನಸಂಬಂದ್ಥಿಗಳಪ್ಪ ಶಿವಶರಣರ ಮತವಿಂತಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅಖಂಡಿತನಾದ ಬ್ರಹ್ಮ ಸೂಕ್ಷ್ಮ ಸುನಾದದ ಬೆಳಗು, ಸುಜ್ಞಾನಪ್ರಭೆಯನೊಡಗೂಡಿ ಅತಕ್ರ್ಯವಾಯಿತ್ತು. ಕಡೆಮೊದಲಿಲ್ಲದರಿವು ಸೌರಾಷ್ಟ್ರ ಸೋಮೇಶ್ವರಲಿಂಗವ ತೋರಿ, ಜನನಮರಣವ ಬಿಡಿಸಿತ್ತು.
--------------
ಆದಯ್ಯ
ಅಜಕಲ್ಪನೆಗೊಳಗಾದ ಊರೊಳಗೆ ಮುನ್ನೂರು ಅರುವತ್ತು ಮಂದಿ ಅಸಾಸುರರು ನಿಚ್ಚ ನಿಚ್ಚ ಊರಿಗುಪಟಳ ಮಾಡುತ್ತಿರ್ದರಲ್ಲಯ್ಯಾ. ಅಚ್ಯುತನ ಆಜ್ಞೆಯಲ್ಲಿ ಅಡಗಿದ ಕಪಿಯೊಳಗೆ ಬಾವನ್ನ ವೀರರು ಮುಳುಗಿ ಬಂಧಮೋಕ್ಷಂಗಳ ಬಗೆವುತಿರ್ದರಲ್ಲಯ್ಯಾ. ಮೇಲೆ ರುದ್ರನೂಳಿಗದ ದಾಳಿ ಹತ್ತಿ ಘೋಳಿಟ್ಟು ಹಾಳಾಯಿತಲ್ಲಾ, ಮೂರು ಲೋಕವೆಲ್ಲ. ಇಂತೀ ಮೂವರ ಮುಂದುಗೆಡಿಸಿ ಅಯಿವತ್ತಿಬ್ಬರನಣಕಿಸಿ ಮೂನ್ನೂರ ಅರುವತ್ತು ಮಂದಿ ಅಸಾಸುರರನಡಿಗದ್ದಿದ ಸ್ವತಂತ್ರರು ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ಅಸ್ತಿ ಭಾತಿ[ಪ್ರಿ]ಯವೆಂಬ ತ್ರಿವಾಕ್ಯದಿಂದಲ್ಲವಾದುದಲ್ಲ. ಅಪ್ರಮಾಣ ಅಗೋಚರ ಆತ್ಯತಿಷ್ಠದ್ದಶಾಂಗುಲ ಅಭೇದ್ಯದಿಂ ನಾಮರೂಪುಗಳುಂಟಾದುದಲ್ಲ. ಇದು ಕಾರಣ ಸ್ತ್ರೀಯಲ್ಲ ಪುರುಷನಲ್ಲ ನಪುಂಸಕನಲ್ಲ ಮೂರ್ತನಲ್ಲ ಭಾವಿಯಲ್ಲ ಪ್ರಾಣಿಯಲ್ಲ ಇದಕ್ಕೆ ಶ್ರುತಿ: ನೈವಂಚೋವಾಚಾಸ್ತ್ರೀಯಾನ್ ಭೂಮಾನಚನಸ್ತ್ರೀ ಪುಮಾನ್ನಪುಮಾನ್ ಪ್ರಮಾನ್ನಪ್ರಮಾನ್ ಭವಾನ್ ಯೇನೇದಂ ವದತಿ ಶತ್ವನಃ ಇತಿ ಬ್ರಹ್ಮಾ ಎಂಬ ಉಪನಿಷದುಕ್ತಿಯನರಿದು ಅರಿವೆ ತಾನಾಗಿ ಲಿಂಗದಲ್ಲಿ ಸಂದುಭೇದವಿಲ್ಲದೆ ಇಪ್ಪರಯ್ಯಾ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು.
--------------
ಆದಯ್ಯ
ಅವಿರಳಾತ್ಮಕನಾಗಿ ನಿಃಕಲಬ್ರಹ್ಮದೊಳೊಡವೆರಸಿ ಪರಮಜ್ಞಾನ ಇಂಬುಗೊಂಡು ಪರಮಾಶ್ರಯ ಪರಿಪೂರ್ಣವಾದ, ನಿಜಸುಖದಾಶ್ರಯವಾದ ಸುಜ್ಞಾನಭರಿತರ ತೋರಿ ಬದುಕಿಸಾ, ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಆದಯ್ಯ
ಅಂಗದಂತೆ ಲಿಂಗವಾಗಿರ್ದ ದೇಹ, ಲಿಂಗದಂತೆ ಅಂಗವಾಗಿರ್ದ ದೇಹ, ಈ ಕಾಯದ್ವಯಂಗಳಿಗೆ ಅಂಗಕಳಾ ಲಿಂಗಕಳಾ ಪ್ರಭಾವ ಒಂದಾಗಿ, ತನುವಿನ ಕೈಮುಟ್ಟಿ ಪ್ರಾಣಲಿಂಗ ಜಂಗಮದಾಸೋಹ ಮಾಡುತ್ತಿರಲು, ಆ ಜಂಗಮದ ಸ್ಥೂಲಪ್ರಾಸಾದವೆ ಬಸವಣ್ಣನ ಸಾಕಾರ. ಅಂತಪ್ಪ ಸಾಕಾರವನರಿವುತ್ತಿದ್ದರಿವು ಸೌರಾಷ್ಟ್ರ ಸೋಮೇಶ್ವರಲಿಂಗ ತಾನಾಗಿ ನೆನೆವುತ್ತ ನೆನೆವುತ್ತ ನೆನೆಯದಂತಿರ್ದೆನಯ್ಯಾ
--------------
ಆದಯ್ಯ
ಅಂಗದಾಸೆಯುಳ್ಳನ್ನಕ್ಕ ಭಯ ಬಿಡದು ನೋಡಾ ಅಯ್ಯಾ. ಜೀವನ ಭ್ರಾಂತುಳ್ಳನ್ನಕ್ಕ ಪ್ರಕೃತಿ ಹಿಂಗದು ನೋಡಾ ಅಯ್ಯಾ. ಮನದ ಸಂಚಲ ಉಳ್ಳನ್ನಕ್ಕ ಕರ್ಮವಳಿಯದು ನೋಡಾ ಅಯ್ಯಾ. ಕಾಮಾದಿ ಭೋಗಂಗಳುಳ್ಳನ್ನಕ್ಕ ಪುಣ್ಯಪಾಪಂಗಳು ತೊಲಗವು ನೋಡಾ ಅಯ್ಯಾ. ಇಹಪರಂಗಳ ಸಾರುವನ್ನಕ್ಕ ಭವ ಹಿಂಗದು ನೋಡಾ ಅಯ್ಯಾ. ಆನೆಂಬುದುಳ್ಳನ್ನಕ್ಕ ನೀನೆಂಬುದು ಬಿಡದು ನೋಡಾ ಅಯ್ಯಾ. ಸೌರಾಷ್ಟ್ರ ಸೋಮೇಶ್ವರಾ, ತಾನೆಂಬನ್ನಕ್ಕ ಲಿಂಗಸಾಹಿತ್ಯವಿಲ್ಲ ನೋಡಾ ಅಯ್ಯಾ.
--------------
ಆದಯ್ಯ
ಅತಕ್ರ್ಯ ಅಪ್ರಮಾಣ ಅನಾಮಯ ಅನುಪಮ ಸರ್ವಗತ ಸರ್ವಜ್ಞ ಸರ್ವೇಶ್ವರನಪ್ಪ ಪರಶಿವನು ಜಗತ್‍ಸೃಷ್ಟ್ಯರ್ಥವಾಗಿ ಸಮಸ್ತತತ್ವಂಗಳುತ್ಪತ್ತಿಗೆ ಮೂಲಿಗನಾಗಿ ತನ್ನಿಚ್ಛೆಯ ನೆನಹೆಂಬ ಚಿಂತಾಶಕ್ತಿಯ ಸಹಸ್ರದೊಳೊಂದಂಶದಲ್ಲಿ ಕುಂಡಲಿನಿಯಪ್ಪ ಪರೆ ಜನಿಸಿತ್ತು. ಆ ಪರಶಿವನಪ್ಪ ನಿಷ್ಕಲಬ್ರಹ್ಮವು ಈ ಕುಂಡಲಿನಿಯು [ತಾದಾತ್ಯ]ದಿಂ ಬ್ಥಿನ್ನವಿಲ್ಲದಿಹುದೆ ಸಕಲ ನಿಷ್ಕಲವಪ್ಪ ಸದಾಶಿವನು. ಆ ಸದಾಶಿವನು ತಾನೆ ಸಾದಾಖ್ಯದಿಂ ಪಂಚಬ್ರಹ್ಮಮೂರ್ತಿಯಾದುದು. ಎಂತೆಂದೊಡೆ: ಆ ಕುಂಡಲಿನಿಯಪ್ಪ ಪರೆಯ ಸಹಸ್ರದೊಳೊಂದಂಶಂದಲ್ಲಿ ಆದಿಶಕ್ತಿ ಜನಿಸಿತ್ತು. ಆದಿಶಕ್ತಿಯ ಸಹಸ್ರದೊಳೊಂದಂಶದಲ್ಲಿ ಇಚ್ಛಾಶಕ್ತಿ ಜನಿಸಿತ್ತು. ಇಚ್ಛಾಶಕ್ತಿಯ ಸಹಸ್ರದೊಳೊಂದಂಶದಲ್ಲಿ ಜ್ಞಾನಶಕ್ತಿ ಜನಿಸಿತ್ತು. ಜ್ಞಾನಶಕ್ತಿಯ ಸಹಸ್ರದೊಳೊಂದಂಶದಲ್ಲಿ ಕ್ರಿಯಾಶಕ್ತಿ ಜನಿಸಿತ್ತು. ಆ ನಿಷ್ಕಲವಪ್ಪ ಶಿವನ ನಿಷ್ಕಲೆಯಪ್ಪ ಕುಂಡಲಿನಿಯಪ್ಪ ಪರೆಯ ಹತ್ತರೊಳೊಂದಂಶದಲ್ಲಿ ಶಿವಸಾದಾಖ್ಯ ಜನಿಸಿತ್ತು. ಆದಿಶಕ್ತಿಯ ಹತ್ತರೊಳೊಂದಂಶದಲ್ಲಿ ಅಮೂರ್ತಿಸಾದಾಖ್ಯ ಜನಿಸಿತ್ತು. ಇಚ್ಛಾಶಕ್ತಿಯ ಹತ್ತರೊಳೊಂದಂಶದಲ್ಲಿ ಮೂರ್ತಿಸಾದಾಖ್ಯ ಜನಿಸಿತ್ತು. ಜ್ಞಾನಶಕ್ತಿಯ ಹತ್ತರೊಳೊಂದಂಶದಲ್ಲಿ ಕರ್ತೃಸಾದಾಖ್ಯ ಜನಿಸಿತ್ತು. ಕ್ರಿಯಾಶಕ್ತಿಯ ಹತ್ತರೊಳೊಂದಂಶದಲ್ಲಿ ಕರ್ಮಸಾದಾಖ್ಯ ಜನಿಸಿತ್ತು. ಆ ಕರ್ಮಸಾದಾಖ್ಯವಪ್ಪ ಮಾಹೇಶ್ವರನು ಸಕಲಸ್ವರೂಪದಿಂ ಸೋಮಧರ ಮೊದಲಾದ ಲಿಂಗೋದ್ಭವ ಕಡೆಯಾದ ಪಂಚವಿಂಶತಿಲೀಲೆಯ ತಾಳ್ದ ಸಕಲವಪ್ಪ ಮಾಹೇಶ್ವರನು ಸಕಲನಿಷ್ಕಲವಪ್ಪ ಸದಾಶಿವನು ನಿಷ್ಕಲವಪ್ಪ ಶಿವನೊಬ್ಬನಲ್ಲದೆ ಬೇರಲ್ಲವೆಂಬುದಕ್ಕೆ `ತತ್ಪರಂ ಬ್ರಹ್ಮೇತಿ, ಸ ಏಕೋ ರುದ್ರಸ ಈಶಾನಸ್ಸ ಭಗವಾನ್ ಶ್ರುತಿ: ಸ ಮಹೇಶ್ವರಸ್ಸ ಮಹಾದೇವ ಇತಿ ಇಂತೆಂದುದಾಗಿ, ಏಕಮೇವ ಅದ್ವಿತೀಯನಪ್ಪ ಸೋಮಧರನು, ಉಮಾಸಹವಾದ ಸೋಮನಿಂದ ವಾಯು, ಅಗ್ನಿ, ಪೃಥ್ವಿ, ರವಿ ಮೊದಲಾದ ಅಷ್ಟಮೂರ್ತಿಗಳು ದೇವರ್ಕಳು ಸುರಪ ಹರಿವಿರಿಂಚಿಗಳು ಜನಿಸಿದುದಕ್ಕೆ ಶ್ರುತಿ:ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾ ಪೃಥಿವ್ಯಾರ್ಜನಿತಾಗ್ನಿ ಸೂರ್ಯಸ್ಯ ಜನಿತೇಂದ್ರಸ್ಯ ಜನಿತಾಥ ವಿಷ್ಣೋಃ ಎಂದುದಾಗಿ, ತನ್ಮಹೇಶ್ವರಕೋಟ್ಯಂಶ ಬ್ರಹ್ಮವಿಷ್ಣುಸಮುದ್ಭವಂ ಋಷಯಃ ಕೃತವೋ ಕೋಟಿರ್ನಿಮಿಷೇಣ ಸಮುದ್ಭವಂ ಎಂದುದಾಗಿ, ಅಷ್ಟತನುವಿನೊಳಗಾದ ಜಗದ ರಚನೆ ಆರಿಂದ ರಚಿಸಿತ್ತು? ಅದ್ಥಿಕಾರ ಲಯ ಭೋಗಕ್ಕೆ ಅವನೊರ್ವ ಕರ್ತನು ಸೃಷ್ಟಿ, ಸ್ಥಿತಿ, ಸಂಹೃತಿ ತಿರೋಧಾನಾನುಗ್ರಹವಾವನಿಂದಹುದು; ಸರ್ವಜ್ಞತ್ವ ಕರ್ತೃತ್ವ ಅನಾದಿಬೋಧತ್ವ ಸ್ವತಂತ್ರತ್ವ ನಿತ್ಯತ್ವ ಅಲುಪ್ತಶಕ್ತಿತ್ವವಾವಗುಂಟು, ಆ ಶಿವನೆ ಘೃತಕಾಠಿಣ್ಯದಂತೆ, ನೀರಾಲಿಕಲ್ಲಂತೆ, ಸಕಲ ಸಕಲನಿಷ್ಕಲ ನಿಷ್ಕಲವಾದವನು, ಸೌರಾಷ್ಟ್ರ ಸೋಮೇಶ್ವರಲಿಂಗನೊಬ್ಬನೆ ಕಾಣಿರೆ.
--------------
ಆದಯ್ಯ
ಅರಿವು ಮರಹಳಿದುದಕ್ಕೇನು ದೃಷ್ಟ? ಭಾವ ಭ್ರಮೆಯಳಿಯದೆ ದೃಷ್ಟ. ಭಾವ ಭ್ರಮೆಯಳಿದುದಕ್ಕೇನು ದೃಷ್ಟ? ಮನದ ಸಂಚಲವಳಿದುದೆ ದೃಷ್ಟ. ಮನದ ಸಂಚಲವಳಿದುದಕ್ಕೇನು ದೃಷ್ಟ? ತನುವಿಕಾರವಳಿದುದೆ ದೃಷ್ಟ. ತನವಿಕಾರವಳಿವುದಕ್ಕೇನು ದೃಷ್ಟ? ಪರಮಸುಖವಿಂಬುಗೊಂಡುದೆ ದೃಷ್ಟ. ಪರಮಸುಖವಿಂಬುಗೊಂಡುದಕ್ಕೇನು ದೃಷ್ಟ? ಸೌರಾಷ್ಟ್ರಸೋಮೇಶ್ವರನೆಂಬ ನಿಜತತ್ವವಂಗವಾದುದೆ ದೃಷ್ಟ.
--------------
ಆದಯ್ಯ
ಅದ್ವೈತವನೋದಿ ಎರಡಳಿದೆವೆಂಬ ಅಣ್ಣಗಳು ನೀವು ಕೇಳಿರೆ. ಅದ್ವೈತಿಯಾದಡೆ ತನುವಿಕಾರ, ಮನದ ಸಂಚಲ, ಭಾವದ ಭ್ರಾಂತು, ಅರಿವಿನ ಮರಹು, ಇಂತೀ ಚತುರ್ವಿಧಂಗಳಲ್ಲಿ ವಿಧಿನಿಷೇಧಂಗಳಳಿದು, ಚಿದ್ಬ್ರಹ್ಮದೊಳವಿರಳಾತ್ಮಕವಾದುದು ಅದ್ವೈತ. ಅಂತಪ್ಪ ವಿಧಿನಿಷೇಧಂಗಳು ಹಿಂಗದೆ, ಲಿಂಗವನರಿಯದೆ, ವಾಗದ್ವೈತದಿಂದ ನುಡಿದು ಅದ್ವೈತಿ ಎನಿಸಿಕೊಂಬುದೆ ದ್ವೈತ. ಇಂತಪ್ಪ ದ್ವೈತಾದ್ವೈತಂಗಳಿಗೆ ಸಿಲುಕದ, ಹರಿಹರಬ್ರರ್ಹದಿಗಳನರಿಯದ ವೇದಶಾಸ್ತ್ರ ಆಗದು ಪುರಾಣ ಇತಿಹಾಸ ರಹಸ್ಯಛಂದಸ್ಸು ಅಲಂಕಾರ ನಿಘಂಟು ಶಬ್ದತರ್ಕಂಗಳೆಂಬ ಕುತರ್ಕಂಗಳಿಗೆ ನಿಲುಕದ ನಿತ್ಯನಿಜೈಕ್ಯ ನಿರುಪಮಸುಖಿಯಾಗಿ, ತಾನಿದಿರೆಂಬ ಭಿನ್ನಭಾವವಿಲ್ಲದ ಸ್ವಯಾದ್ವೈತಿ ತಾನೆ ಸೌರಾಷ್ಟ್ರ ಸೋಮೇಶ್ವರ.
--------------
ಆದಯ್ಯ
ಅಯ್ಯಾ, ನಿಶೆಯ ಮೊತ್ತ ಸವಿತನ ಕಣ್ಗೆ ತಮವನೀಯಬಲ್ಲುದೆ? ಅಯ್ಯಾ, ಉರಗನ ನೆರವಿ ಗರುಡಂಗೆ ವಿಷವೀಯಬಲ್ಲುದೆ? ಅಯ್ಯಾ, ಕರಿವಿಂಡು ಕೇಸರಿಗೆ ಭಯವೀಯಬಲ್ಲುದೆ? ಅಯ್ಯಾ, ತನುಮುಖದಿಂದ್ರಿಯಂಗಳೆಲ್ಲ ನಿರ್ಭಾವ ಕರಿಗೊಂಡ ನಿಜನಿಷ್ಪತ್ತಿಯನು ಅಳಿಯಬಲ್ಲವೆ ಹೇಳಾ ಸೌರಾಷ್ಟ್ರ ಸೋಮೇಶ್ವರಾರಿ
--------------
ಆದಯ್ಯ
ಅನವರತ ಲಿಂಗಭಾವದಲ್ಲಿ ನೆನಹು ನೆಲೆಗೊಂಡು, ಬಿಡುವಡಗಿ, ಪಂಚಾವಸ್ಥೆಯಲ್ಲಿ, ಎಲ್ಲಾ ವೇಳೆಯಲ್ಲಿ, ನಿಮ್ಮ ಅರಿವು ಮರೆಯದ ಘನಪರಿಣಾಮದ ಸುಯಿಧಾನಿ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ಅನಾದಿಯ ಲಿಂಗವ ಕಂಡು, ಆದಿಯ ಪ್ರಸಾದ ಕೊಂಡು, ಆ ಪ್ರಸಾದವಪ್ಪ ಪರಿಣಾಮದಲ್ಲಿ ಬೆಳಗುತಿರ್ಪನಯ್ಯಾ, ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ಅಂಗದ ಮೇಲಣ ಲಿಂಗ ಅಂಗದಲ್ಲಿ ಪೂರ್ಣವಾಗಿ ತನುಗುಣವಳಿಯಿತ್ತು. ಮನದ ಮೇಲಣ ಲಿಂಗ ಮನದಲ್ಲಿ ಪೂರ್ಣವಾಗಿ ನೆನಹಿನ ಸಂಕಲ್ಪ ಕೆಟ್ಟಿತ್ತು. ಪ್ರಾಣದ ಮೇಲಣ ಲಿಂಗ ಪ್ರಾಣದಲ್ಲಿ ಪೂರ್ಣವಾಗಿ ಪ್ರಾಣನ ಪ್ರಕೃತಿ ನಷ್ಟವಾಯಿತ್ತು. ಭಕ್ತಿ-ಜ್ಞಾನ ಲಿಂಗಸನ್ನಿಹಿತವಾಗಿರಬಲ್ಲರಾಗಿ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರು ಸ್ವತಂತ್ರರು.
--------------
ಆದಯ್ಯ
ಅಷ್ಟಭೋಗಂಗಳಭಿಲಾಷೆಯಿಂದಿಪ್ಪ ವೇಷಧಾರಿಗಳಿಗೆ ಶಿವಜ್ಞಾನ, ಶಿವಯೋಗ, ಶಿವಧ್ಯಾನಂಗಳಿಲ್ಲ ನೋಡಯ್ಯಾ. ಅಂತಪ್ಪ ಶಿವಜ್ಞಾನ ಶಿವಯೋಗ ಶಿವಧ್ಯಾನಗಳಿಲ್ಲದೆ ಲಿಂಗವ ಕಾಣಬಾರದು. ಅದಕ್ಕೆ ಶ್ರುತಿ: `ತೇ ಧ್ಯಾನಯೋಗಾನುಗತಾ ಅಪಶ್ಯನ್ ದೇವಾತ್ಮಶಕ್ತಿಂ ಸ್ವಗುಣೈರ್ನಿಗೂಢಾಂ, ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗವನರಿವಡೆ ಸ್ವಾನುಭಾವದಿಂದಲ್ಲದರಿಯಬಾರದು.
--------------
ಆದಯ್ಯ
ಅಹಂಕಾರ ಮಮಕಾರಂಗಳಲ್ಲಿ ಸಂದು, ತ್ರಿಗುಣದಲ್ಲಿ ಕೂಡಿ, ತಾಪತ್ರಯಂಗಳಲ್ಲಿ ಬೆಂದು, ಪಂಚಕ್ಲೇಶಂಗಳಿಂದ ಕುಗ್ಗಿ, ಅರಿಷಡ್ವರ್ಗಂಗಳಲ್ಲಿ ತಗ್ಗಿ, ಸಪ್ತವ್ಯಸನಂಗಳಲ್ಲಿ ಮುಗ್ಗಿ, ಅಷ್ಟಮದಂಗಳಲ್ಲಿ ನುಗ್ಗಿ, ಅಷ್ಟದಳದ ಗತಿಯಲ್ಲಿ ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದರುನೂರು ಗಂಧಸ್ವರಂಗಳ ಬಳಿವಿಡಿದು ಸುಳಿದು ತಿರು[ಗುವ] ಜೀವನ ಗತಿಗೆಡಿಸಿ ಸದ್ಭಾವದಿಂದ ಲಿಂಗಸಂಗಿಯಾಗಿರಬಲ್ಲ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.
--------------
ಆದಯ್ಯ
ಅಜಾಂಡ ಪಿಂಡಾಂಡ ಚಿದ್ಬ್ರಾಂಡವೆಂಬ ತ್ರಿಭಾಂಡದೊಳಗೆ ಸುರರು ನರರು ಮುಕ್ತರೆಂಬವರೆಲ್ಲಾ ಅಡಗಿದರಾಗಿ, ಅಖಂಡಿತ ಪರಿಪೂರ್ಣಭಾಂಡವೆ ತಾನೆಂದರಿದರಿವೇ ತಾನಾಗಿ ಸೌರಾಷ್ಟ್ರ ಸೋಮೇಶ್ವರಲಿಂಗನೆಂಬ ಲಿಂಗ ಬೇರಿಲ್ಲ.
--------------
ಆದಯ್ಯ
ಅಂದಿನವರು! ಇಂದಿನವರು! ಎಂಬ ಸಂದೇಹಿಗಳಿಗೆ ಸಂದೇಹ ಮುಂದುಗೊಂಡಿಪ್ಪುದು ನೋಡ! ಅಂದೊಂದು ಪರಿ, ಇಂದೊಂದು ಪರಿಯೆ? ಗುರುಲಿಂಗಜಂಗಮ ಅಂದೊಂದು ಪರಿ, ಇಂದೊಂದು ಪರಿಯೆ? ಪಾದೋದಕ ಪ್ರಸಾದ ಅಂದೊಂದು ಪರಿ, ಇಂದೊಂದು ಪರಿಯೆ? ಶರಣಲಿಂಗಸಂಬಂಧ ಅಂದೊಂದು ಪರಿ, ಇಂದೊಂದು ಪರಿಯೆ? ಅರಿವು ಆಚರಣೆ ಅಂದೊಂದು ಪರಿ, ಇಂದೊಂದು ಪರಿಯೆ? ಸ್ಥಲಕುಲಂಗಳು ಅಂದೊಂದು ಪರಿ, ಇಂದೊಂದು ಪರಿಯೆ? ಸೌರಾಷ್ಟ್ರ ಸೋಮೇಶ್ವರಲಿಂಗವು ಅಂದೊಂದು ಪರಿ, ಇಂದೊಂದು ಪರಿಯೆ?
--------------
ಆದಯ್ಯ
ಅಂಗದ ಮೇಲೆ ಶಿವಲಿಂಗಸಾಹಿತ್ಯವಿಲ್ಲದ ಅಂಗ ಅನೇಕ ಅಘೋರಪಾಪಕ್ಕೆ ಅವಕಾಶವಾಗಿಪ್ಪುದಯ್ಯಾ. ಇದಕ್ಕೆ ಶ್ರುತಿ: ``ಯಾ ತೇ ರುದ್ರ ಶಿವಾ ತನೂರಘೋರಪಾಪಕಾಶಿನೀ ಇದು ಕಾರಣ ಗುರುಕಾರುಣ್ಯವ ಪಡೆದು ಲಿಂಗಾನುಗ್ರಹಕನಾದ ಪ್ರಾಣಲಿಂಗಸಂಬಂಧಿಯೇ ಶಿವೈಕ್ಯನು. ಅಂತಪ್ಪ ಶಿವೈಕ್ಯಂಗೆ ಅಧರ್ಮವೇ ಧರ್ಮ, ವಿಷವೇ ಪಥ್ಯ, ಅರಿಯೇ ಮಿತ್ರರು. ಅಂದೆಂತೆದಡೆ: ಅರಿರ್ಮಿತ್ರಂ ವಿಷಂ ಪಥ್ಯಂ ಅಧರ್ಮೋ ಧರ್ಮತಾಂ ವ್ರಜೇತ್ ಪೂಜಿತೇ ಪಾರ್ವತೀನಾಥೇ ವಿಪರೀತೇ ವಿಪರ್ಯಯಃ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರನ ಶರಣರಿಗೆ ಸರಿಯಿಲ್ಲವಾಗಿ ಅಪ್ರತಿಮರು.
--------------
ಆದಯ್ಯ
ಅಂಗವೆ ಲಿಂಗ, ಲಿಂಗವೆ ಅಂಗವೆಂದೆಂಬರು. ಅಂಗವು ಲಿಂಗವೆ? ಲಿಂಗಕ್ಕೆ ಅಂಗವುಂಟೆ? ಅದು ತಾ ನಾಮ ರೂಪು ಕ್ರೀಯೆ ಇಲ್ಲವಾಗಿ. ಮಾತು ಮನ ನಿಲುಕದ ಲಿಂಗವು ಅಂಗವಪ್ಪುದು ಮಿಥ್ಯ ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅಸಮಾನಾಢ್ಯರಪ್ರತಿಮಸ್ವತಂತ್ರ ಸ್ವಲೀಲರಪ್ಪ ಶರಣರೆಂತಿಪ್ಪರಯ್ಯಾ? ಕಡವರವ ನುಂಗಿದ ಪೊಡವಿಯಂತೆ, ರತ್ನವ ನುಂಗಿದ ರತ್ನಾಕರನಂತೆ, ಬೆಳಗ ನುಂಗಿದ ಬಯಲಂತೆ, ಬಣ್ಣವ ನುಂಗಿದ ಚಿನ್ನದಂತೆ, ತೈಲವ ನುಂಗಿದ ತಿಲದಂತೆ, ಪ್ರಭೆಯ ನುಂಗಿದ ಪಾಷಾಣದಂತೆ, ವೃಕ್ಷವ ನುಂಗಿದ ಬೀಜದಂತೆ, ಪ್ರತಿಬಿಂಬವ ನುಂಗಿದ ದರ್ಪಣದಂತಿಪ್ಪರಯ್ಯಾ. ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣರಲ್ಲಿ ನೀವಿಹ ಭೇದವ ನೀವೆ ಬಲ್ಲಿರಿ, ಆನೆತ್ತ ಬಲ್ಲೆನಯ್ಯಾ?
--------------
ಆದಯ್ಯ
ಅಯ್ಯಾ, ನಿಮ್ಮನೆನ್ನ ಕರಸ್ಥಲದಲ್ಲಿ ಧರಿಸಿದಡೆ ನೀವೆನ್ನ ಮನಸ್ಥಲವನೆಡೆಗೊಂಡುದ ನಾನೇನೆಂಬೆನಯ್ಯಾ? ಅಯ್ಯಾ, ನಿಮ್ಮನೆನ್ನ ಪಂಚಮುಖದಲ್ಲಿ ಧರಿಸಿದಡೆ ನೀವೆನ್ನ ಸರ್ವಾಂಗವನವಗ್ರಹಿಸಿಕೊಂಡುದ ನಾನೇನೆಂಬೆನಯ್ಯಾ? ಅಯ್ಯಾ, ನಿಮ್ಮನೆನ್ನ ಅರಿವಿನಲ್ಲಿ ಬೈಚಿಟ್ಟಡೆ ನೀವೆನ್ನ ನಿರ್ಭಾವದಲ್ಲಿ ನೆಲೆಗೊಂಡುದ ನಾನೇಂಬೆನಯ್ಯಾ? ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಮುಟ್ಟಿ ಹಮ್ಮುಗೆಟ್ಟುದ ನಾನೇನೆಂಬೆನಯ್ಯಾ?
--------------
ಆದಯ್ಯ

ಇನ್ನಷ್ಟು ...