ಅಥವಾ

ಒಟ್ಟು 489 ಕಡೆಗಳಲ್ಲಿ , 1 ವಚನಕಾರರು , 489 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂತಸಾಧಕಂಗಳ ಕಲಿತ ಆಯಗಾರನು, ಅಭ್ಯಾಸಿಗಳಿಗೆ ಸಾಧಕವ ಕಲಿಸುವನಲ್ಲದೆ ತಾ ಮರಳಿ ಅಭ್ಯಾಸವ ಮಾಡುವನೆ ಅಯ್ಯಾ ? ಅಖಂಡಪರಿಪೂರ್ಣಬ್ರಹ್ಮವನೊಡಗೂಡಿದ ಮಹಾಘನ ಪರಮ ಶಿವಶರಣನು, ಸತ್‍ಕ್ರಿಯವನಾಚರಿಸಿದಡೂ ಲೋಕೋಪಕಾರವಾಗಿ ಆಚರಿಸುವನಲ್ಲದೆ ಮರಳಿ ತಾನು ಫಲಪದದ ಮುಕ್ತಿಯ ಪಡೆವೆನೆಂದು ಆಚರಿಸುವನೆ ಅಯ್ಯಾ ? ಇದು ಕಾರಣ, ನಿಮ್ಮ ಶರಣನು ಎಷ್ಟು ಸತ್ಕ್ರಿಯವನಾಚರಿಸಿದಡು ಘೃತಸೋಂಕಿದ ರಸನೆಯಂತೆ, ಕಾಡಿಗೆ ಹತ್ತಿದ ಆಲಿಯಂತೆ, ಹುಡಿ ಹತ್ತದ ಗಾಳಿಯಂತೆ ನಿರ್ಲೆಪನಾಗಿರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ದೇಹವೆಂಬ ದೇಗುಲದೊಳಗೆ ಭಾವಸಿಂಹಾಸನವ ಮಾಡಿ, ಜೀವದೊಡೆಯನ ಪೂಜಿಸಬಲ್ಲಡೆ ದೇವರಿಗೆ ದೇವರೆಂಬೆನಯ್ಯಾ ಅಖಂಡೇಶ್ವರಾ !
--------------
ಷಣ್ಮುಖಸ್ವಾಮಿ
ಶಿವಶಿವಾ, ಎನ್ನ ಮನವು ನಿಮ್ಮ ನೆನೆಯಲೊಲ್ಲದೆ ಅನ್ಯಕ್ಕೆ ಹರಿವುತಿರ್ಪುದು ನೋಡಾ. ಗುರು ಚರ ಲಿಂಗದ ಸೇವೆಯೆಂದೊಡೆ ಹಿಂದುಳಿವುತಿರ್ಪುದು ನೋಡಾ. ಅನ್ಯರ ಒಡವೆಯಾದ ಹೊನ್ನು ಹೆಣ್ಣು ಮಣ್ಣೆಂದೊಡೆ ಮುಂದುವರಿದು ಓಡುತಿರ್ಪುದು ನೋಡಾ. ಈ ಮನದ ಉಪಟಳವು ಘನವಾಯಿತ್ತು. ಇನ್ನೇನು ಗತಿಯಯ್ಯ ಎನಗೆ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಗ್ನಿಯ ಸಂಗದಿಂದೆ ಕಾನನ ಕೆಟ್ಟಂತೆ, ಜ್ಯೋತಿಯ ಸಂಗದಿಂದ ಕತ್ತಲೆ ಕೆಟ್ಟಂತೆ, ಪರುಷದ ಸಂಗದಿಂದ ಕಬ್ಬಿಣ ಕೆಟ್ಟಂತೆ, ಲಿಂಗಾನುಭಾವಿಗಳ ಸಂಗದಿಂದೆ ಎನ್ನ ಹುಟ್ಟು ಹೊಂದುಗಳು ನಷ್ಟವಾಗಿ ಕೆಟ್ಟುಹೋದುವು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಂಗದ ಗುಣವಳಿಯದೆ, ಪ್ರಾಣದ ಪ್ರಪಂಚು ಹಿಂಗದೆ, ಭಾವದ ಭ್ರಮೆಯುಡುಗದೆ, ಮನದ ಮಾಯವಡಗದೆ, ಆತ್ಮನ ಅಹಂಮಮತೆ ಕೆಡದೆ, ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ ಕಾಕುಮಾನವರನೇನೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಭಕ್ತರಾದವರು ತ್ರಿಕಾಲದಲ್ಲಿ ಹರಸ್ಮರಣೆಯಲ್ಲದೆ ಹರಿಯೆಂದು ನುಡಿಯಲಾಗದು. ಹರಿ ಶಬ್ದವ ಕೇಳಲಾಗದು, ಹರಿಯ ರೂಪವ ನೋಡಲಾಗದು. ಅದೇನು ಕಾರಣವೆಂದೊಡೆ : ಪೂರ್ಣಾಯುಷ್ಯವು, ವಿಮಲಮತಿಯು, ಸತ್ಕೀರ್ತಿಯು, ಮಹಾಬಲವು, ಕೆಟ್ಟು ಹೋಗುತ್ತಿಹುದು ನೋಡಾ ! ಅದೆಂತೆಂದೊಡೆ :ಬ್ರಹ್ಮಾಂಡಪುರಾಣೇ ``ನ ಪ್ರದೋಷೇ ಹರಿಂ ಪಶ್ಯೇತ್ ಯದಿ ಪಶ್ಯೇತ್ ಪ್ರಮಾದತಃ | ಚತ್ವಾರಿ ತಸ್ಯ ನಶ್ಯಂತಿ ಆಯುಃ ಪ್ರಜ್ಞಾ ಯಶೋ ಬಲಮ್ ||'' ಎಂದುದಾಗಿ, ಸತ್ತು ಹುಟ್ಟುವ ಹರಿಗೆ ಇನ್ನೆತ್ತಣ ದೇವತ್ವ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಹಿಂದಣಜನ್ಮದ ಸಂಸಾರವ ಮರೆದು, ಮುಂದಣ ಭವಬಂಧನಂಗಳ ಜರಿದು, ಸಂದೇಹ ಸಂಕಲ್ಪಗಳ ಹರಿದು, ನಿಮ್ಮ ಅವಿರಳಭಕ್ತಿಯ ಬೆಳಗಿನಲ್ಲಿ ಬೆರೆದು ಓಲಾಡುವ ಮಹಾಮಹಿಮರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನು ಸಮಾದ್ಥಿಯೋಗವೆಂತೆಂದೊಡೆ : ಸುಖದುಃಖ ಪುಣ್ಯಪಾಪ ಪೂಜಾಪೂಜಂಗಳು ಸಂಕಲ್ಪವಿಕಲ್ಪಂಗಳೇನೂ ತೋರದೆ, ತಾನೆಂಬ ಅಹಂಭಾವವಳಿದು ಅಖಂಡಪರಿಪೂರ್ಣಮಾದ ಪರಬ್ರಹ್ಮದಲ್ಲಿ ಕೂಡಿದ ಸಮರಸಭಾವವೇ ಸಮಾದ್ಥಿಯಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಗದೊಳಹೊರಗೆಲ್ಲ ತೆರಹಿಲ್ಲದೆ ಸಂಭ್ರಮಿಸಿ ತುಂಬಿಕೊಂಡಿರ್ಪ ಪರವಸ್ತುವ ಆಹ್ವಾನಿಸಿ ಕರೆದು ವಿಸರ್ಜಿಸಿ ಬಿಡುವುದಕ್ಕೆ ಇಂಬುಂಟೇನೋ ಮರುಳೆ ? ಇಂತೀ ಅಖಂಡ ಪರಿಪೂರ್ಣವಾದ ಪರಬ್ರಹ್ಮದ ನಿಲವನರಿಯದೆ ಖಂಡಿತಬುದ್ಧಿಯಿಂದ ಕಲ್ಪಿಸಿ ಪೂಜಿಸಿ ಕರ್ಮದ ಬಲೆಯಲ್ಲಿ ಸಿಲ್ಕಿ ಕಾಲಂಗೆ ಗುರಿಯಾಗಿ ಹೋದವರ ಕಂಡು ಬೆರಗಾದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವಿನ ವಿಕಾರದ ಕತ್ತಲೆಯಲ್ಲಿ ಸಿಲ್ಕಿ, ಕಂಗೆಟ್ಟು ಕಳವಳಿಸಿ ತೊಳಲಿ ಬಳಲಿದೆನಯ್ಯ. ಮನದ ವಿಕಾರದ ಮರವೆಯಲ್ಲಿ ಸಿಲ್ಕಿ, ಮಣ್ಣುಮಸಿಯಾಗಿ ಬಣ್ಣಗೆಟ್ಟೆನಯ್ಯ. ಈ ತನುಮನದ ವಿಕಾರವ ಮಾಣಿಸಿ, ನಿಮ್ಮ ಭಕ್ತಿಯ ವಿಕಾರದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವಿರಕ್ತನೆನಿಸುವಂಗಾವುದು ಚಿಹ್ನೆವೆಂದೊಡೆ : ವಿಷಯವಿಕಾರವ ಸುಟ್ಟಿರಬೇಕು. ಬಯಕೆ ನಿರ್ಬಯಕೆಯಾಗಿರಬೇಕು. ಸ್ತ್ವರಜತಮವೆಂಬ ತ್ರೈಗುಣಂಗಳನಿಟ್ಟೊರಸಿರಬೇಕು. ಅದೆಂತೆಂದೊಡೆ : ``ವಿಕಾರಂ ವಿಷಯಾತ್‍ದೂರಂ ರಕಾರಂ ರಾಗವರ್ಜಿತಂ | ತಕಾರಂ ತ್ರೈಗುಣಂ ನಾಸ್ತಿ ವಿರಕ್ತಸ್ಯ ಸುಲಕ್ಷಣಂ ||'' ಇಂತಪ್ಪ ವಿರಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇಮ್ಮನ ಭಕ್ತಂಗೆ ಕರ್ಮದ ವಿದ್ಥಿ ಕಾಡುತ್ತಿರ್ಪುದು ನೋಡಾ ! ಆ ಇಮ್ಮನವಳಿದು ಒಮ್ಮನವಾಗಿ ನಿಮ್ಮ ನರಿತರೆ ಕರ್ಮದವಿದ್ಥಿ ಬಿಟ್ಟೋಡಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಾಸಿಕಾಗ್ರದಿಂ ಮುಂದೆ ನಾಲ್ಕಂಗುಲಪ್ರಮಾಣದಲ್ಲಿ ನೀಲವರ್ಣಮಾದಾಕಾಶವನು, ಆರಂಗುಲದಲ್ಲಿ ಧೂಮವರ್ಣಮಾದ ವಾಯುವನು, ಎಂಟಂಗುಲದಲ್ಲಿ ರಕ್ತವರ್ಣಮಾದ ಅಗ್ನಿಯನು, ಹತ್ತಂಗುಲದಲ್ಲಿ ತೆರೆಗಳ ವರ್ಣಮಾದ ಅಪ್ಪುವನು, ಹನ್ನೆರಡಂಗುಲದಲ್ಲಿ ಹೊಂಬಣ್ಣಮಾದ ಪೃಥ್ವಿಯನು ಲಕ್ಷಿಪುದೆ ಬಹಿರ್ಲಕ್ಷ್ಯ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವೇದಂಗಳು ನಿಮ್ಮ ಭೇದಿಸಲರಿಯವು ನೋಡಾ ! ಆಗಮಂಗಳು ನಿಮ್ಮ ಹೊಗಳಲರಿಯವು ನೋಡಾ ! ಶ್ರುತಿತತಿಗಳು ನಿಮ್ಮ ಸ್ತುತಿಸಲರಿಯವು ನೋಡಾ ! ಶಾಸ್ತ್ರಂಗಳು ನಿಮ್ಮ ಸಾದ್ಥಿಸಲರಿಯವು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶ್ರೀಗುರುವೇ ತಂದೆ ತಾಯಿಗಳಲ್ಲದೆ, ಬೇರೆ ಮತ್ತೆ ತಂದೆತಾಯಿಗಳಿಲ್ಲವಯ್ಯ ಎನಗೆ. ಶಿವಶರಣರೇ ಬಂಧುಬಳಗವಲ್ಲದೆ, ಬೇರೆ ಮತ್ತೆ ಬಂಧುಬಳಗವಿಲ್ಲವಯ್ಯ ಎನಗೆ. ಶಿವಕುಲವೆ ಮಹಾಕುಲವಲ್ಲದೆ, ಬೇರೆ ಮತ್ತೆ ಕುಲವಿಲ್ಲವಯ್ಯ ಎನಗೆ. ಅಖಂಡೇಶ್ವರಾ, ನೀವೆನ್ನ ಕುಲದೈವ ಮನೆ ದೈವವಲ್ಲದೆ ಬೇರೆ ಮತ್ತೆ ಕುಲದೈವ ಮನೆದೈವ ಇಲ್ಲವಯ್ಯ ಎನಗೆ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->