ಅಥವಾ

ಒಟ್ಟು 42 ಕಡೆಗಳಲ್ಲಿ , 14 ವಚನಕಾರರು , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತು ಮಾಣಿಕ್ಯವ ನುಂಗಿ, ಜ್ಯೋತಿ ಕತ್ತಲೆಯ ನುಂಗಿ ಆಳು ಆಯ್ದನ ನುಂಗಿ ಉಗುಳಲಿನ್ನೆಂತೊರಿ ಮಥನವಿಲ್ಲದ ಸಂಗ, ಮರಣವಿಲ್ಲದ ಉದಯ, ಅಳಲಿಲ್ಲದ ಶೋಕ ಸಮರಸದಲ್ಲಿ! ಉದಯದ ಬೆಳಗನು ಮದಗಜ ಒಳಕೊಂಡು ಮಾವತಿಗನ ನುಂಗಿ ಉಗುಳದಲ್ಲಾ! ಸದಮದ ಭರಿಕೈಯೊಳಗೆ ಈರೇಳು ಭುವನವನು ಒದರಿ ಹಾಯ್ಕಿ ತಾನೆ ನಿಂದುದಲ್ಲಾ! ಸದಮಲಜಾÕನಸಂಪನ್ನ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಸ್ವಯವಾಯಿತ್ತು
--------------
ಚನ್ನಬಸವಣ್ಣ
ಸೂರ್ಯನ ಉದಯ ತಾವರೆಗೆ ಜೀವಾಳ, ಚಂದ್ರಮನುದಯ ನೆ್ದುಲೆಗೆ ಜೀವಾಳ. ಕೂಪರಠಾವಿನಲ್ಲಿ ಕೂಟ ಜೀವಾಳವಯ್ಯಾ, ಒಲಿದ ರಾವಿನಲ್ಲಿ ನೋಟ ಜೀವಾಳವಯ್ಯಾ. ಕೂಡಲಸಂಗನ ಶರಣರ ಬರವೆನಗೆ ಪ್ರಾಣ ಜೀವಾಳವಯ್ಯಾ. 367
--------------
ಬಸವಣ್ಣ
ಉದಯ ತತ್ಕಾಲವೆ ಅಸ್ತಮಯ, ಅಸ್ತಮಯ ತತ್ಕಾಲವೆ ಉದಯ. ಮಧುವೆ ವಿಷ, ವಿಷವೆ ಮಧು. ಸದರಿವೆರಡಕ್ಕೆ ಮನಸ್ಸಿನ ಸಂದೇಹ ಮಾತ್ರ. ಅದು ಕಾರಣ ಮಧುರ ಸಮುದ್ರ, ಲವಣ ಸಮುದ್ರ, ಕ್ಷೀರ ಸಮುದ್ರ, ದದ್ಥಿ ಸಮುದ್ರ ಚತುರಂಗದೊಳಿರ್ದ ಸಪ್ತಸಮುದ್ರಕ್ಕೆ ಏಕೋಮೂಲ್ಯ ಬ್ಥಿನ್ನ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಉದಯ, ಮಧ್ಯಾಹ್ನ, ಅಸ್ತಮಯ, ಕತ್ತಲೆ ಬೆಳಗು, ದಿನ ವಾರ ಲಗ್ನತಿಥಿ ಮಾಸ ಸಂವತ್ಸರ ಹೋಗುತ್ತ ಬರುತ್ತಲಿವೆ. ಇವ ನೋಡಿದವರೆಲ್ಲ ಇದರೊಳಗೆ ಹೋಗುತ್ತ ಬರುತ್ತ ಇದ್ದಾರೆ. ಜಗಕ್ಕೆ ಇವೀಗ ಇಷ್ಟವಾಗಿಪ್ಪವು. ಎನ್ನ ದೇವಂಗೆ ಇವೊಂದೂ ಅಲ್ಲ. ದಿನಕಾಲ ಯುಗಜುಗ ಪ್ರಳಯಕ್ಕೆ ಹೊರಗಾದ ಆ ದೇವನ, ಅಂಗವಿಸಿ ಮುಟ್ಟಿ ಹಿಡಿದ ಕಾರಣ, ಎಮ್ಮ ಶರಣರು ಪ್ರಳಯಕ್ಕೆ ಹೊರಗಾದರು. ಇದನರಿದು, ಅಂತಪ್ಪ ಶರಣರ ಪಾದವ ನಂಬಿ, ಕೆಟ್ಟು ಬಟ್ಟಬಯಲಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಅಧರ ತಾಗಿದ ರುಚಿಯ, ಉದರ ತಾಗಿದ ಸುಖವ, ಲಿಂಗಾರ್ಪಿತವ ಮಾಡಿದಡೆ ಕಿಲ್ಬಿಷ ನೋಡಿರೆ. ಓಗರ ಪ್ರಸಾದವಲ್ಲ; ಪ್ರಸಾದ ಅರ್ಪಿತವಲ್ಲ. ಇದನರಿದ ಶರಣಂಗೆ ಆಚಾರವಿಲ್ಲ, ಆಚಾರವಿಲ್ಲದ ಶರಣಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ನಿಲವು; ಶಿವಸಂಪತ್ತಿನಲಾದ ಉದಯ, ವಿಪರೀತ ಸುಳುಹು ! ಪ್ರಕಟಸಂಸಾರದ ಬಳಕೆಯ ಹೊಡಕಟ್ಟಿ ಹಾಯ್ದು ನಿಬ್ಬೆರಗು ಎಸೆವುದು ಅರಿವಿನ (ಎರವಿನ?) ಘಟದಲ್ಲಿ ! ಅರ್ಪಿಸಿದ ಪ್ರಸಾದವನು ಭೇದದಿಂದ ರುಚಿಸುವನಲ್ಲ ಕೇಳಿರಯ್ಯಾ. ದಿಟವ ಬಿಟ್ಟು ಸಟೆಯಲ್ಲಿ ನಡೆಯ ನೋಡಾ. ಇಲ್ಲದ ಲಿಂಗವನುಂಟುಮಾಡಿ ಪೂಜಿಸುವ, ಬರಿಯ ಬಣ್ಣಕರೆಲ್ಲ ನೀವು ಕೇಳಿರೆ. ನೀವು ಪೂಜಕರಪ್ಪಿರಲ್ಲದೆ, ಗುಹೇಶ್ವರಲಿಂಗವಿಲ್ಲೆಂಬ ಶಬುದ ಸತ್ತು ಹುಟ್ಟುವರಿಗೆಲ್ಲಿಯದೊ ?
--------------
ಅಲ್ಲಮಪ್ರಭುದೇವರು
ಉದಯ ಕಾಲ ಮಜ್ಜನಕ್ಕೆರೆಯಲಿಕ್ಕಾಗಿ, ಉದಯ (ಉತ್ಪತ್ತಿ) ಕಾಲಕರ್ಮ ಕೆಡಲಿಕ್ಕಾಗಿ (ಕೆಡುವುದಾಗಿ) ಮಧ್ಯಾಹ್ನಕಾಲ ಮಜ್ಜನಕ್ಕೆರೆಯಲಿಕ್ಕಾಗಿ, ವರ್ತಮಾನ (ಸ್ಥಿತಿ)ಕಾಲಕರ್ಮ ಕೆಡಲಿಕ್ಕಾಗಿ (ಕೆಡುವುದಾಗಿ) ಅಸ್ತಮಾನಕಾಲ ಮಜ್ಜನಕ್ಕೆರೆಯಲಿಕ್ಕಾಗಿ, ಲಯಕಾಲ ಕರ್ಮವು ಕೆಡಲಿಕ್ಕಾಗಿ (ಕೆಡುವುದಾಗಿ) ಹೊತ್ತಾರಿನ ಪೂಜೆ ಬ್ರಹ್ಮಂಗೆ, ಮಧ್ಯಾಹ್ನದ ಪೂಜೆ ವಿಷ್ಣುವಿಂಗೆ, ಅಸ್ತಮಾನದ ಪೂಜೆ ರುದ್ರಂಗೆ. ಇಂತೀ ತ್ರಿವಿಧಕಾಲ ಮಜ್ಜನಕ್ಕೆರೆದವ ಭವಭಾರಿ ಇಂತು ತ್ರಿವಿಧಕಾಲ ನಾಸ್ತಿಯಾಗಿ ಮಜ್ಜಕ್ಕೆರೆಯಬಲ್ಲನಾಗಿ ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣ ಭವಕ್ಕೆ ಬಾರ.
--------------
ಚನ್ನಬಸವಣ್ಣ
ನಿಶ್ಚಿಂತ ನಿರಾಕಾರ ಪರಂಜ್ಯೋತಿ ಪರಮಪ್ರಕಾಶ ಆನಂದ ಸ್ವರೂಪನೆ ಜಂಗಮಲಿಂಗ. ಚೈತ್ಯರೂಪವೆ ಲಿಂಗಜಂಗಮ, ಸತ್ವರೂಪವೆ ಗುರುಲಿಂಗ. ಸತ್ತು ಚಿತ್ತಾನಂದವೆ ಸದ್ಭಕ್ತನಲ್ಲಿ ಉದಯ ಇಂತಿವರ ನೆಲೆಯ ವೇದಾಗಮ ಶಾಸ್ತ್ರ ಪುರಾಣಗಳು ಕಾಯದೆ ವಾಗತೀತಃ ಮನೋತೀತಃ ಭಾವಾತೀತಃ ಪರಃ ಶಿವಃ ಸರ್ವಶೂನ್ಯ ನಿರಾಕಾರಂ ನಿತ್ಯತ್ವಂ ಪರಮಂ ಪದಂ || ಎಂದುದಾಗಿ, ಇಂತಪ್ಪ ಶ್ರುತಿ ಒಳ ಹೊರಗಿಪ್ಪ ಜಂಗಮಲಿಂಗವೆ ಜಗತ್ಪಾವನ ಜಂತು ಜಯ ಶರಣಾಗು. ಬಸವಪ್ರಿಯ ಕೂಡಲಸಂಗಮದೇವಾ ಮಾಂ ತ್ರಾಹಿ ತ್ರಾಹಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
ಜಗತ್‍ಸೃಷ್ಟನಹ ಅಜನ ಕೊಂಬು ಮುರಿಯಿತ್ತು. ಧರೆಯ ಚಂದ್ರಸೂರ್ಯರಿಬ್ಬರೂ ನೆಲಕ್ಕೆ ಬಿದ್ದರಲ್ಲಾ ! ಉದಯ ನಿಂದಡೆ ಅಸ್ತಮಾನವಹುದು. ಊರು ಬೆಂದು ಉಲುಹಳಿದುದು. _ಇದೇನು ಸೋಜಿಗವೊ ! ದೇವ ಸತ್ತ ದೇವಿ ಕೆಟ್ಟಳು, ಆನು ಬದುಕಿದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉದಯ ಮಧ್ಯಾಹ್ನ ಅಸ್ತಮಾನವೆಂಬ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬರು. ಉದಯವಾವುದು ? ಮಧ್ಯಾಹ್ನವಾವುದು ? ಅಸ್ತಮಾನವಾವುದು ? ಬಲ್ಲವರು ನೀವು ಹೇಳಿರೆ. ಕಾಯದ ಉದಯವೊ ? ಕಾಯದ ಮಧ್ಯಾಹ್ನವೊ ? ಕಾಯದ ಅಸ್ತಮಾನವೊ ? ಕಾಯದ ಉದಯ ಬಲ್ಲಾತ ಕರ್ಮಿ, ಕಾಯದ ಮಧ್ಯಾಹ್ನವ ಬಲ್ಲತ ಪ್ರಪಂಚಿ, ಕಾಯದ ಅಸ್ತಮಾನವ ಬಲ್ಲಾತ ವಿರಕ್ತ. ಜೀವದ ಉದಯವೊ ? ಜೀವದ ಮಧ್ಯಾಹ್ನವೊ ? ಜೀವದ ಅಸ್ತಮಾನವೊ ? ಜೀವದ ಉದಯವ ಬಲ್ಲಾತ ಜ್ಞಾನಿ, ಜೀವದ ಮಧ್ಯಾಹ್ನವ ಬಲ್ಲಾತ ಜಾತಿಸ್ಮರ, ಜೀವದ ಅಸ್ತಮಾನ ಬಲ್ಲಾತ ಜೀವನ್ಮುಕ್ತ ಲಿಂಗದ ಉದಯ, ಲಿಂಗದ ಮಧ್ಯಾಹ್ನ, ಲಿಂಗದ ಅಸ್ತಮಾನ- ಇಂತೀ ತ್ರಿಕಾಲದಲ್ಲಿ ಪ್ರಾಣಲಿಂಗಕ್ಕೆ ಮಜ್ಜನಕ್ಕೆರೆಯಬಲ್ಲಡೆ ಕೂಡಲಚೆನ್ನಸಂಗಮದೇವರಲ್ಲಿ ಆತನು ಅನವರತ ಲಿಂಗಾರ್ಚನಾಪರನು.
--------------
ಚನ್ನಬಸವಣ್ಣ
ಉದಯ ಮಧ್ಯಾಹ್ನ ಅಸ್ತಮಾನ-ತ್ರಿಕಾಲದಲ್ಲಿ ಪತ್ರೆ ಪುಷ್ಪ ಅಗ್ಗಣಿಯ ತಂದು ಮಜ್ಜನಕ್ಕೆ ನೀಡೆಹೆನೆಂದಡೆ ನೆನೆಯದು, ಬಲಿಯದು, ಗರಿಗಟ್ಟದಯ್ಯಾ. ನೀರ ತೋರಿದಡೆ ಒಂದು ಹನಿಯನೂ ಮುಟ್ಟದು. ನಿಮ್ಮ ಲಿಂಗದ ಪೂಜೆ ನಮ್ಮ ಜಂಗಮದ ಉದಾಸೀನ- ಇದ ಕಂಡು ನಾ ಬೆರಗಾದೆ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸಕಲ ಲೋಕಾದಿಲೋಕಂಗಳು ಉದಯ, ಮಧ್ಯಾಹ್ನ, ಸಾಯಂಕಾಲ ಪರಿಯಂತರವು ಒಡಲೋಪಾಧಿಯ ಚಿಂತೆಯಿಂದ ತಾಪತ್ರಯಾಗ್ನಿಯಲ್ಲಿ ಬೇಯುತ್ತಿರ್ಪರು ನೋಡಾ. ಅದೆಂತೆಂದೊಡೆ: ಉದಯಕಾಲಕ್ಕೆ ಹೋರಾಟದ ಚಿಂತೆ, ಮಧ್ಯಾಹ್ನಕಾಲಕ್ಕೆ ಅಶನದ ಚಿಂತೆ, ಸಾಯಂಕಾಲಕ್ಕೆ ವ್ಯಸನದ ಚಿಂತೆ, ಇಂತೀ ತ್ರಿವಿಧ ವ್ಯಸನದಲ್ಲಿ ಮನಮಗ್ನವಾದ ಪ್ರಾಣಿಗಳಿಗೆ ಶಿವಜ್ಞಾನವೆಲ್ಲಿಯದಯ್ಯಾ? ಇಂದಿನ ಚಿಂತೆಯ ಮಾಡುವರೆಲ್ಲ ಹಂದಿಗಳು. ನಾಳಿನ ಚಿಂತೆಯ ಮಾಡುವರೆಲ್ಲ ನಾಯಿಗಳು. ಅದೆಂತೆಂದೊಡೆ: ನೀ ಹುಟ್ಟದ ಮುನ್ನವೆ ತಾಯಿಗರ್ಭದಲ್ಲಿ ನವಮಾಸ ಪರಿಯಂತರವು ನಿನಗೆ ಆಹಾರವ ಕೊಟ್ಟವರಾರು ಹೇಳಾ ಮರುಳೆ? ಅಖಂಡತಂಡ ಶಿಲೆಯೊಳಗಿನ ಮಂಡೂಕಕ್ಕೆ ಆಹಾರವ ಕೊಟ್ಟು ಸಲಹಿದವರಾರು ಹೇಳಾ ಮರುಳೆ? ಕಟ್ಟಿಗಿಯೊಳಗಿನ ಭೃಂಗಕ್ಕೆ ಮಲೆಗಳ ಕೊಟ್ಟು ಸಲಹಿದವರಾರು ಹೇಳಾ ಮರುಳೆ? ಇರುವೆ ಮೊದಲು ಆನೆ ಕಡೆ ಎಂಬತ್ತು ನಾಲ್ಕುಲಕ್ಷ ಜೀವರಾಶಿಯ ಗರ್ಭದಲ್ಲಿ ಹುಟ್ಟಿ ಹುಟ್ಟಿ ಬರುವಲ್ಲಿ ನಿನಗೆ ಆಹಾರವ ಕೊಟ್ಟು ರಕ್ಷಣವ ಮಾಡಿದವರಾರು ಹೇಳಾ ಮರುಳೆ? ಇಂತೀ ಸರ್ವಲೋಕಾದಿಲೋಕಂಗಳಿಗೆ ಶಿವನೇ ಕರ್ತನೆಂದು ತಿಳಿದು ನೋಡಾ ಮರುಳೆ! ಇಂತಪ್ಪ ಯುಕ್ತಿವಿಚಾರದ ಸುಜ್ಞಾನವಿಲ್ಲದೆ ಬರಿಯ ಒಡಲ ಚಿಂತೆಯಲ್ಲಿ ಹೊತ್ತುಗಳೆದು ಸತ್ತು ಹೋಗುವ ಹೇಸಿ ಮೂಳರ ಕಂಡು ನಾಚಿದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ||4
--------------
ಕಾಡಸಿದ್ಧೇಶ್ವರ
ಇಂತಪ್ಪ ಪ್ರಣಮಮಂತ್ರಸಂಬಂಧವನು ಸ್ವಾನುಭಾವಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಬೇಕಲ್ಲದೆ, ಭಿನ್ನ ಜ್ಞಾನಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಲಾಗದು. ಅದೇನು ಕಾರಣವೆಂದಡೆ: ದ್ವಾದಶ ರುದ್ರಾಕ್ಷಿಮಾಲೆಯಂ ಮಾಡಿ, ಆ ದ್ವಾದಶ ರುದ್ರಾಕ್ಷಿಗೆ ದ್ವಾದಶಪ್ರಣಮವ ಸಂಬಂಧಿಸಿ, ಶಿಖಾರುದ್ರಾಕ್ಷಿಗೆ ನಿರಂಜನ ಅವಾಚ್ಯಪ್ರಣವವೆಂಬ ಹಕಾರ ಪ್ರಣಮವ ಸಂಬಂಧಿಸಿ, ಉದಯ ಮಧ್ಯಾಹ್ನ ಸಾಯಂಕಾಲವೆಂಬ ತ್ರಿಕಾಲದಲ್ಲಿ ಸ್ನಾನವ ಮಾಡಿ, ಏಕಾಂತಸ್ಥಾನದಲ್ಲಿ ಉತ್ತರವಾಗಲಿ ಪೂರ್ವವಾಗಲಿ ಉಭಯದೊಳಗೆ ಆವುದಾನೊಂದು ದಿಕ್ಕಿಗೆ ಮುಖವಾಗಿ ಶುಭ್ರವಸ್ತ್ರವಾಗಲಿ, ಶುಭ್ರರೋಮಶಾಖೆಯಾಗಲಿ, ಶುಭ್ರ ರೋಮಕಂಬಳಿಯಾಗಲಿ, ತೃಣದಾಸನವಾಗಲಿ, ನಾರಾಸನವಾಗಲಿ, ಇಂತೀ ಪಂಚಾಸನದೊಳಗೆ ಆವುದಾನೊಂದು ಆಸನ ಬಲಿದು, ಮೂರ್ತವ ಮಾಡಿ, ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಆ ರುದ್ರಾಕ್ಷಿಮಾಲೆಗೆ ವಿಭೂತಿ ಅಗ್ಗಣಿ ಪತ್ರಿಯ ಧರಿಸಿ, ತರ್ಜನ್ಯವಾಗಲಿ ಅನಾಮಿಕ ಬೆರಳಾಗಲಿ ಉಭಯದೊಳಗೆ ದಾವುದಾದರೇನು ಒಂದು ಬೆರಳಿಗೆ ರುದ್ರಾಕ್ಷಿಯಂ ಧರಿಸಿ ಅದರೊಳಗೆ ದೀಕ್ಷಾಗುರು ಅಧೋಮುಖವಾಗಿ ರುದ್ರಾಕ್ಷಿಮಾಲೆಯ ಜಪಿಸೆಂದು ಪೇಳ್ವನು. ಮತ್ತಂ, ಕುರುಡರೊಳಗೆ ಮೆಳ್ಳನು ಚಲುವನೆಂಬ ಹಾಗೆ ಅಜ್ಞಾನಿಗಳೊಳಗಣ ಜ್ಞಾನಿಗಳು ಊಧ್ರ್ವಮುಖವಾಗಿ ರುದ್ರಾಕ್ಷಿ ಜಪಿಸೆಂದು ಪೇಳುವರು. ಇಂತಪ್ಪ ಸಂಶಯದಲ್ಲಿ ಮುಳುಗಿ ಮೂರುಲೋಕವು ಭವಭವದಲ್ಲಿ ಎಡೆಯಾಡುವುದು ಕಂಡು, ಶಿವಜ್ಞಾನ ಶರಣನು ವಿಸರ್ಜಿಸಿ ಸ್ವಾನುಭಾವಸೂತ್ರದಿಂ, ದ್ವಾದಶಪ್ರಣಮವ ಪೋಣಿಸಿ, ಅಧೋ ಊಧ್ರ್ವವೆಂಬ ವಿಚಾರವಿಲ್ಲದೆ ದಿವಾರಾತ್ರಿಯಲ್ಲಿ ನಿಮಿಷ ನಿಮಿಷವನಗಲದೆ ಮರಿಯದೆ ಜಪಿಸಿ ಸದ್ಯೋನ್ಮುಕ್ತನಾಗಿ ಶಿವಸುಖದಲ್ಲಿ ಸುಖಿಯಾಗಿರ್ದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಉದಯ ಮುಖದ ಜ್ಯೋತಿಯಿಂ ಅಧೋಮುಖಕಮಲ ಊಧ್ರ್ವಮುಖವಾಗಿ ಷಡುಕಮಲಾಂಬುಜಂಗಳು ಉದಯವಾಗಿ ಆರುಕಮಲದ ಎಸಳು ಅರುವತ್ತಾಗಿ ಎಸೆವುತಿದಾವೆ ನೋಡಾ. ಅಂಬುಜಕಮಲ ಆರರಿಂದ ಸ್ವಯಂಭುವ ಪೂಜಿಸುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉದಯ ಮಧ್ಯಾಹ್ನ ಸಂಧ್ಯಾಕಾಲವ ನೋಡಿ ಮಾಡುವ ಕರ್ಮಿ ನೀ ಕೇಳಾ; ಉದಯವೆಂದೇನೊ ಶರಣಂಗೆ ಮಧ್ಯಾಹ್ನವೆಂದೇನೊ ಶರಣಂಗೆ ಅಸ್ತಮಾನವೆಂದೇನೊ ಶರಣಂಗೆ ಮಹಾಮೇರುವಿನ ಮರೆಯಲ್ಲಿರ್ದು ತಮ್ಮ ನೆಳಲನರಸುವ ಭಾವಭ್ರಮಿತರ ಮೆಚ್ಚ, ನಮ್ಮ ಕೂಡಲಸಂಗಮದೇವರು.
--------------
ಬಸವಣ್ಣ
ಶ್ರೀಮನ್ಮನದ ಕೊನೆಯಿಂದ ನೆನೆದ ನೆನಹು ಜನನ ಮರಣ ನಿಲಿಸಿತ್ತು. ಜ್ಞಾನಜ್ಯೋತಿಯ ಉದಯ, ಭಾನುಕೋಟಿಯ ಮೀರಿ ಸ್ವಾನುಭಾವದುದಯ, ಜ್ಞಾನಶೂನ್ಯದೊಳಡಗಿದ ಭೇದವನು ಏನೆಂಬೆನು ನೋಡಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->