ಅಥವಾ
(36) (23) (40) (2) (5) (2) (0) (0) (13) (3) (0) (14) (1) (1) ಅಂ (7) ಅಃ (7) (46) (1) (18) (0) (0) (2) (0) (3) (0) (0) (0) (0) (0) (0) (0) (8) (0) (8) (0) (23) (50) (0) (14) (13) (50) (1) (4) (0) (13) (11) (31) (0) (26) (37) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗವಿಲ್ಲದ ಪುರುಷನ ಸಂಗವಿಲ್ಲದ ಸ್ತ್ರೀ ಗರ್ಭವಿಲ್ಲದೆ ಬಸುರಾದುದ ಕಂಡೆ. ದಿನ ವಾರ ಮಾಸವಿಲ್ಲದೆ ಬೇನೆತೋರದೆ ಒಂದು ಶಿಶು ಹಡೆದುದ ಕಂಡೆ. ಆ ಶಿಶು ಮಂಡಲಾದ್ಥಿಪತಿಯ ಕೊಂದು ಮಂಡಲವೆಲ್ಲ ಸುಡುವುದ ಕಂಡೆ. ಕಂಡವರ ನುಂಗಿ ಸೂಲಗಿತ್ತಿಯ ಕೊಲ್ಲುವದ ಕಂಡೆ. ತಾಯಿಸಂಗವ ಮಾಡಿ ತಂದೆಯಲ್ಲಿ ಸತ್ತು ಕೂಡಲಚನ್ನಸಂಗಯ್ಯನ ಪಾದದಲ್ಲಿ ಅಡಗಿ ಬಯಲಾದುದ ಕಂಡೆ. ಅದು ಅಡಗಿದಲ್ಲಿ ತಾನಡಗಬಲ್ಲರೆ ಪ್ರಳಯವಿರಹಿತ ಪರಶಿವಮೂರ್ತಿ ತಾನೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಮ್ಮನ ಮೊಮ್ಮಗಳ ಗಂಡ ಪುಟ್ಟಿದಲ್ಲಿ ಹೊಂದದೆ, ಹೊಂದಿದವರ ಹಿಂಗದೆ, ಅಂಗಜನರಮನೆಯ ನಂದಾದೀವಿಗೆಯ ಬೆಳಗು ಕುಂದದೆ ತಂದೆ - ತಾಯಿಯ ಕೊಂದು ಕಮಲದಲ್ಲಿ ಸತ್ತು ಎತ್ತ ಹೋದನೆಂದರಿಯೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಸು ಪ್ರಧಾನಿ ಗೌಡರಿಗೆ ಅಂಜದೆ, ಬಂಟಂಗೆ ಅಳುಕದೆ ಊರನಾಳಿ ದಾಳಿಹೋದರು ಚಿಲ್ಲಿಂಗಸಂಬಂದ್ಥಿಗಳು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗದ ಮೇಲೆ ಇಷ್ಟಲಿಂಗವ ಧರಿಸಿ ಪೂಜೋಪಚಾರವ ಮಾಡುವವರು ಲಿಂಗಪ್ರಾಣಿಗಳಲ್ಲ. ಎನ್ನ ಗುರುವೆಂದು ಭಾವಿಸಿ ಶರಣೆಂದು ನಮಸ್ಕಾರ ಮಾಡುವವರು ಲಿಂಗಪ್ರಾಣಿಗಳಲ್ಲ. ಜಂಗಮವೆಂದು ನಂಬಿ, ವಿಶ್ವಾಸ ಬಲಿದು, ಪಾದಪೂಜೆಯ ಮಾಡಿ ಪಾದೋದಕ ಪ್ರಸಾದವ ಕೊಂಬುವವರು ಲಿಂಗಪ್ರಾಣಿಗಳಲ್ಲ. ಇಂತೀ ತ್ರಿಮೂರ್ತಿಗಳ ಪೂಜೆಯನ್ನು ಬಿಟ್ಟು ಬಿಡದೆ ಪಿಡಿದು ಪೂಜಿಸುವವರು ಪ್ರಾಣಲಿಂಗಿಗಳೆಂಬೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಗಿನ ಭೂಮಿ ಅಗ್ನಿಕುಂಡದ ಉದಕದಲ್ಲಿ ಬೇರಿಲ್ಲದ ವೃಕ್ಷಪುಟ್ಟಿ, ಶಾಖೆಯಿಲ್ಲದೆ ಪಲ್ಲವಿಸಿ, ತಳಿರಿಲ್ಲದೆ ಕೊನರಾಗಿ, ಮೊಗ್ಗೆಯಿಲ್ಲದೆ ಹೂವಾಗಿ, ಹೂವಿಲ್ಲದೆ ಕಾಯಾಗಿ, ಕಾಯಿಲ್ಲದೆ ಹಣ್ಣಾಗಿ, ಹಣ್ಣಿಲ್ಲದೆ ರಸತುಂಬಿ ತೊಟ್ಟು ಬಿಟ್ಟಿತ್ತು. ಆ ಹಣ್ಣಿಗೆ ಕಾಲಿಲ್ಲದೆ ನಡೆದು, ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಪಿಡಿದು, ಬಾಯಿಲ್ಲದೆ ಸವಿದು, ಜಿಹ್ವೆಯಿಲ್ಲದೆ ರುಚಿಸಿ, ತೃಪ್ತಿಯಿಲ್ಲದೆ ಪರಿಣಾಮಿಸಿ, ಸಂತೋಷವಿಲ್ಲದೆ ನಿಶ್ಚಿಂತನಾದ ಈ ಭೇದವ ಬಲ್ಲರೆ ಘನಲಿಂಗಿಯಾಗಿ ನಿಜಲಿಂಗೈಕ್ಯ ಅನಾದಿ ಶರಣನೆಂದನು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಗಮ್ಯ, ಅಗೋಚರವಾದ ಪರಬ್ರಹ್ಮವನು ಪ್ರಮಾಣಕ್ಕೆ ತಂದು ಹೇಳುವಿರಯ್ಯಾ. ಪ್ರಮಾಣಕ್ಕತೀತವಾಗಿರ್ಪುದು ಪರಬ್ರಹ್ಮವು. ಹಳದಿ, ಹಸಿರು, ಕೆಂಪು, ಬಿಳಿದು, ನೀಲ, ಮಾಣಿಕ್ಯವೆಂಬ ಷಡ್ವರ್ಣಗಳಿಂದ ವರ್ಣಿಸಿ ಹೇಳುವಿರಯ್ಯಾ; ವರ್ಣಾತೀತವಾದ ವಸ್ತುವನು ವರ್ಣಿಸುವ ಪರಿಯಿನ್ನೆಂತು ಹೇಳಿರಯ್ಯಾ ! ಜಪ-ತಪ-ಮಂತ್ರ-ಸ್ತೋತ್ರಂಗಳಿಂದ ವಾಚ್ಯಕ್ಕೆ ತಂದು ಹೇಳುವಿರಯ್ಯಾ; ವಾಚಾತೀತವಾದ ವಸ್ತುವನು ವಾಚ್ಯಕ್ಕೆ ತರುವುದಿನ್ನೆಂತು ಹೇಳಿರಯ್ಯಾ ! ಇಂತೀ ಎಲ್ಲವನು ತನ್ನ ಪರಮಜ್ಞಾನದೃಷ್ಟಿಗೆ ಮಿಥ್ಯವೆಂದು ತಿಳಿಯುವುದೇ ಶಿವಜ್ಞಾನ. ಆ ಶಿವಜ್ಞಾನವೆಂಬರುಹೇ ತಾನೆಂಬ ತನು. ತನ್ನಲ್ಲಿ ತಾನೇ ತಿಳಿಯುವುದೀಗ ಅದೇ ಬ್ರಹ್ಮಜ್ಞಾನವಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅನೇಕ ಹೊಲಿಗೆಯ ಕಪ್ಪಡವ ಬಿಚ್ಚಿ, ಮೂರೆಳಿದಾರದ ಕಪ್ಪಡವ ಹೊಲಿದು, ನಾಲ್ಕು ಗಳಿಗೆಯ ಜೋಡಿಸಿ ಬೇಡಿದವರಿಗೆ ಕೊಡರು, ಬೇಡದವರಿಗೆ ಕೊಡುವರು ನೋಡೆಂದನಯ್ಯಾ ಲಿಂಗಿಗಳು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಂಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಗ್ನಿವರ್ಣದ ಚಿತ್ರ ಆಕಾಶವ ನುಂಗಿತ್ತು. ಚಂದ್ರವರ್ಣದ ಚಿತ್ರ ಜಲವ ನುಂಗಿತ್ತು. ಸೂರ್ಯವರ್ಣದ ಚಿತ್ರ ಪೃಥ್ವಿಯ ನುಂಗಿತ್ತು. ಉಳಿದ ವರ್ಣದ ಚಿತ್ರವು ಪಂಚವರ್ಣದ ಭೂಮಿಯ ನುಂಗಿದವು, ಈ ಚಿತ್ರದ ಭೇದವ ಬಲ್ಲವರು ಅಸುಲಿಂಗಿಗಳು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಸಿಯ ಪುತ್ರನು ಶಿರವಿಲ್ಲದೆ ಐದರಲ್ಲಿರಲು, ಕೋತಿಯ ತಲೆಯಲ್ಲಿ ಇರುವೆ ಪುಟ್ಟಲು, ಇಬ್ಬರು ಸತ್ತು ಶಿರ ಚಿಗಿದು, ಅರಸಿಯ ನೆರದು ಅರಸಿನಲ್ಲಿ ಅಡಗಿತ್ತು. ಅದು ಅಡಗಿದ ಸ್ಥಾನದಲ್ಲಿ ಅಡಗಿದವರು ಲಿಂಗೈಕ್ಯರು, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗೈಯೊಳಗಿನ ಕೂಸು ಆಕಾಶವ ನುಂಗಿ, ಮಂಗಳಾಂಗಿಯ ಸಂಗವ ಮಾಡಿ ಕಂಗಳಿಲ್ಲದವನ ಕೈಪಿಡಿದು, ಕೋಲ ಮುರಿದು, ಕಾಲ ಕಡಿದು, ಕಮಲದ ಹಾಲು ಕುಡಿದು, ಸತ್ತು ಎತ್ತ ಹೋಯಿತೆಂದರಿಯೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಬರದ ಪಕ್ಷಿಗೆ ಕಾಲಾರು, ತಲೆ ಮೂರು, ಬಾಲೆರಡು, ಕಣ್ಣೊಂದು, ಕೈ ಆರಾಗಿ, ನಡೆದರೆ ಹೆಜ್ಜೆಯಿಲ್ಲ, ನುಡಿದರೆ ಶಬ್ದವಿಲ್ಲ. ಅನ್ನ ಉದಕವನೊಲ್ಲದೆ ಅಗ್ನಿಯ ಸೇವಿಸುವದು. ಆ ಮೃಗವ ಕಣ್ಣಿಲ್ಲದೆ ನೋಡಿ, ಕಾಲಿಲ್ಲದೆ ನಡೆದು, ಕೈಯಿಲ್ಲದೆ ಪಿಡಿದು, ಬಾಯಿಲ್ಲದೆ ನುಂಗಿ ಬೇಟೆಯನಾಡುವೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಲ್ಲಂಗೆ ದ್ವಯಜ್ಯೋತಿ ಬೆಳಗಿಲ್ಲ. ಮಸೂತಿಯ ನಮಾಜದಿಂ ಎಡೆಯಾಟವಿಲ್ಲ. ಹಲವಕ್ಕೆ ಹರಿದು ತಿಳಿಯಲಿಲ್ಲ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಚ್ಚಪ್ರಸಾದಿಗಳೆಂದು ಹೆಸರಿಟ್ಟುಕೊಂಡು ಪ್ರಸಾದಿಗಳ ಕಂಡರೆ ಅಗಲನೆಲ್ಲವ ನೀರಿನಿಂದ ತೊಳೆತೊಳೆದು ಮುಸುರಿಗೆ ಬಿಟ್ಟ ಎಮ್ಮಿಯಂತೆ ಕುಡಿದು, ಆಯತಮಾಡಿ ಅಗಲನೆಲ್ಲವ ನೆಕ್ಕಿ ನೀರ ತೊಂಬಲವೆಲ್ಲ ತೆಗೆವರು. ಆರೂ ಇಲ್ಲದ ವೇಳೆಯಲ್ಲಿ ರಣಬೀರರಂತೆ ಕೂಳ ತಿಂದು ಚಲ್ಲಾಡಿ, ತುದಿಹಸ್ತವ ತೊಳೆದು ಹೋಗುವವರಿಗೆ ಅಚ್ಚಪ್ರಸಾದವೆಲ್ಲಿಹುದಯ್ಯ ? ದೇಹಕ್ಕೆ ವ್ಯಾಧಿ ಸಂಘಟಿಸಿದಲ್ಲಿ ತನ್ನ ಖಬರು ತನಗೆ ವಿಸ್ಮøತಿಯಾಗಲು ಆ ವೇಳೆಯಲ್ಲಿ ಅನ್ನ ಉದಕವ ಆರು ನೀಡಿದಡೆಯೂ ಜೀವನ ಕಕಲಾತಿಗೆ ತಾ ಮಲಗಿರ್ದ ಹಾಸಿಗೆಯಲ್ಲಿ ಏಳದೆ ಮಲಗಿರ್ದಲ್ಲಿ ಅನ್ನ ಉದಕವ ತಿಂಬುವವರಿಗೆ ಎಲ್ಲಿಹುದಯ್ಯ ಅಚ್ಚಪ್ರಸಾದ ? ಇಂತಪ್ಪ ವ್ರತಭ್ರಷ್ಟ ಸೂಳೆಯಮಕ್ಕಳು ನುಚ್ಚಬಡಕರಲ್ಲದೆ ಇವರು ಅಚ್ಚಪ್ರಸಾದಿಗಳಾಗಬಲ್ಲರೆ ? ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಕ್ಕನಪುರುಷನ ಬಲದಿಂದ ಬ್ರಹ್ಮನ ತಲೆ ಹೊಡೆದು, ತಂಗಿಯಪುರುಷನ ಬಲದಿಂದ ವಿಷ್ಣುವಿನ ಹಸ್ತವ ಕಡಿದು, ತಾಯಿಯ ಗಂಡನ ಬಲದಿಂದ ರುದ್ರನ ಎದೆಯ ಹೊಡೆದು ಇರ್ಪಾತನೆ ಚಿಲ್ಲಿಂಗಸಂಬಂಧಿ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಬರದ ಕೂಸು ಆನೆಯ ನುಂಗಿ, ಕುಂಭಿನಿಯ ಕೂಸು ಕುದುರೆಯ ನುಂಗಿ, ಉಭಯರಂಗದ ಕೂಸು ಕುನ್ನಿಯ ನುಂಗಿ, ಆ ರಂಗದ ಕೂಸು ನಾಡೆಲ್ಲ ನುಂಗಿ ಕಣ್ಣೊಳಡಗಿ, ಅಡಗಿದ ಕೂಸ ಪಿಡಿದು ನುಂಗಬಲ್ಲಡೆ ಲಿಂಗೈಕ್ಯನೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಣ್ಣಗಳು ಅಕ್ಕನ ಕೂಡ ಹನ್ನೆರಡುವರ್ಷ ಮಾತನಾಡದೆ ಶಬ್ದಮುಗ್ಧನಾಗಿ ಲಿಂಗೈಕ್ಯರಾದರೆಂದು ಪುರಾಣವಾಕ್ಯವ ಕೇಳಿ, ಮತ್ರ್ಯಲೋಕದ ಶಿವಗಣಂಗಳು ಪೇಳುತ್ತಿರ್ಪರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಸು ಪ್ರಧಾನಿ ಬಂಟರು ವೀರರು ಮೊದಲಾದ ಸಕಲ ಪ್ರಜೆಗಳ ಸಂಗವ ಮಾಡದೆ, ಕುರುಡರು ಕುಂಟರು ಅಧಮರು ಮೊದಲಾದ ಬಡವರ ಸಂಗವ ಮಾಡಿ, ಅವರು ಕೊಟ್ಟ ಪಡಿಯ ಕೊಂಡುಂಡು ಸುಖದಲ್ಲಿ ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಡ್ಡಗುಡ್ಡದ ಬೆಟ್ಟವನೊಡೆದು, ಅರ್ಧಗಜ ಅಡ್ಡಗಲು, ಪೋಣೆಗಜ ನಿಡಿದು ಕಲ್ಲ ತಂದು, ಅದರ ಮೇಲೆ ಲಿಂಗಾಕಾರ ಚಂದ್ರಸೂರ್ಯರ ಬರೆದು ಕಟಿಸಿ, ಭೂಮಿಯಲ್ಲಿ ಚೌರಸ ಭೂಮಿಯ ಮಾಡಿ, ನಾಲ್ಕುಮೂಲಿಯ ಸ್ಥಾನದಲ್ಲಿ ಭೂಮಿಯೊಳಗೆ ಅರ್ಧಗಜ ಭೂಮಿಯನಗಿದು, ಆ ಅಗಿದ ಭೂಮಿಯ ಸ್ಥಾನದಲ್ಲಿ ಬೆಳ್ಳಿ ಬಂಗಾರ ಮೊದಲಾದ ಪಂಚಲೋಹವ ಹಾಕಿ, ಆ ಲಿಂಗಮುದ್ರೆಯಕಲ್ಲು ತಂದು ಮಜ್ಜನವ ಮಾಡಿ, ವಿಭೂತಿಯ ಧರಿಸಿ, ಪತ್ರಿ ಪುಷ್ಪದಿಂದ ಪೂಜೆ ಮಾಡಿ, ಅಗಿದ ಭೂಮಿಯಲ್ಲಿ ನಡಿಸಿ, ಟೆಂಗನೊಡೆದು, ನಾಲ್ವರು ಕೂಡಿ, ಶ್ಮಶಾನಭೂಮಿಯ ಪೂರ್ವವನಳಿದು ರುದ್ರಭೂಮಿಯಾಯಿತ್ತು ಎಂದು ಹೆಸರಿಟ್ಟುಕೊಂಡು ನುಡಿವಿರಿ. ಅದೆಂತು ಶುದ್ಧವಾಯಿತು ಎನಗೆ ತಿಳಿಯದು, ನೀವು ಪೇಳಿರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಂಗಭಾವ ಹಿಂಗಿ, ಲಿಂಗಭಾವ ಮುಂದುಗೊಂಡಿರುವುದೇ ಪಾರಮಾರ್ಥ. ಪಂಚೇಂದ್ರಿಯ ವಿಷಯಸುಖವನಳಿದು ಪಂಚಲಿಂಗದ ಸಮರಸದಲ್ಲಿರುವುದೇ ಪಾರಮಾರ್ಥ. ಅಹಂಕಾರವಳಿದು ನಿರಹಂಕಾರದಲ್ಲಿರುವುದೇ ಪಾರಮಾರ್ಥ. ಶಬ್ದಜಾಲಂಗಳನಳಿದು ನಿಶ್ಯಬ್ದವೇದಿಯಾಗಿರುವುದೇ ಪಾರಮಾರ್ಥ. ಈ ವಚನದ ತಾತ್ಪರ್ಯಾರ್ಥವನರಿದವರೆ ಗುರುಲಿಂಗಜಂಗಮವೆಂಬೆ. ಅರಿಯದಿರ್ದಡೆ ಭವಭಾರಿಗಳೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದ ಏಕಪ್ರಸಾದ ಎಂಬರಯ್ಯಾ. ಈ ನಾಲ್ಕು ಪ್ರಸಾದಿಗಳ ವಿವರ ಎಂತೆಂದಡೆ : ಹಲ್ಲುಕಡ್ಡಿ ದರ್ಪಣ ಮುಳ್ಳು ಸ್ತ್ರೀಸಂಭೋಗ ಮೊದಲಾದ ದಿವಾರಾತ್ರಿಯಲ್ಲಿ ಜಂಗಮಕ್ಕೆ ಸಕಲ ಪದಾರ್ಥವನು ಅರ್ಪಿಸಿ ಮರಳಿ ತಾ ಭೋಗಿಸಬಲ್ಲಾತನೆ ಅಚ್ಚಪ್ರಸಾದಿಗಳೆಂಬರು. ತ್ರಿಕಾಲದಲ್ಲಿ ನಿತ್ಯ ತಪ್ಪದೆ ಜಂಗಮವನರ್ಚಿಸಿ ಪಾದೋದಕ ಪ್ರಸಾದವ ಸಲಿಸಬಲ್ಲಾತನೆ ನಿಚ್ಚ ಪ್ರಸಾದಿಗಳೆಂಬರು. ತಮ್ಮ ಸಮಯಾಚಾರದ ಜಂಗಮವ ಕಂಡಲ್ಲಿ ಪಾದೋದಕ ಪ್ರಸಾದ ಸಲಿಸಬಲ್ಲಾತನೆ ಸಮಯಪ್ರಸಾದಿಗಳೆಂಬರು. ಶ್ರೀಗುರೂಪದೇಶವ ಪಡೆದ ಸಮಯದಲ್ಲಿ ಪಾದೋದಕ ಪ್ರಸಾದವ ಸೇವಿಸಿ ಮರಳಿ ಪಾದೋದಕಪ್ರಸಾದವ ಸೇವಿಸದಾತನೆ ಏಕಪ್ರಸಾದಿಗಳೆಂಬರು. ಇಂತೀ ಚತುರ್ವಿಧಪ್ರಸಾದಿಗಳು ನಮ್ಮ ನಿರ್ಮಾಯಪ್ರಭುವಿಂಗೆ ಸಲ್ಲರು ಅದೇನು ಕಾರಣವೆಂದಡೆ, ಇವರು ಕರ್ಮಕಾಂಡಿಗಳಾದ ಕಾರಣ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಣ್ಯವ ಸುಟ್ಟು ಭಸ್ಮವ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ಪರ್ವತವ ಸುಟ್ಟು ಭಸ್ಮವ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ನೀರ ಸುಟ್ಟು ಭಸ್ಮವ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ವಾಯುವ ಸುಟ್ಟು ಭಸ್ಮವ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ಸಮುದ್ರವ ಸುಟ್ಟು ಭಸ್ಮವ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ಇಂತಪ್ಪ ಭಸ್ಮವ ಧರಿಸಬಲ್ಲವರಿಗೆ ಮೋಕ್ಷವೆಂಬುವದು ಕರತಳಾಮಳಕ ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಸು ಪ್ರಧಾನಿಗಳು ಬಿಟ್ಟಿಯ ಮಾಡಲಿಲ್ಲ. ಬ್ಯಾಗಾರಿ ಗಂಟ ಹೊರಲಿಲ್ಲ. ಹೊಲೆ ಮಾದಿಗ ಡೋಹಾರ ಗಂಟು ಹೊತ್ತು ಕೂಳುಕಾಣದೆ ಬಿಟ್ಟಿಯಮಾಡಿ. ಹಾಗದ ಕಾಯಕವನುಂಡು ಕಾಯಕವ ಮಾಡುತಿರ್ದರಯ್ಯ ನಿಮ್ಮವರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅರಸನ ಹೆಂಡತಿಯ ತಂದು ಹೊಲೆಯಗೆ ಮದುವೆಯ ಮಾಡಿದೆ. ಹೊಲೆಯನ ಹೆಂಡತಿಯ ತಂದು ಅರಸಗೆ ಮದುವೆಯ ಮಾಡಿದೆ. ಅಣ್ಣನ ಹೆಂಡತಿಯ ತಂದು ತಮ್ಮಗೆ ಮದುವೆಯ ಮಾಡಿದೆ. ತಮ್ಮನ ಹೆಂಡತಿಯ ತಂದು ಅಣ್ಣಗೆ ಮದುವೆಯ ಮಾಡಿದೆ. ಒಡೆಯನ ಹೆಂಡತಿಯ ತಂದು ಆಳಿಗೆ ಮದುವೆಯ ಮಾಡಿದೆ. ಆಳಿನ ಹೆಂಡತಿಯ ತಂದು ಒಡೆಯಗೆ ಮದುವೆಯ ಮಾಡಿದೆ. ಇಂತಿವರ ಮದುವೆಯ ಸಂಭ್ರಮದೊಳಗೆ ಕಂಬ ಸುಟ್ಟು ಹಂದರ ಉಳಿಯಿತ್ತು. ಭೂಮಿ ಸುಟ್ಟು ಹಸಿಜಗುಲಿ ಉಳಿಯಿತ್ತು. ಐದುಮಂದಿ ಐದಗಿತ್ತೇರು ತಮ್ಮ ಶಾಲಿಯ ಕಳೆದು, ಕುಪ್ಪಸ ತೆಗೆದು, ಹೆಂಡಗಾರನ ಬೆನ್ನು ಹತ್ತಿ ಹೋದುದು ಕಂಡು ಬೆರಗಾದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಟ್ಟುಂಬ ಜನರಿಗೆ ಮಡಿಕೆಯ ಕೊಡಲಿಲ್ಲ; ಅಟ್ಟುಣ್ಣದೆ ಉಂಬ ಜನರಿಗೆ ಮಡಿಕೆಯ ಮಾರುವನು. ಹಣವ ತಂದವರಿಗೆ ಮಡಿಕೆಯ ಕೊಡಲಿಲ್ಲ; ಹಣವ ತಾರದವರಿಗೆ ಮಡಿಕೆಯ ಮಾರುವನು. ಉಭಯದ ಸಂದನರಿದವರಿಗೆ ಮಡಿಕೆಯ ಮಾರುವನು. ಅರಿಯದವರಿಗೆ ಮಡಿಕೆಯ ತೋರನು ನೋಡೆಂದ ವೀರಮಾಹೇಶ್ವರನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅತ್ತೆ ಅಳಿಯನ ನೆರೆದು ಮಾವ ಸೊಸೆಯ ಬೆರೆದು, ಗುರುವಿನ ಸತಿ ಶಿಷ್ಯನ ನೆರೆದು, ಶಿಷ್ಯನ ಸತಿ ಗುರುವ ಬೆರೆದು, ಊರೊಳಗೆ ಬೆಳಗಾಯಿತ್ತು. ಬೆಳಗಿನೊಳಗೆ ಸಮಗಾರನೆದ್ದು ಕಾಳಿಯಳಿದು ಅರಸನ ಸತಿಯಸಂಗವ ಮಾಡಿ, ಮೊಲೆಯುಂಡು ಹಾಲ ನಂಜೇರಿ ಸಮಗಾರ ಸತ್ತು, ಆವಲ್ಲಿ ಪೋದನೆಂಬುದ ತಿಳಿಯಬಲ್ಲರೆ ಶರಣರೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ

ಇನ್ನಷ್ಟು ...