ಅಥವಾ

ಒಟ್ಟು 64 ಕಡೆಗಳಲ್ಲಿ , 26 ವಚನಕಾರರು , 62 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ, ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು ಅಂಗುಲಗಳಲ್ಲಿ ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ ಮೂರು ವೇಳೆ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು. ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು. ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು. ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ ಸ್ಪರ್ಶನೋದಕವೆನಿಸುವುದು. ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು. ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ ಅಪ್ಯಾಯನೋದಕವೆನಿಸುವುದು. ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು. ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು. ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು_ ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು ಅರಿದು ಆಚರಿಸುವುದು. ಆಚರಿಸಲಾಗದೆಂಬ ಹಚ್ಚಮಾನವರನೇನೆಂಬೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
>ಸಾವ ಜೀವ ಬಿಂದುವಿನ ಸಂಚ, ಸಾಯದ ನಾದ ಪ್ರಾಣದ ಸಂಚ. ಸಾವ ಜೀವದ, ಸಾಯದ ಪ್ರಾಣದ _ಎರಡರ ಭೇದವನರಿಯದಿರ್ದಡೆ ಲಾಂಛನಧಾರಿ, ಸಾವ ಜೀವದ, ಸಾಯದ ಪ್ರಾಣದ ಎರಡರ ಭೇದವ ಭೇದಿಸಿ ಅರಿವು ಕಣ್ದೆರೆದ ಪ್ರಾಣಲಿಂಗಸಂಬಂಧವಂತಿರಲಿ, ಮತ್ತೆಯೂ ಪ್ರಾಣಲಿಂಗಸಂಬಂಧವೇ ಬೇಕು. ಇಂತೀ ಉಭಯ ಸಂಬಂಧವಳಿದ ಸಂಬಂಧ ನಿಜವಾಯಿತ್ತು. ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ
--------------
ಚನ್ನಬಸವಣ್ಣ
ಭಕ್ತನೊಂದು ಕುಲ, ಭವಿಯೊಂದು ಕುಲವೆಂಬರು. ಭಕ್ತನೆಂತಿಪ್ಪ ಭವಿಯೆಂತಿಪ್ಪನೆಂದರೆ, ಆರೂ ಅರಿಯರು. ಇದು ಬಲ್ಲವರು ತಿಳಿದು ನೋಡಿ. ಭಕ್ತನೆಂದರೆ ಅಂಗ, ಭವಿ ಎಂದರೆ ಲಿಂಗ, ಈ ಎರಡರ ಸಕೀಲಸಂಬಂಧವನರಿದರೆ, ಆತನೆ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಕಳವಳದ ಮನ ತಲೆಕೆಳಗಾದುದವ್ವಾ ; ಸುಳಿದು ಬೀಸುವ ಗಾಳಿ ಉರಿಯಾದುದವ್ವಾ ; ಬೆಳುದಿಂಗಳು ಬಿಸಿಯಾಯಿತ್ತು ಕೆಳದಿ. ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವಾ ; ತಿಳುಹಾ, ಬುದ್ಧಿಯ ಹೇಳಿ ಕರೆತಾರೆಲಗವ್ವಾ ; ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವಾ.
--------------
ಅಕ್ಕಮಹಾದೇವಿ
ಮಾಡುವ ಮಾಡಿಸಿಕೊಂಬ ಎರಡರ ಉಭಯ ಒಂದೆ. ಲಿಂಗವೊಂದೆ, ಜಂಗಮವೊಂದೆ, ಪ್ರಸಾದವೊಂದೆ. ಒಂದಾದಲ್ಲಿ ಎರಡಾಗಿ ಮಾಡುವ ಭಕ್ತ ನೀನೇ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ನಾದದಿಂದಾದ ಸಂಗ ವಿನೋದಸಂಗ, ಬಿಂದುವಿನಿಂದಾದ ಸಂಗ ಬದ್ಧಕ್ರಿ. ದ್ವಯ, ಅದ್ವಯದಿಂದಾದ ಸಂಗ ಪರಿಭಾವ. ಗಮಿಸುವುದೆ ನಿರವಯವು, ಬಯಸದಿರಾ ! ಬೇರೆ ಮತ್ತಿಲ್ಲ, ಅನುಭಾವವೆಂಬ ಘನಮಹಿಮೆಯ ನೆಮ್ಮಿತ್ತೆ ಆಯಿತ್ತು; ಆ ನಾದದ ನಿಶ್ಚಿಂತನಿಲವನರಿಯಿತ್ತೆ ಆಯಿತ್ತು. ಇದು ನಿಮ್ಮ ಕಲ್ಪನೆ, ಆದಿ ಅಂತ್ಯವ ಬಲ್ಲಡೆ, ಬಲ್ಲನು. ಅವಚಿತ್ತದ ಅವಧಾನದ, ಅಹುದೆಂಬ ಅಲ್ಲವೆಂಬ, ಉಂಟೆಂಬ ಇಲ್ಲವೆಂಬ ಈ ಎರಡರ ಮಥನವಲ್ಲ ಕೇಳಿರಯ್ಯಾ. ಚೆಂದಗೆಡದ ಮುನ್ನ ಬೇಗಮಾಡಿ ತಿಳಿದಿರಾದಡೆ ಬಸವನಂತೆ ಭಾವ, ಬಸವನಂತೆ ಮನ, ಬಸವನ ಪದವಿಡಿದಡೆ ಇದೇ ಪಥ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಆದಿಯಲ್ಲಿ ಪಿಂಡ ಅನಾದಿಯಲ್ಲಿ ಪ್ರಾಣ ಎರಡನು ಸದ್ಗುರುಸ್ವಾಮಿ ಏಕಾರ್ಥವ ಮಾಡಿದಲ್ಲಿ ಪಿಂಡದಲ್ಲಿ ಲಿಂಗಸಾಹಿತ್ಯ ಪ್ರಾಣದಲ್ಲಿ ಜಂಗಮಸಾಹಿತ್ಯ ಈ ಎರಡರ ಏಕಾರ್ಥದ ಕೊನೆಯ ಮೊನೆಯ ಮೇಲೆ ಪ್ರಸಾದಸಾಹಿತ್ಯ ಪ್ರಾಣಲಿಂಗಪ್ರಸಾದವಿರಹಿತನಾಗಿ ಓಗರ ಪ್ರಸಾದವೆಂದು ಕೊಂಡರೆ ಕಿಲ್ಬಿಷ ಕೂಡಲಚೆನ್ನಸಂಗಮದೇವ ಹುಳುಗೊಂಡದಲ್ಲಿಕ್ಕುವ.
--------------
ಚನ್ನಬಸವಣ್ಣ
ತ್ರಿಪುರಂಗಳ ಸಂಹಾರವ ಮಾಡಿ, ಉದಯಕ್ಕೆ ಹುಟ್ಟಿದಾತನೆ ದಿವ್ಯಯೋಗಿ. ಅಸ್ತಮಾನಕ್ಕೆ ಅಳಿದಾತನೆ ಪರಮಯೋಗಿ. ಈ ಎರಡರ ಭೇದವನರಿದು ಅನುಭಾವಿಸಬಲ್ಲಾತನೆ ಪರಮಾನಂದಯೋಗಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಒಂದ ಬಿಟ್ಟು ಒಂದನರಿದೆಹೆನೆಂಬನ್ನಕ್ಕ ಮರದ ಸಂದಿನ ಬೊಂಬೆಯೆ? ಅರಿವುದು ಕುರುಹೊ ಅರಿವೊರಿ ಸುಡುವುದು ಮರನೊ ಬೆಂಕಿಯೊರಿ ಎರಡರ ಹೆಚ್ಚು ಕುಂದ ತಿಳಿದು ಹೇಳೆಂದನಂಬಿಗ Zõ್ಞಡಯ್ಯ.
--------------
ಅಂಬಿಗರ ಚೌಡಯ್ಯ
ಆದಿ ಅನಾದಿ ನಿತ್ಯಾನಿತ್ಯವ ತಿಳಿಯಲರಿಯದೆ ವಾಯಕ್ಕೆ ಪರಬ್ರಹ್ಮವ ನುಡಿವ ವಾಯುಪ್ರಾಣಿಗಳವರೆತ್ತ ಬಲ್ಲರೋ, ಆ ಪರಬ್ರಹ್ಮದ ನಿಜದ ನಿಲವ ? ಅದೆಂತೆಂದಡೆ ; ಆದಿಯೆ ದೇಹ, ಅನಾದಿಯೆ ನಿರ್ದೇಹ, ಆದಿಯೆ ಸಕಲ, ಅನಾದಿಯೆ ನಿಷ್ಕಲ, ಆದಿಯೆ ಜಡ, ಅನಾದಿಯೆ ಅಜಡ. ಆದಿಯೆ ಕಾಯ, ಅನಾದಿಯೆ ಪ್ರಾಣ. ಈ ಎರಡರ ಯೋಗವ ಭೇದಿಸಿ ತನ್ನಿಂದ ತಾನೆ ತಿಳಿದು ನೋಡಲು, ಆದಿ ಸಂಬಂಧವಪ್ಪ ಭೂತಂಗಳು ನಾನಲ್ಲ. ದಶವಿಧೇಂದ್ರಿಯಂಗಳು ನಾನಲ್ಲ, ದಶವಾಯುಗಳು ನಾನಲ್ಲ. ಅಷ್ಟಮದಂಗಳು, ಸಪ್ತವ್ಯಸನಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು, ಷಡ್ಬ್ರಮೆಗಳು, ಷಡ್ಭಾವವಿಕಾರಂಗಳು, ಷಟ್ಕರ್ಮಂಗಳು, ಷಡ್ಧಾತುಗಳು, ತನುತ್ರಯಂಗಳು, ಜೀವತ್ರಯಂಗಳು, ಮಲತ್ರಯಂಗಳು, ಮನತ್ರಯಂಗಳು, ಗುಣತ್ರಯಂಗಳು, ಭಾವತ್ರಯಂಗಳು, ತಾಪತ್ರಯಂಗಳು, ಅಂತಃಕರಣಂಗಳು ಇಂತಿವಾದಿಯಾಗಿ ತೋರುವ ತೋರಿಕೆಯೇನೂ ನಾನಲ್ಲ, ನನ್ನವಲ್ಲ. ಇಂತಿವೆಲ್ಲವೂ ನನ್ನಾಧೀನವಾಗಿಪ್ಪವು ನಾನಿವರಾಧೀನದವನಲ್ಲ. ನಾನು ತೂರ್ಯ ತೂರ್ಯಾತೀತವಪ್ಪ ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವಸ್ತುವೆ ತನ್ನಿರವೆಂದು ತಿಳಿಯೆ, ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದ ಬೆಸುಗೆ ಬಿಟ್ಟು ನಿರಾಳದಲ್ಲಿ ನಿಜವನೈದಲರಿಯದೆ ಮತ್ತೆಯುಂ ಭೌತಿಕ ತತ್ವಸಂಬಂಧಿಯಾಗಿ ಇರುತ್ತಿರಲು, ಇಂತೀ ತತ್ವದಾದಿ ತಾನೆಂತೆನಲು ಆ ಪರಬ್ರಹ್ಮವಪ್ಪ ನಿತ್ಯನಿರಾಳ ನಿಃಶೂನ್ಯಲಿಂಗವೆ ತನ್ನ ಲೀಲಾವಿಲಾಸದಿಂದ ತಾನೆ ಸುನಾದ ಬಿಂದು ಪ್ರಕಾಶ ತೇಜೋಮೂರ್ತಿಯಾಗಿ ನಿಂದು ಮಹಾಲಿಂಗವೆಂದೆನಿಸಿತ್ತು. ಆ ಮಹಾಲಿಂಗವೆ ಪಂಚಸಾದಾಖ್ಯವೆಂದೆನಿಸಿತ್ತು. ಆ ಪಂಚಸಾದಾಖ್ಯವೆ ಪಂಚಲಿಂಗ ಪ್ರಕಾಶವೆಂದೆನಿಸಿತ್ತು. ಆ ಪಂಚಲಿಂಗ ಪ್ರಕಾಶವೆ ಪಂಚಮುಖವೆಂದೆನಿಸಿತ್ತು. ಆ ಪಂಚಮುಖದಿಂದವೆ ಪಂಚಾಕ್ಷರಿಯುತ್ಪತ್ತಿ. ಆ ಪಂಚಾಕ್ಷರಿಯಿಂದವೆ ಪಂಚಕಲೆಗಳುತ್ಪತ್ತಿ. ಆ ಪಂಚಕಲೆಗಳಿಂದವೆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳುತ್ಪತ್ತಿ. ಆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳಿಂದವೆ ಪಂಚತನ್ಮಾತ್ರಂಗಳುತ್ಪತ್ತಿ. ಆ ಪಂಚತನ್ಮಾತ್ರಂಗಳಿಂದವೆ ಪಂಚಭೂತಂಗಳುತ್ಪತ್ತಿ. ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು. ಆ ಅಂಗಕ್ಕೆ ಜ್ಞಾನೇಂದ್ರಿಯಂಗಳು ಕರ್ಮೇಂದ್ರಿಯಂಗಳು ಪ್ರತ್ಯಂಗವೆಂದೆನಿಸಿತ್ತು. ಇಂತು ದೇಹ ಸಂಬಂಧಮಂ ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ, ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು ಎಲ್ಲಿಯಾಯಿತ್ತು ಅಲ್ಲಿಯೇ ಅಡಗಿಸಿ ಆ ಕಾಯದ ಪೂರ್ವಾಶ್ರಯವನಳಿದು ಮಹಾ ಘನಲಿಂಗವ ವೇಧಿಸಿ ಕೊಟ್ಟು, ಶಿವ ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿ ಎಂತೆಂದಡೆ ಆತ್ಮಗೂಡಿ ಪಂಚಭೂತಂಗಳನೆ ಷಡ್ವಿಧ ಅಂಗವೆಂದೆನಿಸಿ, ಆ ಅಂಗಕ್ಕೆ ಆ ಕಲೆಗಳನೆ ಷಡ್ವಿಧ ಶಕ್ತಿಗಳೆಂದೆನಿಸಿ, ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ, ಆ ಭಕ್ತಿಗಳಿಗೆ ಭಾವ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಂಗಳನೆ ಷಡ್ವಿಧ ಹಸ್ತಂಗಳೆಂದೆನಿಸಿ, ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ, ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯಪದಾರ್ಥಂಗಳೆಂದೆನಿಸಿ, ಆ ದ್ರವ್ಯಪದಾರ್ಥಂಗಳು ಆಯಾಯ ಮುಖದ ಲಿಂಗಂಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ. ಅಂಗಸ್ಥಲಂಗಳಡಗಿ ತ್ರಿವಿಧ ಲಿಂಗಾಂಗಸ್ಥಲಂಗಳುಳಿದು ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ ಗುರುವಿನಲ್ಲಿ ಶುದ್ಧಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ, ಜಂಗಮದಲ್ಲಿ ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧ ಪ್ರಸಾದವು ಏಕಾರ್ಥವಾಗಿ, ಮಹಾಘನ ಪರಿಪೂರ್ಣಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೇ ಅಲ್ಲ. ಶೂನ್ಯನಲ್ಲ, ನಿಃಶೂನ್ಯ ಮುನ್ನವೇ ಅಲ್ಲ. ದ್ವೈತಿಯಲ್ಲ, ಅದ್ವೈತಿ ಮುನ್ನವೇ ಅಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ? ಇದು ಕಾರಣ, ಇದರ ಆಗುಹೋಗು ಸಕೀಲಸಂಬಂಧವ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರೇ ಬಲ್ಲರು.
--------------
ಅಕ್ಕಮಹಾದೇವಿ
ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕು. ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು. ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ ನಾಸ್ತಿನಾಥನು ಪರಿಪೂರ್ಣನೆಂಬೆ.
--------------
ಗೊಗ್ಗವ್ವೆ
ಪ್ರಸಾದವೆಂದು ಭಾವಿಸಿ, ಕಳಂಕದೋರಿದಡೆ ಪಂಚಮಹಾಪಾತಕ. ಪದಾರ್ಥವೆಂದು ಪ್ರಮಾಣಿಸಿ, ಹಿಮ್ಮೆಟ್ಟಿದಡೆ ಭಕ್ತದ್ರೊಹ. ಈ ಎರಡರ ಸಂದಿನಲ್ಲಿ ಸಂದೇಹಕ್ಕೊಳಗಾದವರನೆನಗೆ ತೋರದಿರಯ್ಯಾ, ಕುಂತಳಿಯ ವರಕುರಂಗಲಿಂಗವೆ.
--------------
ಬೊಮ್ಮಗೊಂಡೇಶ್ವರ
ಸುಕರ್ಮದಿಂದ ದೇವತಾಯೋನಿಯಲ್ಲಿ ಜನಿಸುವನು. ದುಷ್ಕರ್ಮದಿಂದ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳ ಕ್ರೂರಯೋನಿಯಲ್ಲಿ ಜನಿಸುವನು. ಸುಕರ್ಮ ದುಷ್ಕರ್ಮ ಎರಡರ ಮಿಶ್ರಣದಿಂದ ಮನುಜಯೋನಿಯಲ್ಲಿ ಜನಿಸುವನು. ಇಂತಪ್ಪ ಸುಕರ್ಮ ದುಷ್ಕರ್ಮಗಳು ಪೂರ್ವಕರ್ಮವಶದಿಂದ ಬಹವು ನೋಡಾ. ಇದಕ್ಕೆ ಸೂತಸಂಹಿತಾಯಾಂ : ``ಪುಣ್ಯಾದ್ದೇವತ್ವಮಾಪ್ನೋತಿ ಪಾಪಾತ್ ಸ್ಥಾವರತಾಮಿಯಾತ್ | ಸಮಾಭ್ಯಾಂ ಪಾಪಪುಣ್ಯಾಭ್ಯಾಂ ಮಾನುಷ್ಯೇ ಪರಿರ್ವರ್ತತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ರುಚಿಯಲ್ಲಿ ಸಂಹಾರ, ಸ್ಪರುಶನದಲ್ಲಿ ಸೃಷ್ಟಿ, ರೂಪಿನಲ್ಲಿ ಸ್ಥಿತಿ, ಇಂತು ಸಂಹಾರಕ್ಕೆ ನಾದವೇ ಮೂಲವು, ಸೃಷ್ಟಿಗೆ ಬಿಂದುವೇ ಮೂಲವು, ಸ್ಥಿತಿಗೆ ಕಳೆಯೇ ಮೂಲವು. ಸೃಷ್ಟಿಗೆ ಪೃಥ್ವಿಯೇ ಆಧಾರಮಾಯಿತ್ತು ; ಸ್ಥಿತಿಗೆ ಆತ್ಮನೇ ಆಧಾರಮಾಯಿತ್ತು. ಸೃಷ್ಟಿಮೂಲಮಪ್ಪ ಸ್ಪರುಶನದಲ್ಲಿ ಆನಂದವೂ ಸಂಹಾರಮೂಲಮಪ್ಪ ರುಚಿಯಲ್ಲಿ ಜ್ಞಾನವೂ ಸ್ಥಿತಿಮೂಲಮಪ್ಪ ರೂಪಿನಲ್ಲಿ ನಿಜವೂ ನೆಲೆಗೊಂಡು, ಸೃಷ್ಟಿಯೆ ಸ್ಥಿತಿಹೇತುವಾಗಿ, ಸ್ಥಿತಿಯೇ ಸಂಹಾರಹೇತುವಾಗಿ, ಸಂಹಾರವೇ ಸೃಷ್ಟಿಹೇತುವಾಗಿ, ರುಚಿಗೆ ಅಗ್ನಿಯೂ, ಸ್ಪರುಶನಕ್ಕೆ ಜಲವೂ, ರೂಪಿಗೆ ಪೃಥ್ವಿಯೂ ಕಾರಣಮಾಗಿ, ಇಂತು ಅವಸ್ತ್ರಮಾಗಿ ತಿರುಗುತ್ತಿರ್ಪ ಪರಶಿವನಾಜ್ಞಾಚಕ್ರವನ್ನು ಗುರುಮುಖದಿಂದ ವಿಚಾರಿಸಿ ತಿಳಿದ ಮಹಾಪುರುಷನು ಈ ಚಕ್ರಕ್ಕೆ ತಗಲಿರ್ಪ ಮನವೆಂಬ ಕೀಲನ್ನು ಗುರುವಿತ್ತ ಲಿಂಗವೆಂಬ ಪರಶುವಿನಿಂ ಭಾವವೆಂಬ ಹಸ್ತದಲ್ಲಿ ಪಿಡಿದು ಖಂಡಿಸಲು, ಆ ಚಕ್ರದ ಚಲನೆ ನಿಂದಿತ್ತು. ಸ್ಪರ್ಶನದಲ್ಲಿರ್ಪ ಆನಂದರಸಮಂಗದಲ್ಲಿ ಕೂಡಿ, ಸಂಹಾರಾಗ್ನಿಯಂ ನಂದಿಸಿತ್ತು. ಆ ಸಂಹಾರದೊಳಗಿರ್ಪ ಜ್ಞಾನಾಗ್ನಿಯು ಲಿಂಗದೊಳಗೆ ಬೆರದು, ಸೃಷ್ಟಿಸ್ಥಿತಿರೂಪಮಾದ ಪೃಥ್ವಿ ಅಪ್ಪುಗಳಂ ಸಂಹರಿಸಿತ್ತು. ಸ್ಥಿತಿಯಲ್ಲಿರ್ಪ ನಿಜಲಿಂಗದಲ್ಲಿ ನಿಜಮಾಯಿತ್ತು. ಇಂತು ಆ ಚಕ್ರವಳಿಯೆ, ಆತ್ಮಭ್ರಮೆಯಳಿದು, ಆತ್ಮವೇ ಲಿಂಗಮಾಗಿ, ಆಕಾಶವೇ ಅಂಗವಾಗಿ, ವಾಯುವೇ ಆ ಎರಡರ ಸಂಗದಲ್ಲಿ ಬೆರದು ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಎನ್ನ ಸತ್ಕಿ ್ರೀ ಸಂಗನಬಸವಣ್ಣ ಎನ್ನ ಸುಜ್ಞಾನವೇ ಚನ್ನಬಸವಣ್ಣ ಈ ಎರಡರ ಏಕೀಭಾವವೇ ಪ್ರಭುವೆ ನೀವು ನೋಡಾ! ನಿಮ್ಮೆಲ್ಲರ ನೈಷೆ*ಯೇ ಮಡಿವಾಳಯ್ಯನು! ಇಂತೀ ಚತುರ್ವಿಧವೆನಗೆ ಬೇಕಾದ ಕಾರಣ ಇಷ್ಟಲಿಂಗದ ಸೇವೆ ಚರಲಿಂಗದ ದಾಸೋಹವೆಂಬುದನು ಬಸವಣ್ಣಪ್ರಿಯ ಚಂದೇಶ್ವರಲಿಂಗದಲ್ಲಿ ಚನ್ನಬಸವಣ್ಣನ ಕೈಯಲ್ಲಿ ಎನಗೆ ತಿಳುಹಿಕೊಡಾ ಪ್ರಭುವೇ!
--------------
ನುಲಿಯ ಚಂದಯ್ಯ
ಇನ್ನಷ್ಟು ... -->