ಅಥವಾ
(3) (3) (2) (0) (0) (0) (0) (0) (0) (1) (1) (0) (0) (0) ಅಂ (1) ಅಃ (1) (3) (0) (4) (1) (0) (0) (0) (3) (0) (0) (0) (0) (0) (0) (0) (1) (0) (2) (0) (3) (17) (0) (2) (1) (1) (0) (1) (0) (1) (1) (2) (0) (5) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಗ್ನಿಯಲ್ಲಿ ಕಾಣಿಸುವ ಛಾಯೆಯು ನಿರಾಕಾರ ತಮೋರೂಪುಳ್ಳದ್ದು, ಜಲದಲ್ಲಿ ಕಾಣಿಸುವ ಛಾಯೆಯು ಸಾಕಾರಸತ್ವಸ್ವರೂಪುಳ್ಳದ್ದು. ಅಗ್ನಿಯಲ್ಲಿ ರೂಪುಮಾತ್ರವೇ, ಜಲದಲ್ಲಿ ರೂಪುರುಚಿಗಳೆರಡೂ ಪ್ರತ್ಯಕ್ಷಮಾಗಿಹವು. ಸಾಕಾರಛಾಯೆ ನಿಜಮಾಗಿ, ಹಾವಭಾವವಿಲಾಸವಿಭ್ರಮ ಕಾರಣಮಾಗಿಹುದು. ನಿರಾಕಾರಛಾಯೆ ಜಡಮಾಗಿ ವೈರಭಿನ್ನಮಾಗಿಹುದು. ಗುರುದತ್ತಲಿಂಗದಿಂದ ತನ್ನ ನಿಜಭಾವಮಂ ತಿಳಿದು, ಲಿಂಗವೂ ತಾನೂ ಏಕಮೆಂಬ ಭಾವವು ಬಲಿದು ಭಿನ್ನಭ್ರಮೆಯಳಿದು ಮನಂಗೊಂಡಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಅಂಗದೊಳಗಿರ್ಪ ಶಕ್ತಿಯಾತ್ಮಸಂಗದಿಂ ಪ್ರಕಾಶಮಾಗಿ, ಆ ಶರೀರಕ್ಕೂ ತನಗೂ ಭೇದಮೆನಿಸಿಕೊಳ್ಳಲು, ಅಲ್ಲಿ ಕರ್ಮವು ಉತ್ಪನ್ನಮಾಗಿ, ಆ ಕರ್ಮಮುಖದಿಂ ಪ್ರಪಂಚವನವಗ್ರಹಿಸಲೋಸುಗ ಸೃಷ್ಟಿಸ್ಥಿತಿಸಂಹಾರಂಗಳೆಸಗೆ, ಆ ಶರೀರವು ವ್ಯಯವನೆಯ್ದಿ, ಪೃಥ್ವಿಯ ಚರಿಸುವಂದದಲಿ ಲಿಂಗದಲ್ಲಿರ್ಪ ಶಿವನಿಂದ ತತ್ವಪ್ರಕಾಶಮಾಗಿ, ಮನಸ್ಸಿನಲ್ಲಿ ಭೇದತೋರದೆ ಕೂಡಿದಲ್ಲಿ, ಜ್ಞಾನಮುತ್ಪನ್ನಮಾಯಿತ್ತು. ಜ್ಞಾನಮುಖದಿಂ ಮನ ಮಹವನವಗ್ರಹಿಸಿ, ಸತ್ತುಚಿತ್ತಾನಂದದಿಂ ಸಾಧಿಸುತ್ತಿರಲು, ಮನವಳಿದು ಲಿಂಗಮಪ್ಪುದು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಅಖಂಡಕಾಲಾತೀತಮಾದ ಮಹಾಲಿಂಗವೇ ಆದಿಶಕ್ತಿಯ ಸಂಗದಿಂ ಸೋಮನಾದುದರಿಂ ಆದಿತ್ಯನೇ ಶಕ್ತಿಯು, ಸೋಮನೇ ಶಿವನು. ಆದಿತ್ಯ ಸೋಮರಿಂದುದಯಿಸಿದ ಶನಿಯೇ ವಿಷ್ಣುವು, ಶುಕ್ರನೇ ಲಕ್ಷ್ಮಿಯು. ಆ ಶನಿ ಶುಕ್ರರಿಂದುದಿಸಿದ ಬೃಹಸ್ಪತಿಯೇ ಬ್ರಹ್ಮನು, ಅದಕೆ ಬುಧನೇ ಶಕ್ತಿ; ಆ ಬೃಹಸ್ಪತಿ ಬುಧರಿಂದುದಿಸಿದ ಪ್ರಪಂಚವೇ ಮಂಗಳ, ಸೋಮನೇ ಬ್ರಾಹ್ಮಣನು, ಅದಕೆ ಕ್ಷತ್ರಿಯ ಶಕ್ತಿ, ಶನಿಯೇ ಕ್ಷತ್ರಿಯನು, ಅದಕೆ ವೈಶ್ಯಶಕ್ತಿ; ಬೃಹಸ್ಪತಿಯೇ ವೈಶ್ಯನು, ಅದಕೆ ಬ್ರಾಹ್ಮಣಶಕ್ತಿ; ಅಂಗಾರಕನೇ ಶೂದ್ರನು, ಅದಕೆ ಆತ್ಮಶಕ್ತಿ. ಇಂತು ಕೃಷ್ಯಾದಿಕರ್ಮಂಗಳಿಗೆ ಕಾರಣಮಾಗಿಹ ಸೋಮನೇ ಸಪ್ತವಾರಂಗಳೊಳು ಅಂಶವಾದೊಡೆ, ಆದಿತ್ಯನಲ್ಲಿ ಶನಿರೂಪಮಾಗಿ ತಾನೇ ಜನಿಸುತ್ತಿಹನು. ಈ ಪ್ರಕಾರದಲ್ಲಿ ಸಪ್ತವಾರಂಗಳು ಒಂದಕ್ಕೊಂದು ಕಾರಣಮಾಗಿಹವು. ಸೋಮಾದಿತ್ಯ ಶನಿ ಶುಕ್ರಾಂಗಾರಕರು ಉಪಾಸನಾದಿ ಪೂಜಾಯೋಗ್ಯರಾಗಿಹರು. ಬೃಹಸ್ಪತಿ ಬುಧರು ಬ್ರಹ್ಮಸರಸ್ವತೀ ಸ್ವರೂಪಿಗಳಾದುದುರಿಂದ ಉಪಾಸನಾಕರ್ಮಯೋಗ್ಯರಲ್ಲದಿಹರು. ಪರಮಶಾಂತಿಮಯನಾದ ಶಿವನು ಉಗ್ರಸ್ವರೂಪವಾದ ಆದಿಶಕ್ತಿಯಂ ಕೂಡಿದುದರಿಂ ತಮೋಗುಣಸ್ವರೂಪಿಯಾಗಿಹನು, ಉಗ್ರಸ್ವರೂಪವಾದ ವಿಷ್ಣುವು ಶಾಂತಶುಕ್ಲಸ್ವರೂಪಮಾದ ಲಕ್ಷ್ಮಿಯೊಳಗೆ ಕೂಡಿದುದರಿಂ ಸತ್ವಗುಣಸ್ವರೂಪಿಯಾಗಿಹನು, ಹೀಗೆ ಈ ಈರ್ವರು ಸಂಸಾರಯುಕ್ತರಾಗಿರಲು, ಈ ಪ್ರಪಂಚದಲ್ಲಿ ಸಂಸಾರಬದ್ಧನಾದ ನಾನು ನಿಜವಾಸನೆಯಲ್ಲಿ ಸಂಚರಿಸಬಲ್ಲೆನೇನಯ್ಯಾ? ಮಿಥ್ಯೆಯಲ್ಲಿ ನನ್ನಂ ಕೂಡಿ ಸತ್ಯಪ್ರಕಟನವಂ ಮಾಡಲಿಲ್ಲೆಂದು ನನ್ನಂ ಸಾಧಿಸುವುದು ನಿನಗೆ ಯೋಗ್ಯವೇ? ನಿನ್ನಂತೆ ನನ್ನಂ ನೋಡದಿರ್ದೊಡೆ ಆತ್ಮವತ್ಸರ್ವಭೂತಾನಿ ಎಂಬ ಶ್ರುತ್ಯರ್ಥಕ್ಕೆ ಹಾನಿ ಬಾರದಿರ್ಪುದೆ? ಶ್ರುತಿಯಬದ್ಧದಲ್ಲಿ ಕರ್ಮಕ್ಕೆ ಹಾನಿಯಪ್ಪುದು, ಕರ್ಮನಾಶವೇ ಸಂಸಾರಕಾರಣವು. ಇದನರಿತು ನನ್ನ ಮಿಥ್ಯಾದುರ್ಗುಣಂಗಳಂ ವಿಚಾರಿಸಿದೆ ನನ್ನಂ ಪರಿಗ್ರಹಿಸಿ ಕೊಡಿದೊಡೆ, ನಿನ್ನ ಸರ್ವಜ್ಞತ್ವವು ಸಾರ್ಥಕಮಾಗಿ ನಿನ್ನ ಕ್ರೀಡೆಗೆ ಕೇಡುಬಾರದು ಕಂಡ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ