ಅಥವಾ

ಒಟ್ಟು 12 ಕಡೆಗಳಲ್ಲಿ , 3 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಶಿವನ ಷಟ್‍ಕಾಯದೊಳಗೆ ತೋರಿದಾ ಆರಾರು ಆರು ಹನ್ನೆರಡು ನೂರಾಯೆಂಟು ತತ್ವವಾಯಿತು. ಈ ನೂರಾಯೆಂಟರೊಳಗೆ ಸಹಸ್ರ ಲಕ್ಷ ಕೋಟಿ ಶಂಖ ಪದ್ಮ ಅರ್ಬುದ ಅನಂತ ಅಗಣಿತ ಅಗಮ್ಯ ಅಗೋಚರ ಅಪ್ರಮಾಣಿತ ಅತೀತ ಅಣೋರಣೀಯಾನ್ ಮಹತೋ ಮಹೀಯಾನ್ ಏನೋ ಎನೋ ಎನಿಸಿದಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಗಂಡಂಗೆ ನಾಚಿದ ಹೆಂಡತಿ ಮಕ್ಕಳ ಹೇಂಗೆ ಹಡೆವಳಯ್ಯ? ಲಿಂಗಕ್ಕ ನಾಚಿದಾತ ಶರಣನೆಂತಪ್ಪನಯ್ಯ? ಈ ಲಜ್ಜೆ ನಾಚಿಕೆಯೆಂಬ ಪಾಶವಿದೇನಯ್ಯ? ಸಂಕಲ್ಪ ವಿಕಲ್ಪದಿಂದ ಸಂದೇಹಿಸುವ ಭ್ರಾಂತಿಯೇ ಲಜ್ಜೆಯಯ್ಯ. ಅಹುದೋ ಅಲ್ಲವೋ, ಏನೋ ಎಂತೋ ಎಂದು ಹಿಡಿವುತ್ತ ಬಿಡುತ್ತಿಪ್ಪ ಲಜ್ಜಾಭ್ರಾಂತಿ ಉಡುಗಿರಬೇಕಯ್ಯ. ಗಂಡನ ಕುರುಹನರಿಯದಾಕೆಗೆ ಲಜ್ಜೆ, ನಾಚಿಕೆ ಉಂಟಾದುದಯ್ಯ. ಲಿಂಗವನರಿಯದಾತಂಗೆ ಸಂಕಲ್ಪ ವಿಕಲ್ಪವೆಂಬ ಸಂದೇಹ ಭ್ರಾಂತಿ ಉಂಟಾದುದಯ್ಯ. ಈ ಅರುಹು ಮರಹೆಂಬುಭಯದ ಮುಸುಕ ತೆಗೆದು ನೆರೆ ಅರುಹಿನಲ್ಲಿ ಸನ್ನಿಹಿತವಿಲ್ಲದ ಜಡರುಗಳ ಕೈಯಲ್ಲಿ ಲಿಂಗಾನುಭಾವವ ಬೆಸಗೊಳಲುಂಟೆ ಅಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅರವುತೋರಿಕೆಯೇನೂ ಇಲ್ಲದಂದು, ಮರವು ತೋರಿಕೆಯೇನೂ ಇಲ್ಲದಂದು, ಕುರುಹುತೋರಿಕೆ ಏನೂ ಇಲ್ಲದಂದು ಚಿನ್ನಾದ ಚಿದ್ಬಿಂದು ಚಿತ್ಕಳೆ ಇಲ್ಲದೆ ಏನೋ ಏನೋ ಆಗಿರ್ದಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಶಿವನೇ ಶರಣ, ಶರಣನೇ ಶಿವನೆಂದೆಂಬರು. ಹೀಗೆಂದೆಂಬುದು ಶ್ರುತಪ್ರಮಾಣದ ವಾಚಾಳಕತ್ವವಲ್ಲದೆ ಪರಮಾರ್ಥವಲ್ಲ ನೋಡ. ಶರಣನೇ ಲಿಂಗವೆಂಬುದು ಏಕಾರ್ಥವಾದಡೆ, ಇತರ ಮತದ ದ್ವೆ ೈತಾದ್ವೆ ೈತ ಶಾಸ್ತ್ರವ ಕೇಳಿ, ಅಹುದೋ ಅಲ್ಲವೋ, ಏನೋ ಎಂತೋ ಎಂದು ಸಂದೇಹಿಸಿದಲ್ಲಿ ಅದು ಅಜ್ಞಾನ ನೋಡಾ. ಶಿವಜ್ಞಾನ ಉದಯವಾದ ಶರಣರ ಆದಿ ಮಧ್ಯಾವಸಾನವರಿದು, ನಿಶ್ಚಯಿಸಿ, ನೆಲೆಗೊಂಡ ಬಳಿಕ ಇತರ ಮತದ ವೇದ ಶಾಸ್ತ್ರಪುರಾಣ ಆಗಮಂಗಳ ಶ್ರುತಿ ಭ್ರಾಂತಿಗೆ ಭ್ರಮೆಗೊಂಬನೆ ನಿಭ್ರಾಂತನಾದ ನಿಜಲಿಂಗೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಏನೋ ಏನೋ ಗಂಡಾ, ನಿಮ್ಮ ತಂದೆ ಬಂದೈದಾನೆ; ನಾನೇನುವನರಿಯೆನೈ. ನೀನೆ ನಿಮ್ಮ ತಂದೆಯ ಸಂತೈಸಿ, ಎನಗವರ ಕರುಣವ ಪಾಲಿಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ನಿಃಕಳ ನಿರುಪಮ ತೇಜೋಮಯ ನಿರಂಜನಲಿಂಗದ ನೆನಹಿನ ಮಹಾಘನ ಮಹತ್ವವನುಳ್ಳ ಮಹಾಂತ ಅಖಂಡಪರಶಿವನೊಳಗೆ ಷಡ್‍ವಕ್ತ್ರವನುಳ್ಳ ಪರಬ್ರಹ್ಮವಿರ್ಪುದು, ಆ ಪರಬ್ರಹ್ಮದಲ್ಲಿ ಬ್ರಹ್ಮಾಂಡವಿರ್ಪುದು, ಆ ಬ್ರಹ್ಮಾಂಡದೊಳಗೆ ಸಕಲ ಸ್ಥಿರಚರಪ್ರಾಣಿಗಳಿರ್ಪುವು. ಆ ಪ್ರಾಣಿಗಳ ಸತ್ಕರ್ಮ ದುಷ್ಕರ್ಮದಿಂದಾದ ಪುಣ್ಯ ಪಾಪಂಗಳಿಂದೆ ಬಂದ ಸುಖದುಃಖಂಗಳನುಂಡು ಸೃಷ್ಟಿ ಸ್ಥಿತಿ ಲಯಕ್ಕೊಳಗಾಗಿ ಅನಂತಕಾಲ ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಬರುತಿರ್ಪುದು. ಆ ಬರುವದರೊಳಗೆ ಸತ್ಕರ್ಮದಿಂದ ಪುಣ್ಯವೊದಗಿ ಮಾನವಜನ್ಮ ಬರಲು ಈ ಮಾನವಜನ್ಮದ ಅಜ್ಞಾನಕ್ಕೆ ಆ ಮಹಾಮಹಾಂತ ಪರಿಮಳವನೊಳಕೊಂಡು ಮಹಾಂತಮಾರುತ ಸುಳಿಯಲು ಆ ಮಾರುತನ ಸೋಂಕಿಗೆ ಆ ಅಜ್ಞಾನ ಸುಜ್ಞಾನವಾಯಿತ್ತು. ಆ ಸುಜ್ಞಾನದಿಂದೆ ಸತ್ಕರ್ಮವ ಮಾಡಲು ಸಾಧುರಸಂಗವು ದೊರಕಿತ್ತು. ಆ ಸಾಧುರಸಂಗದಿಂದ ಸುಗುಣ ಅಳವಟ್ಟಿತ್ತು. ಆ ಸುಗುಣ ಅಳವಟ್ಟಲ್ಲಿ ಸಂಸಾರ ಹೇಯವಾಯಿತ್ತು. ಆ ಸಂಸಾರ ಹೇಯವಾದಲ್ಲಿ ಮುಕ್ತನಾಗಬೇಕೆಂಬೋ ಚಿಂತೆ ತಲೆದೋರಿತ್ತು. ಆ ಚಿಂತಾಪರವಶದಿಂದೆ ದುಃಖಗೊಂಡಿರಲು ಆ ಮಹಾಂತಪರಿಮಳವನೊಳಕೊಂಡು, ಮಹಾಂತಮಾರುತನೆಂಬ ಪ್ರಭುವೇ ತಾ ಮುನ್ನ ಸೋಂಕಿದ್ದಕ್ಕೆ ತನ್ನ ಬಯಸುವ ಶಿಷ್ಯನಲ್ಲಿಗೆ ತಾನೇ ಗುರುವಾಗಿ ಬಂದು, ಮೋಕ್ಷವಾಸನಿಗೆ ಅವಸ್ಥೆಯೊಳಗಿದ್ದ ಶಿಷ್ಯನ ಸಂತೈಸಿ, ಮಹಾಂತಪರಿಮಳವನುಳ್ಳ ಮುಕ್ತಿಫಲವಾಗುವ ಘನವೆಂಬ ಪುಷ್ಪಕ್ಕೆ ಮೂಲನೆನವಾದ ಮನವೆಂಬ ಲಿಂಗದಲ್ಲಿ ನಿಃಕಲವೇ ನಾನು, ನಾನೇ ನೀನು. ಹೀಗೆಂಬುವುದ ಉಸುರದೆ ಮರೆಗೈದು, ಆ ಲಿಂಗಮಂ ಪರಿಪೂರ್ಣವಾದ ಕರಕಮಲಕ್ಕೆ ಕೊಟ್ಟು ಮನವೆಂಬ ಲಿಂಗದ ನೆನವೆಂಬ ಬಳ್ಳಿಯೇ ಜಂಗಮವೆಂದು ತೋರಿ, ಆ ಬಳ್ಳಿಯ ಬೊಡ್ಡಿಯ ತಂಪು ಪಾದೋದಕವು. ಆ ಆನಂದ ತಂಪ್ಹಿಡಿಯುವುದಕ್ಕೆ ಮಡಿಯಾದ ಮೃತ್ತಿಕೆಯು ನಿರಂಜನಪ್ರಸಾದ. ಆ ಮೃತ್ತಿಕೆಗೆ ಒಡ್ಡಾದ ತೇಜೋಮಯವೇ ವಿಭೂತಿ, ಆ ತೇಜಸ್ಸು ಲಿಂಗಪೂಜೆಯೇ ರುದ್ರಾಕ್ಷಿ, ಆ ತೇಜಸ್ಸು ಲಿಂಗಸ್ಫುಟನಾದವೇ ನಿರುಪಮಮಂತ್ರ, ಇಂತೀ ಅಷ್ಟಾವರಣ ಘಟ್ಟಿಗೊಂಡು ಪೂಜಿಸಲಾಗಿ ಆ ಶಿಷ್ಯನು ಗುರುವ ಹಾಡಿ, ಲಿಂಗವ ನೋಡಿ, ಜಂಗಮವ ಪೂಜಿಸಿ, ಪಾದೋದಕವನ್ನುಪಾರ್ಜಿಸಿ, ಪ್ರಸಾದವನುಂಡು, ವಿಭೂತಿಯ ಲೇಪಿಸಿಕೊಂಡು, ರುದ್ರಾಕ್ಷಿಯ ಧರಿಸಿಕೊಂಡು, ಮಂತ್ರವ ಚಿತ್ತದೊಳಿರಿಸಿ ಆಚರಿಸಲು, ಆ ಶಿಷ್ಯನ ಕಾಯ ಆ ಗುರುವನಪ್ಪಿ ಸದ್ಗುರುವಾಯಿತ್ತು. ಮನವು ಲಿಂಗವ ಕೂಡಿ ಘನಲಿಂಗವಾಯಿತ್ತು. ಪ್ರಾಣ ಜಂಗಮವ ಮರೆಗೊಂಡು ನಿಜಜಂಗಮವಾಯಿತ್ತು. ತೃಷೆ ಪಾದೋದಕದಲ್ಲಿ ಮುಳುಗಿ ಆನಂದಪಾದೋದಕವಾಯಿತ್ತು. ಹಸಿವು ಪ್ರಸಾದದಲ್ಲಡಗಿ ಪ್ರಸಿದ್ಧಪ್ರಸಾದವಾಯಿತ್ತು. ಚಂದನ ವಿಭೂತಿಯಲ್ಲಿ ಸತ್ತು ಚಿದ್ವಿಭೂತಿಯಾಯಿತ್ತು. ಶೃಂಗಾರ ರುದ್ರಾಕ್ಷಿಯಲ್ಲಿ ಕರಗಿ ಏಕಮುಖರುದ್ರಾಕ್ಷಿಯಾಯಿತ್ತು. ಚಿತ್ತ ಮಂತ್ರದಲ್ಲಿ ಸಮರಸವಾಗಿ ಮೂಲಮಂತ್ರವಾಯಿತ್ತು. ಇಂಥಾ ಮೂಲಮಂತ್ರವೇ ಬ್ರಹ್ಮಾಂಡ, ಪಿಂಡಾಂಡ, ಸ್ಥಿರ, ಚರ, ಸಮಸ್ತಕ್ಕೆ ಕಾರಣ ಚೈತನ್ಯಸೂತ್ರವಾಗಿ ಅಂತರಂಗ ನಿವೇದಿಸಲು, ಅಲ್ಲಿ ಅಂತರಂಗದಲ್ಲಿ ತೋರುವ ಆರುಸ್ಥಲ, ಆರುಚಕ್ರ, ಆರುಶಕ್ತಿ, ಆರುಭಕ್ತಿ, ಆರುಲಿಂಗ, ಆರಾರು ಮೂತ್ತಾರು, ಇನ್ನೂರಾಹದಿನಾರು ತೋರಿಕೆಗೆ ಆ ಮೂಲಮಂತ್ರ ತಾನೇ ಕಾರಣ ಚೈತನ್ಯಸೂತ್ರವಾಗಿ ಕಾಣಿಸಲು ಸಮ್ಯಜ್ಞಾನವೆನಿಸಿತು. ಆ ಸಮ್ಯಜ್ಞಾನಬೆಳಗಿನೊಳಗೆ ಮುದ್ರೆ ಸಂಧಾನ ವಿವರ ವಿಚಾರದಿಂದೆ ಷಟ್ತಾರೆಗಳ ಸ್ವರೂಪದ ಆರುಭೂತ, ಆರುಮುಖ, ಆರುಹಸ್ತ, ಆರುಪ್ರಸಾದ, ಆರುತೃಪ್ತಿ, ಆರು ಅಧಿದೇವತೆ ಮೊದಲಾದ ಆರಾರು ಮೂವತ್ತಾರು ಇನ್ನೂರಾಹದಿನಾರು ಅನಂತ ತೋರಿಕೆಯೆಲ್ಲಾ ಮಂತ್ರಸ್ವರೂಪವೇ ಆಗಿ ತೋರಿದಲ್ಲಿ ತತ್ವಜ್ಞಾನವಾಯಿತು. ಒಳಗೇಕವಾದ ತತ್ವಜ್ಞಾನವು ಹೊರಗೆ ನೋಡಲು ಹೊರಗೇಕವಾಗಿ ತೋರಿತು. ಒಳಹೊರಗೆಂಬಲ್ಲಿ ನಡುವೆಂಬುದೊಂದು ತೋರಿತು. ಈ ಮೂರು ಒಂದೇ ಆಗಿ, ಒಂದೇ ಬ್ಯಾರೆ ಬ್ಯಾರೆ ಸ್ಥೂಲ ಸೂಕ್ಷ್ಮ ಕಾರಣ ಮೂರಾದಲ್ಲಿ ಆತ್ಮಜ್ಞಾನವಾಯಿತು. ಆ ಆತ್ಮಜ್ಞಾನದಿಂದ ಆತ್ಮಾನಾತ್ಮ ವಿಚಾರ ಗಟ್ಟಿಗೊಂಡಲ್ಲಿ ಮಹಾಜ್ಞಾನಪ್ರಕಾಶವಾಯಿತು. ಆ ಮಹಾಜ್ಞಾನದಿಂದೆ ಅನುಭವದ ದೃಷ್ಟಿಯಿಡಲು ಬೊಂಬೆಸೂತ್ರ ಆಡಿಸುವವನಂತೆ ಬ್ಯಾರೆ ಬ್ಯಾರೆ ಕಾಣಿಸಲು ಈ ಬೊಂಬೆಯ ಸೂತ್ರ ಆಡಿಸುವವನು ಇವು ಮೂರು ಎಲ್ಲಿಹವು, ಏನೆಂದು ತೂರ್ಯವೇರಿ ಸೂರೆಗೊಂಡಲ್ಲಿ ಸ್ವಯಂಬ್ರಹ್ಮವೆನಿಸಿತ್ತು. ಆ ಸ್ವಯಂಬ್ರಹ್ಮಜ್ಞಾನವು ತನ್ನ ತಾ ವಿಚಾರಿಸಲು ತನ್ನೊಳಗೆ ಜಗ, ಜಗದೊಳಗೆ ತಾನು, ತಾನೇ ಜಗ, ಜಗವೇ ತಾನೆಂಬಲ್ಲಿ ನಿಜಜ್ಞಾನವಾಯಿತು. ಆ ನಿಜಜ್ಞಾನದಿಂದೆ ನಿಜವರಿಯಲು ಆ ನಿಜದೊಳಗೆ ತಾನೇ ಜಗ, ಜಗದೊಳಗೆ ತಾನೇ ಎಂಬೋ ಎರಡಿಲ್ಲದೆ ತಾನೆ ತಾನೆಂಬೊ ಅರುವಾಯಿತು. ಆ ಅರುವು ಮರೆಗೊಂಡು ಕುರುಹು ಉಲಿಯದೆ ನಿರ್ಬೈಲಾಗಲು ಮಹಾಂತನೆಂಬ ಹೆಸರಿಲ್ಲದೆ ಹೋಗಿ ಏನೋ ಆಯಿತ್ತು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ರೂಪತೋರಿಕೆಯೇನೂ ಇಲ್ಲದಂದು, ಕರಣತೋರಿಕೆಯೇನೂ ಇಲ್ಲದಂದು, ಪ್ರಾಣ ತೋರಿಕೆಯೇನೂ ಇಲ್ಲದಂದು, ನಿರ್ಭಾವ ನಿರುಪಮ ನಿರಂಜನ ನಿಷ್ಕಳ ಏನೂ ಇಲ್ಲದಂದು, ನಿರ್ಬೈಲೆಂಬುದು ಏನೋ ಏನೋ ಸುಳ್ಳಾಗಿರ್ದಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಆ ಪರಶಿವನ ನಿರ್ಬಯಲವೇ ಮಹಾಬಯಲು, ಚಿದ್ಬಯಲು, ಬಯಲು ಮೂರಾದರೂ ಒಂದೇ. ಚಿನ್ನಾದ ಚಿದ್ಬಿಂದು ಚಿತ್ಕಳೆ, ನಾದ, ಬಿಂದು, ಕಳೆ ಆರಾದರೂ ಒಂದೇ. ಆರು ಮೂರು ಒಂಬತ್ತಾದರೂ ಒಂದೇ. ಒಂದು ಒಂಬತ್ತಾಗಿ, ಆ ನಿರ್ಬಯಲು ತಾನೆ ಹಲವಾಗಿತ್ತು. ಈ ಹಲವಾದರೂ ನಿರ್ಬೈಲೊಂದೇ, ಒಂದೇ ಎಂದರೆ ಒಂದೂ ಇಲ್ಲಾ. ನಿರ್ಬೈಲಿಗೆ ನಾಮ ಉಂಟೇ ? ರೂಪ ಉಂಟೇ ? ಕ್ರೀಯ ಉಂಟೇ ? ನಿರ್ಬೈಲೇ ನಿರ್ಬೈಲೆಂಬುದು ಇದು ಎಲ್ಲಿ ಇದೇ ನಿರ್ಬೈಲು. ಮತ್ತೆ ತಾ ನಿರ್ಬೈಲ ರೂಪಾದರೂ, ಆ ರೂಪ ತಾ ನಿರ್ಬೈಲಲ್ಲವೇ ? ತಾ ಕೂಡಲಿಕ್ಕೆ ಠಾವು ಬ್ಯಾರುಂಟೇ ? ಗಂಧ ರುಚಿ ರೂಪ ಸ್ಪರ್ಶ ಶಬ್ದ ತೃಪ್ತಿ ಇವು ತನ್ನ ತಾನಲ್ಲವೇ ? ಇದ್ದದ್ದು ತಾನೇ ಇಲ್ಲದ್ದು ತಾನೇ, ಹ್ಯಾಂಗಾದರೂ ತಾನೇ ನಿರ್ಬೈಲು. ಇದನರಿಯದೇ ಪೂರ್ವಪುಣ್ಯದಿಂದೆ ಮಾನವ ಜನ್ಮವ ತಾಳಿ, ಅಜ್ಞಾನವಳಿದು ಸುಜ್ಞಾನಿಯಾಗಿ, ಸುಜ್ಞಾನದಿಂದ ಸಾಧುರ ಸಂಗವ ಮಾಡಿ, ಗುರುಕರುಣವ ಪಡೆದು ಲಿಂಗವ ಪೂಜಿಸಿ, ಜಂಗಮಾರಾಧನೆಯ ಮಾಡಿ, ಪಾದೋದಕ ಸಲ್ಲಿಸಿ, ಪ್ರಸಾದವನುಂಡು, ವಿಭೂತಿಯ ಧರಿಸಿ, ರುದ್ರಾಕ್ಷಿಯ ಶೃಂಗರಿಸಿ, ಮಂತ್ರವನೋದಿ, ಯಂತ್ರವ ಕಟ್ಟಿ, ತಂತ್ರವ ತಿಳಿದು, ಸ್ವತಂತ್ರಸಿದ್ಧಲಿಂಗನಾದ ಮೇಲೆ ತನ್ನೊಳಗೆ ತಾನೇ ವಿಚಾರಿಸಿ, ಮತ ಒಂದಾದ ಮತಿಜ್ಞಾನ, ಸ್ತುತಿ ನಿಂದ್ಯ ಒಂದಾದ ತತ್ವಜ್ಞಾನ, ಸರ್ವವೂ ಒಂದಾದ ಸಮ್ಯಜ್ಞಾನ, ಅಂಗ ಒಂದಾದ ತತ್ವಜ್ಞಾನ, ಆ ಪ್ರಾಣ ಒಂದಾದ ಆತ್ಮಜ್ಞಾನ, ಕತ್ತಲೆ ಬೆಳಗು ಒಂದಾದ ಮಹಾಜ್ಞಾನ, ನಿಸ್ಸೀಮವಾದ ಅಖಂಡಜ್ಞಾನ, ಶಬ್ದಮುಗ್ಧವಾದುದ್ದೇ ಸ್ವಯಂಭುಬ್ರಹ್ಮಜ್ಞಾನ, ಅರವಾದದ್ದು ಅರವು, ಮರವಾದದ್ದು ಮರವು. ಈ ಮರವಾದದ್ದು ಮರವಾಗದೆ ಮರವು ಮರಳಿ ಅರವಾಗಿ, ಎಚ್ಚರಗೊಂಡು ಇಚ್ಛೆ ಉಳಿದರೆ ಅದೇ ಭವಮರವು, ಮರವಾಗಿ ಮರವು ಮರವಾದರೆ, ಸಾವಿಗೆ ಸಾವಾಗಿ ಸಾವು ಸತ್ತಿತ್ತು. ಮರವಿನ ಮರವೇ ಸಾವಿನ ಸಾವು; ಸಾವೆಂಬುದೇ ಮಾಯೆ. ಮಾಯೆಯೆಂಬುದೇ ಮರಗಿ, ಮರಗಿಯೆಂಬುದೇ ದುರಗಿ, ದುರಗಿಯೆಂಬುದೇ ಶಕ್ತಿ , ಶಕ್ತಿಯೆಂಬುದೇ ಅಂಗ, ಅಂಗವೆಂಬುದೇ ಲಿಂಗ, ಲಿಂಗವೆಂಬುದೇ ಮನ, ಮನವೆಂಬುದೇ ಘನ, ಘನವೆಂಬುದೇ ಗುರು, ಗುರುವೆಂಬುದೇ ಪರ, ಪರವೆಂಬುದೇ ತಾನು, ತಾನುಯೆಂಬುದೇ ಬೈಲು, ಬೈಲೆಂಬುದೇ ಮುಕ್ತಿ, ಮುಕ್ತಿಯೆಂಬುದೇ ಏನೋ ಏನೋ ಎಂಬುದೇ ಮಾತು, ಮಾತುಯೆಂಬುದೇ ವಚನ, ವಚನಯೆಂಬುದೇ ಅಕ್ಷರ, ಅಕ್ಷರಯೆಂಬುದೇ ಮಂತ್ರ, ಮಂತ್ರಯೆಂಬುದೇ ಪ್ರಣವ, ಪ್ರಣವಯೆಂಬುದೇ ನಾದ, ನಾದಯೆಂಬುದೇನಾದುದೇ ಹೇಳಲಿಕ್ಕೆ ನಿರ್ಬೈಲು. ನಿರ್ಬೈಲೇ ಸುಳ್ಳು, ಈ ಸುಳ್ಳು ಖರೇ ಮಾಡದೆ ಹರಿ ಅಜ ಇಂದ್ರಾದಿ ಮನು ಮುನಿ ನರ ನಾಗ ಸುರ ಸಿದ್ಧ ಸಾಧ್ಯರು, ರುದ್ರ ಈಶ್ವರ ಸದಾಶಿವ ಮಹಾದೇವರು ಮತ್ತೆ ಮಾದೇವರು, ಅಷ್ಟಾಂಗಯೋಗಿಗಳು, ಅಷ್ಟಾವರಣ ನಿಷೆ*ಯುಳ್ಳವರು, ಮಹಾನುಭಾವಿಗಳು, ನಿಜಜ್ಞಾನಿಗಳು, ಮಹಾ ಅರವಿಗಳು, ಸುಳ್ಳು ಸುಳ್ಳು ಮಾಡಿ, ಸುಳ್ಳು ಬ್ಯಾರೆ, ಖರೆಬ್ಯಾರೆ, ಬ್ರಹ್ಮವು ಬ್ಯಾರೆ, ಹಮ್ಮು ಬ್ಯಾರೆ, ಬ್ರಹ್ಮಾಂಡ ಬ್ಯಾರೆ, ಪಿಂಡಾಂಡ ಬ್ಯಾರೆ, ಕಾಯ ಬ್ಯಾರೆ, ಕರಣ ಬ್ಯಾರೆ, ಆತ್ಮ ಬ್ಯಾರೆ, ಪರಮಾತ್ಮ ಬ್ಯಾರೆ, ಭವ ಬ್ಯಾರೆ, ಶಿವ ಬ್ಯಾರೆ, ಬೆಳಗು ಬ್ಯಾರೆ, ಕತ್ತಲು ಬ್ಯಾರೆ, ಪುಣ್ಯ ಬ್ಯಾರೆ, ಪಾಪ ಬ್ಯಾರೆ, ಸತ್ಕರ್ಮ ಬ್ಯಾರೆ, ದುಷ್ಕರ್ಮ ಬ್ಯಾರೆ, ಅಜ್ಞಾನ ಬ್ಯಾರೆ, ಸುಜ್ಞಾನ ಬ್ಯಾರೆ, ಹೆಣ್ಣು ಬ್ಯಾರೆ, ಗಂಡು ಬ್ಯಾರೆ, ಸ್ವರ್ಗ ಬ್ಯಾರೆ, ನರಕ ಬ್ಯಾರೆ, ಸಾವು ಬ್ಯಾರೆ, ಜೀವ ಬ್ಯಾರೆ, ಗುರು ಬ್ಯಾರೆ, ಶಿಷ್ಯ ಬ್ಯಾರೆ, ಮಹಾಂತ ಬ್ಯಾರೆ, ಮಡಿವಾಳ ಬ್ಯಾರೆ, ಮೃತ್ಯು ಬ್ಯಾರೆ, ಮಾತು ಬ್ಯಾರೆ, ಭಕ್ತಿ ಬ್ಯಾರೆ, ಮುಕ್ತಿ ಬ್ಯಾರೆ, ನಾವು ಬ್ಯಾರೆ, ನೀವು ಬ್ಯಾರೆ, ತಾ ಬ್ಯಾರೆ ಬ್ಯಾರೆಯೆಂದು ತಾ ಬ್ಯಾರ್ಯಾಗಿ ಸುಳ್ಳು ಖರೇ ಮಾಡದ, ತುಪ್ಪ ಹಾಲುವ ಮಾಡದೇ ಹಾಲು ತುಪ್ಪವ ಮಾಡಿದಂತೆ ತಾವು ಸುಳ್ಳಾಗದೆ ಸುಳ್ಳು ಸುಳ್ಳೆಂದು ಸುಳ್ಳು ಜೊಳ್ಳಾದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
-->