ಅಥವಾ

ಒಟ್ಟು 5 ಕಡೆಗಳಲ್ಲಿ , 3 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಶರಣಂಗೆ ನಿಜೈಕ್ಯಪದಂಗಳು ದೊರೆಕೊಂಬುವ ತೆರನ ಶ್ರುತಿ ಗುರು ಸ್ವಾನುಭಾವದಿಂದ ನುಡಿವುತಿಪ್ಪೆ ಕೇಳಿರಯ್ಯ. ಜನನ ಮರಣಕಂಜಿ ತಾನಾರೆಂಬುದಂ ಸ್ವಾನುಭಾವದಿಂ ನೋಡಿ ಎಲ್ಲಿಂದೊಗೆದೆನೆಂಬುದಂ ಬಗೆಗೊಂಡು ಅರಿವು ತಲೆದೋರಿ ಪುಣ್ಯಪಾಪಕ್ಕೆ ಬೀಜಾಂಕುರಮಪ್ಪ ಮಲತ್ರಯಂಗಳಿಗೆ ತಲೆಗೊಡಹಿ ಭೋಗಮಂ ನೀಗಿ ಭುಕ್ತಿಯಿಂ ತೊತ್ತಳದುಳಿದು ಬಂಧುವರ್ಗಮಂ ಭಂಗಿಸಿ ಉಪಾದ್ಥಿಕೆಯನುರುಹಿ ಒಡಲಾಸೆಯಂ ತಲೆವೊಡೆಯನಿಕ್ಕಿ ಅಹಂಕಾರಂಗಳನಳಿದು ಮಮಕಾರಂಗಳಂ ಮುಂದುಗೆಡಿಸಿ ಲೋಕದ ನಚ್ಚುಮೆಚ್ಚಿಗೆ ಕಿಚ್ಚುಗುತ್ತಿ ಜ್ಞಾನ ಕ್ರೀಗಳಲ್ಲಿ ದೃಢವ್ರತವಾಗಿ ಕರಿಗೊಂಡು ಆಸನದಲ್ಲಿ ಮರಹ ಮಗ್ಗಿಸಿ ಮನ ತನುವನಪ್ಪಿ ಸರ್ವ ಕರಣಂಗಳಂ ಚರಲಿಂಗಮುಖವ ಮಾಡಿ ಆತ್ಮವಿದ್ಯಾಲಿಂಗದಲ್ಲಿ ಮನಸಂದು ಪಂಚಪ್ರಸಾದಾತ್ಮಕನಾದ ಘನಲಿಂಗದ ಬೆಳಗ ಪಿಂಡಾಂಡದಲ್ಲಿ ಜ್ಞಾನದಿಕ್ಕಿನಿಂದ ಪರಿಪೂರ್ಣವಾಗಿ ಕಂಡು ಪೆಣ್ದುಂಬಿಯನಾದವೆ ಮೊದಲಾದ ಸಿಂಹನಾದವೆ ಕಡೆಯಾದ ಆರೆರಡು ಪ್ರಕಾರದ ನಾದಂಗಳಂ ಕೇಳಿ ಹರುಷಂ ಹರವರಿಗೊಂಡು ಎನಗೆ ಶಿವತತ್ವ ಸಾಧ್ಯವಾಯಿತು. ಪರಶಿವನಲ್ಲಿ ಒಡಗೂಡಿ ಪರಬ್ರಹ್ಮವಾದೆನೆಂದು, ಅಹಂಕರಿಸಿ ಕ್ರೀಯಂ ಬಿಟ್ಟು ಗಂಬ್ಥೀರಜ್ಞಾನದೊಳಿರುವ ಶರಣಂಗೆ ಮೂರೊಂದು ವಿಧದ ಪದಂಗಳು ಬಪ್ಪವಲ್ಲದೆ ಶಿವನಲ್ಲಿ ನಿಜೈಕ್ಯವಿಲ್ಲ. ಅದೇನು ಕಾರಣವೆಂದೊಡೆ- ಷಟ್ಸ ್ಥಲಬ್ರಹ್ಮಿಯೆನಿಸಿಕೊಂಡು ಆರುಸ್ಥಲವಿಡಿದು ಆಚರಿಸಿ ಮೂರುಸ್ಥಲದಲ್ಲಿ ಅವಧಾನಿಯಾಗಿ ಎರಡೊಂದು ಸ್ಥಲ ಒಂದಾದ ಸ್ಥಲದಲ್ಲಿ ಶರಣಲಿಂಗವೆಂಬುಭಯವಳಿದು ನೂರೊಂದುಸ್ಥಲದೊಳಗೆ ಪ್ರಭಾವಿಸಿ ಪರಿಪೂರ್ಣವಾಗಿ ಸಿದ್ಧಪ್ರಸಾದವೆಂಬ ನಿಷ್ಕಲಬ್ರಹ್ಮದಲ್ಲಿ ಉರಿ ಕರ್ಪೂರದಂತೆ ಬೆಳಗುದೋರಿ ಶುದ್ಧಪ್ರಸಾದವನಂಗಂಗೊಂಡು ನಿರಂಜನ ಪ್ರಸಾದವನೊಡಗೂಡಿದ ಬಸವರಾಜದೇವರು ಉತ್ತುಂಗಲಿಂಗದಲ್ಲಿ ಐಕ್ಯವಾಗುವನ್ನಬರ ಶಿವಲಿಂಗಪೂಜೆಯಂ ಬಿಟ್ಟ[ರೆ]? ಜಪ ತಪ ನಿತ್ಯ ನೇಮಂಗಳ ಬಿಟ್ಟ[ರೆ]? ಲಿಂಗಕ್ಕೆ ಕೊಟ್ಟು ಕೊಂಬ ಅರ್ಪಿತವಧಾನಂಗಳಂ ಬಿಟ್ಟ[ರೆ]? ತೀರ್ಥಪ್ರಸಾದದಲ್ಲಿ ಒಯ್ಯಾರಮಂ ಬಿಟ್ಟ[ರೆ]? ಮಾಡಿ ನೀಡುವ ದಾಸೋಹಮಂ ಬಿಟ್ಟ[ರೆ]? ಗುರುಲಿಂಗ ಜಂಗಮವ ಕಂಡು ಪೊಡಮಡುವುದಂ ಬಿಟ್ಟ[ರೆ]? ಬಿಜ್ಜಳನ ಓಲಗದ ಸಭಾಮಧ್ಯಕ್ಕೆ ಹೋಗಿ ತನ್ನ ದಿವ್ಯ ಶ್ರೀ ಪಾದಪದ್ಮಂಗಳಂ ಬಿಜ್ಜಳಂಗೆ ತೋರಿ ಅವನ ಕರ್ಮಾದಿಕರ್ಮಂಗಳಂ ಸುಟ್ಟು ಅವನ ರಕ್ಷಿಪುದಂ ಬಿಟ್ಟ[ರೆ]? ಇಂತಿವೆಲ್ಲವು ಕ್ರೀಯೋಗಗಳು. `ಕ್ರಿಯಾದ್ವೆ ೈತಂ ನ ಕರ್ತವ್ಯಂ ಜ್ಞಾನಾದ್ವೆ ೈತಂ ಸಮಾಚರೇತ್| ಕ್ರಿಯಾಂ ನಿರ್ವಹತೇ ಯಸ್ತು ಭಾವ ಶುದ್ಧಾಂತು ಶಾಂಕರಿ||' ಇಂತೆಂದುದಾಗಿ ಇದುಕಾರಣ ಐಕ್ಯವಾಗುವನ್ನಬರ ಕ್ರೀಯೊಳಗೊಂಡ ಶರಣಂಗೆ ನಿಜಮುಕ್ತಿಯಲ್ಲದೆ ಐಕ್ಯವಾಗುವುದಕ್ಕೆ ಮುನ್ನವೇ ಕ್ರೀಯಳಿದ ಶರಣನು ಸಾಯುಜ್ಯಪದಸ್ಥಲನಪ್ಪನಲ್ಲದೆ ಹರನಲ್ಲಿ ಸಮರಸವಿಲ್ಲವೆಂದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಆರು ಅಂಕಣದೊಳಗಾರು ದರುಶನ ಪೂಜೆ, ಆರೂಢರೂಢಾದಿಯೋಗಿಗಳಿರುತ್ತಿರಲು, ಆರಾರಿಂದತ್ತತ್ತ ವಿೂರಿ ತೋರುವ ಸ್ವಯಂಜ್ಯೋತಿ ಇರಲು, ಬೇರೆಯರಸಲುಂಟೆ ಶಿವಯೋಗವು ? ಆರು ಅಂಕಣದೊಳಗೆ ಆರು ಮಂದಿಯ ಸಂದಣಿಯ ಓಲಗದ ಸಡಗರವೆಂದು ಆರೂಢ ಯೋಗಿಗಳದನೆಣಿಕೆಗೊಳರು. ಮೂರು ಮನೆಯ ಮತ್ತೆ ದಾಳಿಗೊಳುವ ಕಾರಣಿಕರವಲ್ಲವಾಗಿ ವಿೂರಿ ಒಂಬತ್ತು ಗೊಪೆಯೊಳು ಲಯ ಗಮನ ಸ್ಥಿತ್ಯರ್ಥಂಗಳ ಹಂಗಿಲ್ಲದ ಹಂಗಿನಲ್ಲಿ ನೀನು ನಿನ್ನಲ್ಲಿ ಪತಂಗನ್ಯಾಯದಂತೆ ಗುಹೇಶ್ವರನೊಳೊಂದು ಕಂಡಾ.
--------------
ಅಲ್ಲಮಪ್ರಭುದೇವರು
ಎನ್ನಂತರಂಗದ ಆರು ಭುವನದ ಮೇಲೆ ತೋರುತಿರ್ಪ ಮಹಾಕೈಲಾಸದ ಮೂರು ಮಂಡಲದಲ್ಲಿ [ನಾಲ್ಕು] ಎಂಟು ಹದಿನಾರು ಮೂವತ್ತೆರಡು ತಂಡದಲ್ಲಿ ನಿಂದು ಓಲಗಂಗೊಡುತಿರ್ಪರು ಸಕಲಗಣಂಗಳು ನಿಮಗೆ. ಎನ್ನ ಮನ ಬುದ್ದಿ ಚಿತ್ತ ಅಹಂಕಾರಂಗಳು ನಿಮ್ಮ ಮಂತ್ರಿ ಪ್ರಧಾನಿಗಳಾಗಿರ್ಪರು. ಎನ್ನ ದಶವಾಯುಗಳು ನಿಮಗೆ ಹಸನಾಗಿ ಗಾಳಿಯ ಢಾಳಿಸುತಿರ್ಪರು. ಎನ್ನ ಅರಿಷಡ್ವರ್ಗಂಗಳು ನಿಮ್ಮ ಹೊಗಳುವ ಭಟಾಳಿಗಳಾಗಿ ನಿಮ್ಮ ನಾಮಮಂತ್ರಂಗಳ ಕೊಂಡಾಡುತಿರ್ಪರು. ಎನ್ನ ಚರಣಂಗಳು ನಿಮ್ಮ ಪ್ರದಕ್ಷಿಣೆಯ ಮಾಡುತಿರ್ಪವು. ಎನ್ನ ಹಸ್ತಂಗಳು ನಿಮ್ಮ ಶ್ರೀಪಾದವ ಪೂಜಿಸುತ್ತಿರ್ಪವು. ಎನ್ನ ಗುಹ್ಯ ನಿಮಗಾನಂದಸ್ಥಾನವಾಗಿರ್ಪುದು. ಎನ್ನ ಪಾಯು ನಿಮಗೆ ವಿಸರ್ಜನ ಕೃತ್ಯಕ್ಕನುವಾಗಿರ್ಪುದು. ಎನ್ನ ತ್ವಕ್ಕು ನಿಮಗೆ ಹಾಸಿಗೆಯ ಸುಖವನುಂಟುಮಾಡುತಿರ್ಪುದು. ಎನ್ನ ಕರ್ಣವು ನಿಮಗೆ ನಾದವ ಕೇಳಿಸುತಿರ್ಪುದು. ಎನ್ನ ಕಂಗಳು ನಿಮಗೆ ನಾನಾ ವಿಚಿತ್ರ ರೂಪವ ತೋರುತಿರ್ಪವು. ಎನ್ನ ಘ್ರಾಣವು ನಿಮಗೆ ಗಂಧ ಪರಿಣಾಮ ಮುಡಿಸುತಿರ್ಪುದು. ಎನ್ನ ಜಿಹ್ವೆ ನಿಮಗೆ ಷಡುರಸ ಪಂಚಕಜ್ಜಾಯಗಳ ದ್ರವ್ಯವ ಭೋಜನಕೆ ಎಡೆ ಮಾಡುತಿರ್ಪುದು. ಎನ್ನ ಸಕಲ ಕರಣಂಗಳು ನಿಮ್ಮ ನಿಜ ಸೇವೆಯನೆ ಮಾಡುತಿರ್ಪವು. ಇಂತೀ ನಾನಾ ತೆರದಿಂದಾಗುವ ನಿಮ್ಮ ಓಲಗದ ಒಡ್ಡವಣೆಯ ಕಂಡು, ಹೋದುದ ಬಂದುದನರಿಯದೆ ಸಂಪಿಗೆಯ ಪುಷ್ಪಕ್ಕೆರಗಿದ ಭ್ರಮರನಂತೆ ನಿಮ್ಮೊಳಗೆ ಪರವಶವಾಗಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿರ್ದಡೆ, ಆ ಬೆವಸಾಯದ ಘೋರವೇತಕ್ಕಯ್ಯಾ ? ಕ್ರಯವಿಕ್ರಯವ ಮಾಡಿ ಮನೆಯ ಸಂಚ ನಡೆಯದನ್ನಕ್ಕ ಆ ಕ್ರಯವಿಕ್ರಯದ ಘೋರವೇತಕ್ಕಯ್ಯಾ ? ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿರ್ದಡೆ ಆ ಓಲಗದ ಘೋರವೇತಕ್ಕಯ್ಯಾ ? ಭಕ್ತನಾಗಿ ಭವಂ ನಾಸ್ತಿಯಾಗದಿರ್ದಡೆ; ಆ ಉಪದೇಶವ ಕೊಟ್ಟ ಗುರು, ಕೊಂಡ ಶಿಷ್ಯ,_ ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ, ಗುಹೇಶ್ವರನೆಂಬವನತ್ತಲೆ ಹೋಗಲಿ.
--------------
ಅಲ್ಲಮಪ್ರಭುದೇವರು
ಸಾಸಿರ ಕಂಬದ ಮಂಟಪದೊಳಗೆ ಈಶ್ವರನ ಓಲಗದ ಸೋಜಿಗವನೇನ ಹೇಳುವೆನಯ್ಯಾ | ಮೂಜಗದವರೆಲ್ಲ ಮೈಮರೆದಿರ್ಪರು. ಭಾಸ್ಕರಕೋಟಿ ಬೆಳಗು ಕಂಗಳ ತುಂಬಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->