ಅಥವಾ

ಒಟ್ಟು 166 ಕಡೆಗಳಲ್ಲಿ , 1 ವಚನಕಾರರು , 166 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಲಿಂಗಸಂಬಂದ್ಥಿಯಾದ ಮಹಾತ್ಮನು ಅರಿಷಡ್ವರ್ಗಂಗಳರಿಯ, ಕ್ಷುತ್ತು ಪಿಪಾಸು ಶೋಕ ಮೋಹ ಜರೆ ಮರಣ ಗುಣತ್ರಯದೊಳೊಂದಿ ನಿಲ್ಲ. ತನುತ್ರಯ ಮಲತ್ರಯ ಈಷಣತ್ರಯ ಜೀವತ್ರಯ ಅವಸ್ಥಾತ್ರಯವೆಂಬ ಪಂಚದಶ ಮಾಯಾಪಟಲ ಹರಿದು ಮರೆದು ಮಹಾಘನ ಬೆಳಗಿನ ಸುಖವ ಸುಗ್ಗಿಯೊಳಿರ್ದು ಪ್ರಾಣಲಿಂಗವನರ್ಚಿಸುತ್ತಿಹನು ಭಕ್ತಿತ್ರಯಗೂಡಿ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹೆರೆಹಿಂಗದಾಚಾರ ಅಂಗವೇದಿಯಾಗಿ, ಇತರ ಸಂಗಸಂಯೋಗದತಿಶಯವನಳಿದು ನಿರತಿಶಯ ನಿಜಾನಂದಮಹಿಮನು ನೋಡಾ. ಕರಣವೃತ್ತಿ ಚರಣವ ಕೊಯ್ದು ಅರಿದರ್ಪಿತಮುಖಿ ಅನುಭಾವಿ ನೋಡಾ. ಶಿವಾಣತಿವಿಡಿದು ಸತ್ತುಚಿತ್ತಾನಂದ ನಿತ್ಯದಾಸೋಹಿಯಾಗಿರ್ದ ಗುರುನಿರಂಜನ ಚನ್ನಬಸವಲಿಂಗದಲ್ಲಿ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆದಿಭಕ್ತಿವಿಡಿದು ಮೆಲ್ಲಮೆಲ್ಲನೆ ಸಾದ್ಥಿಸಿ ಕೈಗೊಟ್ಟ ಪರಿಯ ನೋಡಾ ! ಹಾದಿ ಬಟ್ಟೆಯ ಸಾಧಕರತ್ತ ಸವೆಯದೆ ಮೂದೇವರ ಮಾಟದೊಳಗಿರ್ದು ಕೂಟಕೈದಿದ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಂಸಾರವನೊಪ್ಪಿಸಿದ ನಿರ್ವಾಣಿಗೊಮ್ಮೆ ಮಠವೆಂದಲ್ಲಿ ಗುರುದ್ರೋಹ. ಮಾನಿನಿಯೆಂದಲ್ಲಿ ಲಿಂಗದ್ರೋಹ, ಬಂಗಾರವೆಂದಲ್ಲಿ ಜಂಗಮದ್ರೋಹ. ಎನಲಿಲ್ಲದಿರ್ದಲ್ಲಿ ಅನಿಮಿಷನಾದ ಅನುಪಮಶರಣನೆಂದರಿವುದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾಟದೊಳು ಮರೆದರಿಯದಂದು ಚಿರಹೃದಯದಿಂದೊಡೆದು ಮೂಡಿ, ಪರಿಭವಂಗಳ ಹರಿದ ಇರವರಿಸಬೇಕೆಂದು ಪರಮಪಾವನ ಗುರುಕರುಣಾಮೃತವಾಗಿ ಬಂದ ಚಿದ್ರುದ್ರಾಕ್ಷಿಯನೊಲಿದು ನಲಿನಲಿದು ಧರಿಸಿ, ಮಲಮಾಯಾಮದಕರ್ಮಶೂನ್ಯನಾದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಣಬಾರದ ಲಿಂಗ ಕೈಗೆ ಬಂದಿತ್ತಾಗಿ ಮಾಡಬಾರದ ಭಕ್ತಿಯ ಮಾಡುತಲಿರ್ದೆನು. ನಡೆಯಬಾರದ ನಡೆಯ ನಡೆವೆ, ಮತ್ತೊಂದನರಿಯೆ, ನೋಡಬಾರದ ನಡೆ ಕಣ್ಣಮುಂದೆ ಬಂದಿತ್ತಾಗಿ ಅದ್ವೈತನಡೆಯ ಕಾಣಲಿಲ್ಲ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಕಷ್ಟಕರ್ಮದ ಬಟ್ಟೆಯ ಬೆಳಗಿನೊಳಗಿರ್ಪ ಹೊಟ್ಟೆಹೊರಕರ ಮಾತನೆಣಿಸಲಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕರ್ಮೇಂದ್ರಿಯಂಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ವಿಷಯಂಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ಜ್ಞಾನೇಂದ್ರಿಯಗಳೈದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ವಾಯುಪಂಚಕಂಗಳ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ಕರಣ ನಾಲ್ಕೊಂದರ ತಿರುಳನುರುಹಿ ತನ್ನನರಿಯಬಲ್ಲಾತನೇ ಶರಣ. ಇಂತಲ್ಲದೆ ಇವರ ತಿರುಳಿನೊಳು ಮರುಳುಗೊಂಡುರುಳುವ ಮಾನವರು ತಾವು ಶರಣರೆಂದು ನುಡಿದು ನಡೆವ ಸಡಗರವ ಕಂಡು ನಾಚಿತ್ತೆನ್ನ ಮನವು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಡುವಿನೊಳು ನಿಂದು ಹರಿವ ನೀರ ಮುಟ್ಟಿ ಬೇರೊಬ್ಬನ ಕೂಡ ಹಾದರವ ಮಾಡುವಳ ಕಂಡು, ಬಯಲೊಳಗೆ ನಿಂದು ಎಲ್ಲಗಳು ಅಹುದೆಂದು ಕೆಟ್ಟ ಕಣ್ಣಿನಿಂದ ಜರಿಯುತಿರ್ದನೊಬ್ಬ ಸುಳ್ಳ. ಗಾಳಿ ಮೊಟ್ಟೆಯ ಕಟ್ಟಿ ಕಾಳೋರಗನ ಹೆಡೆಯನೆತ್ತಿ ಮನೆ ಮನೆ ತಿರಿದುಂಡು ಹೋಗಿ ಬರುವನೊಬ್ಬ ಭ್ರಾಂತ. ಹೆಂಗಸು ಗಂಡಸು ಕಷ್ಟಿಗನು ಇವರ ಕಂಡು ನಗುತ ಮಾಡಿಕೊಂಡಿರ್ದ ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಬ್ಥಿನ್ನ ಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಸ್ಥಲವುಳ್ಳನ್ನಕ್ಕರ ಶಿಷ್ಯ, ಲಿಂಗಸ್ಥಲವುಳ್ಳನ್ನಕ್ಕರ ಭಕ್ತ, ಜಂಗಮಸ್ಥಲವುಳ್ಳನ್ನಕ್ಕರ ಶರಣ, ಇಂತು ಗುರುಲಿಂಗಜಂಗಮವನರಿದು ಮರೆದಲ್ಲಿ ಲಿಂಗೈಕ್ಯ ತಾನೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ನಿಮ್ಮ ಬಿಂದುವಿನ ಕಳೆಯ ನೋಡಿಕೊಳ್ಳಿ, ನಿಮ್ಮ ನಾದದ ಕಳೆಯ ನೋಡಿಕೊಳ್ಳಿ, ನಿಮ್ಮ ಕಳೆಯ ಕಳೆಯ ನೋಡಿಕೊಳ್ಳಿ, ನಾನು ಕದ್ದುಕೊಂಡು ಸೊಲ್ಲನೆಬ್ಬಿಸಿ ಅಲ್ಲದಾಟವನಾಡುವನಲ್ಲ. ನಾ ಬಲ್ಲೆ ನೋಡಿಕೊಂಡು ಕೂಡು ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಾವಧಾನಿ ಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಚ್ಚೊತ್ತಿರ್ದ ಅವಿರಳಲಿಂಗದಲ್ಲಿ ಅನಿಮಿಷನಾಗಿರ್ದಬಳಿಕ ಬೇರೊಂದನರ್ಚಿಸಲಿಲ್ಲ. ಭೇದವಾದಿಯಂತೆ ಗುಂಭಭ್ರಾಂತನಲ್ಲ ; ಅಭೇದವಾದಿಯಂತೆ ಅಪ್ರತಿಮ ಶರಣ. ನಡೆನುಡಿಯನರಿಯಬಾರದು ಕಾಯಪ್ರಾಣವುಳ್ಳನ್ನಕ್ಕರ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೋಣನ ಹತ್ತಿ ನಡೆವ ಕರಿಯಸತ್ತಿಗೆಯ ಹಿರಿಯರು ನೀವು ಕೇಳಿರೊ, ನಿಮ್ಮ ದಾರಿ ಡೊಂಕು ಬಹಳ, ಹೊತ್ತುಳ್ಳಲ್ಲಿ ಹೋಗುವ ಪರಿಯಿನ್ನೆಂತೊ ? ಕೋಣನ ಉರುಹಿ, ಕೊಂಬು ಕಿತ್ತೊಗೆದು, ಸತ್ತಿಗೆಯ ಸುಟ್ಟು, ಹಾರುವನ ತಲೆಯ ಬೋಳಿಸಿ, ಊರ ದೇವತೆಯ ಕಡಿದು ನಿಂತುನೋಡಲು ನೆಲ ಒಣಗಿ, ಬಿಳಿಯ ದಾರಿ ಕಾಣಬಹುದು. ಮೆಲ್ಲಮೆಲ್ಲನೆ ದಾರಿಯ ಬಿಡದೆ ನಡೆದರೆ ಗುರುನಿರಂಜನ ಚನ್ನಬಸವಲಿಂಗದಲ್ಲಿ ಎರಡನೆಯವತಾರವೊಪ್ಪಿತ್ತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಯದ ಬಣ್ಣವ ಸುಟ್ಟು ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ. ಮನದ ಬಣ್ಣವ ಕೆಡಿಸಿ ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ. ಭಾವದ ಬಣ್ಣವ ಅಳಿಸಿ ಮಾಡಿ ಕಡೆಗೆ ನಿಲ್ಲಬಲ್ಲರೆ ಮಾಹೇಶ್ವರ. ಗುರುನಿರಂಜನ ಚನ್ನಬಸವಲಿಂಗದಲ್ಲಿ ಹೊರೆಯಿಲ್ಲದಿರಬಲ್ಲರೆ ಆತನಚ್ಚ ಮಾಹೇಶ್ವರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪ್ರಾಣಲಿಂಗವನು ಮಾಣದೆ ನೋಡಿ, ಹೂಣಿಹೋದ ಜಾಣರ ಕಾಣೆನಯ್ಯಾ ಮೂರುಲೋಕದೊಳಗೆ. ಇರ್ದು ಇಲ್ಲದ, ಬಂದು ಬಾರದ, ನಿಂದು ನಿಲ್ಲದ ಚಂದ ಚಂದದ ನಡೆಯೊಳೆಸೆಯುತ, ನುಡಿಯೊಳೊಂದಿದ ಬಿಂದು ಅಲಸದೆ ಹಿಂದು ಹಿಂದನು ಮುಂದು ಮುಂದನು ತಂದು ಆರಾದ್ಥಿಸಿ ಸುಖಿಸುವ ಗುರುನಿರಂಜನ ಚನ್ನಬಸವಲಿಂಗದಲ್ಲಿ ಅನುಭಾವಿಭಕ್ತನಲ್ಲದೆ ಮತ್ತಾರನು ಕಾಣೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಮಾನಂದ ಪ್ರಸಾದಿ ಪರಿಪೂರ್ಣಲಿಂಗಕ್ಕೆ ಸಮರ್ಪಿಸಿಕೊಂಬುವನಲ್ಲದೆ, ಭುವನಾದಿ ಜನಿತ ಗುಣಸಂಭವಿತನಾಗಿ ಪ್ರಸಾದವ ಪಡೆದ ಪ್ರಸಾದಿಗಳೆಂದು ಪರಪದಾರ್ಥವನರ್ಪಿಸಿಕೊಂಬ ದುರ್ವಿವೇಕನಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->