ಅಥವಾ
(220) (73) (20) (3) (8) (5) (0) (0) (17) (4) (3) (15) (0) (0) ಅಂ (31) ಅಃ (31) (141) (1) (59) (8) (0) (12) (0) (14) (0) (0) (0) (0) (1) (0) (0) (66) (0) (14) (5) (89) (68) (1) (50) (40) (85) (1) (5) (0) (34) (11) (24) (1) (81) (57) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅವನಿ ಮಡದಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸಡಗರದಿಂದಡಗಿದ ಸುಖವ ಹೇಳಲಾರೆ ಕಾಣಮ್ಮ. ಅಪ್ಪು ಸತಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸೌಖ್ಯದೊಳೊಂದಿದ ಸುಖವ ಹೇಳಲಾರೆ ಕಾಣಮ್ಮ. ಪಾವಕ ನಾರಿಯಾದಂದು, ಅವ ಎನ್ನ ಕೈಗೆ ಬಂದಂದು, ಆ ಅವಧಾನವೆರೆದ ಸರಸವನು ಹೇಳಲಾರೆ ಕಾಣಮ್ಮ. ಮರುತ ಸ್ತ್ರೀಯಾದಂದು, ಅವ ಎನ್ನ ಕೈಗೆ ಬಂದಂದು, ಆ ಸೊಂಪಿನೊಳಗಿರ್ದ ಸುಖವ ಹೇಳಲಾರೆ ಕಾಣಮ್ಮ. ಗಗನವೆಣ್ಣಾದಂದು, ಅವ ಎನ್ನ ಕೈಗೆ ಬಂದಂದು, ನಿನ್ನಿಂದ ನಿರ್ಮಲಾನಂದ ಸಮರಸದೊಳಗಿರ್ದೆ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಕಾಣಮ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಕಾಲತೊಳೆದುಕೊಂಡು ಬಂದರೆ ಕಣ್ಣಮುಂದೆ ನಿಂದೆ. ಕೈಯ ತೊಳೆದುಕೊಂಡು ಬಂದರೆ ಮನದ ಮುಂದೆ ನಿಂದೆ. ತಲೆಯ ತೊಳೆದುಕೊಂಡು ಬಂದರೆ ಭಾವದ ಮುಂದೆ ನಿಂದೆ. ಸಂದು ಸಂಶಯ ಕುಂದು ಕಲೆಯ ಕಳೆದುಳಿದು ಬಂದರೆ ಸರ್ವಾಂಗಸನ್ನಿಹಿತನಾಗಿ ನಿಂದೆ. ಬಂದ ಬರವು ಚಂದವಾಗಿ ನಿಂದರೆ ಅಂದಂದಿಗೆ ಅವಧರಿಸು ಮುಂದುವರಿವೆನು ಮುದದಿಂದೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಎನ್ನ ಸ್ಥೂಲತತ್ವದಲ್ಲಿ ದ್ವಾದಶಕಳೆಯೊಳು ನಿಂದು ಅನಂತಕೋಟಿಪ್ರಕಾಶವಾಗಿ ತೋರುವ ಪ್ರಾಣಲಿಂಗವನು ಸತ್ಕ್ರಿಯಾನುಭಾವದಿಂದೆ ಕಾಯದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ, ಕಂಗಳಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ. ಅಯ್ಯಾ, ಎನ್ನ ಸೂಕ್ಷ್ಮ ತತ್ವದಲ್ಲಿ ಷೋಡಶಕಳೆಯೊಳು ನಿಂದು ಅನಂತಕೋಟಿಪ್ರಕಾಶವಾಗಿ ತೋರುವ ಪ್ರಾಣಲಿಂಗವನು ಸಮ್ಯಕ್ ಜ್ಞಾನಾನುಭಾವದಿಂದೆ ಮನದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ ಮನದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ. ಅಯ್ಯಾ, ಎನ್ನ ಕಾರಣತತ್ವದಲ್ಲಿ ದಶಕಳೆಯೊಳು ನಿಂದು ಅನಂತಕೋಟಿ ಪ್ರಕಾಶವಾಗಿ ತೋರುವ ಪ್ರಾಣಲಿಂಗವನು ಮಹಾಜ್ಞಾನಾನುಭಾವದಿಂದೆ ಭಾವದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ ಭಾವದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ. ಅಯ್ಯಾ. ಎನ್ನ ಸರ್ವಾಂಗದಲ್ಲಿ ಮೂವತ್ತೆಂಟು ಕಳಾತೀತನಾಗಿ ಅಗಣಿತಕೋಟಿಪ್ರಕಾಶಮಯದಿಂದೊಪ್ಪುವ ಗುರುನಿರಂಜನ ಚನ್ನಬಸವಲಿಂಗವೆಂಬ ಪ್ರಾಣಲಿಂಗವನು ಮಹದರುವಿನ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ ಜ್ಞಾನದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ನಿನ್ನ ಬೆಳಗು ಅನಂತಕೋಟಿ ಸೋಮ-ಸೂರ್ಯಾಗ್ನಿ ಬೆಳಗಿಂಗೆ ಮೀರಿಪ್ಪುದು. ನಾ ನೋಡಲಾರೆ ಅಡ್ಡಬಂದು ಕೂಡಿಕೊ ಅಪ್ರತಿಮ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅತ್ತಿಯ ಹಣ್ಣು ಹಸ್ತ ನೇತ್ರಕ್ಕೆ ಮೃದು ಮಿಶ್ರವಿರ್ದಡೇನು, ಬಿಚ್ಚಿದರೆ ಕ್ರಿಮಿ ಘನವಯ್ಯಾ. ದುಃಸಂಸಾರಿ ಸಮಯಕ್ಕೆ ನಾಚಿ ಲಾಂಛನಧಾರಿಯಾದಡೇನು, ನುಡಿ ರೂಪು ನಯನ ನುಣುಪಲ್ಲದೆ, ಮನಭಾವವನೊರೆದುನೋಡಿದರೆ ದುಷ್ಕರ್ಮಘನ ಕಾಣಾ. ಇಂತಲ್ಲದೆ ನಿಮ್ಮ ಶರಣ ಗುರುನಿರಂಜನ ಚನ್ನಬಸವಲಿಂಗಾ ತೆಂಗು ಬಾಳೆಯ ಫಲದಂತೆ ಬಿಚ್ಚಿನೋಡಿದರೆ ಲಿಂಗಸಾರಾಯಸುಖಿ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವಿಲ್ಲದ ಬಾಳಿಗೆ ಅಂಗವೆಂಬುದಿಲ್ಲ, ಅಂಗವಿಲ್ಲದ ಬಾಳಿಗೆ ಲಿಂಗವೆಂಬುದಿಲ್ಲ, ಸಂಗದ ಸುಖಮಯದ ಬಾಳಿಗೆ ತಾನಿಲ್ಲ ನೀನಿಲ್ಲ. ತಾನುಯೆಂಬುದು ಆಶ್ಚರ್ಯದ ಗತಿ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನಗತಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಲುಪ್ತ ಶಕ್ತಿತ್ವಾನುಭಾವಪ್ರಕಾಶದೊಳ್ಮುಳುಗಿ ಆಚಾರಲಿಂಗಭಕ್ತನೆಂಬ ನಾಮನಷ್ಟವಾಯಿತ್ತು ನೋಡಾ ! ಸ್ವತಂತ್ರತ್ವಾನುಭಾವಪ್ರಕಾಶದೊಳ್ಮುಳುಗಿ ಗುರುಲಿಂಗಮಹೇಶನೆಂಬ ನಾಮನಷ್ಟವಾಯಿತ್ತು ನೋಡಾ. ನಿತ್ಯತ್ವಾನುಭಾವಪ್ರಕಾಶದೊಳ್ಮುಳುಗಿ ಶಿವಲಿಂಗಪ್ರಸಾದಿಯೆಂಬ ನಾಮನಷ್ಟವಾಯಿತ್ತು ನೋಡಾ. ಅನಾದಿ ಭೇದತ್ವಾನುಭಾವಪ್ರಕಾಶದೊಳ್ಮುಳುಗಿ ಜಂಗಮಲಿಂಗ ಪ್ರಾಣಲಿಂಗಿಯೆಂಬ ನಾಮನಷ್ಟವಾಯಿತ್ತು ನೋಡಾ. ಸರ್ವಜ್ಞತ್ವಾನುಭಾವಪ್ರಕಾಶದೊಳ್ಮುಳುಗಿ ಪ್ರಸಾದಲಿಂಗಶರಣನೆಂಬ ನಾಮನಷ್ಟವಾಯಿತ್ತು ನೋಡಾ. ತೃಪ್ತತ್ವಾನುಭಾವಪ್ರಕಾಶದೊಳ್ಮುಳುಗಿ ಮಹಾಲಿಂಗೈಕ್ಯನೆಂಬ ನಾಮವನುಡುಗಿ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳಗೆ ನಿಜೈಕ್ಯನಾದೆನು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗವನರಿಯದೆ ಗುರುಭಕ್ತಿಯ ಮಾಡಲೊಪ್ಪಿದೆನು. ಮನವನರಿಯದೆ ಲಿಂಗಪೂಜೆಯ ಮಾಡಲೆಸವುತಿರ್ದೆನು. ಪ್ರಾಣವನರಿಯದೆ ಜಂಗಮದಾಸೋಹವ ಮಾಡಲು ಪ್ರಕಾಶವಾದೆನು. ಸತ್ತುಚಿತ್ತಾನಂದಕೆ ನಿತ್ಯ ಅಂಗ ಮನ ಪ್ರಾಣ ನಿರಂತರ ಶೋಭನ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದನುವ ಬಹಿರಂಗಕ್ಕೆ ಬೆರಸಿತಂದು ಹಿಡಿ ಹಿಡಿದು ನಡೆವುದೊಂದು ಕಡುಜಾಣದಾಗು, ಈ ಕುರುಹಿನೊಳು ನಿಂದು ಹೊರಗಣನೆರವಿಯ ಗುದ್ದಾಟಕ್ಕೆ ಸೆರೆಸೂರೆಹೋಯಿತ್ತು ಒಳಗಣ ಒಡವೆ ಊರು ಹಾಳಾದಲ್ಲಿ ಕ್ಷೇತ್ರದ ಸುಖವಾರಿಗೆ ? ಗುರುನಿರಂಜನ ಚನ್ನಬಸವಲಿಂಗ ಒಳಹೊರಗೆ ತನ್ನ ತಾ ನೋಡುತಾಡುತಿರ್ಪನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನಂತಕೋಟಿ ಸೋಮಸೂರ್ಯಾಗ್ನಿ ಪ್ರಕಾಶವ ಕಂಡು ಮುಳುಗಿದ ಮಹಾತ್ಮನು ಖಂಡಿತ ಮಾರ್ಗದ ಕರ್ಮಕತ್ತಲೆಯ ಕನಸಿನೊಳಗರಿಯನು. ಬ್ಥಿನ್ನ ನುಡಿಗಡಣಕ್ಕಿಂಬುಗೊಟ್ಟರಿವ ಮನತ್ರಯವು ಮಹದಲ್ಲೊಪ್ಪುತ್ತಿಹುದು. ಸಕಲನಿಃಕಲಸನುಮತ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಪ್ರಾಣಲಿಂಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಶ್ರೀಗುರುವಿನ ವೇಧಾದೀಕ್ಷೆಯಿಂದೆ ಸರ್ವಕಲಾಬ್ಥಿಜ್ಞತೆಯೆಂಬ ಅನುಗ್ರಹವೇ ಭಾವಲಿಂಗವಾಗಿ ಎನ್ನ ಭಾವದ ಕರಸ್ಥಲದಲ್ಲಿ ನಿಂದು, ಭಾವ ತನುಮನಯುಕ್ತವಾದ ಕಾರ್ಮಿಕಮಲ ಭ್ರಾಂತಿಯನಳಿಸಿ ನಿಭ್ರಾಂತನಾದೆ. ಅಯ್ಯಾ, ಶ್ರೀಗುರುವಿನ ಮಂತ್ರದೀಕ್ಷೆಯಿಂದೆ ವಿದ್ಯಾವಿನಯ ಸಂಪನ್ನತೆಯೆಂಬ ಅನುಗ್ರಹವೇ ಪ್ರಾಣಲಿಂಗವಾಗಿ ಎನ್ನ ಮನದ ಕರಸ್ಥಲದಲ್ಲಿ ನಿಂದು, ಮನ ಭಾವ ತನುಯುಕ್ತವಾದ ಮಾಯಾಮಲಸಂಕಲ್ಪನಳಿಸಿ ಅಕಲ್ಪಿತನಾದೆ. ಅಯ್ಯಾ, ಶ್ರೀ ಗುರುವಿನ ಕ್ರಿಯಾದೀಕ್ಷೆಯಿಂದೆ ವೀರಶೈವೋತ್ತಮತೆಯೆಂಬ ಅನುಗ್ರಹವೇ ಇಷ್ಟಲಿಂಗವಾಗಿ ಎನ್ನ ಕಾಯದ ಕರಸ್ಥಲದಲ್ಲಿ ನಿಂದು, ತನು ಮನ ಭಾವಯುಕ್ತವಾದ ಆಣವಮಲದನಿಷ್ಟವನಳಿಸಿ ಅಕಾಯಚರಿತನಾದೆ. ಅಯ್ಯಾ, ನಿರಂಜನ ಚನ್ನಬಸವಲಿಂಗವ ಕರ, ಕಕ್ಷ, ಕಂಠ, ಉರಸಜ್ಜೆ, ಉತ್ತುಮಾಂಗ, ಅಮಳೊಕ್ಯದಲ್ಲಿ ಧರಿಸಿ ಪರಮಸುಖಿಯಾಗಿ ನಮೋ ನಮೋ ಎನುತಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅತ್ತಲರಿವರು ಸುತ್ತ ಮೋಹಿಗಳು ; ಅತ್ತಲನುಪಮದನುವನವರರಿವರೆ ? ಇತ್ತಲರಿವರು ವಿಷಮವಿರಹಿತ ವಿಮಲಾಂಗ ಸಂಗಸುಖಿಗಳ; ಇತ್ತಲನುಭೇದ ವಿಸರ್ಜನವನಿವರರಿವರೆ ? ಇದು ಕಾರಣ, ಅತ್ತಿಲ್ಲದಿರ್ದನಿತ್ತಲನುದಿನ ಚಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗ ನೋಡಾ ಅರಿವರು ಭಾವಿಸಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂತರಂಗದಲ್ಲಿ ಪರಿಪೂರ್ಣಜ್ಞಾನವಿರ್ದು ಬಹಿರಂಗದಲ್ಲಿ ವಿನೋದ ಕಾರಣ ಚರಿಸಿದೊಡೆ, ಅಂತರಂಗದಲ್ಲಿ ವಿಪರೀತ ದುಸ್ಸಾರಭರಿತವಾ ಬಹಿರಂಗದ ವೇಷರು ಹೆಂಡದ ಭಾಂಡದಂತೆ ತಮ್ಮ ತಾವರಿಯದೆ ಮುಂದುಗಾಣದೆ ನೋಯಿಸಿ ನುಡಿವರಯ್ಯಾ, ಅದು ತಾಗಲಮ್ಮದು. ಉಷ್ಣಕ್ಕೆ ನೊಂದು ಸೂರ್ಯಂಗೆ ಭೂಬಂಡು ನೆಗೆದೊಗೆದರೆ ತನಗಲ್ಲದೆ ತಾಗಲರಿಯದು. ಇದು ಕಾರಣ ಈ ಒಡಲಗಿಚ್ಚಿನ ತುಡುಗುಣಿಗಳ ಎನ್ನತ್ತ ತೋರದಿರಯ್ಯಾ ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ನಿಮ್ಮ ಬಿಂದುವಿನ ಕಳೆಯ ನೋಡಿಕೊಳ್ಳಿ, ನಿಮ್ಮ ನಾದದ ಕಳೆಯ ನೋಡಿಕೊಳ್ಳಿ, ನಿಮ್ಮ ಕಳೆಯ ಕಳೆಯ ನೋಡಿಕೊಳ್ಳಿ, ನಾನು ಕದ್ದುಕೊಂಡು ಸೊಲ್ಲನೆಬ್ಬಿಸಿ ಅಲ್ಲದಾಟವನಾಡುವನಲ್ಲ. ನಾ ಬಲ್ಲೆ ನೋಡಿಕೊಂಡು ಕೂಡು ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಾವಧಾನಿ ಭಕ್ತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನುಭಾವವಿಲ್ಲದ ಕ್ರಿಯೆ ಆಚಾರಕ್ಕೆ ದೂರ. ಅನುಭಾವವಿಲ್ಲದ ಜ್ಞಾನ ವಿಚಾರಕ್ಕೆ ದೂರ. ಅನುಭಾವವಿಲ್ಲದ ಭಕ್ತಿ ಅರುವಿಂಗೆ ದೂರ. ಅನುಭಾವವಿಲ್ಲದ ವೈರಾಗ್ಯ ಅಗಮ್ಯಕ್ಕೆ ದೂರ. ಗುರುನಿರಂಜನ ಚನ್ನಬಸವಲಿಂಗವನರಿವರೆ ಅನುಭಾವವೇ ಬೀಜ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅತ್ತಿತ್ತಲುಗದೆ ತನು ತರಹರವಾಯಿತ್ತು ನಿಮ್ಮಡಿಗೆ. ಸಂಚಲವಳಿದುಳಿದೀ ಮನವು ಒಲಿದು ಉಲಿಯುತ್ತಿದೆ ನಿಮ್ಮ ನೆನವಿಂಗೆ. ವಂಚನೆಯ ಜರೆದು ಮರೆದು ನೆರೆದಿಪ್ಪವು ನಿಮ್ಮ ಸುಳುಹಿನ ಬರವ ಪಂಚೇಂದ್ರಿಯಗಳು. ಇಚ್ಫೆ ಆಮಿಷ ಅಳಿದುಳಿದು ಆಚ್ಫಾದಿಸಿ ಆಹ್ವಾನಿಸುತಿರ್ದವು ನಿಮ್ಮತ್ತ ಪಂಚವಿಷಯಗಳು. ಇಂತು ಸಕಲ ಸಂಭ್ರಮ ನೆರವಿಯೊಳೊಂದಿ ಪರವಶದೊಳಿರ್ದೆನು ಪರಮಗುರು ಚರಲಿಂಗವೆ, ಅರಿದರಿದೆನ್ನವಧರಿಸು ಅಪ್ರತಿಮ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗದಲ್ಲಿ ಆಚಾರಲಿಂಗಪ್ರಸಾದ ತಾನೆ, ಆತ್ಮನಲ್ಲಿ ಗುರುಲಿಂಗಪ್ರಸಾದ ತಾನೆ, ಪ್ರಾಣನಲ್ಲಿ ಶಿವಲಿಂಗಪ್ರಸಾದ ತಾನೆ, ಕರಣಂಗಳಲ್ಲಿ ಜಂಗಮಲಿಂಗಪ್ರಸಾದ ತಾನೆ, ವಿಷಯಂಗಳಲ್ಲಿ ಪ್ರಸಾದಲಿಂಗಪ್ರಸಾದ ತಾನೆ, ತೃಪ್ತಿಯಲ್ಲಿ ಮಹಾಲಿಂಗಪ್ರಸಾದ ತಾನೆ, ಸ್ಥೂಲಾಂಗದಲ್ಲಿ ನಿಷ್ಕಲಲಿಂಗಪ್ರಸಾದ ತಾನೆ, ಸೂಕ್ಷ್ಮಾಂಗದಲ್ಲಿ ಶೂನ್ಯಲಿಂಗಪ್ರಸಾದ ತಾನೆ, ಕಾರಣಾಂಗದಲ್ಲಿ ನಿರಂಜನಲಿಂಗಪ್ರಸಾದ ತಾನೆ, ಎನ್ನ ಒಳಹೊರಗೆ ತೆರಹಿಲ್ಲದೆ ಪರಿಪೂರ್ಣವಾಗಿಪ್ಪ ಗುರುನಿರಂಜನ ಚನ್ನಬಸವಲಿಂಗಪ್ರಸಾದ ತಾನೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದು ಅಲ್ಲಿಯೇ ಮುಳುಗಿಹೋಗುವುದೇ ಲೋಕದಗತಿ. ಅಲ್ಲಿಯೇ ಹುಟ್ಟಿ ಅಲ್ಲಿಯೇ ಬೆಳೆದು ಅಲ್ಲಿಯೇ ಮುಳುಗಿಹೋಗುವುದೇ ಪಾರಮಾರ್ಥಗತಿ. ಇದು ಕಾರಣ ನೋಡಿ ಬಾ ಗುರುನಿರಂಜನ ಚನ್ನಬಸವಲಿಂಗದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಚ್ಚೊತ್ತಿರ್ದ ಅವಿರಳಲಿಂಗದಲ್ಲಿ ಅನಿಮಿಷನಾಗಿರ್ದಬಳಿಕ ಬೇರೊಂದನರ್ಚಿಸಲಿಲ್ಲ. ಭೇದವಾದಿಯಂತೆ ಗುಂಭಭ್ರಾಂತನಲ್ಲ ; ಅಭೇದವಾದಿಯಂತೆ ಅಪ್ರತಿಮ ಶರಣ. ನಡೆನುಡಿಯನರಿಯಬಾರದು ಕಾಯಪ್ರಾಣವುಳ್ಳನ್ನಕ್ಕರ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅರಿಯಬಾರದ ಘನವನರಿವ ಪರಿಯೆಂತು ಹೇಳಾ ! ಕುರುಹಿಟ್ಟು ಕೂಡುವರ ಕಾಣೆ ಮೂರುಲೋಕದೊಳಗೆ. ಅರಿಯಬಾರದುದನರಿದು, ಹರಿಯಬಾರದುದ ಹರಿದು, ಮರೆಯಬಾರದುದ ಮರೆದು ನೆರೆಯಬಾರದುದ ನೆರೆದು ನಿಜವಾದರು ನಿಮ್ಮ ಶರಣರು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಪ್ರತಿಮಭಸಿತವನು ಸುಪ್ರಭಾಚಾರ್ಯನಿಂದೆ ಅರಿದು ಅವಧರಿಸಿದ ಅನುಪಮ ಶರಣಂಗೆ ಅಜ ವಿಷ್ಣು ಇಂದ್ರಾದಿ ಮನುಮುನಿ ಷಡುದರ್ಶನ ಸಕಲ ನಿಃಕಲ ಸಂಭವಿತರೆಲ್ಲ ಶರಣು ಶರಣೆಂದು ಬದುಕುವರು ಕಾಣಾ ನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಗಮ್ಯ ಗತಿಭಾವಿ, ಅನುಪಮ ಮತಿಯುಕ್ತ, ತನುಪ್ರಾಣಸಂಬಂದ್ಥಿ ತಾನಾದ ಶರಣಂಗೆ, ತನುವಿನ ತರಹರವ ತರಲಿಲ್ಲ, ಮನದ ಮಗ್ನತೆಯನರಿಯಲಿಲ್ಲ, ಪ್ರಾಣದ ಹೊಲೆಯ ಕಾಣಲಿಲ್ಲ. ಭಾವ ನಿರ್ಭಾವ ನಿರಾವಲಂಬಿ ಗುರುನಿರಂಜನ ಚನ್ನಬಸವಲಿಂಗಕ್ಕಂಗವೆಂಬಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅರಿಯಬಾರದ ಸ್ನೇಹವ ಹೂಡಿ ಅಗಲಬಾರದ ಆಟದೊಳಗೆ ಅತಿಶಯವರಿದು ಮರೆದು ನಿಂದ ನಿವಾತಜ್ಯೋತಿಯಂತೆ ಗುರುನಿರಂಜನ ಚನ್ನಬಸವಲಿಂಗದೊಳಗೊಪ್ಪುತ ಲಿಂಗೈಕ್ಯವನರಿಯದಿರ್ದನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಕೋಲೆಯ ಬಿತ್ತು ಪೃಥ್ವಿಯ ಮೇಲೆ ಬಿದ್ದು, ಆ ಕಾಲಕ್ಕೆ ಬಂದು ನೈಯ್ದುವಂತೆ, ತನ್ನ ನಿಮಿತ್ತ ತಾನು ತನುವಿಡಿದಿರ್ದು ಸರ್ವಾಚಾರಸಂಪತ್ತೆಂಬ ಸೌಖ್ಯದಿಂ ವಿನೋದಿಸಿ ಲೀಲೆ ನಿಂದಲ್ಲಿ ಗುರುನಿರಂಜನ ಚನ್ನಬಸವಲಿಂಗ ತಾನೆಯಾಗಿ ನಿರ್ವಯಲಾದುದೇ ಒಂದಾಶ್ಚರ್ಯವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಅಭ್ಯಾಸ ಕಾಯದಿಂದೆ ವಸ್ತುವ ಕಂಡವರೆಂದು ಬಂಧನದೊಳು ಬಿದ್ದುಹೋಗುವ ತುಂಡಜ್ಞಾನದ ಪಶುಗಳನೇನೆಂಬೆನಯ್ಯಾ ! ಕಾಣಲಿಲ್ಲದ ಲಿಂಗವ ಕಂಡವರುಂಟೆ ? ಮತ್ತೆಂತೆಂದೊಡೆ, ಸಕಳ ನಿಃಕಳಾನುಮತಕ್ಕಗೋಚರ ಅನುಪಮ ಶಿವನನುಗ್ರಹತ್ರಯವೆಂಬ ಸರ್ವಕಲಾಭಿಜ್ಞತೆಯೊಳ್ಮೂಡಿದ ಭಾವಲಿಂಗವು, ಕೋಟಿ ಸೋಮಸೂರ್ಯಾಗ್ನಿ ಪ್ರಕಾಶವಾಗಿ ತೋರುತಿದ್ದಿತ್ತು. ವಿದ್ಯಾ ವಿನಯಸಂಪನ್ನತೆಯೊಳ್ಮೂಡಿದ ಪ್ರಾಣಲಿಂಗವು ಕೋಟಿ ಸೋಮಸೂರ್ಯಾಗ್ನಿ ಪ್ರಕಾಶವಾಗಿ ತೋರುತಿದ್ದಿತ್ತು. ವೀರಶೈವೋತ್ತಮತೆಯೊಳ್ಮೂಡಿದ ಇಷ್ಟಲಿಂಗವು ಕೋಟಿ ಸೋಮಸೂರ್ಯಾಗ್ನಿ ಪ್ರಕಾಶವಾಗಿ ತೋರುತಿದ್ದಿತ್ತು. ಇಂತು ತ್ರಿವಿಧಲಿಂಗಪ್ರಕಾಶದೊಳ್ಮುಳುಗಿ ನಿತ್ಯಸುಖಿಯಾದೆನು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ

ಇನ್ನಷ್ಟು ...