ಅಥವಾ

ಒಟ್ಟು 26 ಕಡೆಗಳಲ್ಲಿ , 6 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ ! ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯಾ ! ಆಗಮ ಹೆರತೊಲಗಿ ಅಗಲಿದ್ದಿತಯ್ಯಾ ! ನಮ್ಮ ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ.
--------------
ಬಸವಣ್ಣ
ಭಕ್ತಿುಲ್ಲದ ಬಡವ ನಾನಯ್ಯಾ: ಕಕ್ಕಯ್ಯನ ಮನೆಯಲ್ಲೂ ಬೇಡಿದೆ, ಚೆನ್ನಯ್ಯನ ಮನೆಯಲ್ಲೂ ಬೇಡಿದೆ, ದಾಸಯ್ಯನ ಮನೆಯಲ್ಲೂ ಬೇಡಿದೆ. ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ ಎನ್ನ ಪಾತ್ರೆ ತುಂಬಿತ್ತು, ಕೂಡಲಸಂಗಮದೇವಾ.
--------------
ಬಸವಣ್ಣ
ಕಕ್ಕಯ್ಯನ ಪ್ರಸಾದವ ಕೊಂಡೆನ್ನ ಕುಲಸೂತಕ ಹೋಯಿತ್ತಯ್ಯಾ, ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲಸೂತಕ ಹೋಯಿತ್ತಯ್ಯಾ, ದಾಸಯ್ಯನ ಪ್ರಸಾದವ ಕೊಂಡೆನ್ನ ತನುಸೂತಕ ಹೋಯಿತ್ತಯ್ಯಾ, ಚಂದಯ್ಯನ ಪ್ರಸಾದವ ಕೊಂಡೆನ್ನ ಮನಸೂತಕ ಹೋಯಿತ್ತಯ್ಯಾ, ತೆಲುಗ ಜೊಮ್ಮಯ್ಯನ ಪ್ರಸಾದವ ಕೊಂಡೆನ್ನ ನೆನಹುಸೂತಕ ಹೋಯಿತ್ತಯ್ಯಾ, ಬಿಬ್ಬ ಬಾಚಯ್ಯನ ಪ್ರಸಾದವ ಕೊಂಡೆನ್ನ ಭಾವಸೂತಕ ಹೋಯಿತಯ್ಯಾ, ಮೋಳಿಗಯ್ಯನ ಪ್ರಸಾದವ ಕೊಂಡೆನ್ನ ಜನನಸೂತಕ ಹೋಯಿತ್ತಯ್ಯಾ, ಕೋಲ ಶಾಂತಯ್ಯನ ಪ್ರಸಾದವ ಕೊಂಡೆನ್ನಂತರಂಗದ ಸೂತಕ ಹೋಯಿತ್ತಯ್ಯಾ, ಮೇದಾರ ಕೇತಯ್ಯನ ಪ್ರಸಾದವ ಕೊಂಡೆನ್ನ ಬಹಿರಂಗದ ಸೂತಕ ಹೋಯಿತ್ತಯ್ಯಾ, ಘಟ್ಟಿವಾಳಯ್ಯನ ಪ್ರಸಾದವ ಕೊಂಡೆನ್ನ ಸರ್ವಾಂಗದ ಸೂತಕ ಹೋಯಿತ್ತಯ್ಯಾ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು, ಮಡಿವಾಳಯ್ಯ, ಸಿದ್ಧರಾಮಯ್ಯ, ಸೊಡ್ಡರ ಬಾಚರಸರು, ಹಡಪದಪ್ಪಣ್ಣ, ಶಂಕರ ದಾಸಿಮಯ್ಯ, ಹೆಂಡದ ಮಾರಯ್ಯಾ, ಗಾಣದ ಕಣ್ಣಪ್ಪಯ್ಯ, ಕೈಕೂಲಿ ಚಾಮಯ್ಯ, ಬಹುರೂಪಿ ಚೌಡಯ್ಯ, ಕಲಕೇತ ಬ್ರಹ್ಮಯ್ಯ ಮೊದಲಾದ ಶಿವಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ, ಮಹಾಘನ ಸದ್ಗುರು ಸಿದ್ಧಸೋಮನಾಥಲಿಂಗವೆ ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಅಮುಗಿದೇವಯ್ಯ
ಲೋಕಾದಿ ಲೋಕಂಗಳೆಲ್ಲಾ ಚೆನ್ನಯ್ಯನ ಮಕ್ಕಳು, ಬ್ರಹ್ಮವಿಷ್ಣುರುದ್ರರೆಲ್ಲಾ ಚೆನ್ನಯ್ಯನ ಮಕ್ಕಳು, ಸನಕ ಸನಂದ ಸನಾದಿಗಳೆಲ್ಲಾ ಚೆನ್ನಯ್ಯನ ಮಕ್ಕಳು, ಕಿನ್ನರ ಕಿಂಪುರುಷರೆಲ್ಲಾ ಚೆನ್ನಯ್ಯನ ಮಕ್ಕಳು, ಗರುಡ ಗಾಂಧರ್ವರೆಲ್ಲಾ ಚೆನ್ನಯ್ಯನ ಮಕ್ಕಳು, ಸಿದ್ಧವಿದ್ಯಾಧರರುಗಳೆಲ್ಲಾ ಚೆನ್ನಯ್ಯನ ಮಕ್ಕಳು, ಏಕಾದಶರುದ್ರರು ದ್ವಾದಶಾದಿತ್ಯರು ಚೆನ್ನಯ್ಯನ ಮಕ್ಕಳು, ನವಬ್ರಹ್ಮರು ಚೆನ್ನಯ್ಯನ ಮಕ್ಕಳು, ತ್ರೈತ್ರಿಂಶಕೋಟಿ ದೇವತೆಗಳೆಲ್ಲಾ ಚೆನ್ನಯ್ಯನ ಮಕ್ಕಳು, ಅಂತರಂತರ ಸಂತರೆಲ್ಲಾ ಚೆನ್ನಯ್ಯನ ಮಕ್ಕಳು, ಭಾವ ಭಾಳೇಕ್ಷಣರೆಲ್ಲಾ ಚೆನ್ನಯ್ಯನ ಮಕ್ಕಳು. ನನ್ನ ನಿನ್ನಂತಹವರೆಲ್ಲಾ ಚೆನ್ನಯ್ಯನ ಮಕ್ಕಳು. ಆಣೆ, ನಿಮ್ಮಾಣೆ, ಕೂಡಲಸಂಗಮದೇವಾ.
--------------
ಬಸವಣ್ಣ
ಲಿಂಗವ ಪೂಜಿಸಿ ಅಂಗವ ಬೇಡಬಾರದಯ್ಯಾ. ಅದೇಕೆಂದಡೆ ಶಿವನು ದೀನನು. ಅದು ಹೇಗೆಂದಡೆ: ದ್ರವ್ಯವೆಲ್ಲವು ಕುಬೇರನ ವಾಸಮಾಡಿ ದೀನವಾಯಿತು. ಹದಿನಾಲ್ಕು ಲೋಕಗೋಸ್ಕರವಾಗಿ ಆ ದ್ರವ್ಯವಿದ್ದು, ಹದಿನಾಲ್ಕು ಲೋಕಕ್ಕೆ ಹೇಗೆ ಮಾಡಲಿ ಎಂದು ಚಿಂತಿಸಿ ಒಂದು ಕೌಪವ ತಂದು ನಮ್ಮ ಗಣಂಗಳ ಮನೆಯಲಿಟ್ಟು ಮಾಯವಾಗಿ, ನ್ಯಾಯಕಿಕ್ಕಿ, ಅಮರನೀತಿಗಳ ಮನೆಯ ಭಂಡಾರವೆಲ್ಲವ ಅವರು ಸಹಜವಾಗಿ ಒಯ್ದರು. ಅದು ಸಾಲದೆ, ನಮ್ಮ ಗಜಪತಿರಾಯನ ಮನೆಯ ಕನ್ನವನಿಕ್ಕಿ ಒಯ್ದು, ಈರೇಳು ಲೋಕವನೆ ಪ್ರತಿಪಾಲನೆಯ ಮಾಡಿ, ಅವರೆಲ್ಲ ಉಂಡ ಮೇಲೆ ನೀವು ಉಂಬಿರಿ. ದಿನದಿನಕ್ಕೆ ಇದೇ ಚಿಂತೆ ನಿಮಗೆ. ನಮ್ಮ ಗಣಂಗಳು ನಿಶ್ಚಿಂತೆಯಲ್ಲಿಪ್ಪರು. ಅದು ಹೇಗೆಂದಡೆ: ದಿನದಿನದ ಈ ಕಾಯಕವ ದಿನದಿನಕೆ ಸರಿಮಾಡಿ ಇಂದಿನ ಕಾಸು ಉದಯಕ್ಕೆ ತಂಗಳೆಂಬರು. ನಾಳಿನ ಚಿಂತೆ ನನಗೇಕೆಂಬರು. ನೀವು ನಾಳಿಗೆ ಬೇಕೆಂದು ಇಟ್ಟುಕೊಂಡು, ನಮ್ಮ ಕರಿಕಾಲಚೋಳನ ಮನೆಯಲ್ಲಿ ಅಡಿಗೆಯ ಮಾಡಿಸಿ ಉಂಡು, ಅದು ಸಾಲದೆ ? ನಮ್ಮ ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿಯನುಂಡಿರಿ, ಆಗ ಈರೇಳು ಲೋಕಕ್ಕೆ ತೃಪ್ತಿಯಾಯಿತ್ತು. ಇಂತಪ್ಪ ನಮ್ಮ ಗಣಂಗಳ ಉದಾರತ್ವ ಹೇಳಲಿಕ್ಕೆ ಅಸಾಧ್ಯವು. ಇದ ನೀವು ಬಲ್ಲಿರಿಯಾಗಿ, ನಮ್ಮ ಗಣಂಗಳ ಹೃದಯದಲ್ಲಿ ಮನೆಯ ಮಾಡಿಕೊಂಡಿಪ್ಪಿರಿ ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಸೆಟ್ಟಿಯೆಂದೆನೆ ಸಿರಿಯಾಳನ ಮಡಿವಾಳನೆಂಬೆನೆ ಮಾಚಯ್ಯನ ಡೋಹರನೆಂಬೆನೆ ಕಕ್ಕಯ್ಯನ ಮಾದಾರನೆಂಬೆನೆ ಚೆನ್ನಯ್ಯನ ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ. 345
--------------
ಬಸವಣ್ಣ
ನಿಜಭಾವ ಲಕ್ಷ್ಮಿಸರಸ್ವತಿ ಒಲಿದಡೆ ಕುಲವನರಸಲದೇಕೆ ಆ ದೇವನೊಲಿದ ಭಕ್ತಂಗೆ ಇನ್ನಾವ ಮಂತ್ರವೇಕೆಯೊ ಕಾಮಧೇನು ಮನೆಯಲಿರಲು ಬೇರೆ ಹಯನನರಸಲೇಕೆ ಮೋಹವುಳಠಾವಿನಲ್ಲಿ ಲಜ್ಜೆಯನರಸಲೇಕೆಯೊ ಮಹಾದಾನಿ ಕೂಡಲಸಂಗಯ್ಯನೊಲಿದು ಮಾದಾರ ಚೆನ್ನಯ್ಯನ ಮನೆಯಲುಂಡ. ವೇದವನೋದಿದವರು ಲಿಂಗವನೊಲಿಸಿ ತೋರಿರೋ.
--------------
ಬಸವಣ್ಣ
ಶರಣನ ನಡೆ ಅಂತಿಂತೆನಬೇಡ. ಶರಣ ಮಾದರ ಚೆನ್ನಯ್ಯನ ನಡೆ ಯಾವ ಆಗದಲ್ಲಿ ಹೇಳಿತ್ತು? ಶರಣ ಡೋಹರ ಕಕ್ಕಯ್ಯನ ನಡೆ ಯಾವ ವೇದದಲ್ಲಿ ಹೇಳಿತ್ತು? ನಡೆದ ಆಚರಣೆಯೆ ಸಚ್ಛೀಲ; ನುಡಿದ ವಾಕ್ಯವೆ ನಡೆ ಮೋಕ್ಷಪ್ರದಾಯಕ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ವೇಷ ಅವಿಚಾರದಲ್ಲಿ ನಡೆುತ್ತೆಂದು ಆಸುರದಲ್ಲಿ ಬಗುಳುವ ಕುನ್ನಿ, ನೀ ಕೇಳಾ : ಹರಿಯನೆ ದಾಸನ ವಸ್ತ್ರವ:ಉಣ್ಣನೆ ಚೆನ್ನಯ್ಯನ ಸಂಗಾತ ಪರವಧುವ ಕೊಳ್ಳನೆ ಸಿಂಧುಬಲ್ಲಾಳನ:ಬೇಡನೆ ಸಿರಿಯಾಳನ ಮಗನ ನಡೆವುದು ನುಡಿವುದು ಅವಿಚಾರವೆಂದು, ಭಾವ ವಿಭಾವವೆಂದು ಕಂಡೆನಾದಡೆ ತಪ್ಪೆನ್ನದು, ಮೂಗ ಕೊ್ಯು, ಕೂಡಲಸಂಗಮದೇವಾ. 433
--------------
ಬಸವಣ್ಣ
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ, ನೋಡಯ್ಯಾ. ಮಹಾದಾನಿ ಕೂಡಲಸಂಗಮದೇವಾ, ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.
--------------
ಬಸವಣ್ಣ
ಒಬ್ಬನ ಮನೆಯಲುಂಡು ಹೊತ್ತುಗಳೆದೆ, ಒಬ್ಬನ ಮನೆಯಲುಡಲೊಂದ ಗಳಿಸಿದೆ, ಗರ್ವ ಬೇಡ ಬೇಡ ನಿನಗೆ. ಚೆನ್ನಯ್ಯನ ಮನೆಯಲಂಬಲಿಯನುಂಡು ಬದುಕಿದೆ. ಗರ್ವ ಬೇಡ ಬೇಡ. ಕೂಡಲಸಂಗಯ್ಯಾ, ಸಿರಿಯಾಳನಿಂದ ಮಾನಿಸಲೋಕಗಂಡೆ.
--------------
ಬಸವಣ್ಣ
ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ, ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ. 346
--------------
ಬಸವಣ್ಣ
ಕರಿಕಾಲಚೋಳನಲ್ಲಿ ರೂಪಾರ್ಪಿತವು ಹಸನಾಗಿಹುದು. ಮಾದಾರ ಚೆನ್ನಯ್ಯನಲ್ಲಿ ರುಚಿಯಾರ್ಪಣವು ಚೆನ್ನಾಗಿಹುದು. ಸುರಗಿಯ ಚೌಡಯ್ಯನಲ್ಲಿ ತುತ್ತುತುತ್ತಿಗೆ ಅರ್ಪಿಸುವ ಬಗೆ ಲೇಸಾಗಿಹುದು. ವೀರಚೋಳವ್ವೆಯಲ್ಲಿ ಸಹಭಾಜನಾರ್ಪಣ ಸತ್ಕ್ರೀ ಪ್ರೀತಿಕರವಾಗಿಹುದು. ಆ ಕರಿಕಾಲಚೋಳನ ವ್ರತ, ಆ ಮಾದಾರ ಚೆನ್ನಯ್ಯನ ಜಿಹ್ವೆ, ಆ ಸುರಗಿಚೌಡಯ್ಯನ ಹಸ್ತ, ಆ ಚೋಳಿಯಕ್ಕನ ಬುದ್ಧಿ ಇಷ್ಟೂ ಕೂಡಿ ಒಂದು ರೂಪಾದ ಭಕ್ತಗಲ್ಲದೆ ರುಚಿಯಾರ್ಪಿತವಸಗುವದೆ ಶ್ರೀ ಬಸವಲಿಂಗಾ.
--------------
ಶ್ರೀಬಸವಲಿಂಗ
ಸೂಳೆಗೆ ಹುಟ್ಟಿದ ಕೂಸಿನಂತೆ ಆರನಾದಡೆಯೂ `ಅಯ್ಯಾ, ಅಯ್ಯಾ ಎನಲಾರೆ. ಚೆನ್ನಯ್ಯನೆಮ್ಮಯ್ಯನು, ಚೆನ್ನಯ್ಯನ ಮಗ ನಾನು. ಕೂಡಲಸಂಗನ ಮಹಾಮನೆಯಲಿ ಧರ್ಮಸಂತಾನಿ ಭಂಡಾರಿ ಬಸವಣ್ಣನು. 347
--------------
ಬಸವಣ್ಣ
ನಿಮನಿಮಗೆಲ್ಲಾ ಬಲ್ಲೆವೆಂದೆಂಬಿರಿ. ಹರಿ ಹತ್ತು ಭವಕ್ಕೆ ಬಂದಲ್ಲಿ, ಅಜನ ಶಿರವರಿದಲ್ಲಿ ಅಂದೆಲ್ಲಿಗೆ ಹೋದವೋ ನಿಮ್ಮ ವೇದಶಾಸ್ತ್ರಾಗಮ ಪುರಾಣಂಗಳೆಲ್ಲಾ. ಚೆನ್ನಯ್ಯನ ಕೈಯಲ್ಲಿ ಹಾಗವನೆ ಕೊಟ್ಟು ಕಂಕಣದ ಕೈಯ ಕಂಡು ಧನ್ಯರಾಗಿರೆ ನೀವುರಿ ಮಾತಂಗಿಯ ಮಕ್ಕಳೆಂದು, ಗಗನದಲ್ಲಿ ಸ್ನಾನವ ಮಾಡೆ ಆಕಾಶದಲ್ಲಿ ಧೋತ್ರಂಗಳು ಹಾರಿ ಹೋಗಲಾಗಿ ನಮ್ಮ ಶ್ವಪಚಯ್ಯಗಳ ಕೈಯಲ್ಲಿ ಒಕ್ಕುದ ಕೊಂಡು ಧನ್ಯರಾಗರೆ ಸಾಮವೇದಿಗಳಂದು ? ನಿಮ್ಮ ನಾಲ್ಕು ವೇದವನೋದದೆ ನಮ್ಮ ಭಕ್ತರ ಮನೆಯ `ಕಾಳನು ?_ ಇದು ಕಾರಣ:ನಮ್ಮ ಕೂಡಲಚೆನ್ನಸಂಗನ ಶರಣರ ಮುಂದೆ ಈ ಒಡ್ಡುಗಳ ಮಾತ ಪ್ರತಿ ಮಾಡಬೇಡ.
--------------
ಚನ್ನಬಸವಣ್ಣ
-->