ಅಥವಾ
(4) (1) (3) (1) (0) (0) (0) (0) (1) (0) (0) (0) (1) (0) ಅಂ (2) ಅಃ (2) (1) (0) (5) (1) (0) (0) (0) (1) (0) (0) (0) (0) (0) (0) (0) (1) (0) (1) (1) (4) (2) (0) (1) (1) (0) (0) (0) (0) (5) (1) (2) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಷ್ಟಾವರಣಗಳು ಯಾರಿಗೆ ಸಾಧ್ಯವಾಯಿತ್ತೆಂದಡೆ ಹೇಳಿಹೆ ಕೇಳಿರಣ್ಣ : ಗುರು ಸಾಧ್ಯವಾಯಿತ್ತು ಗುರುಭಕ್ತಂಗೆ ; ಲಿಂಗ ಸಾಧ್ಯವಾಯಿತ್ತು ನೀಲಲೋಚನೆತಾಯಿಗೆ ; ಜಂಗಮವು ಸಾಧ್ಯವಾಯಿತ್ತು ಬಸವೇಶ್ವರದೇವರಿಗೆ ; ಪಾದೋದಕ ಸಾಧ್ಯವಾಯಿತ್ತು ವೇಮನಾರಾಧ್ಯಂಗೆ ; ಪ್ರಸಾದ ಸಾಧ್ಯವಾಯಿತ್ತು ಬಿಬ್ಬಿಬಾಚಯ್ಯಂಗೆ ; ವಿಭೂತಿ ಸಾಧ್ಯವಾಯಿತ್ತು ಓಹಿಲಯ್ಯಗಳಿಗೆ ; ರುದ್ರಾಕ್ಷಿ ಸಾಧ್ಯವಾಯಿತ್ತು ಚೇರಮರಾಯಗೆ ; ಪಂಚಾಕ್ಷರಿ ಸಾಧ್ಯವಾಯಿತ್ತು ಅಜಗಣ್ಣಂಗೆ. ಇನ್ನು ಷಟ್‍ಸ್ಥಲದ ನಿರ್ಣಯವ ಕೇಳಿ : ಭಕ್ತಸ್ಥಲ ಬಸವಣ್ಣಂಗಾಯಿತ್ತು ; ಮಾಹೇಶ್ವರಸ್ಥಲ ಮಡಿವಾಳಯ್ಯಂಗಾಯಿತ್ತು ; ಪ್ರಸಾದಿಸ್ಥಲ ಚೆನ್ನಬಸವಣ್ಣಂಗಾಯಿತ್ತು ; ಪ್ರಾಣಲಿಂಗಿಸ್ಥಲ ಸಿದ್ಭರಾಮಯ್ಯಂಗಾಯಿತ್ತು ; ಶರಣಸ್ಥಲ ಪ್ರಭುದೇವರಿಗಾಯಿತ್ತು; ಐಕ್ಯಸ್ಥಲ ಅಜಗಣ್ಣಂಗಾಯಿತ್ತು. ಇನ್ನು ಷಡುಸ್ಥಲದ ವಿವರವಂ ಪೇಳ್ವೆನು.- ಭಕ್ತಸ್ಥಲದ ವಿವರವು : ಗುರುಲಿಂಗಜಂಗಮವು ಒಂದೆಯೆಂದು ಕಂಡು ಸದಾಚಾರದಲ್ಲಿ ನಡೆವನು, ತ್ರಿಕಾಲ ಮಜ್ಜನವ ನೀಡುವನು, ಲಾಂಛನಧಾರಿಗಳ ಕಂಡಡೆ ವಂದನೆಯ ಮಾಡುವನು, ಆಪ್ಯಾಯನಕ್ಕೆ ಅನ್ನವ ನೀಡುವನು, ಜಂಗಮಕ್ಕೆ ಪ್ರತಿ ಉತ್ತರವ ಕೊಡನು. ಪೃಥ್ವಿ ಅಂಗವಾಗಿಪ್ಪುದೆ ಭಕ್ತಿಸ್ಥಲವು. ಸಾಕ್ಷಿ : 'ಮಜ್ಜನಂ ತು ತ್ರಿಕಾಲೇಷು ಶುಚಿಪಾಕಸಮರ್ಪಿತಂ | ಭವಿಸಂಗಪರಿತ್ಯಾಗಂ ಇತ್ಯೇತೇ ಭಕ್ತಿಕಾರಣಂ || ಸದಾಚಾರೇ ಶಿವಭಕ್ತಿಃ ಲಿಂಗಜಂಗಮೇಕಾದ್ಥಿಕಂ | ಲಾಂಛನೇನ ಶರಣ್ಯಂ ಚ ಭಕ್ತಿಸ್ಥಲಂ ಮಹೋತ್ತಮಂ ||' ಇನ್ನು ಮಾಹೇಶ್ವರಸ್ಥಲದ ವಿವರವು : ಪರಸ್ತ್ರೀ ಪರನಿಂದೆ ಪರದ್ರವ್ಯ ಪರಹಿಂಸೆ ಅನೃತ ಇವು ಪಂಚಮಹಾಪಾತಕವು, ಇವ ಬಿಟ್ಟು ಲಿಂಗನಿಷ್ಠೆಯಲ್ಲಿ ಇರ್ದು ಜಲವೆ ಅಂಗವಾಗಿಪ್ಪುದೆ ಮಾಹೇಶ್ವರಸ್ಥಲವು. ಸಾಕ್ಷಿ : 'ಪರಸ್ತ್ರೀಯಂ ಪರಾರ್ಥಂ ಚ ವರ್ಜಿತೋ ಭಾವಶುದ್ಧಿಮಾನ್ | ಲಿಂಗನಿಸ್ಸಂಗಿಯುಕ್ತಾತ್ಮಾ ಮಹೇಶಸ್ಥಲಮುತ್ತಮಂ ||' ಇನ್ನು ಪ್ರಸಾದಿಸ್ಥಲದ ವಿವರ : ಲಿಂಗಕ್ಕೆ ಅರ್ಪಿಸಿದುದ ಲಿಂಗನೆನಹಿನಿಂದೆ ಸ್ವೀಕರಿಸುವುದು, ಅನರ್ಪಿತವ ವರ್ಜಿಸುವುದು, ಲಿಂಗದೊಡನೆ ಉಂಬುವುದು, ಅಗ್ನಿಯೆ ಅಂಗವಾಗಿಪ್ಪುದೆ ಪ್ರಸಾದಿಸ್ಥಲ. ಇನ್ನು ಪ್ರಾಣಲಿಂಗಿಸ್ಥಲದ ವಿವರವು : ಸುಗುಣ ದುರ್ಗುಣ ಉಭಯವನತಿಗಳೆದು ಸುಖ ದುಃಖ ಸ್ತುತಿ ನಿಂದೆ ಶತ್ರು ಮಿತ್ರಾದಿಗಳೆಲ್ಲರಂ ಸಮಾನಂಗಂಡು ವಾಯುವೆ ಅಂಗವಾಗಿಪ್ಪುದೆ ಪ್ರಾಣಲಿಂಗಿಸ್ಥಲ. ಇನ್ನು ಶರಣಸ್ಥಲದ ವಿವರವು : ಸತಿಪತಿಭಾವ ಅಂಗಲಿಂಗವಾಗಿಪ್ಪುದು, ಪಂಚೇಂದ್ರಿಯಸುಖ ನಾಸ್ತಿಯಾಗಿಪ್ಪುದು, ಆಕಾಶವೆ ಅಂಗವಾಗಿಪ್ಪುದು, ಇದು ಶರಣಸ್ಥಲವು. ಸಾಕ್ಷಿ : 'ಪತಿರ್ಲಿಂಗಂ ಸತೀ ಚಾsಹಂ ಇತಿ ಯುಕ್ತಂ ಸನಾತನಃ | ಪಂಚೇಂದ್ರಿಯಸುಖಂ ನಾಸ್ತಿ ಶರಣಸ್ಥಲಮುತ್ತಮಂ ||' ಇನ್ನು ಐಕ್ಯಸ್ಥಲದ ವಿವರವು : ಅರಿಷಡ್ವರ್ಗಂಗಳಿಲ್ಲದಿಹರು, ನಿರ್ಭಾವದಲ್ಲಿಹರು, ಷಡೂರ್ಮಿಗಳಿಲ್ಲದಿಹರು, ಅಷ್ಟವಿಧಾರ್ಚನೆ ಇಲ್ಲದಿಹರು, ಉರಿಯುಂಡ ಕರ್ಪುರದ ಹಾಗೆ ಇಹರು, ಆತ್ಮನೆ ಅಂಗವಾಗಿಪ್ಪುದು ಐಕ್ಯಸ್ಥಲವು. ಸಾಕ್ಷಿ : 'ಷಡೂರ್ಮಿಯೋಗಷಡ್ವರ್ಗಂ ನಾಸ್ತಿ ಚಾಷ್ಟವಿಧಾರ್ಚನಂ | ನಿರ್ಭಾವಂ ಶಿವಲಿಂಗೈಕ್ಯಂ ಶಿಖಿಕರ್ಪೂರಸಯೋಗವತ್||' ಹೀಗೆ ಗಣಂಗಳು ನಡೆದ ಮಾರ್ಗದಲ್ಲಿ ನಡೆದಡೆ ಅಂದೇನೊ ಇಂದೇನೊ ? ಇಂತೀ ಅಷ್ಟಾವರಣಗಳ, ಷಡುಸ್ಥಲದ ಮಾರ್ಗವನು ಎನ್ನೊಳು ಅರುಹಿದಾತ, ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಅಂದಿನವರಿಗೆ ಪರುಷವಿಪ್ಪುದು ಇಂದಿನವರಿಗೆ ಪರುಷವೇಕಿಲ್ಲ ? ದಯದಿಂದ ಕರುಣಿಸಿ ಸ್ವಾಮಿ. ಕೇಳಯ್ಯ ಮಗನೆ : ಲಾಂಛನಧಾರಿಗಳು ಸ್ವಯಪಾಕ ಭಿಕ್ಷಕ್ಕೆ ಬಂದ ವೇಳೆಯಲ್ಲಿ ಗೋದಿಯ ಬೀಸುವಗೆ ಆ ಹಿಟ್ಟು ಬಿಟ್ಟು ಕಡೆಯಲಿದ್ದ ಹಿಟ್ಟು ನೀಡುವವರಿಗೆ ಎಲ್ಲಿಹುದೊ ಪರುಷ ? ಲಾಂಛನಧಾರಿಗಳು ಧಾನ್ಯ ಭಿಕ್ಷಕ್ಕೆ ಬಂದಡೆ ಘನವ ಮಾಡಿಕೊಳ್ಳಿರಿ ಎಂಬವರಿಗೆ ಎಲ್ಲಿಹುದೊ ಪರುಷ ? ಶಿವಯೋಗಿ ಲಿಂಗಾರ್ಪಿತ ಭಿಕ್ಷಕ್ಕೆ ಬಂದಡೆ ಸುಮ್ಮನಿಹರು. ಇದು ಭಿಕ್ಷವೇಳೆಯೆ ? ಎಂಬವರಿಗೆ ಎಲ್ಲಿಹುದೊ ಪರುಷ ? ಮತ್ತಂ, ಹಬ್ಬವ ಮಾಡುವಾಗ ಭಿಕ್ಷಕ್ಕೆ ಬಂದಡೆ ತಂಗಳ ನೀಡಿ ಕಳಿಸುವವರಿಗೆ ಎಲ್ಲಿಹುದೊ ಪರುಷ ? ಪರುಷ ಎಲ್ಲಿಹುದು ಎಂದಡೆ : ಜಂಗಮವು ಮನೆಗೆ ಬಂದಡೆ ಬಂದ ಬರವ, ನಿಂದ ನಿಲವ ಅರಿತವರಿಗೆ ಅದೇ ಪರುಷ. ಯಾವ ವೇಳೆಯಾಗಲಿ, ಯಾವ ಹೊತ್ತಾಗಲಿ ಜಂಗಮವು ಭಿಕ್ಷಕ್ಕೆ ಬರಲು ಹಿಂದಕ್ಕೆ ತಿರುಗಗೊಡ[ದ]ವರನ್ನೆಲ್ಲ ಸುಖವಬಡಿಸುವುದೇ ಪರುಷ. ಸಮಸ್ತ ಒಡವೆಯೆಲ್ಲವನು ಎನ್ನ ಒಡವೆಯಲ್ಲವೆಂದವರಲ್ಲಿ ಅದೇ ಪರುಷ. ತನ್ನ ಪ್ರಪಂಚಿನ ಪುತ್ರ ಮಿತ್ರ ಕಳತ್ರರಿಗೆ ಮಾಡುವ ಹಾಗೆ ಗುರು-ಲಿಂಗ-ಜಂಗಮಕ್ಕೆ, ಕೇವಲ ಸದ್ಭಕ್ತಿಗೆ ಭಕ್ತಿಯ ಮಾಡಿದವರಿಗೆ ಅದೇ ಪರುಷ. ಹೀಗೆ ಮಾಡಿದವರಿಗೆ ಅಂದೇನು ಇಂದೇನು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ
--------------
ಗಣದಾಸಿ ವೀರಣ್ಣ
ಅಖಂಡ ಗೋಳಕಾಕಾರ ಮಹಾಲಿಂಗದ ಪೂಜೆ ಎಂತೆಂದಡೆ : ಸದ್ಯೋಜಾತಮುಖದಿಂದಾದ ಪೃಥ್ವಿ ಲಿಂಗಕ್ಕೆ ಪತ್ರಿ ಪುಷ್ಪ ಬೇಕೆಂದು ಅನಂತ ಪತ್ರಿ ಪುಷ್ಪಗಳಿಂದ ಅರ್ಚಿಸುತ್ತಿಹುದು. ವಾಮದೇವಮುಖದಿಂದಾದಪ್ಪು ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂದು ಸಪ್ತಸಮುದ್ರ ದಶಗಂಗೆಗಳ ಕುಂಭವ ಮಾಡಿ, ಕೆರೆ ಬಾವಿಗಳ ಪಂಚಪಾತ್ರೆಯ ಮಾಡಿ, ಮಜ್ಜನ ನೀಡಿಸುತ್ತಿಹುದು. ಅಘೋರಮುಖದಿಂದಾದ ಅಗ್ನಿ ಲಿಂಗಕ್ಕೆ ಧೂಪ ದೀಪ ಆರತಿಗಳಾಗಬೇಕೆಂದು, ಕಾಷ*ದಲ್ಲಿ ಪಾಷಾಣದಲ್ಲಿ ಬೆಳಗುತ್ತಿಹುದು. ತತ್ಪುರುಷಮುಖದಿಂದಾದ ವಾಯು ಲಿಂಗಕ್ಕೆ ಜಪವ ಮಾಡುತ್ತಿಹುದು. ಈಶಾನ್ಯ ಮುಖದಿಂದಾದ ಆಕಾಶ ಲಿಂಗಕ್ಕೆ ಭೇರಿ ಮೊದಲಾದ ನಾದಂಗಳ ಬಾರಿಸುತ್ತಿಹುದು. ಗೋಪ್ಯಮುಖದಿಂದಾದ ಆತ್ಮನು ಲಿಂಗಕ್ಕೆ ಸಿಂಹಾಸನವಾಗಿರ್ಪುದು. ಮನ ಚಕ್ಷುವಿನಿಂದಾದ ಚಂದ್ರ-ಸೂರ್ಯರು ದೀವಿಗೆಯಾಗಿಹರು. ಇಂತಪ್ಪ ಘನವಸ್ತು ಎರಡಾಗಿ ತನ್ನ ವಿನೋದಕ್ಕೆ ಅರ್ಪಿಸಿಕೊಂಬಾತನು ತಾನೇ, ಅರ್ಪಿಸುವಾತನು ತಾನೇ. ಇಂತಪ್ಪ ಘನಲಿಂಗವು ಕರಸ್ಥಲದೊಳಗೆ ಚುಳುಕಾಗಿ ನಿಂದ ನಿಲವ ಎನ್ನೊಳರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಅಂದಿನವರಿಗೆ ಅಷ್ಟಾವರಣವು ಸಾಧ್ಯವಪ್ಪುದಲ್ಲದೆ ಇಂದಿನವರಿಗೆ ಅಷ್ಟಾವರಣವು ಸಾಧ್ಯವಾಗದೆಂಬರು. ಅದೇನು ಕಾರಣ ಸಾಧ್ಯವಿಲ್ಲ ಶ್ರೀಗುರುವೆ ? ಅಂದಿನ ಸೂರ್ಯ ಚಂದ್ರ ಆತ್ಮ ಆಕಾಶ ವಾಯು ಅಗ್ನಿ ಅಪ್ಪು ಪೃಥ್ವಿ ಎಂಬ ಅಷ್ಟತನುಮೂರ್ತಿಗಳು ಅಂದುಂಟು ಇಂದುಂಟು. ಅಂದು ಬೆಳೆವ ಹದಿನೆಂಟು ಜೀನಸಿನ ಧಾನ್ಯಗಳು ಇಂದು ಬಿತ್ತಿದರೆ ಬೆಳೆವವು. ಅಂದು ವಾರ ತಿಥಿ ನಕ್ಷತ್ರ ಸಂವತ್ಸರಗಳು ನಡೆದುದುಂಟು. ಇಂದು ವಾರ ತಿಥಿ ನಕ್ಷತ್ರ ಸಂವತ್ಸರಗಳು ನಡೆವುದುಂಟು. ಅಂದಿನ ಅಷ್ಟಾವರಣಸ್ವರೂಪ ಇಂದುಂಟು. ಅಂದು ಇಂದೆಂಬ ಸಂದೇಹದ ಕೀಲವ ಕಳೆದು ನಿಂದರೆ ಸಾಕು ದಯಮಾಡು ಸದ್ಗುರುವೆ. ಕೇಳೈ ಮಗನೆ : ದೃಢವಿಡಿದು ಏಕಚಿತ್ತದಲ್ಲಿ ನಂಬಿಗೆಯುಳ್ಳ ಶಿವಭಕ್ತಂಗೆ ಅಂದೇನು, ಇಂದೇನು ? ಗುರುಲಿಂಗಜಂಗಮದಲ್ಲಿ ಪ್ರೇಮ ಭಕ್ತಿ ಇದ್ದವರಿಗೆ, ವಿಭೂತಿ ರುದ್ರಾಕ್ಷಿಯಲ್ಲಿ ವಿಶ್ವಾಸ ಇದ್ದವರಿಗೆ, ಶಿವಮಂತ್ರವಲ್ಲದೆ ಎನಗೆ ಬೇರೆ ಮಂತ್ರವಿಲ್ಲವೆಂಬವರಿಗೆ ಅಂದೇನೊ, ಇಂದೇನೊ ? ಗುರುಲಿಂಗಜಂಗಮಕ್ಕೋಸ್ಕರವಾಗಿ ಕಾಯಕ ಮಾಡುವವರಿಗೆ ಪಂಚಾಚಾರವೇ ಪ್ರಾಣವಾಗಿ, ಅಷ್ಟಾವರಣವೇ ಅಂಗವಾಗಿಪ್ಪವರಿಗೆ ಅಂದೇನೊ, ಇಂದೇನೊ ? ಪುರಾತರ ವಚನವಿಡಿದು ಆರಾಧಿಸುವವರಿಗೆ, ಆದಿ ಮಧ್ಯ ಅವಸಾನ ತಿಳಿದವರಿಗೆ, ಅಂದು ಇಂದೆಂಬ ಸಂದೇಹವಿಲ್ಲವೆಂದು ಹೇಳಿದಿರಿ ಸ್ವಾಮಿ ಎನ್ನಲ್ಲಿ ನೋಡಿದರೆ ಹುರಿಳಿಲ್ಲ, ಹುರುಳಿಲ್ಲ. ಎನ್ನ ತಪ್ಪಿಂಗೇನೂ ಎಣೆಯಿಲ್ಲ, ನಿಮ್ಮ ಸೈರಣೆಗೆ ಲೆಕ್ಕವಿಲ್ಲ. ಮೇರುಗುಣವನರಸುವುದೆ ಕಾಗೆಯಲ್ಲಿ? ಪರುಷಗುಣವನರಸುವುದೆ ಕಬ್ಬುನದಲ್ಲಿ? ನೀವು ಎನ್ನ ಗುಣವನರಸಿದರೆ ಎಂತು ಜೀವಿಸುವೆನಯ್ಯಾ, ಶಾಂತಕೂಡಲಸಂಗಮದೇವ, ನಿಮ್ಮ ಧರ್ಮ, ನಿಮ್ಮ ಧರ್ಮ.
--------------
ಗಣದಾಸಿ ವೀರಣ್ಣ