ಅಥವಾ

ಒಟ್ಟು 42 ಕಡೆಗಳಲ್ಲಿ , 1 ವಚನಕಾರರು , 41 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾವೇಳೆಯಲ್ಲಿ ಸಹಸ್ರವೇಳೆಯಲ್ಲಿ ಬರುವದು ದುರ್ಲಾಭ. ಬಂದ ಬಳಿಕ ಶಿವಭಕ್ತಜನ್ಮ ಸಾಧ್ಯವಾಯಿತು. ಶಿವಭಕ್ತ ಜನ್ಮದಲ್ಲಿ ಬಂದು ಶಿವಲಿಂಗೈಕ್ಯರ ನಿಂದೆಮಾಡಿ ಕೆಡದಿರು ಕೆಡದಿರು. ಎಲೋ ವೇಷಧಾರಿಗಳಿರಾ, ಶಿವಭಕ್ತ ಬ್ರಹ್ಮವೆಂಬುದು, ಶಿವನ ಸಾಕಾರವೆ ಜಂಗಮದೇವ. ಇಂತೆಂಬ ಉಭಯಭೇದ ನಿಮಗೆ ತಿಳಿಯದು. ವೇಷಾಧಾರಿಗಳು ನೀವು ಕೇಳಿರೋ, ಶುನಕ ಬೆಟ್ಟಕ್ಕೆ ಬೊಗಳಿದಂತೆ ಭಕ್ತಂಗೆ ಜಾತಿಸೂತಕವುಂಟೆ ಎಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಮಲದೇಹಿಗಳ ಅಂಗದ ಮೇಲೆ ಲಿಂಗವಿದ್ದರೇನು ಅದು ಲಿಂಗವಲ್ಲ. ಅದೇನು ಕಾರಣವೆಂದರೆ, ಅವನು ಪ್ರಸಾದದೇಹಿ ಸಂಸ್ಕಾರಿದೇಹಿಯಲ್ಲ. ಅವನ ಸೋಂಕಿದ ಲಿಂಗವು ಕೆರೆಯ ಕಟ್ಟೆಯ ಶಿಲೆಯಂತಾಯಿತು. ಅವನು ಲಿಂಗಾಂಗಿ ಲಿಂಗಪ್ರಾಣಿಯಾಗದೆ ಅವನು ಮುಟ್ಟಿದ ಭಾಂಡ ಭಾಜನಂಗಳೆಲ್ಲ ಹೊರಮನೆ ಊರ ಅಗ್ಗವಣಿ ಎಂದೆನಿಸುವವು. ಅವನು ಮಲದೇಹಿ. ಅವನಂಗದಲ್ಲಿ ಗುರುವಿಲ್ಲ ಜಂಗಮವಿಲ್ಲ, ಪಾದೋದಕವಿಲ್ಲ ಪ್ರಸಾದವಿಲ್ಲ. ಅವನು ಅಶುದ್ಧ ಮಲದೇಹಿ. ಅವನ ಪೂಜಿಸಿದವಂಗೆ ರೌರವ ನರಕ ತಪ್ಪದೆಂದಾತ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪ್ರಸಾದ ಸೋಂಕಿದ ತನುವೆಲ್ಲ ಲಿಂಗಮಯ, ರೋಮರೋಮವೆಲ್ಲ ಲಿಂಗ. ಆ ಭಕ್ತಂಗೆ ಆಧಾರಸ್ಥಾನವೆ ನಿಜಸ್ಥಾನ. ಆಧಾರಚಕ್ರದಲ್ಲಿ ನಾಲ್ಕೆಸಳಿನ ತಾವರೆ ಕಮಲದ ಮಧ್ಯದಲ್ಲಿ ಬಾಲಾರ್ಕಕೋಟಿ ಸೂರ್ಯಪ್ರಕಾಶನುಳ್ಳುದು ಆಚಾರಲಿಂಗ. ಆ ಭಕ್ತನ ಗುಹ್ಯದಲ್ಲಿ ಗುರುಲಿಂಗ, ಆ ಭಕ್ತನ ಮಣಿಪೂರಕದಲ್ಲಿ ಶಿವಲಿಂಗ. ಆ ಭಕ್ತನ ಅನಾಹತದಲ್ಲಿ ಜಂಗಮಲಿಂಗವಿಹುದು. ಆ ಭಕ್ತನ ವಿಶುದ್ಧಿಚಕ್ರದಲ್ಲಿ ಪ್ರಸಾದಲಿಂಗವಿಹುದು. ಆ ಭಕ್ತನ ಭ್ರೂಮಧ್ಯದಲ್ಲಿ ಮಹಾಲಿಂಗವಿಹುದು. ಆ ಭಕ್ತನ ಆಧಾರದಲ್ಲಿ ನಕಾರ ಪ್ರಣಮದ ಜನನವು. ಆಣವಮಲ, ಮಾಯಾಮಲ, ಕಾರ್ಮಿಕಮಲ ಅನಂತಕೋಟಿಗಳಿಗೆ ನಕಾರವೇ ಮೂಲ. ಇನ್ನೂರು ಹದಿನಾರು ಭುವನಂಗಳು ಆ ಭಕ್ತನ ಗುದದಲ್ಲಿ ಬಿದ್ದಿದ್ದವಷ್ಟು ಹದಿನೆಂಟುಧಾನ್ಯಕ್ಕೆ ಶಾಕಪತ್ರ ಕಂದಮೂಲ ಫಲಾದಿಗಳಿಗೆ ಭೂಮಿ ಎಂದುದಾಗಿ. ಉಂಬುವದು ಅಗ್ನಿ, ಉಡುವದು ಪೃಥ್ವಿ ಎಂದುದಾಗಿ. ಈ ಜಗವೆಲ್ಲ ಮಲವನೆ ಭುಂಜಿಸಿ ಮಲವನೆ ವಿಸರ್ಜನೆಯಂ ಮಾಡುವರು. ಇದು ಕಾರಣ ಇದ ಕೊಂಬುವದು ಪ್ರಸಾದವಲ್ಲ. ಕೊಟ್ಟಾತ ಗುರುವಲ್ಲ, ಕೊಂಡಾತ ಸದ್ಭಕ್ತನಲ್ಲ. ಈ ಪ್ರಸಾದವ ಕೊಳ್ಳಬಲ್ಲರು ನಮ್ಮ ಶರಣರು. ಪ್ರಸಾದವೆಂತೆಂದಡೆ : ಅವರ್ಣ, ಆದಿ, ಅವ್ಯಕ್ತ. ಆ ನಾಮವು, ಭರ್ಗೋದೇವಾದಿ ಪಂಚಮೂರ್ತಿಗಳಿಗೆ ಆಶ್ರಯವಾಯಿತು. ಕರಣಚತುಷ್ಟಯಂಗಳಿಗೆ ನಿಲುಕದು. ಪ್ರಾಣಾದಿ ವಾಯುಗಳಿಗೆ, ಶ್ರೋತ್ರಾದಿ ಜ್ಞಾನೇಂದ್ರಿಯಂಗಳಿಗೆ ಅಗಮ್ಯ. ವಾಕ್ಕಾದಿ ಕರ್ಮೇಂದ್ರಿಯಗಳಿಗೆ ತೋರದು. ನಿಜಾನಂದ ನಿತ್ಯಪರಿಪೂರ್ಣ ಪ್ರಸಾದವು ಚೆನ್ನಯ್ಯಪ್ರಿಯ ನಿರ್ಮಾಯ ಪ್ರಭುವೆ, ನಿಮ್ಮ ಶರಣರಿಗಲ್ಲದೆ ಉಳಿದ ಜಡಜೀವಿಗಳಿಗೆ ಅಸಾಧ್ಯ.
--------------
ಚೆನ್ನಯ್ಯ
ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದ ತಾನಾಯಿತ್ತು. ಕಾರಣ ಅಸ್ಥಿ ಸೌಮ್ಯವಾಯಿತ್ತು. ಮಾಂಸ[ಪಿಂಡ] ಮಂತ್ರರೂಪವಾಯಿತ್ತು. ಚರ್ಮ ಚಿದ್ರೂಪವಾಯಿತ್ತು, ನಾಡಿ ನಿರಂಜನವಾಯಿತ್ತು, ರೋಮ ಓಂ ರೂಪವಾಯಿತ್ತು. ಇಂತೀ ಪಂಚಭೂತಕಾಯ ಪ್ರಸಾದ[ಕಾಯ]ವಾಯಿತ್ತು. ಮಾಂಸಪಿಂಡ ಮಂತ್ರಪಿಂಡವಾಯಿತ್ತು. ವಾಯು ಪ್ರಾಣಲಿಂಗ ಪ್ರಾಣವಾಯಿತ್ತು. ನರರೂಪ ಹರರೂಪವಾಯಿತ್ತು. ಹರರೂಪ ಗುರು ಚರ ಪರಮ ಪ್ರಸಾದವಾಯಿತ್ತು. ದೇವಭಕ್ತನ ಪ್ರಸಾದವೆ ಭಕ್ತಿ ಮುಕ್ತಿಪ್ರಸಾದ ತಾನೆ, ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
'ಯದಾ ಪಾದೋದಕಂ ಭಾವ್ಯಂ ತಥಾ ಪ್ರಸಾದಃ ಕ್ರೀಯತೇ| ತೀರ್ಥ ಪ್ರಸಾದ ಸಮಾಯುಕ್ತ ಉತ್ತಮೋತ್ತಮ ಲಿಂಗಾರ್ಪಣಂ || '' ಜಂಗಮದಲ್ಲಿ ಪಾದತೀರ್ಥವಾದ ಮೇಲೆ ತಾನು ಸವಿದು ಲಿಂಗಕ್ಕೆ ಅರ್ಪಿಸುವದು ಅದೀಗ ಉತ್ತಮೋತ್ತಮ ಲಿಂಗಾರ್ಪಣವೆಂದುದು ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಶಿವಲಿಂಗ ಸಂಸಾರಸಂಪನ್ನ ಶರಣನು ಲಿಂಗಮುಖದಲ್ಲಿ ಭೋಗಿಸುತ್ತಿಹನು ಮುಟ್ಟಿದ ಸುಖಂಗಳನೆಲ್ಲ. ಲಿಂಗ ಬೇರೆ ಶರಣ ಬೇರೆ ಎಂದು ನುಡಿವ ಅಸಂಸ್ಕಾರಿ ಭೂತದೇಹಿಗಳು ಭಕ್ತ ಜಂಗಮರೆಂದು ಮುಖವ ನೋಡಿದರೆ ಹಂದಿಯ ಜನ್ಮ ತಪ್ಪದೆಂದು ಶ್ರುತಿ ಸಾರುತಿದೆ : 'ಪ್ರೇತಲಿಂಗ ಸಂಸ್ಕಾರಿಣಾಂ ಭೂತಪ್ರಾಣಿ ನಜಾಯತೇ | ಪ್ರಭುತೇ ಮುಖಂ ದೃಷ್ಟ್ವಾ ಕೋಟಿಜನ್ಮನಿ ಸೂಕರಃ||' ಇಂತು ಪ್ರೇತಲಿಂಗ ಸವಳು ಭುಂಜಿಸುವುದಲ್ಲದೆ ದ್ವಯವಲ್ಲದೆ ಪ್ರಸಾದವಲ್ಲವೆಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಇಷ್ಟಲಿಂಗಕ್ಕೆ ತೋರಿ ಮೃಷ್ಟಾನ್ನ ಹೊಡದೆನೆಂಬುದೇನು ಆ ಇಷ್ಟಲಿಂಗ ಮುಖದಲ್ಲಿ ನಿಮಗೆ ತೃಪ್ತಿ ಆಗಲಿಲ್ಲವೆ. ಆ ಶರಣನ ಮುಖದಲ್ಲಿ ಲಿಂಗತೃಪ್ತಿ ಅಹುದಲ್ಲದೆ ಅಂಗಮುಖದಲ್ಲಿ ಶರಣತೃಪ್ತಿ ಆಗಲರಿಯದು. ''ವೃಕ್ಷಸ್ಯ ವದನಂ ಭೂಮಿಃ ಲಿಂಗಸ್ಯ ವದನಂ ಜಂಗಮಂ'' ಎಂಬ ಶ್ರುತಿ ನೋಡಿ ಮರುಳಾದ ಭಂಗಿತರಿಗೆ ಶಿವಲಿಂಗ ಮುನ್ನವಿಲ್ಲವೆಂದಾತ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪ್ರಸಾದ ಪ್ರಸಾದವೆಂದು ಒಪ್ಪಕ್ಕೆ ಕೊಂಬ ಬೊಪ್ಪಗಳು ನೀವು ಕೇಳಿರೊ. ಕಾಯಪ್ರಸಾದವನರಿದು, ಕರಣಪ್ರಸಾದವನರಿದು, ಜೀವಪ್ರಸಾದವನರಿದು, ನಿಜಪ್ರಸಾದವನರಿದು ಕೊಳಬಲ್ಲರೆ ಪ್ರಸಾದಿ. ಕೊಂಬವರ ಕಂಡು ಪ್ರಸಾದವ ಕೈಕೊಂಡರೆ ಕಂಡವರ ಕಂಡು ಕೌದಿಯ ಹೊಲಿಯ ಹೋದರೆ ಕುಂಟೆಳೆ ಬಿದ್ದಂತೆ. ನವಿಲು ಕುಣಿಯಿತ್ತೆಂದು ಶಾಬಕ ಕುಣಿದು ಪುಚ್ಚವ ಕಳಕೊಂಡಂತೆ. ಸಿಂಹ ಲೆಂಘಣಿಸಿತ್ತೆಂದು ಸೀಳನಾಯಿ [ಲೆಂಘಣಿಸಿ] ಸೊಂಟವ ಕಳಕೊಂಡಂತೆ. ಸದ್ಭಕ್ತರ ಕಂಡು ನಾನು ಸದ್ಭಕ್ತನೆಂದು ಓಗರವ ನೀಡಿಸಿಕೊಂಡು ಅಯ್ಯಾ, ಹಸಾದ, ಮಹಾಪ್ರಸಾದವ ಪಾಲಿಸಿರೆಂದು ತನ್ನಾದಿ ಕ್ರಿಯಾದೀಕ್ಷೆ, ತನ್ನ ಮಧ್ಯೆ ಜ್ಞಾನದೀಕ್ಷೆ, ತನ್ನವಸಾನ ಮಹಾಜ್ಞಾನ ದೀಕ್ಷೆಯ ತಿಳಿಯದೆ ತನ್ನ ಪೂರ್ವಾಪರ, ತನ್ನ ಉದಯಾಸ್ತಮಾನವರಿಯದೆ, ಅರ್ಪಿತಾವಧಾನಭಕ್ತಿಯನರಿಯದೆ, ಗುರು ಲಿಂಗ ಜಂಗಮದ ನಿಲುಕಡೆಯನರಿಯದೆ, ಕಾಂಚನವ ಕೊಟ್ಟು, ಕೈಯಾಂತು ಪಡಕೊಂಬ ಭಕ್ತನ ಅಂಗವಿಕಾರವು ಮುನ್ನಿನಂತೆ. ಆ ಭಕ್ತನ ಆಚಾರ ವಿಚಾರ ನಡೆ ನುಡಿ ದೀಕ್ಷಾತ್ರಯಂಗಳ ವಿಚಾರಿಸದೆ ಪ್ರಸಾದವ ಕೊಟ್ಟ ಗುರುವಿನ ವಿಚಾರವು ಮುನ್ನಿನಂತೆ. ಈ ಉಭಯತರು, ಬಟ್ಟೆಗುರುಡನ ಕೈಯ ಬಟ್ಟೆಗುರುಡ ಹಿಡಿದು ಹಳ್ಳವ ಬಿದ್ದಂತೆ ಕಾಣಾ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪಂಚತತ್ತ್ವದೊಳು ಪಂಚಕೃತಿಯೊಳು ಪಂಚತತ್ತ್ವ. ಶರಣನ ಪಂಚೇಂದ್ರಿಯ ಶಿವನ ಪಂಚಮುಖವೆಂದರಿಯದೆ ಹಂಚು ಹಿಡಿದು ಹಲ್ಲು ತೆರೆವಂತೆ ಕಲ್ಲು ಹಿಡಿದು ತನ್ನ ಕಂಡೆನೆಂಬ ಖುಲ್ಲದೇಹಿಗಳಿಗೆ ಶಿವಲಿಂಗ ಮುನ್ನವೆ ಇಲ್ಲವೆಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಅಂಗದ ಮೇಲೆ ಲಿಂಗವ ಧರಿಸಿದ ಬಳಿಕ ಸರ್ವಾಂಗಲಿಂಗವಾಗದಿದ್ದರೆ ಆ ಲಿಂಗವ ಏತಕ್ಕೆ ಧರಿಸಲಿ ? ಪ್ರಸಾದ ಕೊಂಡ ಕಾಯ ಪ್ರಸಾದವಾಗದಿದ್ದರೆ ಆ ಪ್ರಸಾದ ಏತಕ್ಕೆ ಕೊಳ್ಳಲಿ ? ಇದು ಕೊಟ್ಟವನ ಗುಣದಿಂದಾದುದು. ಅದನ್ನು ವಿಚಾರಿಸದೆ ಏತಕ್ಕೆ ಲಿಂಗವ ಧರಿಸಿದಿರಿ ? ಏತಕ್ಕೆ ಪ್ರಸಾದವ ಕೊಂಬುವಿರಿ ? ಇದಕ್ಕೆ ಸಾಕ್ಷಿ: 'ಸರ್ವದ್ರವ್ಯವಂಚ ವೇದಯಂ ತದ್ವಾಹಾನ ವಿಖವತೆ' ಇಂತಪ್ಪ ಶ್ರುತಿ ಹುಸಿ ಎನ್ನಿರೊ ವೇಷಧಾರಿಗಳಿರಾ. ನಿಮಗೆ ಪಂಚಾಕ್ಷರ ಸಂಯುಕ್ತವ ಮಾಡಿದ ಗುರುವಿನ ನಡೆಯಲ್ಲಿ ನಿಮ್ಮ ನಡೆ ಎಂತೆಂದಡೆ: ಸಾಕ್ಷಿ: 'ನಾಮಧಾರಕ ಗುರು ನಾಮಧಾರಕಃ ಶಿಷ್ಯಃ | ಅಂಧ ಅಂಧಕಯುಕ್ತಾಃ ದ್ವಿವಿಧಂ ಪಾತಕಂ ಭವೇತ್ ||' ಎಂದುದಾಗಿ, ನಮ್ಮ ಶಿವಗಣಂಗಳ ಸುವಾಚ್ಯ ಸಾಹಿತ್ಯವೆಂದರೆ ಉರಿಕರ್ಪುರ ಸಂಯೋಗವಾದಂತೆ, ವಾಯು ಗಂಧವನಪ್ಪಿದಂತೆ ಶಿವಗಣಂಗಳ ಪಂಚೇಂದ್ರಿಯ ಶಿವನ ಪಂಚಮುಖವಾಗಿದ್ದಿತು. ಪಂಚಾಚಾರವೆ ಪಂಚಬ್ರಹ್ಮ ಪರಿಪೂರ್ಣ ತಾನೆ. ಗುರು, ಲಿಂಗ, ಜಂಗಮ, ತೀರ್ಥಪ್ರಸಾದ ಪಂಚಬ್ರಹ್ಮಮೂರ್ತಿ ನಿಮ್ಮ ಶರಣ. ಇಂತೀ ಶರಣನ ನಿಲವನರಿಯದೆ ನುಡಿವ ವೇಷಧಾರಿಗಳ ಷಡುಸ್ಥಲಬ್ರಹ್ಮಜ್ಞಾನಿಗಳೆಂದರೆ ಕೆಡೆಹಾಕಿ ಮೂಗ ಕೊಯ್ದು, ಇಟ್ಟಂಗಿಯ ತಿಕ್ಕಿ, ಸಾಸಿವೆಯ ಪುಡಿ ತಳೆದು, ನಿಂಬಿಹಣ್ಣು ಹಿಂಡಿ, ಕೈಯಲ್ಲಿ ಕನ್ನಡಿಯ ಕೊಟ್ಟು, ನಿಮ್ಮ ನಿಲವ ನೋಡೆಂದು ಮೂಡಲ ಮುಂದಾಗಿ ಅಟ್ಟದೆ ಬಿಡುವನೆ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಭವಿಮಿಶ್ರವೆಂಬಿರಿ, ಅಚ್ಚಲಿಂಗಾಂಗಿಗಳೆ ಕೇಳಿರಿ. ಅಚ್ಚಲಿಂಗಾಂಗಿಗಳಾದರೆ ನಿಮ್ಮ ಸರ್ವೇಂದ್ರಿಯವೆಂಬ ಭವಿಯ ಉಚ್ಫಿಷ್ಠವ ಭುಂಜಿಸಿ ತಮ್ಮೊಳಗೆ ಭವಿಯ ವಿಚಾರಿಸದ ಕುನ್ನಿಗಳಿಗೆ ಮೆಚ್ಚ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪ್ರಸಾದವೆಂದು ನುಡಿವಿರಿ, ಪ್ರಸಾದದ ಭೇದವ ಬಲ್ಲವರಾರು, ಈ ಪ್ರಸಾದದ ಭೇದವ ತಿಳಿದವರಾರು. ಪ್ರಸಾದವೆಂಬ ಮೂರಕ್ಷರದ ಭೇದವ ಬಲ್ಲವರಾರು. ಆಕಾರ ನಿರಾಕಾರ ಸಾಕಾರ ಈ ಮೂರು ಪ್ರಕಾರವಾಯಿತ್ತು. ಈ 'ಪ್ರ'ಕಾರದ ಭೇದವ ಬಲ್ಲವರಾರು. ಸಕಲ ನಿಃಕಲ ನಿರಂಜನನಾದ ಭೇದವ ಬಲ್ಲರೆ 'ಸಾ'ಕಾರದ ಭೇದವ ಬಲ್ಲವರೆ, 'ದ'ಕಾರದ ಭೇದವನರಿದವರೆ, ಆದಿ ಆಧಾರ ಅನಾದಿ ಈ ತ್ರಿವಿಧವ ಬಲ್ಲವರು. ಇಂತೀ ಪ್ರಸಾದವೆಂಬ ಸದ್ಭಾವದ ನಿರ್ಣಯವನರಿಯದೆ ಪ್ರಸಾದವ ಕೊಟ್ಟಾತನು ಕೊಂಡಾತನು ಇವರಿಬ್ಬರ ಭೇದವೆಂತೆಂದರೆ: ಹುಟ್ಟುಗುರಡನ ಕೈಯ ತೊಟ್ಟಿಗುರುಡ ಹಿಡದಂತಾಯಿತು. ಈ ಭೇದವೆಂತೆಂದರೆ :ಇಷ್ಟ ಪ್ರಾಣ ಭಾವ 'ಪ್ರ'ಕಾರವಾಯಿತು. 'ಸಾ'ಕಾರವೆ ಜಂಗಮಲಿಂಗ ಪ್ರಸಾದಲಿಂಗ ಸೋಂಕಿ ನವಪೀಠಗಳಾಗಿ ನವಲಿಂಗ ಸೋಂಕಿ ನವಪೀಠ ಪ್ರಸಾದವಾಯಿತು. ನವಪ್ರಸಾದ ನವಪ್ರಣಮವೆ ನವಬೀಜವಾಯಿತು. ನವಹಸ್ತಗಳ ನೆಲೆಗೊಳಿಸಿ ಶಿವಲಿಂಗಧಾರಣಮಂ ಮಾಡಿ ನವಲಿಂಗಮುಖವನರಿದು ನವನೈವೇದ್ಯವಂ ಮಾಡಿ ನವಮುಖಕ್ಕಿತ್ತ ನವಪ್ರಸಾದಿಯಾದ ಶರಣನು ನವಚಕ್ರಗಳೆಲ್ಲ ನವಜಪ ಪ್ರಸಾದವೆ ತಾನೆ ಆಗಿ ನವರತ್ನಪ್ರಭೆ ಏಕರವಿರಶ್ಮಿಯಾದಂತೆ, ನವಕೋಟಿ ಸೋಮಸೂರ್ಯರ ಪ್ರಭೆ ಒಂದಾಗಿ ದಿವ್ಯಜ್ಯೋತಿರ್ಲಿಂಗ ತಾನಾದ ಶರಣನು. ಅರಿವೆ ಶಿವಲಿಂಗ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ತಾನೆ ಆಯಿತು. ನವ ಅಸ್ಥಿಗಳಡಗಿ ನವಲಿಂಗ ಒಂದೆ ಅಂಗವಾಗಿ ಬೆಳಗುತಿಹ ಶರಣಂಗೆ ಇಹಲೋಕವೇನು, ಪರಾತ್ಪರಲೋಕವೇನು ? ಸಗುಣವೇನು ನಿರ್ಗುಣವೇನು ? ನಿರಂಜನವೇನು, ನಿಷ್ಕಳವೇನು, ನಿರ್ಮಾಯವೇನು ? ಆತಂಗೆ ಭಕ್ಷವಿಲ್ಲ ಅಭ್ಯಕ್ಷವಿಲ್ಲ ಅರ್ಪಿತವಿಲ್ಲ ಅನರ್ಪಿತವಿಲ್ಲ. ಆತ ರುಚಿಸಿದ್ದೆಲ್ಲ ಪ್ರಸಾದ, ಅತ ಸೋಂಕಿದ್ದೇ ಪಾವನ. ಆತ ಮೆಟ್ಟಿದ ಭೂಮಿಯೆಲ್ಲ ಪುಣ್ಯಕ್ಷೇತ್ರಂಗಳಾದವು. ಆತ ಜಲಮಲವ ಬಿಟ್ಟು ಬಂದ, ಸಂಚಮನವ ಮಾಡಿದ ಸ್ಥಾನಾದಿಗಳೆಲ್ಲ ಪುಣ್ಯತೀರ್ಥಂಗಳಾದವು. ಇಂತೀ ನಿಮ್ಮ ಶರಣನ ಸರ್ವಾಂಗವೆಲ್ಲ ಶಿವಮಂದಿರವು ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪಾದೋದಕ ಪಾದೋದಕವೆಂದು ಒಪ್ಪವಿಟ್ಟು ನುಡಿವಿರಿ. ಪಾದೋದಕದ ಭೇದವ ಬಲ್ಲರೆ ಹೇಳಿರಿ, ಅರಿಯದಿರ್ದರೆ ಕೇಳಿರಿ. ಪಾದೋದಕವೆ ಪರಾತ್ಪರಾನಂದವು. ಆ ಆನಂದವೆ ಚಿದ್ಬಿಂದು; ಆ ಚಿದ್ಬಿಂದುವೆ ಪಾದೋದಕ. ಆ ಪಾದೋದಕವ ಶ್ರೀಗುರು ಲಿಂಗ ಜಂಗಮದ ದ್ವಿಪಾದದ ಭ್ರೂಮಧ್ಯಸ್ಥಾನದಲ್ಲಿರ್ದುದನರಿದರ್ಚಿಸಿದ ಪರಿಣಾಮವೆ ಚಿದಾನಂದಬಿಂದು ತೊಟ್ಟಿಟ್ಟುದೆ ಪಾದೋದಕವು. ಈ ಭೇದವನರಿದು ಕೊಳಬಲ್ಲರೆ ಪಾದೋದಕವೆನಬಹುದು. ಇದನರಿಯದೆ ಕೆರೆ ಬಾವಿ ಹಳ್ಳ ಹೊಳೆ ಚಿಲುಮೆ ನೀರ ತಂದು ಮನೆಗೆ ಬಂದಲ್ಲಿ ಅಗ್ಗಣಿಯೆಂಬಿರಿ. ಜಂಗಮದ ಪಾದದ ಮೇಲೆರದರೆ ತೀರ್ಥವೆಂಬಿರಿ. ತೀರ್ಥವೆಂದುಕೊಂಡು ತೃಷೆಯನಡಗಿಸಿ, ಕಡೆಯಲ್ಲಿ ಮೂತ್ರವ ಬಿಟ್ಟುಬಂದೆವು ಹೊರಗಗ್ಗಣಿಯ ತನ್ನಿ ಎಂಬ ಜಲವು ತೀರ್ಥವಲ್ಲ. ಕೊಟ್ಟಾತ ಗುರುವಲ್ಲ, ಕೊಂಡಾತ ಭಕ್ತನಲ್ಲ. ಇವರಿಬ್ಬರ ನಡತೆ ಎಂತಾಯಿತ್ತೆಂದಡೆ: ಎಕ್ಕಲ ಅಮೇಧ್ಯವ ತಿಂದು ಒಂದರ ಮೋರಿಯ ಒಂದು ಮೂಸಿ ನೋಡಿದಂತಾಯಿತ್ತೆಂದಾತ, ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಭವಿ ಮಾಡಿದುದನುಂಡರೆ ಪಾಕ ಕಿಲ್ಬಿಷವೆಂಬಿರಿ. ಶಿವಭಕ್ತರು ಪಾದೋದಕ ಪ್ರಸಾದವ ಕೊಂಬುವಲ್ಲಿ ಭವಿಮಿಶ್ರವೆಂದು ವಿಚಾರಿಸಿ ಕೇಳುವಿರಿ. ಬೆಲ್ಲ, ಸಕ್ಕರೆ, ಉಪ್ಪು, ತೈಲ, ತುಪ್ಪ, ಭವಿಪಾಕವ ಭುಂಜಿಸುವಿರಿ. 'ಯಥಾ ದೇಹಂ ತಥಾಹಂಚ ಲಿಂಗವಾಯತೆ' ಭವಿಪಾಕ ಕಿಲ್ಬಿಷವೆಂದು ಕಿಲ್ಬಿಷವ ಭುಂಜಿಸಿದ ಬಳಿಕ ಅಚ್ಚಲಿಂಗಾಗವೆಲ್ಲಿಹುದೊ ವ್ರತಗೇಡಿಗಳಿರಾ ? ನಿಮ್ಮ ದೇವಭಕ್ತರೆಂದು ಪೂಜಿಸಿದವರಿಗೆ ಭವ ತಪ್ಪದು. ನಮ್ಮ ಶಿವಗಣಂಗಳು ಅಚ್ಚಲಿಂಗೈಕ್ಯರು. ಅವರು ಅನಾದಿ ಪಾದೋದಕ ಪ್ರಸಾದವ ಕೊಂಬುವರು. ಅವರು ಅನಾದಿಲಿಂಗಾಂಗಿಗಳು. ಅವರು ಮುಟ್ಟಿದ್ದೆಲ್ಲ ಪಾವನ ಅವರು ನೋಡಿದ್ದೆಲ್ಲ ಪವಿತ್ರವೆಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಪ್ರಸಾದವೆಂಬುದು ನಿರ್ಮಳಮುಖದಿಂದ ಉದ್ಭವವಾದದ್ದು. ಚಿತ್‍ಶಕ್ತಿಯಿಂದ ಮಹಾಲಿಂಗರೂಪವಾಯಿತು. ಮಹಾಲಿಂಗಪ್ರಸಾದದಿಂದ ಪ್ರಸಾದಲಿಂಗ ಉದ್ಭವವಾಯಿತು. ಪ್ರಸಾದಲಿಂಗದಿಂದ ಜಂಗಮಲಿಂಗ ಉದ್ಭವವಾಯಿತು. ಜಂಗಮಲಿಂಗಪ್ರಸಾದದಿಂದ ಶಿವಲಿಂಗ ಉದ್ಭವವಾಯಿತು. ಶಿವಲಿಂಗಪ್ರಸಾದದಿಂದ ಗುರುಲಿಂಗಪ್ರಸಾದ ಉದ್ಭವವಾಯಿತು. ಗುರುಲಿಂಗಪ್ರಸಾದದಿಂದ ಅಚಾರಲಿಂಗ ಉದ್ಭವವಾಯಿತು. ಇಂತೀ ಷಡ್ವಿಧಲಿಂಗವು ಪ್ರಸಾದದಿಂದ ಉದ್ಭವಿಸಿದವು. ಲಿಂಗದಿಂದ ಜಗತ್ತು ಉದ್ಭವಿಸಿದವು. 'ಲಿಂಗಮಧ್ಯೇ ಜಗತ್ಸರ್ವಂ ತ್ರೆೃಲೋಕ್ಯಂ ಸಚರಾಚರಂ | ಲಿಂಗ ಬಾಹ್ಯಾತ್ ಪರಂ ನಾಸ್ತಿ [ತಸ್ಮಾತ್] ಲಿಂಗಂ ಪ್ರಪೂಜಯೇತ್ || ಲೀಯಾಲೀಯ ಸಂಪ್ರೋಕ್ತಂ ಸಕಾರಂ ಸ್ಫಟಿಕಮುಚ್ಯತೇ ! ಲಯರ್ನಾಗಮಶ್ಯನಂ ಲಿಂಗಶಬ್ದಮೇವಚೇತ್ || ಲೀಯತೇ ಗಮ್ಯತೇ ಯತ್ರಯೋನಿಃ ಸರ್ವಚರಾಚರಂ | ತದೀಯಂ ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ ||'' ಸರ್ವ ಸಚರಾಚರವೇ ಪ್ರಸಾದರೂಪ. ಅನಂತಕೋಟಿ ಬ್ರಹ್ಮಾಂಡಗಳಿಗೆ ಪ್ರಸಾದವೆ ಕಾಯ ಜೀವ ಪ್ರಾಣವಾಯಿತು, ಕಾಯ ಇಷ್ಟಲಿಂಗವಾಯಿತು, ಜೀವ ಪ್ರಾಣಲಿಂಗವಾಯಿತು, ಭಾವವೇ ತೃಪ್ತಿಲಿಂಗವಾಯಿತು. ಪೃಥ್ವಿ ಅಪ್ಪುಗಳೆರಡು ಕಾಯವಾಯಿತು. ಅಗ್ನಿ ವಾಯುಗಳೆರಡು ಪ್ರಾಣಲಿಂಗವಾಯಿತು. ಅಕಾರ ಓಂಕಾರವೇ ಭಾವವಾಯಿತು. ಇಂತೀ ಪಂಚತತ್ವಪ್ರಸಾದವೆನಿಸಿದ ಪ್ರಣಮವು [ಹೀಗೆ ಕಾಯ ಜೀವ ಪ್ರಾಣ ಪ್ರಸಾದವಾಯಿತ್ತು] ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಇನ್ನಷ್ಟು ... -->