ಅಥವಾ
(4) (1) (4) (0) (0) (0) (0) (0) (0) (1) (0) (0) (0) (0) ಅಂ (2) ಅಃ (2) (0) (0) (1) (0) (0) (0) (0) (1) (0) (0) (0) (0) (0) (0) (0) (0) (0) (0) (0) (1) (16) (0) (0) (2) (1) (0) (0) (0) (3) (1) (2) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂಗದ ಮೇಲೆ ಲಿಂಗವ ಧರಿಸಿದ ಬಳಿಕ ಸರ್ವಾಂಗಲಿಂಗವಾಗದಿದ್ದರೆ ಆ ಲಿಂಗವ ಏತಕ್ಕೆ ಧರಿಸಲಿ ? ಪ್ರಸಾದ ಕೊಂಡ ಕಾಯ ಪ್ರಸಾದವಾಗದಿದ್ದರೆ ಆ ಪ್ರಸಾದ ಏತಕ್ಕೆ ಕೊಳ್ಳಲಿ ? ಇದು ಕೊಟ್ಟವನ ಗುಣದಿಂದಾದುದು. ಅದನ್ನು ವಿಚಾರಿಸದೆ ಏತಕ್ಕೆ ಲಿಂಗವ ಧರಿಸಿದಿರಿ ? ಏತಕ್ಕೆ ಪ್ರಸಾದವ ಕೊಂಬುವಿರಿ ? ಇದಕ್ಕೆ ಸಾಕ್ಷಿ: 'ಸರ್ವದ್ರವ್ಯವಂಚ ವೇದಯಂ ತದ್ವಾಹಾನ ವಿಖವತೆ' ಇಂತಪ್ಪ ಶ್ರುತಿ ಹುಸಿ ಎನ್ನಿರೊ ವೇಷಧಾರಿಗಳಿರಾ. ನಿಮಗೆ ಪಂಚಾಕ್ಷರ ಸಂಯುಕ್ತವ ಮಾಡಿದ ಗುರುವಿನ ನಡೆಯಲ್ಲಿ ನಿಮ್ಮ ನಡೆ ಎಂತೆಂದಡೆ: ಸಾಕ್ಷಿ: 'ನಾಮಧಾರಕ ಗುರು ನಾಮಧಾರಕಃ ಶಿಷ್ಯಃ | ಅಂಧ ಅಂಧಕಯುಕ್ತಾಃ ದ್ವಿವಿಧಂ ಪಾತಕಂ ಭವೇತ್ ||' ಎಂದುದಾಗಿ, ನಮ್ಮ ಶಿವಗಣಂಗಳ ಸುವಾಚ್ಯ ಸಾಹಿತ್ಯವೆಂದರೆ ಉರಿಕರ್ಪುರ ಸಂಯೋಗವಾದಂತೆ, ವಾಯು ಗಂಧವನಪ್ಪಿದಂತೆ ಶಿವಗಣಂಗಳ ಪಂಚೇಂದ್ರಿಯ ಶಿವನ ಪಂಚಮುಖವಾಗಿದ್ದಿತು. ಪಂಚಾಚಾರವೆ ಪಂಚಬ್ರಹ್ಮ ಪರಿಪೂರ್ಣ ತಾನೆ. ಗುರು, ಲಿಂಗ, ಜಂಗಮ, ತೀರ್ಥಪ್ರಸಾದ ಪಂಚಬ್ರಹ್ಮಮೂರ್ತಿ ನಿಮ್ಮ ಶರಣ. ಇಂತೀ ಶರಣನ ನಿಲವನರಿಯದೆ ನುಡಿವ ವೇಷಧಾರಿಗಳ ಷಡುಸ್ಥಲಬ್ರಹ್ಮಜ್ಞಾನಿಗಳೆಂದರೆ ಕೆಡೆಹಾಕಿ ಮೂಗ ಕೊಯ್ದು, ಇಟ್ಟಂಗಿಯ ತಿಕ್ಕಿ, ಸಾಸಿವೆಯ ಪುಡಿ ತಳೆದು, ನಿಂಬಿಹಣ್ಣು ಹಿಂಡಿ, ಕೈಯಲ್ಲಿ ಕನ್ನಡಿಯ ಕೊಟ್ಟು, ನಿಮ್ಮ ನಿಲವ ನೋಡೆಂದು ಮೂಡಲ ಮುಂದಾಗಿ ಅಟ್ಟದೆ ಬಿಡುವನೆ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದ ನಿಜಪ್ರಸಾದವೆಂಬ [ಈ ಚತುರ್ವಿಧಪ್ರಸಾದದ] ನಿರ್ಣಯ[ವ]ನರಿದು [ಕೊಂಡು] ಕೊಡಬಲ್ಲಾತನೆ ಗುರು, ತಿಳಿದು ಕೊಳಬಲ್ಲಾತನೆ ಸದ್ಭಕ್ತ. ಈ ಭೇದವನರಿಯದೆ ಅಚ್ಚ ನಿಚ್ಚ ಪ್ರಸಾದವೆಂದು ನೀರಕೂಳನುಂಬುವ ಉಚ್ಫಿಷ್ಟ ಮುದಿಹೊಲೆಯರ ಮೂಗು ಕೊಯ್ಯದೆ ಮಾಣ್ಬನೆ [ನಿಮ್ಮ ಶರಣ] ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಅಂಗವೆ ಶರಣನಾದ ನಿಮಿತ್ಯದಲ್ಲಿ ಶರಣನ ಸರ್ವೇಂದ್ರಿಯಂಗಳೆಲ್ಲ ಲಿಂಗಮುಖ ಗುಟಕಿಯ[ಲ್ಲದೆ ಅನ್ಯ ಗುಟಕಿಯ ಕೊಂಡರೆ] ಅಲ್ಲಿಯ ಹೀನ ಹುಯ್ಯಲಂಗಳ ಗುಟಕಿಯ ತೆಗೆದುಕೊಂಡಂತೆ, ಶರಣನ ಅಂಗದಲ್ಲಿ ಸೋಂಕಿದ ಸುಖಂಗಳೆಲ್ಲ ಲಿಂಗಮಯವೆಂದರಿಯದೆ ಲಿಂಗವ ಬೇರೆ ಇಟ್ಟು ಕೊಟ್ಟುಕೊಂಬೆನೆಂಬ ಕುನ್ನಿಗಳಿಗೆ ಶಿವಲಿಂಗ ಮುನ್ನವಿಲ್ಲವೆಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಅಚ್ಚಪ್ರಸಾದವೆಂಬುದೆ ನಿಶ್ಚಲ ನಿರ್ವಯಲಕ್ಕೆ ನಾಮವು. ಅಚಲ ಅದ್ವಯ ಅಭಿನ್ನವೆಂಬುದೆ [ಅಚ್ಚಪ್ರಸಾದ ]. ಗುರುಸ್ವಾನುಭಾವದಿಂದರಿದು ನಿಶ್ಚಯವಾದುದೆ ನಿಚ್ಚಪ್ರಸಾದ. ಅಷ್ಟಮೂರ್ತಿಗಳ ಸಮಯವನರಿದುದೆ ಸಮಯಪ್ರಸಾದ. ಏಕಪ್ರಸಾದವೆಂಬುದೆ ಅಂಡಪಿಂಡ ಬ್ರಹ್ಮಾಂಡಗಳಿಗೆ ಏಕರಸಮಯವಾಗಿ ತತ್ವಮಸಿಯಾದಿ ವಾಕ್ಯಂಗಳನರಿತು ಸರ್ವಕಲ್ಪಿತಬ್ರಹ್ಮವೆಂದು ಅರಿತುಕೊಳ್ಳಬಲ್ಲರೆ ಏಕಮೇವನದ್ವಿತೀಯವೆಂದು ವಾಕ್ಯಂಗಳಿಗೆಡೆಗೊಡದೆ ಏಕಪ್ರಸಾದವ ಕೊಂಡವರು ಬಸವ ಚನ್ನಬಸವ [ಪ್ರಭುದೇವ] ಮುಖ್ಯವಾದ ಅಸಂಖ್ಯಾತ ಗಣಂಗಳು. [ಕೊಂಡವರ ಏಕ] ಪ್ರಸಾದದಿಂದ ಮುಂದಾದವರಿಗೂ ಇದೇ ಪ್ರಸಾದ ಹಿಂದಾದವರಿಗೂ ಇದೇ ಪ್ರಸಾದ ಇಂದಾದವರಿಗೂ ಇದೇ ಪ್ರಸಾದ. ಈ ಪ್ರಸಾದವಲ್ಲದೆ ನಿತ್ಯಾನಿತ್ಯ ಹಸಿವು ತೃಷೆಗೆ ಕೊಂಬುವದು ಪಾದೋದಕಪ್ರಸಾದವಲ್ಲ. ನೀರಕೂಳನುಂಡು ಜಲಮಲವೆಂಬುದು ಪಾದೋದಕ ಪ್ರಸಾದವಲ್ಲ. ನಿತ್ಯ ನಿತ್ಯ ತೃಪ್ತಿಯೇ ಪ್ರಸಾದವೆಂಬುವದು ಪರಮಾನಂದವು. ಈ ಭೇದವನರಿದುಕೊಳ್ಳಬಲ್ಲಾತನೆ ಭಕ್ತ, ಕೊಡಬಲ್ಲಾತನೆ ಗುರುವು. ಪಾದೋದಕ ಪ್ರಸಾದವ ಕೊಳ್ಳಬೇಕೆಂಬಾತ ಭಕ್ತನಲ್ಲ, ಬದ್ದಭವಿ. ಉರಿಕೊಂಡ ಕರ್ಪುರವ ಮರಳಿ ಸುಡುವರೆ ? ಪರುಷ ಮುಟ್ಟಲು ಲೋಹ ಹೊನ್ನಾದ ಮೇಲೆ ಮರಳಿ ಮರಳಿ ಪರುಷವ ಮುಟ್ಟಿಸುವರೆ ? ಜ್ಯೋತಿ ಮುಟ್ಟಿದ ಮನೆಗೆ ಕತ್ತಲುಂಟೆ ? ಪಾದೋದಕ ಪ್ರಸಾದ ಸೋಂಕಿದ ಕಾಯ ಪ್ರಸಾದವಲ್ಲದೆ ಪ್ರಸಾದಕ್ಕೆ ಪ್ರಸಾದವುಂಟೆ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ ?
--------------
ಚೆನ್ನಯ್ಯ