ಅಥವಾ

ಒಟ್ಟು 45 ಕಡೆಗಳಲ್ಲಿ , 13 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೀರ್ತಿವಾರ್ತೆಗೆ ಮಾಡುವಾತ ಭಕ್ತನಲ್ಲ. ಪರರ ಬೋಧಿಸಿಕೊಂಡುಂಬಾತ ಜಂಗಮವಲ್ಲ. ತ್ರಿಸಂಧ್ಯಾಕಾಲವೆಂದು ಪ್ರಸಾದವನಿಕ್ಕುವಾತ ಗುರುವಲ್ಲ. ತ್ರಿಸಂಧ್ಯಾಕಾಲವೆಂದು ಪ್ರಸಾದವ ಕೊಂಬಾತ ಶಿಷ್ಯನಲ್ಲ. ಪರಗಮನವಿರಹಿತ ಜಂಗಮ, ಕಾಲಕರ್ಮವಿರಹಿತ ಪ್ರಸಾದಿ, ಪ್ರಸಾದವ ಇಕ್ಕಿಯೂ ಇಕ್ಕದಾತ ಗುರು, ಕೊಂಡೂ ಕೊಳ್ಳದಾತ ಶಿಷ್ಯ. ಆ ಭಕ್ತನಲ್ಲಿಯೆ ನಿಕ್ಷೇಪಿಸಿ ನಿರ್ಗಮನಿಯಾಗಿ ಹೋದಾತ ಜಂಗಮ. ಆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವಿಡಿದು ಮಾಡುವಾತ ಭಕ್ತ_ ಇಂತೀ ಚತುರ್ವಿಧದನುವನು, ಗುಹೇಶ್ವರಲಿಂಗದನುವನು ವೇಷಧಾರಿಗಳೆತ್ತ ಬಲ್ಲರು ಬಸವಣ್ಣನೊಬ್ಬನೆ ಬಲ್ಲನಲ್ಲದೆ.
--------------
ಅಲ್ಲಮಪ್ರಭುದೇವರು
ಆದಿಶಕ್ತಿವಿಡಿದಾಡುವರೆಲ್ಲರು ಜಂಗಮವಲ್ಲ, ಅನಾದಿಶಕ್ತಿವಿಡಿದಾಡುವರೆಲ್ಲರು ಜ್ಞಾನಿಗಳಲ್ಲ, ಆದಿ ಅನಾದಿಯೆಂಬೀ ಎರಡ ಭೇದಿಸಿ ದಾಂಟಿ, ಇಚ್ಛಾಶಕ್ತಿಯ ಇಚ್ಛೆಯ ಮರೆದು, ಕ್ರಿಯಾಶಕ್ತಿಯ ಭಾವವ ಬಿಟ್ಟು, ಜ್ಞಾನಶಕ್ತಿಯ ಠಾವವನೊಲ್ಲದೆ, ತಾನು ತಾನಾದವಂಗೆ ಏನೂ ಇದಿರಿಲ್ಲಾ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇತ(ದಿ?)ರ ಭ್ರಮಿತನು ಭಕ್ತನಲ್ಲ, ಲೋಕೋಪಚಾರಿ ಜಂಗಮವಲ್ಲ. ಹೇಳಿಹೆನು ಕೇಳಿರಣ್ಣಾ: ಜಂಗಮ ಪ್ರೇಮಿಯಾದರೆ ಭಸಿತ ರುದ್ರಾಕ್ಷೆ ಸಹ ಶಿವಸ್ವರೂಪ ಕಾಣುತ್ತ, ನಮಸ್ಕರಿಸಿ ಬಿಜಯಂ ಮಾಡಿಕೊಂಡು ಬಂದು ಮನಹರುಷದಲ್ಲಿ ಭೋಜನವ ಮಾಡಿಸೂದೀಗ ಭಕ್ತಂಗೆ ಲಕ್ಷಣ. ಕಾಡೊಳಗಿರಲಿ ಊರೊಳಗಿರಲಿ ಮಠದಲ್ಲಿರಲಿ ಮನೆಯಲ್ಲಿರಲಿ ಲಿಂಗವಂತರು ಕರೆಯಬಂದರೆ, ಹೋಗಬೇಕೆಂಬ ಅಭಿಲಾಷೆಯುಳ್ಳಡೆ, ತಾನಿದ್ದಲ್ಲಿ ತಾ ಮಾಡುವಂಥ ಅಷ್ಟವಿಧಾರ್ಚನೆ ಷೋಡಶೋಪಚಾರ ಲಿಂಗಕ್ರಿಯೆಗಳು ನಿತ್ಯನೇಮವು ಆದ ಬಳಿಕ ಮತ್ತೆ ತಾ ಹೋಗಿ ತನ್ನ ಗುಂಪ ತೋರದೆ, ಭಕ್ತರಾಶ್ರಯದಲ್ಲಿ ಭೋಜನವ ಮಾಡುವುದೀಗ ಜಂಗಮಕ್ಕೆ ಲಕ್ಷಣ. ಅಂತಲ್ಲದೆ ಗ್ರಹಸ್ಥಾಶ್ರಮದಲ್ಲಿ ಕ್ರಿಯೆ ಮಾಡಿದರೆ ಜಂಗಮಕ್ಕೆ ಹೇಳುವ ಅರಿವು ಕೊರಮಜೀವಿಯಂತಾಯಿತ್ತಾಗಿ_ ಇದು ಕಾರಣ ಲೋಕೋಪಚಾರಿಗಳಾಗಿ ಒಡಲ ಹೊರೆವವರ ನಮ್ಮ ಗುಹೇಶ್ವರಲಿಂಗವು ಬಲ್ಲನಾಗಿ ಅವರ ಒಲ್ಲನಯ್ಯಾ.
--------------
ಅಲ್ಲಮಪ್ರಭುದೇವರು
ಅಯ್ಯ, ಮಣ್ಣಿಂಗೆ ಹೊಡೆದಾಡುವಾತನ ಗುರುವೆಂಬೆನೆ? ಆತ ಗುರುವಲ್ಲ. ಹೆಣ್ಣಿಂಗೆ ಹೊಡೆದಾಡುವಂತಾ [ಗೆ?]À ಲಿಂಗವೆಂಬೆನೆ ? ಅದು ಲಿಂಗವಲ್ಲ. ಹೊನ್ನಿಂಗೆ ಹೊಡೆದಾಡುವಾತನ ಜಂಗಮವೆಂಬೆನೆ ? ಆತ ಜಂಗಮವಲ್ಲ. ಈ ತ್ರಿವಿಧಮಲಕ್ಕೆ ಹೊಡೆದಾಡುವಾತನ ಶರಣನೆಂಬೆನೆ ? ಆತ ಶರಣನಲ್ಲ ನೋಡಾ. ಈ ವಿಚಾರವನರಿದು, ಮಲತ್ರಯಂಗಳ ಸರ್ವಾವಸ್ಥೆಯಲ್ಲಿ ಹೊದ್ದಲೀಯದೆ ಗೌರವ ಬುದ್ಧಿ ಲಿಂಗಲೀಯ ಜಂಗಮಾನುಭಾವ ಸರ್ವಾಚಾರಸಂಪತ್ತಿನಾಚರಣೆಯ ಶ್ರುತಿ_ಗುರು_ಸ್ವಾನುಭಾವದಿಂದರಿದು ಆಚರಿಸಿದಡೆ, ಗುಹೇಶ್ವರಲಿಂಗದಲ್ಲಿ ಪರಾತ್ಪರಗುರುಲಿಂಗಜಂಗಮಶರಣನೆಂಬೆ ನೋಡ ಜೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಸೋಮವಾರ ಮಂಗಳವಾರ ಹುಣ್ಣಿಮೆ ಸಂಕ್ರಾಂತಿ ಶಿವರಾತ್ರಿ_ ಮೊದಲಾದ ತಿಥಿವಾರಂಗಳಲ್ಲಿ ಏಕಭುಕ್ತೋಪವಾಸಿಯಾಗಿ ಆ ಕ್ಷುದ್ರ ತಿಥಿಗಳಲ್ಲಿ, ಮಾಡಿದ ನೀಚೋಚ್ಛಿಷ್ಟವಂ ತಂದು ತನ್ನ ಕರಸ್ಥಲದ ಇಷ್ಟಲಿಂಗಕ್ಕೆ ಕೊಟ್ಟು ಕೊಂಡು ಭಕ್ತನೆನಿಸಿಕೊಂಡೆನೆಂಬ ಅನಾಚಾರಿಯ ಮುಖವ ನೋಡಲಾಗದು ನೋಡಲಾಗದು. ಅದೇನು ಕಾರಣವೆಂದಡೆ: ದಿನ ಶ್ರೇಷ್ಠವೊ ? ಲಿಂಗ ಶ್ರೇಷ್ಠವೊ ? ದಿನ ಶ್ರೇಷ್ಠವೆಂದು ಮಾಡುವ ದುರಾಚಾರಿಯ ಮುಖವ ನೋಡಲಾಗದು, ನೋಡಲಾಗದು, ಅದೆಂತೆಂದಡೆ: ಆವ ದಿನ ಶ್ರೇಷ್ಠವೆಂದು ದಿನವೆ ದೈವವೆಂದು ಮಾಡುವನಾಗಿ, ಅವನು ದಿನದ ಭಕ್ತನು. ಅವನಂತಲ್ಲ ಕೇಳಿರಣ್ಣ ಸದ್ಭಕ್ತನು_ಲಿಂಗವೆ ಘನವೆಂದು ಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ದೈವವೆಂದು ಮಾಡುವನಾಗಿ ಆತ ಲಿಂಗಭಕ್ತನು. ಈ ಲಿಂಗಭಕ್ತಂಗೆ ದಿನದ ಭಕ್ತನ ತಂದು ಸರಿಯೆಂದು ಹೋಲಿಸಿ ನುಡಿವಂಗೆ, ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ, ಅವ ಭಕ್ತನಲ್ಲ, ಅವಂಗೆ ಅಘೋರನರಕ. ಭವಿದಿನ_ತಿಥಿ_ವಾರಂಗಳಲ್ಲಿ ಕೂರ್ತುಮಾಡುವಾತ ಭಕ್ತನಲ್ಲ. ಅಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮವಲ್ಲ. ಈ ಉಭಯರನು ಕೂಡಲಚೆನ್ನಸಂಗಯ್ಯ ಕುಂಭೀಪಾತಕ ನಾಯಕನರಕದಲ್ಲಿಕ್ಕುವನು
--------------
ಚನ್ನಬಸವಣ್ಣ
ಹಂದಿ ಹೈನವಲ್ಲ! ಸಂಸಾರಿ ಜಂಗಮವಲ್ಲ ಸಂಸಾರಿ ಜ್ಞಾನಿಗೂ ನಿರಾಭಾರಿ ಹೆಡ್ಡತನಕ್ಕೂ ಸರಿಯೆನ್ನಬಹುದೆ? ಸಿಮ್ಮಲಿಗೆಯ ಚೆನ್ನರಾಮಾ!
--------------
ಚಂದಿಮರಸ
ಅಯ್ಯಾ, ಇಹಪರಂಗಳಂ ಗೆಲಿದ ಭಕ್ತ ಜಂಗಮಕ್ಕೆ, ಸದಾಚಾರವೆ ವಸ್ತು ನೋಡಾ. ಸದಾಚಾರವನರಿಯದ ಪಾಪಿ, ಸೂಕರನಿಂದ ಕಷ್ಟ ನೋಡಾ. ಭಕ್ತ ಜಂಗಮಕ್ಕೆ ಸದಾಚಾರವೇ ಬೇಕು. ಸದಾಚಾರವಿಲ್ಲದವಂಗೆ ಭವವುಂಟು. ಭವವುಂಟಾದವಂಗೆ ಆಚಾರವಿಲ್ಲ. ಆಚಾರವಿಲ್ಲದವ ಭಕ್ತನಲ್ಲ, ಜಂಗಮವಲ್ಲ ಕಾಣಾ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಕ್ರೀಯಿಂದಾದುದು ಲಿಂಗವೆಂದೆಂಬರು, ಕ್ರೀಯಿಂದಾದುದು ಜಂಗಮವೆಂದೆಂಬರು. ಕ್ರೀಯಿಂದಾದುದು ಲಿಂಗವಲ್ಲ, ಜಂಗಮವಲ್ಲ, ಜಂಗಮವುಂಟು ಜಂಗಮವಲ್ಲ. ಜಂಗಮ ಸುನಾದರೂಪು, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಸಿ ಮಸಿ ಕೃಷಿ ವಾಣಿಜ್ಯ ಗೋಪಾಲ ಯಾಚನ ಷಟ್‍ಕೃಷಿವ್ಯಾಪಾರವ ಮಾಡುವಾತ ಜಂಗಮವಲ್ಲ. ಆ ಜಂಗಮದ ಪಾದೋದಕ ಪ್ರಸಾದವ ಕೊಂಬ ಪಂಚಮಹಾಪಾತಕರ ಅಂಗಳವ ಮೆಟ್ಟಿದಡೆ, ಸಂಗದಲ್ಲಿ ನುಡಿದಂತೆ, ಕುಂಬ್ಥಿನಿಪಾತಕ. ಅವರನು ಹಿಂಗದಿರ್ದಡೆ ಲಿಂಗವಿಲ್ಲ, ಜಂಗಮವಿಲ್ಲ ಪಂಚಾಚಾರಕ್ಕೆ ಹೊರಗು. ಮಾಟಕೂಟದವರೆಲ್ಲ ಜಗದಾಟದ ಡೊಂಬರೆಂಬೆ. ಈಶನಾಣೆ ತಪ್ಪದು, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಕಂಥೆ ತೊಟ್ಟವ ಗುರುವಲ್ಲ, ಕಾವಿ ಹೊತ್ತವ ಜಂಗಮವಲ್ಲ, ಶೀಲ ಕಟ್ಟಿದವ ಶಿವಭಕ್ತನಲ್ಲ, ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ. ಹೌದೆಂಬವನ ಬಾಯ ಮೇಲೆ ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಗತಿಪದಮುಕ್ತಿಯ ಬಯಸಿ ಮಾಡುವಾತ ಭಕ್ತನಲ್ಲ, ಜೀವನೋಪಾಯಕ್ಕೆ ಬೇಡುವಾತ ಜಂಗಮವಲ್ಲ. ಗತಿಪದ ಮುಕ್ತಿಸೂತಕವಿರಹಿತ ಭಕ್ತ, ಹಮ್ಮು ಬಿಮ್ಮು ಗಮನನಾಸ್ತಿ ಜಂಗಮ. ಮಾಡುವಡೆ ಭಕ್ತ ಮಾಟದೊಳಗಿಲ್ಲದಿರಬೇಕು, ಬೇಡುವಡೆ ಜಂಗಮ ಕೊಂಬುದರೊಳಗಿಲ್ಲದಿರಬೇಕು. ಪ್ರಾಣವಿಲ್ಲದ ಭಕ್ತ ರೂಹಿಲ್ಲದ ಜಂಗಮ, ಉಭಯಕುಳ ಸಂದಳಿದಂದು ಕೂಡಲಚೆನ್ನಸಂಗನಲ್ಲಿ ಭಕ್ತಜಂಗಮವೆಂಬೆ
--------------
ಚನ್ನಬಸವಣ್ಣ
ನಾನಾ ಯೋನಿಯಲ್ಲಿ ತಿರುಗಿ ಬಂದನಾಗಿ ಗುರುವಲ್ಲ. ನಾನಾ ಶಿಲೆಯಲ್ಲಿ ರೂಹಿಟ್ಟು ಬಂದುದಾಗಿ ಲಿಂಗವಲ್ಲ. ನಾನಾ ಯಾಚಕ ವಿಕಾರದಿಂದ ತಿರುಗುವನಾಗಿ ಜಂಗಮವಲ್ಲ. ಜನನರಹಿತ ಗುರು, ಅವತಾರರಹಿತ ಲಿಂಗ, ಮರಣರಹಿತ ಜಂಗಮ. ಹೀಗಲ್ಲದೆ ತ್ರಿವಿಧವ ಕಳೆಯಬಾರದು. ತ್ರಿವಿಧಕ್ಕೆ ತ್ರಿವಿಧವನಿತ್ತು, ಗುರುವಿನ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಲಿಂಗದ ಹಂಗ ಮರೆಯಬೇಕು. ತ್ರಿವಿಧಕ್ಕೆ ತ್ರಿವಿಧವನಿತ್ತು, ಜಂಗಮದ ಹಂಗ ಮರೆಯಬೇಕು. ಮೂರರೊಳಗಾದ ಆರು ಕೊಟ್ಟು, ಐದನಿರಿಸಿಕೊಂಡು, ಇಪ್ಪತ್ತೈದರ ಲೆಕ್ಕದಲ್ಲಿರಿಸಿ, ಐವತ್ತೊಂದು ಬಿಂದುವಿನಲ್ಲಿ ಹೊಂದಿಸಿ, ಓಂಕಾರವಪ್ಪ ಪ್ರಣಮವ ಪರಿಣಾಮಿಸಿ, ವ್ಯಾಪಾರದ ಲತೆಯ ಬಳ್ಳಿಯ ಬೇರ ಕಿತ್ತು, ಪರ್ವಿ ಪ್ರಕಾರದಿಂದ ಉರ್ವಿಯ ಸುತ್ತಿಮುತ್ತಿ ಬೆಳೆದ ಚಿತ್ತಬಿದಿರಿನ ನಡುವಿದ್ದ ಹುತ್ತದ ಬಹುಮುಖದ ಸರ್ಪನ ಹಿಡಿದು, ಕಾಳೋರಗನಂ ಬೇರು ಮಾಡಿ, ಲೀಲೆಗೆ ಹೊರಗಾಗಿ ಭಾಳಲೋಚನನಂ ಕೀಳುಮಾಡಿ, ಬಾಲೆಯರ ಬಣ್ಣಕ್ಕೆ ಸೋಲದೆ, ಕಾಳುಶರೀರವೆಂಬ ಒತ್ತರಂಗೊಳ್ಳದೆ, ಗತಿ ಮತಿ ಗುಣ ಸಂಸರ್ಗ ವಿಪಿನ ಕಂಟಕಕ್ಕೊಳಗಾಗದೆ, ಪಿಂಡಪ್ರಾಣದ ವಾಯುಸಂಚಾರಕ್ಕೀಡುಮಾಡದೆ, ಅರಿದೆನೆಂಬುದಕ್ಕೆ ಕುರುಹಿಲ್ಲದೆ, ಕುರುಹಿಗೆ ಅವಧಿಗೊಡಲಿಲ್ಲದೆ, ಹುಸಿ ಮಸಿಯ ಮಣಿಮಾಡದಲ್ಲಿ ಒರಗದೆ, ಪರಿಣಾಮವೇ ಪಥ್ಯವಾಗಿ, ಅಂತರಂಗಶುದ್ಧಿ ಪರಿಪೂರ್ಣವಾಗಿ ನಿಂದು, ಸಂಸಾರಕ್ಕೆ ಸಿಕ್ಕದೆ, ನಿಂದ ನಿಜ ತಾನಾಗಿ ಲಿಂಗೈಕ್ಯವು. ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗದಲ್ಲಿ ನಿರ್ಲೇಪವಾ[ದುದೇ] ಶರಣಸ್ಥಲ.
--------------
ಮೋಳಿಗೆ ಮಾರಯ್ಯ
ಉಪಾಧಿ ಉಳ್ಳನ್ನಕ್ಕ ಗುರುವಲ್ಲ, ವೇಷವ ಹೊತ್ತು ಬಾಗಿಲ ಕಾಯುವನ್ನಕ್ಕ ಜಂಗಮವಲ್ಲ, ಶಕ್ತಿಸಮೇತವುಳ್ಳನ್ನಕ್ಕ ಲಿಂಗವಸ್ತುವಲ್ಲ. ಅದೆಂತೆಂದಡೆ: ಏತರಲ್ಲಿದ್ದಡೂ ಅಹಿಶರೀರವ ಬಲಿದು ತದ್ರೂಪ ಹಾಕಿದಂತಿರಬೇಕು. ಇದು ಅರಿವಿನ ಒಡಲು, ಸದಾಶಿವಮೂರ್ತಿಲಿಂಗದ ಇರವು.
--------------
ಅರಿವಿನ ಮಾರಿತಂದೆ
ಲಿಂಗವ ಕಟ್ಟಿ ಸುಳಿವಾತ ಜಂಗಮವಲ್ಲ, ಆ ಜಂಗಮಕ್ಕೆ ಮಾಡುವಾತ ಭಕ್ತನಲ್ಲ. ಉಭಯ ಕುಳವಳಿದಾತ ಜಂಗಮ. ಆ ಜಂಗಮಕ್ಕೆ ಮಾಡುವರೆ ಭಕ್ತ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಉಭಯಕುಳವಳಿದ ಭಕ್ತಜಂಗಮವಪೂರ್ವ.
--------------
ಚನ್ನಬಸವಣ್ಣ
ಭಕ್ತನಾಧೀನವಾಗಿ ಭಕ್ತಿಯ ಬೇಡ ಬಂದವನಲ್ಲ. ಮುಕ್ತಿಯಾಧೀನವಾಗಿ ಮುಕ್ತಿಯ ಬೇಡಬಂದವನಲ್ಲ. ಅಶನಾತುರನಾಗಿ ವಿಷಯವ ಬಯಸಿ ಬಂದವನಲ್ಲ. ಗುಹೇಶ್ವರನ ಶರಣ ಸಂಗನಬಸವಣ್ಣ ಮಾಡುವ ಭಕ್ತನಲ್ಲಾಗಿ, ನಾನು ಬೇಡುವ ಜಂಗಮವಲ್ಲ, ಕಾಣಾ, ಚೆನ್ನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->