ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂದಚಂದದ ಬಣ್ಣವ ಹೊದ್ದು, ಹರನ ಶರಣರೆಂಬ ಅಣ್ಣಗಳೆಲ್ಲರು ಕರಣಂಗಳೆಂಬ ಉರವಣೆಯ ಅಂಬಿಗಾರದೆ, ಭಕ್ತಿಯೆಂಬ ಹರಿಗೆಯ ಹಿಡಿದು, ಮುಕ್ತಿಯೆಂಬ ಗ್ರಾಮವ ಮುತ್ತಿ ಕಾದಿ, ಸತ್ತರೆಲ್ಲರು ರುದ್ರನ ಶೂಲದ ಘಾಯದಲ್ಲಿ. ಎನಗೆ ಹೊದ್ದಿಗೆ ಯಾವುದೋ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಅಂಗದ ಮೇಲೆ ಶಿವಲಿಂಗ ನೆಲಸುವಂಗೆ ಮೂರುಸ್ಥಲವಾಗಬೇಕು. ಅವಾವವಯ್ಯಾಯೆಂದಡೆ: ಗುರುಲಿಂಗಜಂಗಮದಲ್ಲಿ ಭಕ್ತಿ. ಅರಿವ ಸಾದ್ಥಿಸುವಲ್ಲಿ ಜ್ಞಾನ. ಕರಣಾದಿಗಳ ಭಂಗ ವೈರಾಗ್ಯ. ಇನಿತಿಲ್ಲದೆ ಲಿಂಗವ ಪೂಜಿಸಿಹೆನೆಂಬ, ಲಿಂಗವ ಧರಿಸಿಹೆನೆಂಬ ಲಜ್ಜೆಭಂಡರ ಕಂಡು, ನಾ ನಾಚಿದೆನಯ್ಯಾ. ಇದು ಕಾರಣ ಗದ್ದುಗೆಗೆಟ್ಟು ಎದ್ದಾತನು ಲಿಂಗವಲ್ಲ ಕಾಣಾ. ಲಿಂಗ ಸತ್ತ, ನಾ ಕೆಟ್ಟೆ, ರಂಡೆಗೂಳೆನಿಸಲಾರೆ. ಎನ್ನ ಹತ್ಯವ ಮಾಡಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಯ್ಯಾ, ನಿಮ್ಮಾದ್ಯರ ವಚನವ ಕೇಳಿ, ಎನ್ನ ಅಂಗಭಂಗ ಹಿಂಗಿದವಯ್ಯಾ. ಅಯ್ಯಾ, ನಿಮ್ಮಾದ್ಯರ ವಚನ ಕೇಳಿ, ಪ್ರಸಾದದ ಪರುಷವ ಕಂಡೆನಯ್ಯಾ. ಆ ಪರುಷದ ಮೇಲೆ ಮೂರುಜ್ಯೋತಿಯ ಕಂಡೆನಯ್ಯಾ. ಒಂದು ಜ್ಯೋತಿ ಕೆಂಪು ವರ್ಣ, ಒಂದು ಜ್ಯೋತಿ ಹಳದಿ ವರ್ಣ, ಒಂದು ಜ್ಯೋತಿ ಬಿಳಿಯ ವರ್ಣ. ಈ ಮೂರು ಜ್ಯೋತಿಯ ಬೆಳಗಿನಲ್ಲಿ, ಒಂಬತ್ತು ರತ್ನವ ಕಂಡೆನಯ್ಯಾ. ಆ ಒಂಬತ್ತು ರತ್ನದ ಮೇಲೊಂದು ವಜ್ರವ ಕಂಡೆನಯ್ಯಾ. ಆ ವಜ್ರದ ಮೇಲೊಂದು ಅಮೃತದ ಕೊಡನ ಕಂಡೆನಯ್ಯಾ. ಆ ಕೊಡನ ಕಂಡವನೆ ಉಂಡ, ಉಂಡವನೆ ಉರಿದ, ಉರಿದವನೆ ಕರಿದ, ಕರಿದವನೆ ನೆರೆದ, ನೆರೆದವನೆ ಕುರುಹನರಿದಾತ, ನಿಮ್ಮನರಿದಾತ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅದ್ವೈತವ ಹೇಳುವ ಹಿರಿಯರೆಲ್ಲರೂ ದ್ವೈತಕ್ಕೊಳಗಾದರು. ನಿಸ್ಸಂಸಾರವ ಹೇಳುವ ಹಿರಿಯರೆಲ್ಲರೂ ಸಂಸಾರದ ಸಾರವ ಚಪ್ಪಿರಿದು ಕೆಟ್ಟರು. ಭಕ್ತರಿಗೆ ನಿತ್ಯವಲ್ಲೆಂದು ಹೇಳಿ, ತಾವು ಅನಿತ್ಯವ ಹಿಡಿದು, ಪಾಶಕ್ಕೆ ಸಿಕ್ಕಿ ಸತ್ತುದನರಿಯದೆ, ನಾವು ಮುಕ್ತರಾದೆವೆಂಬ ಭ್ರಷ್ಟರ ನೋಡಾ. ನನಗಿನ್ನೆತ್ತಣ ಮುಕ್ತಿ ಎಂದಂಜಿದೆ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಅರಿವ ಮನ ಏಕವಾಗಿಯಲ್ಲದೆ, ವಸ್ತುವನೊಡಗೂಡಬಾರದು. ಹುರಿ ರಜ್ಜು ಒಂದೆ ಗಡಣದಲ್ಲಿಯಲ್ಲದೆ ಎಡಬಲಕ್ಕಿಲ್ಲ.
--------------
ಮೋಳಿಗೆ ಮಾರಯ್ಯ
ಅರಿದ ಶರಣಂಗೆ ಅಡಗುವ ಠಾವುಂಟೆ ? ಅಡಗಿದ ಮತ್ತೆ ಬಿಡಬೇಕು [ಆದಿ]ಯ ಮೆಟ್ಟುವ ಜಡರ ಸಂಸರ್ಗ ಬಿಡವು ಸರಿ. ಇಂತೀ ದೃಢಚಿತ್ತಂಗೆ ಕಡೆ ನಡು ಮೊದಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗಸ್ಥಲ ಮೂರು, ಲಿಂಗಸ್ಥಲ ಮೂರು, ಜ್ಞಾನಸ್ಥಲ ಮೂರೆಂಬಲ್ಲಿ, ಆತ್ಮ ಹಲವು ರೂಪಾಗಿ ತೊಳಲುತ್ತಿದೆ ನೋಡಾ. ಅಂಗಸ್ಥಲದ ಲಿಂಗ, ಲಿಂಗಸ್ಥಲದ ಜ್ಞಾನ, ಜ್ಞಾನಸ್ಥಲದ ಸರ್ವಚೇತನಾದಿಗಳೆಲ್ಲ ಎಯ್ದುವ ಪರಿಯೆಂತು? ಎಯ್ದಿಸಿಕೊಂಬುವನಾರೆಂದು ನಾನರಿಯೆ. ಹಿನ್ನಿಗೆ ದಯವಾದಡೆ ಹರಿವುದಲ್ಲದೆ ಮುಮ್ಮೊನೆಗುಂಟೆ ಉಭಯ? ಪೂರ್ವಕ್ಕೆರಡು, ಉತ್ತರಕ್ಕೆ ಒಂದೆಂದಲ್ಲಿ, ನಿಶ್ಚಯವ ತಿಳಿಯಬೇಕು, ನಿ:ಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಪ್ಪು ಬೆರಸಿದ ಕಟ್ಟಿಗೆಯ ಕಿಚ್ಚಿನಲ್ಲಿಕ್ಕಿದಡೆ, ಅದು ಚಿತ್ತಶುದ್ಧವಾಗಿ ಹೊತ್ತಬಲ್ಲುದೆ, ತಟ್ಟಾರಿದ ಕಾಷ್ಠದಂತೆ ? ಇಂತೀ ಅರ್ತಿಕಾರರಿಗೆ ಸಿಕ್ಕುವನೆ ನಿಜವಸ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅರಿದು ಮಾಡುವ ಮಾಟ ಮರವೆಗೆ ಬೀಜವೆಂದೆ. ಅದಕ್ಕೆ ಮರೆದರಿವು ತಪ್ಪದು. [ಆ] ಅರಿವಿನ ಭೇದ ಎತ್ತಿದ ದೀಪದ ಬೆಳಗಿನಂತೆ. ಅರಿದು ಮರೆಯದೆ, [ಮರೆದು ಅರಿಯದೆ] ಇಂತೀ ಅರಿಕೆಯಲ್ಲಿ ಮಾಡುವವನ ಅರಿವು, ಹೊತ್ತ ದೀಪದ ನಿಶ್ಚಯದಂತೆ. ನಿಃಕಳಂಕ ಮಲ್ಲಿಕಾರ್ಜುನನಲ್ಲಿ, ಚನ್ನಬಸವಣ್ಣಂಗೆ ನಮೋ ನಮೋ ಎನುತಿರ್ದೆನು.
--------------
ಮೋಳಿಗೆ ಮಾರಯ್ಯ
ಅಂಗದ ಕಳವು ಕೈಯಲ್ಲಿದ್ದಂತೆ ಹಿಂಗುವದಕ್ಕೆ ನಾಲಿಗೆಯೇಕೊ? ಪರರಂಗವನರಿದು ಹೆರರಂಗದಲ್ಲಿ ಸಿಲ್ಕಿ ಭಂಗಿತನಾಗಲೇಕೊ? ನದಿಯೊಳಗೆ ಮುಳುಗಿ ತನ್ನೊಡವೆಯ ಸುದ್ಧಿ ಯಾಕೊ? ಅದರ ವಿದ್ಥಿ ನಿಮಗಾಯಿತ್ತು, ಬಿಡು ಕಡುಗಲಿತನವ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಸಿ ಮಸಿ ಕೃಷಿ ವಾಣಿಜ್ಯ ಗೋಪಾಲ ಯಾಚನ ಷಟ್‍ಕೃಷಿವ್ಯಾಪಾರವ ಮಾಡುವಾತ ಜಂಗಮವಲ್ಲ. ಆ ಜಂಗಮದ ಪಾದೋದಕ ಪ್ರಸಾದವ ಕೊಂಬ ಪಂಚಮಹಾಪಾತಕರ ಅಂಗಳವ ಮೆಟ್ಟಿದಡೆ, ಸಂಗದಲ್ಲಿ ನುಡಿದಂತೆ, ಕುಂಬ್ಥಿನಿಪಾತಕ. ಅವರನು ಹಿಂಗದಿರ್ದಡೆ ಲಿಂಗವಿಲ್ಲ, ಜಂಗಮವಿಲ್ಲ ಪಂಚಾಚಾರಕ್ಕೆ ಹೊರಗು. ಮಾಟಕೂಟದವರೆಲ್ಲ ಜಗದಾಟದ ಡೊಂಬರೆಂಬೆ. ಈಶನಾಣೆ ತಪ್ಪದು, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಅಚ್ಚಿನಲ್ಲಿ ಬೆಟ್ಟದ ರೂಹು ದೃಷ್ಟವಾಯಿತ್ತು. ಮನಮಚ್ಚಿ ಕೊಟ್ಟ ಲಿಂಗ, ಹೃತ್ಕಮಲದಲ್ಲಿ ಮುಟ್ಟಿದುದಿಲ್ಲ. ತಾ ದೃಷ್ಟಿತನಾದಲ್ಲದೆ ಇದಿರಿಂಗಿಷ್ಟವ ಕಟ್ಟಬಾರದು. ಕಟ್ಟಿಕೊಂಡು ಮತ್ತೆ ಗುರಿಯನೆಚ್ಚ ಕೈಯ [ಲಾ]ಹರಿಯಂತಿಬೇಕು. ರಣವ ಗೆಲಿದ ದ್ಥೀರನ ಉದಾರದಂತಿರಬೇಕು. ಹೀಂಗಲ್ಲದೆ ಗುರುಸಂಬಂಧವೆಲ್ಲ ಮಡಕೆಯ ಮರೆಯ ಕ್ಷೀರದಂತೆ ಕೈಗುಡಿತೆಗೆ ಬಂದುದಿಲ್ಲ, ಈ ಗುರುಸ್ಥಲವೆಂದಡಕವೇಕೆ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಅಂಧಕ ಪಂಗುಳನಾದ, ಪಂಗುಳ ಅಂಧಕನಾದ. ಈ ಉಭಯದ ಬೆಂಬಳಿಯನರಿಯಬೇಕು. ಮಂಜರಿ ವಿಹಂಗನ ಕೊಂದು ಉಭಯವನರಿಯಬೇಕು. ಪರಮ ಜೀವನದೊಳಗಡಗಿ ಪರಮನಾದ ಉಭಯವ ತಿಳಿಯಬೇಕು. ಬೆಂಕಿ ಮರದೊಳಗಿದ್ದು, ಮಥನದಿಂದ ಮರ ಸುಟ್ಟು, ಮರ ಬೆಂಕಿಯಾದ ತೆರನನರಿತಡೆ ಪ್ರಾಣಲಿಂಗಸಂಬಂದ್ಥಿ. ಪ್ರಾಣಲಿಂಗವೆಂಬುಭಯ ಸಮಯ ನಿಂದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಹುದಹುದು, ಮಹಾಂತಿನ ಮನ ಎಲ್ಲರಿಗೆಲ್ಲಿಯದೊ? ಆ ಚಿದ್ರೂಪ ಚಿನ್ಮಯನ ಅನುವನರಿಯದೆ, ಮಹಾಂತಿನ ಕೂಡಲಸಂಗದೇವರೆಂಬ ಮೂಕೊರೆಯರನೇನೆಂಬೆಯ್ಯಾ? ಹಾಗದಾಸೆಗೆ ಶಿಲೆಯ ಮಾರುವ ಕಲ್ಲುಕಟಿಗರ, ದಾಯಾದ್ಯರ, ಮಹಾಂತಿನ ಕೂಡಲದೇವರೆನಬಹುದೆ? ವೀರಶೈವದ ನಿರ್ಣಯವ ತಿಳಿಯರು. ಭಕ್ತಿ ಜ್ಞಾನ ವೈರಾಗ್ಯದ ಆಚಾರದ ಅನುಭಾವದ ಅನುವನರಿಯರು. ಅರುಸ್ಥಲದಂತಸ್ಥವನರಿಯರು. ಮೂರುಸ್ಥಲದ ಮೂಲವ ಮುನ್ನವರಿಯರು. ಭಕ್ತಿಗೆ ಆರಕ್ಷರದ ಆದ್ಯಂತವನರಿಯದ ಮಂದಮತಿಗಳ ಮಹಾಂತಿನ ಕೂಡಲದೇವರೆಂದು ನುಡಿವ ನರಕಿಜೀವಿಗಳ ಮುಖವ ನೋಡಲಾಗದಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಯ್ಯಾ ಎನ್ನ ಕೇಡು ನಿನಗಲ್ಲದೆ ಎನಗೊಂದಿಲ್ಲ. ಕಾಳಗದಲ್ಲಿ ಪೌಜನಿಕ್ಕಿ ಮುರಿದಲ್ಲಿ, ಅರಸೆಂಬರಲ್ಲದೆ ಬಂಟರೆಂಬುದಿಲ್ಲ. ಅದರೊಚ್ಚೆಯವಾರಿಗೆಂಬುದನರಿ. ನಾ ನಿಮಗೆ ಕೊರತೆಯ ತರಬಾರದೆಂಬುದಕ್ಕೆ ನಿಮಗೆ ಹೇಳಿಹೆನಲ್ಲದೆ, ಕೊಟ್ಟ ಜೀವಿತಕ್ಕೆ ಓಲೈಸುವಂಗೆ ರಾಜ್ಯದ ಕಟ್ಟೇಕೆ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಅನುವನರಿವನ್ನಕ್ಕ ಅರ್ಚನೆ ಬೇಕು. ಪುಣ್ಯವನರಿವನ್ನಕ್ಕ ಪೂಜೆ ಬೇಕು. ನಾ ನೀನೆಂಬುದನರಿವನ್ನಕ್ಕ ಎಲ್ಲಾ ನೇಮವ ಭಾವಿಸಬೇಕು. ಕಾಲಕರ್ಮಜ್ಞಾನಭಾವ ತಾನುಳ್ಳನ್ನಕ್ಕ ಭಾವಿಸಬೇಕು. ತನ್ನನರಿದು ವಸ್ತುವ ಕುರಿತು ನಿಂದ ಮತ್ತೆ ಬತ್ತಲೆ ಹೋಹವಂಗೆತ್ತಲೂ ಭಯವಿಲ್ಲ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಜ ಗಳದಲ್ಲಿ ಬಿಡುಮೊಲೆಯಿದ್ದಡೆ ಅದು ಗಡಿಗೆಗೇಡು. ದೃಢವೆನಗಿಲ್ಲದಲ್ಲಿ ಒಡಗೂಡುವುದಕ್ಕೆಡಹೆ ? ತುಡುಗುಣಿಯಲ್ಲಿ ಮೀಸಲುಂಟೆ ? ಅಡಿಯನರಿಯದವಂಗೆ ದೃಢಭಕ್ತಿಯುಂಟೆ ? ಇಂತಿವರೊಡಗೂಡುವ ಗುರುಶಿಷ್ಯನ ಇರವು, ಪರಿಭ್ರಮಣ ಬಂದು ಶರೀರವನೊಡಗೂಡಿದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಜ ಅರ್ಕನ ಕೊಂಬಿನಲ್ಲಿ ನಿಂದು, ಭಜನೆವಂತರ ಕಂಡು, ತ್ರಿಜಗವೆಲ್ಲ ತಾನೆಂದು ಗಜಬಜೆಯಲ್ಲಿ ಅಡಗಿತ್ತು, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ.
--------------
ಮೋಳಿಗೆ ಮಾರಯ್ಯ
ಅ[ಜಾ]ಮಲ ಲಿಂಗವಾದಲ್ಲಿ, ಲೆಕ್ಕದ ಬುಡ ನಿಶ್ಚಯಲಿಂಗವಾದಲ್ಲಿ ಮತ್ತೆ ಕಾಷ*ದ ವೇಷ ಗುರುಚರ[ಲಿಂಗ]ವಾದಲ್ಲಿ, ಎನ್ನ ಕಾಯಕದ ಕಾಷ* ಚಿನ್ನವಾದಲ್ಲಿ, ಮತ್ತಾವಾವ ಗುಣ ಅವಗುಣ ಹಿಂಗಿ ಲೇಸಾದಲ್ಲಿ, ಅದು ತನ್ನಯ ವಿಶ್ವಾಸದಿಂದ, ತನಗೆ ಆರೆಂಬುದನರಿತು, ಕುರಿತು ಆ ಭಾವಕ್ಕೆ ಬಲೋತ್ತ[ರ]ನಾಗಿದ್ದಾತನ ಇರವು, ಎಂತಿದ್ದಡಂತೆ ಸುಖ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಗಭವಿ, ಭಕ್ತಂಗೆ ಮನಭವಿ ಮಹೇಶ್ವರಂಗೆ. ರುಚಿಭವಿ ಪ್ರಸಾದಿಗೆ, ಕುರುಹುಭವಿ ಪ್ರಾಣಲಿಂಗಿಗೆ. ತ್ರಿವಿಧನಾಮಭವಿ ಶರಣಂಗೆ, ಕೂಟಸ್ಥಭವಿ ಐಕ್ಕಂಗೆ. ಇಂತೀ ಸ್ಥಲಂಗಳಲ್ಲಿ, ಕುರುಹ ಕುರುಹಿನಲ್ಲಿ ಕಂಡು, ಅರಿವ ಅರಿವಿನಲ್ಲಿ ತಿಳಿದು, ಐಕ್ಯ ಐಕ್ಯನಾದ ಮತ್ತೆ, ಅದು ಕಲ್ಲಿನೊಳಗಣ ಬೆಳಗು, ಮುತ್ತಿನೊಳಗಣ ಅಪ್ಪು, ಕರ್ಪುರದೊಳಗಣ ಉರಿಯಂತೆ, ದೃಷ್ಟವಿದ್ದು ನಿಃಪತಿಯಾಗಬೇಕು, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಅಂಬರ ಹರಿದಡೂ ಸಂಭವಿಸದಡೂ ಕಲೆ ಬಿಡದು. ಇದರಂದವ ತಿಳಿ. ಹೀಂಗಲ್ಲದೆ ಮನವ ಲಿಂಗದಲ್ಲಿ ನಿಕ್ಷೇಪಿಸಿ, ಬಂಧವ ಹಿಂಗಿ, ಸುಸಂಗನಾಗು. ಮಹಾಲಿಂಗಿಗಳ ಸಂಭಾಷಣದಲ್ಲಿ ನಿಂದು ನಿರ್ವಾಣನಾಗು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅರ್ಚನೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ, ನಿಲ್ಲು. ಪೂಜನೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ, ನಿಲ್ಲು. ಇಂತೀ ಉಭಯದೊಳಗಾದ ಅಷ್ಟವಿಧಾರ್ಚನೆ, ಷೋಡಶೋಪಚಾರಕ್ಕೊಳಗಾಯಿತ್ತು ಲಿಂಗವೆಂಬರು, ಇಲ್ಲ, ಇಂತೀ ನೇಮ ಹುಸಿ, ನಿಲ್ಲು. ಇಂತೀ ನೇಮಕ್ಕೆ ಒಳಗಾದಡೆ, ಇಷ್ಟಾರ್ಥ ಕಾಮ್ಯಾರ್ಥ ಮೋಕ್ಷಾರ್ಥ, ತನಗೆ ದೃಷ್ಟದಲ್ಲಿ ಆದುದಿಲ್ಲ. [ಇಹ]ದಲ್ಲಿ ಕಾಣದೆ, ಪರದಲ್ಲಿ ಕಂಡೆನೆಂಬುದು, ಹುಸಿ, ಸಾಕು ನಿಲ್ಲು. ಕುರುಹಿನಿಂದ ಕಾಬಡೆ, ತನ್ನಿಂದಲೋ, ಕುರುಹಿನಿಂದಲೋ ? ಅರಿವಿನಿಂದಲೋ, ಕುರುಹಿನಿಂದಲೋ ? ಕುರುಹಿನಿಂದಲರಿದೆಹೆನೆಂದಡೆ, ಆ ಅರಿವಿನಿಂದ ಬೇರೊಂದು ಕಂಡೆಹೆನೆಂದಡೆ, ಕಾಣಿಸಿಕೊಂಡುದು ನೀನೋ, ನಾನೋ ? ಇಂತುಭಯವೇನೆಂದರಿಯದಿಪ್ಪುದೆ ಬೆಳಗಿನ ಕಳೆಯ ಕಾಂತಿಯೊಳಗಣ ನಿಶ್ಚಯ ತಾನಾದ ಮತ್ತೆ ಏನೂ ಎನಲಿಲ್ಲ, ಅದು ತಾನೇ. ಅದು ತಾ[ನೇನೂ] ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಂಬುವಿಲ್ಲದಿರ್ದಡೆ ಅಂಬುಜವನಾರು ಬಲ್ಲರು? ನೀರಿಲ್ಲದಿರ್ದಡೆ ಹಾಲನಾರು ಬಲ್ಲರು? ನಾನಿಲ್ಲದಿರ್ದಡೆ ನಿನ್ನನಾರು ಬಲ್ಲರು? ನಿನಗೆ ನಾ, ನನಗೆ ನೀ. ನಿನಗೂ ನನಗೂ ಬೇರೊಂದು ನಿಜವುಂಟೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅರೂಢನಾಗಿ ತಿರುಗಿ, ಮೂಢರ ಬಾಗಿಲಲ್ಲಿ ನಿಂದು, ಬೇಡಲೇಕೆ ಭಿಕ್ಷವ? ಕಾಡಲೇಕೆ ಮತ್ರ್ಯರ? ರೂಢಿಯೊಳಗೆ ಸಿಕ್ಕಿ ಅಡುವಂಗೆ, ಆ ರೂಢಿ ಬೇಡಾ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅನಾಚಾರದಲ್ಲಿ ಆಚಾರವಡಗಿ, ಭಕ್ತನಲ್ಲದೆ ಭವಿಯಾಗಿ, ನಿತ್ಯನಲ್ಲದೆ ಅನಿತ್ಯನಾಗಿದ್ದವಂಗಲ್ಲದೆ, ಮೂರು ಕುಳವಿಲ್ಲ. ಆರು ಕುಳದಲ್ಲಿ ಬಲ್ಲವನಲ್ಲದೆ, ಇಂತಿವರೊಳಗಾದ ನೂರೊಂದು ಕುಳಕ್ಕೆ ಸ್ಥಲಜ್ಞನಲ್ಲ. ಇಂತಿವ ಬಲ್ಲವರೆಲ್ಲರಲ್ಲಿ ನಿಃಕಳಂಕ ಮಲ್ಲಿಕಾರ್ಜುನಲಿಂಗ, ಸೊಲ್ಲಿನೊಳಗಾಗಿಹನು.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...