ಅಥವಾ

ಒಟ್ಟು 6 ಕಡೆಗಳಲ್ಲಿ , 5 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ. ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ. ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದಡೆ ಆಗಲಿ ಮಹಾಪ್ರಸಾದವೆಂದೆನಯ್ಯಾ ಗುಹೇಶ್ವರಾ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು.
--------------
ಅಲ್ಲಮಪ್ರಭುದೇವರು
ಶಿವಾಚಾರ ಘನವೆಂಬುದ ಕೇಳಿ, ಭವಿಜಾತವಳಿದು, ಪುನರ್ಜಾತನಾಗಿ, ಅಂಗದ ಮೇಲೆ ಲಿಂಗವ ಧರಿಸಿ, ಆ ಲಿಂಗಜಂಗಮವನಾರಾಧಿಸಿ, ಪ್ರಸಾದವ ಕೊಂಡು, ಭಕ್ತರಾಗಿ ಮುಕ್ತಿಯ ಪಡೆದೆನೆಂಬವರ ಹೆದರಿಸಿ, ಜರೆದು ಝಂಕಿಸಿ ಕೆಡೆನುಡಿದು, ಆಚಾರವ ಬಿಡಿಸಿ, ಅವರ ಹಿಂದಣ ಭವಿಶೈವದೈವಂಗಳ ಹಿಡಿಸಿ, ತಮ್ಮಂತೆ ನರಕದೊಳಗಾಳಬೇಕೆಂದು, ನಿಮ್ಮ ಮುನ್ನಿನ ಹಿರಿಯರ ಬೆನ್ನಬಳಿವಿಡಿದು ಬಂದ ಕುಲದೈವ ಮನೆದೈವ ಬಿಟ್ಟು, ಈ ಲಿಂಗಜಂಗಮಭಕ್ತಿಯ ಮಾಡಬೇಡೆಂದು ಹೇಳುವ ಕುನ್ನಿಗಳ ನುಡಿಯ ಕೇಳಲಾಗದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಭೂತ ಭೂತ ಹೊಡಯಿತೆಂದು ಬಾಯಿಗೆ ಬಂದ ಹಾಗೆ ಕೆಲದಾಡಿ ಹಲಬರು ಮಂತ್ರಿಸಿ ಥೂಥೂ ಎಂದು ಉಗುಳಿ, ಛೀ ಛೀ ಎಂದು ಉಗುಳಿ, ಜರಿದು ಝಂಕಿಸಿ ಲಜ್ಜೆಗೆಡಿಸಿಕೊಂಬ ಪಾತಕ ಕರ್ಮಿಗಳಿಗ್ಯಾಕೊ ಶಿವಸ್ತೋತ್ರ, ಶಿವಭಕ್ತಿ? .................................................ಬೆಂದು ನಾರು ಬೇರು................................................................. ..............
--------------
ಅಂಬಿಗರ ಚೌಡಯ್ಯ
ಕಲ್ಪಿತದಿಂ ಮಾಡುವ ಭಕ್ತ ನಿರ್ಧನಿಕನಾದರೆ ತನ್ನ ಕೈಯ ಧನವ ವೆಚ್ಚಿಸಿ, ಆ ಭಕ್ತನ ಕೂಡಿಕೊಂಡು ಲಿಂಗಾರ್ಚನೆಯ ಮಾಡಿ, ಅವರ ಮತ್ತೆ ದಾಸೋಹಕ್ಕೆ ನಿಲಿಸಿ, ತಾ ಕರ್ತನಾಗಿ ಪರಿಣಾಮಿಸಬಲ್ಲರೆ ಜಂಗಮ. ಅವರಿಗೆ ನಮೋ ನಮೋ [ಎಂಬೆ] ಅಂತಲ್ಲದೆ ಮುನ್ನ ಮಾಡಿದಿರಿ, ಈಗ ಮಾಡಿರೇನಿ ಭೋ ಎಂದು ಜರಿದು ಝಂಕಿಸಿ ಹೋಹರ ಜಂಗಮವೆಂಬೆನೆ ? ಎನ್ನೆನು. ಏನು ಕಾರಣವೆಂದರೆ_ ಆತ ಸೂನೆಗಾರ, ಆತ ದೋಷಾರ್ಥಿ, ಆತ ಭವಭಾರಿ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಒಂದಲ್ಲ ಎರಡಲ್ಲ ಮೂವರು ಹೆಣ್ಣುಗಳ ಮರೆಯಲಿಪ್ಪನ ನೆರೆಯಲೆಂತಹುದು ? ಹೆಣ್ಣಿನ ಮರೆಯ ಹೊಗುವ ನಲ್ಲಗೆ ಮತ್ತೆ ನಾಚಿಕೆಯಿಲ್ಲ ಕೇಳಾ, ಕೆಳದಿ. ಲೋಗರ ಪತಿಯ ಮರಸಿಕೊಂಡಿಪ್ಪ ಚಂಡಿಯರಿಗೆ ಮತ್ತೆ ನಾಚಿಕೆಯಿಲ್ಲ ಕೇಳಾ. ಅವದಿರ ಝಂಕಿಸಿ ತೊಲಗಿಸಿ ಹಿಡಿದಡೆ ಬಿಡದಿರೆಂದೂ ಉರಿಲಿಂಗದೇವನ.
--------------
ಉರಿಲಿಂಗದೇವ
ಆಚಾರ ಅನಾಚಾರವೆಂದಡೆ ಹೇಳಿಹೆ ಕೇಳಿರಣ್ಣಾ : ಸರ್ವಪದಾರ್ಥಂಗಳ ಇದಿರಿಟ್ಟಲ್ಲಿ ಇಷ್ಟಲಿಂಗಕ್ಕೆ ಕೊಟ್ಟು ಪ್ರಸಾದವೆಂದು ಕೊಂಡು ಸುಯಿಧಾನವಿಲ್ಲದೆ ಸೂಸಿದಲ್ಲಿ, ದೂಷಿಸಿ ಪ್ರಸಾದದಲ್ಲಿ ಒಳ್ಳಿತು ಹೊಲ್ಲಹ ವಿಷ ಸಿಹಿ ಹುಳಿ ಸಪ್ಪೆಯೆಂದು ಜರೆದು ಝಂಕಿಸಿ ಬಿಡುವ ಕರ್ಮಿಗಳು ನೀವು ಕೇಳಿರೊ_ ಜ್ಯೋತಿಯ ತಂದು ಬತ್ತಿಯ ಮುಟ್ಟಿಸಲು ಜ್ಯೋತಿಯಪ್ಪಂತೆ ಕಾಣಿರೊ ಒಂದು ವೇಳೆ ಪ್ರಸಾದವೆಂದು ಕೊಂಡು, ಮತ್ತೊಂದು ವೇಳೆಯಲ್ಲಿ ಎಂಜಲೆಂದು ನಿಂದಿಸುವ ಪ್ರಸಾದದ್ರೋಹಿಗಳಿಗೆ ದೇವಭಕ್ತರೆನ್ನಲಾಗದು. ಅವರಿಗೆ ಸೂರ್ಯಚಂದ್ರರುಳ್ಳನ್ನಕ್ಕ ನರಕ. ಎಕ್ಕಲನರಕದಲ್ಲಿ ಮುಳುಗಾಡುತ್ತಿಪ್ಪವರ ಮುಖವನೆನಗೆ ತೋರದಿರಾ ಗುಹೇಶ್ವರ.
--------------
ಅಲ್ಲಮಪ್ರಭುದೇವರು
-->