ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಶಿವಾ, ಈ ಲೋಕದ ಮಾನವರು ಸಂಸಾರಸುಖವ ಬಹುಸವಿಯೆಂದು ಹರುಷದಿಂದ ಉಬ್ಬಿ ಕೊಬ್ಬಿ ಹೊನ್ನು, ಹೆಣ್ಣು, ಮಣ್ಣಿನ ಹೋರಾಟವ ಮಾಡುವ ಪರಿಯ- ಪೇಳ್ವೆ ಕೇಳಿರಯ್ಯಾ. ಹೊನ್ನಿಗಾಸೆಯ ಮಾಡಿ ನಾನಾದೇಶವ ತಿರುಗಿ ತಿರುಗಿ, ನಾನಾವ್ಯಾಪಾರವ ಮಾಡಿ ದುಡಿದು ದುಃಖಮಂಬಟ್ಟು ಹಗಲು ಹಸುವಿನ ಚಿಂತೆ ಇಲ್ಲ, ಇರುಳು ನಿದ್ರೆಯ ಚಿಂತೆ ಇಲ್ಲ. ಈ ಪರಿಯಲ್ಲಿ ಸರ್ವರನು ಠಕ್ಕುಠವಳಿಯಿಂದ ಸಿಂತರಿಸಬೇಕೆಂಬ ಚಿಂತೆಯುಂಟಲ್ಲದೆ ಇವರಿಗೆ ಜಂಗಮದ ನೆನವು ಎಲ್ಲಿಹುದೋ? ಹೀಗೆ ನಾನಾ ಧಾವತಿಯಿಂದ ಆ ಹೊನ್ನ ಗಳಿಸಿ ತಂದು ಆ ಹೆಣ್ಣು ತರಬೇಕು, ಈ ಹೆಣ್ಣು ಬಿಡಬೇಕು, ಆ ಹೆಣ್ಣು ನೋಡಬೇಕು, ಈ ಹೆಣ್ಣು ಮಾಡಬೇಕು ಎಂಬೀ ಉಲ್ಲಾಸದಿಂದ ಮದವೇರಿದ ಆನೆಯ ಹಾಗೆ ಮಸ್ತಿಗೆ ಬಂದ ಕೋಣನ ಹಾಗೆ, ಮಚ್ಚರಕ್ಕೆ ಬಂದ ಟಗರಿನ ಹಾಗೆ, ಇಂತೀ ಪರಿಯಲ್ಲಿ ತಿರುಗುವ ಕತ್ತಿಮೂಳರಿಗೆ ಲಿಂಗದ ನೆನಹು ಎಲ್ಲಿಹುದೊ? ಹೀಗೆ ಆ ಹೊನ್ನಿನಿಂದ ಆ ಊರಲ್ಲಿ ಹೊಲವ ಮಾಡಬೇಕು, ಈ ಊರಲ್ಲಿ ಹೊಲವ ಮಾಡಬೇಕು, ಅಲ್ಲಿ ಮನೆಯ ಮಾಡಬೇಕು, ಇಲ್ಲಿ ಮನೆಯ ಮಾಡಬೇಕು. ಈ ಉಲ್ಲಾಸ ಚಿಂತೆಯಿಂದ ಹಗಲು ಹಸಿವಿನ ಚಿಂತೆ ಇಲ್ಲ. ಇರುಳು ನಿದ್ರೆಯ ಖಬರಿಲ್ಲ. ಇಂತೀ ಪರಿಯಲ್ಲಿ ಬೆಕ್ಕು ನಾಯಿಗಳು ತಮ್ಮ ಒಡಲ ವಿಷಯದ ಚಿಂತೆಯಿಂದ ಹಗಲು ಇರುಳು ಚರಿಸುವಂತೆ ಈ ಮಾಯಾ ಪ್ರಪಂಚದಲ್ಲಿ ತಿರುಗುವ ಮಂಗಮನುಜರಿಗೆ ಗುರುವಿನ ನೆನಹು ಎಲ್ಲಿಹುದೋ? ಇಂತೀ ಪ್ರಕಾರದಲ್ಲಿ ತ್ರಿವಿಧ ಹೋರಾಟದಲ್ಲಿ ಸಿಲ್ಕಿದ ಜಡಜೀವರುಗಳಿಗೆ ಪರಬ್ರಹ್ಮದ ಎಚ್ಚರವಿಲ್ಲದೆ ಮುಂದೆ ಮೋಕ್ಷವ ಹರಿಯಬೇಕೆಂಬ ಚಿಂತೆಯಿಲ್ಲ. ಇಂತೀ ವಿಚಾರವನು ತಿಳಿಯದೆ ಹೊನ್ನು, ಹೆಣ್ಣು, ಮಣ್ಣೆಂಬ ತ್ರಿವಿಧಮಲವ ಕಚ್ಚಿ ಹಂದಿ ನಾಯಿಗಳ ಹಾಗೆ ಈ ಸಂಸಾರವೆಂಬ ಹಾಳಕೇರಿಯಲ್ಲಿ ಹೊಡದಾಡಿ ಹೊತ್ತುಗಳೆದು ವ್ಯರ್ಥ ಸತ್ತು ಹೋಗುವ ಕತ್ತೆಮೂಳ ಹೊಲೆಮಾದಿಗರಿಗೆ ಇನ್ನೆತ್ತಣ ಮುಕ್ತಿ ಹೇಳಾ! ಇಂತಪ್ಪ ಮೂಢಾತ್ಮರಿಗೆ ಕಲ್ಪಕಲ್ಪಾಂತರ ಎಂಬತ್ತುನಾಲ್ಕುಲಕ್ಷ ಯೋನಿಚಕ್ರದಲ್ಲಿ ತಿರುಗುವುದೇ ಪ್ರಾಪ್ತಿಯುಂಟೆಂದ ಕಾಣಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->