ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಂಬೂದ್ವೀಪವನೆಲ್ಲ ತಿರಿಗಿದಡೇನು? ಜಂಬುಕ ಶಂಭುದ್ಯಾನದಲ್ಲಿ ಸೈವೆರಗಪ್ಪುದೆ? ಕುಂಭಿನಿಯ ತಿರಿಗಿ ಕೋಟಿ ತೀರ್ಥವ ಮಿಂದಡೇನು? ಶಂಭು! ನಿಮ್ಮಲ್ಲಿ ಸ್ವಯವಾಗದವನು ಕುಂಭಿನಿಯ ತಿರಿಗಿದ ಡೊಂಬನಂತೆ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ವಿರಕ್ತಿ ವಿರಕ್ತಿ ಎಂಬರು ವಿರಕ್ತಿಯ ಪರಿ ಎಂತುಂಟು ಹೇಳಿರಯ್ಯಾ. ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ ? ಹುಟ್ಟು ಕೆತ್ತುವ ಡೊಂಬನಂತೆ ಬಿಟ್ಟಮಂಡೆಯ ಕೇಶವ ನುಣ್ಣಿಸಿ ಬಣ್ಣಿಸಿ, ಎಣ್ಣೆಯ ಗಂಟ ಹಾಕಿದಡೆ ವಿರಕ್ತನೆ ? ಕಟ್ಟುಹರಿದ ಪಂಜಿನಂತೆ, ಬಿಟ್ಟಮಂಡೆಯ ಕಟ್ಟದಿರ್ದಡೆ ವಿರಕ್ತನೆ ? ಹರದನಂತೆ ಹೇಸಿಯಾಗಿರ್ದಡೆ ವಿರಕ್ತನೆ ? ಮೂಗನಂತೆ ಮಾತನಾಡದಿರ್ದಡೆ ವಿರಕ್ತನೆ ? ಹೊನ್ನು ಹೆಣ್ಣು ಮಣ್ಣ ಬಿಟ್ಟು ಅಡವಿಯಾರಣ್ಯದಲ್ಲಿರ್ದಡೆ ವಿರಕ್ತನೆ ?ಅಲ್ಲ. ವಿರಕ್ತನ ಪರಿಯೆಂತೆಂದೊಡೆ ಒಡಲ ಹುಡಿಗುಟ್ಟಿ, ಮೃಡನೊಳೆಡದೆರಹಿಲ್ಲದಿರಬಲ್ಲಡೆ ವಿರಕ್ತನಪ್ಪನು. ಅಲ್ಲದಿರ್ದಡೆ ಮೈಲಾರಿ ಮಲ್ಲಿ ಗೊರವಿಯಲ್ಲವೆ ಚೆನ್ನಮಲ್ಲಿಕಾರ್ಜುನಾ ?
--------------
ಅಕ್ಕಮಹಾದೇವಿ
ಬೆಟ್ಟದ ನೆಲ್ಲಿಯಕಾಯ ಪಟ್ಟಣಕ್ಕೆ ಹೊತ್ತುಕೊಂಡು ಹೋಗಿ ಹೊಟ್ಟೆಯ ಹೊರೆವವನಂತೆ, ಉತ್ತಮ ತೇಜಿಯ ಹೆಸರ ಕೇಳಿ ಕಡಲೆಯ ತಿಂಬ ಗಾವಲಿಗನಂತೆ, ಅತ್ತೆಯ ಹೆಸರ ಹೇಳಿ ಹೊಟ್ಟೆಯ ಹೊರೆವ ತೊತ್ತಿನಂತೆ, ಆದ್ಯರ ವಚನಂಗಳ ಅಲ್ಲಿಗಲ್ಲಿಗೆ ಉಸುರಿ ಅನ್ನ ಕೂಳಿಂಗೆ ಹರಿದಾಡುವ ಅಜ್ಞಾನಿಗಳ ಅನುಭಾವಿಗಳೆಂಬೆನೆ ? ಅಯ್ಯಾ, ವಿರಕ್ತರೆಂಬೆನೆ ? ವೇಷವ ಹೊತ್ತು ತಿರುಗುವ ಡೊಂಬನಂತೆ ಬಲ್ಲೆ ಬಲ್ಲೆನೆಂಬ ಅಹಂಕಾರವ ನುಡಿವ ಭವಿಗಳ ಅನುಭಾವಿಗಳೆಂಬೆನಲ್ಲದೆ ವಿರಕ್ತರೆಂಬೆನೆ ? ವಿಷಯವ ಮುಂದುಗೊಂಡು ತಿರುಗುವ ಅನುಭಾವಿಗಳನೆಂತು ವಿರಕ್ತರೆಂಬೆನಯ್ಯಾ ಅಮುಗೇಶ್ವರಲಿಂಗವೆ ?
--------------
ಅಮುಗೆ ರಾಯಮ್ಮ
-->