ಅಥವಾ

ಒಟ್ಟು 20 ಕಡೆಗಳಲ್ಲಿ , 10 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಂಕರದಾಸಿಮಯ್ಯಗೆ ಸುಂಕದಬಂಕಯ್ಯಗೆ ಶಿವಲೆಂಕಮಂಚಣ್ಣಗೆ ಶಿವರಾತ್ರಿಯಯ್ಯಗಳಿಗೆ ಸಿದ್ಧರಾಮಯ್ಯಗಳಿಗೆ ಚಿಮ್ಮುಲಿಗೆಯ ಚಂದಯ್ಯ ಚಿಕ್ಕಯ್ಯ ಡೋಹರ ಕಕ್ಕಯ್ಯ ಒಕ್ಕುಮಿಕ್ಕ ಪ್ರಸಾದವಯಿಕ್ಕೆಯ್ಯಲ್ಲಿ ಕೊಂಬ ಅಕ್ಕನಾಗಾಯಿಗೆ ಹರಳಯ್ಯ ಮಧುವಯ್ಯ ಬಳ್ಳೇಶ್ವರಯ್ಯಗಳಿಗೆ ಹಾವಿನಾಳ ಕಲ್ಲಯ್ಯಗಳಿಗೆ ಸರವೂರ ಬಂಕಯ್ಯಗೆ ಸುರಗಿಯ ಚೌಡಯ್ಯಗೆ ಪರಿಪರಿಯ ಶರಣರಿಗೆ ಶರಣು ಶರಣಾರ್ಥಿ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಬಸವಣ್ಣ ಚನಬಸವಣ್ಮ ಪ್ರಭುದೇವ ಮಡಿವಾಳ ಮಾಚಯ್ಯಾ ಸಿದ್ಧರಾಮಯ್ಯ ಸೊಡ್ಡಳ ಬಾಚರಸರು ಹಡಪದಪ್ಪಣ್ಣ ಪಡಿಹಾರಿ ಉತ್ತಣ್ಣ ಅವ್ವೆ ನಾಗಾಯಿ ಕೋಲಶಾಂತಯ್ಯ ಡೋಹರ ಕಕ್ಕಯ್ಯ ಮೊಗವಾಡದ ಕೇಶಿರಾಜದೇವರು ಖಂಡೆಯ ಬೊಮ್ಮಣ್ಣ ಮೊದಲಾದ ಅಸಂಖ್ಯಾತ ಮಹಾಪ್ರಮಥಗಣಂಗಳ ಪರಮಪ್ರಸಾದವ ಕೊಂಡು ಬದುಕಿದೆನಯ್ಯಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಗೋತ್ರನಾಮವ ಬೆಸಗೊಂಡಡೆ ಮಾತು ನೂಕದೆ ಸುಮ್ಮನಿದ್ದಿರಿದೇನಯ್ಯಾ ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ ಗೋತ್ರನಾಮ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯನೆಂಬುದೇನು,ಕೂಡಲಸಂಗಯ್ಯಾ.
--------------
ಬಸವಣ್ಣ
ಕೀಳು ಡೋಹರ ಕಕ್ಕ; ಕೀಳು ಮಾದರ ಚೆನ್ನ. ಕೀಳು ಓಹಿಲದೇವ; ಕೀಳು ಉದ್ಭಟಯ್ಯ. ಕೀಳಿಂಗಲ್ಲದೆ ಹಯನು ಕರೆಯದು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಹಸುವ ಕೊಂದಾತನು ನಮ್ಮ ಮಾದಾರ ಚೆನ್ನಯ್ಯ. ಶಿಶುವೇಧೆಗಾರನು ನಮ್ಮ ಡೋಹರ ಕಕ್ಕಯ್ಯ. ಪಾಪಕರ್ಮಿ ನಮ್ಮ ಮಡಿವಾಳ ಮಾಚಯ್ಯ. ಇವರಿಬ್ಬರ ಮೂವರ ಕೂಡಿಕೊಂಡಿಪ್ಪ, ಕೊಟ್ಟುದ ಬೇಡನು ನಮ್ಮ ಕೂಡಲಸಂಗಯ್ಯ.
--------------
ಬಸವಣ್ಣ
ಮಾದಾರ ಚನ್ನಯ್ಯನ ಬಾಯ ತಾಂಬೂಲವ ಮೆಲುವೆ. ಡೋಹರ ಕಕ್ಕಯ್ಯನ ಒಕ್ಕುಮಿಕ್ಕುದನುಂಬೆ. ಚೋಳಿಯಕ್ಕನ ಊಳಿಗದವನಾಗುವೆ. ಶ್ವಪಚಯ್ಯನ ಆಳಾಗಿರುವೆ. ಇನ್ನುಳಿದ ಸಕಲಗಣಂಗಳ ತೊತ್ತು ಬಂಟ ಲೆಂಕನಾಗಿ ರಾಜಾಂಗಣ ಬಳಿಯುವೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹಿರಿಯಯ್ಯ ಶ್ವಪಚಯ್ಯ, ಕಿರಿಯಯ್ಯ ಡೋಹರ ಕಕ್ಕಯ್ಯ, ಅಯ್ಯಗಳಯ್ಯ ನಮ್ಮ ಮಾದಾರ ಚೆನ್ನಯ್ಯ. ಕೂಡಲಸಂಗಮದೇವಾ, ನಿಮ್ಮ ಶರಣರು ಎನ್ನ ಸಲಹುವರಾಗಿ. 351
--------------
ಬಸವಣ್ಣ
ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು ! ನಿಮಗೆರಗದ ಕಾರಣ ಕೊರಳಲ್ಲಿ ನೇಣು ! ಹಿಂಡಲೇಕೋ ತೊಳೆಯಲೇಕೋ ! ಮುಳುಗಿ ಮುಳುಗಿ ಮೂಗ ಹಿಡಿಯಲೇಕೋ ! ಕೂಡಲಸಂಗನ ಶರಣರಲ್ಲಿ ಡೋಹರ ಕಕ್ಕಯ್ಯನಾವ ತೊರೆಯಲಿ ಮಿಂದ
--------------
ಬಸವಣ್ಣ
ಹಳಿವವರ ಲೆಂಕ, ಮತ್ಸರಿಸುವವರ ಡಿಂಗರಿಗ, ಸಲೆಯಾಳಿಗೊಂಬವರ ತೊತ್ತಿನ ಮಗ. ಜರಿದು [ಮತ್ಸರಿ]ಸಿ, ಹೊಯ್ದು ಬೈದು ಅದ್ದಲಿಸಿ ಬುದ್ಧಿಯ ಹೇಳುವ ಹಿರಿಯರಾದ ಡೋಹರ ಕಕ್ಕಯ್ಯಗಳ ಪಾದರಕ್ಷೆಯ ಕಿರುಕುಣಿಕೆಯಲ್ಲಿ ಎ[ನ್ನನ್ನಿ]ಡು ಕೂಡಲಸಂಗಮದೇವಾ.
--------------
ಬಸವಣ್ಣ
ಪ್ರಸಾದಿಯಾದಡೆ ಚೇಳಿಯಕ್ಕನಂತಿರಬೇಕು. ಪ್ರಸಾದಿಯಾದಡೆ ಮಾದಾರ ಚೆನ್ನಯ್ಯನಂತಿರಬೇಕು. ಪ್ರಸಾದಿಯಾದಡೆ ಬೇಡರ ಕಣ್ಣಪ್ಪನಂತಿರಬೇಕು. ಪ್ರಸಾದಿಯಾದಡೆ ಬಿಬ್ಬಿ ಬಾಚಯ್ಯಗಳಂತಿರಬೇಕು. ಪ್ರಸಾದಿಯಾದಡೆ ಡೋಹರ ಕಕ್ಕಯ್ಯನಂತಿರಬೇಕು. ಪ್ರಸಾದಿಯಾದಡೆ ಪರಮಗುರು ಚೆನ್ನಬಸವಣ್ಣನಂತಿರಬೇಕು. ಅಲ್ಲದೆ ಪ್ರಾಣನ ಹಸಿವೆಗೆಂದು ಬಾಯಿಗೆ ಬಂದಂತೆ ತಿಂಬ ಜೀವಗಳ್ಳರಿಗೆಲ್ಲಿಯ ಪ್ರಸಾದವಯ್ಯಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ಕೋಪಿ ಮಜ್ಜನಕ್ಕೆರೆದಡೆ ರಕ್ತದ ಧಾರೆ, ಪಾಪಿ ಹೂವನೇರಿಸಿದಡೆ ಮಸೆದಡ್ಡಾಯುಧದ ಗಾಯ. ಕೂಪವರನಾರನೂ ಕಾಣೆನು ಮಾದಾರ ಚೆನ್ನಯ್ಯನಲ್ಲದೆ, ಕೂಪವರನಾರನೂ ಕಾಣೆನು ಡೋಹರ ಕಕ್ಕಯ್ಯನಲ್ಲದೆ, ವ್ಯಾಪ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ. ನಿನ್ನಪತ್ತಿಗರಿವರಯ್ಯಾ, ಕೂಡಲಸಂಗಯ್ಯಾ.
--------------
ಬಸವಣ್ಣ
ಎಲೆ ಕರುಣಿ, ಜನನಿಯ ಜಠರಕ್ಕೆ ತರಬೇಡವಯ್ಯ. ತಂದರೆ ಮುಂದೆ ತಾಪತ್ರಯಕ್ಕೊಳಗಾದ ತರಳೆಯ ದುಃಖದ ಬಿನ್ನಪವ ಕೇಳಯ್ಯ. ಆಚಾರಲಿಂಗಸ್ವರೂಪವಾದ ಘ್ರಾಣ, ಗುರುಲಿಂಗಸ್ವರೂಪವಾದ ಜಿಹ್ವೆ, ಶಿವಲಿಂಗಸ್ವರೂಪವಾದ ನೇತ್ರ, ಜಂಗಮಲಿಂಗಸ್ವರೂಪವಾದ ತ್ವಕ್ಕು, ಪ್ರಸಾದಲಿಂಗಸ್ವರೂಪವಾದ ಶ್ರೋತ್ರ, ಮಹಾಲಿಂಗಸ್ವರೂಪವಾದ ಪ್ರಾಣ, ಪಂಚಬ್ರಹ್ಮ ಸ್ವರೂಪವಾದ ತನು, ಇಂತಿವೆಲ್ಲವು ಕೂಡಿ ಪರಬ್ರಹ್ಮಸ್ವರೂಪ ತಾನೆಯಾಗಿ, ಆನೆಯ ರೂಪತಾಳಿ ಕೇರಿಯ ನುಸುಳುವ ಹಂದಿಯಂತೆ, ಮೆಟ್ಟುಗುಳಿಯೊತ್ತಿನ ಉಚ್ಚೆಯ ಬಚ್ಚಲೆಂಬ ಹೆಬ್ಬಾಗಿಲ ದಿಡ್ಡಿಯಲ್ಲಿ, ಎಂತು ನುಸುಳುವೆನಯ್ಯ?. ಹೇಸಿ ಹೇಡಿಗೊಂಡೆನಯ್ಯ, ನೊಂದೆನಯ್ಯ, ಬೆಂದೆನಯ್ಯ. ಬೇಗೆವರಿದು ನಿಂದುರಿದೆನಯ್ಯ. ಎನ್ನ ಮೊರೆಯ ಕೇಳಯ್ಯ ಮಹಾಲಿಂಗವೇ. ಎನ್ನ ಭವಕ್ಕೆ ನೂಂಕಬೇಡಯ್ಯ. ನಾನು ಅನಾದಿಯಲ್ಲಿ ಭೋಗಕ್ಕಾಸೆಯ ಮಾಡಿದ ಫಲದಿಂದ, ಅಂದಿಂದ ಇಂದು ಪರಿಯಂತರ ನಾನಾ ಯೋನಿಯಲ್ಲಿ ಬಂದು, ನಾಯಿಯುಣ್ಣದ ಓಡಿನಲ್ಲಿ ಉಂಡು, ನರಗೋಟಲೆಗೊಂಡೆನಯ್ಯ. ಎನಗೆ ಹೊನ್ನು ಬೇಡ, ಹೆಣ್ಣು ಬೇಡ, ಮಣ್ಣು ಬೇಡ, ಫಲವು ಬೇಡ, ಪದವು ಬೇಡ ನಿಮ್ಮ ಶ್ರೀಪಾದವನೊಡಗೂಡಲೂಬೇಡ, ಎನಗೆ ಪುರುಷಾಕಾರವೂ ಬೇಡವಯ್ಯ. ಎನ್ನ ಮನ ಒಪ್ಪಿ, ಪಂಚೈವರು ಸಾಕ್ಷಿಯಾಗಿ, ನುಡಿಯುತ್ತಿಪ್ಪೆನಯ್ಯಾ. ನಿಮ್ಮಾಣೆ, ಎನಗೊಂದ ಕರುಣಿಸಯ್ಯ ತಂದೆ, ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯ ಇಂತಪ್ಪ ಶಿವಶರಣರ ಮನೆಯ ಬಾಗಿಲ ಕಾವ ಶುನಕನ ಮಾಡಿ ಎನ್ನ ನೀ ನಿಲಿಸಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಶರಣನ ನಡೆ ಅಂತಿಂತೆನಬೇಡ. ಶರಣ ಮಾದರ ಚೆನ್ನಯ್ಯನ ನಡೆ ಯಾವ ಆಗದಲ್ಲಿ ಹೇಳಿತ್ತು? ಶರಣ ಡೋಹರ ಕಕ್ಕಯ್ಯನ ನಡೆ ಯಾವ ವೇದದಲ್ಲಿ ಹೇಳಿತ್ತು? ನಡೆದ ಆಚರಣೆಯೆ ಸಚ್ಛೀಲ; ನುಡಿದ ವಾಕ್ಯವೆ ನಡೆ ಮೋಕ್ಷಪ್ರದಾಯಕ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಪ್ಪನು ನಮ್ಮ ಮಾದಾರ ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ, ಚಿಕ್ಕಯ್ಯನೆಮ್ಮಯ್ಯ ಕಾಣಯ್ಯ, ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ, ಎನ್ನನೇತಕ್ಕರಿುರಿ, ಕೂಡಲಸಂಗಯ್ಯಾ 349
--------------
ಬಸವಣ್ಣ
ಉಂಬ ಕೂಳಿಗೆ ಉಪದೇಶವ ಮಾಡುವ ಚುಂಬಕರು ಹೆಚ್ಚಿ, ಭಕ್ತಿಯಪಥವ ಕೆಡಿಸಿದರು. ಡೊಂಬ ಡೋಹರ ಹೊಲೆಯರು ಮಾದಿಗರು. ಉಪದೇಶವಿಲ್ಲದವರು ಪಿಂಬೇರ ಅನಾಚಾರಿಯ ಆರಾಧಿಸಿ, ಶಂಭುವಿನ ಸರಿಯೆಂದು ಅವರೊಳಗೆ ಹಲವರು ಕೊಂಬನೂದುವ, ಸೊಣಕನ ಕೊರಳಲ್ಲಿ ಬಾರ ಕವಡೆಯ ಕಟ್ಟಿಕೊಂಡು ನಾಯಾಗಿ ಬೊಗಳುವರು. ಕಂಬದ ಬೊಂಬೆಯ ಮಾಡಿ ಮೈಲಾರ ಭೈರವ ಆಯಿರ (?) ಧೂಳಕೇತನೆಂಬ ಕಾಳುದೈವವ ಊರೂರದಪ್ಪದೆ ತಿರಿದುತಿಂಬ ಡಂಭಕರ ಕೈಯಲ್ಲಿ ಉಪದೇಶವ ಕೊಂಡವರು, ಗುರುಲಿಂಗಜಂಗಮದ ಹೊಲಬನರಿಯದೆ ಭಂಗಿತರಾದರು. ಅಂಗದ ಮೇಲಣ ಸೂತಕ ಹಿಂಗದು. ಅನ್ಯದೈವದ ಜಾತ್ರೆಗೆ ಹೋಗಿ, ನಾಡನರಕದಲ್ಲಿ ಬೆರಣಿಯ ಮಾಡುವ ನಾನಾ ಜಾತಿಗಳು ಹರಕೆಯ ಹಿಂಗಿಸದೆ, ಗುರುಕಾರುಣ್ಯವ ಕೊಟ್ಟವಂಗೆ ಕುಂಭಿನಿಪಾತಕ ತಪ್ಪದೆಂದ ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->