ಅಥವಾ

ಒಟ್ಟು 151 ಕಡೆಗಳಲ್ಲಿ , 34 ವಚನಕಾರರು , 103 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಮನವರಿತು ಸುಳಿಯಬಲ್ಲಡೆ ಆಪ್ಯಾಯನವರಿತು ಉಣಬಲ್ಲಡೆ ಇಚ್ಛೆಯರಿತು ಬೇಡಬಲ್ಲಡೆ ಈ ತ್ರಿವಿಧ ಗುಣದ ಅನುವ ಬಲ್ಲವರು ದೇವರಿಗೆ ದೇವರಾಗಿಪ್ಪರು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನ ದೇವರ ದೇವಾ.
--------------
ಸಿದ್ಧರಾಮೇಶ್ವರ
ಮಿಂದು ದೇವರ ಪೂಜಿಸಿಹೆನೆಂಬ ಸಂದೇಹಿ ಮಾನವಾ ನೀ ಕೇಳಾ, ಮೀಯದೆ ಮೀನು ? ಮೀಯದೆ ಮೊಸಳೆ ? ತಾ ಮಿಂದು, ತನ್ನ ಮೀಯದನ್ನಕ್ಕರ ಈ ಬೆಡಗಿನ ಮಾತ ಮೆಚ್ಚುವನೆ ನಮ್ಮ ಗುಹೇಶ್ವರ ?
--------------
ಅಲ್ಲಮಪ್ರಭುದೇವರು
ದಾಸಿಯ ಸಂಗದಿಂದ ಮಜ್ಜನವಂತರಿಸಿತ್ತು. ವೇಶಿಯ ಸಂಗದಿಂದ ಪ್ರಸಾದವಂತರಿಸಿತ್ತು. ಪರಸ್ತ್ರೀಯ ಸಂಗದಿಂದ ದೇವರ ಕಾರುಣ್ಯವಂತರಿಸಿತ್ತು. ಈ ತ್ರಿವಿಧ ನಾಸ್ತಿಯಾದಂಗಲ್ಲದೆ ಭಕ್ತಿಯಿಲ್ಲ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಾಯದ ಕಳವಳಕ್ಕಂಜಿ ಪ್ರಾಣ ಹೋದಲ್ಲಿ, ಭವ ಹಿಂಗದು, ಪ್ರಕೃತಿ ಬಿಡದು. ವಾಯಕ್ಕಾದಡೆ ಸತ್ತು ದೇವರ ಕೂಡಿಹೆವೆಂಬರು, ಈ ವಾಯದ ಮಾತಿಂಗೆ ಆನು ಬೆರಗಾದೆನು. ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ ಬೇರಿಲ್ಲ, ಗುಹೇಶ್ವರ ತಾನೆ !
--------------
ಅಲ್ಲಮಪ್ರಭುದೇವರು
ಮಾಡಿ ನೀಡಿ ಲಿಂಗವ ಪೂಜಿಸಿಹೆವೆಂಬವರು ನೀವೆಲ್ಲಾ ಕೇಳಿರಣ್ಣಾ: ಹಾಗದ ಕೆರಹ ಹೊರಗೆ ಕಳೆದು, ದೇಗುಲಕ್ಕೆ ಹೋಗಿ ನಮಸ್ಕಾರವ ಮಾಡುವನಂತೆ ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲ. ಧನವನಿರಿಸದಿರಾ, ಇರಿಸಿದಡೆ ಭವ ಬಪ್ಪುದು ತಪ್ಪುದು. ಕೂಡಸಂಗನ ಶರಣರಿಗೆ ಸವೆಸಲೇಬೇಕು. 199
--------------
ಬಸವಣ್ಣ
ಎಲೆ ಎಲೆ, ಭಕ್ತ ಭವಿ ಎಂಬೋ ನೀತಿಯಂ ಕೇಳು : ಭಕ್ತ ದಾರು ? ಭವಿ ದಾರು ? ಎಂದಡೆ, ಎಲಾ, ಯಾವ ಕುಲ[ದವ]ನಾದಡೆ ಸರಿಯೋ ? ಯಾವ ದೇವರು ಆದರೆ ಸರಿಯೋ ? ಎಲ್ಲಾ ದೇವರಿಗೂ ಆತ್ಮಲಿಂಗವಾಗಿಪ್ಪನೇ ಮಹಾದೇವನೆಂದು ಹೇಳುವುದು ಶ್ರುತಿವಾಕ್ಯ. ಇದರೊಳಗೆ ಏಕದೈವವನು ಪಿಡಿದು ಪೂಜಿಸಿ, ಧ್ಯಾನಿಸಿ, ನಮಸ್ಕರಿಸಿ, ಕ್ರಿಯಾಚಾರದಿಂ ನಡೆದು, ನೀತಿಗಳನೋದಿ, ನಿರ್ಮಳಚಿತ್ತನಾದಡೆ ಭಕ್ತ. ಇದಂ ಮರೆದು, ಹಲವು ಕಾಲ ಲಿಂಗಧ್ಯಾನ, ಹಲವು ಕಾಲ ಹರಿಧ್ಯಾನ, ಹಲವು ಕಾಲ ಬ್ರಹ್ಮಧ್ಯಾನ, ಹಲವು ಕಾಲ ಎಲ್ಲಮ್ಮ, ಎಕನಾತಿ, ಶಾಕಿನಿ, ಡಾಕಿನಿ ಕಲ್ಲು ಮರದೊಳಗಿಪ್ಪ ದೇವರ ಪೂಜಿಸಿದಡೆ, ಎಲ್ಲಾರ ಎಂಜಲ ತಿಂಬೋರ ಎಂಜಲ [ತಿಂದು], ಭಕ್ತನೆಂದರಿಯದೆ, ಪ್ರಸಾದದ ಮಹಾತ್ಮೆಯ ತಿಳಿವ ತಿಳಿಯದೆ, ಧನದ ಪಿಶಾಚಿ ಎಂದು ಧರ್ಮ ಪರಹಿತಾರ್ಥವನು ಮರೆದು, ನಿತ್ಯ ನಿತ್ಯ ಅನ್ನಕ್ಲೇಶದಲ್ಲಿ ಹೊರಳುವ[ವ] ಲಿಂಗದೇಹಿಕನಾದಡೆಯು ಬ್ರಾಹ್ಮಣನಾದೆಡೆಯು, ಇವನೇ ಭವಿ. ಇಂತಾ ಭಕ್ತ ಭವಿಗಳ ನೆಲೆಯ ತಿಳಿದು ನಮ್ಮ ಶರಣರು ನಿರ್ಲೇಪ ದೇಹಮಂ ಅಂಗೀಕರಿಸಿ ಪೋದರು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ದೇವರ ನಿರೂಪದಿಂದ ದೇವಿಯ ಸಂಗವ ಮಾಡಿ ಸದಮಲ ಬೆಳಗಿನೊಳು ನಿಂದು, ದೇವಿ ದೇವ ಅನಾದಿ ಪ್ರಸಿದ್ಧನ ಆಚರಿಸುತಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕರ್ಮಿಗಳು ಶಿವಪಥಕ್ಕೆ ಬಪ್ಪಾಗಳವರ ಕರ್ಮ ಬೆಂಬತ್ತಿ ಕಾಡುವದಯ್ಯಾ. ಲಿಂಗಾರಾಧನೆಯ ಮಾಡಲೀಯದು. ಸಂದೇಹವನೆ ತೋರಿಸಿ ಕೆಡಿಸುವದಯ್ಯಾ. ಏಕೆ? ಅವರು ಮಾಡಿದ ಕರ್ಮವನುಣಬೇಕಾಗಿ! ಇದನರಿದು ನಿಮ್ಮ ನೆರೆನಂಬಿ ಪೂಜಿಸೆ ಹರಿವುದು ಕರ್ಮ, ಕಪಿಲಸಿದ್ಧಮಲ್ಲಿಕಾರ್ಜುನ, ದೇವರ ದೇವಾ.
--------------
ಸಿದ್ಧರಾಮೇಶ್ವರ
ನಾನಾ ಜನ್ಮಂಗಳ ತಿರುಗಿ ಮಾನವ ಜನ್ಮಕ್ಕೆ ಬಂದು ಲಿಂಗೈಕ್ಯನಾಗಿರುವುದೇ ಚಂದ. ಶಾಸ್ತ್ರಂಗಳ ಓದಿ ಸಂಪಾದನೆಯ ಮಾಡಿ ಹೇಳಿ ಕೇಳುವ ಅಣ್ಣಗಳಿರಾ ಕೃತಯುಗದಲ್ಲಿ ಹನ್ನೆರಡು ಭಾರ ಜ್ಯೋತಿರ್ಲಿಂಗವನು ಬ್ರಹ್ಮರ್ಷಿಗಳು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿದ ಲಿಂಗವು ರವಿ ಶಶಿ ಆದಿಗಳು ಇರುವನಂತ ಸ್ಥಾವರಲಿಂಗವಾಗಿ ಸ್ಥಾಪ್ಯಗೊಂಡವು ಕಾಣಿರೊ. ತ್ರೇತಾಯುಗದಲ್ಲಿ ಲಕ್ಷ ಲಿಂಗವನು ನಮ್ಮ ರವಿಕುಲ ರಘುರಾಮರು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿದ ಲಿಂಗವು ರವಿ ಶಶಿಯಾದಿಗಳು ಇರುವನಕ ಸ್ಥಾವರಲಿಂಗವಾಗಿ ಸ್ಥಾಪ್ಯಗೊಂಡಿದ್ದವು ಕಾಣಿರೋ. ದ್ವಾಪರಯುಗದಲ್ಲಿ ಸೋಮವಂಶಿಕರು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿವ ಲಿಂಗವು ಗ್ರಾಮಕ್ಕೆ ಒಂದು ಕಲ್ಕೇಶ್ವರನಾಗಿ ರವಿ ಶಶಿಗಳಿರುವನಕ ಸ್ಥಾವರಲಿಂಗವಾಗಿ ಸ್ಥಾಪ್ಯಗೊಂಡವು ಕಾಣಿರೋ. ಕಲಿಯುಗದಲ್ಲಿ ಹುಟ್ಟಿದ ಮನುಜರು ಕೃತ, ತ್ರೇತಾ, ದ್ವಾಪರ ಇವು ಮೂರು ಯುಗದಲ್ಲಿ ಬ್ರಹ್ಮ ಕ್ಷತ್ರಿಯರು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿ, ಇದ್ದ ಲಿಂಗವನು ಅತಿಗಳೆದು ಇಷ್ಟಲಿಂಗಯೆಂದು ಅದಕ್ಕೆ ಪಾದ್ಯ ತೀರ್ಥ ಪ್ರಸಾದವನು ಅರ್ಪಿಸಿ, ಹುಟ್ಟಿದ ಮನುಜರೆಲ್ಲ ತಲೆತಲೆಗೊಂದು ಲಿಂಗವನು ಕಟ್ಟಿಕೊಂಡಿದ್ದರೇನಯ್ಯ, ಆ ಲಿಂಗಕ್ಕೆ ನಿಷ್ಕ್ರಿಯವಾಗಲಿಲ್ಲ. ಕಾರ್ಯಕ್ಕೆ ಬಾರದೆ ಅಕಾರ್ಯವಾಗಿ ಹೋಗಿತ್ತು ಕಾಣಿರೋ. ಅದು ಎಂತೆಂದರೆ : ಕೃತಯುಗದಲ್ಲಿ ಹುಟ್ಟಿದ ಮನುಜರು ಸುವರ್ಣಲಿಂಗವನು ಪೂಜೆಯ ಮಾಡಿಪ್ಪರು. ಆ ಸುವರ್ಣವು ಕಲಿಯುಗದಲ್ಲಿ ಹುಟ್ಟಿದ ಮನುಜರ ರಾಯರ ದೇವರ ಭಂಡಾರಕ್ಕೆ ಯೋಗ್ಯವಾಯಿತ್ತು ಕಾಣಿರೋ. ತ್ರೇತಾಯುಗದಲ್ಲಿ ಹುಟ್ಟಿದ ಮನುಜರು ಕಾರಪತ್ರದ ಲಿಂಗದ ಪೂಜೆಯ ಮಾಡಲು, ಆ ಕಾರಪತ್ರದ ಲಿಂಗವು ಕಲಿಯುಗದಲ್ಲಿ ಹುಟ್ಟಿದ ಮನುಜರ ರಾಯರ ದೇವರ ಭಂಡಾರಕ್ಕೆ ಯೋಗ್ಯವಾಗಿತ್ತು ಕಾಣಿರೋ. ದ್ವಾಪರಯುಗದಲ್ಲಿ ಹುಟ್ಟಿದ ಮನುಜರು ನಾಗತಾಮ್ರದ ಲಿಂಗವನು ಪೂಜೆಯ ಮಾಡಲು ಆ ನಾಗತಾಮ್ರದ ಲಿಂಗವು ಕಲಿಯುಗದಲ್ಲಿ ಹುಟ್ಟಿದ ಮನುಜರ ರಾಯರ ದೇವರ ಭಂಡಾರಕ್ಕೆ ಯೋಗ್ಯವಾಯಿತ್ತು ಕಾಣಿರೋ. ಕಲಿಯುಗದಲ್ಲಿ ಹುಟ್ಟಿದ ಮನುಜರು ಕಲ್ಲುಲಿಂಗವನು ತಮ್ಮ ಕೈಲ್ಹಿಡಿದುಕೊಂಡು ಪಂಚಮುಖದ ಪರಮೇಶ್ವರದೇವರು ಎಮ್ಮ ಕರಸ್ಥಲಕ್ಕೆ ಬಂದನೆಂದು ಬಿಂಕವನು ಹೇಳುವ ಡೊಂಕುಮನುಜರು ಕಾಯ ಅಸುವಳಿದು ನೆಲಕ್ಕೆ ಬಿದ್ದು ಹೋಗುವಾಗ ಕೈಯಲ್ಲಿ ಕಲ್ಲುಲಿಂಗವು ಭೂಮಿ ಆಸ್ತಿಯನು ಭೂಮಿ ಕೂಡಿ ಹೋಗುವಾಗ ಒಂ ನಮಃಶಿವಾಯ ಎಂಬ ಮಂತ್ರವು ಮರೆತು ಹೋಯಿತು. ಅದ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಹರಿಬ್ರಹ್ಮರಿಬ್ಬರೂ ಸ್ತ್ರೀಯರಯ್ಯಾ, ತಮ್ಮನೊಲಿದರೆ ಹಂಗಿಹರು, ಹೆಂಪೆ ಹೇಳಯ್ಯಾ. ಎನ್ನ ಹರಿಬತನಕ್ಕೆ ಹಾನಿ ಹೊದ್ದಿತೆಂದು ನಿಮ್ಮನಗಲಲಾರೆ, ಕಪಿಲಸಿದ್ಧಮಲ್ಲೇಶ್ವರಾ, ದೇವರ ದೇವಯ್ಯ.
--------------
ಸಿದ್ಧರಾಮೇಶ್ವರ
ಊರೊಳಗಣ ದೇವಾಲಯದಲ್ಲಿ ಐವರು ಹೊಲೆಯರು ಹೊಕ್ಕು, ದೇವರ ಪೂಜಿಸುತ್ತೈದಾರೆ. ಹೊಲೆಯರು ಮುಟ್ಟಿ ದೇವಾಲಯ ಹೊರಗಾಯಿತ್ತು, ದೇವರೊಳಗದೆ. ಕುಲಜರು ಹೊಲಬುದಪ್ಪಿ ಹೊಲೆ ಒಳಗಾಯಿತ್ತು, ಅರ್ಕೇಶ್ವರಲಿಂಗವನರಿದ ಕಾರಣ.
--------------
ಮಧುವಯ್ಯ
ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ ಆ ಕಲ್ಲು ಕಲ್ಲ ಮೇಲೆ ಕೆಡೆದಡೆ, ದೇವರೆತ್ತ ಹೋದರೊ ? ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕನರಕ-ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಕೃತಯುಗದೊಳು ಸುವರ್ಣದ ಲಿಂಗವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಂದೆ ತಾಯಿ ಯಾರು ? ದ್ವಾಪರದೊಳು ತಾಮ್ರದ ಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಲಿ ಕಿಲುಬುಹೊಯಿತ್ತು. ಕಲಿಯುಗದೊಳು ಕಲ್ಲ ಲಿಂಗವಾದಡೆ ಇಕ್ಕಿದ ಓಗರವನುಣ್ಣದೇಕೋ ? ಹಿಂದೊಮ್ಮೆ ನಾಲ್ಕು ಯುಗದೊಳು ಅಳಿದುಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರೆವುತ್ತಿಹೆ ? ಸಾಕ್ಷಿ : ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಇದು ಕಾರಣ ಕೂಡಲಚೆನ್ನಸಂಗಯ್ಯ ತಪ್ಪದೆ ಸ್ಥಾವರ ದೇವರೆ ಜಂಗಮ ದೇವರ ಪ್ರಸಾದಕ್ಕೆ ಯೋಗ್ಯವಾಯಿತ್ತು. ಅನಂತ ಯುಗಂಗಳೊಳಗೆ ಜಂಗಮ ದೇವರೆ ಪ್ರಾಣವಾದರಾಗಿ
--------------
ಚನ್ನಬಸವಣ್ಣ
ಲೋಕದ ಗಂಡರ ಮಹಾತ್ಮೆಯ ಹೆಂಡರರಿವರೆ? ಹಾ ಹಾ! ಅಯ್ಯಾ! ಶರೀರದೊಳಗೆ ಸಂದು ನಿಮ್ಮನಂತುಗಾಣಲಾರದಾದನು ಬೇಟಗೊಂಡು ನಿಮ್ಮನೆ ಬೇಡುವೆನಯ್ಯ. ಅಯ್ಯಾ ಎನ್ನನೆನಿಸು ಭವ ಬರಿಸಿದಡೆ ನೀನೆ ಗಂಡ ನಾನೆ ಹೆಂಡತಿ, ಕಪಿಲಸಿದ್ಧಮಲ್ಲೇಶ್ವರ, ದೇವರ ದೇವಯ್ಯ.
--------------
ಸಿದ್ಧರಾಮೇಶ್ವರ
ಅರಗಿನ ದೇಗುಲದಲ್ಲಿ ಒಂದು ಉರಿಯ ಲಿಂಗವ ಕಂಡೆ. ಮತ್ತೆ ದೇವರ ಪೂಜಿಸುವರಾರೂ ಇಲ್ಲ. ಉತ್ತರಾಪಥದ ದಶನಾಡಿಗಳಿಗೆ, ಸುತ್ತಿಮುತ್ತಿದ ಮಾಯೆ ಎತ್ತಲಿಕೆ ಹೋಯಿತ್ತು ? ಮರನೊಳಗಣ ಕಿಚ್ಚು ಮರನ ಸುಟ್ಟುದ ಕಂಡೆ ! ಗುಹೇಶ್ವರನೆಂಬ ಲಿಂಗ ಅಲ್ಲಿಯೆ ನಿಂದಿತ್ತು
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->