ಅಥವಾ
(76) (90) (24) (5) (11) (20) (1) (0) (2) (2) (23) (41) (8) (0) ಅಂ (52) ಅಃ (52) (52) (0) (9) (2) (0) (6) (0) (11) (0) (0) (0) (0) (0) (0) (0) (29) (0) (13) (8) (61) (42) (0) (44) (15) (50) (2) (4) (0) (7) (13) (7) (4) (56) (39) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಂತರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು, ಬಹಿರಂಗದಲ್ಲಿ ಹಳಿದಾಡುವರೇನಯ್ಯ ? ಬಹಿರಂಗದಲ್ಲಿ ಗುರುಲಿಂಗಜಂಗಮವ ಕಂಡೆವೆಂದು ಅಂತರಂಗದಲ್ಲಿ ಹಳಿದಾಡುವರೇನಯ್ಯ ? ಅಂತರಂಗ ಬಹಿರಂಗದಲ್ಲಿ ಸಂಶಯವಿಲ್ಲದೆ ಬಹಿರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು ಇಷ್ಟಲಿಂಗಕ್ಕೆ ಅರ್ಪಿಸಿ, ಪ್ರಾಣಲಿಂಗದಲ್ಲಿ ಕೂಡಿದ್ದೇ ಭಕ್ತಿಯೆಂಬೆನಯ್ಯ. ಅಂತರಂಗದಲ್ಲಿ ಗುರು ಲಿಂಗ ಜಂಗಮ ಪಾದೋದಕ ಪ್ರಸಾದವನರಿತು ಭಾವಲಿಂಗದಲ್ಲಿ ಕೂಡಿದ್ದೇ ಸದ್ಭಕ್ತಿಯೆಂಬೆನಯ್ಯ. ಭಕ್ತಿ ಸದ್ಭಕ್ತಿಯೆಂಬ ಭೇದವನು ಅರಿತಾತನೇ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಗ್ನಿಗಿರಿಯ ಪಟ್ಟಣದ ಚಂದ್ರಗಿರಿಯ ಪಟ್ಟಣದ ನಡುವೆ ಎರಡೆಸಳ ಸ್ಥಾವರ ಗದ್ದುಗೆಯ ಕಂಡೆನಯ್ಯ. ಆ ಗದ್ದುಗೆಯ ಮೇಲೆ ಸ್ಫಟಿಕವರ್ಣದ ಮೂರ್ತಿ ನೆಲೆಯಂಗೊಂಡಿರ್ಪನು ನೋಡಾ. ಆ ಸ್ಫಟಿಕವರ್ಣದಮೂರ್ತಿಯ ಕೂಡಿ ಅಗ್ನಿಗಿರಿಯ ಪಟ್ಟಣಮಂ ಹೊಗಲು, ಅಲ್ಲಿ ಆಚಾರಲಿಂಗದೇವರು, ಗುರುಲಿಂಗದೇವರು, ಶಿವಲಿಂಗದೇವರು ನೆಲೆಯಂಗೊಂಡಿರ್ಪರು ನೋಡಾ. ಅವರಿಗೆ ಸೂಚನೆಯ ಮುಟ್ಟಿಸಲು ಆಚಾರಲಿಂಗದೇವರು ನಾಶಿಕಾಗ್ರದಲ್ಲಿ ನೆಲೆಯಂಗೊಂಡರು. ಗುರುಲಿಂಗದೇವರು ಜಿಹ್ವಾಗ್ರದಲ್ಲಿ ನೆಲೆಯಂಗೊಂಡರು. ಶಿವಲಿಂಗದೇವರು ನೇತ್ರಸ್ವಯದಲ್ಲಿ ನೆಲೆಯಂಗೊಂಡರು. ಆ ಸ್ಫಟಿಕವರ್ಣದ ಮೂರ್ತಿಯಂ ಕೂಡಿ ಚಂದ್ರಗಿರಿಯ ಪಟ್ಟಣಮಂ ಪೊಗಲು ಅಲ್ಲಿ ಜಂಗಮಲಿಂಗದೇವರು, ಪ್ರಸಾದಲಿಂಗದೇವರು, ಮಹಾಲಿಂಗದೇವರು ನೆಲೆಯಂಗೊಂಡಿರ್ಪರು ನೋಡಾ. ಅವರಿಂಗೆ ಸೂಚನೆಯಂ ಮುಟ್ಟಿಸಲು, ಜಂಗಮಲಿಂಗದೇವರು ತ್ವಕ್ಕಿನ ಸ್ವಯದಲ್ಲಿ ನೆಲೆಯಂಗೊಂಡಿರ್ಪರು. ಪ್ರಸಾದಲಿಂಗದೇವರು ಶ್ರೋತ್ರಸ್ವಯದಲ್ಲಿ ನೆಲೆಯಂಗೊಂಡಿರ್ಪರು. ಮಹಾಲಿಂಗದೇವರು ಭಾವಸ್ವಯದಲ್ಲಿ ನೆಲೆಯಂಗೊಂಡಿರ್ಪರು. ಆ ಸ್ಫಟಿಕವರ್ಣದ ಮೂರ್ತಿಯಂ ಕೂಡಿ, ಅಗ್ನಿಗಿರಿಯಪಟ್ಟಣ ಚಂದ್ರಗಿರಿಯ ಪಟ್ಟಣದ ಮುಂದಳ ದಿಕ್ಕಿನಲ್ಲಿ ಸಾವಿರೆಸಳಮಂಟಪ ಕಂಡೆನಯ್ಯ. ಆ ಮಂಟಪದೊಳಗೆ ಮಹಾಜ್ಞಾನಪ್ರಕಾಶವು ಹೊಳೆವುತಿರ್ಪುದು ನೋಡಾ. ಆ ಬೆಳಗಿನೊಳು ಕೂಡಿ ತಾನುತಾನಾಗಿರ್ಪನಯ್ಯ ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನು.
--------------
ಜಕ್ಕಣಯ್ಯ
ಅಂತರಂಗ ಬಹಿರಂಗ ಶುದ್ಧನಾದ ಶರಣನ ದಿಟಪುಟವ ನೋಡಿರಯ್ಯ. ಅಂತಪ್ಪ ಶರಣನ ಕಂಡು ನಮೋ ನಮೋ ಎನುತಿರ್ದೆಯಯ್ಯಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತಿರ್ದ ಬ್ರಹ್ಮದ ಅಂಗದಲ್ಲಿ ಜ್ಞಾನಚಿತ್ತು ಉದಯಿಸಿತ್ತು ನೋಡಾ. ಆ ಜ್ಞಾನಚಿತ್ತುವಿನಿಂದ ಪರಶಿವರು ಹುಟ್ಟಿದರು ನೋಡಾ. ಆ ಪರಶಿವರು ಹುಟ್ಟಿದಲ್ಲಿಗೆ ಸದಾಶಿವರು ಹುಟ್ಟಿದರು. ಆ ಸದಾಶಿವರು ಹುಟ್ಟಿದಲ್ಲಿಗೆ ಈಶ್ವರರು ಹುಟ್ಟಿದರು. ಆ ಈಶ್ವರರು ಹುಟ್ಟಿದಲ್ಲಿಗೆ ರುದ್ರರು ಹುಟ್ಟಿದರು. ಆ ರುದ್ರರು ಹುಟ್ಟಿದಲ್ಲಿಗೆ ವಿಷ್ಣುಗಳು ಹುಟ್ಟಿದರು. ಆ ವಿಷ್ಣುಗಳು ಹುಟ್ಟಿದಲ್ಲಿಗೆ ಬ್ರಹ್ಮರು ಹುಟ್ಟಿದರು. ಆ ಬ್ರಹ್ಮರು ಹುಟ್ಟಿದಲ್ಲಿಗೆ ಲೋಕಾದಿಲೋಕಂಗಳು ಸಚರಾಚರಂಗಳು ಹುಟ್ಟಿದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಷ್ಟ ಮಂದಿಗಳೊಳಗೆ ಪುಟ್ಟಿರ್ದ ಈತನಾರಯ್ಯ? ಕಟ್ಟಳೆಯವಿಡಿದು, ಹೊಟ್ಟು ಹಾರಿ, ಗಟ್ಟಿ ಉಳಿದಿತ್ತು ನೋಡಾ. ಬಟ್ಟಬಯಲನೇರಿ, ಸ್ಫಟಿಕಜ್ಯೋತಿಯ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಷ್ಟದಳದ ಮೇಲೆ ನಲಿದಾಡುವ ಹಂಸನ ಜ್ಞಾನದೃಷ್ಟಿಯ ಮೇಲೆ ನಿಲಿಸಿ, ಬಟ್ಟಬಯಲ ನೋಡಿ ದೃಷ್ಟನಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗದೊಳಗೊಂದು ಮಂಗಳದ ಹಕ್ಕಿ ಕುಳಿತಿಪ್ಪುದ ಕಂಡೆನಯ್ಯ. ಆ ಹಕ್ಕಿಯ ಹಿಡಿದು ಹೋಗದ ಮುನ್ನ ಅದು ಗಗನಕ್ಕೆ ಹಾರಿತ್ತು ನೋಡಾ! ಹಕ್ಕಿ ಹೋಯಿತ್ತು ಲಿಂಗದ ಗುಡಿಗೆ. ಮತ್ತೆ ಕಂಡನು ಒಬ್ಬ ತಳವಾರನು. ಆ ತಳವಾರನು ಗದೆಯ ತಕ್ಕೊಂಡು ಇಡಲೊಡನೆ ಮಂಗಳನೆಂಬ ಹಕ್ಕಿ ಬಿತ್ತು ನೋಡಾ! ಇದ ನೀವಾರಾದಡೆ ಹೇಳಿರಯ್ಯ, ನಾನಾದರೆ ಅರಿಯೆನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಹಂಕಾರಗಳಿಲ್ಲದಂದು, ಹಮ್ಮು ಬಿಮ್ಮುಗಳಿಲ್ಲದಂದು, ಸತ್ವ ರಜ ತಮಗಳಿಲ್ಲದಂದು, ಅಂತಃಕರಣಚತುಷ್ಟಯಂಗಳಿಲ್ಲದಂದು, ಪಂಚೇಂದ್ರಿಯಂಗಳಿಲ್ಲದಂದು, ಅರಿಷಡ್ವರ್ಗಂಗಳಿಲ್ಲದಂದು, ಸಪ್ತವ್ಯಸನಂಗಳಿಲ್ಲದಂದು, ಅಷ್ಟಮದಂಗಳಿಲ್ಲದಂದು, ದಶವಾಯುಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ನಿರುಪಮ ಮಹಾಘನ ಅಘಟಿತಘಟಿತ ಅಪರಂಪರ ವಿಶ್ವಂಭರಿತ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತರಂಗದ ಬೆಳಗಿನೊಳು ನಿಂತಾತನೆ ನಿರ್ಮಳಜ್ಞಾನಿ ನೋಡಾ. ಆ ನಿರ್ಮಳಜ್ಞಾನಿಯ ಸಂಗದಿಂದ ಅಗಮ್ಯ ಅಗೋಚರ ಅಘಟಿತ ಅಪ್ರಮಾಣ ಲಿಂಗವು ತೋರಲುಪಟ್ಟಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತರಂಗದ ಸುಳುವಿನ ಭೇದವ ಚಿತ್ತವೆಂಬ ಹಸ್ತದಲ್ಲಿ ಹಿಡಿದು, ಈಡಾಪಿಂಗಳನಾಳದಲ್ಲಿ ಸುಷಮ್ನಸ್ವರವ ಬಲಿದು ಶಾಂತಿಸಜ್ಜನಿತನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಗಮ್ಯ ಅಗೋಚರ ಅಪ್ರಮಾಣಲಿಂಗದಲ್ಲಿ ಲಿಂಗಸಂಗಿಯಾದ ಮಹಾಶರಣರ ಪಾದವ ಹಿಡಿದು ಆನು ಬದುಕಿದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವೆಂಬ ಗದ್ದುಗೆಯ ಮೇಲೆ ಸಂಗಮೇಶ್ವರನೆಂಬ ಲಿಂಗವ ಕಂಡೆನಯ್ಯ. ಆ ಲಿಂಗದ ಸುಳುವಿನಲ್ಲಿ ಮೂವರ ಕಂಡೆನಯ್ಯ. ಒಬ್ಬ ಸತಿಯಳು ಇಪ್ಪತ್ತೈದು ಗ್ರಾಮಂಗಳ ಮೀರಿ ಸಂಗಮೇಶ್ವರನೆಂಬ ಲಿಂಗವ ಪೂಜಿಸುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅನಾದಿಲಿಂಗವು ಕರಕ್ಕೆ ಬಂದಿತು ನೋಡಾ. ಕರಕ್ಕೆ ಬಂದ ಕಾರಣ, ಮನಸ್ಥಲಕ್ಕೆ ಅರುಹುದೋರಿತ್ತು ನೋಡಾ. ಆ ಮನಸ್ಥಲಕ್ಕೆ ಅರುಹುದೋರಿದ ಕಾರಣ ಪರಸ್ಥಲಕ್ಕೆ ಬೆರಗಾಯಿತ್ತು ನೋಡಾ. ಆ ಪರಸ್ಥಲಕ್ಕೆ ಅರುಹುದೋರಿದ ಕಾರಣ ಮನಸ್ಥಲಕ್ಕೆ ಹಂಗಿಲ್ಲ ನೋಡಾ. ಆ ಮನಸ್ಥಲಕ್ಕೆ ಹಂಗಿಲ್ಲವಾದ ಕಾರಣ ಕರಸ್ಥಲದ ಲಿಂಗವು ಕೈಸಾರಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಕ್ಕೆ ಆರುದಿನವೆಂಬುದ ನೀನು ಬಲ್ಲೆಯಯ್ಯಾ? ಲಿಂಗಕ್ಕೆ ಮೂರು ದಿನವೆಂಬುದ ನೀನು ಬಲ್ಲೆಯಯ್ಯಾ? ಸಂಬಂಧಕ್ಕೆ ಒಂದು ದಿನವೆಂಬುದ ನೀನು ಬಲ್ಲೆಯಯ್ಯಾ? ನಿನ್ನಿಂದ ಸಕಲ ಜಗಂಗಳು ಆದುದ ನೀನೇ ಬಲ್ಲೆಯಯ್ಯಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗವಿಲ್ಲದ ನಾರಿಯು ಸಂಗವಿಲ್ಲದ ಪುರುಷನ ನೆರೆದು ಸಕಲ ಜಗಂಗಳ ಗಬ್ರ್ಥೀಕರಿಸಿಕೊಂಡು, ಪರವಶದಲ್ಲಿ ನಿಂದು, ಪರಕೆಪರವಾದ ಸೋಜಿಗವ ನಾನೇನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗದೊಳಹೊರಗಿಪ್ಪ ಲಿಂಗವನು ಅರಿತು ಆ ಲಿಂಗದಲ್ಲಿ ಅಂಗವನಳಿದು ಲಿಂಗಸಂಗಿಯಾಗಿ ಇರಬಲ್ಲಡೆ ಆತನೆ ನಿರಂಜನ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಮಲಬ್ರಹ್ಮದಲ್ಲಿ ಸಕಲ ಬ್ರಹ್ಮಾಂಡಂಗಳು ಅಡಗಿಪ್ಪವಯ್ಯ. ಆ ಸಕಲ ಬ್ರಹ್ಮಾಂಡಕೆ ಒಂದೇ ಲಿಂಗ ನೋಡಾ! ಆ ಲಿಂಗವನು ಮಹಾಜ್ಞಾನದಿಂದ ತಿಳಿದು ಪರಿಣಾಮಿಸಬಲ್ಲ ಹಿರಿಯರ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಲಿಂಗ ಸಮರಸವಾದಲ್ಲದೆ, ಸಂಗವ ಮಾಡನಯ್ಯ ನಿಮ್ಮ ಶರಣನು. ಶ್ರೋತ್ರಲಿಂಗ ಸಮರಸವಾದಲ್ಲದೆ, ಶಬ್ದಾದಿಗಳ ಕೇಳನಯ್ಯ ನಿಮ್ಮ ಶರಣನು. ತ್ವಕ್ಕುಲಿಂಗ ಸಮರಸವಾದಲ್ಲದೆ, ಸ್ಪರುಶನಾದಿಗಳ ಮಾಡನಯ್ಯ ನಿಮ್ಮ ಶರಣನು. ನೇತ್ರಲಿಂಗ ಸಮರಸವಾದಲ್ಲದೆ, ರೂಪಾದಿಗಳ ನೋಡನಯ್ಯ ನಿಮ್ಮ ಶರಣನು. ಜಿಹ್ವೆಲಿಂಗ ಸಮರಸವಾದಲ್ಲದೆ, ಷಡುರುಚಿಯ ಕೇಳನಯ್ಯ ನಿಮ್ಮ ಶರಣನು. ಪ್ರಾಣಲಿಂಗ ಸಮರಸವಾದಲ್ಲದೆ, ಗಂಧವ ಕೇಳನಯ್ಯ ನಿಮ್ಮ ಶರಣನು. ಇದು ಕಾರಣ, ಇಂತಪ್ಪ ಭೇದವನರಿತು, ಮಹಾಲಿಂಗದ ಬೆಳಗಿನೊಳು ಕೂಡಿ ಪರಿಪೂರ್ಣತ್ವದಿಂದ ಪರಾಪರಂ ನಾಸ್ತಿಯಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂತರಂಗದಲ್ಲಿ ವಸ್ತುವ ಕಂಡೆನಯ್ಯ. ಬಹಿರಂಗದಲ್ಲಿ ಆಚಾರವಿರಬೇಕಯ್ಯ. ಆ ಆಚಾರವಿಡಿದು ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಬೇಕಯ್ಯ. ಆ ಪಾದೋದಕ ಪ್ರಸಾದವನರಿತು ಆ ವಸ್ತುವಿನಲ್ಲಿ ಕೂಡಬಲ್ಲಾತನೆ ಒಳಗೆ ಲಿಂಗಮಯ, ಹೊರಗೆ ಲಿಂಗಮಯ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಖಿಳಕೋಟಿ ಬ್ರಹ್ಮಾಂಡಗಳಲ್ಲಿ ಪರಾತ್ಪರೈಕ್ಯವಾದ ಲಿಂಗವು ತಾನೊಂದೆ ನೋಡಿರಯ್ಯ. ಆ ಲಿಂಗವನು ತನ್ಮಾರ್ಗದಿಂದ ಕಂಡು ನಿಶ್ಚೈಸಿ ಆ ಲಿಂಗದಲ್ಲಿ ಕೂಡಿ, ಪರಿಪೂರ್ಣವಾದ ಮಹಾಶರಣಂಗೆ ಇಹಲೊಕವೆಂದಡೇನಯ್ಯ? ಪರಲೋಕವೆಂದಡೇನಯ್ಯ? ಇಹಪರಗಳಿಂದತ್ತತ್ತ ತಾನು ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅನಾದಿ ಸದ್ಗುರುವೆ, ಎನ್ನ ಕರ್ಮದೋಷಂಗಳ ಪರಿಹಾರವಂ ಮಾಡಿ ನಿರ್ಮಲವ ತೋರಿದೆಯಯ್ಯ. ಆ ನಿರ್ಮಲದಿಂದ ಪರಂಜ್ಯೋತಿಯೆಂಬ ಲಿಂಗವ ನೋಡಿ ಪರಕ್ಕೆ ಪರವಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗನೆಯರು ಆರುಮಂದಿ, ಸಂಗಸಮರಸದಿಂದ ಹಿಂಗದೆ ಲಿಂಗಾರಾಧನೆಯಂ ಮಾಡಿ, ಮಂಗಳಪ್ರಭೆಯಲ್ಲಿ ನಿಂದು, ಅತ್ತತ್ತಲೆ ನಿಸ್ಸಂಗ ನಿರಾಳ ತಾನುತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಡಿಯ ರಾಜಬೀದಿಯಲ್ಲಿ ಶಿಶುವಿಪ್ಪುದ ಕಂಡೆನಯ್ಯ. ಆ ಶಿಶುವಿಂಗೆ ಮೂವರು ಮಕ್ಕಳು ಹುಟ್ಟಿದರು ನೋಡಾ ! ಈ ಮಕ್ಕಳ ಕೈ ಬಾಯೊಳಗೆ ಮೂರು ಲೋಕಂಗಳೆಲ್ಲ ನಚ್ಚುಮಚ್ಚಾಗಿಪ್ಪವು ನೋಡಾ ! ಅದು ಕಾರಣ, ಆದಿಯಲ್ಲಿ ಗುರುನಿರೂಪಣವಂ ಪಡೆದು ಚಿತ್ತಾಜ್ಞೆಪ್ರಭೆದೋರಲು ಮೂರು ನಚ್ಚುಮಚ್ಚುಗಳು ಕರಗಿ ಮೂರು ಮಕ್ಕಳು ಬಿಟ್ಟುಹೋದವು ನೋಡಾ ! ಆ ಶಿಶುವಿಂಗೆ ನಿರಾಳವೆಂಬ ದಾರಿಯ ತೋರಿ, ಊರಿಂಗೆ ಹೋಗಲೊಡನೆ ಅಲ್ಲಿ ಮಂಜಿನ ಕೊಡದ ಅಗ್ಗವಣಿಯ ಕಂಡು ಲಿಂಗಕೆ ಮಜ್ಜನವ ನೀಡಿ, ನಿರಾವಲಂಬಲಿಂಗದೊಳು ಬೆರೆದು ನಿಃಪ್ರಿಯವೆನಿಸಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅರುವಿನ ಮನೆಯೊಳಗೆ ಕುರುವಾದ ಸೂಳಿಯು ಐವರ ಕೂಡಿಕೊಂಡು ಒಂದು ಶಿವಾಲಯಕ್ಕೆ ಹೋಗಿ, ಲಿಂಗಾರ್ಚನೆಯ ಮಾಡಿ ನಿಷ್ಪತಿಯಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗಪಟ್ಟಣದೊಳಗೆ ಭೃಂಗನಾಟ್ಯವನಾಡಿ, ಸಂಗೀತ ಸ್ವರಂಗಳ ತಿಳಿದು, ಸಂಗಸುಖದೊಳುಳಿದು, ನಿಸ್ಸಂಗವಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ

ಇನ್ನಷ್ಟು ...