ಅಥವಾ

ಒಟ್ಟು 34 ಕಡೆಗಳಲ್ಲಿ , 15 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ಶ್ರೀಗುರುಲಿಂಗಜಂಗಮ ಕರುಣ ಕಟಾಕ್ಷೆಯಿಂದ ಶ್ರುತಿ ಗುರು ಶ್ವಾನುಭಾವವಿಡಿದು ಹಿಡಿದಂಥ ಸನ್ಮಾರ್ಗಾಚಾರಕ್ರಿಯೆಗಳ ಅಪಮೃತ್ಯು ಬಂದು ತಟ್ಟಿ ಪ್ರಾಣತ್ಯಾಗವ ಮಾಡಿದಡು ಅಂಜಿ ಅಳುಕದೆ, ಪರಮ ಪತಿವ್ರತತ್ವದಿಂದ ಹಿಂದು ಮುಂದಣ ಪುಣ್ಯಪಾಪವನೆಣಿಸದೆ, ಇಂತು ಶ್ರೀಗುರುವಾಕ್ಯವ ನಿಜನೈಷ್ಠಯಿಂದರಿದು, ನಿಜವೀರಶೈವ ಸದ್ಭಕ್ತಾಚಾರಲಿಂಗಮುಖದಿಂದ ಬಂದ ಸ್ವಪಾಕವಾದಡು ಸರಿಯೆ, ಷಣ್ಮತದಿಂದ ಧನ-ಧಾನ್ಯರೂಪಿನಿಂದ ಬಂದ ಪದಾರ್ಥವಾದಡು ಸರಿಯೆ, ಭಕ್ತಾಶ್ರಯದಲ್ಲಿ ಸ್ವಪಾಕವ ಮಾಡಿ, ಸಂಬಂಧಾಚರಣೆಗಳಿಂದ ಪವಿತ್ರಸ್ವರೂಪ ಪಾದೋದಕ ಪ್ರಸಾದವೆನಿಸಿ, ನಿರ್ವಂಚಕತ್ವದಿಂದ ಸಂಚಲಚಿತ್ತವನಳಿದು, ಮಂತ್ರಸ್ಮರಣೆಯಿಂದ ಸರ್ವಾಚಾರ ಸಂಪತ್ತಿನಾಚರಣೆಯನೊಳಕೊಂಡು, ಸಮಸ್ತಲೋಕ ಪಾವನಮೂರ್ತಿ ನಿಷ್ಕಲ ಪರಶಿವಲಿಂಗಜಂಗಮಕ್ಕೆ ಕೊಟ್ಟುಕೊಂಬ ಸದ್ಭಕ್ತ ಜಂಗಮದ ಚರಣಕಮಲಧೂಳನವೆ ದ್ವಿತೀಯ ಕೈಲಾಸ ಶಿವಮಂದಿರವೆಂದು ಹಿಂದು-ಮುಂದಣ ಆಶೆ-ಆಮಿಷದ ಭ್ರಾಂತು-ಭ್ರಮೆಗಳನುಳಿದು, ಧ್ಯಾನ-ಮೌನ-ನೇಮ-ನಿತ್ಯ-ಸತ್ಯ-ಸದ್ಭಾವವೆಂಬ ಷಡ್ಗುಣೈಶ್ವರ ಸಂಪದವ ನಿಷ್ಕಲಪರತತ್ವಲಿಂಗದಿಂ ಪಡದು, ಆ ಲಿಂಗದೊಡನೆ ಭೋಗಿಸಿ, ನಿಷ್ಕಲ ಪರತತ್ವಮೂರ್ತಿ ತಾನಾದ ನಿಜಮೋಕ್ಷದಿರವೆ ಸದ್ಯೋನ್ಮುಕ್ತಿದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
``ದಂಡಶ್ಚ ತಾರಕಾಕಾರೋ ಭವತಿ | ಓಂ ಸಾರ್ವತ್ಮಾ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ಪಂಚದಶಮೇ ಪ್ರಣವಾಂಶಕೇ ||'' ಅಕಾರವೆಂಬ ಪ್ರಣವದಲ್ಲಿ- ``ಕುಂಡಲಶ್ಚ ಅರ್ಧಚಂದ್ರೋ ಭವತಿ | ಓಂ ಪರಮಾತ್ಮಾ ದೇವತಾ | ಅಕಾರೇ ಚ ಲಯಂ ಪ್ರಾಪ್ತೇ ಷೋಡಶೇ ಪ್ರಣವಾಂಶಕೇ ||'' ಉಕಾರವೆಂಬ ಪ್ರಣವದಲ್ಲಿ- ``ಜ್ಯೋತಿಶ್ಚ ದರ್ಪಣಾಕಾರೋ ಭವತಿ | ಓಂ ಶಿವಾತ್ಮಾ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ಸಪ್ತದಶ ಪ್ರಣವಾಂಶಕೇ ||'' ``ಮಕಾರೇ ಚ ಅಕಾರೇಚ ಉಕಾರೇಚ ನಿರಾಮಯಂ | ಇದಮೇಕಂ ಸಮುತ್ಪನ್ನಂ ಓಂ ಇತಿ ಜ್ಯೋತಿರೂಪಕಂ || ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ | ತೃತೀಯಂ ಕುಂಡಲಾಕಾರಂ ಚತುರ್ಥಂ ಅರ್ಧಚಂದ್ರಕಂ || ಪಂಚಮಂ ದರ್ಪಣಾಕಾರಂ ಷಷ್ಠಂ ಜ್ಯೋತಿರೂಪಕಂ | ಇತಿ ಪ್ರಣವಃ ಜ್ಞೇಯಂ ಏತದ್ಗೋಪ್ಯಂ ವರಾನನೇ || ಓಂಕಾರ ಪ್ರಭವೋ ವೇದಃ ಓಂಕಾರಂ ಪ್ರಭವ ಸ್ವರಃ | ಓಂಕಾರಪ್ರಭವಾ ಭೂಃ ಓಂಕಾರಪ್ರಭವಾ ಭುವಃ || ಓಂಕಾರಪ್ರಭವಾ ಸ್ವಹಃ ಓಂಕಾರ ಪ್ರಭವಾ ಮಹಃ | ಓಂಕಾರಪ್ರಭವೋ ಜನಃ ಓಂಕಾರ ಪ್ರಭವಂ ತಪಃ || ಓಂಕಾರಪ್ರಭವಂ ಸತ್ಯಂ ಓಂಕಾರ ಪ್ರಭವೋ ರವಿ ಃ | ಓಂಕಾರಪ್ರಭವಸ್ಸರ್ವಂ ತ್ರೈಲೋಕ್ಯಂ ಸಚರಾಚರಂ || ಸರ್ವವ್ಯಾಪಕಮೋಂಕಾರಂ ಮಂತ್ರಸ್ಯಾತ್ರ ನ ಸಂಭವೇತ್ | ಪ್ರಣವೋಹಿ ಪರಬ್ರಹ್ಮ ಪ್ರಣವಃ ಪರಮಂ ಪದಂ || ಓಂಕಾರಂ ನಾದರೂಪಂ ಚ ಓಂಕಾರಂ ಬಿಂದುರೂಪಕಂ | ಓಂಕಾರಂ ಚ ಕಲಾರೂಪಂ ಓಂಕಾರಂ ಮಂತ್ರರೂಪಕಂ || ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ | ಇತಿ ಪ್ರಣವಃ ವಿಜ್ಞೇಯಃ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ ಜ್ಯೋತಿಸ್ವರೂಪದಲ್ಲಿ- ಹೃದಯಮಂತ್ರೋ ಭವತಿ | ಓಂ ಪರಮಾತ್ಮಾ ದೇವತಾ | ಜ್ಯೋತಿರೂಪೋ ಲಯಂ ಪ್ರಾಪ್ತೆ ೀ ಪ್ರಥಮಂ ಪ್ರಣವಾಂಶಕೇ || ಆ ಪ್ರಣವದ ದರ್ಪಣಾಕಾರದಲ್ಲಿ- ``ಶಿರೋಮಂತ್ರೋ ಭವತಿ | ಓಂ ಯಕಾರಾತ್ಮಾ ದೇವತಾ | ದರ್ಪಣೇ ಚ ಲಯಂ ಪ್ರಾಪ್ತೇ ದ್ವಿತೀಯಂ ಪ್ರಣವಾಂಶಕೇ ||'' ಆ ಪ್ರಣವದ ಅರ್ಧಚಂದ್ರಕದಲ್ಲಿ- ``ಶಿಖಾಮಂತ್ರೋ ಭವತಿ | ಓಂ ಅಕಾರಾತ್ಮಾ ದೇವತಾ | ಅರ್ಧಚಂದ್ರೇ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಕೇ ||'' ಆ ಪ್ರಣವದ ಕುಂಡಲಾಕಾರದಲ್ಲಿ- ``ಕವಚಮಂತ್ರೋ ಭವತಿ | ಓಂ ಶಿಕಾರಾತ್ಮಾ ದೇವತಾ | ಕುಂಡಲೇ ಚ ಲಯಂ ಪ್ರಾಪ್ತೇ ಚತುರ್ಥಂ ಪ್ರಣವಾಂಶಕೇ ||'' ಆ ಪ್ರಣವದ ದಂಡಸ್ವರೂಪದಲ್ಲಿ- ``ನೇತ್ರಮಂತ್ರೋ ಭವತಿ | ಓಂ ಮಕಾರಾತ್ಮಾ ದೇವತಾ | ದಂಡರೂಪೇ ಚ ಲಯಂ ಪ್ರಾಪ್ತೇ ಪಂಚಮಂ ಪ್ರಣವಾಂಶಕೇ ||'' ಆ ಪ್ರಣವದ ತಾರಕಸ್ವರೂಪದಲ್ಲಿ- ``ಅಸ್ತ್ರಮಂತ್ರೋ ಭವತಿ | ಓಂ ನಕಾರಾತ್ಮಾ ದೇವತಾ | ತಾರಕೇ ಚ ಲಯಂ ಪ್ರಾಪ್ತೇ ಷಷ್ಠಮಂ ಪ್ರಣವಾಂಶಕೇ ||'' ಇಂತೆಂದುದು ಶ್ರುತಿ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ದ್ರವ್ಯರೂಪ ರೂಪಿಸುವೆ ಅರ್ಪಿತಕ್ಕೆಂದು ಅರ್ಪಿತರೂಪ ರೂಪಿಸುವೆ ಪ್ರಸಾದಕ್ಕೆಂದು, ಪ್ರಸಾದರೂಪ ರೂಪಿಸುವೆ ಕಾಯಕ್ಕೆಂದು, ಪ್ರಥಮೇ ಯೋಜಯೇದ್ದ್ರವ್ಯಂ ದ್ವಿತೀಯಂ ಅರ್ಪಿತಂ ತಥಾ ತದರ್ಥಂ ತು ಶರೀರಾರ್ಥಂ ಶರೀರಂ ಪ್ರಾಣಕಾರಣಂ ಎಂದುದಾಗಿ ಕಾಯರೂಪ ರೂಪಿಸುವೆ ಪ್ರಾಣಕ್ಕೆಂದು ಪ್ರಾಣರೂಪ ರೂಪಿಸುವೆ ಕೂಡಲಚೆನ್ನಸಂಗಯ್ಯಗೆಂದು.
--------------
ಚನ್ನಬಸವಣ್ಣ
ಇನ್ನು ಪ್ರಥಮಲಿಂಗ ದ್ವಿತೀಯಲಿಂಗ ತೃತೀಯಲಿಂಗದಲ್ಲಿ ಸಮುದ್ಭವವಾದ, ಪ್ರಥಮ ದ್ವಿತೀಯ ತೃತೀಯ ಪ್ರಸಾದದ ವಿವರ ಅದೆಂತೆಂದಡೆ : ಪ್ರಥಮಲಿಂಗದಲ್ಲಿ ಶುದ್ಧ , ದ್ವಿತೀಯಲಿಂಗದಲ್ಲಿ ಸಿದ್ಧ , ತೃತೀಯಲಿಂಗದಲ್ಲಿ ಪ್ರಸಿದ್ಧ. ಶುದ್ಧ ಗುರುಪ್ರಸಾದ, ಸಿದ್ಧ ಲಿಂಗಪ್ರಸಾದ, ಪ್ರಸಿದ್ಧ ಜಂಗಮಪ್ರಸಾದ, ಶಿವಜ್ಞಾನವೇ ಮಹಾಪ್ರಸಾದ -ಇಂತು ಚತುರ್ವಿಧ ಪ್ರಸಾದ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ವಿಭೂತಿಸ್ಥಲವದೆಂತೆಂದಡೆ : ಶ್ರೀ ವಿಭೂತಿಯು ಮೊದಲಲ್ಲಿ ಗೂಢನಿರ್ನಾಮವಾಗಿದ್ದಿತ್ತು. ಎರಡನೆಯಲ್ಲಿ ಜ್ಞಾನಸ್ವರೂಪವಾಗಿದ್ದುದು, ಮೂರನೆಯಲ್ಲಿ ಜ್ಞಾನವಹನವಾಗಿದ್ದುದು. ನಾಲ್ಕನೆಯಲ್ಲಿ ಭಸ್ಮವಾಗಿ ಧರಿಸಿದರು ಶ್ರೀ ವಿಭೂತಿಯ. ಇದಕ್ಕೆ ಈಶ್ವರ ಉವಾಚ : ``ಪ್ರಥಮಂ ಗೂಢನಿರ್ನಾಮಂ ದ್ವಿತೀಯಂ ಚಿತ್ಸ್ವರೂಪಕಂ | ತೃತೀಯಂ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ || ಅನಾದಿ ಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ | ಚಿದಂಗಂ ವೃಷಭಾಕಾರಂ ಚಿದ್ಭಸ್ಮಂ ಲಿಂಗಧಾರಣಂ ||'' ಇಂತೆಂದುದಾಗಿ, ಈ ಮಹಾಭಸ್ಮಕ್ಕೆ ನಮಸ್ಕಾರ ನೋಡಾ. ``ಭಸ್ಮ ಜ್ಯೋತಿಸ್ವರೂಪಾಯ ಶಿವಾಯ ಪರಮಾತ್ಮನೇ | ಷಟ್ತ್ರಿಂಶತತ್ವಬೀಜಾಯ ನಮಃ ಶಾಂತಾಯ ತೇಜಸೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅನಾದಿಶಾಶ್ವತಂ ನಿತ್ಯಂ ಚೈತನ್ಯಂ ಚಿತ್‍ಸ್ವರೂಪಕಂ ಚಿದಂಗಂ ವೃಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ ಪ್ರಥಮಂ ಗೂಢನಿರ್ನಾಮ ದ್ವಿತೀಯಂ ಚಿತ್ಸ್ವರೂಪಕಂ ತೃತೀಯ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ ರೋಮೇ ರೋಮೇ ಚ ಲಿಂಗಂ ತು ವಿಭೂತಿಧೂನಾದ್ಭವೇತ್ ಎಂದುದಾಗಿ, ಬಸವ ಬಸವಾ ಎನುತಿಪ್ಪವರೆಲ್ಲರು ಬಸವನ ಘನವನಾರೂ ಅರಿಯರಲ್ಲಾ. ಅನಾದಿಪರಶಿವನಲ್ಲಿ ಅಂತರ್ಗತಮಾಗಿರ್ದ ಮಹಾಪ್ರಕಾಶವೇ ಬಹಿಷ್ಕರಿಸಿ ಚಿತ್ತು ಎನಿಸಿತ್ತು. ಆ ಚಿತ್ತು ಚಿದಂಗಬಸವ. ಆ ಚಿದಂಗಬಸವನಿಂದುದಯಿಸಿದ ಚಿದ್ವಿಭೂತಿಯನೊಲಿದು ಧರಿಸಿದ ಶರಣರೆಲ್ಲರೂ ಜ್ಯೋತಿರ್ಮಯಲಿಂಗವಪ್ಪದು ತಪ್ಪುದು ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಜಗತ್ರಯದ ಹೊ[ಲೆ]ಯನೆಲ್ಲವನು ಉದಕ ಒಳಕೊಂಬುವುದು. ಉದಕದ ಪೂರ್ವಾಶ್ರಯವ ಕಳೆವಡಾರಳವಲ್ಲ. ಅದೆಂತೆಂದಡೆ; ಯದಾ ಪೃಥ್ವೀಶ್ಮಶಾನಂ ಚ ತದಾ ಜಲಂ ನಿರ್ಮಲಿನಕಂ ಮಹಾಲಿಂಗಂ ತು ಪೂಜಾನಾಂ ವಿಶೇಷಂ ಪಾಕಂ ಭವೇತ್ ಎಂದುದಾಗಿ. ಅದಕ್ಕೆ ಮತ್ತೆಯು; ಪ್ರಥಮಂ ಮಾಂಸತೋಯಾನಾಂ ದ್ವಿತೀಯಂ ಮಾಂಸಗೋರಸಃ ತೃತೀಯಂ ಮಾಂಸನಾರೀಣಾಂ ಕಸ್ಯ ಶೀಲಂ ವಿಧೀಯತೇ ಎಂದುದಾಗಿ, ಯಥಾ ಉದಕದಿಂದಲಿ ಅಗ್ನಿಯಿಂದಲಿ ಪಾಕವಾದ ದ್ರವ್ಯಪದಾರ್ಥಂಗಳೆಲ್ಲವು ಜೀವಮಯವೆಂದು ಹೇಳುತಿರ್ದವಾಗಿ, ಆ ದೋಷದಿಂದಲಾದ ಭೋಜನವನು ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ; ಭೂಮಿದ್ರ್ರವ್ಯಂ ಯಥಾ ಮಾಂಸಂ ಪ್ರಾಣಿದ್ರವ್ಯಂ ಯಥಾ ಮಧು ಸರ್ವಭೂತಮಯಂ ಜೀವಂ ಜೀವಂ ಜೀವೇನ ಭಕ್ಷಿತಂ ಎಂದುದಾಗಿ ಇಂಥ ಉದಕದ ಪೂರ್ವಾಶ್ರಯವು, ಬೋನದ ಪೂರ್ವಾಶ್ರಯವು, ಹೇಗೆ ಹೋಹುದಯ್ಯಾ ಎಂದಡೆ: ಉದಕದ ಪೂರ್ವಾಶ್ರಯವು ಜಂಗಮದ ಪಾದತೀರ್ಥ ಮುಖದಿಂದ ಹೋಯಿತ್ತು, ಬೋನದ ಪೂರ್ವಾಶ್ರಯವು ಜಂಗಮದ ಪ್ರಸಾದದ ಮುಖದಿಂದ ಹೊಯಿತ್ತು. ಇದು ಕಾರಣ, ಈ ವರ್ಮ ಸಕೀಲವು ಪ್ರಭುದೇವರ ವಳಿ ಬಸವಣ್ಣನ ವಂಶಕ್ಕಲ್ಲದೆ ಮತ್ತಾರಿಗೂ ಅಳವಡದು ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಹೆಸರಿಡಬಾದ ಲಿಂಗವ ಹೆಸರಿಟ್ಟು ಎನ್ನ ಕರಸ್ಥಲಕ್ಕೆ ತಂದು ಕರತಳಾಮಳಕದಂತೆ ಮಾಡಿ ಎನ್ನ ಕರಸ್ಥಲಕ್ಕೆ ಕ್ರಿಯಾಲಿಂಗವ ಕೊಟ್ಟ. ಶ್ರೀಗುರು ಚೆನ್ನ ಬಸವಣ್ಣ ಹೆಸರಿಟ್ಟ ಲಿಂಗದ ಹೆಸರ ಹೇಳುವೆ ಕೇಳಯ್ಯಾ. ಕಂಜಕರ್ಣಿಕೆಯ ಹಣೆಯಲ್ಲಿ ವಿಹತ್ತವಸವೆಂದು ಬರೆದ ಐದಕ್ಷರವೆ ಆತನ ಪ್ರಣವನಾಮ. ಅವ್ಯಯ ಕರದೊಳಿಪ್ಪ ಆರಕ್ಷರ ಆತನ ದ್ವಿತೀಯ ನಾಮ. ಅವ್ಯಯ ಆನಂದ ಮಸ್ತಕದೊಳಿಪ್ಪ ಅಕ್ಷರವೆ ಆತನ ಆಚಾರ್ಯನಾಮ. ಎಂತೀ ನಾಮತ್ರಯಂಗಳನರಿದು ಧ್ಯಾರೂಢನಾಗಿ ಮಾಡುವರು ಎತ್ತಾನಿಕೊಬ್ಬರು. ಈ ಬಸವಣ್ಣ ಮೊದಲಾದ ಪುರಾತರು ಆ ಅವ್ಯಯ ಅನುಮತದಿಂದ ಲಿಂಗಾರ್ಚನೆಯ ಮಾಡಿ ನಿತ್ಯ ನಿಜನಿವಾಸಿಗಲಾದರು. ಆ ಶರಣರ ಅನುಮತದರಿವಿನ ಉಪದೇಶವ ಕೇಳಿ, ಎನಗಿನ್ನಾವುದು ಹದನವಯ್ಯಾ ಎಂಬ ಚಿಂತೆಯ ಬಿಟ್ಟು ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೈಯಲ್ಲಿ ಪಿಡಿದೆನು.
--------------
ಸಿದ್ಧರಾಮೇಶ್ವರ
`ವೇದ ಸ್ವಯಂಭು'ವೆಂಬ ವಾದಿ ಕೇಳೆಲವೋ. `ಏಕೋ ದೇವೋ ರುದ್ರೋ ನ ದ್ವಿತೀಯಃ ಎಂದು ನಂಬುವುದು ಕಾಣಿರಣ್ಣಾ. `ಚಕಿತಮಬ್ಥಿಧತ್ತೇ ಎಂದು ಶ್ರುತಿ ಸಾರುತ್ತೈದಾವೆ ಜಗದ ಕರ್ತ ಕೂಡಲಸಂಗಮದೇವನೊಬ್ಬನೆ ಕಾಣಿರಣ್ಣಾ.
--------------
ಬಸವಣ್ಣ
ಪಂಚಮಹಾಪಾತಕವಾವುದೆಂದರಿಯರು _ ಭವಿಯ ತಂದು ಭಕ್ತನ ಮಾಡೂದು ಪ್ರಥಮ ಪಾತಕ. ಭಕ್ತರಿಗೆ ಶರಣೆಂಬುದು ದ್ವಿತೀಯ ಪಾತಕ, ಗುರುವೆಂಬುದು ತೃತೀಯ ಪಾತಕ. ಗುರು ಲಿಂಗ ಜಂಗಮದ ಪ್ರಸಾದವ ಕೊಂಡಡೆ ನಾಲ್ಕನೆಯ ಪಾತಕ. ಗುಹೇಶ್ವರಲಿಂಗದಲ್ಲಿ ಹಿರಿದು ಭಕ್ತಿಯ ಮಾಡೂದು ಪಂಚಮ ಪಾತಕ !
--------------
ಅಲ್ಲಮಪ್ರಭುದೇವರು
ನಿತ್ಯ ನಿರ್ಗುಣನು ನಿರ್ವಿಕಾರಿ ನಿರ್ವಿಕಲ್ಪ ನಿತ್ಯಾತ್ಮಕನು `ಏಕಮೇವಾ ನ ದ್ವಿತೀಯ ಪರಾಪರವೆ' ಶರಣ ಲಿಂಗವೆಂದು ತೋರಿತ್ತು ಕಾಣಾ. ಎಂದರೆ, ಆ ಅಂಗ ಲಿಂಗಕ್ಕೆ ಬ್ಥಿನ್ನವೆಲ್ಲಿಯದೋ? ಅದೆಂತೆಂದಡೆ: ಚಿನ್ನ ಬಣ್ಣದಂತೆ, ಶಿವಶಕ್ತಿಯಂತೆ, ಶುದ್ಧ ಪರಾಪರವೆ ಶರಣನು ನೋಡಾ, ಮಹಾಲಿಂಗಗುರು ಶಿವಸಿದ್ದೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದರುಶನ ತಪ್ಪುಕ ಪ್ರಥಮ ಪಾತಕ. ಪರುಶನ ತಪ್ಪುಕ ದ್ವಿತೀಯ ಪಾತಕ. ಗುರು ತಪ್ಪುಕ ತೃತೀಯ ಪಾತಕ. ಪಾರದ್ವಾರಿ ಚತುರ್ಥ ಪಾತಕ. ಮಾಂಸಾಹಾರಿ ಪಂಚಮ ಮಹಾ ಪಾತಕ. ಈ ಅಯ್ವರೊಡನೆ ನುಡಿಯಲಿಲ್ಲಯ್ಯ ರಾಮನಾಥ.
--------------
ಜೇಡರ ದಾಸಿಮಯ್ಯ
ದೇವರಿಗೆ ಕೃಷಿಯ ನೇಮಕವ ಮಾಡುವರಲ್ಲದೆ, ದೇವರ ಪ್ರಥಮ ಮುಖ ಭೂಮಿ ಎಂದರಿಯರೀ ಲೋಕ. ದೇವರಿಗೆ ನಯ ಜಲವೆರೆಯಬೇಕೆಂಬ ನೇಮಕವ ಮಾಡುವರಲ್ಲದೆ, ದೇವರ ದ್ವಿತೀಯ ಮುಖ ಜಲ ಎಂದರಿಯರೀ ಲೋಕ. ದೇವರಿಗೆ ದೇವಿಗೆಯ ನೇಮಕವ ಮಾಡುವರಲ್ಲದೆ, ದೇವರ ತೃತೀಯ ಮುಖ ಜ್ಯೋತಿಯೆಂದರಿಯರೀ ಲೋಕ. ದೇವರಿಗೆ ತಾಲವೃಂತದ ನೇಮಕವ ಮಾಡುವರಲ್ಲದೆ, ದೇವರ ಚತುರ್ಥಮುಖ ವಾಯುವೆಂದರಿಯರೀ ಲೋಕ. ದೇವರಿಗೆ ಆಶ್ರಯವ ಮಾಡಬೇಕೆಂಬ ನೇಮಕವ ಮಾಡುವರಲ್ಲದೆ, ದೇವರ ಪಂಚಮುಖ ಆಕಾಶವೆಂದರಿಯರೀ ಲೋಕ. ದೇವರಿಗೆ ಪ್ರಾಣಪ್ರತಿಷ್ಠೆಯ ಮಂತ್ರ ಹೇಳುವರಲ್ಲದೆ, ದೇವರ ಆರನೆಯ ಮುಖ ಆತ್ಮಪ್ರಾಣವೆಂದರಿಯದೀ ಲೋಕ, ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹೆಸರಿಡಬಾರದ ಲಿಂಗವ ಕರಸ್ಥಳಕ್ಕೆ ಹೆಸರಿಟ್ಟು ತಂದನೆನ್ನ ಗುರು. ಆ ಹೆಸರಿಟ್ಟ ಲಿಂಗದ ಹೆಸರು ಹೇಳುವೆನು. ಕಂಜಕನ್ನಿಕೆಯ ಹಣೆಯಲ್ಲಿ ವಿದ್ಥಿವಶವೆಂದು ಬರೆದ ಐದಕ್ಷರವೆ ಆತನ ಪರಮನಾಮ. ಅವ್ವೆಯ ಕರಂಗಳೊಪ್ಪಿಪ್ಪ ಅಕ್ಷರಂಗಳಾರೆ ದ್ವಿತೀಯ ನಾಮ. ಅವ್ವೆಯ ಆನಂದ ಮನ್ಮಸ್ತಕದಲ್ಲಿ ಒಪ್ಪಿಪ್ಪ ಅಕ್ಷರದ್ವಯವೆ ಆತನ ಆಚಾರ್ಯನಾಮ. ಇಂತು ನಾಮತ್ರಯಂಗಳನರಿದು ಧ್ಯಾನಾರೂಢನಾಗಿ ಲಿಂಗಾರ್ಚನೆಯ ಮಾಡುವರೆತ್ತಾನೊಬ್ಬರು. ಬಸವಣ್ಣ ಮೊದಲಾದ ಸಕಲ ಪುರಾತರು, ಅವ್ವೆಯ ಅನುಮತದಿಂದ ಶುದ್ಧ ಸಿದ್ಧ ಪ್ರಸಿದ್ಧ ಲಿಂಗಾರ್ಚನೆಯಂ ಮಾಡಿ ನೀನಾದರು. ಎನಗಿನ್ನಾವುದು ಹದನೈ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->