ಅಥವಾ
(37) (13) (6) (1) (1) (0) (0) (0) (13) (3) (0) (2) (8) (0) ಅಂ (8) ಅಃ (8) (13) (0) (12) (1) (0) (0) (0) (16) (0) (0) (0) (0) (0) (0) (0) (7) (0) (7) (1) (15) (29) (0) (8) (9) (12) (1) (3) (0) (34) (17) (46) (0) (28) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅನುಭಾವಲಿಂಗದ ಮರ್ಮವನರಿವುದರಿದು, ಲಿಂಗಸಂಜ್ಞೆಯನರಿವುದರಿದು, ಲಿಂಗವೆಂದಾದುದೆಂದರಿವುದರಿದು, ಲಿಂಗವಂತಹುದಿಂತಹುದೆಂದರಿವುದರಿದು ನೋಡಾ. ಲಿಂಗದಲ್ಲಿಯೆ ಅಗಮ್ಯವಯ್ಯ. ಭೂಮಿಯೆ ಪೀಠಕೆ, ಆಕಾಶವೆ ಲಿಂಗವೆಂದರಿದಾತನು ಲಿಂಗವನರಿದಾತನಲ್ಲ. ಲಿಂಗದಲ್ಲಿ[ಯೆ] ಅಗಮ್ಯವಯ್ಯ. ಲಿಂಗದ ಆದಿ ಬ್ರಹ್ಮ, ಮಧ್ಯ ವಿಷ್ಣು, ಅಂತ್ಯ ರುದ್ರ. ಇಂತೀ ತ್ರಿಮೂರ್ತಿಲಿಂಗವೆಂದರಿದಾತನು ಲಿಂಗವನರಿದವನಲ್ಲ. ಲಿಂಗದಲ್ಲಿ[ಯೆ] ಅಗಮ್ಯವಯ್ಯ. ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂಬ ಭಾವರಹಿತ ಲಿಂಗವು `ಬ್ರಹ್ಮ ವಿಷ್ಣ್ವಾದಿದೇವಾನಾಮಪ್ಯಗೋಚರಂ' ಎಂದು ಇದಂ ಮಾಹೇಶ್ವರಂ ಜ್ಯೋತಿರಾಪಾತಾಲೇ ವ್ಯವಸ್ಥಿತಂ ಅತೀತಂ ಸತ್ಯಲೋಕಾದೀನನಂತಂ ದಿವ್ಯಮೀಶ್ವರಂ ಲಲಾಟಲೋಚನಂ ಚಾಂದ್ರೀ ಕಲಾಪಂ ಚತುರ್ದಶಂ ಅಂತರ್ವತೇಹ ನಿರ್ದೇಹಂ ಗುರುರೂಪಂ ವ್ಯವಸ್ಥಿತಂ ಪಾದಭಿನ್ನಂ ಹಿ ಲೋಕೇನ ಮೌಳಿಬ್ರಹ್ಮಾಂಡಭಿತ್ತಯೇ ಭುಜಪ್ರಾಂತದಿಗಂತಾನಾಂ ಭೂತಾನಾಂ ಪತಯೇ ನಮಃ ನಾದಲಿಂಗಮಿತಿಜ್ಞೇಯಂ ಬಿಂದುಪೀಠಮುದಾಹೃತಂ ನಾದಬಿಂದುಯುತಂ ರೂಪಂ ಲಿಂಗಾಕಾರಮಿಹೋಚ್ಯತೇ ಎಂಬ ಲಿಂಗಮೆಂದು ಲಿಯತೇ ಗಮ್ಯತೇ ಯತ್ರ ಯೇನಸರ್ವಂ ಚರಾಚರಂ ತದೇತಲ್ಲಿಂಗಮಿತ್ಯುಕ್ತಂ ಲಿಂಗತತ್ತ್ವಪರಾಯಣೈಃ ಲಕಾರಂ ಲಯಸಂಪ್ರೋಕ್ತಂ ಗಕಾರಂ ಸೃಷ್ಟಿಮೇವ ಚ ಲಯಾನಾಂ ಗಮನಶ್ಚೈವ ಲಿಂಗಾಕಾರಮಿಹೋಚ್ಯತೇ ಎಂದರಿದಾತನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆಂದರಿದ ಶರಣಂಗೆ ಸುಲಭ, ಮಿಕ್ಕಿನವರಿಗಳಿಗಲಭ್ಯವಯ್ಯಾ.
--------------
ಉರಿಲಿಂಗಪೆದ್ದಿ
ಅಯ್ಯಾ, ನಿಮ್ಮ ಶರಣರ ಚರಣದ ಭಕ್ತಿಯೇ ಎನಗೆ ಸಾಲೋಕ್ಯಪದವಯ್ಯಾ. ನಿಮ್ಮ ಶರಣರ ಅರ್ಚನೆ ಪೂಜೆಯೇ ಎನಗೆ ಸಾಮೀಪ್ಯಪದವಯ್ಯಾ. ಅಯ್ಯಾ, ನಿಮ್ಮ ಗಣಂಗಳ ಧ್ಯಾನವೇ ಎನಗೆ ಸಾರೂಪ್ಯಪದವಯ್ಯಾ. ಅಯ್ಯಾ, ನಿಮ್ಮ ಪುರಾತನರ ಜ್ಞಾನಾನುಭಾವ ಸಮರಸಾನಂದವೇ ಎನಗೆ ಸಾಯುಜ್ಯಪದವಯ್ಯಾ. ಇಂತೀ ಚತುರ್ವಿಧಪದಂಗಳನಲ್ಲದೆ ಅನ್ಯವ ನಾನರಿಯೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅರಿದು ಮಾಡದ ಭಕ್ತಿ ಭವಕ್ಕೆ ತಂದಿತ್ತು. ಅದೆಂತೆಂದಡೆ, ಫಲಭೋಗಂಗಳ ಬಯಸುವನಾಗಿ ಫಲವನುಂಡು ಮರಳಿ ಭವಕ್ಕೆ ಬಹನಾಗಿ. ಇದು ಕಾರಣ, ಅರಿದು ಮುಕ್ತಿಯ ಹಡೆವಡೆ ಅನುಭವವೇ ಬೇಕು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅನಾದಿಶಾಶ್ವತಂ ನಿತ್ಯಂ ಚೈತನ್ಯಂ ಚಿತ್‍ಸ್ವರೂಪಕಂ ಚಿದಂಗಂ ವೃಷಭಾಕಾರಂ ಚಿದ್ಭಸ್ಮ ಲಿಂಗಧಾರಣಂ ಪ್ರಥಮಂ ಗೂಢನಿರ್ನಾಮ ದ್ವಿತೀಯಂ ಚಿತ್ಸ್ವರೂಪಕಂ ತೃತೀಯ ಚಿದ್ವಿಲಾಸಂ ಚ ಚತುರ್ಥಂ ಭಸ್ಮಧಾರಣಂ ರೋಮೇ ರೋಮೇ ಚ ಲಿಂಗಂ ತು ವಿಭೂತಿಧೂನಾದ್ಭವೇತ್ ಎಂದುದಾಗಿ, ಬಸವ ಬಸವಾ ಎನುತಿಪ್ಪವರೆಲ್ಲರು ಬಸವನ ಘನವನಾರೂ ಅರಿಯರಲ್ಲಾ. ಅನಾದಿಪರಶಿವನಲ್ಲಿ ಅಂತರ್ಗತಮಾಗಿರ್ದ ಮಹಾಪ್ರಕಾಶವೇ ಬಹಿಷ್ಕರಿಸಿ ಚಿತ್ತು ಎನಿಸಿತ್ತು. ಆ ಚಿತ್ತು ಚಿದಂಗಬಸವ. ಆ ಚಿದಂಗಬಸವನಿಂದುದಯಿಸಿದ ಚಿದ್ವಿಭೂತಿಯನೊಲಿದು ಧರಿಸಿದ ಶರಣರೆಲ್ಲರೂ ಜ್ಯೋತಿರ್ಮಯಲಿಂಗವಪ್ಪದು ತಪ್ಪುದು ಕಾಣಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅರಿದಡೆ ಆತ್ಮನಲ್ಲ, ಅರಿಯದಿದ್ದಡೆ ಆತ್ಮನಲ್ಲ. ತೋರಿತ್ತಾದಡೆ ವಿಷಯ, ತೋರದಿದ್ದಡೆ ಶೂನ್ಯವೆನಿಸುಗು, ಬೊಮ್ಮದ ಅರಿವಿನ್ನೆಲ್ಲಿಯದೊ ? ಅವು ತಾನರಿವಾಗಿದ್ದು, ಸ್ವಾನುಭಾವದ ಹೊರೆಯಲ್ಲಿದ್ದು, ಸನ್ನಿದ್ಥಿ, ನಿತ್ಯನಿಜಾನಂದಾತ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನೆಂದರಿವುದು.
--------------
ಉರಿಲಿಂಗಪೆದ್ದಿ
ಅರ್ಪಿತದ ಮಹಿಮೆಯ ಅನುವ, ಪ್ರಸಾದದ ಮಹಿಮೆಯ ಆವಂಗಾವಂಗರಿಯಬಾರದು. ವಿಷ್ಣ್ವಾದಿ ದೇವ ದಾನವ ಮಾನವ, ಋಷಿಜನಂಗಳಿಗೆಯೂ ಅರಿಯಬಾರದು. ಕಿಂಚಿತ್ತರಿದಡೆಯೂ ಅರ್ಪಿಸಬಾರದು. ಕಿಂಚಿತ್ ಅರ್ಪಿಸಿದಡೆಯೂ ಪ್ರಸಾದವ ಹಡೆಯಬಾರದು. ಕಿಂಚಿತ್ ಪ್ರಸಾದವ ಹಡೆದಡೆಯೂ, ಪ್ರಸಾದವ ಭೋಗಿಸಿ ಪರಿಣಾಮದಿಂ ಮುಕ್ತರಾಗಿರಲರಿಯರು. ಶಿವ ಶಿವಾ ! ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಲರಿಯರು. ಗುರು ಲಿಂಗ ಜಂಗಮವನೇಕೀಭವಿಸಿ ಮಹಾಲಿಂಗವನು ನೇತ್ರದಲ್ಲಿ ಧರಿಸಿ, ನೇತ್ರಲಿಂಗಕ್ಕೆ ನೇತ್ರದ ಕೈಯಲೂ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ಶ್ರೋತ್ರದಲ್ಲಿ ಧರಿಸಿ ಶ್ರೋತ್ರಲಿಂಗಕ್ಕೆ ಶ್ರೋತ್ರದ ಕೈಯಲೂ ಮಹಾಶಬ್ದವನರ್ಪಿಸಲರಿಯರು. ಆ ಮಹಾಲಿಂಗವನು ಘ್ರಾಣದಲ್ಲಿ ಧರಿಸಿ ಘ್ರಾಣಲಿಂಗಕ್ಕೆ ಘ್ರಾಣದ ಕೈಯಲೂ ಸುಗಂಧವನರ್ಪಿಸಲರಿಯರು. ಆ ಮಹಾಲಿಂಗವನು ಜಿಹ್ವೆಯಲ್ಲಿ ಧರಿಸಿ ಜಿಹ್ವೆಯಲಿಂಗಕ್ಕೆ ಜಿಹ್ವೆಯ ಕೈಯಲೂ ಮಹಾರಸವನರ್ಪಿಸಲರಿಯರು. [ಆ ಮಹಾಲಿಂಗವನು ತ್ವಕ್ಕಿನಲ್ಲಿ ಧರಿಸಿ ತ್ವಕ್‍ಲಿಂಗಕ್ಕೆ ಘ್ರಾಣದ ಕೈಯಲ್ಲಿ ಮಹಾಸ್ಪರ್ಶವನರ್ಪಿಸಲರಿಯರು] ಆ ಮಹಾಲಿಂಗವನು ಭಾವದಲ್ಲಿ ಧರಿಸಿ ಭಾವಲಿಂಗಕ್ಕೆ ಭಾವದ ಕೈಯಲೂ ಸರ್ವಸುಖಪರಿಣಾಮ ಮೊದಲಾದ ಭಾವಾಭಾವ ನಿಷ್ಕಲವಸ್ತುವನರ್ಪಿಸಲರಿಯರು. ಆ ಮಹಾಲಿಂಗವನು ಮನದಲ್ಲಿ ಧರಿಸಿ ಮನೋಮಯಲಿಂಗಕ್ಕೆ ಮನದ ಕೈಯಲೂ ಸಕಲ ನಿಷ್ಕಲಾದಿ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ವಾಕ್ಕಿನಲ್ಲಿ ಧರಿಸಿ ವಾಕ್‍ಲಿಂಗಕ್ಕೆ ವಾಕ್ಕಿನ ಕೈಯಲ್ಲೂ ಪಡಿಪದಾರ್ಥ ಮೊದಲಾದ ಸಕಲದ್ರವ್ಯಂಗಳ ರುಚಿ ಮೊದಲಾದ ಸುಖವನರ್ಪಿಸಲರಿಯರು. ಆ ಮಹಾಲಿಂಗವನು ಇಂತು ಮನೋವಾಕ್ಕಾಯವೆಂಬ ತ್ರಿವಿಧದಲ್ಲಿ ಏಕಾದಶ ಅರ್ಪಿತ ಸ್ಥಾನವನರಿದು ಅರ್ಪಿತವಾದ ಏಕಾದಶ ಪ್ರಸಾದವನರಿಯರು. ಮಹಾರ್ಪಿತವನು ಮಹಾಪ್ರಸಾದವನು ಎಂತೂ ಅರಿಯರು. ಪರಂಜ್ಯೋತಿಃ ಪರಂ ತತ್ತ್ವಂ ಪರಾತ್ಪರತರಂ ತಥಾ ಪರವಸ್ತು ಪ್ರಸಾದಃ ಸ್ಯಾದಪ್ರಮಾಣಂ ಪ್ರಸಾದಕಃ ಎಂಬುದನರಿಯರು. ಪೂಜಕಾ ಬಹವಸ್ಪಂತಿ ಭಕ್ತಾಶ್ಯತಸಹಸ್ರಶಃ ಮಹಾಪ್ರಸಾದಪಾತ್ರಂ ತು ದ್ವಿತ್ರಾ ವಾ ನೈವ ಪಂಚಷಃ ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಾಃ ವಿಷ್ಣುಪ್ರಮುಖದೇವಾಶ್ಚ ನ ಜಾನಂತಿ ಶಿವಂಕರಂ ಎಂಬ ಪ್ರಸಾದ ಎಲ್ಲರಿಗೆಯೂ ಅಸಾಧ್ಯ. ಅರ್ಪಿತ ಮುನ್ನವೇ ಅಸಾಧ್ಯ. ಅರ್ಪಿತವೂ ಪ್ರಸಾದವೂ ಚನ್ನಬಸವಣ್ಣಂಗಾಯಿತ್ತು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂಬ ಹುಚ್ಚರನೇನೆಂಬೆನಯ್ಯಾ. ಜಂಗಮಪ್ರಸಾದದರಿವು ಸೋಂಕಲೊಡನೆ ಅಖಂಡಿತಪ್ರಸನ್ನಪ್ರಸಾದಿಯಪ್ಪುದು ತಪ್ಪದಯ್ಯಾ. ಶಿವಶಿವಾ, ಪ್ರಸಾದದ ಮಹಿಮೆಯನೇನೆಂದುಪಮಿಸಬಹುದಯ್ಯಾ ? ಪ್ರಸಾದವೆ ಗುರು, ಪ್ರಸಾದವೆ ಲಿಂಗ, ಪ್ರಸಾದವೆ ಜಂಗಮ, ಪ್ರಸಾದವೆ ಜ್ಞಾನಿ, ಪ್ರಸಾದವೆ ಪರಾತ್ಪರ, ಪ್ರಸಾದವೆ ಜ್ಞಾನಾತೀತ, ಪ್ರಸಾದವೆ ಸಚ್ಚಿದಾನಂದ, ಪ್ರಸಾದವೆ ನಿತ್ಯಪರಿಪೂರ್ಣ. [ನಿಮ್ಮ ಶರಣ] ಇಂತಪ್ಪ ಪ್ರಸಾದಿ ಕಾಣಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅದನದನತಿಗಳೆದನೆ ಯೋಗಿ, ಇಹ ಪರವನೆ ಮೀರಿ ನಿಲಬಲ್ಲಾತನೆ ಯೋಗಿ. `ತತ್ತ್ವಮಸಿ' ವಾಕ್ಯವು ನಿಲುಕದ ಪದವ ಮೀರಿ ನಿಲಬಲ್ಲಾತನೆ ಯೋಗಿ ಇದು ತುದಿಪದವು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಯ್ಯಾ ಮಹಾರಾಜನನೆಲ್ಲರೂ ಬಲ್ಲರು, ಆ ರಾಜನಾರನೂ ಅರಿಯನು. ಅರಿಯನಾಗಿ ಪದವಿಲ್ಲ, ಫಲವಿಲ್ಲ, ಭೋಗವಿಲ್ಲ, ಪರಿಣಾಮವಿಲ್ಲ. ಶಿವಶಿವಾ ! ಮಹಾರಾಜಾಧಿರಾಜ ಶಿವನನೆಲ್ಲರೂ ಬಲ್ಲರು, ಆ ಶಿವನು ಆರನೂ ಅರಿಯನು, ಅರಿಯನಾಗಿ ನಿಜಸುಖವಿಲ್ಲ. ಇದು ಕಾರಣ ಶಿವನರಿಯದ ಸದ್ಭಕ್ತರ, ಅನುಭವ ಸಂಪನ್ನರ ಸಂಗದಿಂದ ಆ ಶಿವನು ತನ್ನನರಿವಂತೆ ಮಾಡಿಕೊಂಡಡೆ ಪರಮಸುಖವ ಕೊಡುವನಯ್ಯ, ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು.
--------------
ಉರಿಲಿಂಗಪೆದ್ದಿ
ಅಂಗೈಯ ಲಿಂಗವ ಕಂಗಳು ತುಂಬಿ ನೋಡಿ ಮನ ಹಾರೈಸಿದಲ್ಲಿ ಅಂಗೇಂದ್ರಿಯಂಗಳೆಲ್ಲ ಲಿಂಗೇಂದ್ರಿಯಂಗಳಾದವು. ಅಂಜದಿರು ಮನವೇ, ಲಿಂಗವು ನಿನಗೆ ದೂರನೆಂದು. ಮನೋಮಧ್ಯದೊಳಿಪ್ಪ, ಅಂಗದ ಕಂಗಳಲಿಪ್ಪ, ಭಾವದ ಪ್ರಾಣದಲ್ಲಿಪ್ಪ. ಅಂಗಪ್ರಾಣಭಾವ ಸರ್ವಾಂಗಲಿಂಗವಾದ ಬಳಿಕ, ಲಿಂಗಮಧ್ಯಪ್ರಾಣ, ಪ್ರಾಣಮಧ್ಯಲಿಂಗ. ಇದು ಕಾರಣ ಉತ್ಪತ್ತಿಸ್ಥಿತಿಲಯವುಂಟೆಂದು ಅಂಜದಿರು. ಅಂಜಿಕೆ ಇಲ್ಲ, ಅಳುಕಿಲ್ಲ, ಬಂದುದೇ ಲಿಂಗದ ಲೀಲೆ, ಇದ್ದುದೇ ಲಿಂಗದಾನಂದ, ಭಾವಲೀಯವಾದುದೇ ಲಿಂಗನಿರವಯವು. ಇದು ಸತ್ಯ, ಶಿವ ಬಲ್ಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಮೃತದೊಳಗೆ ಜನಿಸಿ ಅಮೃತದೊಳಗೆ ವರ್ತಿಸುವ ಅಮೃತದೇಹಿಗೆ ಹಸಿವು ತೃಷೆಯೆ ? ಆ ಅಮೃತವೆ ಆಹಾರ, ಆ ಅಮೃತವೆ ಸೇವನೆ, ಬೇರೊಂದು ವಸ್ತುವುಂಟೆ ? ಇಲ್ಲ. ಅಮೃತವೇ ಸರ್ವಪ್ರಯೋಗಕ್ಕೆ. ಇದಕ್ಕೆ ಕಟ್ಟಳೆಯುಂಟೆ ? ಕಾಲವುಂಟೆ ? ಆಜ್ಞೆ ಉಂಟೆ ? ಬೇರೆ ಕರ್ತರುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಶ್ರೀಗುರುಲಿಂಗದಲ್ಲಿ ಜನಿಸಿ, ಶಿವಲಿಂಗದಲ್ಲಿ ಬೆಳೆದು ಜಂಗಮಲಿಂಗದಲ್ಲಿ ವರ್ತಿಸಿ, ಪ್ರಸಾದಲಿಂಗದಲ್ಲಿ ಪರಿಣಾಮಿಸಿ, ಗುರು ಲಿಂಗ ಜಂಗಮ ಪ್ರಸಾದ ಒಂದೆಂದರಿದು ಆ ಚತುರ್ವಿಧ ಏಕವಾದ ಲಿಂಗವೇ ಪ್ರಾಣ, ಪ್ರಾಣವೇ ಲಿಂಗ ಲಿಂಗವೇ ಅಂಗ, ಅಂಗವೆ ಲಿಂಗವಾದ ಲಿಂಗಸ್ವಾಯತವಾದ ಲಿಂಗೈಕ್ಯಂಗೆ ಜಪ ಧ್ಯಾನ ತಪಕ್ಕೆ ಅರ್ಚನೆಗೆ ಪೂಜನೆಗೆ ಆಗಮವುಂಟೆ ? ಕಾಲವುಂಟೆ ? ಕರ್ಮವುಂಟೆ ? ಕಲ್ಪಿತವುಂಟೆ ? ಇಲ್ಲ. ಸರ್ವವೂ ಲಿಂಗಮಯ. ಆ ಲಿಂಗವಂತಂಗೆ ನಡೆದುದೇ ಆಗಮ, ಪೂಜಿಸಿದುದೇ ಕಾಲ ಮಾಡಿದುದೇ ಕ್ರಿಯೆ, ನುಡಿದುದೇ ಜಪ, ನೆನೆದುದೇ ಧ್ಯಾನ ವರ್ತಿಸಿದುದೇ ತಪಸ್ಸು. ಇದಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ರವಿ, ಶಶಿ, ಆತ್ಮ ಮನೋವಾಕ್ಕಾಯ ಹೊನ್ನು ಹೆಣ್ಣು ಮಣ್ಣು ಮೊದಲಾದ ಸರ್ವಪದಾರ್ಥವನರ್ಪಿಸಿ, ಗುರು ಲಿಂಗ ಜಂಗಮದ ಪ್ರಸನ್ನತೆಯ ಪಡೆದ ಮಹಾಪ್ರಸಾದಿಗೆ ಸರ್ವವೂ ಪ್ರಸಾದವಲ್ಲದೆ ಮತ್ತೊಂದಿಲ್ಲ. ಆ ಪ್ರಸಾದಿಗೆ ಪದಾರ್ಥವೆಂಬ ಪ್ರಸಾದವೆಂಬ ಭೇದವುಂಟೆ ? ಅರ್ಪಿತವೆಂಬ ಅನರ್ಪಿತವೆಂಬ ಸಂದೇಹವುಂಟೆ ? ಕೊಡುವಲ್ಲಿ ಕೊಂಬಲ್ಲಿ ಸೀಮೆಯುಂಟೆ ? ನಿಸ್ಸೀಮಪ್ರಸಾದಿಗೆ ಸರ್ವವೂ ಪ್ರಸಾದ. ಆ ಭೋಗಕ್ಕೆ ಮೇರೆ ಉಂಟೆ ? ಅವಧಿಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ವೇದ ಶಾಸ್ತ್ರ ಆಗಮ ಪುರಾಣ ಮೊದಲಾದ ಸರ್ವವಿದ್ಯಂಗಳ ತಾತ್ಪರ್ಯ ಮರ್ಮ ಕಳೆಗಳನರಿದ ಮಹಾಜ್ಞಾತೃವಿಂಗೆ ಆ ಮಹಾಜ್ಞಾನವೇ ದೇಹ, ಆ ಮಹಾಜ್ಞೇಯವೇ ಪ್ರಾಣ. ಈ ಮಹತ್ತಪ್ಪ ಜ್ಞಾತೃ ಜ್ಞಾನ ಜ್ಞೇಯ ಒಂದಾದ ಮಹಾಬೆಳಗಿನ ಸುಖಸ್ವರೂಪಂಗೆ ಮತ್ರ್ಯ ಸ್ವರ್ಗ ದೇವಲೋಕವೆಂಬ ಫಲಪದದಾಸೆಯುಂಟೆ ? ಇಲ್ಲ. ನಿರಂತರ ತೇಜೋಮಯ ಸುಖಸ್ವರೂಪನು ವಿದ್ಯಾಸ್ವರೂಪನು ನಿತ್ಯಾನಂದಸ್ವರೂಪನು. ಆ ಮಹಾಮಹಿಮನ ಮಹಾಸುಖಕ್ಕೆ ಅವಧಿಯುಂಟೆ ? ಮೇರೆಯುಂಟೆ ? ಇಲ್ಲ. ಮನವೇ ಮೇರೆ, ಪರಿಣಾಮವೇ ಅವಧಿ ನೋಡಾ. ಆ ಮಹಾನುಭಾವಿ ತಾನೆ ಕೇವಲ ಜ್ಯೋತಿರ್ಮಯಲಿಂಗವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
--------------
ಉರಿಲಿಂಗಪೆದ್ದಿ
ಅಯ್ಯಾ, ನೀನು ತತ್ತ್ವಂಗಳ ಮರೆಗೊಂಡಿರ್ಪನ್ನಕ್ಕ, ನಾನು ಕಾಯವ ಮರೆಗೊಂಡಿರ್ದೆನಯ್ಯಾ. ಅಯ್ಯಾ, ನೀನು ಶಕ್ತಿಯ ಮರೆಗೊಂಡಿರ್ಪನ್ನಕ್ಕ, ನಾನು ಆಸೆಯ ಮರೆಯಲ್ಲಿರ್ದೆನಯ್ಯಾ. ನಿನ್ನ ಬೆಡಗು ಬಿನ್ನಾಣವ ನಾ ಬಲ್ಲೆ, ನನ್ನ ಬೆಡಗು ಬಿನ್ನಾಣವ ನೀ ಬಲ್ಲೆ. ಮರೆಗೆ ಮರೆಯನೊಡ್ಡಿ ಜಾರಿ ಹೋದೆಯಲ್ಲಾ. ಈ ಬಿನ್ನಾಣದ ಮರೆಯನು ತೆರೆದು ದರ್ಶನಂ ಮಾಡಿ, ನಿನ್ನೊಳಗೆ ಎನ್ನನಿರಿಸಿ, ಎನ್ನೊಳಗೆ ನಿನ್ನನಿರಿಸಿ, ಪ್ರಾಣ ಪ್ರಾಣವ ಸಂಯೋಗವ ಮಾಡಿದೆನು ಶ್ರೀಗುರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಂತ್ಯಜನಾಗಲಿ, ಅಗ್ರಜನಾಗಲಿ ಮೂರ್ಖನಾಗಲಿ, ಪಂಡಿತನಾಗಲಿ ಜಪಿಸುವುದು ಶ್ರೀ ಪಂಚಾಕ್ಷರಿಯ. ಆ ಜಪದಿಂದ ರುದ್ರನಪ್ಪುದು ತಪ್ಪದು. ಅದೆಂತೆಂದಡೆ:ಲೈಂಗೇ ಅಂತ್ಯಜೋಪ್ಯಗ್ರಜೋ ವಾಪಿ ಮೂರ್ಖೋ ವಾ ಪಂಡಿತೋಪಿ ವಾ ಪಂಚಾಕ್ಷರೀಂ ಜಪೇನ್ನಿತ್ಯಂ ಸ ರುದ್ರೋ ನಾತ್ರ ಸಂಶಯಃ ಇಂತೆಂದುದಾಗಿ, ಇದು ಸತ್ಯ, ಇದು ಸತ್ಯ, ಇದು ಸತ್ಯ ಜಪಿಸುವುದು, ಶಪಥ ಮಾಡಿದೆ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಮೃತಸೇವನೆಯಾದ ಬಳಿಕ ಭಿನ್ನರುಚಿಯ ನಿಶ್ಚಯಿಸಲುಂಟೆ ? ಸತ್ಯಶಾಂತಿಜ್ಞಾನವಿಂಬುಗೊಂಡ ಮಹಾಪುರುಷಂಗೆ ಸುಖದ ಪದವ ನಿಶ್ಚಯಿಸಲುಂಟೆ ? ಸದ್ಗುರುಕಾರುಣ್ಯವ ಪಡೆದ ಮಹಾಭಕ್ತಂಗೆ ಮುಕ್ತಿಯ ನಿಶ್ಚಯಿಸಲುಂಟೆ ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅಯ್ಯಾ, ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ ! ಂi್ಞೀಗವು ಅಭ್ಯಾಸವೆ ? ಯೋಗಾಭ್ಯಾಸವೆಂಬನ್ನಬರ ಅವನು ಯೋಗಿಯೆ ? ಶ್ರೀಗುರುಕಾರುಣ್ಯದಿಂದ ಸರ್ವವು ಪರಬ್ರಹ್ಮವೆಂದರಿವುದು. ಶ್ರೀಗುರುವಿನ ಶ್ರೀಪಾದಧ್ಯಾನವೆ ಯೋಗಾಭ್ಯಾಸವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಂಗದ ಮೇಲೆ ಲಿಂಗಸಂಬಂಧಿಯಾಗಲು ಸಾಲೋಕ್ಯವೆಂದರೇನೋ ? ಗುರುಲಿಂಗಜಂಗಮಸನ್ನಿಧಿ ದಾಸೋಹದೊಳಗಿರಲು ಸಾಮೀಪ್ಯವೆಂದರೇನೋ ? ಸರ್ವಾಂಗಮನ ಇಂದ್ರಿಯಂಗಳ ಸಂಗದೊಳಗಿರಲು ಸಾರೂಪ್ಯವೆಂದರೇನೊ ? ಚತುರ್ದಶಭುವನಂಗಳನೊಳಕೊಂಡ ಮಹಾಘನಲಿಂಗವು ತನ್ನ ಮನದೊಳಗವಗವಿಸಿ ನೆನವುತ್ತಿರಲು ಸಾಯುಜ್ಯವೆಂದರೇನೊ ? ಇಂತೀ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧಪದಂಗಳೆಂದರೇನೊ ? ಎಲೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮನರಿದ ಶರಣಂಗೆ.
--------------
ಉರಿಲಿಂಗಪೆದ್ದಿ
ಅಷ್ಟಾಷಷಿ*ತೀರ್ಥಂಗಳ ಮೀಯಲ್ಕೆ ಆತ ಹಿರಿಯನೇ ? ಅಲ್ಲ, ಆತನ ಅಂತಃಕರಣ ಶುದ್ಧವಿಲ್ಲಾಗಿ. ಸಂಧ್ಯಾ ಸಮಾಧಿ ಜಪ ತಪ ಮಂತ್ರರೂಢನಾಗಿರಲಿಕೆ ಆತ ಹಿರಿಯನೇ ? ಅಲ್ಲ, ಆತನ ಮನ ಶುದ್ಧವಿಲ್ಲಾಗಿ. ವಚನಾರಂಭದಲ್ಲಿ ನುಡಿಗಲಿತಲ್ಲಿ ಆತನನುಭವಿಯೆ ? [ಅಲ್ಲ] ಆತ ಇದಿರ ಬೋಧಿಸುವ ಭುಂಜಕನಾಗಿ. ಕೋಪವೇ ರಾಶಿ, ಕುಟಿಲವೇ ಲಚ್ಚಣ, ಸಟೆಯೇ ಕೊಳಗ, ಮಾಯವೇ ಅಳತೆ, ಅರಿಷಡ್ವರ್ಗ ಪಂಚೇಂದ್ರಿಯವಿಡಿದಾಡುವನ್ನಕ್ಕ ಭಕ್ತನೇ ? ಭಕ್ತನಲ್ಲ. ಭಕ್ತನ ನಡೆ ಪಾವನ, ನುಡಿಯೇ ತೀರ್ಥ, ಒಡಲೇ ಕ್ಷೇತ್ರ. ನಿಮ್ಮ ಶರಣರ ಅಂಗಳವೇ ವಾರಣಾಸಿ, ಕೇವಲ ದಾಸೋಹವೇ ಕರ್ತವ್ಯ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಂತರಂಗ ಬಹಿರಂಗ ಪರಮಾಕಾಶದ ಪರಬ್ರಹ್ಮಸ್ಥಾನ ಬ್ರಹ್ಮರಂಧ್ರದಲ್ಲಿ, ಪರಬ್ರಹ್ಮ ಪರಮಾತ್ಮನು, ನಿಷ್ಕಳ ನಿರವಯ ನಿರುಪಮ ಶ್ರೀಗುರುಮೂರ್ತಿ ಲಿಂಗಭರಿತವಾಗಿಪ್ಪನು, `ಶಿವಂ ಪರಮಾಕಾಶಮಧ್ಯೇ ಧ್ರುವಂ ತತ್ವಾಧಿಕಂ' ಎಂದುದಾಗಿ, ಇದುಕಾರಣ, ನಾನಾ ವೇದ ಶಾಸ್ತ್ರ ಪುರಾಣ ಆಗಮಂಗಳ ಮತವು, ಇದು ಶ್ರುತವು, ಭ್ರೂಮಧ್ಯದಲ್ಲಿ ಅಂತರಾತ್ಮನು ಸಕಲ ನಿಷ್ಕಲ ಪರಂಜ್ಯೋತಿರ್ಲಿಂಗಮೂರ್ತಿಭರಿತವಾಗಿಪ್ಪನು. `ಪರಾತ್ಪರಂ ಪರಂಜ್ಯೋತಿಭ್ರ್ರೂಮಧ್ಯೇ ತು ವ್ಯವಸ್ಥಿತಂ' ಎಂದುದಾಗಿ ಹೃದಯಕಮಲಮಧ್ಯದಲ್ಲಿ ಜೀವಾತ್ಮನು. ಕೇವಲ ಸಕಲಜಂಗಮಮೂರ್ತಿ ಲಿಂಗಭರಿತವಾಗಿಪ್ಪನು, `ಹೃದಯಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ' ಎಂದುದಾಗಿ. ಇಂತು ಪರಬ್ರಹ್ಮ, ಬ್ರಹ್ಮರಂಧ್ರ ಭ್ರೂಮಧ್ಯ ಹೃದಯಸ್ಥಾನದಲ್ಲಿ ನಿಷ್ಕಲ, ಸಕಲನಿಷ್ಕಲ, ಸಕಲ ಪರಮಾತ್ಮ ಅಂತರಾತ್ಮ ಜೀವಾತ್ಮನೆಂದೆನಿಸಿ ಶ್ರುತ ದೃಷ್ಟ ಅನುಮಾನದಿಂ ಕಂಡು ವಿನೋದ ಕಾರಣ ಮಾಯಾವಶವಾಗಿ, ಪಂಚಭೂತಂಗಳನ್ನು ಸೃಜಿಸಿ ಸಕಲಪ್ರಪಂಚವನೂ ಬೆರಸಿ, ಮಾಯಾಧೀನವಾಗಿ ವಿನೋದಿಸಿ ಆ ಮಾಯೆಯನೂ ಸಕಲಪ್ರಪಂಚವನೂ ತ್ಯಜಿಸಲಿಕೆ ಬಹಿರಂಗದಲಿ ಶ್ರೀಗುರುರೂಪಾಗಿ ಬೋಧಿಸಿ ಪರಮಾತ್ಮನು ಪರಬ್ರಹ್ಮವಾಗಿ ನಿಜಪದವನೈದಿ ಸುಖಿಯಾಗಿಪ್ಪನು. ಇಂತಹ ಅರಿವೇ ಪರಬ್ರಹ್ಮ, ಮರವೆಯೇ ಮಾಯಾಸಂಬಂಧವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಂಗಭಾವ ಹಿಂಗದೆ ಮಜ್ಜನಕ್ಕೆರೆವಿರಿ, ಅರ್ಪಿತವನರಿಯದೆ ಅರ್ಪಿಸುವಿರಿ. ಅರ್ಪಿತ ಸವೆಯಿತ್ತೆ ? ಲಿಂಗ ಸವೆಯಿತ್ತೆ ? ಕರ್ಮಣಾ ಮನಸಾ ವಾಚಾ ಗುರೂಣಾಂ ಭಕ್ತಿವತ್ಸಲ ಶರೀರಮರ್ಥಂ ಪ್ರಾಣಂ ಚ ಸದ್ಗುರುಭ್ಯೋ ನಿವೇದಯೇತ್ ಇಂತೆಂದುದಾಗಿ, ತನುವರ್ಪಿತ ಗುರುವಿಂಗೆ, ಮನವರ್ಪಿತ ಲಿಂಗಕ್ಕೆ, ಧನವರ್ಪಿತ ಜಂಗಮಕ್ಕೆ. ಇಂತೀ ತ್ರಿವಿಧಕ್ಕೆ ಅರಿದರ್ಪಿಸಬಲ್ಲಡೆ ಅರ್ಪಿತ. ಈ ತ್ರಿವಿಧ ಸವೆಯದೆ ಅರ್ಪಿಸುವ ಅರ್ಪಿತವೆಂತೊ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ ?
--------------
ಉರಿಲಿಂಗಪೆದ್ದಿ
ಅಯ್ಯಾ ಶಿವಷಡಾಕ್ಷರಮಂತ್ರವೆ ಸರ್ವಮಂತ್ರವೆಲ್ಲವಕ್ಕೆ ಮಾತೃಸ್ಥಾನ. ಅಯ್ಯಾ ಶಿವಷಡಾಕ್ಷರಮಂತ್ರವೆ ಸರ್ವವೆಲ್ಲವಕ್ಕೆ ಉತ್ಪತ್ತಿ ಸ್ಥಿತಿ ಲಯ ಸ್ಥಾನ. ಅಯ್ಯಾ ಶಿವಷಡಾಕ್ಷರಮಂತ್ರವೆ ಸರ್ವಕಾರಣವೆಲ್ಲವಕ್ಕೆ ಮೂಲ. ಇದು ಕಾರಣ ಶಿವಷಡಾಕ್ಷರಮಂತ್ರವ ಸ್ಮರಿಸುವ ಸದ್ಭಕ್ತನೆ ವೇದಾತೀತನು. ಆ ಸದ್ಭಕ್ತನೆ ಶಾಸ್ತ್ರವಾನ್, ಆ ಮಹಾಮಹಿಮನೆ ಪುರಾಣಿಕನು. ಆ ಮಹಾಮಹಿಮನೆ ಆಗಮಿಕನು. ಆ ಮಹಾಮಹಿಮನೆ ಸರ್ವಜ್ಞಾನಿಯಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅಕಟಕಟಾ ಬೆಡಗು ಬಿನ್ನಾಣ ಒಂದೇ ನೋಡಾ. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂಬುದೆ ಯಂತ್ರ. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂಬುದೆ ತಂತ್ರ. ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಎಂಬುದೆ ಮಂತ್ರ. ಪ್ರಣಮಪಂಚಾಕ್ಷರಿಯ ಮಂತ್ರವನುಚ್ಚರಿಸುವರೆಲ್ಲರೂ ಅಪ್ರಮಾಣಿಕರು ನೋಡಾ, ಅಪ್ರಣಮ ಪಂಚಾಕ್ಷರ ಮಂತ್ರವ ವಿಶ್ವಾಸದಿಂದವಗ್ರಹಿಸಿ ಮಂತ್ರಾರ್ಥವ ತಿಳಿದು ಉಚ್ಚರಿಸಲರಿಯದ ಕಾರಣ ಮತ್ತೆ ಆಕಾರ ಉಕಾರ ಮಕಾರದ ಮೂಲವಂ ಭೇದಿಸಿ, ಓಂಕಾರದ ನೆಲೆಯಂ ತಿಳಿದು, ಆ ಓಂಕಾರದಲ್ಲಿ ಪಂಚವರ್ಣದ ಲಕ್ಷಣವನರಿದು, ಓಂ ನಮಃ ಶಿವಾಯ ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದು ಸ್ಮರಿಸಬಲ್ಲಡೆ ಇದೆ ಜಪ, ಇದೇ ತಪ, ಇದೇ ಸರ್ವಸಿದ್ಧಿಯಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅಯ್ಯಾ, ನಿಮ್ಮ ಶರಣರ ಅನುಭಾವಸಂಗ ಸಾಲೋಕ್ಯಪದವಯ್ಯ. ಅಯ್ಯಾ, ನಿಮ್ಮ ಅನುಭಾವಿಗಳ ಮುಖಾವಲೋಕ ಪ್ರಿಯಸಂಭಾಷಣೆ ಸಾಮೀಪ್ಯಪದವಯ್ಯ. ಶ್ರೀ ವಿಭೂತಿ ರುದ್ರಾಕ್ಷಿ ಅವರ ಶ್ರೀಮೂರ್ತಿಯ ಕಂಡು, ಮನದಲ್ಲಿ ಧರಿಸಿದಡೆ ಸಾರೂಪ್ಯಪದವಯ್ಯ. ಅವರ ಶ್ರೀಪಾದಂಗಳಲ್ಲಿ ಎನ್ನ ಶಿರಸ್ಪರುಶನದಿಂದ ಸಾಷ್ಟಾಂಗವೆರಗಲು ಸಾಯುಜ್ಯಪದವಯ್ಯ. ಇಂತು ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧಪದ ಎನಗಾಯಿತ್ತಯ್ಯ, ನಿಮ್ಮನುಭಾವಿಗಳ ಕೃಪೆಯಿಂದ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅರಿಷಡ್ವರ್ಗದುರವಣಿಗೆಗೊಳಗಾಗನಾಗಿ ಭಕ್ತಕಾಯನಾದ. ಪಂಚೇಂದ್ರಿಯದ ಬಳಿ ಸಲ್ಲನಾಗಿ ಗುರುಭಕ್ತನಾದ. ಸಪ್ತಧಾತುವಿನ ಗುಣವಿಡಿಯನಾಗಿ ಸಮಯಾಚಾರಿಯಾದ. ಅಷ್ಟಮದಗಜದ ಬಟ್ಟೆಯ ಮೆಟ್ಟನಾಗಿ ಆಚಾರವಂತನಾದ. ಕರ್ಮಕಾಯದಲ್ಲಿ ಬಳಿಸಲ್ಲನಾಗಿ ನಿರ್ಮಲ ನಿತ್ಯಸತ್ಯನಾದ. ಜ್ಞಾನಕಾಂಡದಲ್ಲಿ ಹೊಣೆಹೊಕ್ಕನಾಗಿ ಸೃಷ್ಟಿಯೊಳಗೆ ಭಕ್ತಿ ಎಂಬ ಅಚ್ಚಾದ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಮೃತಕ್ಕೆ ಹಸಿವುಂಟೆ ? ಜಲಕ್ಕೆ ತೃಷೆಯುಂಟೆ ? ಮಹಾಜ್ಞಾನಸ್ವರೂಪಂಗೆ ವಿಷಯವುಂಟೆ ? ಸದ್ಗುರುಕಾರುಣ್ಯವ ಪಡೆದು ಲಿಂಗಾರ್ಚನೆಯಂ ಮಾಡುವ ಮಹಾಭಕ್ತಂಗೆ ಬೇರೆ ಮುಕ್ತಿಯ ಬಯಕೆ ಉಂಟೆ ? ಅವರುಗಳಿಗೆ ಅದು ಸ್ವಯಂಭು ಸಹಜಸ್ವಭಾವ. ಇನ್ನು ತೃಪ್ತಿ ಅಪ್ಯಾಯನ ಅರಸಲುಂಟೆ ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಅಮೃತ ಸರ್ವರಿಗೂ ಅಮೃತವಾಗಿಪ್ಪುದಲ್ಲದೆ ಕೆಲಬರಿಗೆ ಅಮೃತವಾಗಿ ಕೆಲಬರಿಗೆ ವಿಷವಾಗದು ನೋಡಾ. ಎಂತು ಅಂತೆ, ಶ್ರೀಗುರು ಸರ್ವರಿಗೆಯೂ ಗುರುವಾಗಿರಬೇಕಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ

ಇನ್ನಷ್ಟು ...