ಅಥವಾ

ಒಟ್ಟು 90 ಕಡೆಗಳಲ್ಲಿ , 9 ವಚನಕಾರರು , 42 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತ ಭಕ್ತನೆಂಬರು, ಪೃಥ್ವಿಯ ಪೂರ್ವಾಶ್ರಯವ ಕಳೆಯನಲರಿಯಫದನ್ನಕ್ಕ, ಅಪ್ಪುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ತೇಜದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ವಾಯುವಿನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಆಕಾಶದ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಸೋಮಸೂರ್ಯರ ಕಳೆಗಳ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ, ಆತ್ಮನ ಪೂರ್ವಾಶ್ರಯವ ಕಳೆಯಲರಿಯದನ್ನಕ್ಕ,_ ಭಕ್ತರೆಂದು ಲಿಂಗವ ಪೂಜಿಸುವವರ ಕಂಡು ನಾನು ಬೆರಗಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಯ್ಯಾ, ಪರಾತ್ಪರ ಸತ್ಯ ಸದಾಚಾರ ಗುರುಲಿಂಗಜಂಗಮದ ಶ್ರೀಚರಣವನು ಹಿಂದೆ ಹೇಳಿದ ಅಚ್ಚಪ್ರಸಾದಿಯೋಪಾದಿಯಲ್ಲಿ ನಿರ್ವಂಚಕತ್ವದಿಂದ ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಸಮರ್ಪಿಸಿ, ಒಪ್ಪತ್ತು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಅರ್ಚನೆಯ ಮಾಡಿ, ಆ ಚರಣೋದಕ ಪ್ರಸಾದವನು ತನ್ನ ಸರ್ವಾಂಗದಲ್ಲಿ ನೆಲೆಸಿರ್ಪ ಇಷ್ಟ ಮಹಾಲಿಂಗದೇವಂಗೆ ಕೊಟ್ಟು ಕೊಂಬುವಂತಹದೆ ಇದಿರಿಟ್ಟು ಜಂಗಮ ಪಾದೋದಕ ಪ್ರಸಾದವ ಕೊಂಬ ಆಚರಣೆಯ ನಿಲುಗಡೆ ನೋಡಾ. ಆಮೇಲೆ ಒಪ್ಪತ್ತು ಸಂಬಂಧವಿಟ್ಟು ಆಚರಿಸುವ ನಿಲುಕಡೆ ಎಂತೆಂದಡೆ: ಅಯ್ಯಾ, ನಿನ್ನ ಷಟ್‍ಸ್ಥಾನದಲ್ಲಿ ನೆಲೆಸಿರ್ಪ ಇಷ್ಟಮಹಾಲಿಂಗದೇವನ ತ್ರಿವಿಧಸ್ಥಾನದಲ್ಲಿ ಓಂ ಬಸವಣ್ಣ ಚೆನ್ನಬಸವಣ್ಣ ಅಲ್ಲಮಪ್ರಭುವೆಂಬ ತ್ರಿವಿಧ ನಾಮಸ್ವರೂಪವಾದ ಷೋಡಶಾಕ್ಷರಂಗಳೆ ಷೋಡಶವರ್ಣವಾಗಿ ನೆಲೆಸಿಪ್ಪರು ನೋಡಾ. ಇಂತು ಷೋಡಶಕಳಾಸ್ವರೂಪವಾದ ಚಿದ್ಘನ ಮಹಾಲಿಂಗದೇವನ ನಿರಂಜನ ಜಂಗಮದೋಪಾದಿಯಲ್ಲಿ ಸಗುಣ ನಿರ್ಗುಣ ಪೂಜೆಗಳ ಮಾಡಿ ಜಂಗಮಚರಣಸೋಂಕಿನಿಂ ಬಂದ ಗುರುಪಾದೋದಕವಾದಡೂ ಸರಿಯೆ, ಅದು ದೊರೆಯದಿದ್ದಡೆ, ಲಿಂಗಾಣತಿಯಿಂ ಬಂದೊದಗಿದ ಪರಿಣಾಮೋದಕವಾದಡೂ ಸರಿಯೆ, ಒಂದು ಭಾಜನದಲ್ಲಿ ಸೂಕ್ಷ್ಮದಿಂ ರಚಿಸಿ ಆ ಉದಕದೊಳಗೆ ಹಸ್ತೋದಕ ಮಂತ್ರೋದಕ ಭಸ್ಮೋದಕವ ಮಾಡಿ, ಆ ಮೇಲೆ ಅನಾದಿ ಮೂಲಪ್ರಣವ ಪ್ರಸಾದಪ್ರಣವದೊಳಗೆ ಅಖಂಡಜ್ಯೋತಿಪ್ರಣವ, ಅಖಂಡಮಹಾಜ್ಯೋತಿಪ್ರಣವವ ಲಿಖಿತವಮಾಡಿ, ಶುದ್ಧಾದಿಯಾದ ಪೂರ್ಣಭಕ್ತಿಯಿಂದ ಮಹಾಚಿದ್ಘನತೀರ್ಥವೆಂದು ಭಾವಿಸಿ ಪಂಚಾಕ್ಷರ ಷಡಕ್ಷರ ಮಂತ್ರಧ್ಯಾನದಿಂದ ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ, ಮೂರು ವೇಳೆ ಪ್ರದಕ್ಷಿಣವ ಮಾಡಿ, ಆ ಚಿದ್ಘನ ತೀರ್ಥವನು ದ್ವಾದಶದಳ ಕಮಲದ ಮಧ್ಯದಲ್ಲಿ ನೆಲೆಸಿರ್ಪ ಇಷ್ಟ ಮಹಾಲಿಂಗ ಜಂಗಮಕ್ಕೆ ಅಷ್ಟವಿಧಮಂತ್ರ ಸಕೀಲಂಗಳಿಂದ ಆಚಾರಾದಿ ಶೂನ್ಯಾಂತವಾದ ಅಷ್ಟವಿಧ ಲಿಂಗಧ್ಯಾನದಿಂದ ಅಷ್ಟವಿಧ ಬಿಂದುಗಳ ಸಮರ್ಪಿಸಿದಲ್ಲಿಗೆ ಅಷ್ಟವಿಧೋದಕವಾಗುವುದಯ್ಯಾ. ಆ ಇಷ್ಟಮಹಾಲಿಂಗ ಜಂಗಮವೆತ್ತಿ ಅಷ್ಟಾದಶಮಂತ್ರ ಸ್ಮರಣೆಯಿಂದ ಮುಗಿದಲ್ಲಿಗೆ ನವಮೋದಕವಾಗುವುದಯ್ಯಾ. ಉಳಿದೋದಕವ ತ್ರಿವಿಧ ಪ್ರಣವಧ್ಯಾನದಿಂದ ಮುಕ್ತಾಯವ ಮಾಡಿದಲ್ಲಿಗೆ ದಶವಿಧೋದಕವೆನಿಸುವುದಯ್ಯಾ. ಹೀಗೆ ಮಹಾಜ್ಞಾನ ಲಿಂಗಜಂಗಮಸ್ವರೂಪ ಪಾದತೀರ್ಥ ಮುಗಿದ ಮೇಲೆ ತಟ್ಟೆ ಬಟ್ಟಲಲ್ಲಿ ಎಡೆಮಾಡಬೇಕಾದಡೆ ಗೃಹದಲ್ಲಿರ್ದ ಕ್ರಿಯಾಶಕ್ತಿಯರಿಗೆ ಧಾರಣವಿರ್ದಡೆ ತಾ ಸಲಿಸಿದ ಪಾದೋದಕ ಪ್ರಸಾದವ ಕೊಡುವುದಯ್ಯಾ. ಸಹಜಲಿಂಗಭಕ್ತರಾದಡೆ ಮುಖ ಮಜ್ಜನವ ಮಾಡಿಸಿ ತಾ ಧರಿಸುವ ವಿಭೂತಿಧಾರಣವ ಮಾಡಿಸಿ ಶಿವಶಿವಾ ಹರಹರ ಬಸವಲಿಂಗಾ ಎಂದು ಬೋಧಿಸಿ ಎಡೆಮಾಡಿಸಿಕೊಂಬುವುದಯ್ಯಾ. ಆಮೇಲೆ ತಾನು ಸ್ಥಲವಾದಡೆ ಸಂಬಂಧಪಟ್ಟು, ಪರಸ್ಥಲವಾದಡೆ ಚಿದ್ಘನ ಇಷ್ಟಮಹಾಲಿಂಗ ಜಂಗಮವ ವಾಮಕರಸ್ಥಲದಲ್ಲಿ ಮೂರ್ತಮಾಡಿಸಿಕೊಂಡು ದಕ್ಷಿಣಹಸ್ತದಲ್ಲಿ ಗುರುಲಿಂಗಜಂಗಮ ಸೂತ್ರವಿಡಿದು ಬಂದ ಕ್ರಿಯಾಭಸಿತವ ಲೇಪಿಸಿ, ಮೂಲಪ್ರಣವ ಪ್ರಸಾದಪ್ರಣವದೊಳಗೆ ಗೋಳಕಪ್ರಣವ ಅಖಂಡಗೋಳಕಪ್ರಣವ ಅಖಂಡ ಮಹಾಗೋಳಕಪ್ರಣವ, ಜ್ಯೋತಿಪ್ರಣವ ಧ್ಯಾನದಿಂದ ದ್ವಾದಶ ಮಣಿಯ ಧ್ಯಾನಿಸಿ ಪ್ರದಕ್ಷಿಸಿ, ಮೂಲಮೂರ್ತಿ ಲಿಂಗಜಂಗಮದ ಮಸ್ತಕದ ಮೇಲೆ ಸ್ಪರ್ಶನವ ಮಾಡಿ, ಬಟ್ಟಲಿಗೆ ಮೂರು ವೇಳೆ ಸ್ಪರ್ಶನವ ಮಾಡಿ, ಪದಾರ್ಥದ ಪೂರ್ವಾಶ್ರಯವ ಕಳೆದು ಶುದ್ಧಪ್ರಸಾದವೆಂದು ಭಾವಿಸಿ, ಆ ಇಷ್ಟ ಮಹಾಲಿಂಗ ಜಂಗಮಕ್ಕೆ ಅಷ್ಟಾದಶ ಮಂತ್ರಸ್ಮರಣೆಯಿಂದ ಮೂರುವೇಳೆ ರೂಪ ಸಮರ್ಪಿಸಿ, ಎರಡು ವೇಳೆ ರೂಪ ತೋರಿ, ಚಿರಪ್ರಾಣಲಿಂಗ ಮಂತ್ರ ಜಿಹ್ವೆಯಲ್ಲಿಟ್ಟು ಆರನೆಯ ವೇಳೆಗೆ ಭೋಜ್ಯಗಟ್ಟಿ ಆ ಇಷ್ಟಮಹಾಲಿಂಗ ಮಂತ್ರಧ್ಯಾನದಿಂದ ಸಮರ್ಪಿಸಿ, ಷಡ್ವಿಧ ಲಿಂಗಲೋಲುಪ್ತಿಯಿಂದ ಸಂತೃಪ್ತನಾಗಿ ಆಚರಿಸಿದಾತನೆ ಗುರುಭಕ್ತನಾದ ನಿಚ್ಚಪ್ರಸಾದಿಯೆಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಶಿಷ್ಯನ ಪೂರ್ವಾಶ್ರಯವ ಗುರು ಕಳೆದನೆಂಬರು, ಆ ನುಡಿಯ ಕೇಳಲಾಗದು. ಗುರುವಿನ ಪೂರ್ವಾಶ್ರಯವ ಶಿಷ್ಯ ಕಳೆವನಲ್ಲದೆ, ಶಿಷ್ಯನ ಪೂರ್ವಾಶ್ರಯವ ಗುರು ಕಳೆಯಲರಿಯ. ಶರಣನ ಪೂರ್ವಾಶ್ರಯವ ಲಿಂಗ ಕಳೆಯಿತ್ತೆಂಬರು ಆ ನುಡಿಯ ಕೇಳಲಾಗದು, ಲಿಂಗದ ಪೂರ್ವಾಶ್ರಯವ ಶರಣ ಕಳೆವನಲ್ಲದೆ, ಆ ಶರಣನ ಪೂರ್ವಾಶ್ರಯವ ಲಿಂಗವು ಕಳೆಯಲರಿಯದು. ಭಕ್ತನ ಪೂರ್ವಾಶ್ರಯವ ಜಂಗಮ ಕಳೆಯಿತ್ತೆಂಬರು ಆ ನುಡಿಯ ಕೇಳಲಾಗದು, ಜಂಗಮದ ಪೂರ್ವಾಶ್ರಯವ ಭಕ್ತ ಕಳೆವನಲ್ಲದೆ, ಆ ಭಕ್ತನ ಪೂರ್ವಾಶ್ರಯವ ಜಂಗಮ ಕಳೆಯಲರಿಯ. ಪ್ರಸಾದಿಯ ಪೂರ್ವಾಶ್ರಯವ ಪ್ರಸಾದ ಕಳೆಯಿತ್ತೆಂಬರು ಆ ನುಡಿಯ ಕೇಳಲಾಗದು, ಪ್ರಸಾದದ ಪೂರ್ವಾಶ್ರಯವ ಪ್ರಸಾದಿ ಕಳೆವನಲ್ಲದೆ ಆ ಪ್ರಸಾದಿಯ ಪೂರ್ವಾಶ್ರಯವ ಪ್ರಸಾದ ಕಳೆಯಲರಿಯದು. ಆ ಪ್ರಸಾದದ ಪೂರ್ವಾಶ್ರಯವ ಕಳೆಯಲಿಕಾಗಿ ಮಹಾಪ್ರಸಾದಿಯಾದ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಪ್ರಾಣಲಿಂಗದ ಪೂರ್ವಾಶ್ರಯವ ಕಳೆಯಲೆಂದು ಲಿಂಗಪ್ರಾಣಿಯಾದ, ಲಾಂಛನದ ಪೂರ್ವಾಶ್ರಯವ ಕಳೆಯಲೆಂದು ಜಂಗಮಪ್ರೇಮಿಯಾದ, ಪ್ರಸಾದದ ಪೂರ್ವಾಶ್ರಯವ ಕಳೆಯಲೆಂದು ಪ್ರಸಾದಿಯಾದ, [ಇಂತೀ] ತ್ರಿವಿಧದ ಪೂರ್ವಾಶ್ರಯವ ಕಳೆಯಲೆಂದು ಮಹಾಗುರುವಾಗಿ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣನಾದ.
--------------
ಚನ್ನಬಸವಣ್ಣ
ಸಾರಾಯ ಪದಾರ್ಥವನಾರಯ್ಯಬೇಕೆಂದು ಶರಣ ಮತ್ರ್ಯಕ್ಕೆ ಬಂದು, ತನ್ನ ಇಪ್ಪತ್ತೈದಿಂದ್ರಿಯಂಗಳ ಭಕ್ತರ ಮಾಡಿ, ಮೆಲ್ಲಮೆಲ್ಲನೆ ಅವರ ಪೂರ್ವಾಶ್ರಯವ ಕಳೆದು ಕಲ್ಪಿತವಿಲ್ಲದೆ ಅರ್ಪಿತವ ಮಾಡಲು, ಇಂದ್ರಿಯಂಗಳು ತಮ್ಮ ತಮ್ಮ ಮುಖದಲ್ಲಿ ಗ್ರಹಿಸಲಮ್ಮದೆ ಕೂಡಲಚೆನ್ನಸಂಗಂಗೆ ಬೇಕೆಂದು ಹಿಡಿದು ಕೊಂಡೈದವೆ !
--------------
ಚನ್ನಬಸವಣ್ಣ
ಜಗತ್ರಯದ ಹೊ[ಲೆ]ಯನೆಲ್ಲವನು ಉದಕ ಒಳಕೊಂಬುವುದು. ಉದಕದ ಪೂರ್ವಾಶ್ರಯವ ಕಳೆವಡಾರಳವಲ್ಲ. ಅದೆಂತೆಂದಡೆ; ಯದಾ ಪೃಥ್ವೀಶ್ಮಶಾನಂ ಚ ತದಾ ಜಲಂ ನಿರ್ಮಲಿನಕಂ ಮಹಾಲಿಂಗಂ ತು ಪೂಜಾನಾಂ ವಿಶೇಷಂ ಪಾಕಂ ಭವೇತ್ ಎಂದುದಾಗಿ. ಅದಕ್ಕೆ ಮತ್ತೆಯು; ಪ್ರಥಮಂ ಮಾಂಸತೋಯಾನಾಂ ದ್ವಿತೀಯಂ ಮಾಂಸಗೋರಸಃ ತೃತೀಯಂ ಮಾಂಸನಾರೀಣಾಂ ಕಸ್ಯ ಶೀಲಂ ವಿಧೀಯತೇ ಎಂದುದಾಗಿ, ಯಥಾ ಉದಕದಿಂದಲಿ ಅಗ್ನಿಯಿಂದಲಿ ಪಾಕವಾದ ದ್ರವ್ಯಪದಾರ್ಥಂಗಳೆಲ್ಲವು ಜೀವಮಯವೆಂದು ಹೇಳುತಿರ್ದವಾಗಿ, ಆ ದೋಷದಿಂದಲಾದ ಭೋಜನವನು ಲಿಂಗಕ್ಕೆ ಸಮರ್ಪಿಸಲಾಗದು. ಅದೆಂತೆಂದಡೆ; ಭೂಮಿದ್ರ್ರವ್ಯಂ ಯಥಾ ಮಾಂಸಂ ಪ್ರಾಣಿದ್ರವ್ಯಂ ಯಥಾ ಮಧು ಸರ್ವಭೂತಮಯಂ ಜೀವಂ ಜೀವಂ ಜೀವೇನ ಭಕ್ಷಿತಂ ಎಂದುದಾಗಿ ಇಂಥ ಉದಕದ ಪೂರ್ವಾಶ್ರಯವು, ಬೋನದ ಪೂರ್ವಾಶ್ರಯವು, ಹೇಗೆ ಹೋಹುದಯ್ಯಾ ಎಂದಡೆ: ಉದಕದ ಪೂರ್ವಾಶ್ರಯವು ಜಂಗಮದ ಪಾದತೀರ್ಥ ಮುಖದಿಂದ ಹೋಯಿತ್ತು, ಬೋನದ ಪೂರ್ವಾಶ್ರಯವು ಜಂಗಮದ ಪ್ರಸಾದದ ಮುಖದಿಂದ ಹೊಯಿತ್ತು. ಇದು ಕಾರಣ, ಈ ವರ್ಮ ಸಕೀಲವು ಪ್ರಭುದೇವರ ವಳಿ ಬಸವಣ್ಣನ ವಂಶಕ್ಕಲ್ಲದೆ ಮತ್ತಾರಿಗೂ ಅಳವಡದು ಕಾಣಾ ಕೂಡಲಸಂಗಮದೇವಾ.
--------------
ಬಸವಣ್ಣ
ಅಯ್ಯಾ, ಕ್ರಿಯಾವಿಭೂತಿಯ ಧರಿಸಿದ ಭಕ್ತನು ಚಿದ್ರುದ್ರಾಕ್ಷಿಯ ಧರಿಸಿ ಮಂತ್ರಧ್ಯಾನವ ಮಾಡಬೇಕಾದ ನಿಮಿತ್ತ, ಪ್ರಥಮದಲ್ಲಿ ರುದ್ರಾಕ್ಷಿಮಣಿಗಳ ಕ್ರಮವ ಮಾಡದೆ, ಅವರು ಹೇಳಿದಂತೆ ಕ್ರಯವ ಕೊಟ್ಟು ಮುಖಭಿನ್ನವಾದುದನುಳಿದು, ಸ್ವಚ್ಛವಾದ ರುದ್ರಾಕ್ಷಿಗಳ ಶ್ರೀಗುರುಲಿಂಗಜಂಗಮದ ಸನ್ನಿಧಿಗೆ ತಂದು ವೃತ್ತಸ್ಥಾನದ ಪರಿಯಂತರವು ಧೂಳಪಾದೋದಕವ ಮಾಡಿ, ಆ ರುದ್ರಾಕ್ಷಿಯ ಪೂರ್ವಾಶ್ರಯವ ಕಳೆದು, ಲಿಂಗಧಾರಕಭಕ್ತರಿಂದ ಗುರುಪಾದೋದಕ ಮೊದಲಾಗಿ ಶಿವಪಂಚಾಮೃತದಿಂದ ಇಪ್ಪತ್ತೊಂದು ಪೂಜೆಯ ಮಾಡಿಸಿ ಆಮೇಲೆ ಶ್ರೀಗುರುಲಿಂಗಜಂಗಮದ ಪಾದಪೂಜೆಗೆ ಧರಿಸಿ, ಆಮೇಲೆ ಲಿಂಗಜಂಗಮಕ್ಕೆ ಸಮರ್ಪಿಸಿ, ಅವರಿಂದ ದಯಚಿತ್ತವ ಪಡೆದು, ಶರಣುಹೊಕ್ಕು ಮಹಾಪ್ರಸಾದವೆಂದು ಬೆಸಗೊಂಡು, ಆ ಕರುಣಾಕಟಾಕ್ಷ ಮಾಲೆಗಳ ಭಿನ್ನವಿಟ್ಟು ಅರ್ಚಿಸದೆ, ಅಭಿನ್ನಸ್ವರೂಪು ಮುಂದುಗೊಂಡು ಬಹುಸುಯಿಧಾನದಿಂದ ತನ್ನ ತೊಡೆಯ ಮೇಲೆ ಮೂರ್ತವ ಮಾಡಿಕೊಂಡು, ತನ್ನ ಜ್ಞಾನಪ್ರಕಾಶವೆಂದು ಭಾವಿಸಿ ತನ್ನ ತಾನರ್ಚಿಸಿ, ಮಂತ್ರಧ್ಯಾನಾರೂಢನಾಗಿ ತತ್ತತ್ ಸ್ಥಾನದಲ್ಲಿ ಧರಿಸುವುದಯ್ಯಾ. ಇಂತು ವಿಭೂತಿ ರುದ್ರಾಕ್ಷಿಯ ಧರಿಸಿ ಲಿಂಗನಿಷ್ಠಾಪರನಾದ ಭಕ್ತನು ಸ್ಥಲಮೆಟ್ಟಿಗೆಯಿಂದ ಆಯಾಯ ಮಂತ್ರವ ಹೇಳುವುದಯ್ಯಾ. ಅದರ ವಿಚಾರವೆಂತೆಂದಡೆ: ಕ್ರಿಯಾದೀಕ್ಷಾಯುಕ್ತನಾದ ಉಪಾಧಿಭಕ್ತಂಗೆ ಗುರುಮಂತ್ರವ ಹೇಳುವುದಯ್ಯಾ. ಕ್ರಿಯಾದೀಕ್ಷೆಯ ಪಡೆದು ಗುರುಲಿಂಗಜಂಗಮದಲ್ಲಿ ಅರ್ಥಪ್ರಾಣಾಭಿಮಾನಂಗ? ನಿರ್ವಂಚಕತ್ವದಿಂದ ಸಮರ್ಪಿಸಿ ನಡೆನುಡಿ ಸಂಪನ್ನನಾದ ನಿರುಪಾಧಿಭಕ್ತಂಗೆ ಲಿಂಗಮಂತ್ರವ ಹೇ?ುವುದಯ್ಯಾ ಇವರಿಬ್ಬರ ಆಚರಣೆಯ ಪಡೆದು ಸಮಸ್ತ ಭೋಗಾದಿಗಳು ನೀಗಿಸಿ ಸಚ್ಚಿದಾನಂದನಾದ ಸಹಜಭಕ್ತಂಗೆ ಜಂಗಮಮಂತ್ರವ ಹೇ?ುವುದಯ್ಯಾ. ಆ ಮಂತ್ರಂಗಳಾವುವೆಂದಡೆ: ಶಕ್ತಿಪ್ರಣವ ಹನ್ನೆರಡು ಗುರುಮಂತ್ರವೆನಿಸುವುದಯ್ಯಾ, ಶಿವಪ್ರಣವ ಹನ್ನೆರಡು ಲಿಂಗಮಂತ್ರವೆನಿಸುವುದಯ್ಯಾ, ಶಿವಶಕ್ತಿರಹಿತವಾದ ಹನ್ನೆರಡು ಜಂಗಮಮಂತ್ರವೆನಿಸುವುದಯ್ಯಾ. ಇಂತು ವಿಚಾರದಿಂದ ಉಪಾಧಿ ನಿರುಪಾಧಿ ಸಹಜಭಕ್ತ ಮಹೇಶ್ವರರಾಚರಿಸುವುದಯ್ಯಾ. ಇನ್ನು ನಿರಾಭಾರಿ ವೀರಶೈವನಿರ್ವಾಣ ಸದ್ಭಕ್ತಜಂಗಮಗಣಂಗಳು ಶುದ್ಧಪ್ರಸಾದಪ್ರಣವ ಹನ್ನೆರಡು, ಸಿದ್ಧಪ್ರಸಾದಪ್ರಣವ ಹನ್ನೆರಡು, ಪ್ರಸಿದ್ಧಪ್ರಸಾದಪ್ರಣವ ಹನ್ನೆರಡು, ಇಂತು ವಿಚಾರದಿಂದ ಮೂವತ್ತಾರು ಪ್ರಣವವನೊಡಗೂಡಿ, ಶುದ್ಧಪ್ರಸಾದಪ್ರಣವ ಆಚಾರಲಿಂಗ ಗುರುಲಿಂಗ ಇಷ್ಟಲಿಂಗ ಪರಿಯಂತರ ತ್ರಿವಿಧ ಲಿಂಗಕ್ಕೆಂದು ಮಾಡುವುದಯ್ಯಾ. ಸಿದ್ಧಪ್ರಸಾದಪ್ರಣವ ಶಿವಲಿಂಗ ಜಂಗಮಲಿಂಗ ಪ್ರಾಣಲಿಂಗ ಪರಿಯಂತರ ತ್ರಿವಿಧಲಿಂಗಕ್ಕೆಂದು ಮಾಡುವುದಯ್ಯಾ. ಪ್ರಸಿದ್ಧಪ್ರಸಾದಪ್ರಣವ ಪ್ರಸಾದಲಿಂಗ ಮಹಾಲಿಂಗ ಭಾವಲಿಂಗ ಪರಿಯಂತರ ತ್ರಿವಿಧಲಿಂಗಕ್ಕೆಂದು ಮಾಡುವುದಯ್ಯಾ. ಹೀಗೆ ಹರುಕಿಲ್ಲದೆ ಸ್ಥಲಮೆಟ್ಟಿಗೆಯಿಂದ ಕರುಣಿಸಿದ ಗುರುವಿಂಗೆ ಬೆಸಗೊಂಡ ಶಿಷ್ಯೋತ್ತಮಂಗೆ. ಆಯಾಯ ಲಿಂಗಪ್ರಸಾದ ಒದಗುವುದೆಂದಾಂತ ನಮ್ಮ ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ಶಿಷ್ಯನ ಪೂರ್ವಾಶ್ರಯವ ಕಳೆವುದು ಗುರುವಿಗೆ ಸಹಜ. ಶಿಷ್ಯನು ತನ್ನ ಪೂರ್ವಾಶ್ರಯವ ಕಳೆದು ಶ್ರೀಗುರುಲಿಂಗವ ಮುಟ್ಟುವ ಪರಿ ಎಂತೋ ? ಅರ್ಪಿತ ಹೋಗಿ, ಪ್ರಸಾದವನರಸುವುದೊ ? ಕೂಡಲಚೆನ್ನಸಂಗಯ್ಯನಲ್ಲಿ, ಮಹಾಪ್ರಸಾದಿಯೆ ಬಲ್ಲ.
--------------
ಚನ್ನಬಸವಣ್ಣ
ಜಗತ್ತಿನ ಹೊಲೆಯನೆಲ್ಲವನು ಉದಕ ಕೊಳುವುದು, ಆ ಉದಕದ ಹೊಲೆಯ ಕಳೆದಲ್ಲದೆ ಲಿಂಗಕ್ಕೆ ಮಜ್ಜನಕ್ಕೆರೆವ ಲಿಂಗದ್ರೋಹಿಗಳ ಮಾತಕೇಳಲಾಗದು. ಮೇಘಬಿಂದುವಿನಿಂದಾದ ಉದಕ, ಸೂರ್ಯನ ಮುಖದಿಂದಾಗಿ ದ್ರವ್ಯ, ಅಗ್ನಿಯ ಮುಖದಿಂದಾದ ಪಾಕ_ಇಂತಿವರ ಪೂರ್ವಾಶ್ರಯವ ಕಳೆದಲ್ಲದೆ ಭಕ್ತ ಮಾಹೇಶ್ವರರೂ ಶೀಲಪರರೂ ಮೊದಲಾದ ನಾನಾ ವ್ರತಿಗಳು ಲಿಂಗಕ್ಕೆ ಮಜ್ಜನವ ಮಾಡಲಾಗದು, ಅರ್ಪಿಸಲಾಗದು, ಅದೆಂತೆಂದಡೆ: ಉದಕದ ಪೂರ್ವಾಶ್ರಯವನು, ದ್ರವ್ಯದ ಪೂರ್ವಾಶ್ರಯವನು, ಕಳೆದಲ್ಲದೆ ಲಿಂಗಕ್ಕೆ ಅರ್ಪಿಸಬಾರದು. ಇಂತೀ ತ್ರಿವಿಧದ ಪೂರ್ವಾಶ್ರಯವ ಕಳೆವ ಪರಿಯೆಂತೆಂದಡೆ: ಉದಕದ ಪೂರ್ವಾಶ್ರಯವ ಮಂತ್ರಯುಕ್ತವಾಗಿ ಜಂಗಮದ ಪಾದೋದಕದಿಂದ ಕಳೆದು ಪಾಕಪ್ರಯತ್ನವ ಮಾಡುವುದು. ದ್ರವ್ಯದ ಪೂರ್ವಾಶ್ರಯ ಜಂಗಮದ ಹಸ್ತ ಪರುಷದಿಂದ ಹೋದುದಾಗಿ ಅಗ್ನಿಯಲಾದ ಪಾಕದ ಪೂರ್ವಾಶ್ರಯವು ಜಂಗಮದ ಪ್ರಸಾದದಿಂದ ಹೋಯಿತ್ತು. ಈ ಶಿವನ ವಾಕ್ಯಗಳನರಿದು, ಮತ್ತೆ ಜಂಗಮದ ಪಾದೋದಕದಿಂದ ಪಾಕಪ್ರಯತ್ನವ ಮಾಡಲಾಗದು, ಲಿಂಗಕ್ಕೆ ಮಜ್ಜನಕ್ಕೆರೆಯಲಾಗದೆಂಬ ಶೈವ ಬೌದ್ಧ ಚಾರ್ವಾಕ ಚಾಂಡಾಲ ಶಿವದ್ರೋಹಿಯ ಮಾತಕೇಳಿ, ಬಿಟ್ಟನಾದರೆ,_ಅವ ವ್ರತಭ್ರಷ್ಟ ಅವನ ಮುಖವ ನೋಡಲಾಗದು. ಸಾಕ್ಷಿ:``ಸರ್ವಾಚಾರಪರಿಭ್ರಷ್ಟಃ ಶಿವಾಚಾರೇನ ಶುಧ್ಯತಿ ಶಿವಾಚಾರ ಪರಿಭ್ರಷ್ಟಃ ರೌರವಂ ನರಕಂ ವ್ರಜೇತ್''_ ಇಂತೆಂದುದಾಗಿ, ಸಮಸ್ತವಾದ ವ್ರತಂಗಳಲ್ಲಿ ಭ್ರಷ್ಟರಾದವರ ಶಿವಾಚಾರದಲ್ಲಿ ಶುದ್ಧನ ಮಾಡಬಹುದು, ಶಿವಾಚಾರದಲ್ಲಿ ಭ್ರಷ್ಟರಾದವರಿಗೆ ರೌರವ ನರಕ ತಪ್ಪದು. ಅವಗೆ ಪ್ರಾಯಶ್ಚಿತ್ತವಿಲ್ಲಾಗಿ ಅವನ ಮುಖವ ನೋಡಲಾಗದು, ಮತ್ತಂ ``ವ್ರತಭ್ರಷ್ಟಮುಖಂ ದೃಷ್ಟ್ವಾಶ್ವಾನಸೂಕರವಾಯಸಂ ಅಶುದ್ಧಸ್ಯ ತಥಾದೃಷ್ಟಂ ದೂರತಃ ಪರಿವರ್ಜಯೇತ್''_ಇಂತೆಂದುದಾಗಿ, ವ್ರತಶೀಲಗಳಲ್ಲಿ ನಿರುತನಾದ ಶಿವಶರಣನು ಪಥದಲ್ಲಿ ಆಚಾರಭ್ರಷ್ಟನ ಕಂಡಡೆ ಮುಖವ ನೋಡಿದಡೆ ನಾಯ ಕಂಡಂತೆ ಸೂತಕನ ಕಂಡಂತೆ ಕಾಗೆಯ ಕಂಡಂತೆ ಹೇಸಿಗೆಯ ಕಂಡಂತೆ ತೊಲಗುವುದು. ಆ ವ್ರತವ ಬಿಡಿಸಿದವನು, ಅವನ ಮಾತ ಕೇಳಿ ಬಿಟ್ಟವನು ಇಬ್ಬರಿಗೂ ಗುರುಲಿಂಗಜಂಗಮ ಪಾದೋದಕ ಪ್ರಸಾದಕ್ಕೆ ಹೊರಗಾಗಿ ಅನಂತಕಾಲ ನರಕವನೈದುವರು. ಆ ಪಾಪಿಗಳ ಮುಖವ ನೋಡಲಾಗದು, ನುಡಿಸಲಾಗದು ವ್ರತನಿಷ್ಠೆಯುಳ್ಳವರು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತ್ರಿವಿಧ ತನುವಿಗೆ ತ್ರಿವಿಧ ದೀಕ್ಷೆ. ತ್ರಿವಿಧ ದೀಕ್ಷೆಗೆ ತ್ರಿವಿಧ ಲಿಂಗ. ತ್ರಿವಿಧ ಲಿಂಗಕ್ಕೆ ತ್ರಿವಿಧ ಕರವ ತೋರಿದ ಗುರುವೆ ಶರಣು. ಅದು ಎಂತೆಂದರೆ : ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು ಸ್ಥೂಲತನುವಿನ ಪೂರ್ವಾಶ್ರಯವ ಕಳೆದು ಕ್ರಿಯಾದೀಕ್ಷೆಯ ಮಾಡಿದ ಗುರುವೆ ಶರಣು. ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಸೂಕ್ಷ್ಮತನುವಿನ ಪೂರ್ವಾಶ್ರಯವ ಕಳೆದು ಪ್ರಣಮಪಂಚಾಕ್ಷರಿಯ ಕರ್ಣದಲ್ಲಿ ಹೇಳಿ, ಮಂತ್ರದೀಕ್ಷೆಯ ಮಾಡಿದ ಗುರುವೆ ಶರಣು. ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು ಕಾರಣತನುವಿನ ಪೂರ್ವಾಶ್ರಯವ ಕಳೆದು ಮಸ್ತಕದಲ್ಲಿ ಹಸ್ತವ ಮಡುಗಿ ವೇಧಾದೀಕ್ಷೆಯನಿತ್ತ ಮದ್ಗುರುವೆ ಶರಣು. ನಿಮ್ಮ ಪಾದದಡಿದಾವರೆಯೊಳು ಮನವ ಭೃಂಗನ ಮಾಡಿಸು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶಿಲೆಯೆಂಬ ಪೂರ್ವಾಶ್ರಯವ ಕಳೆದು ಲಿಂಗವೆಂದ, ನರನೆಂಬ ಪೂರ್ವಾಶ್ರಯವ ಕಳೆದು ಗುರುವೆಂದ, ಜಾತಿಸೂತಕದ ಪೂರ್ವಾಶ್ರಯವ ಕಳೆದು ಜಂಗಮವೆಂದ, ಎಂಜಲೆಂಬ ಪೂರ್ವಾಶ್ರಯವ ಕಳೆದು ಪ್ರಸಾದವೆಂದ. ಇಂತೀ ಚತುರ್ವಿಧ ಪೂರ್ವಾಶ್ರಯವ ಕಳೆಯಬಲ್ಲನಾಗಿ ಕೂಡಲಚೆನ್ನಸಂಗಯ್ಯನಲ್ಲಿ ಶರಣ ಸ್ವತಂತ್ರ,
--------------
ಚನ್ನಬಸವಣ್ಣ
ಘನವೆಂಬ ಮನದ ತಲೆವಾಗಿಲಲ್ಲಿ ಸದಾ ಸನ್ನಹಿತನಾಗಿಪ್ಪೆಯಯ್ಯಾ. ಸಕಲಪದಾರ್ಥದ ಪೂರ್ವಾಶ್ರಯವ ಕಳೆದುಬಹ ಸುಖಂಗಳನವಧರಿಸುತಿಪ್ಪೆಯಯ್ಯಾ, ನಿನ್ನ ಮುಟ್ಟಿ ಬಂದುದಲ್ಲದೆ ಎನ್ನ ಮುಟ್ಟದೆಂಬ ಎನ್ನ ಮನದ ನಿಷ್ಠೆಗೆ ನೀನೆ ಒಡೆಯ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆತ್ಮನಲ್ಲಿ ಪ್ರಣವಪಂಚಾಕ್ಷರಿಯ ನಿರವಿಸಿ, ಸದ್ಗುರುವೆ ಎನ್ನ ಶಿವಾತ್ಮನ ಮಾಡಿದಿರಾಗಿ, ಆತ್ಮಶುದ್ಧಿಯಾಯಿತ್ತೆನಗೆ. ಪಂಚಭೂತಂಗಳಲಿ ಪಂಚಬ್ರಹ್ಮನನಿರಿಸಿದಿರಾಗಿ, ಭೂತಶುದ್ಧಿಯಾಯಿತ್ತೆನಗೆ. ಅಂಡಜ ಜರಾಯುಜಾದಿ ಎಂಬತ್ತುನಾಲ್ಕುಲಕ್ಷ ಯೋನಿಯಲ್ಲಿ ಬಹ ಜೀವನ ಅಯೋನಿಜನ ಮಾಡಿದಿರಾಗಿ ಜೀವಶುದ್ಧಿಯಾಯಿತ್ತೆನಗೆ. ಅಂಗಾಶ್ರಯವ ಕಳೆದು ಲಿಂಗಾಶ್ರಯವ ಮಾಡಿದಿರಾಗಿ ಮನಶ್ಶುದ್ಧಿಯಾಯಿತ್ತೆನಗೆ. ಪಶುವೆಂಬ ಅಜ್ಞಾನದ್ರವ್ಯವ ಕಳೆದು ಪರಮಸುಜ್ಞಾನದ್ರವ್ಯವ ಮಾಡಿದಿರಾಗಿ ದ್ರವ್ಯಶುದ್ಧಿಯಾಯಿತ್ತೆನಗೆ. ಇಂತು ಸರ್ವಶುದ್ಧನಂ ಮಾಡಿ ಪೂರ್ವಾಶ್ರಯವ ಕಳೆದಿರಾಗಿ ಕೂಡಲಚೆನ್ನಸಂಗಾ, ನಿಮ್ಮುವ `ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂ : ಎನುತಿರ್ದೆನು.
--------------
ಚನ್ನಬಸವಣ್ಣ
ಅಕಾಯನೆಂಬ ಜಂಗಮ ಮತ್ರ್ಯಕ್ಕೆ ಬಂದು, ಎನ್ನ ಧನ್ಯನ ಮಾಡಲೆಂದು, ಸಕಲ ಧಾನ್ಯಗಳ ಪೂರ್ವಾಶ್ರಯವ ಕಳೆದು ಪ್ರಸಾದವೆಂದು ಹೆಸರಿಟ್ಟನು. ಆ ಜಂಗಮದ ಹಸ್ತದಲ್ಲಿ ಭಕ್ತಿ ಇಹುದು, ಆ ಜಂಗಮದ ಜಿಹ್ವೆಯಲ್ಲಿ ಪ್ರಸಾದ ಇಹುದು, ಆ ಜಂಗಮದ ದೇಹದಲ್ಲಿ ಜಂಗಮ ಇಹುದು. ಇಂತೀ ತ್ರಿವಿಧಪ್ರಸಾದವನಿಕ್ಕಿದ ಜಂಗಮಕ್ಕೆ ಶರಣೆಂದು ಶುದ್ಧನಾದೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ತನುವಿನ ಸ್ವಾರ್ಥಕ್ಕೆ ಪದಾರ್ಥದ ಪೂರ್ವಾಶ್ರಯವ ಕಳೆದು, ಲಿಂಗಕ್ಕೆ ಕೊಟ್ಟು ಕೊಂಬುದು ಶುದ್ಧ. ಮನದ ಸ್ವಾರ್ಥಕ್ಕೆ ರುಚಿಯ ಪೂರ್ವಾಶ್ರಯವ ಕಳೆದು, ಲಿಂಗಕ್ಕೆ ಕೊಟ್ಟು ಕೊಂಬುದು ಸಿದ್ಧ. ಈ ಉಭಯ ಕ್ರಿಯಾಭಾವವಳಿದುಳಿದ ಪ್ರಸಿದ್ಧ ಪ್ರಸಾದವ, ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಇನ್ನಷ್ಟು ... -->