ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಲೆಯ ಮನೆಯೊಳಗಣ ಕಿಚ್ಚು ಅಲೆದಾಡದ ಮುನ್ನ, ಊರ ಮುಂದೆ ನಾಲ್ವರು ಸತ್ತು ಒಳಗೆ ಬೇವುದ ಕಂಡೆ. ಊರು ಬೆಂದು, ಕಿಚ್ಚಿನ ಊನ್ಯವ ಕೇಳಬಂದ ರಕ್ಷಿ, ಹುಲಿಯನೇರಿಕೊಂಡು ಕಳೆದುಳಿದುದಕ್ಕೆ ತಾನೊಡತಿಯಾಗಿ ಊರುಂಬಳಿಯನುಂಬುದ ಕಂಡೆ. ಅತ್ತುದೊಂದಲ್ಲದೆ ಹೆಣ ಬಂದು ಕಚ್ಚದಿದೇನು ಚೋದ್ಯದ ದುಃಖ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಭಕ್ತಿಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಮಹೇಶ್ವರಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಪ್ರಸಾದಿಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಪ್ರಾಣಲಿಂಗಿಸ್ಥಲವೆಂತು ಅಳವಡುವುದಯ್ಯಾ ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಶರಣಸ್ಥಲವೆಂತು ಅಳವಡುವುದಯ್ಯಾ ! ಅಷ್ಟಾವರಣದಲ್ಲಿ ನೈಷ್ಠೆವಾರಿಯಾಗದನ್ನಕ್ಕರ ಐಕ್ಯಸ್ಥಲವೆಂತು ಅಳವಡುವುದಯ್ಯಾ ! ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯಸ್ಥಲವೆಂಬ ಷಡುಸ್ಥಲಕ್ಕೆ ಅಷ್ಟಾವರಣವೆ ಮುಖ್ಯ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಗಜೇಶ ಅಜಹರಿಸುರರೊಂದ್ಯ, ಜಗದಗಲಾತ್ಮ ಅಮೃತಕರ ಅಘಗಿರಿಗೊಜ್ರ ಅನಲಾಕ್ಷ ಅನಾಮಯ ಅಚಲ ಅಗಣಿತ ಅತಿಸತ್ಯ ಅಭವ ಅಭಂಗ ಅತಿಪರಾಕ್ರಮ ಆನಂದ ಅಪರಂಪಾರ ಆದಿಸ್ವಯಂಭೂ ಆಧ್ಯಾತ್ಮಪರಂಜ್ಯೋತಿ ಅಕಳಂಕ ಅಮಲ ಅದೃಶ್ಯ ಅಕಲ್ಪ ಅಭವ ಅರುಣೋದಯ ಅನುಪಮ ಅಘಟಿತ ಅಚರಿತ್ರ ಐಶ್ವರ್ಯ ಅದ್ಭುತ ಆದ್ಯ ಆರಾಧ್ಯ ಅಂಗಸಂಗ ಅಮರಗಣವಂದ್ಯ ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅತ್ತಿಯಹಣ್ಣಿಗಾಗಿ ಬಂದು ಸಿಕ್ಕಿದ ಪಿಕಳಿಯಂತೆ ವ್ಯರ್ಥ ಕಾಯರಸವಿಷಯಕ್ಕಾಸೆಗೈದು ಸತ್ತು ಸತ್ತು ಹುಟ್ಟಿ ಭವಕ್ಕೆ ಗುರಿಯಾಗಿ, ಮಾಯಾಬಲೆಯ ಸಂಸಾರಬಂಧನದೊಳು ಬಂದು ಸಿಲ್ಕಿದೆನಯ್ಯಾ. ಮಾಯೆಯ ಹರಿದು, ಸಂಸಾರಬಂಧನವ ಕೆಡಿಸಿ, ಭವರೋಗಕ್ಕೆ ವೈದ್ಯನ ಮಾಡೋ ಶಿವ ವಿಶ್ವಕುಟುಂಬಿ ಮಹಾದೇವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂತರಂಗದ ಅಷ್ಟಮದ ಅವಾವೆಂದರೆ ಹೇಳುವೆ ಕೇಳಿರಣ್ಣಾ : ಪೃಥ್ವಿಮದ ಸಲಿಲಮದ ಪಾವಕಮದ ಪವನಮದ ಅಂಬರಮದ ರವಿಮದ ಶಶಿಮದ ಆತ್ಮಮದವೆಂಬ ಅಷ್ಟಮೂರ್ತಿಯ ಮದಂಗಳು. ಇವರ ಗುಣಧರ್ಮಕರ್ಮವೆಂತೆಂದಡೆ, ಅದಕ್ಕೆ ವಿವರ ; ಪೃಥ್ವಿಮದವೆತ್ತಿದಲ್ಲಿ ತನುಗುಣಭರಿತನಾಗಿ, ಆಭರಣ ಅನುಲೇಪನ ತಾಂಬೂಲವಂ ಬಯಸುತ್ತಿಹನು. ಸಲಿಲಮದವೆತ್ತಿದಲ್ಲಿ ಸಂಸಾರಭರಿತನಾಗಿ, ಎನಗೆ ಬೇಕು, ಮನೆಗೆ ಬೇಕು, ಮಕ್ಕಳಿಗೆ ಬೇಕು ಎನುತಿಹನು. ಪಾವಕಮದವೆತ್ತಿದಲ್ಲಿ ಕಾಮರಸಭರಿತನಾಗಿ, ಕರಸಬೇಕು ನುಡಿಸಬೇಕು ಆಲಿಂಗಿಸಬೇಕು ಎನುತಿಹನು. ಪವನಮದವೆತ್ತಿದಲ್ಲಿ ಕೋಪಾಗ್ನಿಭರಿತನಾಗಿ, ಕೊಂದೇನು ತಿಂದೇನು ಸಾದ್ಥಿಸೇನು ಭೇದಿಸೇನು [ಎನುತಿಹನು]. ಶಶಿಮದವೆತ್ತಿದಲ್ಲಿ ಚಿಂತಾಭರಿತನಾಗಿ, ಆದೀತೊ ಆಗದೊ, ಇದ್ದೀತೊ ಇಲ್ಲವೊ ಎನುತಿಹನು. ಆತ್ಮಮದವೆತ್ತಿದಲ್ಲಿ ಅಹಂಕಾರಭರಿತನಾಗಿ, ಎನಗಿಂದು ಅದ್ಥಿಕರಿಲ್ಲ, ಎನಗಿಂದು ಇದಿರಿಲ್ಲವೆಂದು ಅಹಂಭಾವದಿಂದ ಅಹಂಕರಿಸುತ್ತಿಹನು. ಇಂತೀ ಅಷ್ಟಮೂರ್ತಿಮದಂಗಳ ಭ್ರಾಂತಿನ ಬಲೆಯೊಳಿಟ್ಟೆನ್ನನಗಲದಿರು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಗ್ನಿಗೆ ಮೈಯೆಲ್ಲ ಮುಖ, ಬಲಕೆ ಮೈಯೆಲ್ಲ ಕಾಲು. ಆತ್ಮದೇಹಿಂಗೆ ದಶವಾಯುಗಳ ಮುಖದಲ್ಲಿ ಹರಿವ ಕರಣೇಂದ್ರಿಯಂಗಳೆಲ್ಲ ಮುಖ ಕಾಲಾಗಿ ಚರಿಸುತಿಪ್ಪವು. ತನುವೆಂಬ ಕೊಟಾರದೊಳು ಚರಿಸಿದರೇನು ? ಅವಕೆ ಬೆಸಸೆ ಎನ್ನ ಸ್ವತಂತ್ರವಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅರ್ಥ ಪ್ರಾಣ ಅಬ್ಥಿಮಾನವ ಗುರುಲಿಂಗಜಂಗಮಕ್ಕೆ ಸವೆದು, ಸಂಸಾರಬಂಧನವ ಕಳೆದ ಸಂಸಾರಿಗಳಿಗೆ ಸದ್ಭಕ್ತರಿಗೆ ಸಂಸಾರಿಗಳೆನಬಹುದೆ ? ಎನಲಾಗದು. ಅದು ಎಂತೆಂದರೆ : ಚಂದ್ರಮನ ಕಿರಣದೊಳು ಬಿಸಿಯುಂಟೇನಯ್ಯಾ ? ಪರಮಾತ್ಮನ ಬೆರೆದ ನಿಬ್ಬೆರಗಿ[ನ] ಶರಣರಿಗೆ ಸಂಸಾರ ಉಂಟೇನಯ್ಯಾ ? ತನುಸಂಸಾರಂಭವ ಗುರುವಿಂಗಿತ್ತು, ಮನಸಂಸಾರಂಭವ ಲಿಂಗಕ್ಕಿತ್ತು , ಧನಸಂಸಾರಂಭವ ಜಂಗಮಕ್ಕಿತ್ತು ನಿಃಸಂಸಾರಿಯಾಗಿಪ್ಪ ಶರಣ ಬಸವಣ್ಣ ಚೆನ್ನಬಸವಣ್ಣ ಪ್ರಭುರಾಯ ಮುಖ್ಯವಾದ ಪ್ರಮಥಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅರಿಷಡುವರ್ಗವೆಂದೆಂಬ ಕರ್ಮಿಗಳ ಬಲಿಯೊಳಿಟ್ಟೆನ್ನನಗಲಿದೆ. ಅಗಲಿದರೆ, ನಾ ಗೊರಲೆಯ ಹುತ್ತಕ್ಕೆ ಉರಗ ನಡೆಗೊಂಡಂತೆ, ಅರಸಿಲ್ಲದ ರಾಜ್ಯಕ್ಕೆ ಚೋರರ ಹಾವಳಿಯಂತೆ, ನೀ ಪಡೆದೆ ತನುವಿಂಗೆ ನೀನನ್ಯನಾಗಿ ಬರಿಯ ದುರಿತಭ್ರಮೆಗೆನ್ನನಿಟ್ಟು ಬಿಡುಬೀಸಿ ಕಾಡುತ್ತಿದ್ದೆಯಲ್ಲ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂಗದ ಮೇಲೆ ಲಿಂಗವಿಪ್ಪ ಶಿವಭಕ್ತನ ಕಂಡರೆ ಸಂಗಯ್ಯನ ಸಮವೆಂಬೆನಯ್ಯಾ. ಲಿಂಗವಿಲ್ಲದೆ ನಾಲ್ಕು ವೇದವನೋದುವ ವಿಪ್ರನಾದರೂ ಆಗಲಿ, ಹೊಲೆಮಾದಿಗರೇಳು ಜಾತಿಗಿಂತ ಕಡೆಯೆಂಬೆನಯ್ಯಾ. ತಾಯಿಲ್ಲದ ಮಕ್ಕಳಂತೆ, ಗಂಡನಿಲ್ಲದ ಮುಂಡೆಗೆ ಮುತ್ತೈದೆತನವುಂಟೇನಯ್ಯಾ ? ಲಿಂಗವಿಲ್ಲದ ಭವಿ ಏನನೋದಿ ಏನ ಹಾಡಿದರೂ ವ್ಯರ್ಥ. ಸಾಕ್ಷಿ :``ಮಾತಾ ನಾಸ್ತಿ ಯಥಾ ಸುತಂ ಪತಿರ್ನಾಸ್ತಿ ಯಥಾ ನಾರೀ | ಲಿಂಗಂ ನಾಸ್ತಿ ಯಥಾ ಪ್ರಾಣಂ ತಸ್ಯ ಜನ್ಮ ನಿರರ್ಥಕಂ ||'' ಇಂತೆಂಬುದನರಿಯದೆ ವಾಗದ್ವೈತದಿಂದ ತನುಲಿಂಗ ಮನಲಿಂಗ ಪ್ರಾಣಲಿಂಗವೆಂಬ ಹೊಲೆಯರ ಮುಖವನೆನಗೊಮ್ಮೆ ತೋರದಿರಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅನಾದಿ ಆದಂದು ಅನಾದಿಯ ಮರೆಯಲ್ಲಿಯಿದ್ದೆಯಯ್ಯಾ. ತತ್ವಬ್ರಹ್ಮಾಂಡವಾದಂದು ತತ್ವಬ್ರಹ್ಮಾಂಡದ ಮರೆಯಲ್ಲಿಯಿದ್ದೆಯಯ್ಯಾ. ಪಿಂಡಾಂಡವಾದಂದು ಪಿಂಡಾಂಡದ ಮರೆಯಲ್ಲಿಯಿದ್ದೆ ಅಯ್ಯಾ. ಜ್ಞಾನವಾದಂದು ಜ್ಞಾನದ ಮರೆಯಲ್ಲಿದ್ದೆ ಅಯ್ಯಾ. ನಾನಾದಂದು ನನ್ನ ಆತ್ಮದಲ್ಲಿ ನೀನೆ ಹೊಳೆವುತಿದ್ದೆ ಅಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅನಾದಿಪರಶಿವನ ಶಿಷ್ಯ ಆದಿಶಂಭುವೆಂಬ ಗಣೇಶ್ವರ. ಆದಿಗಣೇಶ್ವರನ ಶಿಷ್ಯರು ನಿರಂಜನನೆಂಬ ಗಣೇಶ್ವರ. ನಿರಂಜನನೆಂಬ ಗಣೇಶ್ವರನ ಶಿಷ್ಯರು ಆದಿ ಪಡುವಿಡಿ, ಅನಾದಿ ಪಡುವಿಡಿ, ಶಿವಸಿದ್ಧಪಡುವಿಡಿಯಪ್ರಭುವೆಂಬ ಗಣೇಶ್ವರ. ಪ್ರಭುವೆಂಬ ಗಣೇಶ್ವರನ ಶಿಷ್ಯರು ಮಹಾಂತಮಲ್ಲಿಕಾರ್ಜುನನೆಂಬ ಗಣೇಶ್ವರ. [ಮಹಾಂತ ಮಲ್ಲಿಕಾರ್ಜುನನ] ಶಿಷ್ಯರು ಜಾಲಹಳ್ಳಿಯ ಶಾಂತದೇವರು. ಜಾಲಹಳ್ಳಿಯ ಶಾಂತದೇವರ ಶಿಷ್ಯರು ಸಿದ್ಧಮಲ್ಲಿನಾಥೇಶ್ವರ. ಸಿದ್ಧಮಲ್ಲಿನಾಥೇಶ್ವರನ ಶಿಷ್ಯರು ಪಡುವಿಡಿಯ ರಾಚೇಶ್ವರ. ಪಡುವಿಡಿಯ ರಾಚೇಶ್ವರನ ಕರಕಮಲದಲ್ಲಿ ಉತ್ಪತ್ಯವಾದ ಶಿಶುವು ಹೇಮಗಲ್ಲ ಹಂಪ ನಾನಯ್ಯ. ಹೀಗೆ, ಅನಾದಿವಿಡಿದು ಬಂದ ಗುರು-ಶಿಷ್ಯ ಸಂಬಂಧ, ಅನಾದಿವಿಡಿದು ಬಂದ ಲಿಂಗ-ಜಂಗಮ, ಅನಾದಿವಿಡು ಬಂದ ಭಕ್ತಿ-ಜ್ಞಾನ-ವೈರಾಗ್ಯ. ಇದು ಸತ್ಯ, ಇದು ಸತ್ಯ ಎನ್ನಾಳ್ದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂಗದೊಳಗಣ ಅಷ್ಟಮದಮೋಹಿನಿಗಳನಾರನೂ ಕಾಣೆ. ಭಂಗಿಯ ಸೊಪ್ಪು ತಿಂದ ಬಳ್ಳು ಉಳ್ಳಿಟ್ಟು ಒದರುವಂದದಿ ದೇಹ ಆತ್ಮದ ತಲೆಗೇರಿ, ಬರಿದೆ ವೇದಶಾಸ್ತ್ರಪುರಾಣವೆಂದೋದಿ ಬಲ್ಲವರೆನಿಸಿಕೊಂಬರು ಲಜ್ಜೆಭಂಡರು. ನುಡಿಯಂತೆ ನಡೆಯಲರಿಯದ ಜಡದೇಹಿಗಳ ಮೆಚ್ಚುವನೆ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಷ್ಟತನುಕೋಣೆಯ ಅಷ್ಟಾತ್ಮದ ನಡುವೆ ಕಟ್ಟಿಪ್ಪವೆಂಟಾನೆಯ ಭೂಮಿಯಾಕಾಶಕ್ಕೆ ಬೆಳೆದಿಪ್ಪ ಒಂಟಿ ನುಂಗಿ, ಉಗುಳಲಾರದಿಪ್ಪುದಿದೇನು ಚೋದ್ಯವೋ ! ಒಂಟೆಯ ತಲೆಯಲ್ಲಿ ಉರಿಲಿಂಗ ಹುಟ್ಟಿ, ಎಂಟಾನೆಯ ಸುಟ್ಟು, ಕಂಟಕಂಗಳ ಗೆಲಿದಿಪ್ಪ ಶರಣರ ಚರಣದರುಶನದಿಂದಲೆನ್ನ ಭವ ಹಿಂಗುವಂತೆ[ಮಾಡು] ಭವವಿರಹಿತ ತಂದೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಕಟಾ, ರಾಟಾಳದ ಘಟದಂತೆ ಭವಾರಣ್ಯದೊಳು ತಿರುಗಿತಿರುಗಿ ಸತ್ತು ಸತ್ತು ಹುಟ್ಟುವಂತಿದ್ದೆನಯ್ಯಾ. ಅದು ಎಂತೆಂದರೆ : ಶ್ವೇದಜ ಉದ್ಬಿಜ ಜರಾಯುಜ ಅಂಡಜವೆಂಬ ನಾಲ್ಕು ತೆರದ ಮುಖ್ಯ ಆನೆ ಕಡೆ ಇರುವೆ ಮೊದಲು ಎಂಬತ್ತುನಾಲ್ಕು ಲಕ್ಷ ಜೀವರಾಶಿಯಲ್ಲಿ ಒಂದೊಂದು ಯೋನಿಯಲ್ಲಿ ಸಾವಿರಬಾರಿ ತಿರುಗಿ, ಆವಾವ ಜನ್ಮದಲ್ಲಿ ಆವಾವ ಆಹಾರವನುಂಡು, ಆವಾವ ಭೂಮಿಯಲ್ಲಿ ಪುಟ್ಟಿ, ಆವಾವ ಕರ್ಮವ ಕಂಡು, ಭಂಗ ಬಡುತ್ತಿದ್ದುದಯ್ಯಾ ಶರೀರ. ಸಾಕ್ಷಿ :``ನಾನಾಯೋನಿಸಹಸ್ರಾಣಿ ಕೃತಂ ಚೈವ ತು ಮಾಯಯಾ | ಅನೇಕಂ ವಿವಿಧಾಹಾರಂ ಪೀತಾಶ್ಚ ವಿವಿಧಾಃ ಸ್ತನಾಃ ||'' ಎಂದುದಾಗಿ, ಇಂತಪ್ಪ ಸಂಸಾರಭ್ರಾಂತಿನ ಬಲೆಯ ತೊಲಗಿಸಿ ನಿಃಸಂಸಾರಿಯಾಗಿಪ್ಪ ಶರಣರ ಪಾದಕ್ಕೆ ನಮೋ ನಮೋಯೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಪ್ಪು ಆಕಾಶವ ಬೆರಸಲು ಶಬ್ದ ಹುಟ್ಟಿತ್ತು. ಅಪ್ಪು ಅಪ್ಪುವ ಬೆರಸಲು ರಸ ಹುಟ್ಟಿತ್ತು. ಅಪ್ಪು ವಾಯುವ ಬೆರಸಲು ಸ್ಪರುಶನ ಹುಟ್ಟಿತ್ತು. ಅಪ್ಪು ಅಗ್ನಿಯ ಬೆರಸಲು ರೂಪ ಹುಟ್ಟಿತ್ತು. ಅಪ್ಪು ಪೃಥ್ವಿಯ ಬೆರಸಲು ಗಂಧ ಹುಟ್ಚಿತ್ತು. ಇಂತಿವು ಪಂಚವಿಷಯಂಗಳುತ್ಪತ್ತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಪ್ಪುವಿನೊಳಗಣ ಅಪ್ಪು ರಸ. ಅಪ್ಪುವಿನೊಳಗಣ ಆಕಾಶ ಶಬ್ದ. ಅಪ್ಪುವಿನೊಳಗಣ ವಾಯು ಸ್ಪರುಶನ. ಅಪ್ಪುವಿನೊಳಗಣ ಅಗ್ನಿ ರೂಪ. ಅಪ್ಪುವಿನೊಳಗಣ ಪೃಥ್ವಿ ಗಂಧ. ಇಂತಿವು ಅಪ್ಪುವಿನ ಪಂಚಕೃತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಂದು ಸಹಸ್ರಜನ್ಮಾಂತರದಲ್ಲಿ ತಪೋಧ್ಯಾನವ ಮಾಡಿ ಪಡೆದಕಾರಣ ಮುಂದೆನಗೆ ಗುರುಪಾದ ದೊರೆಯಿತ್ತು. ಆ ಗುರುಪಾದದರುಶನದಿಂದ ಹಿಂದೇಳು ಜನ್ಮಾಂತರದಲ್ಲಿ ಭವಾಂತರ ಹಿಂಗಿ, ಇಂದೆನಗೆ ಶಿವಲಿಂಗವ[ನಿರಿಸೆ], ಶಿವದೇಹಿ ಶಿವಭಕ್ತ ಶಿವಮಾಹೇಶ್ವರನೆಂಬ ನಾಮ ನನಗಾಯಿತ್ತು ನೋಡಾ. ಸಾಕ್ಷಿ :``ಜನ್ಮಾಂತರಸಹಸ್ರೇಷು ತಪೋ ಧ್ಯಾನಂ ಸಮಾಚರೇತ್ | ನರಾಣಾಂ ಕ್ಷೀಣಪಾಪಾನಾಂ ಶಿವೇ ಭಕ್ತಿಃ ಪ್ರಜಾಯತೇ ||'' ಎಂದುದಾಗಿ, ಹೀಗೆಂಬ ಸುಕೃತಫಲದಿಂದ ಭವಸಾಗರವ ದಾಂಟಿ ಭಕ್ತ ಬಸವಣ್ಣ ಮಾಹೇಶ್ವರ ಪ್ರಭುರಾಯರು ಮುಖ್ಯವಾದ ಪ್ರಮಥಗಣಂಗಳ ಲೆಂಕರ ಲೆಂಕನಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಗ್ನಿಯೊಳಗಣ ಅಗ್ನಿ ನೇತ್ರೇಂದ್ರಿಯ. ಅಗ್ನಿಯೊಳಗಣ ಆಕಾಶ ಶ್ರೋತ್ರೇಂದ್ರಿಯ. ಅಗ್ನಿಯೊಳಗಣ ವಾಯು ತ್ವಗೀಂದ್ರಿಯ. ಅಗ್ನಿಯೊಳಗಣ ಅಪ್ಪು ಜಿಹ್ವೇಂದ್ರಿಯ. ಅಗ್ನಿಯೊಳಗಣ ಪೃಥ್ವಿ ಘ್ರಾಣೇಂದ್ರಿಯ. ಇಂತಿವು ಅಗ್ನಿಯ ಪಂಚಕೃತಿಯೆಂದು ಹೇಳಲ್ಪಟ್ಟಿತ್ತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅನ್ಯವಿಷಯ ಪಂಚೇಂದ್ರಿಯವೆಂದೆಂಬ ಕುನ್ನಿಗಳ ಬಲಿಯೊಳಗಿರಿಸಬೇಡವೊ ಗುರುವೆ. ಪದ : ಹರಗುರು ನಿಂದೆಕಾರರ ಕಾವ್ಯಕಥೆಗಳ ಒರೆದು ಕೇಳುವರೆನ್ನವೆರಡು ಕಿವಿಯು ತಾ ಹಿಡಿದಾಕಾರಕೆ ಬಾಯದೆರದು ರಂಜಿಸುತಲಿಹೆ ಪರಮಾತ್ಮನ ಶ್ರುತಿ ಮಂತ್ರಾಗಮಂಗಳ ವಿರಚಿಸಲೊಲ್ಲದೆ ಕುರಿಯ ದನಿಗೆ ಹುಲಿ ಶರೀರವನಳಿದಂತೆ ಕರ್ಣೇಂದ್ರಿಯ ದೇವ. | 1 | ಅನ್ಯಗೋಷಿ*ಯ ಪರನಿಂದ್ಯಗಳ ನುಡಿವರೆ ಎನ್ನಾ ನಾಲಗೆ ಹರಿವುದುರುಗನಂತೆ `ಓನ್ನಮಃಶಿವಾಯ'ಯೆಂಬಮಂತ್ರವ ನೆನೆಯದಲ್ಲಿ ತನ್ನ ತಾ ಹಿಂದಕ್ಕೆ ಸೇದುತಲಿದೆ ಕರ್ಮಿ ಗಿನ್ನೆಂತೊ ಹೇಳಾ ಗುರುವೆ ಮಾಂಸದ ಸವಿಗೆ ವಿೂನು ತನ್ನ ದೇಹವನಳಿದಂತೆ ಜಿಹ್ವೇಂದ್ರಿಯವು. | 2 | ಪರಧನ ಪರಸ್ತ್ರೀಯರಾಟ ನೋಟಗಳನು ನೆರೆ ನೋಡುವರೆನ್ನ ನಯನ ತಿಗುರಿಯಂತೆ ತಿರುಗುತಲಿಗೆ ಸದಾ ಅನ್ಯಾಯವನಾಶ್ರಯಿಸಿ ಹರಗುರುಲಿಂಗ ಪೂಜೆಗೆ ಅನುಮಿಷದೃಷ್ಟಿ ಇರಿಸಿ ನೋಡದೆ ತಾ ಪತಂಗ ಹಾರಿಯೆ ಬಂದು ಉರಿಯೊಳು ಮಡಿದಂತೆ ನಯನೇಂದ್ರಿಯ ದೇವಾ. | 3 | ಜೂಜು ಪಗಡಿ ಲೆತ್ತನಾಡಿ ಪರನಾರಿಯರ ವಾಜಿಯಿಂದಲಿ ಹಿಡಿದೆಳೆವರೆ ದ್ವಿಹಸ್ತ ರಾಜಿಸುತಿದೆ ರಮ್ಯವಾಗಿ, ಹರಗುರುಲಿಂಗದ ಪೂಜೆಯ ಮಾಡೇನೆಂದರೆ ಕೈ ಏಳದೆ ಕರ್ಮ ಭಾಜನದೊಳು ಸಿಲ್ಕಿ ಸ್ಪರ್ಶೇಂದ್ರದಿ ಕರಿ ತಾ ಜೀವಮೃತವಾದಂತೆ ತ್ವಗಿಂದ್ರಿಯ. | 4 | ಪೂಸಿಪ ಗಂಧ ಚಂದನ ಪರಿಮಳಗಳ ವಾಸಿಸುವಂತೆ ಲಿಂಗಾನುಭವದ ಜ್ಞಾನ ವಾಸನೆಯರಿಯದೆ ಸಂಪಿಗೆಗಳಿ ಮಡಿದಂದದಿ ನಾಸಿಕೇಂದ್ರಿಯ ಇವೈದರಿಂದಲಿ ಮಹಾ ದೋಷಕೀಡಾದೆ ಪಡುವಿಡಿ ಸಿದ್ಧಮ ಲ್ಲೇಶಾ ಎನ್ನನು ಕಾಯಿದು ರಕ್ಷಿಸು ಕರುಣಾಂಬುವೆ. | 5 |
--------------
ಹೇಮಗಲ್ಲ ಹಂಪ
ಅಂತರಂಗದಲ್ಲಿ ಜ್ಞಾನಪರಿಪೂರ್ಣನಾಗಿ ಸರ್ವಾಂಗವೆಲ್ಲ ಲಿಂಗಮಯವೆಂದು ಜ್ಞಾನದ ಕಣ್ಣಲಿ ಕಂಡು, ಅರುಹು ಪರಮಾರ್ಥನೊಳು ಬೆರದು, ಅಚಲಿತಶರಣನಾದೆನೆಂದು, ಬಹಿರಂಗದಲ್ಲಿ ಗುರುಕರುಣದ ಇಷ್ಟಲಿಂಗಧಾರಣವಿಲ್ಲದಿರಬಹುದೇ ? ಇರಬಾರದು ; ಇದ್ದರೆ ಮಹಾನರಕ. ಮೂರುಕಣ್ಣುಳ್ಳ ಶಿವನಾದರೂ ಆಗಲಿ, ಅಂಗದ ಮೇಲೆ ಇಷ್ಟಲಿಂಗವಿಲ್ಲದೆ ಸುಜ್ಞಾನಿಶರಣನಾದನೆಂದು ನುಡಿದುಕೊಂಡು ನಡೆದರೆ ಅದ ನಮ್ಮ ಪುರಾತರು ಮೆಚ್ಚುವರೆ ? ಮೆಚ್ಚರು. ಮೆಚ್ಚರಾಗಿ ನಾಯಕನರಕ ತಪ್ಪದು. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅನ್ಯದೇಹಿಯೆಂದು ಎನ್ನ ಕಳೆಯದಿರು, ಕರ್ಮದೇಹಿಯೆಂದು ಕೈಯ ಬಿಡದಿರು, ಮತ್ರ್ಯನೆಂದು ಮಾಯಕ್ಕೆ ಗುರಿಮಾಡದಿರು, ಮದಡನೆಂದು ಮನವಿಕಾರಕ್ಕೆ ಗುರಿಮಾಡದಿರು, ಅಜ್ಞಾನಿಯೆಂದು ಅಹಂಕಾರಕ್ಕೆ ಗುರಿಮಾಡದಿರು, ಮದದೇಹಿಯೆಂದು ಮಾಯಾತಮಂಧಕ್ಕೆ ಗುರಿಮಾಡದಿರು, ಜಲ ಅಗ್ನಿಯ ಗುಣವಿರಲೊ ಎನ್ನಯ್ಯ. ಅದು ಎಂತೆಂದೊಡೆ : ಜಲ ಹರಿವೆಡೆಯಲ್ಲಿ ಹೊಲಗೇರಿ ಉತ್ತಮಗೇರಿ ಅಮೇಧ್ಯದಗೇರಿಯೆಂದು ನೋಡಿ ಹರಿವುದೆ ? ಹರಿಯದು ; ಅದಕ್ಕೆಲ್ಲ ಸಮ. ಅಗ್ನಿ ಶ್ವಪಚರ ಮನೆ, ಗೃಹಸ್ಥರ ಮನೆ, ಬೇಡ ಮಾದಿಗ ಹದಿನೆಂಟು ಜಾತಿ ಎಂದು ಅಡಿಯಿಡಲು ಮುನಿವುದೆ ? ಮುನಿಯದು. ಎನ್ನ ಅನ್ಯದೇಹಿಯೆಂದು, ಕರ್ಮದೇಹಿಯೆಂದು, ಮತ್ರ್ಯದೇಹಿಯೆಂದು, ಮದಡದೇಹಿಯೆಂದು, ಅಜ್ಞಾನಿಯೆಂದು ಕಳೆದಡೆ ಹುರುಳಿಲ್ಲ. ಅತ್ತಿಯಹಣ್ಣು ಬಿಚ್ಚಿದರೆ ಬಲು ಹುಳು. ಎನ್ನ ಚಿತ್ತದೊಳವಗುಣವ ವಿಸ್ತರಿಸಿದರೇನು ? ಫಲವಿಲ್ಲ. ನೋಡದೆ ಕಾಡದೆ ಮಾಯಾತಮವಕಳೆದು ಜ್ಞಾನಜ್ಯೋತಿಯ ತೀವು. ಎನ್ನ ನಿಮ್ಮಯ ಶರಣರು ಚೆನ್ನಬಸವಣ್ಣ ಅಕ್ಕನಾಗಮ್ಮ ನೀಲಲೋಚನೆ ನಿಂಬವ್ವೆ ಮಹಾದೇವಿ ಮುಕ್ತಾಯಕ್ಕ ಅಜಗಣ್ಣ ಅಂಬಿಗರ ಚೌಡಯ್ಯ ಕಲಿಕೇತಯ್ಯ ಬ್ರಹ್ಮಯ್ಯ ನಿರ್ಲಜ್ಜಶಾಂತಯ್ಯ ನಿಜಗುಣದೇವರು ಸಿದ್ಧರಾಮಿತಂದೆ ಮರುಳಶಂಕರದೇವರು ಕಿನ್ನರಿಬ್ರಹ್ಮಯ್ಯ ವೀರಗಂಟೆಯ ಮಡಿವಾಳಯ್ಯ ಮೇದರ ಕೇತಯ್ಯಗಳು ಅರವತ್ತುಮೂವರು ಪುರಾತನರು ತೇರಸರು ಷೋಡಶರು ದಶಗಣರು ಮುಖ್ಯವಾದೈನೂರಾ ಎಪ್ಪತ್ತು ಅಮರಗಣಂಗಳ ಆಳಿನಾಳಿನಾ ಮನೆಯ ಕೀಳಾಳ ಮಾಡಿ ಅವರ ಲೆಂಕನಾಗಿ, ಅವರುಟ್ಟ ಮೈಲಿಗೆ, ಉಗುಳ್ದ ತಾಂಬೂಲ ಪಾದೋದಕ, ಅವರೊಕ್ಕ ಪ್ರಸಾದಕೆನ್ನ ಯೋಗ್ಯನಮಾಡೆ ಏಳೇಳು ಜನ್ಮದಲ್ಲಿ ಬರುವೆ ಕಂಡಾ, ಭವವಿರಹಿತ ತಂದೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅನಾದಿವಿಡಿದು ಆದಿ, ಆದಿವಿಡಿದು ಸಾವಯವ ; [ಸಾವಯವವಿಡಿದು ನಿರ್ವಯ], ನಿರ್ವಯವಿಡಿದು ಪಂಚಬ್ರಹ್ಮತ್ವ ; ಪಂಚಬ್ರಹ್ಮತ್ವವಿಡಿದು ತತ್ವಬ್ರಹ್ಮಾಂಡ, ತತ್ವಬ್ರಹ್ಮಾಂಡವಿಡಿದು ಪಿಂಡಾಂಡ, ಪಿಂಡಾಂಡವಿಡಿದು ಜ್ಞಾನ, ಜ್ಞಾನವಿಡಿದು ನಿಂದ ನಿಲವು ನೀನೆ ಅಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಹೋ ನಿಲ್ಲಿ ನಿಲ್ಲಿ ವ್ಯಸನಗಳಿರಾ ! ಬಲ್ಲೆ ಬಲ್ಲೆ ನಿಮ್ಮ ಗುಣಂಗಳ. ಮಲ್ಲರ ಕಾಳಗದ ನಡುವಿನ ಶಿಶುವಿನಂತೆ, ಎನ್ನ ತುಳಿದೇನೆಂಬಿರಿ. ಬಿಲ್ಲು ಬಾಣದ ನಡುವಿನ ಹುಲಿಯಂತೆ ಎನ್ನ ನಿಲಿಸೇನೆಂಬಿರಿ. ಎಂದರೆ ನಿಮ್ಮ ಹವಣಿಕೆ ಬೇರೆ, ಎನ್ನ ಹವಣಿಕೆ ಬೇರೆ. ಅದು ಹೇಗೆಂದಡೆ : ಎನ್ನ ಹವಣಿಕೆ ಶಿವಜ್ಞಾನಾಗ್ನಿಯಿಂದ ನಿಮ್ಮನುರುವಿ ನಿವ್ರ್ಯಸನಿಯಾದೇನೆಂಬೆ ; ನಿಮ್ಮ ಹವಣಿಕೆ ಎನ್ನ ಸುಟ್ಟು ಸೂರೆಮಾಡುವೆನೆಂಬಿರಿಯೆಂದರೆ ನಿಮ್ಮದು ಅನ್ಯದ ಹಾದಿ, ಎನ್ನದು ಪುಣ್ಯದ ಹಾದಿ. ಎನ್ನ ನಿಮ್ಮ ಹಾದಿಯ ನಡುಮಧ್ಯದಲ್ಲಿಪ್ಪ ಮನೋಮೂರ್ತಿಮಹಾಲಿಂಗ ಮಾಡಿದಂತೆ ಆಗುವೆ, ಆಡಿಸಿದಂತೆ ಆಡುವೆ, ನಡೆಸಿದಂತೆ ನಡೆವೆ, ನುಡಿಸಿದಂತೆ ನುಡಿವೆ, ಕೆಡಸಿದಂತೆ ಕೆಡವೆನೈ ; ಇನ್ನಂಜೆ. Wವೈದ್ಯನಘೆ ನಂಬಿ ಸೇವಿಸಿದರೆ ವ್ಯಾಧಿ ಪರಿಹಾರವಾಗುವುದು ; ಮಂತ್ರವ ನಂಬಿ ಜಪಿಸಿದರೆ ಭೂತ ಪ್ರೇತಗಳ ಭಯ ಪರಿಹಾರ. ಹಡಗವ ನಂಬಿದವರು ಕಡಲವ ದಾಟುವರು. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವಿನ ನಂಬಿದವರು ಭವಸಾಗರವ ದಾಟುವರು.
--------------
ಹೇಮಗಲ್ಲ ಹಂಪ
ಅಂದು ಆದಿಯಲ್ಲಿ ಶಿವ ಬೀಜವಾಗಿ ಬಂದ ಕಾರಣ ಮತ್ರ್ಯಕೆ ಶಿವಭಕ್ತ [ರುದಯವಾಯಿ]ತು ನೋಡಯ್ಯ. ಅಂದು ಆದಿಯಲ್ಲಿ ಶಿವಬೀಜವಲ್ಲದಿದ್ದರೆ ಇಂದೆಲ್ಲಿಯದಯ್ಯಾ ? ಶಿವಭಕ್ತನೆಂಬ ಶ್ರೇಷ*ತ್ವನಾಮ ಧರೆಯ ಮನುಜರೆಲ್ಲರಿಗಹುದೇನಯ್ಯ ? ಶಿವಭಕ್ತಿ ಹಿಡಿದವರೆಲ್ಲ ಬಂಟರೆ ? ಶಕ್ತಿಯ ಸಾಧಿಸಿದವರೆಲ್ಲ ಜಟ್ಟಿಗಳೇ ? ಸ್ವರಗೈದ ಪಕ್ಷಿಗಳೆಲ್ಲ ಕೋಗಿಲೆಯಾಗಬಲ್ಲುವೆ ? ಅಂಗಹೀನ ಮಾನವರೆಲ್ಲ ಲಿಂಗವ ಧರಿಸಿ ಲಿಂಗವಂತರೆಂದು ನುಡಿದುಕೊಂಡು ನಡೆದರೆ ಶಿವಭಕ್ತಿ ಸಾಧ್ಯವಾಗಬಲ್ಲುದೆ, ಜಗದ ಜಂಗುಳಿಯ ಮಾನವರಿಗೆ ? ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅರಣ್ಯದೊಳಗೊಂದು ಮನೆಯ ಕಟ್ಟಿದರೆ ಹುಲಿ ರಕ್ಷಿ ಕರಿ ಭಲ್ಲೂಕಂಗಳ ಹಾವಳಿಯ ನೋಡಾ. ಹಾವಳಿಗಂಜಿ ಮನೆಯೊಡೆಯ ಅಳಲಿ ಬಳಲುತ್ತೈದಾನೆ. ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ !
--------------
ಹೇಮಗಲ್ಲ ಹಂಪ

ಇನ್ನಷ್ಟು ...