ಅಥವಾ

ಒಟ್ಟು 10 ಕಡೆಗಳಲ್ಲಿ , 4 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

``ಅತೀತಃ ಪಂಥಾನಂ ತವ ಚ ಮಹಿಮಾ ಎಂಬ ಶ್ರುತಿಗಳು ನಿಮ್ಮ ಕಾಣಲರಿಯವು ದೇವಾ. ಲಿಂಗದೇವಾ, ನಿಮ್ಮ ಮಹಿಮೆಯ ಸ್ತುತಿಯಿಸಿ ಕಾಣಲರಿಯವು ದೇವಾ. ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನ ಎಂಬ ತುದಿ ಪದವು, ಕೂಡಲಚೆನ್ನಸಂಗಮದೇವಾ ಪರವಿಲ್ಲಾಗಿ.
--------------
ಚನ್ನಬಸವಣ್ಣ
ಸದ್ಗುರುವಿನಿಂದ ಮಹತ್ತಪ್ಪ ಮಹಾಲಿಂಗ ಉತ್ಪತ್ತಿ, ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ ಎಂದುನಾಗಿ, ಸದ್ಗುರುವಿನಿಂದ ಉರಿಲಿಂಗ ಉತ್ಪತ್ತಿ, ಲಿಂಗದಿಂದವು ಜಂಗಮ ಉತ್ಪತ್ತಿ, ಜಂಗಮದಿಂದವು ಪ್ರಸಾದೋತ್ಪತ್ತಿ, ಪ್ರಸಾದದಿಂದವು ಭಕ್ತಿ ಉತ್ಪತ್ತಿ, ಭಕ್ತಿ ಪ್ರಸಾದದಿಂದವೂ ಸಕಲೋತ್ಪತ್ತಿ. ಇದು ಕಾರಣ, ಪ್ರಸಾದವುಳ್ಳವಂಗೆ ಭಕ್ತಿ ಉಂಟು, ಯುಕ್ತಿಯುಳ್ಳವಂಗೆ ಜಂಗಮ ಉಂಟು, ಜಂಗಮವುಳ್ಳವಂಗೆ ಲಿಂಗ ಉಂಟು. ಲಿಂಗವುಳ್ಳವಂಗೆ ಸದ್ಗುರು ಉಂಟು. ಇದು ಕಾರಣ, ಸದ್ಗುರುವೇ ಕಾರಣವು ಗುರುಣಾ ದೀಯತೇ ಲಿಂಗಂ ಗುರುಣಾ ದೀಯತೇ ಕ್ರಿಯಾ ಗುರುಣಾ ದೀಯತೇ ಮಂತ್ರಂ ಸದ್ಗುರುಸ್ಸರ್ವಕಾರಣಂ ಎಂದುದಾಗಿ, ಸದ್ಗುರುವೆ ಸರ್ವಶ್ರೇಷ*ನು, ಸದ್ಗುರುವೆ ಸರ್ವಪೂಜ್ಯನು, ಸದ್ಗುರುವೆ ಸರ್ವಕಾರಣವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಸಾಕಾರವಿಡಿದು ಪರಬ್ರಹ್ಮ, ನಿರಾಕಾರವಿಡಿದು ಪರಬ್ರಹ್ಮವೆಂಬಿರಿ. ಪರಬ್ರಹ್ಮವ ನುಡಿವಿರಿ, ಪರಬ್ರಹ್ಮವನರಿದಿಹೆವೆಂಬಿರಿ, ಅರಿಹಿಸಿಹೆವೆಂಬಿರಿ, ಆನೆ ಪರಬ್ರಹ್ಮವೆಂಬಿರಿ, ಪರಬ್ರಹ್ಮವನರಿಯದೆ ನುಡಿವಿರಿ, ಬ್ರಹ್ಮದೊಡಕು ಅರಿದು ಕಂಡಿರಣ್ಣಾ. ಈ ಬ್ರಹ್ಮದೊಡಕಿಂದ ಮುನ್ನೊಮ್ಮೆ ದೇವಜಾತಿಗಳು ಋಷಿಜನಂಗಳು ಬ್ರಹ್ಮನನು, ಪರಬ್ರಹ್ಮವ ಬೆಸಗೊಳಲು ಅಹಂ ಬ್ರಹ್ಮವೆಂದು ತಲೆಯ ಹೋಗಾಡಿಕೊಂಡುದು ಸರ್ವಪುರಾಣಪ್ರಸಿದ್ಧ, ಇನ್ನೂ ತಲೆಯ ಮೋಟು ಕಾಣಬರುತ್ತದೆ. ಬ್ರಹ್ಮನ ಶಿರ ಪರಬ್ರಹ್ಮದ ಕೈಯಲ್ಲಿದೆ. ಆನೆ ಪರಬ್ರಹ್ಮವೆಂದು ಸನತ್ಕುಮಾರ ಒಟ್ಟೆಯಾದುದು ಸ್ಕಂದ ಪುರಾಣಪ್ರಸಿದ್ಧ. ಅವರಂತಾಗದೆ, ಪರಬ್ರಹ್ಮದ ನೆಲೆಯ ಕೇಳಿರಣ್ಣಾ: ಲಿಂಗವೇ ಪರಬ್ರಹ್ಮವೆಂದು ಅಥರ್ವಣ ಹೇಳುತ್ತದೆ, `ಏಕೋ ರುದ್ರಸ್ಸ ಈಶಾನಃ ಸ ಭಗವಾನ್ ಸ ಮಹೇಶ್ವರೋ ಮಹಾದೇವ ಇತಿ ಈ ಪ್ರಕಾರದಲೆ ಯಜುರ್ವೇದ ಹೇಳುತ್ತಿದ್ದಿತ್ತು. ಋತಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈ ನಮಃ ಈ ಪ್ರಕಾರದಲ್ಲಿ ಶಿವಸಂಕಲ್ಪೋಪನಿಷತ್ ಹೇಳುತ್ತಿದೆ. ಋತಂ ಸತ್ಯಂ ಪರಂ ಬ್ರಹ್ಮಪುರುಷಂ ಕೃಷ್ಣ ಪಿಂಗಲಂ ಊಧ್ರ್ವರೇತಂ ವಿರೂಪಾಕ್ಷಂ ತನ್ಮೇ ಮನಶ್ಶಿವಸಂಕಲ್ಪಮಸ್ತು ಎಂದುದಾಗಿ ಲಿಂಗವೇ ಪರಬ್ರಹ್ಮ. ಮುನ್ನೊಮ್ಮೆ ಹರಿಬ್ರಹ್ಮರ ಸಂವಾದದಲ್ಲಿ ಉರಿಲಿಂಗ ಉದ್ಭವವಾದಲ್ಲಿ ಹರಿಬ್ರಹ್ಮಾದಿಗಳು ಸ್ತೋತ್ರವ ಮಾಡಿದರು. ಲೈಂಗ್ಯ ಪುರಾಣದಲ್ಲಿ, ಜ್ವಾಲಾಮಾಲಾವೃತಾಂಗಾಯ ಜ್ವಲನಸ್ತಂಭರೂಪಿಣೇ ನಮಶ್ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ಇದು ಮುನ್ನೊಮ್ಮೆ ಬ್ರಹ್ಮಕಾರಣ ಲಿಂಗವೇ ಪರಬ್ರಹ್ಮ, ಶಿವನೇ ಪರಬ್ರಹ್ಮವೆಂದು ಮತ್ತೆ ಯಜುರ್ವೇದ ನುಡಿಯುತ್ತಿದೆ. ಈಶಾನಸ್ಸರ್ವವಿದ್ಯಾನಾಮೀಶ್ವರಸ್ಸರ್ವಭೂತಾನಾಂ ಬ್ರಹ್ಮಾಧಿಪತಿ ಬ್ರಹ್ಮಣೋ[s]ಧಿಪತಿಬ್ರ್ರಹ್ಮಾ ಶಿವೋ ಮೇ[s]ಸ್ತು ಸದಾಶಿವೋಂ ಆದಿತ್ಯ ಪುರಾಣದಲೂ ಮಹಾಪುರುಷ ಆದಿತ್ಯ ಹೇಳುತ್ತಿದ್ದಾನೆ: ಪರಬ್ರಹ್ಮಾ ಚ ಈಶಾನ ಏಕೋ ರುದ್ರಸ್ಸ ಏವ ಚ ಭಗವಾನ್ ಮಹೇಶ್ವರಸ್ವಾಕ್ಷಾನ್ಮಹಾದೇವೋ ನ ಸಂಶಯಃ ಯಸ್ಯಾಂತಸ್ಥಾನಿ ಭೂತಾನಿ ಯೇನೇದಂ ಧಾರ್ಯತೇ ಜಗತ್ ಬ್ರಹ್ಮೇತಿ ಯಂ ಜಹುರ್ವೇದಾಃ ಸರ್ವೇ ತಂ ಶರಣಂ ವ್ರಜೇತ್ ಕೂರ್ಮ ಈಶ್ವರಗೀತೆಯಲ್ಲಿ, ಆವ್ಯಕ್ತಂ ಕಾರಣಂ ಪ್ರಾಹುರಾನಂದಂ ಜ್ಯೋತಿರಕ್ಷರಂ ಅಹಮೇವ ಪರಬ್ರಹ್ಮ ಮತ್ತೋ[s]ನ್ಯಂ ಹಿ ನ ವಿದ್ಯತೇ ಅಹಂ ತತ್ಪರಮಂ ಬ್ರಹ್ಮ ಪರಮಾತ್ಮಾ ಸನಾತನಃ ಮಹಾಪುರುಷ ಮನು ಮಾನವಪುರಾಣದಲ್ಲೂ ಹೇಳಿದನು: ಋತಂ ಸತ್ಯಂ ಪರಬ್ರಹ್ಮಪುರುಷಂ ಸೋಮವೀಶ್ವರಂ ಊಧ್ರ್ವರೇತಂ ಸಮುತ್ಪತ್ತಿಸ್ಥಿತಿಸಂಹಾರಕಾರಣಂ ವಿಶ್ವರೂಪಂ ವಿರೂಪಾಕ್ಷಂ ಚಂದ್ರಮೌಳಿಂ ಘೃಣಾನಿಧಿಂ ಹರಣ್ಯಬಾಹುಮದ್ವಂದ್ವಂ ಹಿರಣ್ಯಪತಿಮೀಶ್ವರಂ ಅಂಬಿಕಾಯಾಃ ಪತಿಂ ಸಾಕ್ಷಾದುಮಾಯಾಃ ಪತಿಮಕ್ರಿಯಂ ಪರತತ್ವಂ ಸಮಾಖ್ಯಾತಂ ಶಿವಂ ಧ್ಯಾಯಂತಿ ಸಂತತಂ ತೈತ್ತಿರೀಯ ಶ್ರುತಿ, `ಸದ್ವಿಪ್ರಾಹಿ..... ಎಂದುದಾಗಿ, ಬಹಳ ಬಹಳ ಚಕ್ಷು, ಬಹಳ ಬಹಳ ಮುಖನು, ಬಹಳ ಬಹಳ ಬಾಹು, ಬಹಳ ಪಾದನು, ಇಂತಹ ಬಹಳ ಲಿಂಗವೆ, ಬ್ರಹ್ಮ ಕಾಣಿರಣ್ಣಾ. `ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ, ಬಹಳಕ್ಕೆ ಬಹಳ, ಮಹಾಬಹಳ ಲಿಂಗವೆ ಬಹಳಬ್ರಹ್ಮ ಕಾಣಿರಣ್ಣಾ. ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಮನೋವಾಕ್ಕಾಯ ನಾದಬಿಂದುಕಳೆಗೆ ಅತೀತನಾದ ಮಹಾಬಹಳ ಲಿಂಗವನು ಶ್ರೀಗುರು ನಿರೂಪಿಸಿ ಕೊಟ್ಟನಾಗಿ ಈ ಲಿಂಗವೇ ಪರಬ್ರಹ್ಮ ಕಾಣಿರಣ್ಣಾ. ಇದು ಕಾರಣ, ಪರಬ್ರಹ್ಮಲಿಂಗವೆಂದು ಧ್ಯಾನಿಸಿ ಪೂಜಿಸಿ ಮಹಾನಂದ ಪರಮುಕ್ತಿಯನೈದಿದರು ಪೂರ್ವದಲ್ಲಿ ದೇವಜಾತಿಗಳು ಹಲಬರು, ಇದು ಪುರಾಣ ಪ್ರಸಿದ್ಧ. ಕಲಿಯುಗದಲ್ಲಿ ದೃಷ್ಟ: ಬಸವರಾಜದೇವರು ಮೊದಲಾದ ಅಸಂಖ್ಯಾತ ಮಾಹೇಶ್ವರರು ಇದನರಿದು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಲಿಂಗವೆ ಪರಬ್ರಹ್ಮವೆಂದು ಅರಿದು ಧ್ಯಾನಿಸಿ ಪೂಜಿಸಿ ಮಹದಾನಂದಮುಕ್ತಿಯನೈದಿದರಣ್ಣಾ.
--------------
ಉರಿಲಿಂಗಪೆದ್ದಿ
ವಿಷ್ಣು ಕರ್ಮಿ ರುದ್ರ ನಿಷ್ಕರ್ಮಿ:ಕ್ರಮವನರಿಯದೆ ನುಡಿವಿರೊ ! ವೇದಶ್ರುತಿಗಳ ತಿಳಿಯಲರಿಯದೆ ವಾದುಮಾಡುವರೆಲ್ಲ ಕೇಳಿ: ವಿಷ್ಣು ನಾನಾಯೋನಿಯಲ್ಲಿ ಬಾರದ ಭವಂಗಳಲ್ಲಿ ಬರುತಿಪ್ಪ, ರುದ್ರನಾವ ಯೋನಿಯಲ್ಲಿ ಬಂದನೆಂದು ನೀವು ಹೇಳಿರೊ ! ಓಂ ವಿಷ್ಣೋಃ ಕರ್ಮಾಣಿ ಪಶ್ಯತ ಯತೋ ವ್ರತಾನಿ ಪಸ್ಪಶೇ ಇಂದ್ರಸ್ಯ ಯುಜ್ಯಃ ಸಖಾ ತದ್ ವಿಷ್ಣೋಃ ಪರಮಂ ಪದಂ ಸದಾ ಪಶ್ಯಂತಿ ಸೂರಯಃ ದಿವೀವ ಚಕ್ಷುರಾತತಂ ತದ್ ವಿಪ್ರಾಸೋ ವಿಪನ್ಯವೋ ಜಾಗೃವಾಂ ಸಃ ಸಮಿಂಧತೇ ! ವಿಷ್ಣೋರ್ಯತ್ಪರಮಂ ಪದಂ ಎಂಬ ಶ್ರುತಿವಚನವ ತಿಳಿಯಿಂ ಭೋ ! ವರ್ಮವನೆತ್ತಿ ನುಡಿದಲ್ಲದೆ ನಿಲ್ಲಿರಿ; ನಿಮ್ಮ ಕರ್ಮವು ಅತ್ಯತಿಷ*ದ್ದಶಾಂಗುಲದಿಂದತ್ತತ್ತಲೆ, ಕೂಡಲಸಂಗಮದೇವಾ.
--------------
ಬಸವಣ್ಣ
ಲಿಂಗಿನಾ ಸಹವರ್ತಿತ್ವಂ ಲಿಂಗಿನಾ ಸಹ ವಾದಿತಾ ಲಿಂಗಿನಾ ಸಹಚಿಂತಾ ಚ ಲಿಂಗಯೋಗೋ ನ ಸಂಶಯಃ ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ಮರ್ಮವನು ಶಿವಲಿಂಗದ ನಿಶ್ಚಯವನು ಇದಾರಯ್ಯ ಬಲ್ಲವರು ? ಆರಯ್ಯ ಅರಿವವರು, ಶ್ರೀಗುರು ಕರುಣಿಸಿ ತೋರಿ ಕೊಡದನ್ನಬರ ? `ಸರ್ವೈಶ್ವರ್ಯಸಂಪನ್ನಃ ಸರ್ವೇಶತ್ವಸಮಾಯುತಃ' ಎಂದುದಾಗಿ, `ಅಣೋರಣೀಯಾನ್ ಮಹತೋ ಮಹಿಮಾನ್' ಎಂದುದಾಗಿ, `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂದುದಾಗಿ, ವೇದಪುರುಷರಿಗೂ ಅರಿಯಬಾರದು, ಅರಿಯಬಾರದ ವಸ್ತುವ ಕಾಣಿಸಬಾರದು, ಕಾಣಿಸಬಾರದ ವಸ್ತುವ ರೂಪಿಸಲೆಂತೂ ಬಾರದು, ರೂಪಿಸಬಾರದ ವಸ್ತುವ ಪೂಜಿಸಲೆಂತೂ ಬಾರದು. ಪೂಜೆಯಿಲ್ಲಾಗಿ ಭಕ್ತಿ ಇಲ್ಲ, ಭಕ್ತಿ ಇಲ್ಲಾಗಿ ಪ್ರಸಾದವಿಲ್ಲ, ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಮುಕ್ತಿ ಇಲ್ಲಾಗಿ ದೇವದಾನವಮಾನವರೆಲ್ಲರೂ ಕೆಡುವರು. ಕೆಡುವವರನು ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು ಮದ್ಗುರು ಶ್ರೀಗುರು. `ನ ಗುರೋರಧಿಕಂ ನ ಗುರೋರಧಿಕಂ ಎಂದುದಾಗಿ, ಮಹಾಗುರು ಶಾಂತಮೂರ್ತಿ ಕೃಪಾಮೂರ್ತಿ ದಯಾಮೂರ್ತಿ ಲಿಂಗಪ್ರತಿಷೆ*ಯ ಮಾಡಿದನು. ಅದೆಂತೆನಲು ಕೇಳಿರೆ : ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಸಹ ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಸದ್ಗುರೋರ್ಭಾವಲಿಂಗಂ ತು ಸರ್ವಬ್ರಹ್ಮಾಂಡಗಂ ಶಿವಂ ಸರ್ವಲೋಕಸ್ಯ ತ್ರಾಣತ್ವಾತ್ ಮುಕ್ತಿಕ್ಷೇತ್ರಂ ತದುಚ್ಯತೇ ಎಂದುದಾಗಿ, `ಗುರುಣಾ ದೀಯತೇ ಲಿಂಗಂ' ಸರ್ವಲೋಕಕ್ಕೆಯೂ ಸರ್ವರಿಗೆಯೂ ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು ಅರೂಪೇ ಭಾವನಂ ನಾಸ್ತಿ ಯದ್ದೃಶ್ಯಂ ತದ್ವನಶ್ಯತಿ ಅದೃಶ್ಯಸ್ಯ ತು ರೂಪತ್ವೇ ಸಾದಾಖ್ಯಮಿತಿ ಕಥ್ಯತೇ ಎಂದುದಾಗಿ, ನಿಷ್ಕಳರೂಪ ನಿರವಯ ಧ್ಯಾನಪೂಜೆಗೆ ಅನುವಲ್ಲ. ಸಕಲತತ್ತ್ವ ಸಾಮಾನ್ಯವೆಂದು `ಸಕಲಂ ನಿಷ್ಕಲಂ ಲಿಂಗಂ ಎಂದುದಾಗಿ, `ಲಿಂಗಂ ತಾಪತ್ರಯಹರಂ ಎಂದುದಾಗಿ, `ಲಿಂಗಂ ದಾರಿದ್ರ್ಯನಾಶನಂ ಎಂದುದಾಗಿ, `ಲಿಂಗಂ ಪ್ರಸಾದರೂಪಂ ಚ ಲಿಂಗಂ ಸರ್ವಾರ್ಥಸಾಧನಂ ಎಂದುದಾಗಿ, `ಲಿಂಗಂ ಪರಂಜ್ಯೋತಿಃ ಲಿಂಗಂ ಪರಬ್ರಹ್ಮಂ ಎಂದುದಾಗಿ, ಲಿಂಗವನು ಪೂಜಿಸಿ ಭಕ್ತಿಪ್ರಸಾದ ಮುಕ್ತಿಯ ಪಡೆಯಲೆಂದು ಮಹಾದಾನಿ ಗುರುಲಿಂಗವು ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಸರ್ವೇ ಲಿಂಗಾರ್ಚನಂ ಕೃತ್ವಾ ಜಾತಾಸ್ತೇ ಲಿಂಗಪೂಜಕಾಃ ಗೌರೀಪತಿರುಮಾನಾಥೋ ಅಂಬಿಕಾಪಾರ್ವತೀ ಪತಿಃ ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಾಃ ಎಂದುದಾಗಿ, ಈ ಮಹಾಪುರುಷರಪ್ಪ ದೇವಗಣ ರುದ್ರಗಣ ಪ್ರಮಥಗಣಂಗಳು ಬ್ರಹ್ಮವಿಷ್ಣ್ವಾದಿ ದೇವದಾನವಮಾನವರುಗಳು ಮಹಾಲಿಂಗವ ಧ್ಯಾನಿಸಿ ಪೂಜಿಸಿ ಪರಮಸುಖ ಪರಿಣಾಮವ ಪಡೆಯಲೆಂದು ಮಾಡಿದನು ಕೇವಲ ಸದ್ಭಕ್ತಜನಕ್ಕೆ. `ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಏಕಂ' ಎಂದುದಾಗಿ, ಆ ಸದ್ಗುರು, ಆ ಪರಶಿವನನು ಆ ಸತ್ಪ್ರಾಣವನು ಏಕೀಭವಿಸಿ ಸದ್ಭಾವದಿಂ ಲಿಂಗಪ್ರತಿಷೆ*ಯ ಮಾಡಿ ಪ್ರಾಣಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲೆಂದು ಕರುಣಿಸಿದನು. `ಏಕಮೂರ್ತಿಸ್ತ್ರಿಧಾ ಭೇದೋ' ಎಂದುದಾಗಿ, ಶ್ರೀಗುರುಲಿಂಗ ಪರಶಿವಲಿಂಗ ಜಂಗಮಲಿಂಗ ಒಂದೇ; `ದೇಶಿಕಶ್ಯರಲಿಂಗೇ ಚ ತ್ರಿವಿಧಂ ಲಿಂಗಮುಚ್ಯತೇ' ಎಂದುದಾಗಿ, ಲಿಂಗದ ಮರ್ಮವನು, ಲಿಂಗದ ಸಂಜ್ಞೆಯನು, ಲಿಂಗದ ನಿಶ್ಚಯವನು ಆದಿಯಲ್ಲೂ ಧ್ಯಾನ ಪೂಜೆಯ ಮಾಡಿದವರನೂ ಭಕ್ತಿಪ್ರಸಾದ ಮುಕ್ತಿಯ ಪಡೆದವರನೂ ವೇದ ಶಾಸ್ತ್ರ ಪುರಾಣ ಆಗಮಂಗಳು ಹೇಳುತ್ತಿವೆ, ಶಿವನ ವಾಕ್ಯಂಗಳಿವೆ. ಇದು ನಿಶ್ಚಯ, ಮನವೇ ನಂಬು ಕೆಡಬೇಡ. ಮಹಾಸದ್ಭಕ್ತರನೂ ನಂಬುವುದು, ಶಿವಲಿಂಗಾರ್ಚನೆಯ ನಿರಂತರ ಮಾಡುವುದು, ಇದು ನಿಶ್ಚಯ, ಶಿವನು ಬಲ್ಲನಯ್ಯಾ. ಈ ಕ್ರೀಯಲ್ಲಿ ಲಿಂಗವನರಿದು ವಿಶ್ವಾಸಂ ಮಾಡಿ ಕೇವಲ ಸದ್ಭಕ್ತಿಯಿಂದ ಪೂಜಿಸುವುದು ನಿರ್ವಂಚಕತ್ವದಿಂದ ತನು ಮನ ಧನವನರ್ಪಿಸುವುದು, ಕ್ರೀಯರಿದು ಮರ್ಮವರಿದು ಸದ್ಭಾವದಿಂ ಲಿಂಗಾರ್ಚನೆಯಂ ಮಾಡುವುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸುನಾದ ಬಿಂದು ಪ್ರಣವಮಂತ್ರದಗ್ರದ ಕೊನೆಯಲೈದುವುದೆ ಸೋಡಿಹಂ ಸೋಡಿಹಂ ಎಂದೆನ್ನುತ್ತಿದ್ದಿತ್ತು. ಕೋ[s]ಹಂ ಎಂಬುದ ಕಳೆದು ಬ್ರಹ್ಮರಂಧ್ರದೊಳಗೆ, ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನ ಇಂತೆಂದುದಾಗಿ, ಕೂಡಲಸಂಗಮದೇವನಲ್ಲದೆ ಮತ್ತಾರೂ ಇಲ್ಲ.
--------------
ಬಸವಣ್ಣ
ಶ್ರೀಗುರುಕರುಣಿಸಿ ಹಸ್ತಮಸ್ತಕಸಂಯೋಗದಿಂದ ಪ್ರಾಣಲಿಂಗವನು ಕರತಳಾಮಳಕವಾಗಿ ಕರಸ್ಥಲಕ್ಕೆ ತಂದುಕೊಟ್ಟನಾಗಿ ಒಳಗೆನ್ನದೆ ಹೊರಗೆನ್ನದೆ, ಆ ಲಿಂಗದಲ್ಲಿ ನಚ್ಚಿ ಮಚ್ಚಿ ಹರುಷದೊಳೋಲಾಡಿದೆ ಅದೆಂತೆಂದಡೆ, ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ ಆ ಲಿಂಗವ ಪಡೆದು ಆನಂದಿಸುವೆ, ಕೂಡಲಸಂಗಮದೇವಾ.
--------------
ಬಸವಣ್ಣ
ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ವರ್ಮವನು ವಲಿಂಗದ ನಿಶ್ಚಯನು ಅದಾರಯ್ಯಾ ಬಲ್ಲವರು ? ಅದಾರಯ್ಯಾ ಅರಿದವರು, ಶ್ರೀಗುರು ತೋರಿ ಕೊಡದನ್ನಕ್ಕರ. `ಸರ್ವೈಶ್ವರ್ಯಸಂಪನ್ನಂ ಮಧ್ಯಧ್ರುವ ತತ್ವಾಧಿಕಂ ಎಂದುದಾಗಿ`ಅಣೋರಣೀಯಾನ್ ಮಹತೋ ಮಹೀಯಾನ್' ಎಂದುದಾಗಿ `ಯತೋ ವಾಚೋ ನಿವರ್ತಂತೇ' ಎಂದುದಾಗಿ, `ಅತ್ಯತಿಷ*ದ್ದಶಾಂಗುಲಮ್' ಎಂದುದಾಗಿ, ಈ ಪ್ರಕಾರದಲ್ಲಿ ವೇದಾಗಮಂಗಳು ಸಾರುತ್ತಿರಲು, ಲಿಂಗವನು ಹರಿಬ್ರಹ್ಮಾದಿ ದೇವದಾನವ ಮಾನವರಿಗೆಯು ಅರಿಯಬಾರದು. `ಚಕಿತಮಭಿದತ್ತೇ ಶ್ರುತಿರಪಿ ಎಂದುದಾಗಿ ವೇದ ಪುರುಷರಿಗೆಯು ಅರಿಯಬಾರದು. ಅರಿಯಬಾರದ ವಸ್ತುವ ರೂಪಿಸಲೆಂತೂ ಬಾರದು. ರೂಪಿಸಬಾರದ ವಸ್ತುವ ಪೂಜಿಸಲೆಂತುಬಹುದು ? ಪೂಜೆಗಿಲ್ಲವಾಗಿ ಭಕ್ತಿಗಿಲ್ಲ, ಭಕ್ತಿಗಿಲ್ಲವಾಗಿ ಪ್ರಸಾದಕ್ಕಿಲ್ಲ, ಪ್ರಸಾದಕ್ಕಿಲ್ಲವಾಗಿ ಮುಕ್ತಿಗಿಲ್ಲ. ಮುಕ್ತಿಗಿಲ್ಲದೆ ದೇವದಾನವ ಮಾನವರೆಲ್ಲರು ಕೆಡುವರು ಕೆಡುವರು. ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು, ಮಹಾಗುರು, ಶ್ರೀಗುರು. `ನ ಗುರೋರಧಿಕಂ' ಎಂದುದಾಗಿ ಮಹಾಗುರು ಶಾಂತಮೂರ್ತಿ ಕೃಪಾಮೂರ್ತಿ ಲಿಂಗ ಪ್ರತಿಷೆ*ಯಂ ಮಾಡಿದನು. ಅದೆಂತೆನಲು ಕೇಳಿರೆ: ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಸದ್ಗರೋರ್ಲಿಂಗಭಾವಂ ಚ ಸರ್ವ ಬ್ರಹ್ಮಾಂಡವಾಸಿನಾಂ ಸರ್ವಲೋಕಸ್ಯ ವಾಸಸ್ಯ ಮುಕ್ತಿಕ್ಷೇತ್ರ ಸುವಾಸಿನಾಂ ಎಂದುದಾಗಿ, ಸದ್ಗರೋರ್ದೀಯತೇ ಲಿಂಗಂ ಸದ್ಗುರೋರ್ದೀಯತೇ ಕ್ರಿಯಾ ಸದ್ಗುರೋರ್ದೀಯತೇ ಮಂತ್ರಂ ಸದ್ಗುರುಸ್ಸರ್ವಕಾರಣಂ ಎಂದುದಾಗಿ, ಸರ್ವಲೋಕಕ್ಕೆಯು ಸರ್ವರಿಗೆಯು ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು. ಅರೂಪೇ ಭಾವನೋ ನಾಸ್ತಿ ಯದೃಷ್ಟಂ ತದ್ವಿನಶ್ಯತಿ ದೃಶ್ಯಾದೃಶ್ಯ ಸ್ವರೂಪತ್ವಂ ತಥಾಪ್ಯೇವಂ ಸದಾಭ್ಯಸೇತ್ ಎಂದುದಾಗಿ, ನಿಃಕಲ ಅರೂಪ ನಿರವಯ ಧ್ಯಾನಪೂಜೆಗನುವಲ್ಲ, ಸಕಲ ತತ್ವಸಾಮಾನ್ಯನೆಂದು ಸಕಲನಿಷ್ಕಲವನೊಂದಡಗಿ ಮಾಡಿದನು. ಲಿಂಗಂ ತಾಪತ್ರಯಹರಂ ಲಿಂಗಂ ದಾರಿದ್ರ್ಯನಾಶನಂ ಲಿಂಗಂ ಪಾಪವಿನಾಶಂ ಚ ಲಿಂಗಂ ಸರ್ವತ್ರ ಸಾಧನಂ ಎಂದುದಾಗಿ, ಲಿಂಗವು ಪರಂಜ್ಯೋತಿ ಲಿಂಗವು ಪರಬ್ರಹ್ಮವೆಂದು ಲಿಂಗವನೆ ಪೂಜಿಸಿ, ಭಕ್ತಿಪ್ರಸಾದ ಮುಕ್ತಿಯ ಪಡೆಯಲೆಂದು ಮಹಾಘನ ಗುರು ಲಿಂಗಪ್ರತಿಷೆ*ಯ ಮಾಡಿ ತೋರಿಕೊಟ್ಟನು. ಅದೆಂತೆಂದಡೆ_ ಬ್ರಹ್ಮಾವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಸರ್ವೇ ಲಿಂಗಾರ್ಚನಾರತಾ ಜಾತಾಸ್ತೇ ಲಿಂಗಪೂಜಕಾಃ ಮತ್ತಂ_ ಗೌರೀಪತಿರುಮಾನಾಥೋ ಅಂಬಿಕಾ ಪಾರ್ವತೀಪತಿಃ ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಾಃ ಎಂದುದಾಗಿ, ಈ ಮಹಾಪುರುಷರಪ್ಪ ದೇವಗಣ ರುದ್ರಗಣ ಪ್ರಮಥಗಣಂಗಳು ವಿಷ್ಣ್ವಾದಿ ದೇವದಾನವ ಮಾನವಾದಿಗಳು ಮಹಾಲಿಂಗವನೆ ಧ್ಯಾನಿಸಿ, ಪೂಜಿಸಿ, ಪರಮ ಸುಖಪರಿಣಾಮವ ಹಡೆದರೆಂದು ಮಾಡಿದನು, ಕೇವಲ ಸದ್ಭಕ್ತ ಜನಂಗಳಿಗೆ. ಅದೆಂತೆಂದಡೆ_ `ಇಷ್ಟಂ ಪ್ರಾಣಂ ತಥಾ ಭಾವಂ ತ್ರಿಧಾ ಏಕಂ ವರಾನನೇ' ಎಂದುದಾಗಿ, ಆ ಸದ್ಗುರು ಆ ಪರಶಿವನನು ತತ್ಪ್ರಾಣವನು ಏಕೀಭವಿಸಿ ಸದ್ಭಾವದಿಂ ಲಿಂಗಪ್ರತಿಷೆ*ಯಂ ಮಾಡಿ, ಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು, ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲೆಂದು ಕರುಣಿಸಿದನು. ಮತ್ತಂ `ಏಕಮೂರ್ತಿಸ್ತ್ರಿಧಾ ಭೇದಃ' ಎಂದುದಾಗಿ, ಗುರುಲಿಂಗ ಜಂಗಮಲಿಂಗ ಪರಶಿವಲಿಂಗ ಒಂದೆ. `ದೇಶಿಕಶ್ಚರಲಿಂಗಂ ಚ ತ್ರಿವಿಧಂ ಲಿಂಗಮುಚ್ಯತೇ' ಎಂದುದಾಗಿ, ಲಿಂಗದ ವರ್ಮವನು ಲಿಂಗದ ಸ್ವರೂಪವನು ಲಿಂಗದ ನಿಶ್ಚಯವನು ಆದಿಯಲ್ಲು ಧ್ಯಾನಪೂಜೆಯ ಮಾಡಿದವರನು, ಭಕ್ತಿಪ್ರಸಾದ ಮುಕ್ತಿಯ ಪಡೆದವರನು ವೇದ ಶಾಸ್ತ್ರ ಪುರಾಣಾಗಮಂಗಳು ಹೇಳುತ್ತಿವೆ. ಶಿವನ ವಾಕ್ಯಂಗಳಿಗಿದೆ ದಿಟ. ಮನವೆ ನಂಬು, ಕೆಡಬೇಡ ಕೆಡಬೇಡ, ಮಹಾಸದ್ಭಕ್ತರ ನಂಬುವುದು, ಶಿವಲಿಂಗಾರ್ಚನೆಯ ನಿರಂತರ ಮಾಡುವುದು. ಇದು ನಿಶ್ಚಯವ ಶಿವನು ಬಲ್ಲನಯ್ಯ. ಈ ಕ್ರಿಯೆಯಲ್ಲಿ ಲಿಂಗಜಂಗಮನರಿತು, ವಿಶ್ವಾಸಮಂ ಮಾಡಿ, ಕೇವಲ ಸದ್ಭಕ್ತಿ ಕ್ರೀಯನರಿದು, ವರ್ಮವನರಿದು, ಸದ್ಭಾವದಿಂದ ಲಿಂಗಾರ್ಚನೆಯಂ ಮಾಡುವುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಉದಕದೊಳಗಣ ಕಿಚ್ಚಿನಂತೆ ಲಿಂಗೈಕ್ಯವು. ವಾಯುನುಂಗಿದ ಪರಿಮಳದಂತೆ ಲಿಂಗೈಕ್ಯವು. ಉರಿಯೊಳಡಗಿದ ಕರ್ಪೂರದಂತೆ ಲಿಂಗೈಕ್ಯವು. ಭಾವವನಡಸಿದ ಬಯಲಿನಂತೆ ಲಿಂಗೈಕ್ಯವು. ಅರಿವು ನುಂಗಿದ ಮರಹಿನಂತೆ ಲಿಂಗೈಕ್ಯವು. "ಯತೋ ವಾಚೋ ನಿವರ್ತಂತೇ ಅಪ್ರಾಪ್ಯಮನಸಾ ಸಹ' ಎಂದುದಾಗಿ, ವಾಙ್ಮನಕ್ಕೆ ಅಗೋಚರವಾದ ಮಹಾಶರಣನ ಒಳಗೊಂಡು ಥಳಥಳಿಸಿ ಬೆಳಬೆಳಗಿ ಹೊಳೆವುತ್ತ, ನಿಶ್ಶಬ್ದಬ್ರಹ್ಮವಾಗಿರ್ದನಯ್ಯಾ ನಮ್ಮ ಶಂಭುಜಕ್ಕೇಶ್ವರನು.
--------------
ಸತ್ಯಕ್ಕ
ಯದಾ ಶಿವಕಲಾಯುಕ್ತಂ ಲಿಂಗಂ ದದ್ಯಾನ್ಮಹಾಗುರುಃ ತದಾರಾಭ್ಯಂ ಶಿವಸ್ತತ್ರ ತಿಷ*ತ್ಯಾಹ್ವಾನಮತ್ರ ಕಿಂ ಸುಸಂಸ್ಕೃತೇಷು ಲಿಂಗೇಷು ಸದಾ ಸನ್ನಿಹಿತಃ ಶಿವಃ ತಥಾsಹ್ವಾನಂ ನ ಕರ್ತವ್ಯಂ ಪ್ರತಿಪತ್ತಿವಿರೋಧತಃ ನಾಹ್ವಾನಂ ನಾ ವಿಸರ್ಗಂ ಚೆ ಸ್ವೇಷ್ಟಲಿಂಗೇ ಕಾರಯೇತ್ ಲಿಂಗನಿಷಾ*ಪರೋ ನಿತ್ಯಮಿತಿ ಶಾಸ್ತ್ರವಿನಿಶ್ಚಯಃ ಆಹ್ವಾನಕ್ಕೋಸ್ಕರವಾಗಿ ಎಲ್ಲಿರ್ದನು ? ಈರೇಳು ಭುವನ ಹದಿನಾಲ್ಕು ಲೋಕವನೊಡಲುಗೊಂಡಿಪ್ಪ ದಿವ್ಯವಸ್ತು ಮತ್ತೆ ವಿಸರ್ಜಿಸಿ ಬಿಡುವಾಗ ಎಲ್ಲಿರ್ದನು ? ಮುಳ್ಳೂರೆ ತೆರಹಿಲ್ಲದಂತಿಪ್ಪ ಅಖಂಡವಸ್ತು ! ಆಕಾಶಂ ಲಿಂಗಮಿತ್ಯಾಹುಃ ಪೃಥಿವೀ ತಸ್ಯ ಪೀಠಿಕಾ ಆಲಯಂ ಸರ್ವಭೂತಾನಾಂ ಅಯನಂ ಲಿಂಗಮುಚ್ಯತೇ ಲಿಂಗಮಧ್ಯೇ ಜಗತ್‍ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ ವೇದಾದಿನಾಮ ನಿರ್ನಾಮ ಮಹತ್ವಂ ಮಮ ರೂಪಯೋಃ ಗುರೂಕ್ತಮಂತ್ರಮಾರ್ಗೇಣ ಇಷ್ಟಲಿಂಗಂ ತು ಶಾಂಕರಿ ಇಂತೆಂದುದಾಗಿ, ಬರಿಯ ಮಾತಿನ ಬಳಕೆಯ ತೂತುಜ್ಞಾನವ ಬಿಟ್ಟು ನೆಟ್ಟನೆ ತನ್ನ ಕರಸ್ಥಲದೊಳ್ ಒಪ್ಪುತಿರ್ಪ ಇಷ್ಟಲಿಂಗವ ದೃಷ್ಟಿಸಿ ನೋಡಲು ಅಲ್ಲಿ ತನ್ನ ಮನಕ್ಕೆ ಮನ ಸಂಧಾನವಾದ ದಿವ್ಯ ನಿಶ್ಚಯ ಒದಗಿ, ಆ ದಿವ್ಯ ನಿಶ್ಚಯದಿಂದ ವ್ಯಾಕುಳವಡಗಿ ಅದ್ವೈತವಪ್ಪುದು. ಅದು ಕಾರಣ_ನಮ್ಮ ಕೂಡಲಚೆನ್ನಸಂಗಯ್ಯನ ಶರಣರು ಆಹ್ವಾನ_ವಿಸರ್ಜನವೆಂಬ ಉಭಯ ಜಡತೆಯ ಬಿಟ್ಟು ತಮ್ಮ ತಮ್ಮ ಕರಸ್ಥಲದಲ್ಲಿ ನಿಶ್ಚಯಿಸಿದರಾಗಿ ಸ್ವಯಲಿಂಗವಾದರು ಕಾಣಿರೋ !
--------------
ಚನ್ನಬಸವಣ್ಣ
-->