ಅಥವಾ

ಒಟ್ಟು 67 ಕಡೆಗಳಲ್ಲಿ , 6 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ಜನ್ಮಂಗಳ ತಿರುಗಿ ಮಾನವ ಜನ್ಮಕ್ಕೆ ಬಂದು ಲಿಂಗೈಕ್ಯನಾಗಿರುವುದೇ ಚಂದ. ಶಾಸ್ತ್ರಂಗಳ ಓದಿ ಸಂಪಾದನೆಯ ಮಾಡಿ ಹೇಳಿ ಕೇಳುವ ಅಣ್ಣಗಳಿರಾ ಕೃತಯುಗದಲ್ಲಿ ಹನ್ನೆರಡು ಭಾರ ಜ್ಯೋತಿರ್ಲಿಂಗವನು ಬ್ರಹ್ಮರ್ಷಿಗಳು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿದ ಲಿಂಗವು ರವಿ ಶಶಿ ಆದಿಗಳು ಇರುವನಂತ ಸ್ಥಾವರಲಿಂಗವಾಗಿ ಸ್ಥಾಪ್ಯಗೊಂಡವು ಕಾಣಿರೊ. ತ್ರೇತಾಯುಗದಲ್ಲಿ ಲಕ್ಷ ಲಿಂಗವನು ನಮ್ಮ ರವಿಕುಲ ರಘುರಾಮರು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿದ ಲಿಂಗವು ರವಿ ಶಶಿಯಾದಿಗಳು ಇರುವನಕ ಸ್ಥಾವರಲಿಂಗವಾಗಿ ಸ್ಥಾಪ್ಯಗೊಂಡಿದ್ದವು ಕಾಣಿರೋ. ದ್ವಾಪರಯುಗದಲ್ಲಿ ಸೋಮವಂಶಿಕರು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿವ ಲಿಂಗವು ಗ್ರಾಮಕ್ಕೆ ಒಂದು ಕಲ್ಕೇಶ್ವರನಾಗಿ ರವಿ ಶಶಿಗಳಿರುವನಕ ಸ್ಥಾವರಲಿಂಗವಾಗಿ ಸ್ಥಾಪ್ಯಗೊಂಡವು ಕಾಣಿರೋ. ಕಲಿಯುಗದಲ್ಲಿ ಹುಟ್ಟಿದ ಮನುಜರು ಕೃತ, ತ್ರೇತಾ, ದ್ವಾಪರ ಇವು ಮೂರು ಯುಗದಲ್ಲಿ ಬ್ರಹ್ಮ ಕ್ಷತ್ರಿಯರು ತಮ್ಮ ವೇದಮಂತ್ರದಿಂದ ನಿರ್ಮಿತವ ಮಾಡಿ, ಇದ್ದ ಲಿಂಗವನು ಅತಿಗಳೆದು ಇಷ್ಟಲಿಂಗಯೆಂದು ಅದಕ್ಕೆ ಪಾದ್ಯ ತೀರ್ಥ ಪ್ರಸಾದವನು ಅರ್ಪಿಸಿ, ಹುಟ್ಟಿದ ಮನುಜರೆಲ್ಲ ತಲೆತಲೆಗೊಂದು ಲಿಂಗವನು ಕಟ್ಟಿಕೊಂಡಿದ್ದರೇನಯ್ಯ, ಆ ಲಿಂಗಕ್ಕೆ ನಿಷ್ಕ್ರಿಯವಾಗಲಿಲ್ಲ. ಕಾರ್ಯಕ್ಕೆ ಬಾರದೆ ಅಕಾರ್ಯವಾಗಿ ಹೋಗಿತ್ತು ಕಾಣಿರೋ. ಅದು ಎಂತೆಂದರೆ : ಕೃತಯುಗದಲ್ಲಿ ಹುಟ್ಟಿದ ಮನುಜರು ಸುವರ್ಣಲಿಂಗವನು ಪೂಜೆಯ ಮಾಡಿಪ್ಪರು. ಆ ಸುವರ್ಣವು ಕಲಿಯುಗದಲ್ಲಿ ಹುಟ್ಟಿದ ಮನುಜರ ರಾಯರ ದೇವರ ಭಂಡಾರಕ್ಕೆ ಯೋಗ್ಯವಾಯಿತ್ತು ಕಾಣಿರೋ. ತ್ರೇತಾಯುಗದಲ್ಲಿ ಹುಟ್ಟಿದ ಮನುಜರು ಕಾರಪತ್ರದ ಲಿಂಗದ ಪೂಜೆಯ ಮಾಡಲು, ಆ ಕಾರಪತ್ರದ ಲಿಂಗವು ಕಲಿಯುಗದಲ್ಲಿ ಹುಟ್ಟಿದ ಮನುಜರ ರಾಯರ ದೇವರ ಭಂಡಾರಕ್ಕೆ ಯೋಗ್ಯವಾಗಿತ್ತು ಕಾಣಿರೋ. ದ್ವಾಪರಯುಗದಲ್ಲಿ ಹುಟ್ಟಿದ ಮನುಜರು ನಾಗತಾಮ್ರದ ಲಿಂಗವನು ಪೂಜೆಯ ಮಾಡಲು ಆ ನಾಗತಾಮ್ರದ ಲಿಂಗವು ಕಲಿಯುಗದಲ್ಲಿ ಹುಟ್ಟಿದ ಮನುಜರ ರಾಯರ ದೇವರ ಭಂಡಾರಕ್ಕೆ ಯೋಗ್ಯವಾಯಿತ್ತು ಕಾಣಿರೋ. ಕಲಿಯುಗದಲ್ಲಿ ಹುಟ್ಟಿದ ಮನುಜರು ಕಲ್ಲುಲಿಂಗವನು ತಮ್ಮ ಕೈಲ್ಹಿಡಿದುಕೊಂಡು ಪಂಚಮುಖದ ಪರಮೇಶ್ವರದೇವರು ಎಮ್ಮ ಕರಸ್ಥಲಕ್ಕೆ ಬಂದನೆಂದು ಬಿಂಕವನು ಹೇಳುವ ಡೊಂಕುಮನುಜರು ಕಾಯ ಅಸುವಳಿದು ನೆಲಕ್ಕೆ ಬಿದ್ದು ಹೋಗುವಾಗ ಕೈಯಲ್ಲಿ ಕಲ್ಲುಲಿಂಗವು ಭೂಮಿ ಆಸ್ತಿಯನು ಭೂಮಿ ಕೂಡಿ ಹೋಗುವಾಗ ಒಂ ನಮಃಶಿವಾಯ ಎಂಬ ಮಂತ್ರವು ಮರೆತು ಹೋಯಿತು. ಅದ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಂಗಳು ಭವರಾಟಳದಲ್ಲಿ ತಿರುಗುತ್ತಿಪ್ಪಲ್ಲಿ ಅನಂತ ಕೋಟ್ಯನುಕೋಟಿ ಯುಗಂಗಳು ಮಡಿದುಹೋದವು, ಅನಂತ ಜಲಪ್ರಳಯಂಗಳು ಸುರಿದು ಹೋದವು. ಹದಿನಾಲ್ಕು ಲೋಕಂಗಳೆಂಬ ಅನಂತಕೋಟಿ ಬ್ರಹ್ಮಾಂಡಗಳೆಲ್ಲ ಲಯವಾಗಿ ಹೋದವು. ಇದರೊಳಗೆ ಆವ ಲೋಕದಲ್ಲಿ ಆವ ಯುಗದಲ್ಲಿ ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನರುಹಿದವರಾರು ಹೇಳಾ ಗಂಗೆ ಗೌರೀವಲ್ಲಭರು ಮೊದಲಾದ ಅನಂತಕೋಟಿ ರುದ್ರಾದಿಗಳೆಲ್ಲರೂ ಪ್ರಾಣಲಿಂಗಸಂಬಂಧದ ಹೊಲಬನರಿಯದೆ ಅಣಿಮಾದಿ ಚತುರ್ವಿಧ ಫಲಪ್ರಾಪ್ತಿಗೆ ಒಳಗಾದರು. ಶಿವಾಚಾರದ ವಿಚಾರವನರಿಯದೆ ಜಗವು ಕೆಟ್ಟುಹೋಹುದೆಂದು ಪರಮಪುರುಷಾರ್ಥಕಾರಣವಾಗಿ ಮತ್ರ್ಯದಲ್ಲಿ ಅವತರಿಸಿ,ಗುರುಲಿಂಗಜಂಗಮಪಾದೋದಕಪ್ರಸಾದವೆಂಬ ಪಂಚಾಚಾರಸ್ಥಲವ ನೆಲೆಗೊಳಿಸಿ, ಷಡುಸ್ಥಲವೆಂಬ ಮಹಾನುಭಾವಮಂ ಕರತಳಾಮಳಕವಾಗಿ ಸ್ಥಿತಗೊಳಿಸಿ, ಪ್ರಾಣಲಿಂಗ, ಲಿಂಗಪ್ರಾಣವೆಂಬ ಭೇದವನೆನಗೆ ತಿಳುಹಿ, ಎನ್ನ ಭ್ರಾಂತಿಸೂತಕವ ಬಿಡಿಸಿ, ಲಿಂಗೈಕ್ಯವೆಂಬುದೆನಗೆ ತೋರಿದೆಯಾಗಿ ನಿನ್ನಿಂದಲಾನು ಸಂಗನಬಸವಣ್ಣನೆಂಬ ಹೆಸರುವಡೆದನು. ಕೂಡಲಸಂಗಮದೇವರು ಸಾಕ್ಷಿಯಾಗಿ ಎನಗೆ ನೀನು ಪರಮಾರಾಧ್ಯ ಕಾಣಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಆದಿ, ಅನಾದಿ, ಅನಾಗತ, ಅನಂತ, ಅದ್ಭುತ, ತಮಂಧ, ತಾರಜ, ತಂಡಜ, ಬಿಂದುಜ, ಭಿನ್ನಾಯುಕ್ತ, ಅವ್ಯಕ್ತ, ಆಮದಾಯುಕ್ತ, ಮಣಿರಣ, ಮಾನ್ಯರಣ, ವಿಶ್ವರಣ, ವಿಶ್ವವಸು, ಅಲಂಕೃತ, ಕೃತಯುಗ, ತ್ರೇತಾಯುಗ, ದ್ವಾಪರ[ಯುಗ], ಕಲಿಯುಗ- ಇಂತೀ ಇಪ್ಪತ್ತೊಂದು ಯುಗಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಪ್ರಥಮ ಯುಗದಲ್ಲಿ ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶಂಗಳಿಲ್ಲದಂದು ಆರೂ ಆರೂ ಇಲ್ಲದಂದು, ನಾಮವಿಲ್ಲದಂದು, ಅಂದು ನಿಃಶೂನ್ಯವಾಗಿದ್ದ ಕಾಣ ನಮ್ಮ ಬಸವಣ್ಣ. ಅಂದು ನಿಮ್ಮ ನಾಭಿಕಮಲದಲ್ಲಿ ಜಲಪ್ರಳಯ ಪುಟ್ಟಿತ್ತು. ಆ ಜಲಪ್ರಳಯದಲ್ಲಿ ಒಂದುಗುಳ್ಳೆ ಲಿಂಗಾಕಾರವಾಗಿ ಪುಟ್ಟಿತ್ತು. ಆ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣನು. ಇಪ್ಪತ್ತನೆಯ ಯುಗದಲ್ಲಿ ಓಂಕಾರವೆಂಬ ಮೇವ ಮೇದು, ಮೆಲುಕಿರಿದು, ಪರಮಾರ್ಥವೆಂಬ ಹೆಂಡಿಯನ್ನಿಕ್ಕಿ ನೊಸಲ ಕಣ್ಣತೆರೆದು ನೋಡಲಾಗಿ ಆ ಹೆಂಡಿ ಭಸ್ಮವಾಯಿತ್ತು. ಆ ಭಸ್ಮವನೆ ತೆಗೆದು ತಳಿಯಲಾಗಿ ಭೂಮಂಡಲ ಹೆಪ್ಪಾಯಿತ್ತು ಹೆಪ್ಪಾಗಲಿಕ್ಕಾಗಿ ತೊಡೆಯ ಮೇಲಿದ್ದ ಲಿಂಗವ ತಕ್ಕೊಂಡು ಸ್ಥಾಪ್ಯವಿಟ್ಟಾತ ನಮ್ಮ ಬಸವಣ್ಣ. ಹತ್ತೊಂಬತ್ತನೆಯ ಯುಗದಲ್ಲಿ ಏಕಪಾದದ ಮಾಹೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ಹದಿನೆಂಟನೆಯ ಯುಗದಲ್ಲಿ ಕತ್ತಲೆಯ ಕಾಳೋದರನೆಂಬ ರುದ್ರನ ನಿರ್ಮಿಸಿದಾತ ನಮ್ಮ ಬಸವಣ್ಣ ಹದಿನೇಳನೆಯ ಯುಗದಲ್ಲಿ ವೇದಪುರಾಣಾಗಮಶಾಸ್ತ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ ಹದಿನಾರನೆಯ ಯುಗದಲ್ಲಿ....... ಹದಿನೈದನೆಯ ಯುಗದಲ್ಲಿ ಅಮೃತಮಥನವ ಮಾಡಿದಾತ ನಮ್ಮ ಬಸವಣ್ಣ. ಹದಿನಾಲ್ಕನೆಯ ಯುಗದಲ್ಲಿ ತೆತ್ತೀಸಕೋಟಿ ದೇವರ್ಕಳ ನಿರ್ಮಿಸಿದಾತ ನಮ್ಮ ಬಸವಣ್ಣ. ಹದಿಮೂರನೆಯ ಯುಗದಲ್ಲಿ ಸೌರಾಷ್ಟ್ರ ಸೋಮೇಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ಹನ್ನೆರಡನೆಯ ಯುಗದಲ್ಲಿ ಪಾರ್ವತಿಪರಮೇಶ್ವರರ ನಿರ್ಮಿಸಿದಾತ ನಮ್ಮ ಬಸವಣ್ಣ. ಹನ್ನೊಂದನೆಯ ಯುಗದಲ್ಲಿ ಏಕಾದಶ ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ. ಹತ್ತನೆಯ ಯುಗದಲ್ಲಿ ದಶವಿಷ್ಣುಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಒಂಬತ್ತನೆಯ ಯುಗದಲ್ಲಿ ನವಬ್ರಹ್ಮರ ನಿರ್ಮಿಸಿದಾತ ನಮ್ಮ ಬಸವಣ್ಣ. ಎಂಟನೆಯ ಯುಗದಲ್ಲಿ ಅಷ್ಟದಿಕ್ಪಾಲರ ನಿರ್ಮಿಸಿದಾತ ನಮ್ಮ ಬಸವಣ್ಣ. ಏಳನೆಯ ಯುಗದಲ್ಲಿ ಸಪ್ತ ಸಮುದ್ರಂಗಳ ನಿರ್ಮಿಸಿದಾತ ನಮ್ಮ ಬಸವಣ್ಣ. ಆರನೆಯ ಯುಗದಲ್ಲಿ ಷಣ್ಮುಖದೇವರ ನಿರ್ಮಿಸಿದಾತ ನಮ್ಮ ಬಸವಣ್ಣ. ಐದನೆಯ ಯುಗದಲ್ಲಿ ಪಂಚಮುಖದೀಶ್ವರನ ನಿರ್ಮಿಸಿದಾತ ನಮ್ಮ ಬಸವಣ್ಣ. ನಾಲ್ಕನೆಯ ಯುಗದಲ್ಲಿ ಚತುರ್ಮುಖದ ಬ್ರಹ್ಮನ ನಿರ್ಮಿಸಿದಾತ ನಮ್ಮ ಬಸವಣ್ಣ. ಮೂರನೆಯ ಯುಗದಲ್ಲಿ ಬ್ರಹ್ಮ, ವಿಷ್ಣು, ರುದ್ರರ ನಿರ್ಮಿಸಿದಾತ ನಮ್ಮ ಬಸವಣ್ಣ. ಎರಡನೆಯ ಯುಗದಲ್ಲಿ ಸಂಗಯ್ಯನ ನಿರ್ಮಿಸಿದಾತ ನಮ್ಮ ಬಸವಣ್ಣ. ಒಂದನೆಯ ಯುಗದಲ್ಲಿ ಪ್ರಭುವೆಂಬ ಜಂಗಮವ ನಿರ್ಮಿಸಿದಾತ ನಮ್ಮ ಬಸವಣ್ಣ. ಇಂತೀ ಇಪ್ಪತ್ತೊಂದು ಯುಗಂಗಳಲ್ಲಿ ಬಸವಣ್ಣನು ತಮ್ಮ ಕರಕಮಲವೆಂಬ ಗರ್ಭದಲ್ಲಿ ಜನಿಸಿದನೆಂದು. ಕಕ್ಕಯ್ಯಗಳು ತಮ್ಮ ಮೋಹದ ಮಗನೆಂದು ಒಕ್ಕುದನಿಕ್ಕಿ ಸಲಹಿದರು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅನಂತ ಅದ್ಭುತ ತಮಂಧ ತಾರಜ ತಂಡಜ ಭಿನ್ನಜ ಭಿನ್ನಾಯುಕ್ತ ಅದ್ಭೂತ ಅಮದಾಯುಕ್ತ ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗ ಇಂತೀ ಹದಿನೆಂಟು ಯುಗಂಗಳಲ್ಲಿ ಪುಟ್ಟಿದವಾವೆಂದಡೆ: ಅನಂತವೆಂಬ ಯುಗದಲ್ಲಿ ಸಾಕ್ಷಾತ್ ಸರ್ವಜ್ಞ ತಾನೊಬ್ಬನೆ ಇದ್ದ. ಅದ್ಭುತವೆಂಬ ಯುಗದಲ್ಲಿ ಪಾರ್ವತಿ ಹುಟ್ಟಿದಳು. ತಮಂಧವೆಂಬ ಯುಗದಲ್ಲಿ ನಾರಾಯಣ ಪುಟ್ಟಿದನು. ಆ ನಾರಾಯಣನ ನಾಭಿಯಲ್ಲಿ ಒಂದು ಕಮಲ ಹುಟ್ಟಿತ್ತು. ಆ ಕಮಲದಲ್ಲಿ ಬ್ರಹ್ಮ ಹುಟ್ಟಿದನು. ತಾರಜವೆಂಬ ಯುಗದಲ್ಲಿ ಆ ಬ್ರಹ್ಮಂಗೆ ಅಜನೆಂಬ ಹೆಸರಾಯಿತ್ತು. ತಂಡಜವೆಂಬ ಯುಗದಲ್ಲಿ ಬ್ರಹ್ಮಾಂಡವೆಂಬುದೊಂದು ತತ್ತಿ ಪುಟ್ಟಿತ್ತು. ಭಿನ್ನಜವೆಂಬ ಯುಗದಲ್ಲಿ ಆ ತತ್ತಿ ಭಿನ್ನವಾಯಿತ್ತು. ಭಿನ್ನಾಯುಕ್ತವೆಂಬ ಯುಗದಲ್ಲಿ ಮೇಘ ಪಾರಿಜಾತಂಗಳು ಪುಟ್ಟಿದವು. ನಿಂದಲ್ಲಿ ಭೂಮಿ ಪುಟ್ಟಿತ್ತು. ಅದ್ಭೂತವೆಂಬ ಯುಗದಲ್ಲಿ ಅಷ್ಟ ಕುಲಪರ್ವತಂಗಳು ಪುಟ್ಟಿದುವು. ಅಮದಾಯುಕ್ತವೆಂಬ ಯುಗದಲ್ಲಿ ಸಪ್ತಸಮುದ್ರಂಗಳು ಪುಟ್ಟಿದುವು. ಮಣಿರಣವೆಂಬ ಯುಗದಲ್ಲಿ ಉತ್ತಮ ಮಧ್ಯಮ ಕನಿಷ*ಂಗಳು ಪುಟ್ಟಿದುವು. ಮಾನ್ಯರಣವೆಂಬ ಯುಗದಲ್ಲಿ ನಕ್ಷತ್ರಂಗಳಾಗಿರ್ದ Zõ್ಞರಾಸೀತಿ ಲಕ್ಷಣ ಜೀವರಾಶಿಗಳು ಪುಟ್ಟಿದುವು. ವಿಶ್ವಾರಣವೆಂಬ ಯುಗದಲ್ಲಿ ಚಂದ್ರ ಸೂರ್ಯರು ಪುಟ್ಟಿದರು. ವಿಶ್ವಾವಸುವೆಂಬ ಯುಗದಲ್ಲಿ ದೇವಾದಿ ದೇವರ್ಕ?ು ಪುಟ್ಟಿದರು. ಅಲಂಕೃತವೆಂಬ ಯುಗದಲ್ಲಿ ಕಾಮಾದಿವರಂಗ?ು ಪುಟ್ಟಿದುವು ಕೃತಯುಗದಲ್ಲಿ ದೇವ ದಾನವ ಮಾನವರಿಗೆ ಯುದ್ಧವಾಯಿತ್ತು. ತ್ರೇತಾಯುಗದಲ್ಲಿ ರಾಮರಾವಣರಿಗೆ ಯುದ್ಧವಾಯಿತ್ತು. ದ್ವಾಪರಯುಗದಲ್ಲಿ ಕೌರವ ಪಾಂಡವರಿಗೆ ಯುದ್ಧವಾಯಿತ್ತು. ಕಲಿಯುಗದಲ್ಲಿ ಮೌರಿಯ ಕದಂಬರಿಗೆ ಯುದ್ಧವಾಯಿತ್ತು. ಇಂತೀ ಹದಿನೆಂಟು ಯುಗಂಗಳಲ್ಲಿ ರಾಜ್ಯವನಾಳಿದ ಸೂರ್ಯವಂಶದ ಕ್ಷತ್ರಿಯರ ಹೆಸರಾವುವೆಂದಡೆ ಆದಿನಾರಾಯಣ, ಆದಿನಾರಾಯಣನ ಮಗ ಬ್ರಹ್ಮ, ಬ್ರಹ್ಮನ ಮಗ ಭೃಗು, ಭೃಗುವಿನ ಮಗ ಇಂದ್ರ, ಇಂದ್ರನ ಮಗ ನಯನೇಂದ್ರಿಯ, ನಯನೇಂದ್ರಿಯನ ಮಗ ಕಾಲಸ್ವಾಲ, ಕಾಲಸ್ವಾಲನ ಮಗ ದುಂದುಮಹಂತ, ದುಂದುಮಹಂತನ ಮಗ ತ್ರಿಶಂಕು, ತ್ರಿಶಂಕುವಿನ ಮಗ ಹರಿಶ್ಚಂದ್ರ, ಹರಿಶ್ಚಂದ್ರನ ಮಗ ಲೋಹಿತಾಕ್ಷ, ಲೋಹಿತಾಕ್ಷನ ಮಗ ನಳ, ನಳನ ಮಗ ಕೂರ್ಪಸ್ಯ, ಕೂರ್ಪಸ್ಯನ ಮಗ ಪುನೋರಪಿ, ಪುನೋರಪಿಯ ಮಗ ಪರಿತಾಸಿ, ಪರಿತಾಸಿಯ ಮಗ ಅಮರ, ಅಮರನ ಮಗ ಮಾಂಧಾತ, ಮಾಂಧಾತನ ಮಗ ಮಾಗ್ರೀಚ, ಮಾಗ್ರೀಚನ ಮಗ ಬಿಂದು, ಬಿಂದುವಿನ ಮಗ ಲವಲ, ಲವಲನ ಮಗ ಪರಿತಾಪಿ, ಪರಿತಾಪಿಯ ಮಗ ಸಿಳ್ಳಗೋಪಾಲ, ಸಿಳ್ಳಗೋಪಾಲನ ಮಗ ನಂದಗೋಪಾಲ, ನಂದಗೋಪಾಲನ ಮಗ ವಸುದೇವ, ವಸುದೇವನ ಮಗ ಶ್ರೀಕೃಷ್ಣ, ಶ್ರೀಕೃಷ್ಣನ ಮಗ ಸಿಳಪ್ಪ, ಸಿಳಪ್ಪನ ಮಗ ದಿಗು, ದಿಗುವಿನ ಮಗ ರಘು, ರಘುವಿನ ಮಗ ಅರಣ್ಯ, ಅರಣ್ಯನ ಮಗ ಮೃಗರಾಜ, ಮೃಗರಾಜನ ಮಗ ದಶರಥ, ದಶರಥನ ಮಗ ರಾಮ. ಇಂತಿವರೆಲ್ಲರೂ ಪ್ರಳಯಕ್ಕೊ?ಗಾದರು ನೋಡಿರೆ ! ಪ್ರ?ಯರಹಿತ ನಮ್ಮ ಸಂಗನಬಸವಣ್ಣ ಕೂಡಲಚೆನ್ನಸಂಗಮದೇವರು ತಾನು ತಾನಾಗಿರ್ದರು.
--------------
ಚನ್ನಬಸವಣ್ಣ
ಜಾತಿಬ್ರಾಹ್ಮಣಂಗೆ ಕರಸ್ಥಲದಲ್ಲಿ ಲಿಂಗ, ಉರಸ್ಥಲದಲ್ಲಿ ರುದ್ರಾಕ್ಷಿಮಾಲೆ, ಉಪನಯನ ನೊಸಲಕಣ್ಣು, ಕಾಯ ಧೋತ್ರ, ಗಾಯತ್ರಿಮಂತ್ರ ಪುರುಷಪ್ರಮಾಣ ದಂಡ, `ಭವತಿಭಿಕ್ಷಾಂದೇಹಿ'ಯೆಂದು ಪರಬ್ರಹ್ಮವನಾಚರಿಸಿಕೊಂಡಿಪ್ಪಾತನೆ ಬ್ರಾಹ್ಮಣ. ಇಂತಲ್ಲದೆ ಮಿಕ್ಕವರೆಲ್ಲ ಶಾಪಹತ ವಿಪ್ರರು ನೀವು ಕೇಳಿರೊ. ಕೃತಯುಗ ಮೂವತ್ನಾಲ್ಕು ಲಕ್ಷದ ಐವತ್ಮೂರು ಸಾವಿರ ವರುಷಂಗಳಲ್ಲಿ ಗಜಾಸುರನೆಂಬ ಆನೆಯ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನಹೇಳಿತ್ತೇ ವೇದರಿ ಅಹುದು ತಿನ್ನ ಹೇಳಿತ್ತು. ಅದೆಂತೆಂದಡೆ: ಕುಲ ಚಲ ಯೌವನ ರೂಪು ವಿದ್ಯಾ ರಾಜ್ಯ ತಪವೆಂಬ ಅಷ್ಟಮದಂಗಳ ಕೊಲ್ಲ ಹೇಳಿತ್ತಲ್ಲದೆ ಆನೆಯ ತಿಂಬ ಹೀನ ಹೊಲೆಯರ ಮುಖವ ನೋಡಲಾಗದು. ತ್ರೇತಾಯುಗದ ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ ವರುಷಂಗಳಲ್ಲಿ ಅಶ್ವನೆಂಬ ಕುದುರೆಯ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನಹೇಳಿತ್ತೇ ವೇದ? ಅಹುದು ತಿನ್ನಹೇಳಿತ್ತು ವೇದ. ಅದೆಂತೆಂದಡೆ: ಪ್ರಾಣ ವ್ಯಾನ ಅಪಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ಕುದುರೆಯ ತಿಂಬ ತಿನ್ನ ಹೇಳಿತ್ತಲ್ಲದೆ, ಕುದುರೆಯ ತಿಂಬ ಜಿನುಗು ಹೊಲೆಯರ ಮುಖವಂ ನೋಡಲಾಗದು. ದ್ವಾಪರ ಎಂಟು ಲಕ್ಷದ ಐವತ್ಕಾಲ್ಕು ಸಾವಿರ ವರುಷಂಗಳಲ್ಲಿ ಮಹಿಷಾಸುರನೆಂಬ ಕೋಣನ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನ ಹೇಳಿತ್ತೇ ವೇದ? ಅಹುದು ತಿನ್ನ ಹೇಳಿತ್ತು. ಅದೆಂತೆಂದಡೆ: ಜಾತಿ ವರ್ಣ ಆಶ್ರಮ ಕುಲಗೋತ್ರ ನಾಮವೆಂಬ ಕೋಣನ ಕೊಲ್ಲ ಹೇಳಿತ್ತಲ್ಲದೆ, ಕೋಣನ ತಿಂಬ ಕುನ್ನಿ ಹೊಲೆಯರ ಮುಖವ ನೋಡಲಾಗದು. ಕಲಿಯುಗದ ನಾಲ್ಕು ಲಕ್ಷ ಮೂವತ್ತೆರಡು ಸಾವಿರ ವರುಷಂಗಳಲ್ಲಿ ಮಾಂಸವ ತಿನ್ನ ಹೇಳಿತ್ತೇ ವೇದ? ಅಹುದು ತಿನ್ನ ಹೇಳಿತ್ತು, ಅದೆಂತೆಂದಡೆ, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಹೋತನ ಕೊಲ್ಲ ಹೇಳಿತ್ತಲ್ಲದೆ, ಹೋತನ ಕೊಂದು ತಿಂಬ ಹೊಲೆಯರ ಮುಖವ ನೋಡಲಾಗದು. ಇಂತೀ ನಾಲ್ಕು ಯುಗದಲ್ಲಿ ಮಾಂಸವ ತಿಂಬ ಅನಾಚಾರಿ ಹೊಲೆಯರ ಮುಖವಂ ನೋಡಲಾಗದು ಅಜಂಗೆ ದ್ವಿಜನೆ ಗುರು, ದ್ವಿಜಂಗೆ ಹರಿಯೆ ಗುರು. ಹರಿ ಹರಿಣಾವತಾರವಾದಲ್ಲಿ ಎರಳೆಯ ತಿಂಬುದಾವಾಚಾರ? ಹರಿ ಮತ್ಸ್ಯಾವತಾರವಾದಲ್ಲಿ ಮೀನ ತಿಂಬುದಾವಾಚಾರ? ಇಂತೀ ಹೊನ್ನಗೋವ ತಿಂಬ ಕುನ್ನಿಗಳ ತೋರದಿರಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಕಲಿಯುಗ ಮೊದಲಾದ ಇಪ್ಪತ್ತೊಂದು ಯುಗದಲ್ಲಿ ದಾವರೂಪವಾಗಿ ಇದ್ದನಯ್ಯಾ ಬಸವಣ್ಣ! ಬಲ್ಲರೆ, ಹೇಳಿ, ಅರಿಯದಿದ್ದರೆ ನೀವು ಕೇಳಿ. ಅದು ಎಂತೆಂದಡೆ: ಆದಿಯುಗದಲ್ಲಿ ಶರಣನೆಂಬ ಬಸವಣ್ಣ; ಜಂಗಮವೆಂಬ ನಿರಂಜನ. ಅನಾದಿಯೆಂಬ ಯುಗದಲ್ಲಿ ಬಸವಣ್ಣನೆ ಭಕ್ತ; ಜಂಗಮನೆ ಸದಾಶಿವಲಿಂಗ. ಅವ್ಯಕ್ತನೆಂಬ ಯುಗದಲ್ಲಿ ಬಸವನೆ ಅಲ್ಲಮ; ಜಂಗಮನೆ ಪೀಠಾಧಾರವೆಂಬಲಿಂಗ. ವ್ಯಕ್ತನೆಂಬ ಯುಗದಲ್ಲಿ ಬಸವನೆ ಬೊಮ್ಮಣ್ಣ; ಜಂಗಮನೆ ಭೂತೇಶ್ವರಲಿಂಗ. ಮಣಿರಣನೆಂಬ ಯುಗದಲ್ಲಿ ಬಸವನೆ ಆರೋಗ್ಯಕ್ಕೆ ವೈದ್ಯನಾದ. ಜಂಗಮನೆ ಪ್ರಂಚವಕ್ತ್ರನೆಂಬಲಿಂಗ. ವಿಶ್ವಾರಣನೆಂಬ ಯುಗದಲ್ಲಿ ಬಸವನೆ ಪೀತಶಂಭು; ಜಂಗಮನೆ ಏಕಭರಿತನೆಂಬಲಿಂಗ. ಅಲಂಕೃತನೆಂಬ ಯುಗದಲ್ಲಿ ಬಸವನೆ ಪ್ರಭುದೇವರು; ಜಂಗಮವೆ ಸರ್ವೇಶ್ವರಲಿಂಗ. ಕೃತಯುಗದಲ್ಲಿ ಬಸವನೆ ಗಜ್ಜಯ್ಯನಾದ; ಜಂಗಮವೆ ತ್ರಿಪುರಾಂತಕಲಿಂಗ. ತ್ರೇತಾಯುಗದಲ್ಲಿ ಬಸವನೆ ಬ್ರಾಹ್ಮಣನಾದ; ಜಂಗಮನೆ ಲೋಕೇಶ್ವರನೆಂಬಲಿಂಗ. ದ್ವಾರಪರಯುಗದಲ್ಲಿ ಬಸವನೆ ಶ್ರೀಧರಪಂಡಿತನಾದ; ಜಂಗಮವೆ ಶ್ರೀಶೈಲ ಮಲ್ಲಿಕಾರ್ಜುನನಾದ. .............ಕರುಣ ಬಸವನೆಂಬ ವೃಷಭ, ಜಂಗಮವೆ ಗೊಹೇಶ್ವರ. ಪ್ರಾಳಿಯೆಂಬ ಯುಗದಲ್ಲಿ ಬಸವನೆ ಭೃಂಗೀಶ್ವರ; ಜಂಗಮವೆ ಸದಾಶಿವ. ಅರ್ಭೂತನೆಂಬ ಯುಗದಲ್ಲಿ ಬಸವನೆ ರಾಮಚಂದ್ರ: ಜಂಗಮವೆ ಅನಾದಿಲಿಂಗ. ತಮಂಧನೆಂಬ ಯುಗದಲ್ಲಿ ಬಸವನೆ ಕಾಲರುದ್ರ; ಜಂಗಮವೆ ಊಧ್ರ್ವಪೀಠೇಶ್ವರ. ತಂಡಜನೆಂಬ ಯುಗದಲ್ಲಿ ಬಸವನೆ ಶಂಕರ; ಜಂಗಮವೆ ಸರ್ವೇಶ್ವರಲಿಂಗ. ಭಿನ್ನಜನೆಂಬ ಯುಗದಲ್ಲಿ ಬಸವನೆ ಪಶುಪತಿ; ಜಂಗಮವೆ ಮೂಕೇಶ್ವರಲಿಂಗ. ಇಂತೀ ಬಸವನೆಂಬ ರೂಪೇ ಭಕ್ತ. ಭಕ್ತನ ಮನದ ಕೊನೆಯ ಮೇಲೆ ಸೋಂಕಿ ಸುಳಿವಾತನೆ ಜಂಗಮ. ಇಂತೀ ಉಭಯವ ಏಕವಂ ಮಾಡುವ ನಂದಿನಿಯನಿದಿರಿಟ್ಟು ಪೂಜೆಯ ಮಾಡುವ ದ್ರೋಹಿಗಳಿಗೆ ನಾನೇನೆಂಬೆನಯ್ಯಾ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಮತ್ತಂ, ಆ ಶಿಷ್ಯನು ತನ್ನ ಪೂರ್ವಾಪರಸಂಬಂಧವ ವಿವೇಕಿಸಿ ನುಡಿದ ಪ್ರಸ್ತಾವದ ವಚನವೆಂತೆಂದಡೆ : ಅನಾದಿಯೆಂಬ ಯುಗದಲ್ಲಿ ಅನಾದಿಕಾಯನೆಂಬ ಒಡಲುವಿಡಿದು ನಿರಂಜನಪ್ರಣವವ ಧ್ಯಾನಿಸುತಿರ್ದೆನು. ಆದಿಯೆಂಬ ಯುಗದಲ್ಲಿ ಆದಿಕಾಯನೆಂಬ ಒಡಲುವಿಡಿದು ಅವಾಚ್ಯಪ್ರಣವವ ಧ್ಯಾನಿಸುತಿರ್ದೆನು. ಅನಾಗತವೆಂಬ ಯುಗದಲ್ಲಿ ಅನಂತಕಾಯನೆಂಬ ದೇಹದೊಳು ಚಿನ್ನಾದಪ್ರಣವವ ಧ್ಯಾನಿಸುತಿರ್ದೆನು. ಅನಂತವೆಂಬ ಯುಗದಲ್ಲಿ ಅನಂತಕಾಯನೆಂಬ ಒಡಲುವಿಡಿದು ಚಿದ್ಬಿಂದುಪ್ರಣವವ ಧ್ಯಾನಿಸುತಿರ್ದೆನು. ಅದ್ಭುತವೆಂಬ ಯುಗದಲ್ಲಿ ಸೂಕ್ಷ್ಮಕಾಯನೆಂಬ ಒಡಲುವಿಡಿದು ಚಿತ್ಕಲಾಪ್ರಣವವ ಧ್ಯಾನಿಸುತಿರ್ದೆನು. ತಮಂಧವೆಂಬ ಯುಗದಲ್ಲಿ ಜ್ಞಾನಕಾಯನೆಂಬ ಒಡಲುವಿಡಿದು ಕಲಾಪ್ರಣವವ ಧ್ಯಾನಿಸುತಿರ್ದೆನು. ತಾರಜವೆಂಬ ಯುಗದಲ್ಲಿ ಸಕಲಕಾಯನೆಂಬ ಒಡಲುವಿಡಿದು ಅನಾದಿಪ್ರಣವವ ಧ್ಯಾನಿಸುತಿರ್ದೆನು. ತಂಡಜವೆಂಬ ಯುಗದಲ್ಲಿ ಪ್ರಚಂಡಕಾಯನೆಂಬ ಒಡಲುವಿಡಿದು ಅನಾದಿ ಅಕಾರಪ್ರಣವವ ಧ್ಯಾನಿಸುತಿರ್ದೆನು. ಭಿನ್ನಜವೆಂಬ ಯುಗದಲ್ಲಿ ಭಿನ್ನಜ್ಞಾನನೆಂಬ ಒಡಲುವಿಡಿದು ಅನಾದಿ ಉಕಾರಪ್ರಣವವ ಧ್ಯಾನಿಸುತಿರ್ದೆನು. ಭಿನ್ನಾಯುಕ್ತವೆಂಬ ಯುಗದಲ್ಲಿ ಅಭಿನ್ನಕಾಯನೆಂಬ ಒಡಲುವಿಡಿದು ಅನಾದಿ ಮಕಾರಪ್ರಣವವ ಧ್ಯಾನಿಸುತಿರ್ದೆನು. ಅವ್ಯಕ್ತವೆಂಬ ಯುಗದಲ್ಲಿ ಅವಿರಳಕಾಯನೆಂಬ ಒಡಲುವಿಡಿದು ಆದಿಪ್ರಣವವ ಧ್ಯಾನಿಸುತಿರ್ದೆನು. ಅಮದಾಯುಕ್ತವೆಂಬ ಯುಗದಲ್ಲಿ ಅಖಂಡಿತಜ್ಞಾನಕಾಯನೆಂಬ ಒಡಲುವಿಡಿದು ಶಿವಪ್ರಣವವ ಧ್ಯಾನಿಸುತಿರ್ದೆನು. ಮಣಿರಣವೆಂಬ ಯುಗದಲ್ಲಿ ಮನೋನ್ಮಯನೆಂಬ ಒಡಲುವಿಡಿದು ಪರಮೋಂಕಾರವ ಧ್ಯಾನಿಸುತಿರ್ದೆನು. ಮಾನ್ಯರಣವೆಂಬ ಯುಗದಲ್ಲಿ ಮಹಾಕಾಯನೆಂಬ ಒಡಲುವಿಡಿದು ಮಹದೋಂಕಾರವ ಧ್ಯಾನಿಸುತಿರ್ದೆನು. ವಿಶ್ವಾರಣವೆಂಬ ಯುಗದಲ್ಲಿ ವಿಶ್ವಕಾಯನೆಂಬ ಒಡಲುವಿಡಿದು ವಿಶ್ವಾಧಿಕಮಹಾಲಿಂಗವ ಧ್ಯಾನಿಸುತಿರ್ದೆನು. ವಿಶ್ವಾವಸುವೆಂಬ ಯುಗದಲ್ಲಿ ವಿಶ್ವಕಾರಣನೆಂಬ ದೇಹವಿಡಿದು ವಿಶ್ವರೂಪಲಿಂಗವ ಧ್ಯಾನಿಸುತಿರ್ದೆನು. ಅಲಂಕೃತವೆಂಬ ಯುಗದಲ್ಲಿ ಅನಂತಕಾಯನೆಂಬ ಒಡಲುವಿಡಿದು ಅಖಂಡಲಿಂಗವ ಧ್ಯಾನಿಸುತಿರ್ದೆನು. ಕೃತಯುಗದಲ್ಲಿ ಅಖಂಡಾತ್ಮಕನೆಂಬ ಗಣೇಶ್ವರನಾಗಿರ್ದಂದು ಅನಾದಿಲಿಂಗವ ಧ್ಯಾನಿಸುತಿರ್ದೆನು. ತ್ರೇತಾಯುಗದಲ್ಲಿ ಅಚಲಾತ್ಮನೆಂಬ ಗಣೇಶ್ವರನಾಗಿರ್ದಂದು ಆದಿಲಿಂಗವ ಧ್ಯಾನಿಸುತಿರ್ದೆನು. ದ್ವಾಪರಯುಗದಲ್ಲಿ ಅಖಂಡಿತನೆಂಬ ಗಣೇಶ್ವರನಾಗಿರ್ದಂದು `ಓಂಕಾರೇಭ್ಯೋ ಜಗದ್ರಕ್ಷಾಯ ಜಗತಾಂ ಪತಯೇ ನಮೋ ನಮಃ' ಎಂಬ ಪ್ರಣವಲಿಂಗವ ಧ್ಯಾನಿಸುತಿರ್ದೆನು. ಕಲಿಯುಗದಲ್ಲಿ ಅಪ್ರಮಾಣಗಣೇಶ್ವರನಾಗಿ ಬಂದು ಅಪ್ರಮಾಣ ಅಗೋಚರಲಿಂಗವ ಧ್ಯಾನಿಸುತಿರ್ದೆನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->