ಅಥವಾ

ಒಟ್ಟು 17 ಕಡೆಗಳಲ್ಲಿ , 5 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಪರಸ್ಥಾನದಲ್ಲಿ ಆನಂದಬ್ರಹ್ಮವ ಭೇದ್ಥಿಸುವ ಪರಿಯೆಂತೋ? ಪೂರ್ವದಕ್ಷಿಣವೆಂಬ ದಿಕ್ಕುಗಳಲ್ಲಿ ಸಮನಿಸುವ ಆತ್ಮ ಅಂತರ್ಯಾತ್ಮ ಭೂತಾತ್ಮ ಸರ್ವಾತ್ಮ ಪರಮಾತ್ಮವೆಂಬ ಆತ್ಮ ಪಂಚಕಗಳೆಂಬವನು ಹಿಂದು ಮುಂದರಿಯದೆ, ಮುಂದು ಹಿಂದೆಂದರಿಯದೆ ಸಂಯೋಗದಲಿಕ್ಕಿ ಪ್ರಯೋಗಿಸಿಹೆನೆಂಬ ಯೋಗಿ ಕೇಳಾ; ಪೂರ್ವವಾವುದು? ದಕ್ಷಿಣವಾವುದು? ಪೂರ್ವದಲ್ಲಿ ದಿವಾಕರರು ಹನ್ನೆರಡರ ಆನಂದ ಪ್ರಭೆಯಲ್ಲಿ ಭವಿಸಲ್ಪಟ್ಟ ನಯನದ ಕಿರಣದ ಕೊನೆಯ ಮೊನೆಯ ಮೇಲೆ ದಿವ್ಯಾಂಗಯೋಗ ಸಮನಿಸುವ ಪರಿಯೆಂತು ಹೇಳಾ? ದಕ್ಷಿಣದಲ್ಲಿ ದಿಗ್ವಳಯ ಹದಿನಾಲ್ಕರ ವ್ಯಾಪ್ತಿಯ ಸಂಚರಿಸದೆ ಸಮನಿಸುವ ಕೋಹಂ ತತ್ವಾರ್ಥದಿಂದತ್ತ ನಾಹಂ ಪರಮಾರ್ಥದಿಂದತ್ತ ಸೋಹಂ ಸದ್ಭಕ್ತಿಯ ಮುಟ್ಟಿದ ದಾಸೋಹ ನಿನ್ನಲ್ಲಿ ಸಂಯೋಗವ ಎಂತು ಮಾಡುವೆ ಹೇಳಾ? ಯೋಗಿ ನೀನು ಯೋಗಕ್ಕೆ ಹರಿವಾವುದು? ಯೋಗಕ್ಕೆ ನೆಲೆ ಯಾವುದು? ಮತ್ತೆ ಪೆರತನರಿಯದೆ ಶಾಶ್ವತವು ನೀನೆ ನೀನೆ ಎಂದೆನ್ನು, ಸಕಲನಿಷ್ಕಲದೊಳಗೆ ನೀನೆ ನೀನೆಯೆನ್ನಾ ತಾತ್ಪರ್ಯವರ್ಮ ಕಳೆಗಳೊಳಗೆ ನೀನೆ ನೀನೆಯೆಂದೆನ್ನಾ. ಓಂ ಗ್ರಾಂ ಘ್ರೀಂ ಘ್ರೂಂ ಎಂಬಕ್ಷರ ಚತುಷ್ಟಯದ ಮೇಲೆ ಶುದ್ಧ ಸಂಯೋಗವೆಂಬ ಗದ್ದುಗೆಯಿಕ್ಕಿ ಅಕ್ಷರದ್ವಯದ ಆನಂದರಾಜ ಕುಳ್ಳಿದ್ದೆ ೈದಾನೆ ಜಪಿಸುತ. ಆ ಜಪವು ನಿತ್ಯ, ಅದು ಮುಕ್ತಿ, ಅದು ಸತ್ಯ. ಅದು ಪದಕ್ಕೆ ಫಲಕ್ಕೆ ಭವಕ್ಕೆ ದೂರ, ವರ್ಣಾಶ್ರಯವ ಮೀರಿತ್ತು ತತ್ವ ಪ್ರಾಪಂಚಿಕವ ಜರಿಯಿತ್ತು. ಮಂತ್ರಂಗಳ ಕೈಯಿಂದ ವಂದಿಸಿಕೊಂಡಿತ್ತು. ಮೂರರಲ್ಲಿ ಭವಿಸಿತ್ತು, ಆರರಲ್ಲಿ ಫಲವಾಯಿತ್ತು. ಮೂವತ್ತಾರರಲ್ಲಿ ಹಣಿತಿತ್ತು ಯೋಗಿಗಳ ನಡೆಸಿತ್ತು ತತ್ವಮಸಿ ಸಂಗಮವಾಯಿತ್ತು. ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ನಿತ್ಯದಲ್ಲಿ ನಿತ್ಯವಾಯಿತ್ತು.
--------------
ಸಿದ್ಧರಾಮೇಶ್ವರ
ಸಾಗರದ ಮಧ್ಯದ ಸಾದ್ಥಿಸುವ ಬಹಿರಂಗ ಆಗಮಂಗಳಿಗದು ಹೊರಗು ತಾನು. ಯೋಗಕ್ಕೆ ಮೂಲವದು, ಯೋಗಕ್ಕೆ ಸಿದ್ಧವದು, ಯೋಗಕ್ಕೆ ಅತ್ಯಂತ ಪರಮಸೀಮೆ. ಸಾದಾಖ್ಯ ತತ್ವದ ಸಂದು ಸವದರಿಗಿಲ್ಲ, ಅದ್ಯಕ್ಷರದ್ವಯದ ಪರಿಯಿಂತುಟು. ಮೂದೇವರೊಡೆಯ ಕಪಿಲಸಿದ್ಧಮಲ್ಲಿಕಾರ್ಜುನನ ಭೇದಿಸುವ ಯೋಗಿಯನು ಕಂಡು ನಗುವೆ.
--------------
ಸಿದ್ಧರಾಮೇಶ್ವರ
ಪೃಥ್ವಿ ಆಕಾಶದ ಮೇಲೆ ಗೌಪ್ಯವೆಂಬ ಪ್ರಣವದ ನಾದದ ಅಗ್ರದಲ್ಲಿ ಆದಿ ಅನಾದಿಯ ಮುಟ್ಟದೆ, ಅಪರಿಮಿತವೆಂಬ ಕುಂಭವುಂಟು. ಆ ಕುಂಭದ ಪೂರ್ವಬಾಗಿಲಿಗೆ ಎಂಟು ಎಸಳಿನ ಬೀಗ. ಉತ್ತರ ಬಾಗಿಲಿಗೆ ಎಸಳು ಮೂರರ ಬೀಗ. ಪಶ್ಚಿಮದ ಬಾಗಿಲಿಗೆ ಪಂಚ ಎಸಳಿನ ಬೀಗ. ದಕ್ಷಿಣದ ಬಾಗಿಲಿಗೆ ಏಕ ಎಸಳಿನ ಬೀಗ. ಆ ಬೀಗಂಗಳ ದಳದ ಎಸಳಿನಲ್ಲಿ ಕಳೆವಕ್ಷರಗಳೇಳು, ಉಳಿವಕ್ಷರವಾರು, ಸಲುವಕ್ಷರ ಮೂರು, ನೆಲೆಯಕ್ಷರವೋಂದೇ. ಇಂತೀ ಎರಡಕ್ಷರವ ಭಾವಿಸಿ ಪ್ರಮಾಣವಿಟ್ಟು ನೋಡಬಲ್ಲಡೆ ಆ ಕುಂಭದೊಳಹೊರಗ ಕಾಣಬಹುದು. ಇದು ಲಿಂಗಾಂಗಿಯ ನಿಜೈಕ್ಯಸ್ಥಲವೆಂಬೆ. ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು ಯೋಗಕ್ಕೆ ಸಿಕ್ಕಲಿಲ್ಲವೆಂಬೆನು.
--------------
ಬಾಚಿಕಾಯಕದ ಬಸವಣ್ಣ
ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ, ಬಯಲಬೊಂಬೆಯ ಕೈಯಲ್ಲಿ ಕೊಟ್ಟು ಮುದ್ದಾಡಿಸುತ್ತಿರ್ದನಯ್ಯಾ. ಕರ್ಪೂರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನಿಕ್ಕಿ, ಅಗ್ನಿ ಕರಗಿ ಕರ್ಪೂರ ಉಳಿದುದಕ್ಕೆ ಬೆರಗಾದೆನಯ್ಯಾ, ಎನ್ನ ಅಜಗಣ್ಣನ ಯೋಗಕ್ಕೆ.
--------------
ಮುಕ್ತಾಯಕ್ಕ
ಸರ್ವಮಯ ಆತ್ಮನೆಂದಲ್ಲಿ ರಕ್ಷಿಸಿ ಶಿಕ್ಷಿಸಿಹೆನೆಂಬುದೇನೊ? `ಅಣೋರಣೀಯಾನ್ಮಹತೋಮಹೀಯಾನ್' ಎಂಬಲ್ಲಿ ಬೇರೊಂದರಿತು ಕುರಿತು ಕಾಬುದೇನು? ಇದಿರಿಗೆ ತಾನಿಲ್ಲ, ತನಗೆ ಇದಿರಿಲ್ಲ ಎಂದಲ್ಲಿ ಗಜಬಜೆಯಲ್ಲಿ ಕುಜನವೇತಕ್ಕೆ? ಬೇರಿಗೆ ನೀರನೆರೆದಲ್ಲಿ ಶಾಖೆಗೆ ಸಂದುಂಟೆ? ಅಂಗ ಪ್ರಾಣಲಿಂಗ ಒಂದೆಂದಲ್ಲಿ ಅರ್ಪಿತಕ್ಕೆ ಹಿಂದು ಮುಂದಿಲ್ಲ. ನಿಜಗುಣಯೋಗಿಯ ಯೋಗಕ್ಕೆ ಮುನ್ನವೆ ಇಲ್ಲ.
--------------
ನಿಜಗುಣಯೋಗಿ
ಕಲ್ಲಿನ ಹುಳ್ಳಿಯ ನೀರಲ್ಲಿ ಹುಟ್ಟಿದ ಕಿಚ್ಚು ತ್ರಿವಿಧಕ್ಕೂ ಅಲ್ಲಲ್ಲಿಯ ಗುಣವಲ್ಲಿಯದೆ, ಬೇರೊಂದಕ್ಕೆಲ್ಲಿಯೂ ತೆರಪಿಲ್ಲ. ಕಾಯಗುಣದಿಂದ ಕಲ್ಪಿತಕ್ಕೊಳಗಾಗಿ ಜೀವಗುಣದಿಂದ ಭವಕ್ಕೆ ಬೀಜವಾಗಿ ಅರಿದಿಹೆ ಗುಣದಿಂದ ಮರವೆಗೆ ಒಳಾಗಾಗಿ. ಅರಿದಿಹೆನೆಂಬ ಅರಿವು ಕುರುಹುಗೊಳ್ಳದೆ ನಿಂದುದು ನಿಜಗುಣ ಯೋಗಿಯ ಯೋಗಕ್ಕೆ ಭಾವವಿಲ್ಲದ ಸೂತ್ರದ ಬಿಂಬ.
--------------
ನಿಜಗುಣಯೋಗಿ
ಅಧ್ಯಾತ್ಮ ಅದ್ಯಾತ್ಮವೆಂದೆಂಬಿರಿ, ಅಧ್ಯಾತ್ಮವಾರಿಗೆ ? ಶ್ರೀಗುರು ಬಹಳವಪ್ಪ ಶಿವಲಿಂಗವ ಸೂಕ್ಷ್ಮವ ಮಾಡಿ, ಕರಸ್ಥಲದಲ್ಲಿ ಕೊಟ್ಟ ಬಳಿಕ ಬೇರೆ ಯೋಗವುಂಟೆ ? ತನ್ನ ಹಸ್ತವ ಮಸ್ತಕದಲ್ಲಿಟ್ಟು ವಾಯುಪ್ರಾಣಿಯಾಗಿರ್ದು ಕೊಂದು ಲಿಂಗಪ್ರಾಣಿಯ ಮುಕ್ತನ ಮಾಡಿದ ಬಳಿಕ, ಅಕ್ಷರವೈದರಲ್ಲಿ ಮುಕ್ತನ ಮಾಡಿದ ಬಳಿಕ, ಮರಳಿ ಯೋಗವುಂಟೆ ಶಿವಯೋಗವಲ್ಲದೆ? ಲಿಂಗಾರ್ಚನೆಯ ಮಾಡಿ ಜಂಗಮಪ್ರಸಾದವ ಕೊಂಡ ಬಳಿಕ, ಬರಿಯ ಯೋಗಕ್ಕೆ ಒಡಂಬಡುವುದೆ ಅರಿವು? ಇಂತಪ್ಪವನತಿಗಳೆದು ಶುದ್ಧಕ್ಷರದ್ವಯವ ಭೇದಿಸಿತಂದು ಕರಸ್ಥಲದಲ್ಲಿರಿಸಿ, ಇದು ಉರುತರ ಪದವೆಂದು ತೋರಿಕೊಟ್ಟು, ಎನ್ನ ತನ್ನಂತೆ ಮಾಡಿದ ಗುರು ಚೆನ್ನಬಸವಣ್ಣ, ಆನು ಚೆನ್ನಬಸವಣ್ಣನ ಕರುಣದಿಂದ ಅಭ್ಯಾಸಯೋಗವನತಿಗಳೆದು, ಶಿವಯೋಗದಲ್ಲಿ ನಿತ್ಯನಾಗಿ, ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಎಂಬ ಷಡುಸ್ಥಲಕ್ಕೆ ಅಧಿಕಾರಿಯಾದೆನು, ನಿನ್ನವರ ಸಲುಗೆಗೆ ಸಂದೆನು. ಚೆನ್ನಬಸವಣ್ಣನ ಕೃಪೆ ಎನ್ನನಿಂತು ಮಾಡಿತ್ತು ಕಾಣಾ, ಶ್ರೀಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಜಡ ಅಜಡವೆಂಬುಭಯ ಕೂಟ ಉಳ್ಳನ್ನಕ್ಕ ನಾನೆಂಬುದದೇನು? ವಿಚಾರಕ್ಕೆ ನೀನೆಂಬುದದೇನು? ಗೆಲ್ಲ ಸೋಲಕ್ಕೆ ಹೋರಿ ಒಳ್ಳಿದನಾದನೆಂಬಲ್ಲಿಯೆ ಕಳ್ಳ ಕದ್ದ ಗಜವಲ್ಲಿ ಅಡಗಿ ಮಾರೂದು ಹೇಳಾ. ಬಲ್ಲವನಾದೆನೆಂಬಲ್ಲಿಯೆ ಉಳಿಯಿತ್ತು ನಿಜಗುಣಯೋಗಿಯ ಯೋಗಕ್ಕೆ ಸಲ್ಲದ ಗುಣ.
--------------
ನಿಜಗುಣಯೋಗಿ
ಕಣ್ಣ ಮೊದಲಲ್ಲಿ ಕುಳ್ಳಿರ್ದು ಬಣ್ಣದೋರುವ ಪರಿಯ ನೋಡಾ ಅವ್ವಾ. ಬಣ್ಣವಿಲ್ಲದ ಬಣ್ಣವನುಟ್ಟು ಸುಳಿದನು. ಈ ಅಜಗಣ್ಣನ ಯೋಗಕ್ಕೆ ಬೆರಗಾದೆನವ್ವಾ. ಈ ಅರಿವೆಂತುಟೆಲ್ಲವನೊಳಗಿಟ್ಟುಕೊಂಡನು, ಶಿವಗಣಸಂಚ ಶಿವಯೋಗಿ ಅಜಗಣ್ಣದೇವನು
--------------
ಮುಕ್ತಾಯಕ್ಕ
ಶಿವಲಿಂಗಾರ್ಚನಾಕ್ರಿಯಾಶಕ್ತಿಗೆ ಅಭ್ಯಾಸದ ಯೋಗದ ರತಿ ಸರಿಯಲ್ಲ ನೋಡ, ಯೋಗದ ಬಲದಿಂದ ಸೇವಿಸುವ ಶ್ಲೇಷಾಮೃತವು ಶಿವಪ್ರಸಾದಾಮೃತಕೆ ಸರಿಯಲ್ಲ ನೋಡ, ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು ಪ್ರಾಣಲಿಂಗೈಕ್ಯ ಸಂಬಂಧಸಂಯೋಗಕ್ಕೆ ಸರಿಯಲ್ಲ ನೋಡ. ಶಿವಾನುಭಾವಕ್ಕೆ ಯೋಗಕ್ಕೆ ಇನಖದ್ಯೋತದಂತರವು ನೋಡಯ್ಯ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಪರಿಶ್ರುತದ ಭಕ್ತಿಯ ಸವೆದು ಮಾಡಿದ ಚಿತ್ತ ತನು ಮುಖದ ಯೋಗಕ್ಕೆ ತಮವ ಕಳುಹಿ ಭ್ರಮೆಗೆಟ್ಟ ಸದ್ಭಕ್ತಿ ಅನುವನು ಅರಿದಾತ ಕರುಣಾಕರನು ಶಿಷ್ಯ ಕಪಿಲಸಿದ್ಧ ಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ತಾತ್ಪರಿಯೆವೆಂಬ ಮನೆಯಲ್ಲಿ ಕರಣಂಗಳ ಬೆಳಗಿ ಆನಂದವೆಂಬಾತಂಗೆ ಭಕ್ತಿಮುಕ್ತ್ಯಂಗನೆಯರು ನಿಶ್ಚಲದಿಂದ ನಿತ್ಯಂಗೆ ಬೋನವ ಮಾಡುತೈದಾರೆ. ಆ ಬೋನ ಧ್ಯಾನ ಸಮಾಧಿಯ ಮೀರಿತ್ತು. ಅದೆ ನಿತ್ಯ ಚೊಕ್ಕರಸ[ವುಂಬ]ಯೋಗಿಗಳಿಗೆ ಯೋಗಕ್ಕೆ ನೆಲೆಯಾಗುತ್ತದೆ. ಬೀಜವು ತಾನೆ, ಓಗರವು ತಾನೆ, ತೃಪ್ತಿಯು ತಾನೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡುವ ತತ್ವವು ತಾನೆ!
--------------
ಸಿದ್ಧರಾಮೇಶ್ವರ
ಮಾನಸದ ಯೋಗಕ್ಕೆ ಏನೊಂದು ಉಪಮೆಯೆ ತಾನು ತಾನೊಂದಾಗಿ ಮರುಹು ಮರಹನ್ನ್ಕತಿಗಳೆದು ಕುರುಹುಯಿಲ್ಲದಿಪ್ಪುದು ನೋಡಾ ಅಯ್ಯಾ, ನಾಮವೆಂಬ ಧೇಯದಲ್ಲಿ ಕಾಮ್ಯವೆಂಬ ಅಮೃತವನೆ ಕರೆದು ನಿರ್ನಾಮಂಗೆ ಅರ್ಪಿಸುವೆನು. ಸೋಮಪ್ರಭೆಯಲ್ಲಿ ಪಂತಿ ಪಸರವಾಗದ ಮುನ್ನ ಆ ನಿಮ್ಮನೈದುವೆ ಕಂಡಾ. ನಾಮ ನಿರ್ನಾಮವೆಂಬ ನಿಜವನತಿಗಳೆಯದ ಮುನ್ನ ನಾ ನಿಮ್ಮನೈದುವೆ ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ಆನಂದಲೋಕದಲಿ ತಾನೊಂದು ರೂಪಾಗಿ ಸಾನಂದವನು ಬೆಳೆಸಿ ಹಲವರೊಳು ಹಲವು ಬಣ್ಣದ ಹಕ್ಕಿ ಶೂನ್ಯವ ನುಂಗಿದ ಕುರುಹಿಲ್ಲದ ಯೋಗಕ್ಕೆ ನೆಲೆ ಮುನ್ನಿಲ್ಲ. ಆನಿಮಿಷನೆಂಬಾತನ ಕರಸ್ಥಲದಲ್ಲಿ ಸಕಲಯೋಗವಡಗಿತ್ತು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
-->