ಅಥವಾ

ಒಟ್ಟು 6 ಕಡೆಗಳಲ್ಲಿ , 5 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

`ಓಂ' ಎಂದು ವೇದವನೋದುವ ಮಾದಿಗಂಗೆ ಸಾಧ್ಯವಾಗದು ವಿಭೂತಿ. ಪುರಾಣವನೋದುವ ಪುಂಡರಿಗೆ ಸಾಧ್ಯವಗದು ವಿಭೂತಿ ಶಾಸ್ತ್ರವನೋದುವ ಸಂತೆಯ ಸೂಳೆಮಕ್ಕಳಿಗೆ ಸಾಧ್ಯವಾಗದು ವಿಭೂತಿ ಅಂಗಲಿಂಗಸಂಬಂಧವನರಿದ ಶಿವಜ್ಞಾನಿಗಳಿಗಲ್ಲದೆ ಸಾಧ್ಯವಾಗದು ವಿಭೂತಿ. ಅಂಗೈಯೊಳಗೆ ವಿಭೂತಿಯನಿರಿಸಿಕೊಂಡು, ಅಗ್ಘಣಿಯ ನೀಡಿ ಗುಣಮರ್ದನೆಯ ಮಾಡಿ ಲಿಂಗ ಉಚ್ಛಿಷ್ಟನಂಗೈದು ? ಲಿಂಗ ಸಮರ್ಪಣಂಗೈದು, ಷಡಕ್ಷರಿಯ ಸ್ಮರಣೆಯಂಗೈದು ಭಾಳದೊಳು ಪಟ್ಟವಂ ಕಟ್ಟಿ, ವಿಭೂತಿಯ ಧಾರಣಂಗೈದು ಹಸ್ತವ ಪ್ರಕ್ಷಾಲಿಸುವವ ಗುರುದ್ರೋಹಿ ಲಿಂಗದ್ರೋಹಿ ಜಂಗಮದ್ರೋಹಿ. ಶ್ರೀವಿಭೂತಿಯ ಲಲಾಟಕ್ಕೆ ಧರಿಸಿ ಹಸ್ತವ ತೊಳೆವ ಪಾತಕರ ಮುಖವ ನೋಡಲಾಗದು. ಶ್ರೀವಿಭೂತಿಯನು ಶಿವನೆಂದು ಧರಿಸುವುದು, ಪರಶಿವನು ತಾನೆಂದು ಧರಿಸುವುದು. ಸಾಕ್ಷಿ:ಕೃತ್ವೇವ ಜಲಮಿಶ್ರಂತು ಸಮುಧೃತ್ಯಷಡಕ್ಷರಿ ಧಾರಯೇತ್ ತ್ರಿಪುಂಡ್ರಂತು ಮಂತ್ರೇಣ ಮಂತ್ರಿತಂ'' ಶ್ರೀವಿಭೂತಿಯ ಧರಿಸಿ ಹಸ್ತವ ತೊಳದಾತಂಗೆ ದೇವಲೋಕ ಮತ್ರ್ಯಲೋಕಕ್ಕೆ ಸಲ್ಲದೆಂದುದಾಗಿ ನಿಮ್ಮಾಣೆ ನಿಮ್ಮ ಪ್ರಮಥರಾಣೆ, ನಮ್ಮ ಗುಹೇಶ್ವರಲಿಂಗವು ತಾನಾದ ವಿಭೂತಿ ಕಾಣಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ನಕಾರ ನರಜನ್ಮದ ಹೊಲೆಯ ಕಳೆದು, ಮಕಾರ ಮಾಂಸಪಿಂಡದ ಹೊಲೆಯ ಕಳೆದು ಮಂತ್ರಪಿಂಡವ ಮಾಡಿತಯ್ಯಾ. ಶಿಕಾರ ಶಿವದೇಹಿಯ ಮಾಡಿತಯ್ಯ, ವಕಾರ ಒಳಹೊರಗೆ ತೊಳಗಿ ಬೆಳಗಿ ಶುದ್ಧನಮಾಡಿತಯ್ಯ, ಯಕಾರ ಎನ್ನ ಭವವ ಹಿಂಗಿಸಿತಯ್ಯ. ಓಂಕಾರ ಪ್ರಾಣ ಜೀವಾತ್ಮ ದೇಹದ ಮಧ್ಯದೊಳು ಸರ್ವಪೂರ್ಣಮಯವಾಗಿದ್ದಿತಯ್ಯಾ. ಇಂತೀ ಷಡಕ್ಷರಿಯ ಮಂತ್ರವ ಜಪಿಸಿ, ಅಂತಕನ ಪಾಶವ ಸುಟ್ಟು ನಿಟ್ಟೊರಸಿದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವಿಭೂತಿ ರುದ್ರಾಕ್ಷಿಯ ಧರಿಸಿ ಷಡಕ್ಷರಿಯಂ ಜಪಿಸಿ ಗುರು ಲಿಂಗ ಜಂಗಮದ ಆದ್ಯಂತವನರಿಯದೆ ಏನೆಂದು ಪೂಜಿಸುವಿರಿ, ಆರಾಧಿಸುವಿರಿ? ಅದೆಂತೆಂದಡೆ: ನೆಲದ ಮೇಲಣ ಶಿಲೆಯ ಕಲ್ಲುಕುಟಿಕ ಕಡಿದು ಖಂಡಿಸಿ ಹರದನ ಕೈಯಲ್ಲಿ ಕೊಟ್ಟು ಮಾರಿಸಿಕೊಂಡುದು ಲಿಂಗವಾದ ಪರಿ ಹೇಂಗೆ? ಸಕಲ ವ್ಯಾಪಾರ ಅಳುವಿಂಗೆ ಒಳಗಾಗಿ ತೊಡಿಸಿ ಬರೆಸಿಕೊಂಡುದು ಮಂತ್ರವಾದ ಪರಿ ಹೇಂಗೆ? ಅಜ್ಞಾನಿ ಮೃಗ ಪಶುವಿನ ಸಗಣಿಯ ಸುಟ್ಟುದು ವಿಭೂತಿಯಾದ ಪರಿ ಹೇಂಗೆ? ಪಂಚಭೂತಿಕದಿಂದ ಜನಿಸಿದ ವೃಕ್ಷದ ಫಲ ರುದ್ರಾಕ್ಷಿಯಾದ ಪರಿ ಹೇಂಗೆ? ಸಕಲ ಜೀವವೆರಸಿ ಕರಗಿದ ಆಸಿಯ ಜಲ ತೀರ್ಥವಾದ ಪರಿ ಹೇಂಗೆ? ಸಕಲ ಪ್ರಾಣಿಗಳಾಹಾರ ಹದಿನೆಂಟು ಧಾನ್ಯ ಕ್ಷುಧಾಗ್ನಿಯಲ್ಲಿ ಜನಿಸಿ ಪಚನವಾದುದು ಪ್ರಸಾದವಾದ ಪರಿ ಹೇಂಗೆ? ಅದೆಂತೆಂಡೆ: ನಿಗಮ ಶಾಸ್ತ್ರಕ್ಕೆ ಅಗಣಿತವಾದ ನಾದಬಿಂದುವಿಗೆ ನಿಲುಕದ ನಿತ್ಯತೃಪ್ತ ಪರಂಜ್ಯೋತಿಲಿಂಗದ ವೈಭವಕ್ಕೆ ಅಂಗವಾದುದು ಈ ಗುರುವಲ್ಲಾ ಎಂದು ಅರಿದು ಆ ಲಿಂಗದ ಚೈತನ್ಯ ಈ ಲಿಂಗವಲ್ಲಾ ಎಂದು ಅರಿದು ಮಾಡೂದು ತನು ಮನ ಧನ ವಂಚನೆಯಳಿದು. ಗುರುಭಕ್ತಿ ಸನ್ನಿಹಿತವಾಗಿ ಆ ಲಿಂಗದ ವದನ ಈ ಜಂಗಮವಲಾ ಎಂದರಿದು ಮಾಡೂದು ಆ ತನು ಮನ ಧನ ವಂಚನೆಯಳಿದು. ಜಂಗಮಭಕ್ತಿ ಸನ್ನಿಹಿತವಾಗಿ ಆ ಲಿಂಗದ ಕಾಯಕಾಂತಿಯ ಬೆಳಗಿನ ಐಶ್ವರಿಯಲ್ಲ ಎಂದರಿದು ಧರಿಸೂದು ಶ್ರೀ ವಿಭೂತಿಯ. ಆ ಲಿಂಗದ ಶೃಂಗಾರದ ಹರಭರಣವಲಾ ಎಂದರಿದು ಅಳವಡಿಸೂದು ರುದ್ರಾಕ್ಷಿಯನು. ಆ ಲಿಂಗದ ಉತ್ತುಂಗ ಕಿರಣಚರಣಾಂಬುಜವಲಾ ಎಂದು ಧರಿಸೂದು, ಕೊಂಬುದು ಪಾದೋದಕವನು. ಆ ಲಿಂಗದ ನಿತ್ಯಪದ ಸಂಯೋಗ ಶೇಷವ ತಾ ಎಂದರಿದು ಕೊಂಬುದು ಪ್ರಸಾದವನು. ಇಂತಿವೆಲ್ಲವನರಿದುದಕ್ಕೆ ಸಂತೋಷವಾಗಿ ಚರಿಸುವಾತನೆ ಸದ್ಭಕ್ತ. ಆತನ ಕಾಯ ಕರಣ ಪ್ರಾಣ ಭಾವಾದಿಗಳು ಸೋಂಕಿದೆಲ್ಲವೂ ಲಿಂಗದ ಸೋಂಕು, ಲಿಂಗದ ಕ್ರೀ, ಲಿಂಗದ ದಾಸೋಹ. ಇಂತೀ ತ್ರಿವಿಧವ ಸವೆದು ಅಳಿದುಳಿದ ಸದ್ಭಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನು ಕಾಣಾ, ಬಸವಣ್ಣಪ್ರಿಯ ನಿಃಕಳಂಕ ಸೋಮೇಶ್ವರನೆ.
--------------
ನಿಃಕಳಂಕ ಚೆನ್ನಸೋಮೇಶ್ವರ
ಎನಗೆ ನಿಮ್ಮ ನೆನಹಾದಾಗ ಉದಯ, ಎನಗೆ ನಿಮ್ಮ ಮರಹಾದಾಗ ಅಸ್ತಮಾನ. ಎನಗೆ ನಿಮ್ಮ ನೆನೆಹವೆ ಜೀವನ, ಎನಗೆ ನಿಮ್ಮ ನೆನಹವೆ ಪ್ರಾಣ, ಕಾಣಾ ತಂದೆ. ಸ್ವಾಮಿ, ಎನ್ನ ಹೃದಯದಲ್ಲಿ ನಿಮ್ಮ ಚರಣದುಂಡಿಗೆಯನೊತ್ತಯ್ಯಾ, ವದನದಲಿ ಷಡಕ್ಷರಿಯ ಬರೆಯಯ್ಯಾ ಕೂಡಲಸಂಗಮದೇವಾ. 498
--------------
ಬಸವಣ್ಣ
ಶ್ರೀ ಪಂಚಾಕ್ಷರಿಯುಳ್ಳ ಅಗ್ರಜ ವಿಪ್ರನಿಂದಧಿಕ ನೋಡಾ ! ಶ್ರೀ ಪಂಚಾಕ್ಷರಿಯುಳ್ಳ ಅಂತ್ಯಜ ವಿಪ್ರನಿಂದಧಿಕ ನೋಡಾ ! ಶ್ರೀ ಪಂಚಾಕ್ಷರಿಯನಾವಾತನಾದರೂ ನೆನೆದರೆ ರುದ್ರನಪ್ಪುದು ತಪ್ಪದು ನೋಡಾ ಅಯ್ಯಾ ! ಅದೆಂತೆಂದರೆ : ಸಾಕ್ಷಿ : ``ಅಗ್ರಜೋ ಅಂತ್ಯಜೋ ವಾಪಿ ಮೂರ್ಖೋವಾ ಪಂಡಿತೋý ಪಿವಾ | ಜಪೇತ್ ಪಂಚಾಕ್ಷರೀಂ ನಿತ್ಯಂ ಸ ರುದ್ರೋ ನಾತ್ರ ಸಂಶಯಃ ||'' ಎಂದಿತ್ತು ದೃಷ್ಟ. `ಓಂ ನಮಃ ಶಿವಾಯಃ' ಯೆಂಬ ಆರಕ್ಷರವ ನೆನೆಯಲರಿಯದೆ ಜಪ ತಪ ನೇಮ ನಿತ್ಯ ಅನುಷಾ*ನ ಪೂಜೆಗಳೆಲ್ಲ ನಿಷ್ಫಲವೆಂದಿತ್ತು ರಹಸ್ಯದಲ್ಲಿ. ಸಾಕ್ಷಿ :``ಷಡಕ್ಷರಮಿದಂ ಖ್ಯಾತಂ ಷಡಾನನಂ ಷಡನ್ವಿತಂ | ಷಡ್ವಿಧಂಯೋನ ಜಾನಾತಿ ಪೂಜಾಯಾಂ ನಿಃಫಲಂ [ಭವೇತ್]'' ಎಂಬ ಷಡಕ್ಷರಿಯ ಸಂಭ್ರಮದಲ್ಲಿ ನೆನೆದು, ಭವಾಂಬೋಧಿಯ ದಾಂಟಿ, ಸ್ವಯಂಭುವಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ದುಃಸ್ವಪ್ನವ ಕಾಣದಿರಿ, ದುರ್ವಿಕಾರದಲ್ಲಿ ಕೂಡದಿರಿ, ಮನೋವಿಕಾರದಲ್ಲಿ ಹರಿದಾಡದಿರಿ, ಪಂಚಾಕ್ಷರಿಯ ಜಪಿಸಿ ಷಡಕ್ಷರಿಯ ಸಂಬಂಧಿಸಿಕೊಳ್ಳಿ, ಮೂಲಮಂತ್ರವನಾತ್ಮಂಗೆ ವೇಧಿಸಿಕೊಳ್ಳಿ. ಮರೆಯದಿರಿ ಗುರುವಾಜ್ಞೆಯ, ತೊರೆಯದಿರಿ ಶಿವಪೂಜೆಯ, ಅರಿದು ಮರೆಯದಿರಿ ಚರಸೇವೆಯ. ಇಂತೀ ತ್ರಿಗುಣವ ನೆರೆ ನಂಬಿ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
-->