ಅಥವಾ
(0) (1) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (5) (0) (0) (0) (0) (1) (0) (0) (0) (0) (0) (0) (0) (0) (0) (0) (0) (0) (0) (2) (0) (0) (0) (0) (1) (0) (1) (0) (0) (1) (1) (0) (3) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಯದ ಸುಳುಹುಳ್ಳನ್ನಕ್ಕ ಕರ್ಮಪೂಜೆ ಬೇಕೆಂಬರು. ಜೀವನ ಸಂಚಾರವುಳ್ಳನಕ್ಕ ಜ್ಞಾನವನರಿಯಬೇಕೆಂಬರು. ಜ್ಞಾನ ಧ್ಯಾನಿಸಿ ಕಾಬಲ್ಲಿ, ಕಾಯದ ಕರ್ಮದಿಂದ ಮುಕ್ತಿಯೋ ? ಜೀವನ ಜ್ಞಾನದಿಂದ ಮುಕ್ತಿಯೋ? ಜ್ಞಾನ ಧ್ಯಾನದಿಂದ ಮುಕ್ತಿಯೋ ? ಧ್ಯಾನಿಸಿ ಕಾಲ ಕುರುಹ ಎನಗೊಂದುಬಾರಿ ತೋರಾ. ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ]ರಾಮ ರಾಮನಾ.
--------------
ವೀರ ಗೊಲ್ಲಾಳ/ಕಾಟಕೋಟ
ಕೊರಡು ಕೊನರುವಲ್ಲಿ, ಬರಡು ಕರೆವಲ್ಲಿ, ಕಲ್ಲಿನ ಶಿಲೆಯೊಡೆದು ರೂಪುದೋರುವಲ್ಲಿ, ಬಳ್ಳವಲ್ಲಾಡದೆ ಲಿಂಗವಾಹಲ್ಲಿ, ಇಂತವರಲ್ಲಿಯ ಗುಣವೊ ? ಇಂತಿವೆಲ್ಲವನರಿವ ಕಲ್ಲೆದೆಯವನ ಗುಣವೊ ? ಇಂತಿವ ಬಲ್ಲಡೆ ವಿಶ್ವಾಸದಲ್ಲಿಯೆ ವೀರಬೀರೇಶ್ವರಲಿಂಗವು ತಾನಾಗಿಪ್ಪ.
--------------
ವೀರ ಗೊಲ್ಲಾಳ/ಕಾಟಕೋಟ
ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು. ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು. ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು. ಇಂತಿವನೆಲ್ಲವನರಿವ ಚಿತ್ತ ದೇವರಲ್ಲ. ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು. ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ : ಕಂಡವರೊಳಗೆ ಕೈಕೊಂಡಾಡದೆ, ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ, ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ, ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ, ವೀರಬೀರೇಶ್ವರಲಿಂಗದೊಳಗಾದ ಶರಣ.
--------------
ವೀರ ಗೊಲ್ಲಾಳ/ಕಾಟಕೋಟ
ಕಂಥೆಯ ಕಟ್ಟಿ, ತಿತ್ತಿಯ ಹೊತ್ತು, ಮರಿಯ ನಡಸುತ್ತ , ದೊಡ್ಡೆಯ ಹೊಡೆವುತ್ತ , ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವ ತಿಟ್ಟುತ್ತ , ಹಿಂಡನಗಲಿ ಹೋಹ ದಿಂಡೆಯ ಮಣೆಘಟ್ಟನ ಅಭಿಸಂದಿಯ ಕೋಲಿನಲ್ಲಿಡುತ್ತ. ಈ ಹಿಂಡಿನೊಳಗೆ ತಿರುಗಾಡುತಿದ್ದೇನೆ. ಈ ವಿಕಾರದ ಹಿಂಡ ಬಿಡಿಸಿ, ನಿಜನಿಳಯ ನಿಮ್ಮಂಗವ ತೋರಿ, ಸುಸಂಗದಲ್ಲಿರಿಸು, ಎನ್ನೊಡೆಯ ವೀರಬೀರೇಶ್ವರಲಿಂಗಾ.
--------------
ವೀರ ಗೊಲ್ಲಾಳ/ಕಾಟಕೋಟ
ಕ್ರೀಯ ಹಿಡಿದಲ್ಲಿ ಸಂದೇಹಕ್ಕೊಳಗಾಗಿ, ನಿಃಕ್ರೀಯೆ ಎಂದಲ್ಲಿ ಆತ್ಮಂಗೆ ಗೊತ್ತ ಕಾಣದೆ, ಫಲವಿಲ್ಲದ ವೃಕ್ಷದ ಹೂವ ಕಂಡು, ವಿಹಂಗಕುಲ ಚರಿಸದೆ ಮಚ್ಚಿದಂತೆ, ಕಡೆಯಲ್ಲಿ ಹೊಲಬುಗೆಡದೆ, ಅರಿ ನಿಜವಸ್ತು ಒಂದೆಂದು, ಕುರುಹಿನಲ್ಲಿ ಕುಲಕೆಡದೆ ಕೂಡು, ವೀರಬೀರೇಶ್ವರಲಿಂಗವ.
--------------
ವೀರ ಗೊಲ್ಲಾಳ/ಕಾಟಕೋಟ