ಅಥವಾ
(2) (3) (0) (0) (0) (0) (0) (0) (8) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (2) (0) (0) (1) (0) (0) (0) (0) (0) (0) (1) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಎನ್ನ ಪಂಚಾಕ್ಷರವ ಇಷ್ಟಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಸಪ್ತದಶಾಕ್ಷರವ ಪ್ರಾಣಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ತ್ರಿವಿಧಾಕ್ಷರವ ಭಾವಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಷಡಿಂದ್ರಿಯಂಗಳ ಷಡ್ವಿಧಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ನವಚಕ್ರಂಗಳ ನವವಿಧಲಿಂಗಕ್ಷೇತ್ರ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಅನ್ನಮಯವ ಪ್ರಸಾದ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಪ್ರಾಣಮಯವ ಲಿಂಗ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಮನೋಮಯವ ಶಿವಧ್ಯಾನ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ವಿಜ್ಞಾನಮಯವ ಜ್ಞಾನ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಆನಂದಮಯವ ಶಿವಾನಂದಮಯವಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಎನ್ನ ಷಡ್‍ಧಾತುಗಳ ಷಡಕ್ಷರ ಸ್ವರೂಪಾಗಿ ಬಂದು ಒಳಕೊಂಡನಯ್ಯ ಬಸವಣ್ಣ. ಇಂತೀ ಬಸವಣ್ಣನೇ ಎನ್ನ ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಪರಿಪೂರ್ಣನಾಗಿ ಬಸವಣ್ಣನೇ ಇಷ್ಟವಾಗಿ ತೊಳಗಿ ಬೆಳಗುತ್ತಿಪ್ಪ ಭೇದವನು ಬೋಳಬಸವೇಶ್ವರನೆನಗೆ ಅರುಹಿಕೊಟ್ಟು ಸಿದ್ಧೇಶ್ವರನೆಂಬ ಚಿದಬ್ಧಿಯೊಳಗೆ ಮುಳುಗಿಸಿದ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಉಭಯಭಾವವನರಿಯದೆ ಶಿವಶಿವ ಎನುತಿರ್ದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಎನ್ನ ಅಷ್ಟಾಕ್ಷರಸ್ವರೂಪವನೊಳಕೊಂಡೆನ್ನ ತನುವಿನಲ್ಲಿ ಸಂಗವಾದನಯ್ಯ ಬಸವಣ್ಣ. ಎನ್ನ ಷಡಾಕ್ಷರಸ್ವರೂಪವನೊಳಕೊಂಡೆನ್ನ ನಯನದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಎನ್ನ ಪಂಚಾಕ್ಷರಸ್ವರೂಪವನೊಳಕೊಂಡೆನ್ನ ಪ್ರಾಣದಲ್ಲಿ ಸಂಗವಾದನಯ್ಯ ಪ್ರಭುದೇವರು. ಇಂತೀ ತನು ಮನ ಪ್ರಾಣವೆ ಸಚ್ಚಿದಾನಂದ ಬ್ರಹ್ಮವು. ಆ ಸಚ್ಚಿದಾನಂದ ಬ್ರಹ್ಮವೆ ಎನ್ನ ಭಾವ ಮನ ಕರಣಂಗಳೊಳಗೆ ತಳತಳನೆ ಹೊಳಹುತ್ತಿಪ್ಪ ಭೇದವನು ಸಿದ್ಧೇಶ್ವರನೆನಗೆ ಅರುಹಿದ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಸಮುದ್ರದೊಳಗೆ ಮುಳುಗಿದ ವಾರಿಕಲ್ಲಿನಂತಾದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಎನ್ನ ತನುವೆ ಬಸವಣ್ಣ, ಎನ್ನಾತ್ಮವೆ ಮಡಿವಾಳಯ್ಯ, ಎನ್ನ ಪ್ರಾಣವೆ ಚೆನ್ನಬಸವಣ್ಣ, ಎನ್ನ ಇಂದ್ರಿಯಂಗಳೆ ಪ್ರಭುದೇವರು, ಎನ್ನ ವಿಷಯಂಗಳೆ ಮೋಳಿಗೆ ಮಾರಿತಂದೆ ಎನ್ನ ಪ್ರಕೃತಿಯೆ ಅಜಗಣ್ಣದೇವರು. ಎನ್ನ ಅಂಗಕರಣಂಗಳೆ ಅಸಂಖ್ಯಾತ ಮಹಾಗಣಂಗಳು. ಎನ್ನ ಮನವೆ ಮಹಾದೇವಿಯಕ್ಕ, ಎನ್ನ ಬುದ್ಧಿಯೆ ಮೋಳಿಗಯ್ಯನ ರಾಣಿ, ಎನ್ನ ಚಿತ್ತವೆ ನೀಲಲೋಚನೆಯಮ್ಮ. ಎನ್ನ ಅಹಂಕಾರವೆ ತಂಗಟೂರ ಮಾರಯ್ಯನ ರಾಣಿ. ಎನ್ನ ಅರುಹೆ ಅಕ್ಕನಾಗಾಯಕ್ಕ. ಎನ್ನ ಅರುಹಿನ ವಿಶ್ರಾಂತಿಯೆ ಮುಕ್ತಾಯಕ್ಕ. ಎನ್ನ ನೇತ್ರದ ದೃಕ್ಕೆ ಸೊಡ್ಡಳ ಬಾಚರಸರು. ಎನ್ನ ಪುಣ್ಯದ ಪುಂಜವೆ ಹಡಪದಪ್ಪಣ್ಣ. ಎನ್ನ ಕ್ಷುತ್ತು ಪಿಪಾಸೆಯೆ ಘಟ್ಟಿವಾಳಯ್ಯ. ಎನ್ನ ಶೋಕ ಮೋಹವೆ ಚಂದಿಮರಸರು. ಎನ್ನ ಜನನ ಮರಣವೆ ನಿಜಗುಣದೇವರು. ಎನ್ನ ಯೋಗದ ನಿಲುಕಡೆಯೆ ಸಿದ್ಧರಾಮೇಶ್ವರರು. ಎನ್ನ ಅಂಗಕರಣವೆ ಏಳ್ನೂರೆಪ್ಪತ್ತಮರಗಣಂಗಳು. ಇಂತಿವನರಿದೆನಾಗಿ ಬೋಳಬಸವೇಶ್ವರನ ಕೃಪೆಯಿಂದ ಸಿದ್ಧೇಶ್ವರನೆಂಬ ಪರುಷ ಸಾಧ್ಯವಾಯಿತ್ತಯ್ಯ. ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಅಂಗ ಮಿಥ್ಯಭಾವವನರಿಯದೆ ನಿಮ್ಮ ಕೃಪಾನಂದದೊಳಗೆ ಮುಳುಗಿರ್ದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಎನ್ನ ದ್ವಿವಿಧಾಕ್ಷರದಲ್ಲಿ ಲಿಂಗ ಸ್ವರೂಪಾಗಿ ಬಂದು ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ತ್ರಿವಿಧಾಕ್ಷರದಲ್ಲಿ ಜಂಗಮಲಿಂಗ ಸ್ವರೂಪಾಗಿ ಬಂದು ಮೂರ್ತಿಗೊಂಡನಯ್ಯ ಬಸವಣ್ಣ. ಇಂತೀ ದ್ವಿವಿಧಾಕ್ಷರ ತ್ರಿವಿಧಾಕ್ಷರವೇ ಅಂಗ ಪ್ರಾಣ. ಆ ಅಂಗ ಪ್ರಾಣವೇ ಉಭಯಸ್ಥಲ. ಆ ಉಭಯಸ್ಥಲದ ಭೇದವನು ದ್ವೆ ೈತಾದ್ವೆ ೈತಿಗಳೆತ್ತ ಬಲ್ಲರಯ್ಯ? ಇದನರಿದು ಸಿದ್ಧೇಶ್ವರನು ಅಂಗ ಪ್ರಾಣದಲ್ಲಿ ಲಿಂಗ ಜಂಗಮವ ಏಕಾರ್ಥವ ಮಾಡಿ ತೋರಿಸಿಕೊಟ್ಟ ಕಾರಣ, ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಅರ್ಕನ ಪ್ರಭೆಯೊಳಕೊಂಡ ಅರಿಸಿನದಂತಾದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಎನ್ನ ಇಪ್ಪತ್ತೆ ೈದಕ್ಷರ ಸ್ವರೂಪವನೊಳಕೊಂಡು ಎನ್ನ ಜ್ಞಾತೃವಿನಲ್ಲಿ ಸಂಗವಾದನಯ್ಯ ಬಸವಣ್ಣ. ಎನ್ನ ದಶಾಕ್ಷರ ಸ್ವರೂಪವನೊಳಕೊಂಡು ಎನ್ನ ಜ್ಞಾನದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಎನ್ನ ಏಕಾಕ್ಷರ ಸ್ವರೂಪವನೊಳಕೊಂಡು ಎನ್ನ ಜ್ಞೇಯದಲ್ಲಿ ಸಂಗವಾದನಯ್ಯ ಪ್ರಭುದೇವರು. ಇಂತೀ ತ್ರಿವಿಧವನು ಸಿದ್ಧೇಶ್ವರನು ಇಷ್ಟಲಿಂಗದಲ್ಲಿ ಸಂಬಂಧಿಸಿಕೊಟ್ಟ ಕಾರಣ ಎನ್ನ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧವರತು, ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಮೇರೆದಪ್ಪಿದ ಸಮುದ್ರದಲ್ಲಿ ಅದ್ದಿದಂತಾದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಎನ್ನ ಮೂವತ್ತಕ್ಷರಸ್ವರೂಪವನೊಳಕೊಂಡು ಆಚಾರಲಿಂಗವಾಗಿ ಎನ್ನ ಭಕ್ತಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಇಪ್ಪತ್ತೆ ೈದುಕ್ಷರಸ್ವರೂಪವನೊಳಕೊಂಡು ಗುರುಲಿಂಗ ಸ್ವರೂಪಾಗಿ ಎನ್ನ ಮಾಹೇಶ್ವರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಇಪ್ಪತ್ತಕ್ಷರಸ್ವರೂಪವನೊಳಕೊಂಡು ಶಿವಲಿಂಗ ಸ್ವರೂಪಾಗಿ ಎನ್ನ ಪ್ರಸಾದಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಹದಿನೈದಕ್ಷರಸ್ವರೂಪವನೊಳಕೊಂಡು ಜಂಗಮಲಿಂಗ ಸ್ವರೂಪಾಗಿ ಎನ್ನ ಪ್ರಾಣಲಿಂಗಿಸ್ಥಳದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ದಶಾಕ್ಷರಸ್ವರೂಪವನೊಳಕೊಂಡು ಪ್ರಸಾದಲಿಂಗ ಸ್ವರೂಪಾಗಿ ಎನ್ನ ಶರಣಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಏಕಾಕ್ಷರಸ್ವರೂಪವನೊಳಕೊಂಡು ಮಹಾಲಿಂಗ ಸ್ವರೂಪಾಗಿ ಎನ್ನ ಐಕ್ಯಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಇಂತೀ ನಾನಾವಿಧ ಪ್ರಕಾರವನೊಳಕೊಂಡ ಬಸವಣ್ಣನೆ ಇಷ್ಟಬ್ರಹ್ಮವೆನಗೆ. ಈ ಇಷ್ಟಬ್ರಹ್ಮವೆ ಎನ್ನ ಭಾವ ಮನ ದೃಕ್ಕಿನಲ್ಲಿ ತೊಳಗಿ ಬೆಳಗುತ್ತಿರ್ದೆ ಭೇದವನು ಸಿದ್ಧೇಶ್ವರನು ಅರುಹಿ ಕೊಟ್ಟ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಸಿದ್ಧೇಶ್ವರನ ಕೃಪೆ ಎನಗೆ ಸಾಧ್ಯವಾಯಿತ್ತಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಎನ್ನ ಕಂಗಳ ದೃಕ್ಕಿನಲ್ಲಿ ಅಂಗ ಲಿಂಗ ಸಂಗ ನಾಲ್ವತ್ತೆರಡು ಭೇದವನೊಳಕೊಂಡು ಎನ್ನ ಕಾಯದ ಕರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣನು. ಎನ್ನ ಮನೋದೃಕ್ಕಿನಲ್ಲಿ ಅಂಗ ಲಿಂಗ ಸಂಗ ಮೂವತ್ತಮೂರು ಭೇದವನೊಳಕೊಂಡು ಎನ್ನ ಮನದ ಕರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣನು. ಎನ್ನ ಭಾವದ ದೃಕ್ಕಿನಲ್ಲಿ ಅಂಗ ಲಿಂಗ ಸಂಗ ಪಡುವಿಂಶತಿ ಸ್ವರೂಪವನೊಳಕೊಂಡು ಎನ್ನ ಭಾವದ ಕರಸ್ಥಲದಲ್ಲಿ ಮೂರ್ತಿಗೊಂಡನಯ್ಯ. ಪ್ರಭುದೇವರು. ಇಂತೀ ಮೂವರು ಒಂದೊಂದನಳವಡಿಸಿಕೊಂಡ ಕಾರಣ ಎನಗೇನೂಯಿಲ್ಲದೆ ಪರಂಜ್ಯೋತಿ ಮಹಾಲಿಂಗ ಗುರು ಸಿದ್ಧಲಿಂಗಪ್ರಭುವಿನಲ್ಲಿ ಸಿದ್ಧೇಶ್ವರನ ನಿಜಪದವ ಬೆರಸಿ ಮನಮಗ್ನವಾಗಿರ್ದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಎನ್ನ ಉನ್ಮನಿಯ ತತ್ವದ ಮೇಲೆ ತಳತಳನೆ ಹೊಳೆವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿತ್ಪರಮಲಿಂಗವನು ಮೆಲ್ಲ ಮೆಲ್ಲನೆ ಎನ್ನ ಭಾವಸ್ಥಲದಲ್ಲಿತಂದು ಇಂಬಿಟ್ಟನಯ್ಯ ಶ್ರೀಗುರು. ಎನ್ನ ಭಾವಸ್ಥಲದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿತ್ಕಲಾಲಿಂಗವನು ಎನ್ನ ಆತ್ಮಸ್ಥಲದಲ್ಲಿ ಮೆಲ್ಲನೆ ತಂದು ನ್ಯಸ್ತವ ಮಾಡಿದನಯ್ಯ ಶ್ರೀಗುರು. ಎನ್ನ ಆತ್ಮಸ್ಥಲದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿದಾನಂದಲಿಂಗವನು ಮೆಲ್ಲಮೆಲ್ಲನೆ ಎನ್ನ ಆಕಾಶತತ್ವದಲ್ಲಿ ಸ್ಥಾಪ್ಯವ ಮಾಡಿದನಯ್ಯ ಶ್ರೀಗುರು. ಎನ್ನ ಆಕಾಶತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿನ್ಮಯಲಿಂಗವನು ಮೆಲ್ಲಮೆಲ್ಲನೆ ಎನ್ನ ವಾಯುತತ್ವದಲ್ಲಿ ನ್ಯಸ್ತವ ಮಾಡಿದನಯ್ಯ ಶ್ರೀಗುರು. ಎನ್ನ ವಾಯುತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿನ್ಮೂರ್ತಿಲಿಂಗವನು ಮೆಲ್ಲಮೆಲ್ಲನೆ ಎನ್ನ ಅಗ್ನಿತತ್ವದಲ್ಲಿ ಅನುಗೊಳಿಸಿದನಯ್ಯ ಶ್ರೀಗುರು. ಎನ್ನ ಅಗ್ನಿತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿಲ್ಲಿಂಗವನು ಮೆಲ್ಲಮೆಲ್ಲನೆ ಎನ್ನ ಅಪ್ಪುತತ್ವದಲ್ಲಿ ನೆಲೆಗೊಳಿಸಿದನಯ್ಯ ಶ್ರೀಗುರು. ಎನ್ನ ಅಪ್ಪುತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿದ್ರೂಪಲಿಂಗವನು ಮೆಲ್ಲಮೆಲ್ಲನೆ ಎನ್ನ ಪೃಥ್ವಿತತ್ವದಲ್ಲಿ ಹುದುಗೊಳಿಸಿದನಯ್ಯ ಶ್ರೀಗುರು. ಎನ್ನ ಪೃಥ್ವಿತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿದದ್ವಯಲಿಂಗವನು ಎನ್ನ ಭಾವ ಮನ ದೃಕ್ಕಿಗೆ ಕರತಳಾಮಳಕವಾಗಿ ಎನ್ನ ಕರಸ್ಥಲದಲ್ಲಿ ಮೂರ್ತಗೊಳಿಸಿದನಯ್ಯ ಶ್ರೀಗುರು. ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡ ಇಷ್ಟಬ್ರಹ್ಮವೆ ಬಸವಣ್ಣನೆನಗೆ. ಆ ಬಸವಣ್ಣನೆ ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಸ್ವಾಧಿಷಾ*ನಚಕ್ರದಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಅನಾಹತಚಕ್ರದಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ವಿಶುದ್ಧಿಚಕ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಆಜ್ಞಾಚಕ್ರದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಬ್ರಹ್ಮರಂಧ್ರದಲ್ಲಿ ನಿಃಕಲಿಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಶಿಖಾಚಕ್ರದಲ್ಲಿ ಶೂನ್ಯಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಪಶ್ಚಿಮಚಕ್ರದಲ್ಲಿ ನಿರಂಜನಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಸ್ಥೂಲಾಂಗದಲ್ಲಿ ಇಷ್ಟಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಸೂಕ್ಷಾ ್ಮಂಗದಲ್ಲಿ ಪ್ರಾಣಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಕಾರಣಾಂಗದಲ್ಲಿ ಭಾವಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ನಾಸಿಕದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ದೃಕ್ಕಿನಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಪೃಥ್ವಿಸಂಬಂಧವಾದ ಅಷ್ಟಾದಶ ಪದಾರ್ಥಂಗಳ ಕೈಕೊಂಡು ಆಚಾರಲಿಂಗವಾಗಿ ಎನ್ನ ಭಕ್ತಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಅಪ್ಪುಸಂಬಂಧವಾದ ಅಷ್ಟಾದಶ ಪದಾರ್ಥಂಗಳ ಕೈಕೊಂಡು ಗುರುಲಿಂಗವಾಗಿ ಎನ್ನ ಮಾಹೇಶ್ವರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಅಗ್ನಿಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು ಶಿವಲಿಂಗವಾಗಿ ಎನ್ನ ಪ್ರಸಾದಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ವಾಯುಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು ಜಂಗಮಲಿಂಗವಾಗಿ ಎನ್ನ ಪ್ರಾಣಲಿಂಗಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಆಕಾಶಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು ಪ್ರಸಾದಲಿಂಗವಾಗಿ ಎನ್ನ ಶರಣಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಆತ್ಮ ಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು ಮಹಾಲಿಂಗವಾಗಿ ಎನ್ನ ಐಕ್ಯದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಇಂತೀ ನಾನಾವಿಧ ಪ್ರಕಾರವನೊಳಕೊಂಡು ಬಸವಣ್ಣನೆ ಇಷ್ಟಬ್ರಹ್ಮವನೆಗೆ. ಆ ಇಷ್ಟಬ್ರಹ್ಮವೆ ಎನ್ನ ಅಂಗ ಮನ ಪ್ರಾಣ ಇಂದ್ರಿಯ ಸಕಲ ಕರಣಂಗಳ ಕೊನೆಯ ಮೊನೆಯ ಮೇಲೆ ತಳತಳನೆ ಬೆಳಗುತ್ತಿಪ್ಪ ಭೇದವನು ಸಿದ್ಧೇಶ್ವರನೆನಗೆ ಅರುಹಿದ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಉರಿಯುಂಡ ಕರ್ಪೂರದಂತಾದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ