ಅಥವಾ
(214) (139) (48) (7) (13) (3) (0) (0) (105) (12) (12) (37) (5) (0) ಅಂ (44) ಅಃ (44) (163) (1) (60) (9) (0) (12) (0) (64) (0) (0) (0) (0) (0) (0) (0) (104) (0) (49) (10) (128) (74) (5) (68) (61) (158) (17) (10) (0) (47) (55) (61) (4) (129) (75) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕೈಯಲ್ಲಿ ಹಿಡಿದು ಕಾಬುದು ಕರ್ಮಪೂಜೆಯಲ್ಲವೆ? ಮನದಲ್ಲಿ ನೆನೆದು ಮಾಡುವುದೆಲ್ಲವು ಕಾಯದ ಕರ್ಮವಲ್ಲವೆ? ಭಾವಶುದ್ಧವನರಿವ ಪರಿ ಇನ್ನಾವುದು? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕ್ರಿಯೆಯದು ಚೆನ್ನಬಸವಣ್ಣನ ಎಡಪಾದ, ಜಾÕನವದು ಚೆನ್ನಬಸವಣ್ಣನ ಬಲಪಾದ, ನಾನವರ ಚಮ್ಮಾವುಗೆ, ನೀನವರ ಮನೆದಾಸ, ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಾಮವಿಕಾರಕ್ಕೆ ಕಳವಳಿಸಿ ಮನವು ಹೇಮದಿಚ್ಛೆಗೆ ಹೆಚ್ಚಿ ಹೆಚ್ಚಿ ಕಾಮಾರಿ ನಿಮ್ಮುವ ನೆನೆಯದೀಮನವು ಓರಂತೆ ನರಕಕ್ಕಿಳಿದೆನೆಂಬುದು. ಕಾರುಣ್ಯಾಕರ ಎನ್ನುವನಾರೈದು ಓರಂತೆ ಮಾಡು, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಾಯ ಸೊನೆಯರತಲ್ಲದೆ ಹಣ್ಣಿನ ರಸ ಚಿಹ್ನದೋರದು. ಕಾಯ ಕರ್ಮವ ಮಾಡಿ, ಜೀವ ಜ್ಞಾನವನರಿದು, ವಿವಿಧಭಾವ ಶುದ್ಧಿಯಾದಲ್ಲದೆ ಮೇಲೆ ಕಾಣಲಿಲ್ಲ, ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗª
--------------
ಸಿದ್ಧರಾಮೇಶ್ವರ
ಕುಲಮದ ಪೊತ್ತಲ್ಲಿ ಚಂಡಾಲಗಿತ್ತಿಯಾಗಿ ಕೆಡಿಸಿತ್ತು ಮಾಯೆ, ಮಯೂರನೃಪಗೆ. ಛಲಮದ ಪೊತ್ತಲ್ಲಿ ಮಾಂಸ ಭೋಗಿಸಿತ್ತು ಮಾಯೆ, ವೀರ ವಿಕ್ರಮಗೆ. ಧನಮದ ಪೊತ್ತಲ್ಲಿ ದರಿದ್ರವಾಗಿ ಕಾಡಿತ್ತು ಮಾಯೆ, ಹರಿಶ್ಚಂದ್ರಂಗೆ, ರೂಪಮದ ಪೊತ್ತಲ್ಲಿ ಕುರೂಪನ ಮಾಡಿತ್ತು ಮಾಯೆ, ನಳಂಗೆ. ಯೌವನಮದ ಪೊತ್ತಲ್ಲಿ ಹಿಡಿಂಬಿಯಾಗಿ ಕಾಡಿತ್ತು ಮಾಯೆ, ಬ್ಥೀಮಂಗೆ. ವಿದ್ಯಾಮದ ಪೊತ್ತಲ್ಲಿ ಅಜ್ಞಾನವಾಗಿ ಕಾಡಿತ್ತು ಮಾಯೆ, ಅಂದು ಪರ್ವತದಲ್ಲಿ ಕವಿ ವಾದಿಶೇಖರಂಗೆ. ರಾಜಮದ ಪೊತ್ತಲ್ಲಿ ರಾಕ್ಷಸನ ಮಾಡಿತ್ತು ಮಾಯೆ, ಮುಮ್ಮಡಿ ಸಿಂಗನೃಪಂಗೆ. ತಪೋಮದ ಪೊತ್ತಲ್ಲಿ ಹಲವು ಆಗಿ ಕಾಡಿತ್ತು ಮಾಯೆ, ವಿಶ್ವಾಮಿತ್ರಂಗೆ. ಇಂತೀ ಅಷ್ಟಮದವಳಿದು ಅಷ್ಟಾವರಣ ಧರಿಸಿಪ್ಪ ಮಹಾಗಣಂಗಳು ಲಯವಿಲ್ಲದ ರಾಜಯೋಗವ ಪಡೆದಿಹರಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕಾಯವಿಡಿಹನ್ನಕ್ಕರ ಕಾಮವೆ ಮೂಲ; ಜೀವವಿಡಿಹನ್ನಕ್ಕರ ಕ್ರೋಧವೆ ಮೂಲ; ವ್ಯಾಪ್ತಿಯುಳ್ಳನ್ನಕ್ಕರ ಸಕಲ ವಿಷಯಕ್ಕೆ ಆಸೆಯೆ ಮೂಲ. ಎನ್ನ ಆಸೆ ಘಾಸಿಮಾಡುತ್ತಿದೆ, ಶಿವಯೋಗದ ಲೇಸಿನ ಠಾವ ತೋರು, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕರ್ಮಿಯ ಕರ್ಮ ನಿಷ್ಕರ್ಮವಲ್ಲೆಂದು ನಂಬಬಾರದಯ್ಯಾ. ಮುಮುಕ್ಷುವಿನ ಮೋಕ್ಷ ಮೂರರಲ್ಲೆಂದು ನಂಬಬಾರದಯ್ಯಾ. ಅಭ್ಯಾಸಿಯ ಮೋಕ್ಷ ಜನ್ಮದ್ವಯದಲ್ಲೆಂದು ನಂಬಬಾರದಯ್ಯಾ. ಅನುಭಾವಿಯ ಮೋಕ್ಷ ಜನ್ಮ ಒಂದರಲ್ಲೆಂದು ನಂಬಬಹುದೆ ಅಯ್ಯಾ? ಆರೂಢನ ಜನ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಜನ್ಮವೆಂದು ನಂಬಲೇಬೇಕು, ಹಾವಿನಹಾಳ ಕಲ್ಲಯ್ಯಾ.
--------------
ಸಿದ್ಧರಾಮೇಶ್ವರ
ಕುಲಾಕುಲ ಅನುಭವಕ್ಕಲ್ಲದೆ ಸಮರಸಕ್ಕೇನೋ ಅಯ್ಯಾ? ವಾದವಿವಾದವೆಂಬುದು ಶಾಸ್ತ್ರದಲ್ಲಲ್ಲದೆ ಸಭೆಯಲ್ಲೇ£ ಅಯ್ಯಾ? ಹಾಸ್ಯಾಹಾಸ್ಯ ನುಡಿಗಡಣದಲ್ಲಲ್ಲದೆ ನುಡಿಯುವ ಕಾಯದಲ್ಲೇನೋ ಅಯ್ಯಾ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕ್ಲುಪ್ತವ ಮಾಡಿ ತನಗೆ ಬೇಕೆನ್ನ ಪ್ರಸಾದಿ ಬಸವಣ್ಣ. ಬಂದುದನತಿಗಳೆದು `ಅಲ್ಲ ಒಲ್ಲೆ' ಎನ್ನ ಪ್ರಸಾದಿ ಬಸವಣ್ಣ. ತಾನೆಂಬ ರೂಪ ಅಯ್ಯನೆಂಬ ರೂಪಿನಲ್ಲಿ ಲೋಪಮಾಡಿದ ಪ್ರಸನ್ನ ಪ್ರಸಾದಿ ಕಾಣಾ, ಬಸವಣ್ಣ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಕಥನ ಬ್ರಹ್ಮಾಂಡದಲ್ಲಿ ಮಥನಿಸುವ ಭೇದವನು ಸುಚಿತ್ತದಿಂದವೆ ಕಂಡೆ. ಸಾಕ್ಷಾತ್ ಉರುತರ ಕೈವಲ್ಯ ಪರಮ ಸೀಮೆಯ ಮೀರಿ ಒಡಲಿಪ್ಪುದದು ನಿತ್ಯ ಸಾನಂದದಾ ಆನಂದಸ್ಥಾನದಲ್ಲಿ. ಆನಿಪ್ಪ ಲೋಕದಲ್ಲಿ ತಾನಿಪ್ಪ ನಿಷ್ಕಳದ ಪುಷ್ಕರದಲ್ಲಿ ಸ್ವಾನುಭಾವ ದೀಕ್ಷೆ ನಾನಿಪ್ಪ ಸಂಯೋಗ ಮೂಱಱ ಮೇಲಿಪ್ಪ ಮುಕ್ತ್ಯಾಂಗನೆಯರ ಕೂಟ ನೀನು ನಾನಾದೆ ಕಪಿಲಸಿದ್ಧಮಲ್ಲೇಶ್ವರ
--------------
ಸಿದ್ಧರಾಮೇಶ್ವರ
ಕರವೆ ಭಾಂಡವಾಗಿ ಜಿಹ್ವೆಯೆ ಕರವಾಗಿ, ಇಂದ್ರಿಯಂಗಳೈ ಮುಖವಾಗಿಪ್ಪ ಪ್ರಸಾದಿಯ ಪರಿಯಿನ್ನೆಂತೋ? ಆನಂದದಲ್ಲಿ ಸಾನಂದವನರ್ಪಿಸಿ ಸಾನಂದದಲ್ಲಿ ನಯವಾಗಿಪ್ಪ ಪ್ರಸಾದಿಯ ಪರಿಯಿನ್ನೆಂತೊ? ತನುತ್ರಯಂಗಳ ಮೀರಿ ಮನತ್ರಯಂಗಳ ದಾಂಟಿಪ್ಪ ಪ್ರಸಾದಿಗೆ ಆವುದ ಸರಿಯೆಂಬೆ? ಬಂದುದನತಿಗಳೆಯೆ, ಬಾರದುದ ಬಯಸೆ. ತನುಮುಖವೆಲ್ಲ ಲಿಂಗಮುಖ, ಸ್ವಾದಿಸುವವೆಲ್ಲ ಲಿಂಗಾರ್ಪಿತ; ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಲಿಂಗಾರ್ಪಿತವಲ್ಲದೆ ಅನರ್ಪಿತವ ನೋಡ; ತಟ್ಟುವ ಮುಟ್ಟುವ ಭೇದಂಗಳೆಲ್ಲವು ಸರ್ವಾರ್ಪಿತ. ಆತನುರುತರ ಸಮ್ಯಕ್‍ಜ್ಞಾನಿಯಾದ ಕಾರಣ ಪ್ರಸನ್ನತೆಯಾಯಿತ್ತು. ಪ್ರಸನ್ನ ಪ್ರಸಾದತೆಯಲ್ಲಿ ನಿತ್ಯನಪ್ಪಾತ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ ಉರುತರ ಮಹಾಜ್ಯೋತಿರ್ಮಯನು.
--------------
ಸಿದ್ಧರಾಮೇಶ್ವರ
ಕಾಡದೆ ಎನ್ನ ಮನದಿಚ್ಛೆಯ ಮಾಡಯ್ಯಾ, ನಿಮ್ಮ ಧರ್ಮ! ಕಾಡುವುದುಚಿತವೆ ಅಯ್ಯಾ, ನಿಮ್ಮ ಕರುಣದ ಕಂದ ನಾನು! ನಿಮ್ಮ ಕರುಣದ ಕಂದ ನಾನಯ್ಯಾ! ಎಂದುತನಕ ಕಾಡುವಿರಿ ಅಂದುತನಕ ನೋಡುವೆನು. ಹಿಂದುಮುಂದುಗೆಟ್ಟವನೆಂದು ಏಡಿಸಿದಡೆ ತಂದೆ! ನಾ ನಿಮ್ಮನೇಕೆ ಬಿಡುವೆ. ಕರುಣಿಸು ಎನ್ನ ಪರಮಗುರುವೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕ್ರೀಯಲ್ಲಿ ಮಗ್ನವಾದ ಬಳಿಕ ಐಕ್ಯದ ವಿಚಾರ ಬೇಕಿಲ್ಲ ; ಗುರುವಿನ ಗದ್ದುಗೆ ಬೇಕಿಲ್ಲ ; ಗಣಸಮ್ಮೇಳನದ ಪೂಜೆ ಮೊದಲೆ ಬೇಕಿಲ್ಲ ; ಕಪಿಲಸಿದ್ಧಮಲ್ಲಿಕಾರ್ಜುನಂಗೆ ನಿನಗೆ ಭೇದವಿಲ್ಲೆಂಬುವುದು ಈಗಳೆ ಬೇಕಿಲ್ಲ, ಕೇಳಾ ಪ್ರಭುವೆ.
--------------
ಸಿದ್ಧರಾಮೇಶ್ವರ
ಕರ್ಮಿಗಳು ಶಿವಪಥಕ್ಕೆ ಬಪ್ಪಾಗಳವರ ಕರ್ಮ ಬೆಂಬತ್ತಿ ಕಾಡುವದಯ್ಯಾ. ಲಿಂಗಾರಾಧನೆಯ ಮಾಡಲೀಯದು. ಸಂದೇಹವನೆ ತೋರಿಸಿ ಕೆಡಿಸುವದಯ್ಯಾ. ಏಕೆ? ಅವರು ಮಾಡಿದ ಕರ್ಮವನುಣಬೇಕಾಗಿ! ಇದನರಿದು ನಿಮ್ಮ ನೆರೆನಂಬಿ ಪೂಜಿಸೆ ಹರಿವುದು ಕರ್ಮ, ಕಪಿಲಸಿದ್ಧಮಲ್ಲಿಕಾರ್ಜುನ, ದೇವರ ದೇವಾ.
--------------
ಸಿದ್ಧರಾಮೇಶ್ವರ
ಕಂಗಳ ಬೇಟೆಯನಾಡುವ ಕಾಮನ ಸಂಗಕ್ಕೆನ್ನ ಸಲಿಸದೆ, ಮಂಗಳಮಯವಪ್ಪ ಉರುತರ ಭಕ್ತಿಯ ಸಂಗಕ್ಕೆನ್ನ ಸಲಿಸಯ್ಯಾ, ಅನಂಗವಿದಾರಣ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕರದಲ್ಲಿ ಶಿವಲಿಂಗ ಉದರದಲ್ಲಿ ಅಗ್ನಿ ಪರಿಯಂತೆ ಪ್ರಸಾದಲಿಂಗ ಭವಿಸಿ, ತನುಮಲತ್ರಯವನು, ಘನಪಾಶವರ್ಗವನು, ನೆನಹಿಂದ ಸುಟ್ಟುದದು ಪರಿಯಂತರವುಯೆಯ್ದಿ. ಸಕಲವನು ತೋರುವಾ ಅಪ್ರಮಾಣ ಪ್ರಸಾದಲಿಂಗ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಾಯ ನಾನೆಂದಡೆ ಕರ್ಮಕಾಂಡಿ. ಸಕಲ ಕ್ರಿಯೆ ಈಶಾರ್ಪಣವೆಂದಡೆ ಭಕ್ತಿಕಾಂಡಿ. ಸಕಲ ಕರ್ಮ ಸಾಕ್ಷಿಯೆಂದಡೆ ಜ್ಞಾನಕಾಂಡಿ. ಕಾಂಡತ್ರಯವಿಲ್ಲದ ಅಖಂಡನ ತೋರಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕಣ್ಣೊಂದರ್ಲ ಮುಕ್ಕಣ್ಣನ ಬಣ್ಣವಡಗಿಹುದು. ಆ ಬಣ್ಣದ್ಲ ಚಿದ್ಬಣ್ಣ ಚಿತ್ರಗಳಾದವು. ಆ ಚಿತ್ರಗಳಿರವ ಚೆನ್ನಬಸವಣ್ಣನೆ ಬಲ್ಲನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಲ್ಪವೃಕ್ಷಕ್ಕೆ ಸಮಮಾಡಿ ಹೇಳಿದೆನಯ್ಯಾ, ಕರಸ್ಥಲದ ಮಹಾಂಗಮೂರ್ತಿಗೆ. ಅಲ್ಲಲ್ಲ, ಕಲ್ಪಿಸಿ ಬೇಡಿದಡೆ ಕೊಡುವುದದು ಸುರಾಮೃತವ; ಮೃತ [ವ] ಬೇಡಿದಡೆ ಕೊಡುವುದಯ್ಯಾ ಭವದ ಗೋಳಾಟ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕರದ ಮಹಾತ್ಮೆಯನು ಹೊಗಳುವರೆ ಎನ್ನಳವೆ? ಕರುಣಾಕರನೆ ಬಲ್ಲ ಗುರುರಾಯನು. ಹಲವು ಬ್ರಹ್ಮಾಂಡವನು ಒಳಗಿಟ್ಟ ಘನವನು ಧರಿಸಿಪ್ಪುದದು ಭಕ್ತಿಕರವು ನೋಡಾ. ಆ ಶರಣರ ಕರವನು ಹೊಗಳುವವು ವೇದಂಗಳಯ್ಯ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಮಲ ಸಿಂಹಾಸನದ ವಿಮಲಾತ್ಮನನು ಮಾಡಿ ಸುಮನ ಗುರುಲಿಂಗ ಜಂಗಮವನೊಂದುಮಾಡಿ ಪರಮ ಜ್ಞಾನೋದಯದ ಚೇತನದೊಳಿಟ್ಟ ಶ್ರೀಗುರು ಚೆನ್ನಬಸವಣ್ಣ ಪರಂಜ್ಯೋತಿರ್ಮಯನಯ್ಯ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕರ ಕಂಗಳನು ಮನೆಯ ತೆರಹು ಮಾಡಿಯೆ ಶ್ರೋತೃ ಕರದೊಳಗೆ ಶಿವಲಿಂಗ ಸ್ಥಾಪ್ಯಗೊಳಿಸಿ ನೆನಹುಗೆಟ್ಟಾ ಸೀಮೆ ನಿಷ್ಕಳದ ಪದವುವನು ಅರಿಹಿದಾತ ಗುರು ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಕಸವಿದ್ದು ಕೃಷೀವಲನಿಲ್ಲದೆ, ಅಸಮಾಕ್ಷವಲನಿಲ್ಲದೆ ಅಸಮಾಕ್ಷಗುಣವಿರೆ, ಈ ಕಸ ಗುಣದ ಕೇಡು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಕಾಲಜ್ಞಾನಿ, ಕರ್ಮವಿದೂರ, ನಿತ್ಯತೃಪ್ತನೆ, ನಿಮ್ಮಭೇದಿಸುವರಾರು ಹೇಳಾ ಎಲೆ ಅಯ್ಯಾ. ಎನ್ನ ಭವಕರ್ಮವು ಕಳೆಯಲಿಕೆ ಏಕರೂಪವಾಗಿ ಬಂದೆಯಯ್ಯಾ. ನಿಮ್ಮ ಪದಂಗಳೆ ಲಿಂಗವಾಗಿ, ನಿಮ್ಮ ಕರಣಂಗಳೆ ಶ್ರೀಗುರುವಾಗಿ, ನಿಮ್ಮುರುತರಮಪ್ಪ ಜಿಹ್ವೆಯ ಜಂಗಮವಾಗಿ ಬಂದೆಯಯ್ಯಾ. ನೀನು ಶಿಷ್ಯ ಕಾರಣ ಪರಶಿವಮೂರ್ತಿಯಾದುದನು ನಾನಿಂದು ಕಂಡೆ ಕಾಣಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಕಾಯ ಧರಿಸಿದವ ನವನೀತ ರೋಮದಂತಿರಬೇಕು, ಮುಕುರದ ಪ್ರತಿಬಿಂಬದಂತಿರಬೇಕು, ಬೆಟ್ಟದಲ್ಲಿಯ ಕಾಡಕಿಚ್ಚಿನಂತಿರಬೇಕು, ಆಷಾಢದಲ್ಲಿಯ ಚಂಡಮಾರುತನಂತಿರಬೇಕು, ಸರ್ವರಲ್ಲಿ ಸರ್ವರಂತಾಗಿರಬೇಕು ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ

ಇನ್ನಷ್ಟು ...